ನಿಲ್ಲದ ಯುದ್ಧ: ನಲುಗುತ್ತಿರುವ ಜಾಗತಿಕ ಆರ್ಥಿಕತೆ

ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ ಇಂಧನ ಪೂರೈಸುವ ಏಕೈಕ ಹೆದ್ದಾರಿ ಎಂದುಕೊಳ್ಳಿ. ಒಂದೊಮ್ಮೆ ಈ ಮಾರ್ಗ ಮುಚ್ಚಿದರೆ, ತೈಲ ಟ್ಯಾಂಕರ್‌ಗಳು ಈ ಮಾರ್ಗದ ಮೂಲಕ ತೆರಳಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಕೆಲವೇ ದಿನಗಳಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳಿಗೆ ಜಗತ್ತಿನಾದ್ಯಂತ ಪರದಾಡಬೇಕಾಗುತ್ತವೆ. ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ. ಜಾಗತಿಕ ಆರ್ಥಿಕತೆಗಳು ನಲುಗುತ್ತವೆ.
ಮಧ್ಯ ಪೂರ್ವದಲ್ಲಿ ಈಗೊಂದು ಬಲುದೊಡ್ಡ ಬೆಳವಣಿಗೆ ನಡೆಯುತ್ತಿದೆ. ಅದರ ಪರಿಣಾಮ ನಮ್ಮೆಲ್ಲರ ಮೇಲೂ ಬೀರುತ್ತಿದೆ. ಮಧ್ಯ ಪೂರ್ವ ಪ್ರದೇಶ ಜಗತ್ತಿನ ಒಟ್ಟು ತೈಲದ ಶೇ. 20ನ್ನು ಪ್ರತಿದಿನವೂ ಪೂರೈಸುವುದರಿಂದ, ಭಾರತದಲ್ಲಿ ಕುಳಿತಿರುವ ನಮಗೂ ಯುದ್ಧದ ಬಿಸಿ ತಟ್ಟಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಫೆಬ್ರವರಿ 28ರಂದು ಇರಾನ್‌ನ ಮಿಲಿಟರಿ ಗುರಿಗಳ ಮೇಲೆ ಬೃಹತ್ ವಾಯು ದಾಳಿ ನಡೆಸುವ ಮೂಲಕ ಇದೆಲ್ಲವೂ ಆರಂಭಗೊಂಡಿತು. ಆರಂಭದಲ್ಲಿ ಕೇವಲ ವಾಯು ದಾಳಿಯ ರೂಪದಲ್ಲಿ ಆರಂಭಗೊಂಡ ಕಾರ್ಯಾಚರಣೆ, ಕ್ರಮೇಣ ಮೌನವಾಗಿಯೇ ಇರಾಕ್ ಯುದ್ಧದ ಬಳಿಕ ಈ ಪ್ರದೇಶದಲ್ಲಿ ಅಮೆರಿಕದ ಬಹುದೊಡ್ಡ ಮಿಲಿಟರಿ ಒಗ್ಗೂಡುವಿಕೆಯ ರೂಪ ಪಡೆದುಕೊಂಡಿದೆ. ಇಲ್ಲಿನ ಅಮೆರಿಕದ ಸೇನಾ ಸಂಗ್ರಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಅಮೆರಿಕ ಈಗಾಗಲೇ ಇರಾನ್‌ನೊಳಗೆ ಮಿಲಿಟರಿ ಮುಖ್ಯ ನೆಲೆಗಳು, ಕ್ಷಿಪಣಿ ಉಡಾವಣಾ ತಾಣಗಳು, ಡ್ರೋನ್ ಕಾರ್ಖಾನೆಗಳು ಮತ್ತು ನೌಕಾಪಡೆಯ ಆಸ್ತಿಗಳು ಸೇರಿದಂತೆ 9,000ಕ್ಕೂ ಹೆಚ್ಚಿನ ಗುರಿಗಳ ಮೇಲೆ ದಾಳಿ ನಡೆಸಿವೆ. 140ಕ್ಕೂ ಹೆಚ್ಚು ಇರಾನಿಯನ್ ನೌಕೆಗಳು ಹಾನಿಗೊಂಡಿವೆ ಅಥವಾ ನಾಶವಾಗಿವೆ. ಇದಕ್ಕೆ ಪ್ರತಿಯಾಗಿ, ಇರಾನ್ ಸಹ ಬಹುತೇಕ ಪ್ರತಿದಿನವೂ ಇಸ್ರೇಲ್, ಸನಿಹದ ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕನ್ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿ, ಪ್ರತಿದಿನವೂ ಜಗತ್ತಿನ ಶೇ. 20ಕ್ಕೂ ಹೆಚ್ಚಿನ ತೈಲ ಸಾಗಾಟವಾಗುವ ಕಿರಿದಾದ ಸಮುದ್ರ ವ್ಯಾಪಾರ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನೂ ಇರಾನ್ ಕೆಲವು ರಾಷ್ಟ್ರಗಳಿಗಷ್ಟೇ ತೆರೆದಿದೆ. ಹಾರ್ಮುಝ್ ಜಲಸಂಧಿ ಎನ್ನುವುದು ಅರ್ಧ ಜಗತ್ತಿಗೆ ಇಂಧನ ಪೂರೈಸುವ ಏಕೈಕ ಹೆದ್ದಾರಿ ಎಂದುಕೊಳ್ಳಿ. ಒಂದೊಮ್ಮೆ ಈ ಮಾರ್ಗ ಮುಚ್ಚಿದರೆ, ತೈಲ ಟ್ಯಾಂಕರ್‌ಗಳು ಈ ಮಾರ್ಗದ ಮೂಲಕ ತೆರಳಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಕೆಲವೇ ದಿನಗಳಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳಿಗೆ ಜಗತ್ತಿನಾದ್ಯಂತ ಪರದಾಡಬೇಕಾಗುತ್ತವೆ. ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳುತ್ತವೆ. ಜಾಗತಿಕ ಆರ್ಥಿಕತೆಗಳು ನಲುಗುತ್ತವೆ.
ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವುದು ಇಲ್ಲಿಂದ.
ಅಮೆರಿಕ ಕೇವಲ ಬಹಳಷ್ಟು ದೂರದಿಂದ ಬಾಂಬ್ ದಾಳಿ ನಡೆಸುತ್ತಾ ಕೂತಿಲ್ಲ. ಅದು ಈಗಾಗಲೇ ತನ್ನ ಸಾವಿರಾರು ಯೋಧರನ್ನು ಯುದ್ಧ ಪೀಡಿತ ಪ್ರದೇಶದತ್ತ ರವಾನಿಸುತ್ತಿದೆ. ಮಾರ್ಚ್ 24ರಂದು, ಅಮೆರಿಕದ ನಾರ್ತ್ ಕೆರೊಲಿನಾದಲ್ಲಿರುವ ಉನ್ನತ ಮಿಲಿಟರಿ ಪಡೆಯಾದ 82ನೇ ಏರ್‌ಬಾರ್ನ್ ಡಿವಿಷನ್‌ನ 2,000 ಯೋಧರನ್ನು ಮಧ್ಯ ಪೂರ್ವಕ್ಕೆ ತೆರಳುವಂತೆ ಆದೇಶಿಸಲಾಗಿದೆ. ಈ ಪಡೆ ಅತ್ಯಂತ ಕ್ಷಿಪ್ರವಾಗಿದ್ದು, ಇದನ್ನು ಕೇವಲ 18 ಗಂಟೆಗಳ ಒಳಗಾಗಿ ಜಗತ್ತಿನ ಯಾವ ಮೂಲೆಗೆ ಬೇಕಾದರೂ ರವಾನಿಸಲು ಸಾಧ್ಯವಿದೆ. ಹಾಗೆಂದು ಇವರು ಯಾರೋ ಸಾಮಾನ್ಯ ಯೋಧರಲ್ಲ. ಇವರು ಅತ್ಯಂತ ಹೆಚ್ಚಿನ ತರಬೇತಿ ಹೊಂದಿರುವ ಪ್ಯಾರಾಟ್ರೂಪರ್‌ಗಳಾಗಿದ್ದು, ಆಕಾಶದಿಂದ ಅತ್ಯಂತ ಹೆಚ್ಚಿನ ವೇಗದಲ್ಲಿ ಯಾವುದೇ ಯುದ್ಧ ಭೂಮಿಗೆ ಬೇಕಾದರೂ ನಿಖರವಾಗಿ ಧುಮುಕಬಲ್ಲರು.
ಅವರ ಜೊತೆಗೆ, ಎರಡು ಬೃಹತ್ ಮರೀನ್ ಗುಂಪುಗಳೂ ಸಹ ಮಧ್ಯ ಪೂರ್ವದತ್ತ ಸಾಗುತ್ತಿವೆ. ಒಂದು ಗುಂಪು ಜಪಾನ್‌ನಿಂದ ತೆರಳುತ್ತಿದ್ದರೆ, ಇನ್ನೊಂದು ಕ್ಯಾಲಿಫೋರ್ನಿಯದಿಂದ ಬರುತ್ತಿದೆ. ಇವು ಮೂರೂ ಪಡೆಗಳು ಜೊತೆಯಾದಾಗ, ಅವು ಯುದ್ಧ ಆರಂಭಗೊಂಡ ಬಳಿಕ, ಈ ಪ್ರದೇಶಕ್ಕೆ ಬಹುತೇಕ 7,000 ಹೆಚ್ಚುವರಿ ಯೋಧರನ್ನು ತಂದಂತಾಗುತ್ತದೆ. ಇದು ಇಷ್ಟು ಸಣ್ಣ ಅವಧಿಯಲ್ಲಿ ಕಳುಹಿಸಬಹುದಾದ ಬಹುದೊಡ್ಡ ಸಂಖ್ಯೆಯ ಸೇನೆಯಾಗಿದೆ.
ಈ ಮೂರು ಪಡೆಗಳನ್ನು ಸರಳವಾಗಿ ಅರ್ಥೈಸಿಕೊಳ್ಳೋಣ.
ಜಪಾನ್‌ನಿಂದ ಪ್ರಯಾಣಿಸುತ್ತಿರುವ ಮೊದಲ ಗುಂಪನ್ನು ಯುಎಸ್‌ಎಸ್ ಟ್ರಿಪೋಲಿ ಎನ್ನುವ ಬೃಹತ್ತಾದ, 261 ಮೀಟರ್ ಉದ್ದವಿರುವ ಮತ್ತು 45,000 ಟನ್ ತೂಕವಿರುವ, ಒಂದು ಸಣ್ಣ ವಿಮಾನ ವಾಹಕ ನೌಕೆಯಂತೆ ಕಾರ್ಯಾಚರಿಸುವ ಯುದ್ಧ ನೌಕೆಯ ಆಧಾರದಲ್ಲಿ ರಚಿಸಲಾಗಿದೆ. ಈ ನೌಕೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು 2,200 ಮರೀನ್‌ಗಳನ್ನು ಹೊಂದಿದೆ. ಇದು ಎರಡು ಹೆಚ್ಚುವರಿ ಬೆಂಬಲ ನೌಕೆಗಳೊಡನೆ ಪ್ರಯಾಣಿಸುತ್ತಿದ್ದು, ಅವುಗಳಲ್ಲಿ ಒಂದು ಯೋಧರು ಮತ್ತು ಆಯುಧಗಳನ್ನು ಹೊತ್ತು ಸಾಗಿದರೆ, ಇನ್ನೊಂದು ನೌಕೆಯಲ್ಲಿ ಒಂದು ವಿಶೇಷ ವಿಭಾಗವಿದೆ. ಇದು ನೀರಿನಿಂದ ತುಂಬಿದಾಗ, ಬೋಟುಗಳು ಮತ್ತು ಉಭಯಚರಿ ವಾಹನಗಳು ಹೊರಗಡೆ ತೇಲಿ, ನೇರವಾಗಿ ದಡದತ್ತ ಸಾಗಬಲ್ಲವು. ಒಟ್ಟಾರೆಯಾಗಿ ಇದೊಂದು ಚಲಿಸುವ ಬಂದರ್‌ನಂತಹ ವ್ಯವಸ್ಥೆಯಾಗಿದೆ.
ಕ್ಯಾಲಿಫೋರ್ನಿಯಾದಿಂದ ಸಾಗಿರುವ ಎರಡನೇ ಗುಂಪು ಯುಎಸ್‌ಎಸ್ ಬಾಕ್ಸರ್ ಎನ್ನುವ ಇಂತಹದ್ದೇ ದಾಳಿ ನೌಕೆಯ ಆಧಾರಿತವಾಗಿದೆ. ಈ ನೌಕೆ ಎಫ್-35ಬಿ ಯುದ್ಧ ನೌಕೆಗಳನ್ನು ಹೊಂದಿದ್ದು, 2,200 ಮರೀನ್‌ಗಳು ಮತ್ತು ಬೆಂಬಲ ನೌಕೆಗಳನ್ನು ಹೊಂದಿದೆ. ಇದು 22,200 ಕಿಲೋಮೀಟರ್ ದೂರ ಸಾಗಬೇಕಿದ್ದು, ಕೇವಲ ಎಪ್ರಿಲ್ ಮಧ್ಯಭಾಗದಲ್ಲಷ್ಟೇ ಮಧ್ಯ ಪೂರ್ವಕ್ಕೆ ತಲುಪಬಹುದು.
ಇನ್ನು ಮೂರನೇ ಗುಂಪು 2,000 ಪ್ಯಾರಾಟ್ರೂಪರ್‌ಗಳನ್ನು ಹೊಂದಿರುವ 82ನೇ ಏರ್‌ಬಾರ್ನ್ ಪಡೆಯಾಗಿದ್ದು, ಈ ಯೋಧರು ಬೃಹತ್ ಮಿಲಿಟರಿ ಸಾಗಣೆ ವಿಮಾನಗಳಲ್ಲಿ ಹಾರಾಡುತ್ತಾ ಬರುತ್ತಾರೆ. ಇವರು ಎಲ್ಲಿ ಬೇಕಾದರೂ ಬಲುಬೇಗನೆ ಲ್ಯಾಂಡಿಂಗ್ ನಡೆಸಲು ಸಜ್ಜಾಗಿರುತ್ತಾರೆ.
ಈ ಪಡೆಗಳು ನಿಜಕ್ಕೂ ಮಾಡುವುದೇನು?
ತಜ್ಞರು ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದು 2003ರಲ್ಲಿ 1,60,000 ಯೋಧರನ್ನು ಬಳಸಿಕೊಂಡ ಇರಾಕ್ ಯುದ್ಧದಂತಹ ಪೂರ್ಣ ಪ್ರಮಾಣದ ಯುದ್ಧವಲ್ಲ. ಈಗ ಬರುತ್ತಿರುವ ಪಡೆಗಳು ಬಹಳ ಸಣ್ಣ ಸಂಖ್ಯೆಯಲ್ಲಿದ್ದು, ಇವು ಕೇವಲ ಕ್ಷಿಪ್ರವಾದ, ನಿಖರ ಕಾರ್ಯಾಚರಣೆಗಳಾದ ದಾಳಿ, ಪ್ರಮುಖ ಪ್ರದೇಶಗಳ ಕೈವಶ, ವೇಗದ ಕಾರ್ಯಾಚರಣೆಗಳನ್ನು ನಡೆಸಲು ಮಾತ್ರವೇ ವಿನ್ಯಾಸಗೊಂಡಿವೆ. ಬೃಹತ್ ಟ್ಯಾಂಕ್‌ಗಳು, ಭಾರೀ ಪೂರೈಕೆ ವ್ಯವಸ್ಥೆಗಳು ಮತ್ತು ದೀರ್ಘಾವಧಿಯ ಕಮಾಂಡ್ ವ್ಯವಸ್ಥೆಗಳು ಇಲ್ಲಿ ಲಭ್ಯವಿಲ್ಲ. ಈ ಸೇನೆ ವೇಗವಾಗಿ ಹೊಡೆತ ನೀಡಬಹುದಾದರೂ, ಇರಾನ್‌ನೊಳಗೆ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ. ಸರಳವಾಗಿ ವಿವರಿಸುವುದಾದರೆ, ಈ ಪಡೆಗಳು ವೇಗದ ಕಾರ್ಯಾಚರಣೆಗೆ ನಿರ್ಮಾಣಗೊಂಡಿವೆಯೇ ಹೊರತು, ದೀರ್ಘಾವಧಿಯ ಭೂ ಯುದ್ಧಕ್ಕಲ್ಲ.
ಮೂರು ಸಂಭಾವ್ಯ ಫಲಿತಾಂಶಗಳ ಕುರಿತು ಚರ್ಚಿಸಲಾಗುತ್ತಿದೆ. ಒಂದು, ಅಮೆರಿಕ ಹಾರ್ಮುಝ್ ಜಲಸಂಧಿಯ ಬಳಿಯ ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿ, ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಂಡು, ಹಡಗುಗಳನ್ನು ರಕ್ಷಿಸಬಹುದು. ಎರಡನೆಯ ಸಾಧ್ಯತೆ ಎಂದರೆ, ಅಮೆರಿಕ ಇರಾನ್‌ನ ಅತ್ಯಂತ ಮುಖ್ಯ ತೈಲ ರಫ್ತು ಬಿಂದುವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಲು ಪ್ರಯತ್ನ ನಡೆಸಬಹುದು. ಇದು ಇರಾನ್‌ನ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಬಹುದಾದರೂ, ಯುದ್ಧವನ್ನು ಅತ್ಯಂತ ತೀವ್ರಗೊಳಿಸುವ ಅಪಾಯವೂ ಎದುರಾದೀತು. ಇನ್ನು ಮೂರನೆಯ ಮತ್ತು ಅತ್ಯಂತ ತೀವ್ರವಾದ ಕ್ರಮವೆಂದರೆ, ಅಮೆರಿಕ ಇರಾನ್‌ನ ಪರಮಾಣು ಸಂಗ್ರಹವನ್ನು ನತಂಝ್, ಪುರ್ದೊ ಮತ್ತು ಇಶ್ಫಹಾನ್‌ನಂತಹ ನೆಲೆಗಳಿಂದ ಸಂಗ್ರಹಿಸಲು ಪ್ರಯತ್ನಿಸಬಹುದು. ಈ ನೆಲೆಗಳು ಈಗಾಗಲೇ ತೀವ್ರ ವಾಯು ದಾಳಿಗೆ ತುತ್ತಾಗಿವೆ. ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮಾರ್ಕೊ ರುಬಿಯೋ ಅವರು ಸಾರ್ವಜನಿಕವಾಗಿಯೇ ಯಾರಾದರೂ ಇರಾನ್ ಒಳಗೆ ನುಗ್ಗಿ, ಅಲ್ಲಿನ ಪರಮಾಣು ಪದಾರ್ಥಗಳನ್ನು ಸಂಗ್ರಹಿಸಿ ತರಬಹುದು ಎಂದು ಹೇಳಿಕೆ ನೀಡಿದ್ದರು.
ನಿವೃತ್ತ ಅಡ್ಮಿರಲ್, ನೇಟೊದ ಮಾಜಿ ಕಮಾಂಡರ್ ಆಗಿರುವ ಜೇಮ್ಸ್ ಸ್ಟಾವ್ರಿಡಿಸ್ ಅವರೂ ಸಹ ಖಾರ್ಗ್ ದ್ವೀಪಕ್ಕೆ ನುಗ್ಗುವುದು ಅಥವಾ ಪರಮಾಣು ನೆಲೆಗಳಿಗೆ ನುಗ್ಗುವುದು ಮಾಡಿದರೆ ಅದಕ್ಕೆ ಇರಾನ್‌ನ ಅತ್ಯಂತ ತೀವ್ರ ಪ್ರತಿರೋಧ ಎದುರಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದ್ದಾರೆ. ಇರಾನ್ ಡ್ರೋನ್‌ಗಳು, ಸ್ಫೋಟಕ ಬೋಟುಗಳು ಮತ್ತು ಕ್ಷಿಪಣಿಗಳನ್ನು ಜಲಸಂಧಿಯ ಕಿರಿದಾದ ಹಾದಿಯಲ್ಲಿ ತೀಕ್ಷ್ಣವಾಗಿ ಬಳಸಿಕೊಂಡೀತು.
ತಜ್ಞರು ಈಗ ಇನ್ನೊಂದು ದೊಡ್ಡ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಈಗ ಅಮೆರಿಕ ತನ್ನ ಮಿಲಿಟರಿ ಗಮನವನ್ನು ಸಂಪೂರ್ಣವಾಗಿ ಇರಾನ್ ಮೇಲೆ ಹರಿಸಿದಾಗ, ಜಗತ್ತಿನ ಇತರ ತೊಂದರೆದಾಯಕ ಸ್ಥಳಗಳು ಅಮೆರಿಕದ ಉಪಸ್ಥಿತಿ ಕಡಿಮೆಯಾಗುವುದರ ಲಾಭ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಮಧ್ಯ ಪೂರ್ವದಲ್ಲಿ ಹಚ್ಚಿರುವ ಬೆಂಕಿ, ನಿರೀಕ್ಷೆಗೂ ಮೀರಿ ಬೇರೆ ಬೇರೆ ಕಡೆಗಳಿಗೆ ಹಬ್ಬುವ ಅಪಾಯಗಳಿವೆ.
ಸದ್ಯದ ಮಟ್ಟಿಗೆ, ಅಮೆರಿಕ ತಾನು ಇರಾನ್ ಜೊತೆ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ, ಇರಾನ್ ಈಗ ಅಂತಹ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ ಎಂದಿದೆ. ಇದೇ ವೇಳೆ, ಹಡಗುಗಳು ತೇಲುತ್ತಲೇ ಇವೆ, ಯೋಧರು ಮುಂದೆ ಬರುತ್ತಲೇ ಇದ್ದಾರೆ. ಜಗತ್ತು ಈಗ ಕಣ್ ತೆರೆದು ನೋಡುತ್ತಿದ್ದು, ಜಾಗತಿಕ ಆತಂಕ ಮಾತ್ರ ನಿಜವೇ ಆಗುತ್ತಿದೆ.







