Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಹಂಗಾಮಿ ಟಿಪ್ಪಣಿಗಳು
  5. ಅಕ್ರಮ ವಲಸಿಗರೇ ಅಧಿಕೃತರಾಗಿ...

ಅಕ್ರಮ ವಲಸಿಗರೇ ಅಧಿಕೃತರಾಗಿ ಮೂಲನಿವಾಸಿಗಳನ್ನು ಅಪರಾಧಿಗಳಾಗಿಸುವ ಪ್ರಕ್ರಿಯೆ

ಹವ್ವಾ ಶುಕೂರ್, ಬೋಳಾರ್ಹವ್ವಾ ಶುಕೂರ್, ಬೋಳಾರ್14 July 2025 12:21 PM IST
share
ಅಕ್ರಮ ವಲಸಿಗರೇ ಅಧಿಕೃತರಾಗಿ ಮೂಲನಿವಾಸಿಗಳನ್ನು ಅಪರಾಧಿಗಳಾಗಿಸುವ ಪ್ರಕ್ರಿಯೆ

ವಲಸಿಗರು ನುಸುಳುಕೋರರಾಗಿ ಅಥವಾ ಆಕ್ರಮಣಕಾರಿಗಳಾಗಿ ಇನ್ನೊಬ್ಬರ ನಾಡಿನೊಳಗೆ ಪ್ರವೇಶಿಸುವುದು, ಮೊದಲ ಹಂತದಲ್ಲಿ ತಾವು ನುಸುಳುಕೋರರೆಂಬ ಪ್ರಜ್ಞೆಯನ್ನು ತಮ್ಮೊಳಗೆ ಮಾತ್ರ ಉಳಿಸಿಟ್ಟುಕೊಳ್ಳುವುದು, ಕ್ರಮೇಣ ತಾವು ಅನಾದಿಕಾಲದಿಂದಲೂ ಇಲ್ಲೇ ಇದ್ದವರೆಂಬಂತೆ ನಾಡಿನವರ ಮುಂದೆ ನಟಿಸುವುದು, ಹಾಗೆಂದು ಎಲ್ಲರನ್ನೂ ನಂಬಿಸುವುದು - ಇದು ಸಾಮಾನ್ಯವಾಗಿ ಜಗತ್ತಿನ ಹೆಚ್ಚಿನೆಲ್ಲಾ ಕಡೆ ವಲಸಿಗರು ಪಾಲಿಸುತ್ತಾ ಬಂದಿರುವ ಸಾಮಾನ್ಯ ಕಾರ್ಯವಿಧಾನ. ಕೆಲವು ಪರಮ ಠಕ್ಕ ನುಸುಳುಕೋರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಶತಮಾನದ ಬಳಿಕ, ತಾವು ವಲಸೆಹೋಗಿ ನೆಲೆಸಿದ ಇನ್ನೊಬ್ಬರ ನಾಡಿನಲ್ಲಿ, ಈನಾಡಿನ ಮೂಲ ನಿವಾಸಿಗಳು ನಾವಾದ್ದರಿಂದ ಇಲ್ಲಿನ ಅಸಲಿ ಮಾಲಕರು ನಾವೇ ಎಂದು ಹೇಳಿಕೊಳ್ಳತೊಡಗುತ್ತಾರೆ. ಈ ಬೊಗಳೆಗೆ ತಕ್ಕಮಟ್ಟದ ಮನ್ನಣೆ ಸಿಕ್ಕಿಬಿಟ್ಟರೆ ಸಾಕು, ಅವರಲ್ಲಿ ಕೆಲವರು ಮತ್ತೊಂದು ವಿಪರೀತ ಹೆಜ್ಜೆ ಮುಂದಿಡುತ್ತಾರೆ. ಅವರು, ತಮ್ಮ ವಲಸೆಯನ್ನು ಸಹಿಸಿಕೊಂಡ ಆ ನಾಡಿನ ಮೂಲನಿವಾಸಿಗಳ ಬಗ್ಗೆ, ಅವರು ಎಲ್ಲಿಂದಲೋ ಬಂದವರು, ನಾವು ಅವರ ಮೇಲೆ ದಯೆ ತೋರಿ ಅವರಿಗೆ ಆಶ್ರಯ ನೀಡಿದವರು ಎಂದು ಪ್ರಚಾರ ಮಾಡತೊಡಗುತ್ತಾರೆ. ಕೆಲವರು ಅಷ್ಟಕ್ಕೂ ತೃಪ್ತರಾಗದೆ, ಆ ನಾಡಿನ ಮೂಲನಿವಾಸಿಗರ ಹಣೆಗೆ ‘ಅಕ್ರಮ ವಲಸಿಗರು’ ಎಂಬ ಅಪರಾಧಿ ಪಟ್ಟಿ ಕಟ್ಟಿ ಅವರನ್ನು ಅವರದೇ ನಾಡಿನಿಂದ ಹೊರದಬ್ಬುವ ಅಭಿಯಾನ ಆರಂಭಿಸುತ್ತಾರೆ. ಹಲವು ಕಡೆ, ಹಿಂಸೆ, ರಕ್ತಪಾತ, ಯುದ್ಧ, ಸಾಮೂಹಿಕ ಹತ್ಯಾಕಾಂಡ ಇತ್ಯಾದಿಗಳೆಲ್ಲಾ ಈ ಅಭಿಯಾನದ ಭಾಗವಾಗಿ ಬಿಡುತ್ತವೆ. ಭಾರತೀಯರಿಗಂತೂ ಈ ಪ್ರಕ್ರಿಯೆಯನ್ನು ವಿಸ್ತಾರವಾಗಿ ವಿವರಿಸಬೇಕಾಗಿಲ್ಲ.

*****

ಇಂದಿನ ಅಮೆರಿಕ ಖಂಡಗಳ ಇತಿಹಾಸವನ್ನೇ ನೋಡಿ. ಜಗತ್ತಿನ ಒಂದು ದೊಡ್ಡ ಜನವಿಭಾಗವು, ಇಟಲಿ ಮೂಲದ ಕೊಲಂಬಸ್ ನಿಗೆ, 1492ರಲ್ಲಿ ನಿರ್ಜನವಾಗಿದ್ದ ಅಮೆರಿಕ ಎಂಬ ಭಾರೀ ಬೃಹತ್ ಭೂಭಾಗವನ್ನು ‘ಕಂಡುಹಿಡಿದವನು’ ಎಂಬ ಬಿರುದು ಕೊಟ್ಟುಬಿಟ್ಟಿದೆ. ಆತ ಅಮೆರಿಕದ ಕರಾವಳಿಯನ್ನು ತಲುಪಿದ ಬಳಿಕವಷ್ಟೇ ಅಲ್ಲಿ ಜನವಾಸ ಆರಂಭವಾಯಿತು ಎಂದು ಅವರೆಲ್ಲಾ ವಾದಿಸುತ್ತಾರೆ. 16ನೇ ಶತಮಾನದ ಬಳಿಕ ವಿವಿಧ ಯುರೋಪಿಯನ್ ದೇಶಗಳ ಜನರು ಅಮೆರಿಕ ಖಂಡಕ್ಕೆ ಹೋಗಿ ನೆಲೆಸುವ ಮೂಲಕ ನಿರ್ಜನ ಅಮೆರಿಕವನ್ನು ಜನಸಂಪನ್ನಗೊಳಿಸುವ ಮಹದುಪಕಾರ ಮಾಡಿದರು ಎಂದು ಅವರನ್ನು ವೈಭವೀಕರಿಸುತ್ತಾರೆ. ಆದರೆ, ಸತ್ಯ ಹೇಳುವ ಇತಿಹಾಸಕಾರರ ಪ್ರಕಾರ, ಕೊಲಂಬಸ್ ಅಮೆರಿಕದ ನೆಲಕ್ಕೆ ಕಾಲಿಟ್ಟಾಗ, ಬಿಲ್ಲುಬಾಣಗಳೊಂದಿಗೆ ಕೊಲಂಬಸ್‌ನ ಬಳಗವನ್ನು ಸ್ವಾಗತಿಸುವುದಕ್ಕೆ ಅಮೆರಿಕದಲ್ಲಿ (ಈಗಿನ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಕೆರೀಬಿಯನ್ ದ್ವೀಪಗಳಲ್ಲಿ) ಅದಾಗಲೇ 9 ರಿಂದ 11 ಕೋಟಿ ಜನರಿದ್ದರು. ಆಗ ಯುರೋಪಿನ ಎಲ್ಲ ದೇಶಗಳಲ್ಲಿದ್ದ ಒಟ್ಟು ಜನಸಂಖ್ಯೆ ಹೆಚ್ಚೆಂದರೆ 9 ಕೋಟಿ ಮಾತ್ರ! ಅಂದರೆ ಯುರೋಪಿಯನ್ನರು ‘ಕಂಡುಹಿಡಿದ ನಿರ್ಜನ ಅಮೆರಿಕ’ದಲ್ಲಿ, ಅಂದು ಯುರೊಪಿನಲ್ಲಿದ್ದ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರಿದ್ದರು! ಆ ಜನರ ಬಳಿ ಬಂದೂಕು, ಸಿಡಿಮದ್ದು ಇತ್ಯಾದಿಗಳು ಮಾತ್ರ ಇರಲಿಲ್ಲ ಮತ್ತು ಮೋಸ, ವಂಚನೆ ಹಾಗೂ ಕ್ರೌರ್ಯದ ಮೂಲಕ ಅಧಿಕಾರ ಸ್ಥಾಪಿಸುವ ಕಲೆಯಲ್ಲೂ ಅವರು ಪ್ರವೀಣರಾಗಿರಲಿಲ್ಲ. ಆದ್ದರಿಂದ ಕ್ರಮೇಣ ಆ ಜನರು ನಿರ್ಜನರಾಗಿಬಿಟ್ಟರು.

*****

ಪ್ರಸ್ತುತ ಎಲ್ಲ ಸತ್ಯಗಳನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟು, ‘ಕೊಲಂಬಸ್ ಕಂಡು ಹಿಡಿದ ಅಮೆರಿಕ ಸಂಪೂರ್ಣ ಮಾನವ ಮಕ್ತವಾಗಿತ್ತು’ ಎಂಬ ಸುಳ್ಳನ್ನು ನಂಬಿಸುವ ಶ್ರಮ ಈಗಲೂ ಜಾರಿಯಲ್ಲಿದೆ. ಯುರೋಪ್‌ನಿಂದ ಅಮೆರಿಕಕ್ಕೆ ಹೋದವರು, ಮೊದಲೇ ಅಲ್ಲಿದ್ದ ಮೂಲನಿವಾಸಿಗಳನ್ನು ಅಥವಾ ಯುರೋಪಿಯನರಿಗಿಂತ ಹಲವಾರು ಶತಮಾನ ಮುನ್ನ ಏಶ್ಯದ ವಿವಿಧ ಭಾಗಗಳಿಂದ ಅಮೆರಿಕಕ್ಕೆ ವಲಸೆ ಹೋಗಿದ್ದ ಪ್ರಾಚೀನ ವಲಸಿಗರನ್ನು, ನಮ್ಮಿಂದ ನಾಗರಿಕತೆ ಕಲಿತ ಅನಾಗರಿಕರು ಎಂದು ಕರೆಯುವ ಪ್ರಕ್ರಿಯೆ ಕೂಡಾ ಇಂದಿಗೂ ಜೀವಂತವಾಗಿದೆ.

ಕೊಲಂಬಸ್‌ಗಿಂತ ಮುನ್ನ ಅಮೆರಿಕದಲ್ಲಿದ್ದ ಕೋಟ್ಯಂತರ ಮಂದಿಯ ಗತಿ ಏನಾಯಿತು? ಆ ಪ್ರಾಚೀನ ವಲಸಿಗರು ಮತ್ತು ಯುರೋಪಿಯನ್ ವಸಾಹತುಶಾಹಿಗಳ ನಡುವಣ ನಡೆದ ಶತಮಾನಗಟ್ಟಲೆ ದೀರ್ಘ, ರಕ್ತ ಸಿಕ್ತ ಘರ್ಷಣೆಯ ಇತಿಹಾಸವೇನು? ಎಂಬಿತ್ಯಾದಿ ಬಹುಮಹತ್ವದ ಪ್ರಶ್ನೆಗಳನ್ನೆಲ್ಲಾ ಆಳವಾಗಿ ಹೂತಿಡುವ ಶ್ರಮವೂ ಮುಂದುವರಿದಿದೆ. 16ನೇ ಶತಮಾನದಿಂದ 19ನೇ ಶತಮಾನದ ನಡುವಣ ಅವಧಿಯಲ್ಲಿ ಯುರೋಪ್‌ನಿಂದ ಅಮೆರಿಕಕ್ಕೆ ವಲಸೆ ಹೋದವರು, ಮುಂದಿನ ಹಂತಗಳಲ್ಲಿ ಅಲ್ಲಿಗೆ ವಲಸೆ ಹೋದವರನ್ನು ‘ಅಕ್ರಮ ವಲಸಿಗ’ರೆಂದು ತಾತ್ಸಾರದಿಂದ ಕರೆಯುವ ತಮಾಷೆ ಕೂಡಾ ಇಂದು ಜಗತ್ತಿನ ಮುಂದೆ ಪ್ರದರ್ಶನಕ್ಕಿದೆ. ಇತ್ತೀಚೆಗೆ ಟ್ರಂಪ್ ಪುನರಾಗಮನ ಬಳಿಕವಂತೂ, ಹಳೆಯ ಅಕ್ರಮ ವಲಸಿಗರು ಹೊಸ ‘ಅಕ್ರಮ ವಲಸಿಗ’ರನ್ನು ಪತ್ತೆ ಹಚ್ಚಿ ದೇಶದಿಂದ ಹೊರದಬ್ಬುವ ಕಾರ್ಯಾಚರಣೆ ಚುರುಕಾಗಿದೆ. ಈ ಕಾರ್ಯಾಚರಣೆ ಒಂದು ದೊಡ್ಡ ವಲಯದಲ್ಲಿ ಜನಪ್ರಿಯವೂ ಆಗಿದೆ.

*****

ಅಮೆರಿಕದ ಈ ಮುಜುಗರದಾಯಕ ಕಥೆ, ಆಧುನಿಕ ಜಗತ್ತಿನ ಬೇರೆ ಹಲವು ಸಮಾಜಗಳ ಕಥೆಯೂ ಹೌದು.

ಬ್ರಿಟನ್‌ನ ಖ್ಯಾತ ಕಲಾ ಇತಿಹಾಸಕಾರ ವಿಲಿಯಮ್ ಡೇಲ್ ರಿಂಪ್ಲ್ (William Dalrymple) ಇತ್ತೀಚೆಗೆ ಒಂದು ಪಾಡ್ ಕಾಸ್ಟ್ ಸಂದರ್ಶನದಲ್ಲಿ ಹೇಳಿದರು:

ನಮ್ಮ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯು ನನ್ನ ಬಾಲ್ಯದಲ್ಲೇ ನನಗೆ ಒಂದು ಸುಳ್ಳನ್ನು ಮಾರಿತ್ತು. 1948ರಲ್ಲಿ ಫೆಲೆಸ್ತೀನ್ ನಾಡಿನಲ್ಲಿ ಇಸ್ರೇಲ್ ಎಂಬ ದೇಶದ ಸ್ಥಾಪನೆಯಾದಾಗ, ಆ ದೇಶವೆಲ್ಲಾ ಕೇವಲ ಒಂದು ನಿರ್ಜನವಾದ ಬರಡು ಮರುಭೂಮಿಯಾಗಿತ್ತು ಮತ್ತು ವಿವಿಧೆಡೆಗಳಿಂದ ಬಂದು ಇಸ್ರೇಲ್‌ನಲ್ಲಿ ನೆಲೆಸಿದ ಇಸ್ರೇಲಿಗಳು ತಮ್ಮ ಬುದ್ಧಿವಂತಿಕೆ ಹಾಗೂ ಪರಿಶ್ರಮದ ಮೂಲಕ ಆ ನೆಲವನ್ನು ಫಲಸಂಪನ್ನವಾದ ಹಚ್ಚಹಸಿರು ತೋಟವಾಗಿ ಮಾರ್ಪಡಿಸಿಬಿಟ್ಟರು ಎಂದು ನಮ್ಮನ್ನು ನಂಬಿಸಲಾಗಿತ್ತು. ಇದು ಶುದ್ಧ ಸುಳ್ಳು....

*****

ಇಸ್ರೇಲ್ ಎಂಬ ಹೊಸ ದೇಶವನ್ನು ಅಸ್ತಿತ್ವಕ್ಕೆ ತರುವ ಸಂಚಿನ ಭಾಗವಾಗಿ 1947 ಮತ್ತು 1949 ರ ನಡುವೆ, ಫೆಲೆಸ್ತೀನ್ ನಲ್ಲಿದ್ದ ಸುಮಾರು 19 ಲಕ್ಷ ನಾಗರಿಕರ ಪೈಕಿ 7.5 ಲಕ್ಷ ಮಂದಿಯನ್ನು ಅತ್ಯಂತ ಅಮಾನುಷವಾಗಿ ಅವರದ್ದೇ ತಾಯ್ನಾಡಿನಿಂದ ಹೊರದಬ್ಬಲಾಗಿತ್ತು. ಈ ಅವಧಿಯಲ್ಲಿ ನಡೆದ, ‘ನಕ್ಬಾ’ (ಮಹಾ ದುರಂತ) ಎಂದೇ ಕುಖ್ಯಾತವಾಗಿರುವ ಕಾರ್ಯಾಚರಣೆಯಲ್ಲಿ, ಝಿಯೋನಿಸ್ಟ್ ಶಕ್ತಿಗಳು ಸಾಮೂಹಿಕ ಹತ್ಯಾಕಾಂಡ ಮತ್ತು ಬಲವಂತದ ತೆರವು ಚಟುವಟಿಕೆಗಳ ಮೂಲಕ ಫೆಲೆಸ್ತೀನ್‌ನ 78ಶೇ. ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡವು. 530 ಗ್ರಾಮ ಮತ್ತು ನಗರಗಳನ್ನು ಧ್ವಂಸಗೊಳಿಸಿ ಅಲ್ಲಿಯ ಜನರನ್ನು ಹೊರದಬ್ಬಲಾಯಿತು. ಆಬಳಿಕ ಇಂದಿನವರೆಗೂ ನಡೆಯುತ್ತಿರುವುದು, ಇಸ್ರೇಲ್ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಅರಬ್ ನಾಗರಿಕರನ್ನು ಹೆಕ್ಕಿಹೆಕ್ಕಿ ಕೊಲ್ಲುವ, ಇತರರನ್ನು ಹೊರದಬ್ಬಿ ನಿರಾಶ್ರಿತರಾಗಿಸುವ, ಫೆಲೆಸ್ತೀನ್ ಜನತೆಯ ವಶದಲ್ಲಿ ಉಳಿದಿದ್ದ ಭೂಭಾಗವನ್ನು ವಶಪಡಿಸಿಕೊಳ್ಳುವ ಮತ್ತು ಅಕ್ಕಪಕ್ಕದ (ಉತ್ತರದಲ್ಲಿ ಲೆಬನಾನ್, ನೈಋತ್ಯದಲ್ಲಿ ಈಜಿಪ್ಟ್, ಪೂರ್ವದಲ್ಲಿ ಜೋರ್ಡಾನ್, ಈಶಾನ್ಯದಲ್ಲಿ ಸಿರಿಯಾ) ಅರಬ್ ದೇಶಗಳಿಗೆ ಸೇರಿದ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಅಮಾನುಷ ಕಾರ್ಯಾಚರಣೆಗಳ ಸರಣಿ. ಈನಿಟ್ಟಿನಲ್ಲಿ ಒಂದು ದೊಡ್ಡ ಕಾರ್ಯಾಚರಣೆ 1967 ರಲ್ಲಿ ನಡೆದಿತ್ತು. ಇಸ್ರೇಲ್ ತನ್ನ ವಿಜಯವೆಂದು ಆಚರಿಸುವ ಆ ಕಾರ್ಯಾಚರಣೆಯನ್ನು, ತಮ್ಮ ಲಕ್ಷಾಂತರ ಜೀವಗಳನ್ನು ಹಾಗೂ ಭೂಭಾಗಗಳನ್ನು ಕಳೆದುಕೊಂಡ ಈಜಿಪ್ಟ್, ಜೋರ್ಡಾನ್ ಮತ್ತು ಸಿರಿಯಾದವರು ‘ನಕ್ಸಃ’ (ಹಿನ್ನಡೆ, ನಷ್ಟ) ಎಂಬ ಹೆಸರಿಂದ ಸ್ಮರಿಸುತ್ತಾರೆ.

*****

ಇದೀಗ ಇಸ್ರೇಲ್, ಗಾಝಾ ಪ್ರದೇಶದಿಂದ ಅಲ್ಲಿನ 6 ಲಕ್ಷ ಅಧಿಕೃತ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತಲ್ಲೀನವಾಗಿದೆ. ಹಿಂದೆ ಗುಟ್ಟಾಗಿಡಲಾಗಿದ್ದ ಅದರ ಇಂಗಿತವನ್ನು ಈಗ ನೆತನ್ಯಾಹು ಮತ್ತವರ ಸಚಿವರು ಬಹಿರಂಗವಾಗಿಯೇ ಘೋಷಿಸತೊಡಗಿದ್ದಾರೆ. ಕಳೆದವಾರವಷ್ಟೇ ಇಸ್ರೇಲ್ ರಕ್ಷಣಾಸಚಿವರು ಈ ರಾಕ್ಷಸೀಯ ತೆರವು ಪ್ರಕ್ರಿಯೆಯನ್ನು ಗಾಝಾದ 6 ಲಕ್ಷ ಮಂದಿ ಸ್ವತಃ ತಮ್ಮ ಇಚ್ಛೆಯಿಂದ, ನಾವು ಅವರಿಗಾಗಿ ನಿರ್ಮಿಸುತ್ತಿರುವ ಶಿಬಿರಗಳಿಗೆ ತೆರಳುತ್ತಿದ್ದಾರೆ ಎಂದು ಚಂದದ ಪದಗಳಲ್ಲಿ ವರ್ಣಿಸಿದರು. ನೆತನ್ಯಾಹು ಅಷ್ಟೆಲ್ಲಾ ಸುತ್ತಿ ಬಳಸಿ ಮಾತನಾಡಿಲ್ಲ. ಅವರು ಮೊನ್ನೆ ಅಮೆರಿಕದಲ್ಲಿ, ಮಾಧ್ಯಮಗಳ ಜೊತೆ ಮಾತನಾಡುತ್ತ ಫೆಲೆಸ್ತೀನ್ ಜನತೆಯ ಉತ್ತಮ ಭವಿಷ್ಯಕ್ಕಾಗಿ ಅವರನ್ನೆಲ್ಲ ನೆರೆಹೊರೆಯ ದೇಶಗಳಿಗೆ ವರ್ಗಾಯಿಸುವ ಬಗ್ಗೆ ಇಸ್ರೇಲ್ ಮತ್ತು ಅಮೆರಿಕ, ನೆರೆಯ ಅರಬ್ ದೇಶಗಳ ಜೊತೆ ಮಾತುಕತೆ ನಡೆಸುತ್ತಿವೆ ಎಂದಿದ್ದರು.

*****

ಅಂತರ್‌ರಾಷ್ಟ್ರೀಯ ವ್ಯವಹಾರಗಕ ತಜ್ಞ ಹಾಗೂ ಬ್ರಾಡ್ ಫರ್ಡ್ ವಿಶ್ವವಿದ್ಯಾನಿಲಯದ ಪ್ರಖ್ಯಾತ ಪ್ರೊಫೆಸರ್ ಪಾಲ್ ರೋಝರ್ಸ್ ಕಳೆದ ಎಪ್ರಿಲ್ ನಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಹೇಳಿದರು:

ಇಂದು ಇಸ್ರೇಲ್ ಪಡೆಗಳು ಗಾಝಾದಲ್ಲಿ ನಡೆಸುತ್ತಿರುವ ವಿಧ್ವಂಸವು ಎರಡನೇ ಮಹಾಯುದ್ಧದ ವೇಳೆ ಕಾಣಿಸಿದ್ದ ವಿಧ್ವಂಸಕ್ಕಿಂತಲೂ ಬಹಳಷ್ಟು ತೀವ್ರ ಸ್ವರೂಪದ್ದಾಗಿದೆ. ಹಿರೋಷಿಮಾದಲ್ಲಿ ಸುರಿಸಲಾದ ಸ್ಫೋಟಕಗಳ ಒಟ್ಟು ಪ್ರಮಾಣ 12 ಸಾವಿರ ಟನ್ ಗಳಾಗಿದ್ದರೆ, ಗಾಝಾದ ಮೇಲೆ ಇಸ್ರೇಲ್ ಪಡೆಗಳು ವಿವಿಧ ವಿಧಾನಗಳಿಂದ ಸುಮಾರು 70 ಸಾವಿರ ಟನ್ ಗಳಷ್ಟು ಅಂದರೆ 6 ಪಟ್ಟು ಹೆಚ್ಚು ಸ್ಫೋಟಕಗಳನ್ನು ಸುರಿಸಿವೆ. ಸಾಲದ್ದಕ್ಕೆ ಇಂದಿನ ಈ ಸ್ಫೋಟಕಗಳು ಆ ಕಾಲದ ಸ್ಫೋಟಕಗಳಿಗೆ ಹೋಲಿಸಿದರೆ ಹಲವು ಪಟ್ಟು ಅಧಿಕ ಶಕ್ತಿಶಾಲಿಯಾಗಿವೆ. ಎರಡನೇ ಮಹಾಯುದ್ಧದ ವೇಳೆ ಮೈತ್ರಿಕೂಟದ ಪಡೆಗಳು ಜರ್ಮನಿಯ ಡ್ರೇಸ್ಡೆನ್ ಪ್ರದೇಶದ ಮೇಲೆ 2,000 ಬಾಂಬರ್ ರೇಡ್ ಗಳನ್ನು ನಡೆಸಿದ್ದವು. ಅದಕ್ಕೆ ಹೋಲಿಸಿದರೂ ಗಾಝಾದಲ್ಲಿ ಇಂದು ಇಸ್ರೇಲ್ ನಡೆಸುತ್ತಿರುವ ವಿಧ್ವಂಸವು ಹಲವು ಪಟ್ಟು ಹೆಚ್ಚು ತೀವ್ರವಾಗಿದೆ.

*****

ಒಂದು ಕಾಲದಲ್ಲಿ ಇಸ್ರೇಲ್ ತನ್ನ ಪ್ರಚಾರ ತಂತ್ರದ ಮೂಲಕ ಜಾಗತಿಕ ಜನಾಭಿಪ್ರಾಯವನ್ನು ತನ್ನ ಪರವಾಗಿ ಒಲಿಸಿಕೊಂಡಿತ್ತು. ವಿಶೇಷವಾಗಿ ಅಮೆರಿಕದಲ್ಲಿ ಮತ್ತು ಯುರೋಪಿಯನ್ ದೇಶಗಳಲ್ಲಿ ಹೆಚ್ಚಿನ ಜನರಿಗೆ ಇಸ್ರೇಲ್ ಬಗ್ಗೆ ಒಂದೋ ಪ್ರೀತಿ ಮತ್ತು ಅಭಿಮಾನವಿತ್ತು, ಅದಲ್ಲವಾದರೆ ಅಪಾರ ಸಹಾನುಭೂತಿಯಂತೂ ಇದ್ದೇ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿ ಬಿಟ್ಟಿದೆ. ಯುಎಸ್‌ಎ, ಕೆನಡಾ ಮತ್ತು ಹೆಚ್ಚಿನೆಲ್ಲಾ ಯುರೋಪಿಯನ್ ದೇಶಗಳಲ್ಲಿ ಫೆಲೆಸ್ತೀನ್ ಜನತೆಗೆ ಬೆಂಬಲ ಸೂಚಿಸಿ ಮತ್ತು ಇಸ್ರೇಲ್‌ನ ಅಪರಾಧಿ ಅತಿರೇಕಗಳನ್ನು ಖಂಡಿಸಿ ಅಲ್ಲಲ್ಲಿ ಬೃಹತ್ ಮತಪ್ರದರ್ಶನಗಳು ನಡೆದಿವೆ. ಇತ್ತೀಚೆಗಷ್ಟೇ ಖ್ಯಾತ PEW ಸಂಶೋಧನಾ ಸಂಸ್ಥೆಯು ಜಗತ್ತಿನ 24 ದೇಶಗಳಲ್ಲಿ ಮಾದರಿ ಸಮೀಕ್ಷೆಗಳನ್ನು ನಡೆಸಿ ಇಸ್ರೇಲ್ ಕುರಿತು ಜನಾಭಿಪ್ರಾಯ ಹೇಗಿದೆ ಎಂದು ಅಳೆಯಲು ಪ್ರಯತ್ನಿಸಿತು. ಸಮೀಕ್ಷೆಯ ಫಲಿತಾಂಶವು ಇಸ್ರೇಲ್ ನ ಅಭಿಮಾನಿಗಳು ಮತ್ತು ಪೋಷಕರನ್ನೆಲ್ಲ ಬೆಚ್ಚಿಬೀಳಿಸುವಂತಿತ್ತು. ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ‘ಬಹಳಷ್ಟು ಪ್ರತಿಕೂಲ, ತಕ್ಕ ಮಟ್ಟಿಗೆ ಪ್ರತಿಕೂಲ, ಬಹಳಷ್ಟು ಸದಭಿಪ್ರಾಯ ಮತ್ತು ತಕ್ಕ ಮಟ್ಟಿನ ಸದಭಿಪ್ರಾಯ’ - ಹೀಗೆ ಅಭಿಪ್ರಾಯದ ನಾಲ್ಕು ವಿಭಾಗಗಳಿದ್ದವು. ಕೆನಡಾ, ಯುಎಸ್‌ಎ ಮತ್ತು ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜನ ಇಂದಿನ ಇಸ್ರೇಲ್ ಧೋರಣೆಗಳ ಬಗ್ಗೆ ‘ಬಹಳಷ್ಟು ಪ್ರತಿಕೂಲ’ ಅಭಿಪ್ರಾಯ ಹೊಂದಿದ್ದಾರೆಂಬುದು ಸಮೀಕ್ಷೆಯಿಂದ ಬಯಲಾಯಿತು. ಇಲ್ಲಿ ಕೆಲವು ದೇಶಗಳ ಹೆಸರಿನ ಜೊತೆ ಆ ದೇಶಗಳಲ್ಲಿ ಎಷ್ಟು ಶೇಕಡಾ ಮಂದಿ ಇಸ್ರೇಲ್ ಕುರಿತು ‘ಬಹಳಷ್ಟು ಪ್ರತಿಕೂಲ’ ಅಭಿಪ್ರಾಯ ತಾಳಿದ್ದಾರೆ ಎಂಬುದನ್ನು ಕಂಸಗಳಲ್ಲಿ ನೀಡಲಾಗಿದೆ:

ಕೆನಡಾ (60ಶೇ.), ಯುಎಸ್‌ಎ (53ಶೇ.), ನೆದರ್‌ಲ್ಯಾಂಡ್ಸ್ (78ಶೇ.), ಸ್ಪೇನ್ (75ಶೇ.), ಸ್ವೀಡನ್ (75ಶೇ.), ಗ್ರೀಸ್ (72ಶೇ.), ಇಟಲಿ (66ಶೇ.), ಜರ್ಮನಿ (64ಶೇ.), ಫ್ರಾನ್ಸ್ (63ಶೇ.), ಪೋಲ್ಯಾಂಡ್ (62ಶೇ.), ಯುಕೆ (61ಶೇ.), ಹಂಗೆರಿ (53ಶೇ.), ಜಪಾನ್ (79ಶೇ.) ಆಸ್ಟ್ರೇಲಿಯಾ (74ಶೇ.) ದಕ್ಷಿಣ ಕೊರಿಯಾ (60ಶೇ.). ಸಾಮಾನ್ಯವಾಗಿ ಇಸ್ರೇಲ್ ಕುರಿತು ಸಹತಾಪ ತಾಳುತ್ತಾ ಬಂದಿರುವ ಈ ದೇಶಗಳಲ್ಲಿ, ಜನಾಭಿಪ್ರಾಯವು ಇಷ್ಟು ದೊಡ್ಡ ಪ್ರಮಾಣದಲ್ಲಿ ಇಸ್ರೇಲ್ ವಿರುದ್ಧ ‘ಬಹಳಷ್ಟು ಪ್ರತಿಕೂಲ’ವಾಗಿ ತಿರುಗಿದ್ದು ಇಸ್ರೇಲ್ ಪಾಲಿಗಂತೂ ಖಂಡಿತ ಆಘಾತಕಾರಿ ಬೆಳವಣಿಗೆಯಾಗಿದೆ.

ಮಾನವ ಹಕ್ಕುಗಳು ಮತ್ತು ಜಾಗತಿಕ ನ್ಯಾಯದಲ್ಲಿ ನಂಬಿಕೆಯುಳ್ಳ ಜಗತ್ತಿನ ಎಲ್ಲ ಜನರ ದೃಷ್ಟಿಯಲ್ಲೂ ಇದೊಂದು ಮಹತ್ವದ, ಸ್ವಾಗತಾರ್ಹ ಬದಲಾವಣೆಯಾಗಿದೆ.

*****

ಕಳೆದ ವಾರ ಯುಎಸ್ ಗೆ ಕೆಲವು ದಿನಗಳ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರಿಗೆ ಭವ್ಯ ಆತಿಥ್ಯ ನೀಡಿದ ಟ್ರಂಪ್ ವಿರುದ್ಧ ಸ್ವತಃ ಅಮೆರಿಕದ ಹಲವು ವಲಯಗಳಲ್ಲಿ ಭಾರೀ ಆಕ್ರೋಶ ಪ್ರಕಟವಾಗಿತ್ತು. ಈ ಕುರಿತು ಅಮೆರಿಕದ ಹಿರಿಯ, ಗೌರವಾನ್ವಿತ ರಾಜಕಾರಣಿ ಮತ್ತು ಸಂಸದ ಬರ್ನಿ ಸ್ಯಾಂಡರ್ಸ್ ಪ್ರತಿಕ್ರಿಯೆ ಹೀಗಿತ್ತು:

‘‘.... ನಾವಿದನ್ನು ಮರೆಯುವಂತಿಲ್ಲ. ಇಸ್ರೇಲ್ ಪ್ರಧಾನಿ ನೆತನ್ಯಾಹು ಗಾಝಾದ ನಾಗರಿಕರನ್ನು ವ್ಯವಸ್ಥಿತವಾಗಿ ಹಸಿವಿಗೆ ತಳ್ಳಿ ಅವರ ಹತ್ಯೆ ನಡೆಸಿದ್ದಾರೆಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಅಂತರ್ ರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ನೆತನ್ಯಾಹುರನ್ನು ಯುದ್ಧಾಪರಾಧಿ ಎಂದು ಪರಿಗಣಿಸಿದೆ. ಅವರ ಆ ಯುದ್ಧಾಪರಾಧಗಳ ಸರಣಿ ಈಗಲೂ ಮುಂದುವರಿದಿದೆ. ನೆತನ್ಯಾಹು ಅವರ ತೀವ್ರವಾದಿ ಸರಕಾರವು ಫೆಲೆಸ್ತೀನ್‌ನ 57,000 ಕ್ಕೂ ಹೆಚ್ಚಿನ ನಾಗರಿಕರ ಹತ್ಯೆ ಮಾಡಿದೆ ಮತ್ತು ಸುಮಾರು 1.35 ಲಕ್ಷ ಮಂದಿಯನ್ನು ಗಾಯಗೊಳಿಸಿದೆ. ಅವರಲ್ಲಿ 60ಶೇ. ಮಂದಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು. ಇಸ್ರೇಲ್ ಸರಕಾರವು, ಹೊರಗಿನಿಂದ ನೆರವು ತರುವ ವಾಹನಗಳ ಮೇಲೆ ನಿರ್ಬಂಧ ಹೇರಿದಾಗಿನಿಂದ ಫೆಲೆಸ್ತೀನ್‌ನಲ್ಲಿ ಸಾವಿರಾರು ಮಂದಿ ಹಸಿವೆಯಿಂದ ಸಾಯುತ್ತಿದ್ದಾರೆ. ತೀರಾ ಸೀಮಿತ ಪ್ರಮಾಣದಲ್ಲಿ ಮಾತ್ರ ನೆರವು ಸಾಮಗ್ರಿಗಳು ಗಾಝಾ ತಲುಪುತ್ತಿದ್ದು ಅವುಗಳನ್ನು ಸಂಗ್ರಹಿಸುವುದಕ್ಕೆ ಸೇರಿದ ಜನರ ಮೇಲೆ ಇಸ್ರೇಲ್ ಭದ್ರತಾ ಪಡೆಗಳು ಗುಂಡಿನ ಮಳೆ ಸುರಿಸಿ ಹಸಿದವರನ್ನು ಕೊಲ್ಲುತ್ತಿವೆ. ಕಳೆದ ಆರು ವಾರಗಳಲ್ಲಿ ಈರೀತಿಯ ನೆರವು ವಿತರಣಾ ಕೇಂದ್ರಗಳನ್ನು ನರಮೇಧದ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಮೊದಲ ಐದು ವಾರಗಳಲ್ಲಿ ಈರೀತಿ ಆಹಾರ ಪಡೆಯಲು ಬಂದ 640 ಮಂದಿಯನ್ನು

ಕೊಲ್ಲಲಾಗಿದೆ ಮತ್ತು ಸುಮಾರು 5,000 ಮಂದಿಯನ್ನು ಗಾಯಗೊಳಿಸಲಾಗಿದೆ..... ಆಹಾರ ವಿತರಣಾ ಕೇಂದ್ರಗಳಲ್ಲಿ, ತಮ್ಮ ಕುಟುಂಬಗಳಿಗಾಗಿ ಆಹಾರ ಸಂಗ್ರಹಿಸಲು ಬರುವ, ಯಾವುದೇ ಅಪಾಯ ಒಡ್ಡದ ನಾಗರಿಕರನ್ನು ಕೊಲ್ಲಲು ತಮಗೆ ಆದೇಶ ನೀಡಲಾಗಿದೆ

ಎಂದು ತಾನು ಸಂದರ್ಶಿಸಿದ ಇಸ್ರೇಲಿ ಸೈನಿಕರೇ ಹೇಳಿರುವುದಾಗಿ ಇಸ್ರೇಲಿ ದಿನಪತ್ರಿಕೆ ಹಾರೆಟ್ಝ್ ವರದಿ ಮಾಡಿದೆ. ಅಲ್ಲಿ ಹಸಿದ ತಾಯಂದಿರು, ತಮ್ಮ ಮಕ್ಕಳಿಗೆ ಹಾಲುಣಿಸಲಾಗದೆ ಆ ಮಕ್ಕಳು ಹೊಟ್ಟೆಗಿಲ್ಲದೆ ನಿಧಾನವಾಗಿ ಸಾಯುವುದನ್ನು ನಿತ್ಯ ನೋಡುತ್ತಿದ್ದಾರೆ.,,,, ಟ್ರಂಪ್ ಮತ್ತು ಅಮೆರಿಕನ್ ಸಂಸತ್ತು ಈ ವಾರ ಇಂತಹ ಯುದ್ಧಾಪರಾಧಿಯನ್ನು ಸ್ವಾಗತಿಸುತ್ತಿದ್ದಾರೆ. ಆ ಯುದ್ಧಾಪರಾಧಿಯನ್ನು ಆಧುನಿಕ ಇತಿಹಾಸದ ಅತ್ಯಂತ ಕ್ರೂರ ರಾಕ್ಷಸನೆಂದು ನೆನಪಿಡಲಾಗುವುದು. ಕೋಟ್ಯಧಿಪತಿಗಳಿಗೆ ಚುನಾವಣೆಗಳನ್ನು ಖರೀದಿಸಲು ಮತ್ತು ಕಾನೂನು ನಿರ್ಮಾಣ ಪ್ರಕ್ರಿಯೆಯ ಮೇಲೆ ಗಾಢ ಪ್ರಭಾವ ಬೀರಲು ಸಾಧ್ಯವಾಗುವ, ಅಮೆರಿಕನ್ ರಾಜಕೀಯದ ಭ್ರಷ್ಟ ಸ್ವರೂಪವನ್ನು ನೋಡಿದರೆ, ನೆತನ್ಯಾಹು ಸರಕಾರಕ್ಕೆ ಯುಎಸ್‌ಎ ಮಿಲಿಟರಿ ನೆರವು ತಲುಪುವುದನ್ನು ತಡೆಯುವುದು ಸುಲಭದ ಕೆಲಸವಾಗಿ ಕಾಣಿಸುವುದಿಲ್ಲ. ಆದರೂ ಅದನ್ನು ನಾವು ತಡೆಯಬೇಕೆಂಬುದೇ ಅಮೆರಿಕದ ಜನತೆಯ ಬಯಕೆಯಾಗಿದೆ. ನಾವೆಲ್ಲಾ ಸೇರಿ ಆ ಗುರಿಯನ್ನು ಸಾಧಿಸಬೇಕಾಗಿದೆ. ಬನ್ನಿ ನಾವು ಅದನ್ನು ಸಾಧಿಸೋಣ.’’

*****

ಈಬಾರಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿದ್ದರೆ ನಾನು ನಾರ್ವೆ ದೇಶದ ಮೇಲೆ ಬಾಂಬ್ ಹಾಕುತ್ತೇನೆ ಎಂದು ಅಮೆರಿಕಾಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂಬ ವದಂತಿ ಇತ್ತೀಚೆಗೆ ಎಲ್ಲೆಂದರಲ್ಲಿ ವ್ಯಾಪಕವಾಗಿ ಹಬ್ಬಿ ಬಿಟ್ಟಿತ್ತು. ನಿಜವಾಗಿ ಟ್ರಂಪ್ ಬಾಯಿಬಿಟ್ಟು ಹಾಗೆ ಹೇಳಿರಲಿಲ್ಲ ಎಂಬ ಸ್ಪಷ್ಟೀಕರಣ ಇದೀಗ ಹಲವೆಡೆ ಪ್ರಕಟವಾಗಿದೆ.

share
ಹವ್ವಾ ಶುಕೂರ್, ಬೋಳಾರ್
ಹವ್ವಾ ಶುಕೂರ್, ಬೋಳಾರ್
Next Story
X