ಹಿಂದಿನ ಕಾಲ್ತುಳಿತದ ಘಟನೆಗಳು ನಮಗೆ ಪಾಠವಾಗಲಿಲ್ಲ

ತಪ್ಪುಗಳು ಅಜಾಗ್ರತೆಯಿಂದಲೇ ಸಂಭವಿಸುತ್ತವೆ. ಅಭಿಮಾನಿಗಳು ಮತ್ತು ಭಕ್ತರು ತೋರುವ ವಿವೇಚನಾರಹಿತ ನಡೆಗಳಿಂದ ಇಂಥ ಘಟನೆಗಳು ನಡೆಯುತ್ತವೆ. ಅಲ್ಲದೆ ಕಿಡಿಗೇಡಿಗಳು ಗುಂಪುಗಳ ಮಧ್ಯೆ ಸೇರಿಕೊಂಡು ಅನಾಹುತಗಳಿಗೆ ಮುನ್ನುಡಿ ಬರೆಯುತ್ತಾರೆ. ತೆಲುಗಿನ ಅಲ್ಲು ಅರ್ಜುನ್ ಅವರ ‘ಪುಷ್ಪ-2’ ಸಿನೆಮಾ ಬಿಡುಗಡೆಯ ದಿನ ಚಿತ್ರಮಂದಿರಕ್ಕೆ ಭೇಟಿಕೊಟ್ಟಿದ್ದ ನಾಯಕ ನಟನನ್ನು ನೋಡಲು ಅಭಿಮಾನಿಗಳ ದಂಡೇ ಸೇರಿತ್ತು. ಈ ಗುಂಪಿನೊಳಗೆ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಈ ಕಾರಣಕ್ಕೆ ನಟ ಅಲ್ಲು ಅರ್ಜುನ್ ಪೊಲೀಸ್ ಠಾಣೆ, ಕೋರ್ಟ್ ಮತ್ತು ಜೈಲುಗಳಿಗೆ ಅಲೆದಾಡಬೇಕಾಯಿತು.
ಉತ್ತರ ಪ್ರದೇಶದ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಕೂಡ ಭಕ್ತರ ಅವಸರದಿಂದಲೇ ನಡೆದದ್ದು. ಭಕ್ತರಿಗೆ ತಾಳ್ಮೆ, ಸಹನೆ ಇಲ್ಲವಾದರೆ ನೂರಾರು ಜನ ಸಾವಿನ ಮನೆ ಸೇರಬೇಕಾಗುತ್ತದೆ. ಕುಂಭ ಮೇಳದಲ್ಲಿ ಇಂತಹ ಘಟನೆ ನಡೆದಾಗ ಮೊದಲು ರಾಜಕೀಯ ಪಕ್ಷಗಳು ಕೆಸರೆರಚಾಡಿಕೊಂಡವು. ಬಿಜೆಪಿ ಆದಿತ್ಯನಾಥ್‌ರ ಆಡಳಿತವನ್ನು ಸಮರ್ಥಿಸಿಕೊಂಡಿತು. ಸರಕಾರ ಸತ್ತವರಿಗೆ ಪರಿಹಾರ ನೀಡಿ ಕೈ ತೊಳೆದುಕೊಂಡಿತು. ಆದರೆ ಅಮಾಯಕರ ಸಾವು ಅವರ ಮನೆಯಲ್ಲಿ ಎಂದಿಗೂ ಮುಗಿಯದ ದುಃಖವಾಗಿ ಉಳಿದುಕೊಂಡಿದೆ. ತಮ್ಮ ಮಕ್ಕಳು, ಗಂಡಂದಿರು, ಹೆಂಡತಿಯನ್ನು ಕಳೆದುಕೊಂಡ ಸಂಬಂಧಿಕರು ನಿತ್ಯ ನೋವಿಗೆ ಒಳಗಾಗುತ್ತಾರೆ. ಆದರೆ ರಾಜಕೀಯ ಪಕ್ಷಗಳಿಗೆ ಇದೆಲ್ಲ ಸಾಮಾನ್ಯ ಘಟನೆಯಾಗಿ ನಂತರ ಮರೆತು ಹೋಗುತ್ತದೆ.
ಕೆಲವು ಸಮಯದ ಹಿಂದೆ ತಿರುಪತಿಯಲ್ಲಿ ವೈಕುಂಟ ಏಕಾದಶಿಯಲ್ಲಿ ದರ್ಶನ ಪಡೆಯಲು ಹೋದವರು ಕೂಡ ಹತ್ತಾರು ಮಂದಿ ಶ್ಮಶಾನ ಸೇರಿದ್ದು ಸುದ್ದಿಯಾಗಿತ್ತು. ಇದಕ್ಕೂ ಜನರ ನೂಕು ನುಗ್ಗಲು ಕಾರಣವೇ ಹೊರತು ಬೇರೆಯಲ್ಲ. ಗೇಟುಗಳನ್ನು ತೆಗೆದಿರಲಿಲ್ಲ. ಬ್ಯಾರಿಕೇಡ್ ಹಾಕಲಾಗಿತ್ತು. ಒಮ್ಮೆಗೆ ಗೇಟು ತೆಗೆದದ್ದರಿಂದ ಜನ ನುಗ್ಗಿದರು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದೂರು ಬಂತು. ಆದರೆ ಭಕ್ತರು ಒಂದಿಷ್ಟು ಸಹನೆಯಿಂದ ವರ್ತಿಸಿದ್ದರೆ ಇಂತಹ ಅನಾಹುತವನ್ನು ತಡೆಯಬಹುದಿತ್ತು.
ಪ್ರತೀ ಸಲ ಇಂತಹ ಕಾಲ್ತುಳಿತ ಘಟನೆಗಳಾದಾಗ ರಾಜಕೀಯ ಪಕ್ಷಗಳು ಸಾವಿನ ಮನೆಯಲ್ಲೂ ತಮ್ಮ ರಾಜಕೀಯದ ತೆವಲನ್ನು ತೀರಿಸಿಕೊಳ್ಳುತ್ತವೆ. ರಕ್ತದ ಮೇಲೆ ರಾಜಕೀಯ ನಡೆಸುತ್ತವೆ. ತಮ್ಮ ಪಕ್ಷವಿದ್ದಾಗ ನಡೆಯುವ ಇಂಥ ಘಟನೆಗಳನ್ನು ಸಮರ್ಥಿಸಿಕೊಳ್ಳುವ ರಾಜಕಾರಣಿಗಳು, ಬೇರೆಯವರ ಆಡಳಿತದಲ್ಲಿ ಘಟನೆಗಳು ನಡೆದಾಗ ವಿರೋಧಿಸುತ್ತವೆ. ಇದು ಯಾವ ನ್ಯಾಯ ಎಂಬುದೇ ಅರ್ಥವಾಗುವುದಿಲ್ಲ.
ಭಾರತದಲ್ಲಿ ಬಹುಪಾಲು ಕಾಲ್ತುಳಿತಗಳು ಸಂಭವಿಸುವುದು ದೇವಸ್ಥಾನಗಳಲ್ಲಿ. ಆನಂತರ ಸಿನೆಮಾ ನಾಯಕ ನಟರನ್ನು ನೋಡಲು ಮುಗಿ ಬಿದ್ದಾಗ. ಇದನ್ನು ಬಿಟ್ಟರೆ ಸ್ವಯಂ ದೇವಮಾನವರ ಭಾಷಣಗಳನ್ನು ಕೇಳಲು ಹೋದಾಗ ಘಟಿಸುತ್ತವೆ.
ಹೆಚ್ಚು ಜನರು ಸೇರುವ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಸಂಘಟಕರಾಗಲೀ, ಆಡಳಿತ ಸರಕಾರವಾಗಲೀ ಜನರು ಊಹೆಗೂ ಮೀರಿ ಬರಬಹುದು ಎಂಬ ನಂಬಿಕೆಯಲ್ಲಿ ತುಸು ಮುಂಜಾಗ್ರತೆಯನ್ನು ವಹಿಸಬೇಕು. ಅಲ್ಲದೆ ದೇವಾಲಯಕ್ಕೆ ಬರುವ ಭಕ್ತರನ್ನು ಒಂದು ಕಡೆ ಕೂಡಿ ಹಾಕಿ ಒಮ್ಮೇಲೇ ಬಿಟ್ಟರೆ, ಡ್ಯಾಮಿನಿಂದ ನೀರನ್ನು ತೆರೆದು ಹಳ್ಳಕ್ಕೆ ಬಿಟ್ಟಂತೆ ಎಲ್ಲರೂ ಕೊಚ್ಚಿ ಹೋಗುತ್ತಾರೆ. ಶಕ್ತಿ ಇರುವವರು ಉಳಿದುಕೊಳ್ಳುತ್ತಾರೆ. ಬಲಹೀನರು ಸಾಯುತ್ತಾರೆ. ನಮ್ಮ ದೇವಾಲಯಗಳಲ್ಲಿ ಈಗ ಇದೊಂದು ರೀತಿಯ ಸಮಸ್ಯೆಯಾಗಿದೆ. ದೇವರ ದರ್ಶನಕ್ಕೆ ಜನರು ಬಂದಂತೆ ಕಳಿಸಿಬಿಟ್ಟರೆ ಸಮಸ್ಯೆಯೇ ಬರುವುದಿಲ್ಲ. ಬ್ಯಾರಿಕೇಡಿನೊಳಗೆ ದಿನಗಟ್ಟಲೆ ಕೂಡಿ ಹಾಕಿ ದೇವರ ಮೇಲೆಯೇ ಜಿಗುಪ್ಸೆ ಬರುವಂತೆ ಮಾಡುತ್ತಾರೆ. ಈ ಸಮಯದಲ್ಲಿ ತಾಳ್ಮೆ ಕಳೆದುಕೊಂಡವರು ತಳ್ಳುವುದಕ್ಕೆ ಪ್ರಾರಂಭಿಸುತ್ತಾರೆ. ಜನರ ಹೆಗಲ ಮೇಲೆ ಹತ್ತಿಕೊಂಡು ಮುಂದೆ ಹೋಗುವುದಕ್ಕೆ ಹವಣಿಸುತ್ತಾರೆ. ಇದರಿಂದ ಉಳಿದವರು ಕೂಡ ಇದೇ ಹಾದಿ ಹಿಡಿಯುತ್ತಾರೆ. ಆಗ ಭಕ್ತರಲ್ಲೇ ಗೊಂದಲಗಳು ಪ್ರಾರಂಭವಾಗಿ ಅನಾಹುತಗಳು ಘಟಿಸುತ್ತವೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರ್ಘಟನೆಗೆ ಸರಕಾರ ಹೊಣೆಯೆಂದು ನೇರವಾಗಿ ಹೇಳಿದರೂ ಆರ್‌ಸಿಬಿ ಅಭಿಮಾನಿಗಳ ಅಂಧಾಭಿಮಾನವನ್ನೂ ನಾವು ಎತ್ತಿ ಹೇಳಬೇಕಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಐಪಿಎಲ್ ಕಪ್ ಗೆದ್ದ ಖಷಿಗೆ, ಆಟಗಾರರಿಗೆ ಸನ್ಮಾನ ಮಾಡಲು ಅವರನ್ನು ಬೆಂಗಳೂರಿಗೆ ಸರಕಾರವೇ ಕರೆಸಿಕೊಂಡಿತೋ, ಇಲ್ಲ ಪ್ರಾಂಚೈಸಿಯೇ ಕರೆದುಕೊಂಡು ಬಂದಿತ್ತೋ ಗೊತ್ತಿಲ್ಲ.
ಆದರೆ ಇಲ್ಲಿ ಆಟಗಾರರು ಸರಕಾರದ ಗೌರವವನ್ನು ಸ್ವೀಕರಿಸಲು ಬಂದರು. ಸರಕಾರ ವಿಧಾನ ಸೌಧದ ಮುಂದೆ ಅವರಿಗೆ ಗೌರವ ಸಲ್ಲಿಸುವಾಗ ಅಭಿಮಾನಿಗಳು ತೋರಿದ ಮಂಗಾಟವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಎತ್ತರದ ಮರವನ್ನು ಏರಿ ಕುಳಿತಿದ್ದ ಅಭಿಮಾನಿಯನ್ನು ನೋಡಿ ಸ್ವತಃ ವಿರಾಟ್ ಕೊಹ್ಲಿಯೇ ನಗುತ್ತಿದ್ದ ದೃಶ್ಯ ಎಲ್ಲಡೆ ಪ್ರಸಾರವಾಗುತ್ತಿತ್ತು. ಕೊನೆಗೆ ಹೈಕೋರ್ಟ್‌ನ ಕಟ್ಟಡವನ್ನೂ ಬಿಡದೆ ಅಭಿಮಾನಿಗಳು ಹತ್ತಿಕುಳಿತದ್ದು ನಿಜಕ್ಕೂ ವಿಪರ್ಯಾಸ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ಅಭಿಮಾನ ಅಭಿಮಾನವೇ ಅಲ್ಲ. ಈ ಹುಚ್ಚಾಟ ಕಂಡ ಸರಕಾರ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮವನ್ನು ನಿರ್ಬಂಧಿಸಿದ್ದರೆ ಸರಿಯಾಗುತ್ತಿತ್ತು. ಅಲ್ಲಿಗೂ ಆಟಗಾರರನ್ನು ಕರೆದೊಯ್ದು ಆಡಳಿತ ಸರಕಾರ ತಪ್ಪು ಮಾಡಿತು. ಈ ಸಂದರ್ಭದಲ್ಲಿ ಅಭಿಮಾನಿಗಳು ಅಕ್ಷರಶಃ ಹುಚ್ಚರಾಗಿದ್ದರು. ತಮ್ಮ ಆಟಗಾರರನ್ನು ಕಣ್ತುಂಬಿಕೊಳ್ಳಲು ತಾ ಮುಂದು ನಾ ಮುಂದು ಎಂದು ತೆರೆದಿದ್ದ ಒಂದು ಗೇಟಿನಲ್ಲಿ ನುಗ್ಗಲು ಹೋದದ್ದು ಅಪಾಯಕ್ಕೆ ದಾರಿ ಮಾಡಿಕೊಟ್ಟಿತು.
ಸತತ ಎರಡು ಮೂರು ತಿಂಗಳು ಕ್ರಿಕೆಟ್ ಆಡಿ ತನ್ನ ಪ್ರಾಂಚೈಸಿಗೆ ಮತ್ತು ಅಭಿಮಾನಿಗಳಿಗೆ ಹದಿನೆಂಟು ವರ್ಷದ ಕನಸನ್ನು ನನಸು ಮಾಡಿದ ಆಟಗಾರರ ಮನಸ್ಸಲ್ಲಿ ಸೂತಕ ಮೂಡುವಂತೆ ಮಾಡಿದ್ದು ಅಭಿಮಾನಿಗಳೇ ಎಂಬುದನ್ನು ನೇರವಾಗಿಯೇ ಹೇಳಬೇಕು. ಹನ್ನೊಂದು ಜನ ಯುವಕ-ಯುವತಿಯರು ತಮ್ಮ ಪ್ರಾಣ ಕಳೆದುಕೊಂಡಿದ್ದು ಅವರನ್ನು ನಂಬಿಕೊಂಡಿದ್ದ ಕುಟುಂಬಗಳಿಗೆ ಭರಿಸಲಾಗದ ದುಃಖವಾಯಿತು. ಹಲವಾರು ಕನಸುಗಳನ್ನು ಹೊತ್ತು ಆಫೀಸಿನಿಂದ ಕೆಲಸಕ್ಕೆ ಹೋಗುತ್ತಿದ್ದ ಹುಡುಗ ಬಸ್ಸಿಳಿದು ಸ್ಟೇಡಿಯಂ ಕಡೆ ಬರದಿದ್ದರೆ ಅವನ ಜೀವ ಉಳಿಯುತ್ತಿತ್ತು. ಮಗನಿಗೋಸ್ಕರ ನೂರು ಕೋಟಿ ಸಂಪಾದನೆ ಮಾಡಿದ್ದ ಅಪ್ಪ ಮಗನ ಸಮಾಧಿಯ ಮೇಲೆ ಕಣ್ಣೀರು ಸುರಿಸುತ್ತಾ ಕುಳಿತಿದ್ದಾರೆ. ಮನೆಗೆ ಆಧಾರವಾಗಿದ್ದವರು ಶ್ಮಶಾನಕ್ಕೆ ನಡೆದಿದ್ದಾರೆ.
ಮೊನ್ನೆ ನಡೆದ ಘಟನೆಯಲ್ಲಿ ಪೊಲೀಸ್ ಇಲಾಖೆಯನ್ನಷ್ಟೇ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಇಪ್ಪತ್ತು ಮೂವತ್ತು ಸಾವಿರ ಪೊಲೀಸರು ಮೂರು ನಾಲ್ಕು ಲಕ್ಷ ಅಭಿಮಾನಿಗಳನ್ನು ನಿಯಂತ್ರಿಸಬೇಕು ಎಂದರೆ ಅದು ಸಾಧ್ಯವಿಲ್ಲ. ಸರಕಾರ ಎರಡು ಮೂರು ದಿನ ವ್ಯವಸ್ಥೆಯನ್ನು ಮಾಡಿಕೊಂಡು ಆನಂತರ ಆಟಗಾರರನ್ನು ಆಹ್ವಾನಿಸಬಹುದಿತ್ತು.
ಆಟಗಾರರು ಮತ್ತು ಅಭಿಮಾನ ಎರಡನ್ನೂ ಪ್ರೀತಿಸಬೇಕು ನಿಜ. ಅದಕ್ಕಿಂತ ಮುಖ್ಯವಾಗಿ ಕ್ರೀಡೆಯ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಈಗಿನ ಯುವಜನತೆ ಹುಚ್ಚಾಟವನ್ನೇ ಅಭಿಮಾನ ಅಂದುಕೊಂಡಿರುವುದು ಬೇಸರದ ಸಂಗತಿ.