ಡಿಸ್ಕೌಂಟ್‌ಗಳ ಮಾಯಾಜಾಲ!
ಹೊಸ ವರ್ಷದಿಂದ ಭಾರತೀಯ ಗ್ರಾಹಕರಿಗೆ ಹೊಸ ರಕ್ಷಣೆ

ಆನ್‌ಲೈನ್ ಆಫರ್ ನಿಜವಾಗಿಯೂ ಡಿಸ್ಕೌಂಟೇ ?
ಹಬ್ಬದ ಸಮಯದಲ್ಲಿ ಅಥವಾ ವಿಶೇಷ ಸೇಲ್‌ಗಳಲ್ಲಿ ಆನ್‌ಲೈನ್ ಶಾಪಿಂಗ್ ಮಾಡುವಾಗ ‘ರೂ. 65,000 ಬದಲು ಕೇವಲ ರೂ. 40,000’ ಎಂಬ ಆಕರ್ಷಕ ಜಾಹೀರಾತುಗಳನ್ನು ನಾವು ನೋಡುತ್ತೇವೆ. ಆದರೆ ನಿಜವಾಗಿಯೂ ಆ ಉತ್ಪನ್ನದ ಬೆಲೆ ಮೊದಲು ರೂ. 65,000 ಇತ್ತೇ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮೂಡುತ್ತದೆ.
ಕಳೆದ ಕೆಲವು ವರ್ಷಗಳಿಂದ ವಿದೇಶಗಳಲ್ಲಿನ ಗ್ರಾಹಕ ಸಂಘಟನೆಗಳು ಇಂತಹ ‘ಬೃಹತ್ ಡಿಸ್ಕೌಂಟ್’ಗಳ ನೈಜತೆಯನ್ನು ಪರಿಶೀಲಿಸುತ್ತಿವೆ. ಕೆಲ ಸಂದರ್ಭಗಳಲ್ಲಿ ಜಾಹೀರಾತಿನಲ್ಲಿ ತೋರಿಸುವ ಹಿಂದಿನ ಬೆಲೆ ಕೃತಕವಾಗಿ ಹೆಚ್ಚಿಸಲಾಗಿರುತ್ತದೆ. ನಂತರ ಕಡಿಮೆ ಬೆಲೆಯಂತೆ ತೋರಿಸಿ ಗ್ರಾಹಕರನ್ನು ಆಕರ್ಷಿಸಲಾಗುತ್ತದೆ.
ಹಬ್ಬದ ಸೇಲ್‌ಗಳಲ್ಲಿ ಗ್ರಾಹಕರ ಅನುಭವ
ಭಾರತದಲ್ಲಿಯೂ ದೀಪಾವಳಿ, ದಸರಾ, ಸ್ವಾತಂತ್ರ್ಯ ದಿನ, ಹೊಸ ವರ್ಷ ಮುಂತಾದ ಸಂದರ್ಭಗಳಲ್ಲಿ ಭರ್ಜರಿ ಸೇಲ್‌ಗಳು ನಡೆಯುತ್ತವೆ. ಕೆಲವೊಮ್ಮೆ ಗ್ರಾಹಕರು ಬಹಳ ದಿನಗಳಿಂದ ಖರೀದಿಸಲು ಕಾಯುತ್ತಿದ್ದ ವಸ್ತುವಿನ ಬೆಲೆ ಸೇಲ್ ಆರಂಭವಾದ ನಂತರವೇ ಹೆಚ್ಚಾಗಿರುವುದನ್ನು ಗಮನಿಸಿರಬಹುದು.
ಅದಾದ ನಂತರ ‘ಶೇ.50 ಅಥವಾ ಶೇ. 60 ಡಿಸ್ಕೌಂಟ್’ ಎಂದು ತೋರಿಸಿದರೂ, ಅಂತಿಮ ಬೆಲೆ ಸೇಲ್‌ಗೂ ಮುನ್ನ ಇದ್ದ ಬೆಲೆಯಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ನಿಜವಾದ ಉಳಿತಾಯ ಮಾಡುತ್ತಿದ್ದಾರೆಯೇ ಅಥವಾ ಕೇವಲ ಮಾರ್ಕೆಟಿಂಗ್ ತಂತ್ರಕ್ಕೆ ಒಳಗಾಗುತ್ತಿದ್ದಾರೆಯೇ ಎಂಬುದು ತಿಳಿಯುವುದು ಕಷ್ಟ.
ಜನವರಿ 1ರಿಂದ ‘Prior Price’ ಬಹಿರಂಗಪಡಿಸುವ ನಿಯಮ
ಭಾರತೀಯ ಇ-ಕಾಮರ್ಸ್ ಕ್ಷೇತ್ರದಲ್ಲಿ ಗ್ರಾಹಕರಿಗೆ ಮಹತ್ವದ ಬದಲಾವಣೆ ಬರಲಿದೆ. ಜನವರಿ 1ರಿಂದ ಡಿಸ್ಕೌಂಟ್ ಘೋಷಿಸುವಾಗ ಉತ್ಪನ್ನದ ‘Prior Price’ (ಹಿಂದಿನ ಬೆಲೆ) ಅನ್ನು ಬಹಿರಂಗಪಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ.
ಇಲ್ಲಿ ‘ಹಿಂದಿನ ಬೆಲೆ’ ಎಂದರೆ ವ್ಯಾಪಾರಿ ಇಚ್ಛೆಯಂತೆ ನಿಗದಿಪಡಿಸುವ ಯಾವುದೇ ಮೊತ್ತವಲ್ಲ. ಡಿಸ್ಕೌಂಟ್ ಘೋಷಿಸುವ ಮೊದಲು ಅದೇ ಆನ್‌ಲೈನ್ ವೇದಿಕೆಯಲ್ಲಿ ಕಳೆದ 30 ದಿನಗಳ ಅವಧಿಯಲ್ಲಿ ಆ ಉತ್ಪನ್ನ ಮಾರಾಟವಾದ ಅತ್ಯಂತ ಕಡಿಮೆ ಬೆಲೆ ಆಧಾರವಾಗಿರಬೇಕು.
ಇದರಿಂದ ‘ರೂ. 65,000ರದ್ದು ರೂ. 40,000 ಎಂಬ ಜಾಹೀರಾತನ್ನು ನೋಡಿದಾಗ, ರೂ. 65,000 ನಿಜವಾದ ಹಿಂದಿನ ಮಾರಾಟ ಬೆಲೆಯಾಗಿತ್ತೇ? ಎಂಬುದನ್ನು ಗ್ರಾಹಕರು ಹೆಚ್ಚು ಪರಿಣಾಮಕಾರಿಯಾಗಿ ಪರಿಶೀಲಿಸಬಹುದು.
ಭಾರತೀಯ ಗ್ರಾಹಕರಿಗೆ ಏಕೆ ಇದು ಮುಖ್ಯ?
ಮಾರ್ಕೆಟಿಂಗ್‌ನಲ್ಲಿ ದೊಡ್ಡ ಸಂಖ್ಯೆಗಳು ಮತ್ತು ದೊಡ್ಡ ಶೇಕಡಾವಾರು ಡಿಸ್ಕೌಂಟ್‌ಗಳು ಗ್ರಾಹಕರ ಗಮನ ಸೆಳೆಯುತ್ತವೆ. ‘ಶೇ. 70 OFF’, ‘MEGA SALE’, ‘LIMITED OFFER’ ಮುಂತಾದ ಪದಗಳು ತಕ್ಷಣ ಖರೀದಿಸುವ ಮನಸ್ಥಿತಿಯನ್ನು ಉಂಟುಮಾಡಬಹುದು.ಆದರೆ ಡಿಸ್ಕೌಂಟ್‌ನ ಶೇಕಡಾವಾರು ದೊಡ್ಡದಾಗಿದೆ ಎಂಬುದೇ ಉತ್ತಮ ವ್ಯವಹಾರ ಎಂದರ್ಥವಲ್ಲ. ಉತ್ಪನ್ನದ ಹಿಂದಿನ ನಿಜವಾದ ಮಾರಾಟ ಬೆಲೆ ಮತ್ತು ಪ್ರಸ್ತುತ ಬೆಲೆಯನ್ನು ಹೋಲಿಸುವ ಅವಕಾಶ ಗ್ರಾಹಕರಿಗೆ ದೊರೆತರೆ ಮಾತ್ರ ಆಫರ್‌ನ ನೈಜ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
ಆಫ್‌ಲೈನ್ ಮಾರುಕಟ್ಟೆಯಲ್ಲೂ ಅಗತ್ಯ
ಆನ್‌ಲೈನ್‌ನಲ್ಲಿ ಬೆಲೆ ಇತಿಹಾಸವನ್ನು ಪರಿಶೀಲಿಸಲು ಬೆಲೆ ಟ್ರ್ಯಾಕರ್‌ಗಳು ಮತ್ತು ಇತರ ಸಾಧನಗಳು ಲಭ್ಯವಿವೆ. ಆದರೆ ಅಂಗಡಿಯಲ್ಲಿ ‘ಶೇ. 60 ಔಈಈ’ ಎಂದು ಬರೆದಿರುವ ಶರ್ಟ್ ಅಥವಾ ಇತರ ವಸ್ತುವಿನ ನಿಜವಾದ ಹಿಂದಿನ ಬೆಲೆಯನ್ನು ಸಾಮಾನ್ಯ ಗ್ರಾಹಕ ಹೇಗೆ ಪರಿಶೀಲಿಸಬೇಕು?
ಆದ್ದರಿಂದ ಇದೇ ರೀತಿಯ ಪಾರದರ್ಶಕತೆ ಆಫ್‌ಲೈನ್ ಅಂಗಡಿಗಳು ಮತ್ತು ಮಾಲ್‌ಗಳಲ್ಲಿಯೂ ಇರಬೇಕು. ‘ಹಿಂದಿನ ಬೆಲೆ’ ಎಂಬ ಹೆಸರಿನಲ್ಲಿ ಕೃತಕವಾಗಿ ಹೆಚ್ಚಿಸಿದ ಮೊತ್ತವನ್ನು ತೋರಿಸಿ ನಂತರ ಭಾರೀ ಡಿಸ್ಕೌಂಟ್ ನೀಡುವ ಮಾರ್ಕೆಟಿಂಗ್ ಪದ್ಧತಿಗೆ ಕಡಿವಾಣ ಹಾಕುವುದು ಅಗತ್ಯ.
ಗ್ರಾಹಕರು ಜಾಗರೂಕರಾಗಬೇಕು
ಹೊಸ ನಿಯಮಗಳು ಗ್ರಾಹಕರಿಗೆ ಉತ್ತಮ ರಕ್ಷಣೆ ನೀಡಬಹುದು. ಆದರೆ ಅಂತಿಮವಾಗಿ ಜಾಗರೂಕ ಗ್ರಾಹಕರೇ ಉತ್ತಮ ರಕ್ಷಣೆಯನ್ನು ಪಡೆಯುತ್ತಾರೆ. ಯಾವುದೇ ದೊಡ್ಡ ಡಿಸ್ಕೌಂಟ್ ಕಂಡ ತಕ್ಷಣ ಖರೀದಿಸುವ ಬದಲು, ಹಿಂದಿನ ಬೆಲೆ, ಇತರ ಮಾರಾಟ ವೇದಿಕೆಗಳ ಬೆಲೆ, ಉತ್ಪನ್ನದ ಗುಣಮಟ್ಟ ಮತ್ತು ವಾರಂಟಿ ಮುಂತಾದ ಅಂಶಗಳನ್ನು ಪರಿಶೀಲಿಸುವುದು ಉತ್ತಮ.
ಡಿಸ್ಕೌಂಟ್ ಎಂಬುದು ಕೇವಲ ದೊಡ್ಡ ಶೇಕಡಾವಾರು ಸಂಖ್ಯೆಯಲ್ಲ; ನಿಜವಾದ ಉಳಿತಾಯವೇ ಅದರ ಅರ್ಥ.
ಭಾರತದ ಕೋಟ್ಯಂತರ ಗ್ರಾಹಕರಿಗೆ ಬೆಲೆ ನಿಗದಿ ಮತ್ತು ಡಿಸ್ಕೌಂಟ್‌ಗಳಲ್ಲಿ ಪಾರದರ್ಶಕತೆ ದೊರೆಯುವುದು ಅತ್ಯಂತ ಮುಖ್ಯ. ವ್ಯಾಪಾರಿಗಳಿಗೆ ನ್ಯಾಯಯುತ ಮಾರ್ಕೆಟಿಂಗ್ ಮಾಡುವ ಹಕ್ಕು ಇರುವಂತೆ, ಗ್ರಾಹಕರಿಗೂ ನಿಜವಾದ ಬೆಲೆಯನ್ನು ತಿಳಿದು ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ.
ಆನ್‌ಲೈನ್‌ನಿಂದ ಆರಂಭವಾಗುತ್ತಿರುವ ಈ ಪಾರದರ್ಶಕತೆಯ ನಿಯಮ ಮುಂದಿನ ದಿನಗಳಲ್ಲಿ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ವಿಸ್ತರಿಸಿದರೆ, ಭಾರತೀಯ ಗ್ರಾಹಕರಿಗೆ ಇನ್ನಷ್ಟು ನ್ಯಾಯಯುತ ಮತ್ತು ವಿಶ್ವಾಸಾರ್ಹ ಮಾರುಕಟ್ಟೆ ನಿರ್ಮಾಣವಾಗಬಹುದು.
(ಲೇಖಕರು ಕಾರ್ಯಕಾರಿ ಕಾರ್ಯದರ್ಶಿ,
ರೈಲು ಯಾತ್ರಿ ಸಂಘ, ಮುಂಬೈ)






