ಮರೆವಿನ ನಡುವೆ ಮರೆಯಾಗುತ್ತಿರುವ ಕುಟುಂಬದ ನೋವು

‘‘ತಿಂಗಳಿಗೆ ಇಷ್ಟು ಹಣ ಕೊಟ್ಟು ಹೋಂ ನರ್ಸ್ ಇಟ್ಟಿದ್ದೇವೆ. ಆದರೂ ನೆಮ್ಮದಿಯಿಲ್ಲ ಡಾಕ್ಟರೇ!’’
ನನ್ನ ವೃತ್ತಿಜೀವನದಲ್ಲಿ ಕುಟುಂಬದವರಿಂದ ಕೇಳಿರುವ ಮಾತಿದು. ಕೆಲವು ಮನೆಗಳಲ್ಲಿ ಅದರ ಕಾರಣವನ್ನೂ ಕಣ್ಣಾರೆ ಕಂಡಿದ್ದೇನೆ. ಆರೈಕೆ ಬೇಕಾದ ಹಿರಿಯರು ಒಂದು ಕಡೆ ಅಸಹಾಯಕರಾಗಿ ಕುಳಿತಿದ್ದರೆ, ಅವರನ್ನು ನೋಡಿಕೊಳ್ಳಬೇಕಾದವರು ಇನ್ನೊಂದು ಕಡೆ ಮೊಬೈಲ್ನಲ್ಲಿ ಮುಳುಗಿರುತ್ತಾರೆ. ಹಿರಿಯರು ಏನು ಕೇಳುತ್ತಿದ್ದಾರೆ, ಅವರಿಗೆ ಏನು ಬೇಕಾಗಿದೆ ಎಂಬುದರ ಕಡೆ ಗಮನವೇ ಇರುವುದಿಲ್ಲ.
ಕೆಲವರಿಗೆ ಆರೈಕೆಯ ಮೂಲಭೂತ ತಿಳಿವಳಿಕೆಯೂ ಇರುವುದಿಲ್ಲ. ಹೇಗೆ ಮಾತನಾಡಬೇಕು, ಊಟಕ್ಕೆ ಹೇಗೆ ನೆರವಾಗಬೇಕು, ಸ್ವಚ್ಛತೆಯನ್ನು ಹೇಗೆ ಕಾಪಾಡಬೇಕು ಎಂಬುದೂ ತಿಳಿದಿರುವುದಿಲ್ಲ. ಕೆಲವೊಮ್ಮೆ ಗದರಿಸುವುದು, ಒರಟಾಗಿ ನಡೆಸಿಕೊಳ್ಳುವುದು, ಅಸಹಾಯಕ ವ್ಯಕ್ತಿಯನ್ನು ಅವಮಾನಿಸುವುದನ್ನೂ ಕಂಡಿದ್ದೇನೆ.
ಎಲ್ಲ ಆರೈಕೆದಾರರೂ ಹೀಗಿದ್ದಾರೆ ಎನ್ನುವುದು ನನ್ನ ಮಾತಲ್ಲ. ಅಪಾರ ತಾಳ್ಮೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡುವವರಿ ದ್ದಾರೆ. ಆದರೆ ಉತ್ತಮ ಆರೈಕೆ ಸಿಗುವುದು ಅದೃಷ್ಟದ ವಿಷಯವಾಗಬಾರದು. ಅದಕ್ಕೆ ತರಬೇತಿ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ವ್ಯವಸ್ಥೆ ಬೇಕು.
ಬದುಕಿಗೆ ವರ್ಷಗಳನ್ನು ಸೇರಿಸಿದ್ದೇವೆ; ಆ ವರ್ಷಗಳಿಗೆ ಬದುಕನ್ನು?
ಈ ಲೇಖನ ಬರೆಯಲು ನನಗೆ ಸ್ಫೂರ್ತಿ ಸ್ವಾಮಿನಾಥನ್ ಅಂಕಲೇಶ್ವರ ಅಯ್ಯರ್ ತಮ್ಮ ‘ಸ್ವಾಮಿನಾಮಿಕ್ಸ್’ ಅಂಕಣದ ‘ವಯಸ್ಸಾಗುತ್ತಿರುವ ಭಾರತಕ್ಕೆ ಡಿಮೆನ್ಷಿಯಾ ಯೋಜನೆ ಏಕೆ ಬೇಕು?’ ಎಂಬ ಲೇಖನ. ಇದು ಅಕ್ಟೋಬರ್ 24ರಂದು times of india ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈ ಲೇಖನದಲ್ಲಿ ಅವರು ಬಹಳ ಮುಖ್ಯವಾದ ಪ್ರಶ್ನೆಯನ್ನು ಎತ್ತಿದ್ದಾರೆ. ವೈದ್ಯಕೀಯ ವಿಜ್ಞಾನ ಬದುಕಿಗೆ ವರ್ಷಗಳನ್ನು ಸೇರಿಸಿದೆ. ಆದರೆ ಆ ಹೆಚ್ಚುವರಿ ವರ್ಷಗಳಿಗೆ ಅರ್ಥಪೂರ್ಣ ಬದುಕನ್ನು ಸೇರಿಸಿದ್ದೇವೆಯೇ ಎಂಬುದು ಅವರ ಕಳಕಳಿ. ದೀರ್ಘಾಯುಷ್ಯದ ಯಶಸ್ಸಿನ ಜೊತೆಗೇ, ಹೆಚ್ಚುತ್ತಿರುವ ಆರೈಕೆಯ ಅಗತ್ಯವನ್ನೂ ಎದುರಿಸಬೇಕು ಎಂಬುದು ಲೇಖನದ ಕೇಂದ್ರ ಸಂದೇಶ.
ಅಯ್ಯರ್ ತಮ್ಮ 84ನೇ ವಯಸ್ಸಿನಲ್ಲಿ ವ್ಯಕ್ತಪಡಿಸುವ ಆತಂಕ ಕೇವಲ ಸಾವಿನ ಕುರಿತದ್ದಲ್ಲ. ನೆನಪು, ಸ್ವಾತಂತ್ರ್ಯ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡು ಬದುಕಬೇಕಾಗುವ ಸಾಧ್ಯತೆಯ ಕುರಿತದ್ದು. ಇದು ಒಬ್ಬ ವ್ಯಕ್ತಿಯ ಖಾಸಗಿ ಭಯವಷ್ಟೇ ಅಲ್ಲ; ಸಮಾಜ ಸಿದ್ಧವಾಗಬೇಕಾದ ಪ್ರಶ್ನೆ ಎಂದು ಅವರು ಬರೆಯುತ್ತಾರೆ.
ಈ ಮಾತು ಓದಿದಾಗ ನನಗೆ ನೆನಪಾದದ್ದು ನಮ್ಮ ಸುತ್ತಲಿನ ಕುಟುಂಬಗಳು. ತಮ್ಮವರನ್ನು ಪ್ರೀತಿಯಿಂದ ನೋಡಿಕೊಳ್ಳಲು ಸಿದ್ಧರಿದ್ದರೂ, ಸರಿಯಾದ ದಾರಿ ಕಾಣದೆ ಪರದಾಡುತ್ತಿರುವ ಕುಟುಂಬಗಳು.
ವೈದ್ಯನಾಗಿ ಕಂಡದ್ದು, ಮಗನಾಗಿ ಅನುಭವಿಸಿದ್ದು
ಡಿಮೆನ್ಷಿಯಾ ಆರೈಕೆ ನನಗೆ ಕೇವಲ ವೃತ್ತಿಯ ವಿಷಯವಲ್ಲ. ನನ್ನ ದಿವಂಗತ ತಂದೆಯವರಲ್ಲಿಯೂ ಅದರ ಲಕ್ಷಣಗಳನ್ನು ಕಂಡಿದ್ದೇನೆ. ಮನೆಯ ಹಿರಿಯರಲ್ಲಿ ಬದಲಾವಣೆಗಳು ಕಾಣಿಸಿಕೊಂಡಾಗ ಉಂಟಾಗುವ ಆತಂಕ, ಗೊಂದಲ ಮತ್ತು ಅಸಹಾಯಕತೆಯನ್ನು ಮಗನಾಗಿಯೂ ಅನುಭವಿಸಿದ್ದೇನೆ.
ನಮ್ಮ ಸಮುದಾಯ ಶಿಬಿರಗಳಲ್ಲಿ ಭಾಗವಹಿಸುವವರಲ್ಲಿ ಸುಮಾರು ಹತ್ತು ಪ್ರತಿಶತದಷ್ಟು ಜನರಲ್ಲಿ ಡಿಮೆನ್ಷಿಯಾವನ್ನು ಅನುಮಾನಿಸುವ ಲಕ್ಷಣಗಳು ಕಾಣಿಸುತ್ತವೆ ಎಂಬುದು ನನ್ನ ಅನೌಪಚಾರಿಕ ಗಮನಿಕೆ. ಅಯ್ಯರ್ ತಮ್ಮ ಲೇಖನದಲ್ಲಿ ಉಲ್ಲೇಖಿಸುವ ಅಧ್ಯಯನವು, ಭಾರತದಲ್ಲಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಲ್ಲಿ ಡಿಮೆನ್ಷಿಯಾ ಪ್ರಮಾಣವನ್ನು ಶೇ.7.4 ಎಂದು ಅಂದಾಜಿಸಿದೆ. ಈ ಅಂಕಿಅಂಶದ ಆಧಾರದಲ್ಲಿ 2036ರ ವೇಳೆಗೆ ಪ್ರಕರಣಗಳ ಸಂಖ್ಯೆ ಸುಮಾರು 1.69 ಕೋಟಿಗೆ ತಲುಪಬಹುದೆಂಬ ಅಂದಾಜನ್ನೂ ಅವರು ಉಲ್ಲೇಖಿಸಿದ್ದಾರೆ. ಇವು ಅಂದಾಜುಗಳಾದರೂ, ಆರೈಕೆಗೆ ನಾವು ಮಾಡಿಕೊಳ್ಳಬೇಕಾದ ಸಿದ್ಧತೆಯ ಪ್ರಮಾಣವನ್ನು ಸೂಚಿಸುತ್ತವೆ.
ಕೂಡು ಕುಟುಂಬವನ್ನು ಹೊಗಳಿದರೆ ಸಾಕೇ?
ಭಾರತದಲ್ಲಿ ಕೂಡು ಕುಟುಂಬಗಳು ನಮ್ಮ ಸಾಮಾಜಿಕ ಭದ್ರತೆಯ ವ್ಯವಸ್ಥೆ ಎಂದು ಹೆಮ್ಮೆಪಡುತ್ತೇವೆ. ಆದರೆ ವರ್ಷಗಳ ಕಾಲ ನಿರಂತರ ಆರೈಕೆಯ ಜವಾಬ್ದಾರಿ ವಹಿಸುವ ಕುಟುಂಬಕ್ಕೆ ನಿಜವಾಗಿ ಯಾವ ನೆರವು ಸಿಗುತ್ತದೆ ಎಂಬ ಪ್ರಶ್ನೆಯನ್ನು ಅಯ್ಯರ್ ಎತ್ತುತ್ತಾರೆ. ಅವರ ಲೇಖನವು ಪತ್ನಿಯರು, ಹೆಣ್ಣುಮಕ್ಕಳು ಮತ್ತು ಸೊಸೆಯರು ಹೊರುವ ಆರೈಕೆಯ ಭಾರವನ್ನು ವಿಶೇಷವಾಗಿ ಗುರುತಿಸುತ್ತದೆ. ಉದ್ಯೋಗಕ್ಕಾಗಿ ವಲಸೆ, ಸಣ್ಣ ಕುಟುಂಬಗಳು ಮತ್ತು ದೂರದ ಊರುಗಳಲ್ಲಿ ವಾಸಿಸುವ ಮಕ್ಕಳು-ಇವೆಲ್ಲದರ ನಡುವೆ ಕುಟುಂಬವೊಂದೇ ಎಲ್ಲವನ್ನೂ ನಿಭಾಯಿಸುತ್ತದೆ ಎಂಬ ನಿರೀಕ್ಷೆಯ ಮಿತಿಯನ್ನೂ ತೋರಿಸುತ್ತದೆ.
ನನ್ನ ಅನುಭವದಲ್ಲಿಯೂ ಕುಟುಂಬದಲ್ಲಿ ಪ್ರೀತಿಯ ಕೊರತೆಯಿರುವುದಿಲ್ಲ. ಆದರೆ ಪ್ರೀತಿ ಮಾತ್ರದಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ.
ಸ್ನಾನ, ಉಡುಪು ಬದಲಿಸುವುದು, ಊಟ, ಶೌಚ ಮತ್ತು ಸ್ವಚ್ಛತೆ-ಪ್ರತಿಯೊಂದಕ್ಕೂ ನೆರವಾಗಬೇಕಾದಾಗ ಆರೈಕೆ ದಿನದ ಒಂದು ಕೆಲಸವಾಗಿ ಉಳಿಯುವುದಿಲ್ಲ. ಇಡೀ ದಿನದ ಬದುಕೇ ಅದರ ಸುತ್ತ ರೂಪುಗೊಳ್ಳುತ್ತದೆ.
ಆರೈಕೆ ಮಾಡುವವರು ದಣಿದಿದ್ದಾರೆ ಎಂದರೆ ಅವರ ಪ್ರೀತಿ ಕಡಿಮೆಯಾಗಿದೆ ಎಂದಲ್ಲ. ಅವರಿಗೆ ನೆರವು ಬೇಕಾಗಿದೆ ಎಂದರ್ಥ.
ಕಣ್ಣೆದುರೇ ಬದಲಾಗುತ್ತಿರುವ ಸಂಗಾತಿ
ದಶಕಗಳ ಕಾಲ ಬದುಕನ್ನು ಹಂಚಿಕೊಂಡ ಸಂಗಾತಿಯಲ್ಲಿನ ಬದಲಾವಣೆಗಳನ್ನು ಪ್ರತಿದಿನ ನೋಡುವುದು ಸುಲಭವಲ್ಲ. ಹಿಂದೆ ಮನೆಯ ಜವಾಬ್ದಾರಿಗಳನ್ನು ಹೊತ್ತಿದ್ದ ವ್ಯಕ್ತಿ ಈಗ ಸಣ್ಣಪುಟ್ಟ ಕೆಲಸಗಳಿಗೂ ನೆರವನ್ನು ಅವಲಂಬಿಸಿದ್ದಾರೆ. ಈ ಬದಲಾವಣೆಗಳನ್ನು ನೋಡುವ ನೋವಿನ ಜೊತೆಗೆ ದಿನನಿತ್ಯದ ಕೆಲಸಗಳ ಹೊರೆಯೂ ಇದೆ.
ಹೊರಗೆ ಹೋಗಬೇಕೆಂದರೆ ‘‘ಇಲ್ಲಿ ಯಾರು ನೋಡಿಕೊಳ್ಳುತ್ತಾರೆ?’’ ಎಂಬ ಪ್ರಶ್ನೆ. ಸಂಬಂಧಿಕರ ಸಮಾರಂಭಕ್ಕೆ ಜೊತೆಗೆ ಕರೆದುಕೊಂಡು ಹೋಗುವ ಬಗ್ಗೆ ಆತಂಕ; ಮನೆಯಲ್ಲಿ ಬಿಟ್ಟುಹೋಗಲು ವಿಶ್ವಾಸಾರ್ಹ ನೆರವಿಲ್ಲ. ಸ್ವಂತ ವೈದ್ಯಕೀಯ ತಪಾಸಣೆ, ವಿಶ್ರಾಂತಿ, ಸ್ನೇಹಿತರ ಭೇಟಿ ಎಲ್ಲವೂ ಮುಂದೂಡಲ್ಪಡುತ್ತವೆ.
ಆದ್ದರಿಂದ ಕುಟುಂಬದವರ ಬಳಿ ‘‘ರೋಗಿ ಹೇಗಿದ್ದಾರೆ?’’ ಎಂದು ಕೇಳುವುದರ ಜೊತೆಗೆ, ‘‘ನೀವು ಹೇಗಿದ್ದೀರಿ? ನಿಮಗೆ ವಿಶ್ರಾಂತಿ ಸಿಗುತ್ತಿದೆಯೇ?’’ ಎಂದೂ ಕೇಳಬೇಕು.
ಉಚಿತ ಸಲಹೆಗಿಂತ ಒಂದಷ್ಟು ಸಮಯ ಕೊಡಿ
‘‘ಇನ್ನೂ ತಾಳ್ಮೆಯಿಂದ ನೋಡಿಕೊಳ್ಳಬೇಕು’’, ‘‘ಬೇರೆ ವೈದ್ಯರಿಗೆ ತೋರಿಸಬೇಕಿತ್ತು’’-ಇಂತಹ ಸಲಹೆಗಳು ಸಾಕಷ್ಟು ಸಿಗುತ್ತವೆ. ಆದರೆ ‘‘ಈ ರವಿವಾರ ನಾನು ಎರಡು ಗಂಟೆ ಜೊತೆಗಿರುತ್ತೇನೆ; ನೀನು ಹೊರಗೆ ಹೋಗಿ ಬಾ’’ ಎನ್ನುವವರು ಎಷ್ಟು ಮಂದಿ?
ಸಂಬಂಧಿಕರು ಮತ್ತು ಸ್ನೇಹಿತರ ನೆರವು ನಿರ್ದಿಷ್ಟವಾಗಿರಲಿ. ಆಸ್ಪತ್ರೆಗೆ ಕರೆದೊಯ್ಯುವುದು, ಮನೆಯ ಅಗತ್ಯ ಕೆಲಸವೊಂದನ್ನು ಮಾಡುವುದು, ವಾರದಲ್ಲಿ ಸ್ವಲ್ಪ ಸಮಯ ಜವಾಬ್ದಾರಿ ಹಂಚಿಕೊಳ್ಳುವುದು-ಇವು ಕೇವಲ ಸಣ್ಣ ಸಹಾಯಗಳಲ್ಲ. ಕುಟುಂಬಕ್ಕೆ ಉಸಿರಾಡಲು ಅವಕಾಶ ನೀಡುವ ಬೆಂಬಲ.
‘ಹೋಂ ನರ್ಸ್’ ಎಂಬ ಹೆಸರಷ್ಟೇ ಸಾಕೇ?
‘ಹೋಂ ನರ್ಸ್’ ಎಂಬ ಪದವನ್ನು ಬಹಳ ಸಡಿಲವಾಗಿ ಬಳಸುತ್ತಿರುವುದನ್ನು ನೋಡುತ್ತಿದ್ದೇನೆ. ಕುಟುಂಬವು ಆ ಹೆಸರು ಕೇಳಿ ನರ್ಸಿಂಗ್ ತರಬೇತಿ ಪಡೆದ ವ್ಯಕ್ತಿ ಬರುತ್ತಾರೆ ಎಂದು ಭಾವಿಸುತ್ತದೆ. ಆದರೆ ಬರುವವರು ಆರೈಕೆ ಸಹಾಯಕರಾಗಿರಬಹುದು; ಕೆಲವರಿಗೆ ಸಂಬಂಧಿತ ತರಬೇತಿಯೇ ಇಲ್ಲದಿರಬಹುದು.
ಕೆಲವು ಸಂದರ್ಭಗಳಲ್ಲಿ ಯಾವುದೇ ಹಿನ್ನೆಲೆ ಪರಿಶೀಲನೆ, ಕೌಶಲ ಪರೀಕ್ಷೆ ಅಥವಾ ತರಬೇತಿಯಿಲ್ಲದೆ, ಸಿಕ್ಕವರನ್ನು ಕರೆತಂದು ಹಿರಿಯರ ಪಕ್ಕದಲ್ಲಿ ಕೂರಿಸಿದಂತಿರುತ್ತದೆ. ಇದು ಕೆಲಸಕ್ಕೆ ಬರುವ ವ್ಯಕ್ತಿಯ ಸಾಮಾಜಿಕ ಹಿನ್ನೆಲೆಯ ಪ್ರಶ್ನೆಯಲ್ಲ. ಅವರಿಗೆ ವಹಿಸಿರುವ ಕೆಲಸಕ್ಕೆ ಅಗತ್ಯವಾದ ಕೌಶಲ ಕಲಿಸಲಾಗಿದೆಯೇ ಎಂಬ ಪ್ರಶ್ನೆ.
ಅವರನ್ನು ಕಳುಹಿಸುವ ಸಂಸ್ಥೆ ಏನು ತರಬೇತಿ ನೀಡಿದೆ? ಮೇಲ್ವಿಚಾರಣೆ ಯಾರು ಮಾಡುತ್ತಾರೆ? ಆರೈಕೆ ಸರಿಯಾಗಿಲ್ಲದಿದ್ದರೆ ಯಾರಿಗೆ ತಿಳಿಸಬೇಕು? ಕುಟುಂಬಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕು.
ಸುರಕ್ಷತೆಯ ಹೆಸರಿನಲ್ಲಿ ಸ್ವಾತಂತ್ರ್ಯ ಕಸಿಯಬಾರದು
ಅಯ್ಯರ್ ಅವರ ಲೇಖನದ ಅತ್ಯಂತ ಚಿಂತನಾರ್ಹ ಅಂಶವೆಂದರೆ ಹಣ, ಸುರಕ್ಷತೆ ಮತ್ತು ಸ್ವಾತಂತ್ರ್ಯದ ನಡುವಿನ ವ್ಯತ್ಯಾಸ. ಶ್ರೀಮಂತರು ಉತ್ತಮ ಕಟ್ಟಡ, ನರ್ಸಿಂಗ್ ಸೇವೆ ಮತ್ತು ಇಪ್ಪತ್ತನಾಲ್ಕು ಗಂಟೆಯ ಮೇಲ್ವಿಚಾರಣೆಯನ್ನು ಪಡೆಯಬಹುದು. ಆದರೆ ಅದರಿಂದಲೇ ವ್ಯಕ್ತಿಯ ಗೌರವ ಮತ್ತು ಸ್ವಾತಂತ್ರ್ಯ ಖಚಿತವಾಗುವುದಿಲ್ಲ ಎಂದು ಅವರು ಎಚ್ಚರಿಸುತ್ತಾರೆ. ಊಟ, ನಿದ್ರೆ, ಸ್ನಾನ, ಭೇಟಿಗಳು-ಎಲ್ಲವನ್ನೂ ಇತರರೇ ನಿರ್ಧರಿಸುವಾಗ ಸುರಕ್ಷಿತ ಜೀವನವೂ ಬಂಧನದ ಅನುಭವವಾಗಬಹುದು ಎಂಬುದು ಅವರ ಪ್ರಶ್ನೆ.
ಈ ಪ್ರಶ್ನೆಯನ್ನು ನಾವು ಪ್ರತಿಯೊಂದು ಆರೈಕೆ ವ್ಯವಸ್ಥೆಯ ಮುಂದಿಡಬೇಕು. ವ್ಯಕ್ತಿಯನ್ನು ಸುರಕ್ಷಿತವಾಗಿಡುವುದರ ಜೊತೆಗೆ, ಅವರ ಇಷ್ಟಾನಿಷ್ಟಗಳಿಗೆ ಎಷ್ಟು ಅವಕಾಶ ನೀಡುತ್ತಿ ದ್ದೇವೆ? ಅವರ ಕುರಿತು ಮಾತನಾಡುವಾಗ ಅವರೊಂದಿಗೂ ಮಾತನಾಡುತ್ತಿದ್ದೇವೆಯೇ?
ಮಾಟಮಂತ್ರಕ್ಕೆ ಹಣ; ಸರಿಯಾದ ನೆರವಿಗೆ ಹುಡುಕಾಟ
ನನ್ನ ಗಮನಕ್ಕೆ ಬಂದ ಕೆಲವು ಕುಟುಂಬಗಳು ಮಾಟಮಂತ್ರ, ವಾಮಾಚಾರ ಅಥವಾ ‘‘ಯಾರೋ ಏನೋ ಮಾಡಿಸಿದ್ದಾರೆ’’ ಎಂಬ ಅನುಮಾನದಲ್ಲಿ ಹಣ ಖರ್ಚು ಮಾಡಿವೆ. ಮನೆಯ ಹಿರಿಯರ ಮಾತು ಮತ್ತು ವರ್ತನೆಯ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲಾಗದೆ ಆತಂಕಕ್ಕೆ ಒಳಗಾಗುತ್ತವೆ.
ಅವರನ್ನು ಹಾಸ್ಯ ಮಾಡುವುದರಿಂದ ಪ್ರಯೋಜನವಿಲ್ಲ. ಆದರೆ ಆ ಭಯವನ್ನು ಬಳಸಿಕೊಂಡು ಹಣ ಸುಲಿಯುವುದನ್ನು ಪ್ರಶ್ನಿಸಲೇಬೇಕು. ವೈಯಕ್ತಿಕ ನಂಬಿಕೆ ಸಮಾಧಾನ ನೀಡಬಹುದು; ಕುಟುಂಬದ ಅಸಹಾಯಕತೆ ಹಣ ಮಾಡುವ ಅವಕಾಶವಾಗಬಾರದು.
ವೈದ್ಯಕೀಯ ವೃತ್ತಿಯವರೂ ಆತ್ಮಪರಿಶೀಲನೆ ಮಾಡಿ ಕೊಳ್ಳಬೇಕು. ಕುಟುಂಬದ ಪ್ರಶ್ನೆಗಳನ್ನು ತಾಳ್ಮೆಯಿಂದ ಕೇಳುತ್ತಿದ್ದೇವೆಯೇ? ಅವರ ಭಾಷೆಯಲ್ಲಿ ವಿವರಿಸುತ್ತಿದ್ದೇವೆಯೇ? ಮುಂದಿನ ಹೆಜ್ಜೆಯ ಬಗ್ಗೆ ದಾರಿ ತೋರಿಸುತ್ತಿದ್ದೇವೆಯೇ?
ಆರೈಕೆಯನ್ನೂ ಕಲಿಸಬೇಕು
ಈ ಹಿನ್ನೆಲೆಯಲ್ಲಿಯೇ ಡಿಮೆನ್ಷಿಯಾ ನರ್ಸಿಂಗ್ ಮತ್ತು ಆರೈಕೆದಾರರ ತರಬೇತಿ ಕೋರ್ಸ್ಗಳನ್ನು ಆರಂಭಿಸುವ ಕುರಿತು ಇತ್ತೀಚೆಗೆ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಕೆಲವರಿಗೆ ಪತ್ರ ಬರೆದಿದ್ದೇನೆ.
ಅರ್ಹ ನರ್ಸ್ಗಳಿಗೆ ವಿಶೇಷ ತರಬೇತಿ, ಗೃಹ ಆರೈಕೆ ಸಹಾಯಕರಿಗೆ ಪ್ರಾಯೋಗಿಕ ಕೌಶಲ ತರಬೇತಿ ಮತ್ತು ಕುಟುಂಬದ ಸದಸ್ಯರಿಗೆ ಸರಳ ಮಾರ್ಗದರ್ಶನ-ಈ ಮೂರು ಹಂತಗಳಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಸಲಹೆ. ಈ ನಿಟ್ಟಿನಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಎಂಬ ಸಂಸ್ಥೆ ಪ್ರಯತ್ನಿಸಿದಾಗ ಇಬ್ಬರೇ ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡು ಆ ತರಬೇತಿಯೇ ನಡೆಯಲಿಲ್ಲ.
ಈ ತರಬೇತಿ ನಡೆದಿದ್ದರೆ ಹಿರಿಯರನ್ನು ಗೌರವದಿಂದ ಮಾತನಾಡಿಸುವುದು, ದಿನನಿತ್ಯದ ಆರೈಕೆಗೆ ನೆರವಾಗುವುದು, ತಮ್ಮ ಕೆಲಸದ ಮಿತಿಯನ್ನು ಅರಿತು ಸೂಕ್ತ ನೆರವು ಕೇಳುವುದು ಮುಂತಾದ ಕೌಶಲಗಳನ್ನು ಹೇಳಿಕೊಡುವುದು ಅವರ ಆಶಯವಾಗಿತ್ತು.
ಬೇರೆ ಏನು ಪ್ರಯತ್ನಗಳು ಮಾಡಬಹುದು?
ಕನ್ನಡದಲ್ಲಿ ಕೈಪಿಡಿಗಳು, ಚಿಕ್ಕ ವೀಡಿಯೊಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ರೂಪಿಸಬಹುದು. ಕುಟುಂಬಗಳಿಗೆ ಬೆಂಬಲ ಗುಂಪುಗಳು, ಸಮಾಲೋಚನೆ ಮತ್ತು ತಾತ್ಕಾಲಿಕ ಪರ್ಯಾಯ ಆರೈಕೆಯ ಅವಕಾಶಗಳನ್ನೂ ಬೆಳೆಸಬೇಕು.
ಕರ್ನಾಟಕಕ್ಕೆ ಬೇಕಿರುವ ಕಾರ್ಯಯೋಜನೆ
ಅಯ್ಯರ್ ತಮ್ಮ ಲೇಖನದಲ್ಲಿ ಕರ್ನಾಟಕದ 32 ಜಿಲ್ಲಾಮಟ್ಟದ ಬ್ರೇನ್ ಹೆಲ್ತ್ ಕ್ಲಿನಿಕ್ಗಳನ್ನು ಉಲ್ಲೇಖಿಸುತ್ತಾರೆ. ಜೊತೆಗೆ, ರಾಷ್ಟ್ರೀಯ ಡಿಮೆನ್ಷಿಯಾ ಯೋಜನೆ, ನಿರ್ದಿಷ್ಟ ಅನುದಾನ ಮತ್ತು ಅಳೆಯಬಹುದಾದ ಗುರಿಗಳ ಅಗತ್ಯವನ್ನೂ ಒತ್ತಿಹೇಳುತ್ತಾರೆ. ಸೌರಶಕ್ತಿಯಿಂದ ಸೆಮಿಕಂಡಕ್ಟರ್ವರೆಗೆ ರಾಷ್ಟ್ರೀಯ ಅಭಿಯಾನಗಳಿರುವಾಗ ಡಿಮೆನ್ಷಿಯಾಗೆ ಏಕೆ ಇರಬಾರದು ಎಂಬ ಅವರ ಪ್ರಶ್ನೆ ಪ್ರಸ್ತುತವಾಗಿದೆ.
ಅವರು ಮರೆತರೂ ನಾವು ಮರೆಯದಿರೋಣ
ಡಿಮೆನ್ಷಿಯಾ ಇರುವ ವ್ಯಕ್ತಿಗೆ ಬೇಕಿರುವುದು ಕೇವಲ ಕಾವಲು ಅಲ್ಲ. ಅವರ ವ್ಯಕ್ತಿತ್ವ, ಇಷ್ಟಾನಿಷ್ಟ ಮತ್ತು ಗೌರವವನ್ನು ಕಾಪಾಡುವ ಆರೈಕೆ.
ಅವರ ಜೊತೆ ಹಗಲಿರುಳು ನಿಂತಿರುವ ವ್ಯಕ್ತಿಗೂ ಆರೋಗ್ಯ, ವಿಶ್ರಾಂತಿ ಮತ್ತು ಸ್ವಂತ ಬದುಕು ಬೇಕು. ಕುಟುಂಬಗಳಿಗೆ ‘‘ಚೆನ್ನಾಗಿ ನೋಡಿಕೊಳ್ಳಿ’’ ಎಂದು ಹೇಳುವುದರ ಜೊತೆಗೆ, ‘‘ನಿಮಗೆ ನಾವು ಹೇಗೆ ನೆರವಾಗಬಹುದು?’’ ಎಂದೂ ಕೇಳುವ ಸಮಾಜವನ್ನು ನಿರ್ಮಿಸೋಣ.
ಅವರು ಮರೆತರೂ ನಾವು ಮರೆಯಬಾರದದ್ದು-ಮಾನವೀಯತೆ.






