ಸೂಪರ್ ಸುಖೋಯಿ: ಹಳೆಯ ಯೋಧನಿಗೆ ಹೊಸ ಶಕ್ತಿ

ಹೊಸ ಯುದ್ಧ ವಿಮಾನಕ್ಕೆ ವರ್ಷಗಳ ಕಾಲ ಕಾಯುತ್ತಾ ಕೂರುವ ಬದಲು, ಕ್ಷಿಪ್ರವಾಗಿ ಹೆಚ್ಚಿನ ಸಾಮರ್ಥ್ಯ ಹೊಂದುವುದು ಹೇಗೆ ಎನ್ನುವ ಕಠಿಣ ಸವಾಲಿಗೆ ಸೂಪರ್ ಸುಖೋಯಿ ಬುದ್ಧಿವಂತಿಕೆಯ ಉತ್ತರವಾಗಿದೆ. ಈಗಾಗಲೇ ಸಾಮರ್ಥ್ಯ ಸಾಬೀತುಪಡಿಸಿರುವ ಏರ್‌ಫ್ರೇಮ್‌ಗೆ ಭಾರತೀಯ ಮೆದುಳು, ಭಾರತೀಯ ಕಣ್ಣುಗಳು ಮತ್ತು ಭಾರತೀಯ ಕ್ಷಿಪಣಿಗಳನ್ನು ಅಳವಡಿಸಿ, ಅದರ ಕೆಲಸ ಇನ್ನೂ ಮುಗಿದಿಲ್ಲ ಎನ್ನುವ ಯೋಜನೆ ಇದಾಗಿದೆ.
ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ, ಭಾರತದ ಪರವಾಗಿ ತನ್ನ ಮೊದಲ ಹಾರಾಟ ನಡೆಸಿದ್ದ ಯುದ್ಧ ವಿಮಾನವೊಂದನ್ನು ಊಹಿಸಿಕೊಳ್ಳಿ. ಒಂದು ದಿನ ಬೆಳಗ್ಗೆ ಆ ವಿಮಾನವನ್ನು ಒಂದು ಹಾಂಗರ್ (ಯುದ್ಧ ವಿಮಾನವನ್ನು ಇರಿಸುವ ಸ್ಥಳ) ಒಳಗೆ ಒಯ್ಯಲಾಯಿತು. ಕೆಲವು ತಿಂಗಳ ಬಳಿಕ ಅದನ್ನು ಹೊರತಂದಾಗ, ಅದು ಹೊರನೋಟಕ್ಕೆ ಬಹುತೇಕ ಮೊದಲಿದ್ದಂತೆಯೇ ಕಾಣುತ್ತದೆ. ಆದರೆ ಒಳಭಾಗದಲ್ಲಿ, ಇದು ಬಹುತೇಕ ಒಂದು ನೂತನ ಯಂತ್ರವೇ ಆಗಿರುತ್ತದೆ. ಇಷ್ಟು ಹೇಳಿದರೆ, ಸೂಪರ್ ಸುಖೋಯಿ ಯೋಜನೆ ಎಂದರೇನು ಎನ್ನುವುದನ್ನು ಸ್ಥೂಲವಾಗಿ ತಿಳಿಸಿದಂತಾಗುತ್ತದೆ.
ನಾವು ಇಂದು ಚರ್ಚಿಸುತ್ತಿರುವ ಈ ವಿಮಾನವೇ ಸುಖೋಯಿ-30ಎಂಕೆಐ. ಭಾರತೀಯ ವಾಯು ಸೇನೆ ಅಂದಾಜು 260 ಈ ವಿಮಾನಗಳನ್ನು ಬಳಸುತ್ತಿದೆ. ಇದು ತೂಕವುಳ್ಳ, ಅವಳಿ ಇಂಜಿನ್ ಯುದ್ಧ ವಿಮಾನವಾಗಿದ್ದು, ಭಾರತ ಎರಡು ಮುಖ್ಯ ಉದ್ದೇಶಗಳಿಗಾಗಿ ಇದರ ಮೇಲೆ ಅವಲಂಬಿತವಾಗಿದೆ. ಅವೆಂದರೆ, ನಮ್ಮ ಆಗಸದ ಮೇಲಿನ ನಿಯಂತ್ರಣ ಸಾಧನೆ ಮತ್ತು ಶತ್ರು ಭೂ ಪ್ರದೇಶದೊಳಗೆ ದಾಳಿ ನಡೆಸುವುದು. ಎರಡು ದಶಕಗಳ ಕಾಲ ಯುದ್ಧ ವಿಮಾನ ಆ ಜವಾಬ್ದಾರಿಯನ್ನು ಹೊತ್ತು ಸಾಗಿದೆ.
ಆದರೆ, ಸು-30ಎಂಕೆಐ ಯುದ್ಧ ವಿಮಾನದ ಸುತ್ತಲಿನ ಆಗಸವೂ ಬದಲಾಗಿದೆ. ಈಗ ರೇಡಾರ್ ಕಣ್ಣಿಗೆ ಕಾಣಿಸಿಕೊಳ್ಳದ ಸ್ಟೆಲ್ತ್ ಯುದ್ಧ ವಿಮಾನಗಳಿವೆ. ಕಣ್ಣಿಗೆ ಕಾಣುವುದಕ್ಕಿಂತ ಬಹಳಷ್ಟು ದೂರದಲ್ಲೇ ದಾಳಿ ನಡೆಸಬಲ್ಲ ಕ್ಷಿಪಣಿಗಳಿವೆ. ಇನ್ನು ಒಂದು ಆಯುಧವನ್ನೂ ಪ್ರಯೋಗಿಸದೆ, ಎದುರಾಳಿಯ ಏರ್‌ಕ್ರಾಫ್ಟನ್ನು ಕುರುಡಾಗಿಸುವ ಇಲೆಕ್ಟ್ರಾನಿಕ್ ವ್ಯವಸ್ಥೆಗಳಿವೆ. ಇಂತಹ ಕಠಿಣ ಆಗಸದಲ್ಲೂ ಪ್ರಸ್ತುತವಾಗಿ ಉಳಿಯುವುದು ಕೇವಲ ಹೆಮ್ಮೆಯ ವಿಚಾರ ಮಾತ್ರವಲ್ಲ. ನಾವು ಉಳಿಯಲು ಅನಿವಾರ್ಯವೂ ಹೌದು.
ಆದ್ದರಿಂದಲೇ ಭಾರತ ಸೂಪರ್ ಸುಖೋಯಿ ಅಥವಾ ಸೂಪರ್ 30 ಯೋಜನೆಯನ್ನು ಆರಂಭಿಸಿತು. ಇದನ್ನು ಒಂದು ರೀತಿಯಲ್ಲಿ ವೃತ್ತಿಜೀವನದ ಮಧ್ಯದ ಕೂಲಂಕಷ ಬದಲಾವಣೆಗೆ ಹೋಲಿಸಬಹುದು. ಹೇಗೆ ಓರ್ವ ಹಿರಿಯ ಕ್ರೀಡಾಪಟು ಎದುರಾಳಿ ಯುವ ಕ್ರೀಡಾಳುಗಳ ಎದುರು ಸ್ಪರ್ಧಾತ್ಮಕವಾಗಿ ಉಳಿಯಲು ದೈಹಿಕ ತರಬೇತಿ, ಡಯಟ್ ಮತ್ತು ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸುತ್ತಾನೋ, ಇದೂ ಅದೇ ರೀತಿಯ ಪ್ರಕ್ರಿಯೆಯಾಗಿದೆ. ಯೋಜನೆಯ ಗುರಿ 2050ರ ದಶಕದ ತನಕ ಈ ಯುದ್ಧ ವಿಮಾನಗಳು ಪರಿಣಾಮಕಾರಿಯಾಗಿ ಕಾರ್ಯಾಚರಿಸುವಂತೆ ಮಾಡುವುದಾಗಿದೆ.
ಇಲ್ಲಿನ ಬಹುದೊಡ್ಡ ಬದಲಾವಣೆ ಎಂದರೆ ಯುದ್ಧ ವಿಮಾನದ ದೃಷ್ಟಿ. ಹಳೆಯ ರಶ್ಯನ್ ಬಾರ್ಸ್ ರೇಡಾರ್ ಬದಲಿಗೆ, ದೇಶೀಯವಾಗಿ ವಿನ್ಯಾಸಗೊಂಡು, ಭಾರತದಲ್ಲೇ ನಿರ್ಮಾಣವಾಗಿರುವ ವಿರೂಪಾಕ್ಷ ರೇಡಾರ್ ಬಳಕೆಯಾಗುತ್ತದೆ. ವಿರೂಪಾಕ್ಷ ಒಂದು ಎಇಎಸ್‌ಎ, ಅಂದರೆ ಆ್ಯಕ್ಟಿವ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ ರೇಡಾರ್ ಆಗಿದೆ. ಸರಳವಾಗಿ ಹೇಳುವುದಾದರೆ, ಸುತ್ತಮುತ್ತ ನೋಡಲು ಇದು ತನ್ನ ಡಿಷ್ ತಿರುಗಿಸುವುದಿಲ್ಲ. ಇದು ಇಲೆಕ್ಟ್ರಾನಿಕ್ ವಿಧಾನದಲ್ಲಿ ಬೀಮ್ ಅನ್ನು ಪಸರಿಸುವ ಸಾವಿರಾರು ಸಣ್ಣ ಟ್ರಾನ್ಸ್‌ಮೀಟರ್‌ಗಳಿಂದ ನಿರ್ಮಿತವಾಗಿವೆ. ಇವೆಲ್ಲವೂ ಏಕಕಾಲದಲ್ಲಿ ಟ್ರಾನ್ಸ್‌ಮಿಟ್ ನಡೆಸುತ್ತವೆ. ವಿರೂಪಾಕ್ಷ ರೇಡಾರ್ ಬಹುತೇಕ ಇಂತಹ 2,400 ಮಾಡ್ಯುಲ್‌ಗಳನ್ನು ಹೊಂದಿದ್ದು, ಅವು ಹಳೆಯ ಬಿಡಿಭಾಗಗಳಿಗಿಂತ ಉತ್ತಮವಾಗಿ ಉಷ್ಣ ಮತ್ತು ಶಕ್ತಿಯನ್ನು ನಿರ್ವಹಿಸುವ ಗ್ಯಾಲಿಯಂ ನೈಟ್ರೈಡ್‌ನಿಂದ ನಿರ್ಮಿತವಾಗಿವೆ. ಇದು ಒಂದು ರೀತಿಯಲ್ಲಿ ಹಳೆಯ, ಸಾಧಾರಣ ಬಲ್ಬ್ ಬದಲು ಹೊಸ, ಪ್ರಕಾಶಮಾನವಾದ ಎಲ್‌ಇಡಿ ಬಲ್ಬ್ ಬಳಸಿದಂತಾಗುತ್ತದೆ.
ಇದರಿಂದ ಪೈಲಟ್‌ಗೆ ಏನು ಪ್ರಯೋಜನ? ವರದಿಗಳ ಅಂಕಿಅಂಶಗಳ ಪ್ರಕಾರ, ಯುದ್ಧ ವಿಮಾನದ ಗಾತ್ರದ ಗುರಿಗಳನ್ನು 300ರಿಂದ 400 ಕಿಲೋಮೀಟರ್ ದೂರದಲ್ಲಿ ಮತ್ತು ಬಹಳ ಸಣ್ಣದಾದ ಸ್ಟೆಲ್ತ್ ಮಾದರಿಯ ಏರ್‌ಕ್ರಾಫ್ಟ್‌ಗಳನ್ನು ಅಂದಾಜು 200 ಕಿಲೋಮೀಟರ್ ದೂರದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ರೇಡಾರ್ ಏಕಕಾಲದಲ್ಲಿ ಹಲವು ಅಪಾಯಗಳನ್ನು ಗುರುತಿಸಬಲ್ಲದಾಗಿದ್ದು, ಇದನ್ನು ಜಾಮ್ ಮಾಡುವುದು ಕಷ್ಟಕರ. ವಾಯು ಯುದ್ಧದಲ್ಲಿ ಶತ್ರುವನ್ನು ಮೊದಲು ನೋಡುವುದು ಎಂದರೆ ಮೊದಲು ಯುದ್ಧ ಗೆಲ್ಲುವುದು ಎನ್ನಬಹುದು.
ಇನ್ನು ಕಾಕ್‌ಪಿಟ್ ಸಹ ಮರುನಿರ್ಮಾಣಗೊಳ್ಳುತ್ತಿದ್ದು, ನೂತನ ಯೋಜನಾ ಕಂಪ್ಯೂಟರ್‌ಗಳು, ಆಧುನಿಕ ಡಿಸ್‌ಪ್ಲೇಗಳು ಮತ್ತು ಅಪಾಯಗಳನ್ನು ಬೇಗನೆ ವಿಂಗಡಿಸಲು ಪೈಲಟ್‌ಗೆ ನೆರವಾಗುವ ಕಂಪ್ಯೂಟರ್‌ಗಳನ್ನು ಹೊಂದಿದೆ. ಇಲ್ಲಿ ಗಮನಿಸಬೇಕಾದ ಒಂದು ಪರಿಕಲ್ಪನೆ ಎಂದರೆ - ಸೆನ್ಸರ್ ಫ್ಯೂಶನ್. ಪೈಲಟ್ ಹಲವು ಉಪಕರಣಗಳನ್ನು ಗಮನಿಸಿ, ಏನಾಗುತ್ತಿದೆ ಎನ್ನುವ ಕಥನವನ್ನು ತನ್ನ ಮನಸ್ಸಿನಲ್ಲಿ ಮೂಡಿಸಿಕೊಳ್ಳುವ ಬದಲು, ಸ್ವತಃ ಯುದ್ಧ ವಿಮಾನವೇ ಅವೆಲ್ಲವನ್ನು ಏಕೀಕರಿಸಿ, ಒಂದು ಸ್ಪಷ್ಟ ಚಿತ್ರಣವನ್ನು ಪೈಲಟ್‌ಗೆ ಒದಗಿಸುತ್ತದೆ. ಸೆಕೆಂಡುಗಳ ಅವಧಿಯಲ್ಲಿ ನಡೆಯುವ ಇಂತಹ ಕದನಗಳಲ್ಲಿ, ಈ ಹೆಚ್ಚುವರಿ ನೆರವು ಪ್ರಾಣ ರಕ್ಷಣೆಗೆ ನೆರವಾಗಬಲ್ಲದು.
ಇದು ಆಧುನಿಕವಾದ, ಭಾರತೀಯ ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಸಹ ಹೊಂದಲಿದೆ. ಇಲೆಕ್ಟ್ರಾನಿಕ್ ವಾರ್‌ಫೇರ್ ಎನ್ನುವುದು ಆಧುನಿಕ ಯುದ್ಧದ ಅಗೋಚರ ಭಾಗವಾಗಿದ್ದು, ಶತ್ರುಗಳ ರೇಡಾರ್‌ಗಳನ್ನು ಗೊಂದಲಗೊಳಿಸಿ, ನಮ್ಮ ವಿಮಾನ ಅಂತಹ ಗೊಂದಲಕ್ಕೆ ಒಳಗಾಗದಂತೆ ರಕ್ಷಿಸುವುದಾಗಿದೆ.
ಯುದ್ಧ ವಿಮಾನವನ್ನು ಗುರುತಿಸುವುದು ಕಷ್ಟಕರವಾಗಲಿದೆ. ವಿಮಾನದ ರೇಡಾರ್ ಸಿಗ್ನೇಚರ್ ಕಡಿಮೆಗೊಳಿಸುವ ಸಲುವಾಗಿ, ಭಾರತೀಯ ನಿರ್ಮಾಣದ ರೇಡಾರ್ ಹೀರಿಕೊಳ್ಳುವ ವಸ್ತುವನ್ನು ವಿಮಾನದ ಮೇಲ್ಮೈಗೆ ಅಳವಡಿಸಲಾಗುತ್ತದೆ. ಇದು ದೊಡ್ಡ ವಿಮಾನವನ್ನು ಅಗೋಚರವಾಗಿಸುವುದಿಲ್ಲ. ಬದಲಿಗೆ, ಹುಡುಕುವ ರೇಡಾರ್ ಕಣ್ಣಿಗೆ ದುರ್ಬಲ ಸಂಕೇತ ನೀಡಿ, ಸಣ್ಣದಾಗಿ ಕಾಣುತ್ತದೆ. ಇದೊಂದು ರೀತಿ ಅಮಾವಾಸ್ಯೆಯ ರಾತ್ರಿ ಗಾಢ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡಂತಿರಲಿದೆ.
ಇನ್ನು ಆಯುಧಗಳ ವಿಚಾರಕ್ಕೆ ಬಂದರೆ, ಅಸ್ತ್ರ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿ ಮತ್ತು ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಸುಧಾರಿತ ಯುದ್ಧ ವಿಮಾನವನ್ನು ನೈಜ ಅಪಾಯಕಾರಿ ಬಹುಪಾತ್ರದ ವಿಮಾನವಾಗಿಸುತ್ತದೆ.
ಮೊದಲ ಹಂತದಲ್ಲಿ 84 ವಿಮಾನಗಳ ಅಭಿವೃದ್ಧಿ ಆಗಲಿದ್ದು, ಇನ್ನುಳಿದ ವಿಮಾನಗಳೂ ಹಿಂಬಾಲಿಸಲಿವೆ. ಎಚ್‌ಎಎಲ್ ಮತ್ತು ಡಿಆರ್‌ಡಿಒಗಳು ಇದರ ನೇತೃತ್ವ ವಹಿಸಲಿದ್ದು, ಭಾರತೀಯ ನಿರ್ಮಾಣದ ಭಾಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಒಟ್ಟಾರೆ ಯೋಜನೆ ಅಂದಾಜು 65,000 ಕೋಟಿ ರೂ. ಮೌಲ್ಯ ಹೊಂದಿದೆ.
ರೇಡಾರ್ ಫೆಬ್ರವರಿ 2026ರಲ್ಲಿ ಫಸ್ಟ್ ಲೈಟ್ ಎನ್ನುವ ತನ್ನ ಮೊದಲ ಪವರ್ ಆನ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, 2027ರ ಮಧ್ಯಭಾಗದಲ್ಲಿ ಪೂರೈಕೆ ನಡೆಸುವ ಗುರಿಯಿದೆ. ರೇಡಾರ್ ಅನ್ನು ಸುಧಾರಿತ ಸು-30ಎಂಕೆಐ ಯುದ್ಧ ವಿಮಾನಗಳಲ್ಲಿ 2028ರ ಆರಂಭದಿಂದ ಹಾರಾಟ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದ್ದು, ಮೊದಲ 84 ಮೇಲ್ದರ್ಜೆಗೇರಿದ ವಿಮಾನಗಳಲ್ಲಿ 2030ರಿಂದ ಬಳಕೆಯಾಗಲಿದೆ.
ಇಲ್ಲೊಂದು ಪ್ರಾಮಾಣಿಕ ವಿಚಾರವಿದೆ. ಈ ಅಂಕಿಅಂಶಗಳೆಲ್ಲ ಯೋಜನಾ ಮಾಹಿತಿಗಳೇ ಹೊರತು, ಹಾರಾಟದಲ್ಲಿ ಸಾಬೀತಾದ ಮಾಹಿತಿಗಳಲ್ಲ. ಕಾಗದಪತ್ರಗಳು ಮತ್ತು ಅನುಮೋದನೆಗಳು ಇನ್ನೂ ಮುಂದುವರಿದಿವೆ. ಇದೊಂದು ನಿರ್ಮಾಣಗೊಳ್ಳುತ್ತಿರುವ ಭರವಸೆ ಯಾಗಿದ್ದು, ಈಗಾಗಲೇ ಮಾಡಿರುವ ಪೂರೈಕೆಯ ಕಥೆಯಲ್ಲ.
ಯುದ್ಧ ವಿಮಾನಗಳು ತಾವಾಗಿಯೇ ದೇಶವನ್ನು ರಕ್ಷಿಸುವುದಿಲ್ಲ. ಅವುಗಳನ್ನು ಪ್ರತಿಯೊಂದು ವೈರ್ ಮತ್ತು ವೆಲ್ಡ್ ಮೇಲೆ ವಿಶ್ವಾಸ ಇರಿಸಿರುವ ಯುವಕ ಯುವತಿಯರು ಚಲಾಯಿಸುತ್ತಾರೆ. ತಮ್ಮ ಕೆಳಗಿರುವ ದೇಶದ ಗಡಿ ರಕ್ಷಣೆ ಪರಿಪೂರ್ಣ ಉಪಕರಣ ಲಭಿಸಲಿ ಎಂದು ಕಾಯುತ್ತಿರುವುದಿಲ್ಲ ಎನ್ನುವುದು ಅವರಿಗೂ ಅರಿವಿದೆ.
ಭಾರತದ ಎಲ್ಲ ಭರವಸೆಗಳ ಹಿಂದೆ ಮಾನವ ಶಕ್ತಿಯೇ ಇದೆ. ಪ್ರತಿಯೊಂದು ರೇಡಾರ್ ಮಾಡ್ಯುಲ್, ಪ್ರತಿಯೊಂದು ಸಾಲಿನ ಕೋಡ್ ಸಹ ಪ್ರಯೋಗಾಲಯಗಳಲ್ಲಿ ವರ್ಷಗಳ ಕಾಲ ಪರೀಕ್ಷೆ, ವೈಫಲ್ಯ, ಮರು ಪರೀಕ್ಷೆ ನಡೆಸುತ್ತಾ, ದೇಶ ತಂತ್ರಜ್ಞಾನಕ್ಕಾಗಿ ವಿದೇಶಗಳ ಮುಂದೆ ಕೈಚಾಚಬಾರದು ಎಂದು ಕಾರ್ಯಾಚರಿಸಿದ ಇಂಜಿನಿಯರ್‌ಗಳ ಕೊಡುಗೆಯಾಗಿದೆ. ಇನ್ನು ಪರೀಕ್ಷಾ ಸಮಯದಲ್ಲಿ ಅವರ ಕುಟುಂಬಸ್ಥರೂ ಅವರನ್ನು ನೋಡುವುದು ಅಪರೂಪವಾಗಿರುತ್ತದೆ. ಇನ್ನು ವಿಮಾನದ ನಿರ್ವಹಣಾ ತಂತ್ರಜ್ಞರ ಕೈಗಳೂ ವಿಮಾನದೊಡನೆಯೇ ಹಳೆಯದಾಗಿರುತ್ತವೆ.
ಹೊಸ ಯುದ್ಧ ವಿಮಾನಕ್ಕೆ ವರ್ಷಗಳ ಕಾಲ ಕಾಯುತ್ತಾ ಕೂರುವ ಬದಲು, ಕ್ಷಿಪ್ರವಾಗಿ ಹೆಚ್ಚಿನ ಸಾಮರ್ಥ್ಯ ಹೊಂದುವುದು ಹೇಗೆ ಎನ್ನುವ ಕಠಿಣ ಸವಾಲಿಗೆ ಸೂಪರ್ ಸುಖೋಯಿ ಬುದ್ಧಿವಂತಿಕೆಯ ಉತ್ತರವಾಗಿದೆ. ಈಗಾಗಲೇ ಸಾಮರ್ಥ್ಯ ಸಾಬೀತುಪಡಿಸಿರುವ ಏರ್‌ಫ್ರೇಮ್‌ಗೆ ಭಾರತೀಯ ಮೆದುಳು, ಭಾರತೀಯ ಕಣ್ಣುಗಳು ಮತ್ತು ಭಾರತೀಯ ಕ್ಷಿಪಣಿಗಳನ್ನು ಅಳವಡಿಸಿ, ಅದರ ಕೆಲಸ ಇನ್ನೂ ಮುಗಿದಿಲ್ಲ ಎನ್ನುವ ಯೋಜನೆ ಇದಾಗಿದೆ.






