ಮಣ್ಣಾಳು ಹುಟ್ಟಾಳುಗಳಾದ ‘ಹಸಲರು’

ಮಲೆನಾಡಿನ ಇತರ ಬುಡಕಟ್ಟುಗಳಿಗೆ ಹೋಲಿಸಿದರೆ ಹಸಲರ ಆರ್ಥಿಕ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಹಸಲರು ತಮ್ಮ ಹೊಟ್ಟೆಪಾಡಿಗಾಗಿ ಬಿದಿರು, ಬೆತ್ತಗಳನ್ನು ಬಳಸಿ ಕೃಷಿ ಉಪಯೋಗಿ ಪರಿಕರಗಳನ್ನು ತಯಾರಿಸುವ ಉಪಕಸುಬನ್ನೂ ಹೊಂದಿದ್ದಾರೆ. ಪಣಿಯ, ಜೇನುಕುರುಬ, ಯರವರಂತೆ ಹಸಲರೂ ಕೂಡ ಕೊಡಗಿನ ಎಸ್ಟೇಟುಗಳ ಲೈನ್ ಮನೆಗಳಲ್ಲಿ ಕೃಷಿ ಕೂಲಿಕಾರರಾಗಿ, ಎಸ್ಟೇಟ್ ಯಜಮಾನರಿಂದ ಪಡೆದ ಸಾಲ ತೀರಿಸಲು ತಲೆತಲಾಂತರಗಳು ಕಳೆದರೂ ಜೀತಗಾರರಾಗಿಯೇ ಇಂದಿಗೂ ಜೀವ ಸವೆಸುತಿದ್ದಾರೆ!
ಹಸಲರು ಮಲೆನಾಡು ಭಾಗದ ಮೂಲ ಆದಿವಾಸಿ ಬುಡಕಟ್ಟಿನವರು ‘ಹಸಲು’ ಅಂದರೆ ಹಳೆಯ ಕನ್ನಡದಲ್ಲಿ ‘ಹಾವು’ ಹಿಡಿಯುವುದು ಎಂಬ ಅರ್ಥವಿದೆಯಂತೆ. ಇವರ ವೃತ್ತಿಗಳಲ್ಲಿ ಹಾವು ಹಿಡಿಯುವುದೂ ಒಂದು, ಈ ಕಾರಣಕ್ಕೆ ಇವರನ್ನು ಹಸಲರು ಎನ್ನುತ್ತಾರೆಂಬ ಅಭಿಪ್ರಾಯವಿದೆ.
ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರ, ಉಡುಪಿಯ ಕಾರ್ಕಳ, ಹೆಬ್ರಿ ಅರಣ್ಯ ಪ್ರದೇಶದಲ್ಲಿ ನೆಲೆನಿಂತಿದ್ದಾರೆ.
ದಕ್ಷಿಣ ಕನ್ನಡದ ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲೂ ಇದ್ದಾರೆ.
2011ರ ಜನಗಣತಿ ಪ್ರಕಾರ ಸುಮಾರು 40 ಸಾವಿರ ಇವರ ಜನಸಂಖ್ಯೆ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚು ಜನ ಇದ್ದಾರೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ., ದತ್ತಪೀಠದ ಸುತ್ತ ಇವರ ಜನಸಾಂದ್ರತೆ ಹೆಚ್ಚಿದೆ.
ಹುಲಿ ದೇವರು, ಭೂತಾರಾಧನೆ, ಮಲೆ ಮಹದೇಶ್ವರ ಮತ್ತು ಕಾಡಲ್ಲಿ ನೆಲೆಸಿರುವ ದೇವತೆಗಳಿಗೆ ಹಸಲರು ನಡೆದುಕೊಳ್ಳುತ್ತಾರೆ. ಅಂತೆಯೇ ‘ಕೊಡೆ ಅಮಾವಾಸೆ’, ‘ಆರಿದ್ರಾ ಮಳೆ ಹಬ್ಬ’ಗಳು ಇವರಿಗೆ ಮುಖ್ಯ. ‘ಹಸಲರ ಕುಣಿತ’ ಎಂಬ ಕೋಲಾಟ ರೀತಿಯ ಜಾನಪದ ನೃತ್ಯದಲ್ಲಿ ಹಸಲರು ಪರಿಣಿತರು. ಈ ಸಂದರ್ಭದಲ್ಲಿ ಡೋಲು, ತಮಟೆ ವಾದ್ಯಗಳನ್ನೂ ನುಡಿಸುತ್ತಾರೆ. ಇವರು ಹಿಂದೆ ಸೇವಿಸುತ್ತಿದ್ದ ಆಹಾರ ಮತ್ತು ಇಂದೂ ಅನಿವಾರ್ಯವಾದಾಗ ಸೇವಿಸುವ ಆಹಾರ ಕೆಸುವಿನ ಗಡ್ಡೆ, ಗೆಣಸು, ಕಾಡು ಮಾವು, ಜೇನು, ಮೀನು ಮತ್ತು ಅಕ್ಕಿ ಗಂಜಿಗಳು.
ಕರ್ನಾಟಕದ ಬುಡಕಟ್ಟುಗಳಲ್ಲಿ ಹಸಲರದು ಪ್ರಮುಖ ಬುಡಕಟ್ಟು. ಎಂ.ಎ. ಷೇರಿಂಗ್ ಬರೆದ ‘ಹಿಂದೂ ಟ್ರೈಬ್ಸ್ ಆ್ಯಂಡ್ ಕ್ಯಾಸ್ಟ್ಸ್’
ಸಂಪುಟದಲ್ಲಿ ಹಸಲರ ಮೊದಲ ಉಲ್ಲೇಖ ಸಿಗುತ್ತದೆ. ನಂತರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಕಟಿಸಿದ ಸಂಪುಟದಲ್ಲೂ ಹಸಲರ ಅಧ್ಯಾಯ ಇದೆ. ಎಲ್ಲಾ ಬುಡಕಟ್ಟುಗಳಂತೆ ಹಸಲರೂ ಕೂಡ ತಮ್ಮ ಅಸ್ಮಿತೆಯನ್ನು ಪುರಾಣಗಳೊಂದಿಗೆ ಕಟ್ಟಿಕೊಳ್ಳುತ್ತಾರೆ. ರಾಮಸೀತೆಯರ ಮಕ್ಕಳಾದ ಲವಕುಶರಲ್ಲಿ ಒಬ್ಬರಾದ ‘ಕುಶ’ನ ವಂಶಸ್ಥರು ತಾವೆಂದು ಹೇಳಿಕೊಳ್ಳುತ್ತಾರೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ‘ಕರ್ನಾಟಕ ಬುಡಕಟ್ಟು ಸಚಿತ್ರ ಕೋಶ’ ಎಂಬ ಪುಸ್ತಕದಲ್ಲಿ ಹಸಲರ ವಂಶದ ಪುರಾಣ ಕತೆಯೊಂದಿದೆ. ಅದರ ಪ್ರಕಾರ ಸೀತೆ ಕಾಡಲ್ಲಿ ಲವನಿಗೆ ಜನ್ಮನೀಡುತ್ತಾರೆ. ಒಮ್ಮೆ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ನದಿಯಲ್ಲಿ ಬಟ್ಟೆ ಮಡಿಮಾಡಲು ಹೋದಾಗ, ಅಲ್ಲಿದ್ದ ಕೋತಿಗಳನ್ನು ನೋಡಿ ಅವು ಮಗುವನ್ನು ಏನು ಮಾಡುತ್ತವೋ ಎಂದು ಹೆದರಿ ಮಗುವನ್ನು ಕೂಡ ಎತ್ತಿಕೊಂಡು ನದಿಗೆ ಹೋಗಿರುತ್ತಾಳೆ. ಸೀತೆ ಮಗುವಿನೊಂದಿಗೆ ನದಿಗೆ ಹೋದ ನಂತರ ಆಶ್ರಮಕ್ಕೆ ಬಂದ ವಾಲ್ಮೀಕಿ ತೊಟ್ಟಿಲಲ್ಲಿ ಮಗು ಇಲ್ಲದ್ದನ್ನು ಕಂಡು ಗಾಬರಿಯಾಗಿ, ಮಗು ಹೇಗೋ ಕಾಣೆಯಾಗಿದೆ, ಸೀತೆಗೆ ಏನು ಹೇಳುವುದೆಂದು ತಿಳಿಯದೆ ದರ್ಭೆಯನ್ನು ಮಂತ್ರಿಸಿ ಶಿಶುವನ್ನಾಗಿಸಿ ತೊಟ್ಟಿಲಲ್ಲಿ ಮಲಗಿಸುತ್ತಾರೆ. ನದಿಯಿಂದ ವಾಪಸ್ ಬಂದ ಸೀತೆ ತೊಟ್ಟಿಲಲ್ಲಿರುವ ಮಗುವನ್ನು ನೋಡಿ ಅಚ್ಚರಿಗೊಳ್ಳುತ್ತಾಳೆ. ಆಗ ವಾಲ್ಮೀಕಿ ‘‘ಇದೆಲ್ಲ ನಿನ್ನಿಂದಲೇ ಘಟಿಸಿದ್ದು ಹಾಗಾಗಿ ಈ ಮಗುವನ್ನೂ ನೀನೇ ಸಾಕು’’ ಎಂದು ಆಜ್ಞಾಪಿಸುತ್ತಾರೆ. ಈ ಮಗುವಿಗೆ ‘ಕುಶ’ ಎಂದು ಹೆಸರಿಟ್ಟ ಸೀತೆ ಲವ ಕುಶ ಇಬ್ಬರನ್ನೂ ತಾನೇ ಸಾಕುತ್ತಾರೆ. ಈ ಕುಶ ಎಂಬ ಕೂಸು ವಾಲ್ಮೀಕಿಯ ಹಸ್ತದಿಂದ ಜನಿಸಿ, ಈ ಕುಶನಿಂದ ತಮ್ಮ ಕುಲ ಹುಟ್ಟಿದ್ದರಿಂದ ‘ಹಸ್ಲರು’ ಎಂದು ಕರೆಯುತ್ತಾರೆ. ಎಂಬ ದಂತಕತೆಯನ್ನು ಹಸಲರು ಹೇಳುತ್ತಾರೆ.
ಇವರಲ್ಲಿ ಬೆಳ್ಳಿ ಹಸಲರು ಅಥವ ಬೆಳ್ಳಾಲರು, ಬಗ್ಗಾಲಿನ ಹಸಲರು, ಅಂತರಗಾಲ ಹಸಲರು, ನಾಡ ಹಸಲರು, ಮಲೆ ಹಸಲರು, ಕರ ಎಳೆಯುವ ಹಸಲರು ಎಂಬ ವಿಭಾಗಗಳಿವೆ. ಮೂಲತಃ ಹಸಲರೇ ಅಸ್ಪಶ್ಯರಾದರೂ ಇವರಲ್ಲಿನ ಬೆಳ್ಳಿ ಹಸಲರನ್ನು ಕನಿಷ್ಠವೆಂದು ಮಿಕ್ಕ ಹಸಲರು ಪರಿಗಣಿಸುತ್ತಾರೆ. ಇವರು ಇತರ ಹಸಲರೊಂದಿಗೆ ಸಹಪಂಕ್ತಿಯ ಭೋಜನ ಮಾಡಲೂ ಅವಕಾಶಗಳಿಲ್ಲ! ಇನ್ನು ನಾಡಹಸಲರನ್ನು ಶ್ರೇಷ್ಠರು ಎಂದು ಪರಿಗಣಿಸಲಾಗುತ್ತದೆ. ಸತ್ತ ಪ್ರಾಣಿಗಳನ್ನು ಊರ ಹೊರಗೆ ಎಳೆದು ಹಾಕುವವರನ್ನು ಕರ ಎಸೆಯುವ ಹಸಲರು ಎನ್ನುತ್ತಾರೆ. ಇನ್ನು ಮಲೆಹಸಲರು ಹೆಂಡ ಇಳಿಸುತ್ತಾರೆ. ಇವರಲ್ಲಿ ಅದೆಷ್ಟು ಅಂತಸ್ತು ಅಂತರಗಳಿದ್ದರೂ ಮೂಲತಃ ಇವರೂ ಕೂಡ ಜೀತಗಾರರು ಮತ್ತು ಕೃಷಿಕೂಲಿಕಾರರೇ ಆಗಿದ್ದಾರೆ.
ಮಲೆನಾಡಿನ ಇತರ ಬುಡಕಟ್ಟುಗಳಿಗೆ ಹೋಲಿಸಿದರೆ ಹಸಲರ ಆರ್ಥಿಕ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಹಸಲರು ತಮ್ಮ ಹೊಟ್ಟೆಪಾಡಿಗಾಗಿ ಬಿದಿರು, ಬೆತ್ತಗಳನ್ನು ಬಳಸಿ ಕೃಷಿ ಉಪಯೋಗಿ ಪರಿಕರಗಳನ್ನು ತಯಾರಿಸುವ ಉಪಕಸುಬನ್ನೂ ಹೊಂದಿದ್ದಾರೆ. ಪಣಿಯ, ಜೇನುಕುರುಬ, ಯರವರಂತೆ ಹಸಲರೂ ಕೂಡ ಕೊಡಗಿನ ಎಸ್ಟೇಟುಗಳ ಲೈನ್ ಮನೆಗಳಲ್ಲಿ ಕೃಷಿ ಕೂಲಿಕಾರರಾಗಿ, ಎಸ್ಟೇಟ್ ಯಜಮಾನರಿಂದ ಪಡೆದ ಸಾಲ ತೀರಿಸಲು ತಲೆತಲಾಂತರಗಳು ಕಳೆದರೂ ಜೀತಗಾರರಾಗಿಯೇ ಇಂದಿಗೂ ಜೀವ ಸವೆಸುತಿದ್ದಾರೆ! ಮಿಕ್ಕಂತೆ ಮಲೆನಾಡಿನ ಅಡಿಕೆ ತೋಟಗಳಲ್ಲಿ ಧಣಿಗಳ ಕೂಲಿಯಾಳುಗಳಾಗಿ ಹಗಲಿರುಳು ದುಡಿಯುತ್ತಾ ‘ಹಸ್ಲರ ಕೇರಿ’ಗಳಲ್ಲಿನ ಹುಲ್ಲಿನ ಗುಡಿಸಲುಗಳಲ್ಲಿ ಬಡತನ ಅನುಭವಿಸುತ್ತಾ ವಾಸಿಸುತ್ತಾರೆ. ಇವರಲ್ಲಿ ಅನೇಕರು ‘ಮಣ್ಣಾಳು’ ಮತ್ತು ‘ಹುಟ್ಟಾಳು’ಗಳ ಹೆಸರಿನಲ್ಲಿ ಜೀತ ಮಾಡುತ್ತಾರೆ. ಬಿಡಿಗಾಸಿನ ಸಾಲ ಮತ್ತು ತೀವ್ರ ಆರ್ಥಿಕ ಬಿಕ್ಕಟ್ಟುಗಳು ಇವರನ್ನು ಸತತವಾಗಿ ಜೀತಗಾರರನ್ನಾಗಿಯೇ ಉಳಿಸಿಬಿಟ್ಟಿದೆ! ಜೀತಗಾರರಾಗದೆ ಕಾಡು ಆಧಾರಿತರಾದವರು ಜೇನು ಸಂಗ್ರಹ, ಹಲಸು, ಉಪ್ಪಾಗೆ, ದಾಲ್ಚಿನ್ನಿ, ಔಷಧಿ ಸೊಪ್ಪು ಸಂಗ್ರಹಿಸಿ ಮಾರಾಟ ಮಾಡಿ ಜೀವ ಸವೆಸುತ್ತಾರೆ. ಕಾಡು ಉತ್ಪನ್ನ ಸಂಗ್ರಹಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದು ಕಾಡಿನಿಂದ ಇವರನ್ನು ಅಮಾನುಷವಾಗಿ ಹೊರಕ್ಕೆ ದಬ್ಬುತ್ತದೆ.
ಇವರಲ್ಲೂ ಅಪೌಷ್ಟಿಕತೆ, ಸಿಕಲ್ ಸೆಲ್ ರೋಗ, ಕ್ಷಯ ರೋಗಗಳಿವೆ. ಈ ಕಾರಣಕ್ಕೆ ಈ ಸಮುದಾಯವೇ ನಿಧಾನಕ್ಕೆ ನಶಿಸಿಹೋಗುತ್ತಿದೆ.
ಹಸಲರು ಮೂಲತಃ ಮಲೆನಾಡಿನ ಕಾಡಿನ ಮಕ್ಕಳು. ಕಾಡು ಉತ್ಪನ್ನ, ಕೂಲಿಯಿಂದ ಬದುಕು. ಈಗ ಭೂಮಿ ಹಕ್ಕು ಮತ್ತು ಶಿಕ್ಷಣಕ್ಕಾಗಿ ಹೋರಾಟ ಮಾಡುತ್ತಲೇ ಕೊಡಗಿನ ಪಣಿಯರಂತೆ ಇವರೂ ಜೀತ ಅನುಭವಿಸುತ್ತಾ ಭೂಮಿಯ ಕನಸು ಕಾಣುತ್ತಾ ಕಣ್ಮರೆಯಾಗುತಿದ್ದಾರೆ..






