ಬೀದಿಯಲ್ಲಿ ಹೊರಹೊಮ್ಮಿದ ‘ಸಮುದಾಯ’ದ ಧ್ವನಿ

1989ರಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿಯವರ ನೆನಪಿಗಾಗಿ ಅವರ ಹುಟ್ಟಿದ ದಿನವಾದ ಎಪ್ರಿಲ್ 12ರಂದು ‘ರಾಷ್ಟ್ರೀಯ ಬೀದಿ ನಾಟಕ ದಿನ’ವೆಂದು ಆಚರಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬೀದಿನಾಟಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡುತ್ತಿರುವ ನಾಡಿನ ಹೆಸರಾಂತ ಸಾಂಸ್ಕೃತಿಕ ತಂಡ ‘ಸಮುದಾಯ’ಕ್ಕೆ 50ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅದರ ಸಾಧನೆಯ ಬಗ್ಗೆ ಒಂದು ಕಿರುನೋಟ...
1975ರಲ್ಲಿ ಬೆಂಗಳೂರಿನಲ್ಲಿ ಒಂದು ಸಾಂಸ್ಕೃತಿಕ ಹಾಗೂ ರಂಗತಂಡವಾಗಿ ಪ್ರಾರಂಭವಾಗಿರುವ ‘ಸಮುದಾಯ’ವು, ಇವತ್ತು ‘ಸಮುದಾಯ ಕರ್ನಾಟಕ’ ಎಂಬ ಹೆಸರಲ್ಲಿ 50 ವರ್ಷಗಳನ್ನು ಪೂರೈಸಿ, ಹಲವಾರು ಘಟಕಗಳನ್ನೊಳಗೊಂಡ ಒಂದು ರಾಜ್ಯವ್ಯಾಪಿ ಸಾಂಸ್ಕೃತಿಕ ಸಂಘಟನೆಯಾಗಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.
1970ರ ದಶಕ. ಅದು ದೇಶದಲ್ಲಿ ಹೇಗೋ ಕರ್ನಾಟಕದಲ್ಲೂ ಒಂದು ಬಿಕ್ಕಟ್ಟಿನ ಕಾಲ. ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಗಳು ಕರ್ನಾಟಕದಲ್ಲಿ ಪ್ರಬಲವಾಗಿಯೇ ಮೂಡಿಬಂದವು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ದೇಶದ ಜನತೆಯ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಗಳನ್ನು ದಮನಕಾರಿಯಾಗಿ ನಿಭಾಯಿಸತೊಡಗಿದ್ದರು. ಕಾರ್ಮಿಕ ಚಳವಳಿಯನ್ನು ಬಗ್ಗು ಬಡಿಯಲಾಗುತ್ತಿತ್ತು. ಕರ್ನಾಟಕದಲ್ಲಿ ನಡೆದ ರೈತ ಚಳವಳಿಗಳು, ಭೂಸುಧಾರಣ ಕಾನೂನು ಜಾರಿಗೊಳಿಸುವ ಒತ್ತಾಯವನ್ನು ನಿರೂಪಿಸಿದವು. ಕೃಷಿಕೂಲಿಕಾರ ದಲಿತರ ಮೇಲಿನ ಶೋಷಣೆಗೆ ಪ್ರತಿಕ್ರಿಯೆಯಾಗಿ ದಲಿತ ಸಂಘರ್ಷ ಸಮಿತಿ ಕರ್ನಾಟಕದಲ್ಲಿ ರೂಪುಗೊಂಡಿತು. ಸಮಾಜವಾದಿ ಚಿಂತನೆಯ ಸಾಹಿತಿಗಳು 1974ರಲ್ಲಿ ಪ್ರಗತಿಪರ ಸಾಹಿತಿಗಳ ಒಕ್ಕೂಟದಿಂದ ಕನ್ನಡ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಿದರು ಕೂಡಾ. ಅದರ ಬೆನ್ನಿಗೇ 1975ರ ಜೂನ್‌ನಲ್ಲಿ ದೇಶದಲ್ಲಿ ಜಾರಿಗೊಂಡ ತುರ್ತುಪರಿಸ್ಥಿತಿ ದೇಶಾದ್ಯಂತ ಒಂದು ಕಳವಳವನ್ನು ಮೂಡಿಸಿತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಯೂರಿದ್ದ ಜನಪರ ಸಾಹಿತಿಗಳು ಮತ್ತು ರಂಗಾಸಕ್ತರು, ಸಾಂಸ್ಕೃತಿಕವಾಗಿ ಈ ಬಿಕ್ಕಟ್ಟನ್ನು ಎದುರಿಸಲು ಒಂದು ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟುವ ನಿರ್ಧಾರ ಮಾಡಿದರು. ಆ ವೇಳೆಗಾಗಲೇ ರಂಗಭೂಮಿಯಲ್ಲಿ ಬಂಡಾಯ ಧೋರಣೆಯ ನಾಟಕಗಳನ್ನು ಪ್ರದರ್ಶಿಸಿದ್ದ ಯುವ ನಿರ್ದೇಶಕ ಪ್ರಸನ್ನ ಅವರು ಈ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಸಮುದಾಯ’ ಹೆಸರಿನಲ್ಲಿ ರೂಪುಗೊಂಡ ತಂಡ ಬೆಂಗಳೂರಿನಲ್ಲಿ 1975 ಆಗಸ್ಟ್ 17ರಂದು ‘ಹುತ್ತವ ಬಡಿದರೆ’ ಎಂಬ ನಾಟಕ ಪ್ರದರ್ಶನ ನೀಡುವ ಮೂಲಕ ‘ಸಮುದಾಯ’ ಆರಂಭವಾಯಿತು. ಇದೀಗ ‘ಸಮುದಾಯ’ವು 50 ವರ್ಷಗಳನ್ನು ಪೂರೈಸಿದೆ.
ಪ್ರಸನ್ನ ಅವರ ಜೊತೆ ‘ಸಮುದಾಯ’ದ ರೂಪುರೇಷೆ ಮೂಡಿಸುವಲ್ಲಿ ತೊಡಗಿದ್ದ ಸಾಹಿತಿಗಳೆಂದರೆ ಕೆ.ವಿ.ನಾರಾಯಣ, ಕಿ.ರಂ.ನಾಗರಾಜ್, ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ ಮೊದಲಾದವರು. ಇಂಥ ವಿಚಾರವುಳ್ಳ ಹತ್ತು ಹಲವು ತಂಡಗಳು ಒಂದೇ ಧ್ಯೇಯೋದ್ದೇಶ ಇಟ್ಟುಕೊಂಡು ಕಾರ್ಯಾಚರಿಸಬೇಕೆಂಬ ತೀರ್ಮಾನವಾಯಿತು. ಎಸ್. ಮಾಲತಿ, ಎಂ.ಜಿ. ವೆಂಕಟೇಶ್, ಸಿ.ಕೆ. ಗುಂಡಣ್ಣ, ಗಂಗಾಧರ ಸ್ವಾಮಿ, ಸಿ.ಜಿ. ಕೃಷ್ಣಸ್ವಾಮಿ ಮತ್ತಿತರರು ಈ ಸಾಂಸ್ಕೃತಿಕ ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುವಲ್ಲಿ ಕೆಲಸ ಮಾಡಿದರು. ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಆ ಬಳಿಕ ಮಂಗಳೂರಿನಲ್ಲಿ, ತುಮಕೂರಿನಲ್ಲಿ, ಉಡುಪಿಯಲ್ಲಿ, ಕೆ.ಜಿ.ಎಫ್‌ನಲ್ಲಿ ಸಮಾನ ಮನಸ್ಕ ಸಾಂಸ್ಕೃತಿಕ ಸಂಗಾತಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಮುದಾಯದ ಘಟಕಗಳು ಪ್ರಾರಂಭವಾಗಿ ಮುಂದೆ ರಾಜ್ಯದ ದೂರದೂರದ ನಗರ ಪಟ್ಟಣಗಳಲ್ಲೂ ಸಮುದಾಯ ಘಟಕಗಳು ಕಾರ್ಯಾಚರಿಸತೊಡಗಿದವು. ಪ್ರಧಾನವಾಗಿ ಈ ಘಟಕಗಳು ರಂಗತಂಡಗಳೇ ಆಗಿದ್ದವು.
ಸಮುದಾಯದ ಇತಿಹಾಸದಲ್ಲಿ ರಂಗಭೂಮಿಯೇ ಪ್ರಧಾನವಾದುದು ನಿಜ. ಆದರೆ ಜನ ಶಿಕ್ಷಣವನ್ನು ನೀಡುವ ಬೀದಿ ನಾಟಕಗಳನ್ನು ಮತ್ತು ನಾಟಕ ಜಾಥಾಗಳನ್ನು ಒಂದು ಪ್ರಧಾನ ಸಾಂಸ್ಕೃತಿಕ ಸಾಧನವಾಗಿ ಬಳಸಿದ್ದು ಸಮುದಾಯದ ವೈಶಿಷ್ಟ್ಯ. ಜೊತೆಗೆ ಕವಿ ಸಿದ್ಧಲಿಂಗಯ್ಯನವರ ಕವಿತೆಗಳೂ ಜನಪ್ರಿಯ ಹಾಡುಗಳಾದುವು. ಇವತ್ತಿಗೂ ಆ ಹಾಡುಗಳು ಹಾಡಲ್ಪಡುತ್ತಿದ್ದು, ಕ್ರಾಂತಿಗೀತೆಗಳು ಎನಿಸಿಕೊಂಡಿವೆ. ಪ್ರಸನ್ನ ಅವರು 1977 ಜೂನ್‌ನಲ್ಲಿ ಒಂದು ರಾಜ್ಯ ಮಟ್ಟದ ಬೀದಿ ನಾಟಕ ಹಾಗೂ ರಂಗಭೂಮಿ ತರಬೇತಿ ಶಿಬಿರವನ್ನು ಬೆಂಗಳೂರಿನ ಸಮೀಪ ಕುಂಬಳಗೋಡಿನಲ್ಲಿ ನಿರ್ದೇಶಿಸಿದಾಗ, ರಾಜ್ಯದ ವಿವಿಧೆಡೆಗಳಿಂದ ಯುವ ನಾಟಕಾಸಕ್ತರು ಭಾಗವಹಿಸಿದ್ದರು. ಇದರಿಂದ ಜನಜಾಗೃತಿಗೆ ಬೀದಿ ನಾಟಕ ಸಮರ್ಥ ಮಾಧ್ಯಮ ಎಂಬುದು ಸಮುದಾಯದ ಅರಿವಿಗೆ ಬಂತು. ಅಲ್ಲದೆ ಮುಂದೆ ಖ್ಯಾತ ರಂಗನಿರ್ದೇಶಕ ಬಾದಲ್ ಸರ್ಕಾರ್ ಅವರೂ 1979ರಲ್ಲಿ ಅಂಥದ್ದೇ ಒಂದು ಕಾರ್ಯಾಗಾರವನ್ನು ಸಮುದಾಯಕ್ಕಾಗಿ ನಡೆಸಿಕೊಟ್ಟರು. ಬೀದಿ ನಾಟಕದ ಪ್ರಯೋಗಗಳು ದೇಶದ ಬೇರೆ ಬೇರೆ ಭಾಷಾ ಪ್ರದೇಶಗಳಲ್ಲಿ ಆಯಾ ಭಾಷೆಗಳಲ್ಲಿ ನಡೆದಿದ್ದವಾದರೂ, ಬೀದಿ ನಾಟಕಗಳನ್ನು ಒಂದು ಜಾಥಾವಾಗಿ ಕೊಂಡುಹೋದುದು ಪ್ರಥಮವಾಗಿ ಕರ್ನಾಟಕದಲ್ಲೇ. 1979ರಲ್ಲಿ ‘‘ಹೊಸ ಮೌಲ್ಯದೆಡೆಗೆ’’ ಹೆಸರಲ್ಲಿ ಹೊರಟ 2 ಜಾಥಾಗಳು ಒಂದು ತಿಂಗಳ ಬಳಿಕ ಧಾರವಾಡದಲ್ಲಿ ಸಮಾಪನಗೊಂಡವು. ಇಂಥದೊಂದು ರಾಜ್ಯವ್ಯಾಪಿ ಜಾಥಾ ರಾಜ್ಯದ ಪ್ರಜ್ಞಾವಂತ ಜನಸಮೂಹದಲ್ಲೂ ಪುಳಕವನ್ನು ಉಂಟು ಮಾಡಿತು. ಈ ಜಾಥಾದಲ್ಲಿ ಪ್ರದರ್ಶಿತವಾದ ‘ಬೆಲ್ಚಿ’ ನಾಟಕವು ಭಾರೀ ಜನಪ್ರಶಂಸೆ ಗಳಿಸಿತು. ಜಾಥಾ ಬಳಿಕದ ವರ್ಷಗಳಲ್ಲಿ ಸಮುದಾಯದ ಹಲವು ಘಟಕಗಳು ‘ಬೆಲ್ಚಿ’ ನಾಟಕವನ್ನು ಪ್ರದರ್ಶಿಸಿದ್ದು, ಈ ಪ್ರದರ್ಶನಗಳ ಸಂಖ್ಯೆ ಸಾವಿರವನ್ನು ಮೀರಿವೆ. ಮುಂದಿನ ವರ್ಷದಲ್ಲಿ (1980ರಲ್ಲಿ) ರಾಜ್ಯದಲ್ಲಿ ರೈತರ ಸಂಕಷ್ಟಗಳು ಹೆಚ್ಚಾಗಿ, ರೈತ ಸಂಘಟನೆಗಳಿಂದ ಸರಕಾರದ ವಿರುದ್ಧವಾಗಿ ತೀವ್ರತರ ಹೋರಾಟಗಳು ನಡೆದವು. ಈ ವೇಳೆಗೆ ರಾಜ್ಯದಲ್ಲಿ 22 ಸಮುದಾಯ ಘಟಕಗಳಿದ್ದುವು. ರೈತ ಹೋರಾಟದ ಆಶಯವನ್ನು ಪ್ರತಿಬಿಂಬಿಸುವ ಬೀದಿ ನಾಟಕ ಜಾಥಾಗಳನ್ನು ಸಮುದಾಯದ ಘಟಕಗಳಿರುವ ಜಿಲ್ಲೆಗಳಲ್ಲಿ 1981ರಲ್ಲಿ ‘ರೈತನೆಡೆಗೆ ಜಾಥಾ’ ಹೆಸರಲ್ಲಿ ತಿಂಗಳ ಕಾಲ ರಾಜ್ಯಾದ್ಯಂತ ನಡೆಸಲಾಯಿತು. ‘ವಿಶ್ವಶಾಂತಿಗಾಗಿ ಬಣ್ಣದ ನಡೆ’’ ಹೆಸರಿನಲ್ಲಿ 1984ರಲ್ಲಿ ರಾಜ್ಯದ ಪ್ರಸಿದ್ಧ ಚಿತ್ರಕಲಾವಿದರಾದ ಎಸ್.ಬಿ.ಸೊಲಬಕ್ಕನವರ್ ಮತ್ತು ಕರಿರಾಜು ಅವರು ರಚಿಸಿದ 120 ಅಡಿ ಉದ್ದವಾದ ಪೈಂಟಿಂಗ್ ಭಿತ್ತಿಯನ್ನು ರಾಜ್ಯದ ಪ್ರಮುಖ ನಗರಗಳಿಗೆ ಕೊಂಡು ಹೋಗಿ ತಿಂಗಳ ಕಾಲ ಪ್ರದರ್ಶಿಸಲಾಯಿತು. ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ ಮೊದಲಾದ ಕಾರಣಗಳಿಂದ ರಾಜ್ಯದಲ್ಲಿ ಬರಗಾಲ ಬಂದಿತ್ತು. ರಾಜ್ಯದಲ್ಲಿ ಸಮುದಾಯಕ್ಕೆ 10 ವರ್ಷಗಳೂ ಸಂದಿದ್ದವು. ಈ ಹಿನ್ನೆಲೆಯಲ್ಲಿ ‘ಭೀಕರ ಬರದೆದುರು ಸಮುದಾಯದ ದಶಕದ ಜಾಥಾ’ವನ್ನು ಜಿಲ್ಲೆ ಜಿಲ್ಲೆಗಳಲ್ಲಿ ಆಯೋಜಿಸಲಾಯಿತು; ಬರಗಾಲ ಮಾನವ ನಿರ್ಮಿತವೇ ಹೊರತು ಕೇವಲ ಪ್ರಕೃತಿದತ್ತವಾದುದಲ್ಲ ಎಂದು ಜಾಥಾ ನಾಟಕಗಳಲ್ಲಿ ನಿರೂಪಿಸಲಾಯಿತು. ಈ ಏಳೆಂಟು ವರ್ಷಗಳಲ್ಲಿ ಉಡುಪಿ, ಬೆಂಗಳೂರು ಘಟಕಗಳು ಚಿತ್ರ ಸಮುದಾಯವನ್ನು, ಕೆಲವು ಘಟಕಗಳು ಗ್ರಂಥ ಸಮುದಾಯವನ್ನು ತಮ್ಮ ಪ್ರಮುಖ ಚಟುವಟಿಕೆಗಳಾಗಿ ಮಾಡಿಕೊಂಡಿದ್ದವು.
1989ರಲ್ಲಿ ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಹತ್ಯೆಗೀಡಾದಾಗ ಎಪ್ರಿಲ್ 10, 11ರಂದು ರಾಜ್ಯದ ಎಲ್ಲ ಸಮುದಾಯ ರಂಗತಂಡಗಳೂ ಒಟ್ಟು ಸೇರಿ, ಬೆಂಗಳೂರಿನಲ್ಲಿ ಬೀದಿ ನಾಟಕಗಳ ಉತ್ಸವವನ್ನು ಏರ್ಪಡಿಸಿತು. ಸಮುದಾಯಕ್ಕೆ 20 ವರ್ಷ ತುಂಬಿದಾಗ 1995ರಲ್ಲಿ ಮತ್ತು ಸಮುದಾಯಕ್ಕೆ 25 ವರ್ಷ ನಡೆಯುತ್ತಿದ್ದಾಗ 2000ದಲ್ಲಿ ಮೂರು ಮೂರು ದಿನಗಳ ನಾಟಕ ಹಾಗೂ ಸಾಹಿತ್ಯಕ ಉತ್ಸವವನ್ನು ಎಲ್ಲ ಘಟಕಗಳ ಸೇರುವಿಕೆಯಿಂದ ಬೆಂಗಳೂರಿನಲ್ಲಿ ನಡೆಸಲಾಯಿತು.
ಸಮುದಾಯವು ಸಂಘಟನಾತ್ಮಕವಾಗಿ ದುರ್ಬಲಗೊಂಡ ಸನ್ನಿವೇಶ ಬಹುಶಃ 1990ರ ಸಂಪೂರ್ಣ ಸಾಕ್ಷರತಾ ಆಂದೋಲನದ ಭಾಗವಾಗಿ, ಭಾರತ ಜ್ಞಾನವಿಜ್ಞಾನ ಜಾಥಾವನ್ನು ರಾಜ್ಯಾದ್ಯಂತ ಹಮ್ಮಿಕೊಂಡ ವೇಳೆ ಉಂಟಾಯಿತು. ಸರಕಾರಗಳಿಂದ ಬೆಂಬಲಿತವಾದ ಈ ಬೀದಿ ನಾಟಕ ಜಾಥಾ ಕಾರ್ಯಕ್ರಮ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೂವರೆ ತಿಂಗಳ ಕಾಲ ನಡೆಯಿತು. ಸಮುದಾಯ ಘಟಕಗಳು ಅಸ್ತಿತ್ವದಲ್ಲಿದ್ದ ಜಿಲ್ಲೆಗಳಲ್ಲಿ, ಸಮುದಾಯದ ಕಲಾವಿದರು ತೊಡಗಿದ್ದುದರಿಂದ ಆ ಜಾಥಾಗಳು ಅತ್ಯಂತ ಯಶಸ್ವಿಯಾದುವು. ಇದರ ಪರಿಣಾಮವೇನೆಂದರೆ ಸಮುದಾಯ ಘಟಕಗಳ ಅನೇಕ ಕಲಾವಿದರು ಮುಂದೆ ಸಮುದಾಯದ ಹೊರತಾದ ಸಾಂಸ್ಕೃತಿಕ ಹಾಗೂ ರಂಗಭೂಮಿ ತಂಡಗಳಲ್ಲಿ ತೊಡಗಿಕೊಂಡುದು ಇಲ್ಲವೇ ತಮ್ಮದೇ ಆದ ಸ್ಥಳೀಯ ರಂಗತಂಡಗಳನ್ನು ರಚಿಸಿಕೊಂಡುದು. ಈ ವೇಳೆಗೆ ಸಮುದಾಯವನ್ನು ಸಕ್ರಿಯವಾಗಿ ಇರಿಸುವಲ್ಲಿ ದಿ. ಸಿ.ಆರ್.ಭಟ್ (ಧಾರವಾಡ), ಆರ್‌ಕೆ. ಹುಡಗಿ (ಗುಲ್ಬರ್ಗಾ), ಜಿ.ವಿ.ಕಾರಂತ (ಕುಂದಾಪುರ), ಅಚ್ಯುತ (ಕೆ.ಜಿ.ಎಫ್) ಪ್ರಧಾನವಾಗಿ ದುಡಿದಿರುತ್ತಾರೆ. ಈ ಅವಧಿಯಲ್ಲಿ ಸಮುದಾಯದಿಂದಲೇ ಮೂಡಿಬಂದವರಾದರೂ, ಪ್ರಸನ್ನ, ಸಿ.ಜಿ. ಕೃಷ್ಣ ಸ್ವಾಮಿ, ಸಿ. ಬಸವಲಿಂಗಯ್ಯ, ಎಚ್. ಜನಾರ್ದನ್ (ಹಾಡುಗಾರರಾಗಿಯೂ), ಮೋಹನಚಂದ್ರ, ಐ.ಕೆ. ಬೊಳುವಾರ್, ಶಶಿಧರ ಬಾರಿಘಾಟ್ ಮೊದಲಾದವರು ಸಮುದಾಯದ ಹೊರಗೂ ಪ್ರತಿಭಾವಂತ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅಂತೆಯೇ ಶಶಿಧರ ಅಡಪ (ರಂಗ ವಿನ್ಯಾಸ), ಮುದ್ದಣ್ಣ (ಬೆಳಕಿನ ವಿನ್ಯಾಸ) ಮೊದಲಾದವರು ರಂಗಭೂಮಿ ಸಂಬಂಧಿತ ಪರಿಕರ ವಿನ್ಯಾಸದಲ್ಲಿ ದೊಡ್ಡ ಹೆಸರಾಗಿದ್ದಾರೆ.
ಇಸವಿ 2000ದಿಂದ 2005ರ ವರೆಗೆ ಕ್ಷೀಣಗೊಂಡಿದ್ದ ಸಮುದಾಯದ ರಾಜ್ಯ ಸಮಿತಿ 2006ರಲ್ಲಿ ಮೈಕೊಡವಿಕೊಂಡು ಧಾರವಾಡದಲ್ಲಿ ಸಮಾವೇಶ ಗೊಂಡಿತು. ಆರ್.ಕೆ.ಹುಡಗಿ, ಟಿ.ಸುರೇಂದ್ರರಾವ್, ಬಿ.ಪಿ.ಈಳಗೇರ, ಅಚ್ಯುತ, ಕೆ.ಎಸ್.ವಿಮಲಾ, ವಾಸುದೇವ ಉಚ್ಚಿಲ, ದೇವೇಂದ್ರ ಗೌಡ, ವಸಂತರಾಜ್ ಮೊದಲಾದವರು ಈ ಪುನಶ್ಚೇತನಕ್ಕೆ ಹೆಗಲುಕೊಟ್ಟರು. ಅಲ್ಲಿಂದೀಚೆಗೆ ಸಮುದಾಯ ರಾಜ್ಯಸಮಿತಿ, ನಿಷ್ಕ್ರಿಯವಾಗಿದ್ದ ಘಟಕಗಳನ್ನು ಚುರುಕುಗೊಳಿಸುತ್ತಾ, ಇಲ್ಲವೇ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮುನ್ನಡೆ ಸಾಧಿಸುತ್ತಿದೆ.
ಬೀದಿನಾಟಕ ಜಾಥಾಗೆ ಹೋಲಿಕೆಯುಳ್ಳ ‘ಕಾವ್ಯರಂಗ ಜಾಥಾ’ವನ್ನು ‘ರಂಗ ಸಂಚಾರ’ವಾಗಿ 2015-16ರಲ್ಲಿ ರಾಜ್ಯ ಸಮಿತಿ ರೂಪಿಸಿತು. ಕನ್ನಡದ ಪ್ರಖ್ಯಾತ ಕಾವ್ಯ ಭಾಗಗಳನ್ನು ಗುಂಪಿನಲ್ಲಿ ಹಾಡಿ ಅಭಿನಯಿಸುವ ರಂಗ ಪ್ರಯೋಗವನ್ನು ರೂಪಿಸಿದವರು ಹೊಸ ತಲೆಮಾರಿನ ನಿರ್ದೇಶಕ ಡಾ|ಶ್ರೀಪಾದ ಭಟ್ ಅವರು. ಕಾವ್ಯರಂಗದ ಕಲಾತಂಡ ಮತ್ತೆರಡು ನಾಟಕಗಳನ್ನೂ ಸಿದ್ಧಪಡಿಸಿಕೊಂಡು, ರಾಜ್ಯದೆಲ್ಲೆಡೆ ಸಂಚಾರ ಮಾಡಿ ರಂಗಭೂಮಿಯಲ್ಲಿ ಒಂದು ವಿಭಿನ್ನ ವಿನ್ಯಾಸವನ್ನು ರೂಪಿಸಿತು. ಮುಂದಿನ ವರ್ಷ 2017ರಲ್ಲಿ ಹೊಸ ಕವಿತೆಗಳನ್ನು ಬಳಸಿದ ರೂಪಕಗಳನ್ನು ನಿರ್ಮಿಸಿ ಶ್ರೀಪಾದ ಭಟ್ಟರು ರೂಪಿಸಿದ ಎರಡನೇ ಕಾವ್ಯರಂಗ ತಂಡ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಂಚಾರ ಮಾಡಿತು.
ಕೋಮುವಾದ ರಾಜಕೀಯವಾಗಿ ಬಲಗೊಳ್ಳುತ್ತಿರುವುದು ದೇಶದ ಹೇಗೋ ಕರ್ನಾಟಕದ ಬಹುತ್ವ ಹಾಗೂ ಸೌಹಾರ್ದಕ್ಕೆ ಸವಾಲಾಗಿದೆ. ಸಮುದಾಯ ಸಂಘಟನೆ ಇವತ್ತು ಎದುರಿಸಬೇಕಾದ ಪ್ರಥಮ ಸವಾಲು ಇದೇ ಆಗಿದೆ. ಸಮುದಾಯ ಘಟಕಗಳು ಸಪ್ಧರ್ ಹಷ್ಮಿಯವರ ‘ಅಲಿಘರ್’ ನಾಟಕವನ್ನು ಆಡುವ ಕಾಲದಿಂದಲೂ ಈ ಸವಾಲನ್ನು ಸಾಂಸ್ಕೃತಿಕವಾಗಿ ಎದುರಿಸುವ ಕೆಲಸವನ್ನು ವಿವಿಧ ರೀತಿಯಲ್ಲಿ ಮಾಡುತ್ತಲೇ ಬಂದಿದೆ. 2018 ಜನವರಿ 30 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸೌಹಾರ್ದ ಮಾನವ ಸರಪಣಿ’ಯಲ್ಲಿ ಸಮುದಾಯ ಸಕ್ರಿಯ ಪಾತ್ರ ವಹಿಸಿತು. ಅದೇ ವರ್ಷ ಕರ್ನಾಟಕದ ಸೌಹಾರ್ದ ತಾಲೂಕುಗಳೆಂದು ಪ್ರಖ್ಯಾತವಾಗಿರುವ ಉಡುತಡಿ, ಮಸ್ಕಿ ಮತ್ತು ಚಿಂತಾಮಣಿಗಳಲ್ಲಿ ರಾಜ್ಯ ಸಮಿತಿ ಸ್ಥಳೀಯ ಘಟಕಗಳ ಸಹಕಾರದಿಂದ ‘ಸೌಹಾರ್ದ ಕರ್ನಾಟಕ ಪರಂಪರೆ ಸಮಾವೇಶ’ಗಳನ್ನು ಹಮ್ಮಿಕೊಂಡಿತು.
ಸಮುದಾಯ ಅಸ್ತಿತ್ವಕ್ಕೆ ಬಂದು 50 ವರ್ಷಗಳನ್ನು ಪೂರ್ಣಗೊಳಿಸುತ್ತಿರುವುದು ನಿಜವಾದರೂ, ಈ ಚಳವಳಿಗೆ ಆದ್ಯರು 1936ರಲ್ಲೇ ರೂಪುಗೊಂಡ ಪ್ರೊಗ್ರಸ್ಸಿವ್ ರೈಟರ್ಸ್ ಅಸೋಸಿಯೇಶನ್ ಮತ್ತು 1941ರಲ್ಲಿ ಮೂಡಿಬಂದ ‘ಇಪ್ಟಾ’ (ಇಂಡಿಯನ್ ಪೀಪಲ್ಸ್ ಥಿಯೇಟರ್ಸ್ ಅಸೋಸಿಯೇಶನ್). 1973ರಲ್ಲಿ ಆರಂಭಗೊಂಡ ಸಫ್ದರ್ ಹಷ್ಮಿಯವರ ನೇತೃತ್ವದ ದಿಲ್ಲಿಯ ‘ಜನಮ್’ (ಜನ ನಾಟ್ಯ ಮಂಚ್)ಗೆ ಸಮಾನಾಂತರವಾಗಿ ‘ಸಮುದಾಯ’ ಕೂಡಾ ಬೆಳೆದು ಬಂದಿದೆ. ಜನಮ್ ಒಂದೇ ತಂಡವಾಗಿದ್ದರೆ, ಸಮುದಾಯ ಕರ್ನಾಟಕ ಹಲವು ತಂಡಗಳ ಒಕ್ಕೂಟ. ಒಂದೊಂದು ತಂಡಗಳ ಏರಿಳಿತಗಳು ಅಷ್ಟಿಷ್ಟು ಒಕ್ಕೂಟಕ್ಕೆ ಬಾಧೆ ಮಾಡಿದ್ದರೂ, 50 ವರ್ಷಗಳಲ್ಲಿ ಸಮುದಾಯ ತನ್ನ ಕರ್ತವ್ಯವನ್ನು ನಿರ್ವಹಿಸಿಕೊಂಡು ಸಾಗಿದೆ.






