ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚುತ್ತಿದೆ; ಗುಣಮಟ್ಟ ಎಲ್ಲಿದೆ?

ಬೆಳಗ್ಗೆ ಒಂಭತ್ತು ಗಂಟೆ. ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಇತ್ತೀಚೆಗೆ ಆರಂಭವಾದ ವಿಶ್ವವಿದ್ಯಾನಿಲಯದ ಮೊದಲ ವರ್ಷದ ವಿದ್ಯಾರ್ಥಿಯೊಬ್ಬ ಹೊಸ ಬ್ಯಾಗ್ ಹಿಡಿದು ತರಗತಿಗೆ ಬರುತ್ತಾನೆ. ಗ್ರಾಮದಿಂದ ಬಂದಿರುವ ಆತನಿಗೆ ಈ ವಿಶ್ವವಿದ್ಯಾನಿಲಯ ಕುಟುಂಬದ ಬದುಕು ಬದಲಿಸುವ ಅವಕಾಶ. ಹೊಸ ಕಟ್ಟಡ, ಬಣ್ಣದ ಗೋಡೆಗಳು, ದೊಡ್ಡ ನಾಮಫಲಕ-ಎಲ್ಲವೂ ಕಣ್ಣಿಗೆ ಬೀಳುತ್ತವೆ. ಆದರೆ ತರಗತಿಯಲ್ಲಿ ಕುಳಿತಾಗ ಆತನ ಮನದಲ್ಲಿ ಮೂಡುವ ಪ್ರಶ್ನೆ: ನಮಗೆ ಪಾಠ ಮಾಡುವವರು ಯಾರು?
ಇದು ಒಂದು ವಿಶ್ವವಿದ್ಯಾನಿಲಯದ ಕಥೆಯೇ? ಅಥವಾ ಕರ್ನಾಟಕದ ಸಾರ್ವಜನಿಕ ಉನ್ನತ ಶಿಕ್ಷಣ ವ್ಯವಸ್ಥೆಯ ಸ್ಥಿತಿಯ ಪ್ರತಿಬಿಂಬವೇ? ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಎಂಬ ಆಶಯದಲ್ಲಿ ತಪ್ಪೇನಿಲ್ಲ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮನೆಯ ಸಮೀಪವೇ ಉನ್ನತ ಶಿಕ್ಷಣ ದೊರೆಯುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅಗತ್ಯ. ಆದರೆ ವಿಶ್ವವಿದ್ಯಾನಿಲಯದ ಹೆಸರನ್ನು ಘೋಷಿಸುವುದು ಸುಲಭ; ಅದನ್ನು ಗುಣಮಟ್ಟದ ಜ್ಞಾನಕೇಂದ್ರವಾಗಿ ರೂಪಿಸುವುದು ಕಷ್ಟ.
ಆಗಸ್ಟ್ 2026ರ ಅಂಕಿಅಂಶಗಳ ಪ್ರಕಾರ ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಮಂಜೂರಾದ 4,448 ಬೋಧಕ ಹುದ್ದೆಗಳ ಪೈಕಿ 3,052 ಹುದ್ದೆಗಳು ಖಾಲಿ ಇವೆ. ಅಂದರೆ ಸುಮಾರು ಶೇ. 69ರಷ್ಟು ಬೋಧಕ ಹುದ್ದೆಗಳು ಭರ್ತಿಯಾಗಿಲ್ಲ. ಮಂಡ್ಯ, ನೃಪತುಂಗ, ಹಾಸನ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯಗಳಲ್ಲಿಯೂ ಗಮನಾರ್ಹ ಸಂಖ್ಯೆಯ ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಬೇಡಿಕೆ ಮಾತ್ರ ಹೆಚ್ಚುತ್ತಿದೆ. 2023-24ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಪ್ರಮಾಣ (ಉಇಖ) ಶೇ. 41.9ಕ್ಕೆ ಏರಿದೆ. 2022-23ರಲ್ಲಿ ಇದು ಶೇ. 39.6ರಷ್ಟಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯು 2035ರ ವೇಳೆಗೆ ದೇಶದ ಉಇಖ ಅನ್ನು ಶೇ. 50ಕ್ಕೆ ತಲುಪಿಸುವ ಗುರಿ ಹೊಂದಿದೆ. ಹೀಗಿರುವಾಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಒತ್ತು ನೀಡುವ ಸರಕಾರ, ಅವರಿಗೆ ಗುಣಮಟ್ಟದ ಬೋಧನೆ ನೀಡುವ ಸಾಮರ್ಥ್ಯವನ್ನು ಏಕೆ ಸಮಾನ ವೇಗದಲ್ಲಿ ಹೆಚ್ಚಿಸುತ್ತಿಲ್ಲ?
ಇನ್ನೊಂದು ಆತಂಕಕಾರಿ ಸಂಗತಿ ಅನುದಾನದ ಇಳಿಕೆ. ವಿಶ್ವವಿದ್ಯಾನಿಲಯಗಳ ಅಭಿವೃದ್ಧಿಗೆ ರಾಜ್ಯ ಸರಕಾರ ನೀಡುತ್ತಿದ್ದ ಅನುದಾನವು 2023-24ರಲ್ಲಿ ರೂ. 41 ಕೋಟಿಯಿಂದ 2024-25ರಲ್ಲಿ ರೂ. 30 ಕೋಟಿಗೆ ಮತ್ತು 2025-26ರಲ್ಲಿ ರೂ. 20 ಕೋಟಿಗೆ ಇಳಿದಿದೆ ಎಂದು ವರದಿಯಾಗಿದೆ. 32 ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಇರುವ ಸಂದರ್ಭದಲ್ಲಿ, ಅಭಿವೃದ್ಧಿ ವೆಚ್ಚವನ್ನು ಸ್ವಂತ ಸಂಪನ್ಮೂಲಗಳಿಂದಲೇ ನಿರ್ವಹಿಸಬೇಕು ಎಂಬ ನಿರೀಕ್ಷೆ ಎಷ್ಟು ವಾಸ್ತವಿಕ?
ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನು ಅವಲಂಬಿಸಿರುವವರು ಬಹುಪಾಲು ಗ್ರಾಮೀಣ, ಬಡ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು. ಹೀಗಿರುವಾಗ ಶಿಕ್ಷಣದ ಮೂಲಸೌಕರ್ಯವನ್ನು ಆಂತರಿಕ ಸಂಪನ್ಮೂಲಗಳ ಮೇಲೆ ಹೆಚ್ಚು ಅವಲಂಬಿಸುವುದು ಸಾಮಾಜಿಕ ನ್ಯಾಯದ ಆಶಯಕ್ಕೆ ಹೊಂದಿಕೆಯಾಗುತ್ತದೆಯೇ ಎಂಬ ಪ್ರಶ್ನೆ ಸಹಜ.
ಹೊಸ ವಿಶ್ವವಿದ್ಯಾನಿಲಯಗಳ ಸಮಸ್ಯೆ ಕೂಡ ಹೊಸದಲ್ಲ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ, ನೃಪತುಂಗ ವಿಶ್ವವಿದ್ಯಾನಿಲಯದಂತಹ ಸಂಸ್ಥೆಗಳಲ್ಲಿ ಹಣ, ಮೂಲಸೌಕರ್ಯ ಮತ್ತು ಬೋಧಕರ ಕೊರತೆ ಕುರಿತು ಹಿಂದೆಯೇ ವರದಿಯಾಗಿತ್ತು. ಈಗ ಖಾಲಿ ಹುದ್ದೆಗಳನ್ನು ಅತಿಥಿ ಉಪನ್ಯಾಸಕರು ಮತ್ತು ಗುತ್ತಿಗೆ ಸಿಬ್ಬಂದಿಯಿಂದ ತುಂಬುವ ಪ್ರವೃತ್ತಿ ಹೆಚ್ಚುತ್ತಿದೆ.
ಅತಿಥಿ ಉಪನ್ಯಾಸಕರ ಅಗತ್ಯವಿಲ್ಲ ಎನ್ನುವುದು ವಾದವಲ್ಲ. ಆದರೆ ಶಾಶ್ವತ ಬೋಧಕ ಹುದ್ದೆಗಳ ಕೊರತೆಯನ್ನು ಅತಿಥಿ ಉಪನ್ಯಾಸಕರಿಂದ ಶಾಶ್ವತವಾಗಿ ಮುಚ್ಚುವುದು ಪರಿಹಾರವಲ್ಲ. ಸಂಶೋಧನೆ, ವಿದ್ಯಾರ್ಥಿಗಳ ಮಾರ್ಗದರ್ಶನ, ವಿಭಾಗಗಳ ಬೆಳವಣಿಗೆ ಮತ್ತು ಶೈಕ್ಷಣಿಕ ಸಂಸ್ಕೃತಿಗೆ ಶಾಶ್ವತ ಬೋಧಕ ವರ್ಗವೇ ಬೆನ್ನೆಲುಬು.
2026ರ ರಾಜ್ಯ ಬಜೆಟ್‌ನಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ 1,000 ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಸರಕಾರ ಹೇಳಿದೆ. ಇದು ಸ್ವಾಗತಾರ್ಹ. ಆದರೆ 3,052 ಹುದ್ದೆಗಳು ಖಾಲಿ ಇರುವಾಗ 1,000 ಹುದ್ದೆಗಳ ಭರ್ತಿ ಸಾಕೇ? ನೇಮಕಾತಿ ಯಾವ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ? ನಿವೃತ್ತಿಯಿಂದ ಪ್ರತಿವರ್ಷ ಖಾಲಿಯಾಗುವ ಹುದ್ದೆಗಳಿಗೆ ಏನು ಯೋಜನೆ? ಸರಕಾರ ಸ್ಪಷ್ಟ ಉತ್ತರ ನೀಡಬೇಕು.
ಹೊಸ ವಿಶ್ವವಿದ್ಯಾನಿಲಯ ಆರಂಭಿಸುವ ಮುನ್ನ ಕನಿಷ್ಠ ಹತ್ತು ವರ್ಷಗಳ ಶೈಕ್ಷಣಿಕ-ಆರ್ಥಿಕ ಮಾಸ್ಟರ್‌ಪ್ಲಾನ್ ಕಡ್ಡಾಯವಾಗಬೇಕು. ವಿದ್ಯಾರ್ಥಿಗಳ ಸಂಖ್ಯೆ, ಅಗತ್ಯವಿರುವ ಬೋಧಕರು, ವಿಷಯಗಳ ಬೇಡಿಕೆ, ಪ್ರಯೋಗಾಲಯ, ಗ್ರಂಥಾಲಯ, ಸಂಶೋಧನೆ ಮತ್ತು ವಸತಿ ಸೌಲಭ್ಯ, ಎಲ್ಲವನ್ನೂ ಮೊದಲೇ ಯೋಜಿಸಬೇಕು. ವಿಶ್ವವಿದ್ಯಾನಿಲಯದ ಯಶಸ್ಸನ್ನು ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆಯಿಂದ ಮಾತ್ರ ಅಳೆಯಬಾರದು. ಉದ್ಯೋಗ, ಸಂಶೋಧನೆ, ಪೇಟೆಂಟ್, ವಿದ್ಯಾರ್ಥಿಗಳ ಕಲಿಕಾ ಫಲಿತಾಂಶ, ನಾವೀನ್ಯತೆ ಮತ್ತು ಸಾಮಾಜಿಕ ಪರಿಣಾಮವೂ ಮಾನದಂಡಗಳಾಗಬೇಕು.
ಕರ್ನಾಟಕವನ್ನು ನಿಜವಾದ ಜ್ಞಾನ ರಾಜ್ಯವನ್ನಾಗಿಸಬೇಕಾದರೆ ಬೆಂಗಳೂರಿನ ಐಟಿ ಸಾಧನೆ ಮಾತ್ರ ಸಾಕಾಗದು. ಬೀದರ್‌ನಿಂದ ಕೊಡಗಿನವರೆಗೆ, ಕಲಬುರಗಿಯಿಂದ ಚಾಮರಾಜನಗರದವರೆಗೆ, ಹಾವೇರಿಯಿಂದ ಮಂಗಳೂರಿನವರೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಸಾರ್ವಜನಿಕ ಉನ್ನತ ಶಿಕ್ಷಣ ದೊರೆಯಬೇಕು.
ಕಟ್ಟಡ ವಿಶ್ವವಿದ್ಯಾನಿಲಯವನ್ನು ನಿರ್ಮಿಸುವುದಿಲ್ಲ. ಬೋಧಕರು, ಸಂಶೋಧನೆ, ವಿದ್ಯಾರ್ಥಿಗಳು, ಪ್ರಶ್ನಿಸುವ ಮನಸ್ಸು, ಶೈಕ್ಷಣಿಕ ಸ್ವಾಯತ್ತತೆ ಮತ್ತು ಹೊಣೆಗಾರ ಆಡಳಿತ, ಇವೆಲ್ಲ ಸೇರಿ ವಿಶ್ವವಿದ್ಯಾ ನಿಲಯವನ್ನು ನಿರ್ಮಿಸುತ್ತವೆ. ಹೀಗಾಗಿ ಸರಕಾರದ ಮುಂದಿರುವ ಪ್ರಶ್ನೆ ಎಷ್ಟು ವಿಶ್ವವಿದ್ಯಾನಿಲಯಗಳು? ಎಂಬುದಲ್ಲ. ಎಷ್ಟು ಬಲಿಷ್ಠ ವಿಶ್ವವಿದ್ಯಾನಿಲಯಗಳು? ಎಂಬುದಾಗಿದೆ. ಕರ್ನಾಟಕಕ್ಕೆ ಮತ್ತೊಂದು ಘೋಷಣೆಗಿಂತ ಮುಂದಿನ 15-20 ವರ್ಷಗಳ ದೂರದೃಷ್ಟಿಯ ಸಾರ್ವಜನಿಕ ಉನ್ನತ ಶಿಕ್ಷಣ ನೀತಿ ಈಗ ಅಗತ್ಯ.






