ಜಗ್ಗಲಿಗೆಯನ್ನು ತಯಾರಿಸುವ ‘ಜಗ್ಗಲಿ’ ಸಮುದಾಯ

ಕರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿರುವ ಜಗ್ಗಲಿ ಸಮುದಾಯವು ಒಂದು ಕಡೆ ನೆಲೆ ನಿಲ್ಲಲು ಹಾತೊರೆಯುತ್ತಿದೆ. ಅತ್ತ ವಸತಿಗೆ ಬೇಕಾದ ಜಾಗವನ್ನೂ ಪಡೆಯಲಾರದೆ ಇತ್ತ ಅಲೆಮಾರಿತನದ ಬದುಕಿಗೂ ಸಂಪೂರ್ಣ ಒಗ್ಗಿಕೊಳ್ಳಲಾರದೆ ಸಂಕ್ರಮಣ ಸಂಕಟವನ್ನು ಈ ಸಮುದಾಯ ಅನುಭವಿಸುತ್ತಿದೆ.
‘ಜಗ್ಗಲಿಗೆ(ದೊಡ್ಡಲಗೆ)ಯನ್ನು ತಯಾರಿಸಲು ಎತ್ತಿನಗಾಡಿಯ ಚಕ್ರದ ಹಳಿ ಅಥವಾ ಕಬ್ಬಿಣದ ನೇಮಿಯನ್ನು ಬಳಸುತ್ತಾರೆ. ಹಳಿ ಸವೆದುಹೋಗಿ ಗಾಡಿಗೆ ಬಳಸಲು ನಿರುಪಯುಕ್ತವಾದುದನ್ನು ತಂದು ಅದಕ್ಕೆ ಚರ್ಮವನ್ನು ಹೊಂದಿಸುತ್ತಾರೆ. ಎತ್ತು, ಆಕಳು, ಎಮ್ಮೆ, ಕೋಣಗಳ ಚರ್ಮವೇ ಜಗ್ಗಲಿಗೆಗೆ ಆಗಬೇಕು... ಬೇರೆ ಪ್ರಾಣಿಗಳು ಚಿಕ್ಕವಾದ್ದರಿಂದ ಜಗ್ಗಲಿಗೆಗೆ ಬೇಕಾಗುವ ಅಗಲವಾದ ತೊಗಲು ಅವುಗಳಿಂದ ಲಭ್ಯವಾಗುವುದಿಲ್ಲ, ಹಿಂಭಾಗದ ಚಕ್ರದ ಹಳಿಗೆ ಸಮನಾಂತರವಾಗಿ ಕೆಳಗೆ ಒಂದು ಲೋಹದ ಬಳೆಯಿದ್ದು ಅದಕ್ಕೆ ಹಳಿಯ ಚರ್ಮವನ್ನು ಚರ್ಮದ ದಾರಗಳಿಂದ ಬಿಗಿಯಲಾಗುತ್ತದೆ. ಈ ಮಹಾ ವಾದ್ಯವನ್ನು ಮಹಾ ಶಕ್ತಿವಂತ ಅಸ್ಪಶ್ಯನೋರ್ವನು ಮಾತ್ರ ಇದನ್ನು ಹೊತ್ತು ನುಡಿಸಬೇಕಾಗುತ್ತದೆ’ ಎಂದು ಡಾ.ಚಿದಾನಂದಮೂರ್ತಿಯವರು ಬರೆಯುತ್ತಾರೆ. ಮುಂದುವರಿದು ‘ಸಾರ್ವಜನಿಕವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಜಾತಿಭೇದವಿಲ್ಲದೆ ಬೆರೆಯುವ ಜನರಿಗೆ ಜಗ್ಗಲಿಗೆ ಅತ್ಯಂತ ಮನಮೋಹಕವಾಗಿರುತ್ತದೆ..’ ಎಂದೂ ಹೇಳುತ್ತಾರೆ. ಈ ಜಗ್ಗಲಿಗೆ ಅಥವಾ ದೊಡ್ಡಲಗೆಯನ್ನು ತಯಾರಿಸಿ ನುಡಿಸುವವರು ‘ಜಗ್ಗಲಿ’ ಸಮುದಾಯದವರು.
ಸ್ವತಃ ನಾನೇ ಮಾರ್ಗದರ್ಶಿಯಾಗಿದ್ದು ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ‘ಜಗ್ಗಲಿ’ ಸಮುದಾಯದ ಕುರಿತು ಸಂಶೋಧನಾ ಪ್ರಬಂಧ ಬರೆದ ಡಾ.ಆರಡಿ ಮಲ್ಲಯ್ಯ ಕಟ್ಟೇರ ಅವರು ‘ಜಗ್ಗಲಿಗಳ ಚಿತ್ರ ರಾಮಾಯಣವನ್ನು ಗಮನಿಸಿದರೆ ದೊಡ್ಡಲಗೆ(ತಮಟೆ)ಯನ್ನು ತಯಾರಿಸಿ ಬಾರಿಸುತ್ತಿದ್ದ ಜನ ಇವರು ಎಂಬುದು ಮನವರಿಕೆಯಾಗುತ್ತದೆ’ ಎನ್ನುತ್ತಾರೆ. ‘ಚರ್ಮದ ಕೆಲಸ ಮಾಡುವ ನಮಗೆ ಈ ಹೆಸರು ಬಂದಿದೆಯಂತೆ.. ನಾವೀಗ ಚರ್ಮದ ಕೆಲಸ ಮಾಡುತ್ತಿಲ್ಲವಾದ್ದರಿಂದ ನಮಗೆ ಜಗ್ಗಲಿ ಎಂಬ ಹೆಸರು ಬೇಡ’ ಎಂದು ಜಗ್ಗಲಿ ಸಮುದಾಯದವರು ವಾದ ಮಾಡುವುದನ್ನು ಸಹ ಆರಡಿ ಮಲ್ಲಯ್ಯನವರು ದಾಖಲಿಸಿದ್ದಾರೆ. ಅವರ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ‘‘ಹಿಂದೆ ನಿಮ್ಮನ್ನು ಏನೆಂದು ಕರೆಯತ್ತಿದ್ದರು..?’’ ಎಂಬ ಪ್ರಶ್ನೆಗೆ ‘‘ನಾವು ತೂರ್ಪೊಳ್ಳು ಅಂದರೆ ಆಂಧ್ರದ ಪೂರ್ವ ದಿಕ್ಕಿನಿಂದ ಬಂದವರು’’ ಎಂದು ಹೇಳುತ್ತಿದ್ದರಂತೆ.
ಎಸ್.ಎಸ್. ಹಿರೇಮಠ್ರವರ ಸಂಶೋಧನೆಯಿಂದ ಜಗ್ಗಲಿಗಳು ಮಾಲರಿಂದ ಕವಲೊಡೆದವರು ಎಂಬುದು ಸ್ಪಷ್ಟವಾಗುತ್ತದೆ. ಎಲ್ಲಾ ನಿಟ್ಟಿನಿಂದಲೂ ಜಗ್ಗಲಿಗಳು ಮಾತೃ ಆರಾಧಕರು, ತಾಂತ್ರಿಕ ಪಂಥದವರು ಎಂಬುದು ಸ್ಪಷ್ಟ. ಇವರ ಕುಲಕಥನಕ್ಕೆ ನರಬಲಿಯ ಬಲವಾದ ನಂಟಿದೆ ಎಂಬುದನ್ನೂ ದಾಖಲಿಸುತ್ತಾರೆ. ರೆಡ್ಡಿ ಬಾವಜಿ ಪಾಕನಾಟಿ ಜಗ್ಗಲಿಗಳಿಗೆ ಸಂಬಂಧಿಸಿದಂತೆ ಮಾಲ ಸಮುದಾಯದ ನಂಟು ಬಿಡಿಸುವುದು ಅಸಾಧ್ಯ. ಮಾಲರ ‘ಪಟ್ಟಿತಾಂಬೂಲಂ’ ಜಗ್ಗಲಿಗಳ ‘ಕೆಂದೈ’ ಕಾರ್ಯಕ್ರಮಗಳು ಜಗ್ಗಲಿ ಮತ್ತು ಮಾಲರಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ನಡೆಯುತ್ತದೆ.
ಜಗ್ಗಲಿ ಸಮುದಾಯದ ಇರುವಿಕೆಯ ಕುರಿತು ಹೆಚ್ಚು ಜನಕ್ಕೆ ಗೊತ್ತಿಲ್ಲ ಮತ್ತು ಇದು ಅನಾಮಿಕ ಸಮುದಾಯವಾದ್ದರಿಂದ ಮತ್ತು ಇವರ ಜಾತಿಯ ಬಗ್ಗೆ ಪರಿಚಯವಿಲ್ಲದ ಅಧಿಕಾರಿಗಳು ಇವರಿಗೆ ಜಗ್ಗಲಿ ಹೆಸರಲ್ಲಿ ಜಾತಿ ಪ್ರಮಾಣಪತ್ರ ಕೊಡದ ಕಾರಣ ಇವರಲ್ಲಿ ಅನೇಕರು ಸುಡುಗಾಡುಸಿದ್ದರ ಹೆಸರಲ್ಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರು ಜಂಗಾಲರ ಹೆಸರಲ್ಲೂ ಜಾತಿಪ್ರಮಾಣಪತ್ರ ಪಡೆದಿದ್ದಾರೆ. ಈ ಗೊಂದಲದಿಂದಾಗಿ ಕೆಲವು ಕಡೆ ಇವರಿಗೆ ಯಾವುದೇ ಜಾತಿಯ ಪ್ರಮಾಣಪತ್ರ ಸಿಗದ ಕಾರಣ ಮಕ್ಕಳನ್ನು ಸಾಮಾನ್ಯವರ್ಗದ ಹೆಸರಲ್ಲಿ ಶಾಲೆಗೆ ದಾಖಲಿಸಿದ ಉದಾಹರಣೆಗಳಿವೆ. ಇನ್ನು ಕೆಲ ಮಂದಿ ಅರೆಬೆಂದ ಸಂಶೋಧಕರು ಜಗ್ಗಲಿಗಳು, ಬುಡ್ಗಜಂಗಮರು ಮತ್ತು ಸುಡುಗಾಡುಸಿದ್ದರು ಒಂದೇ ಎಂದು ಆಧಾರಗಳೇ ಇಲ್ಲದೆ ಮನಸ್ಸಿಗೆ ಬಂದದ್ದನ್ನೆಲ್ಲ ಬರೆದು ದಿಕ್ಕುತಪ್ಪಿಸುತ್ತಿದ್ದಾರೆ ಅಥವಾ ಇವರು ಯಾವುದೋ ಒತ್ತಡಕ್ಕೆ ಮಣಿದು ಇಂತಹ ದ್ರೋಹ ಬಗೆದಿರಬಹುದು!
‘ಜಗ್ಗಲಿ ಸಮುದಾಯಕ್ಕೆ ಸುಡುಗಾಡುಸಿದ್ದ, ಬುಡ್ಗಜಂಗಮ ಸಮುದಾಯಕ್ಕಿಂತಲೂ ಗಾಢವಾದ ಸಂಬಂಧ ದಕ್ಕಲರೊಂದಿಗೆ ಇದೆ. ಗೊಂಡರಿಗೂ ಜಗ್ಗಲಿಗಳಿಗೂ ಇರುವ ಸಂಬಂಧ ಅಧ್ಯಯನಯೋಗ್ಯ. ಜಗ್ಗಲಿಗಳಲ್ಲಿ ‘ಡೊಕ್ಕೊಳ್ಳು’ ಎಂಬ ಬೆಡಗು ಇದ್ದು, ಜಗ್ಗಲಿಗಳ ‘ಅಗಸ್ತೋಳ್ಳು’ ಬೆಡಗಿನೊಂದಿಗೆ ವೈವಾಹಿಕ ಸಂಬಂಧಗಳಿವೆ. ಅಂತೆಯೇ ಅಗಸ್ತೊಳ್ಳಿಗೂ ಸುಡುಗಾಡುಸಿದ್ದರಿಗೂ ವೈವಾಹಿಕ ಸಂಬಂಧಗಳಿವೆಯಾದರೂ ಜಗ್ಗಲಿಗಳಲ್ಲಿ ಸುಡುಗಾಡುಸಿದ್ದರ ಹೆಸರಿನ ಬೆಡಗಿಲ್ಲ. ಬುಡ್ಗಜಂಗಮರ, ಸುಡುಗಾಡುಸಿದ್ದರ ಮತ್ತು ಜಗ್ಗಲಿಗಳ ಕುಲಬೆಡಗುಗಳು ಬೇರೆ ಬೇರೆಯೇ ಇವೆ. ಇವರ ಕುಲದೈವಗಳೂ ಬೇರೆಬೇರೆಯಾಗಿವೆ. ತಮ್ಮನ್ನು ಕಾಡುಸಿದ್ದರೊಂದಿಗೆ ಸೇರಿಸಿ ಎನ್ನುವ ಆಲೋಚನೆಯೂ ಇವರಲ್ಲಿ ಇದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸ್ಥಳೀಯವಾಗಿ ಬುಡ್ಗಜಂಗಮರು ಮತ್ತು ಸುಡುಗಾಡುಸಿದ್ದರು ಜಗ್ಗಲಿಗಳಿಗಿಂತಲೂ ಮೇಲ್ ಸ್ತರದಲ್ಲಿದ್ದಾರೆ’ ಎಂದು ಆರಡಿ ಮಲ್ಲಯ್ಯ ಕಟ್ಟೇರ ಅವರು ದಾಖಲಿಸಿದ್ದಾರೆ. ಹಾಗೆ ನೋಡಿದರೆ ಜಾತಿ ವರ್ಗೀಕರಣದಲ್ಲಿ ಜಗ್ಗಲಿಗಳೂ ಕೂಡ ದಕ್ಕಲರು ಮತ್ತು ಸಿಂದೊಳ್ಳರಂತೆ ಕಟ್ಟಕಡೆಯವರು.
ಸದಾ ಭಿಕ್ಷಾಟನೆ, ಅನಿಶ್ಚಿತ ಬೀದಿ ವ್ಯಾಪಾರವೇ ಮುಂತಾದ ಅಲೆಮಾರಿತ್ವದ ಕಾರಣಗಳಿಂದ, ಹೊಟ್ಟೆಪಾಡಿಗಾಗಿ ಒಂದೂರಿಂದ ಮತ್ತೊಂದೂರಿಗೆ ಅಲೆಯುವ ಜಗ್ಗಲಿಗಳಿಗೆ ಗುರುತಿಗಾಗಿ ಚೀಟಿ ನೀಡುವುದು ಮತ್ತು ‘ಸಭ್ಯ’ ಸಮಾಜ ಮತ್ತು ಫೊಲೀಸರು ಇವರ ವೇಷಭೂಷಣಗಳ ಕಾರಣಕ್ಕೆ ಅನುಮಾನದಿಂದ ನೋಡುತ್ತಾರೆ ಮತ್ತು ಅಪರಾಧಿಗಳಂತೆ ಕಾಣುತ್ತಾರೆ. ಇವರಿಗೆ ಅಪರಾಧಿ ಬುಡಕಟ್ಟುಗಳೆಂಬ ಕಳಂಕ ಇಂದಿಗೂ ಇದೆ. ಜಗ್ಗಲಿಗಳ ಸ್ವಾತಂತ್ರ್ಯವನ್ನು ಸ್ಥಳಚೀಟಿ ಎಂಬ ನಂಬಿಕೆಯಲ್ಲಿ ಸುರುಳಿ ಸುತ್ತುತ್ತಿದ್ದಾರೆ. ಈ ಕಾರಣಕ್ಕೆ ಅನೇಕ ಮಂದಿ ಅಮಾಯಕ ಜಗ್ಗಲಿಗಳನ್ನು ವಿನಾಕಾರಣ ಬಂಧಿಸಿದ ಉದಾಹರಣೆಗಳನ್ನೂ ಜಗ್ಗಲಿಗಳು ನೀಡುತ್ತಾರೆ.
ಕರ್ನಾಟಕ ಮತ್ತು ಆಂಧ್ರದ ಗಡಿಭಾಗದಲ್ಲಿರುವ ಜಗ್ಗಲಿ ಸಮುದಾಯವು ಒಂದು ಕಡೆ ನೆಲೆ ನಿಲ್ಲಲು ಹಾತೊರೆಯುತ್ತಿದೆ. ಅತ್ತ ವಸತಿಗೆ ಬೇಕಾದ ಜಾಗವನ್ನೂ ಪಡೆಯಲಾರದೆ ಇತ್ತ ಅಲೆಮಾರಿತನದ ಬದುಕಿಗೂ ಸಂಪೂರ್ಣ ಒಗ್ಗಿಕೊಳ್ಳಲಾರದೆ ಸಂಕ್ರಮಣ ಸಂಕಟವನ್ನು ಈ ಸಮುದಾಯ ಅನುಭವಿಸುತ್ತಿದೆ. ನಾಗರಿಕ ಸಮಾಜ ನಾಚಿಕೆ ಪಡುವಂತಹ, ವಾಸಿಸಲು ಅಸಾಧ್ಯವಾದಂತಹ ಮಲಪೂರಿತ ಜಾಗಗಳಲ್ಲಿ ಇವರು ಇಂದಿಗೂ ವಾಸಿಸುತ್ತಿದ್ದಾರೆ. ಹರಿದ ಬಟ್ಟೆಗಳಲ್ಲಿ ಜೋಪಡಿ ಹಾಕಿಕೊಂಡು ಬಿಸಿಲಿಗೆ ಮೈಯೊಡ್ಡಿ ತಮ್ಮ ದುರ್ಗತಿಯನ್ನು ಮರೆಮಾಚಲು ರಾತ್ರಿಯ ಆಗಮನಕ್ಕಾಗಿ ಕಾಯುತ್ತಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ತಾವು ಮಾಡದ ತಪ್ಪಿಗೆ ‘ಕ್ರಿಮಿನಲ್ಸ್’ ಎಂಬ ಹಣೆಪಟ್ಟಿ ಕಟ್ಟಿಕೊಂಡು, ಅಭದ್ರತೆಯ ಆತಂಕದಲ್ಲಿ ಜೀವಿಸುತ್ತಿದ್ದಾರೆ.
(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)






