Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರೀತಿ-ಪ್ರೇಮದ ಸೋಗಿನ ಮೂಲಕವೂ...

ಪ್ರೀತಿ-ಪ್ರೇಮದ ಸೋಗಿನ ಮೂಲಕವೂ ನಡೆಯಬಹುದು ಹೆಣ್ಣು ಮಕ್ಕಳ ಕಳ್ಳ ಸಾಗಣೆ

ಬಿ.ಜಿ. ಪೂರ್ಣಿಮಬಿ.ಜಿ. ಪೂರ್ಣಿಮ8 Oct 2026 10:19 AM IST
share
ಪ್ರೀತಿ-ಪ್ರೇಮದ ಸೋಗಿನ ಮೂಲಕವೂ ನಡೆಯಬಹುದು  ಹೆಣ್ಣು ಮಕ್ಕಳ ಕಳ್ಳ ಸಾಗಣೆ

ಬಹಳಷ್ಟು ಪ್ರಕರಣಗಳಲ್ಲಿ ಹೆಚ್ಚು ಸಂಬಳ ಇರುವ ಕೆಲಸವನ್ನು ಕೊಡಿಸುವುದಾಗಿ ಹೇಳಿ ನಂಬಿಸಿ, ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡುವ ಮೂಲಕ ವೇಶ್ಯಾವಾಟಿಕೆ, ಬಾರ್‌ಗಳಿಗೆ ಸೇರಿಸಿ ದೌರ್ಜನ್ಯ ಎಸಗಲಾಗುತ್ತಿದೆ. ಆದರೆ ಇಂದು ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುವ ಮೂಲಕವೂ ಕಳ್ಳ ಸಾಗಣೆ ಮಾಡಲಾಗುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ಹೆಣ್ಣು ಮಕ್ಕಳು ಪ್ರೀತಿಯ ವಿಚಾರದಲ್ಲಿ ಎಚ್ಚರದಿಂದಿರಬೇಕು.

ಹಾಗಂತ ಪ್ರೀತಿ ಮಾಡುವವರೆಲ್ಲರೂ ಮೋಸ ಮಾಡುತ್ತಾರೆ ಎಂದು ಹೇಳಲಾಗದು. ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೆಣ್ಣು ಮಕ್ಕಳನ್ನು ಪ್ರೀತಿಯ ಮೂಲಕವೂ ಕಳ್ಳ ಸಾಗಣೆ ಮಾಡಲಾಗುತ್ತಿರುವ ಸಂಗತಿಗಳು ಕಂಡುಬರುತ್ತಿವೆ. ಪ್ರೇಮ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಪೋಷಕರಿಂದ ಸಂಪರ್ಕವನ್ನು ಕಡಿದು ಕೊಳ್ಳುವುದನ್ನೇ ಅಸ್ತ್ರವನ್ನಾಗಿಸಿಕೊಂಡಿರುವವರು ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ.

ಪ್ರೀತಿಯ ಮೂಲಕ ಹೆಣ್ಣು ಮಕ್ಕಳನ್ನು ಕಳ್ಳ ಸಾಗಣೆ ನಡೆಸಿ, ಹೇಗೆ ದೌರ್ಜನ್ಯ ಎಸಗುತ್ತಾರೆ ಎಂಬುದಕ್ಕೆ ಎರಡು ನೈಜ ಘಟನೆಗಳು ಇಲ್ಲಿವೆ. ಇತ್ತೀಚೆಗೆ ಮೈಸೂರಿನ ಎಟಿಐ ತರಬೇತಿ ಕೇಂದ್ರದಲ್ಲಿ ಮಕ್ಕಳ ರಕ್ಷಣೆ ಮತ್ತು ಮಾನವ ಕಳ್ಳಸಾಗಣೆ ಕುರಿತ ಮೂರು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದಾಗ, ಹೆಣ್ಣು ಮಕ್ಕಳ ರಕ್ಷಣೆ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯ ಸ್ಥಾಪಕರೊಬ್ಬರು ಹಂಚಿಕೊಂಡ ನೈಜ ಕಥೆಯಿದು.

ಅವರ ಸ್ನೇಹಿತರೊಬ್ಬರ 18 ವರ್ಷದ ಏಕೈಕ ಮಗಳು ರೂಪವತಿಯಾಗಿದ್ದಳಲ್ಲದೆ, ಓದಿನಲ್ಲೂ ಮುಂದಿದ್ದಳಂತೆ. ವಯೋಸಹಜ ಆಕರ್ಷಣೆಯಿಂದಾಗಿ ಆಕೆ ಒಬ್ಬ ಹುಡುಗನ ಪ್ರೀತಿಗೆ ಬೀಳುತ್ತಾಳೆ. ಹುಡುಗ ಇವಳಿಗೆ ತಕ್ಕವನಲ್ಲದ ಕಾರಣ ಆಕೆಯ ಪೋಷಕರು ವಿದ್ಯಾಭ್ಯಾಸವನ್ನು ಹಾಳು ಮಾಡಿಕೊಳ್ಳಬೇಡ ಎಂದು ತುಂಬಾ ಬುದ್ಧಿವಾದ ಹೇಳುತ್ತಾರೆ. ಆದರೆ ಕುರುಡು ಪ್ರೀತಿಯಲ್ಲಿದ್ದ ಅವಳಿಗೆ ಯಾರ ಮಾತೂ ಹಿಡಿಸುವುದಿಲ್ಲ. ಒಂದು ದಿನ ಅಪ್ಪ ಅಮ್ಮನಿಗೆ ಹೇಳದೆ ಆತನೊಂದಿಗೆ ಮನೆ ಬಿಟ್ಟು ಹೊರಟು ಹೋಗುತ್ತಾಳೆ. ತಮ್ಮ ಮಾತು ಕೇಳದೇ ಹೋದಳಲ್ಲ ಎಂಬ ಕಾರಣಕ್ಕೆ ಆಕೆಯ ತಂದೆತಾಯಿ ನೋವಿನಲ್ಲಿ ತಮಗೆ ಮಗಳೇ ಇರಲಿಲ್ಲ ಎಂದು ಮರೆತು ಬದುಕಲು ತೀರ್ಮಾನಿಸಿ, ಆಕೆಯೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳುತ್ತಾರೆ.

ಆದರೆ ಪ್ರೀತಿ ಮಾಡಿದ ಹುಡುಗನೊಂದಿಗೆ ಸಂತೋಷದಿಂದ ಇರಬಹುದು ಎಂದುಕೊಂಡು ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ಹೋದವಳಿಗೆ ಕೆಲವೇ ಕೆಲವು ತಿಂಗಳುಗಳಲ್ಲಿ ಆತನ ಇನ್ನೊಂದು ಮುಖ ಕಾಣಲಾರಂಭಿಸುತ್ತದೆ. ಯಾವುದೇ ದುಡಿಮೆ ಇಲ್ಲದ ಆತ ಹಣ ಸಂಪಾದನೆಗಾಗಿ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು, ಆಕೆಗೆ ಅವರೊಂದಿಗೆ ಸಹಕರಿಸುವಂತೆ ದೌರ್ಜನ್ಯ ನಡೆಸಲು ಆರಂಭಿಸುತ್ತಾನೆ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋದ ಹುಡುಗಿ, ಅಮಲು ಬರುವ ದುಶ್ಚಟಗಳಿಗೆ ದಾಸಳಾಗುತ್ತಾಳೆ. ಅಪ್ಪ ಅಮ್ಮನ ಮಾತು ಕೇಳದೆ ತಪ್ಪು ಮಾಡಿದ ಕಾರಣ ತನ್ನ ನೋವನ್ನು ಅವರಿಗೆ ಹೇಳುವಂತಿಲ್ಲ. ಯಾವುದೇ ಕಾರಣಕ್ಕೂ ಅಪ್ಪ ಅಮ್ಮನನ್ನು ಮತ್ತೆ ಸ್ವೀಕರಿಸುವುದಿಲ್ಲ ಎಂದು ಭಾವಿಸಿದ ಆಕೆ, ಪ್ರತೀ ದಿನ ನಡೆಯುತ್ತಿದ್ದ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಾಳೆ.

ಹದಿಹರೆಯದಲ್ಲಿ ಹುಡುಗ-ಹುಡುಗಿ ಆಕರ್ಷಣೆಗೆ ಒಳಗಾಗುವುದು ಪ್ರಕೃತಿ ಸಹಜ ಕ್ರಿಯೆ. ಆದರೆ ಓದಿನಲ್ಲಿ ತುಂಬಾ ಮುಂದಿದ್ದ ಈ ಹುಡುಗಿ ತಾನು ಪ್ರೇಮಿಸಿದ ಹುಡುಗನಿಂದಲೇ ಮೋಸ ಹೋಗಿ, ಸಾವಿನಲ್ಲಿ ಅಂತ್ಯ ಕಾಣುತ್ತಾಳೆ. ಮಗಳು ನಮ್ಮನ್ನು ಬಿಟ್ಟು ಹೋದಳಲ್ಲ ಎಂಬ ಕಾರಣಕ್ಕೆ ಅವಳೊಂದಿಗೆ ಸಂಬಂಧವನ್ನೇ ಕಡಿದುಕೊಳ್ಳುವ ಪೋಷಕರು ಆಕೆಯ ಜೊತೆಗೆ ಸ್ವಲ್ಪ ಮಟ್ಟಿಗಾದರೂ ಸಂಪರ್ಕವನ್ನು ಇಟ್ಟುಕೊಂಡಿದ್ದರೆ, ಆಕೆಯ ಮೇಲೆ ದೌರ್ಜನ್ಯ ಎಸಗಲು ಆತನಿಗೆ ಧೈರ್ಯ ಬರುತ್ತಿರಲಿಲ್ಲ. ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಇದೊಂದು ತಪ್ಪಿನಿಂದ ಅವಳನ್ನು ರಕ್ಷಿಸಿದ್ದರೆ, ಓದಿನಲ್ಲಿ ಮುಂದಿದ್ದ ಹುಡುಗಿ ಮುಂದೆ ತನ್ನ ಓದನ್ನು ಮುಂದುವರಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗುಡ್ತಿದ್ದಳು.

ಮತ್ತೊಂದು ಘಟನೆ ನಡೆದಿರುವುದು ಗ್ರಾಮೀಣ ಭಾಗದಲ್ಲಿ. 20 ವರ್ಷದ ಹುಡುಗಿಯನ್ನು ಪಕ್ಕದ ಊರಿನ ಹುಡುಗನೊಬ್ಬ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗಿಯನ್ನು ಕರೆದುಕೊಂಡು ಓಡಿ ಹೋದ ಹುಡುಗ, ಮೂರ್ನಾಲ್ಕು ತಿಂಗಳ ನಂತರ ಊರಿಗೆ ಒಬ್ಬನೇ ಮರಳಿ ಬರುತ್ತಾನೆ. ಜನರು ‘ನಿನ್ನ ಹುಡುಗಿ ಎಲ್ಲಪ್ಪ?’ ಎಂದು ಕೇಳಿದರೆ, ‘ಅವಳು ನನಗೆ ಮೋಸ ಮಾಡಿ ಮತ್ತೊಬ್ಬನೊಂದಿಗೆ ಓಡಿ ಹೋದ್ಲು’ ಎಂದು ಹೇಳುತ್ತಾನೆ. ಈತನೊಂದಿಗೆ ಓಡಿ ಹೋದಾಗಲೇ, ತಮ್ಮ ಪಾಲಿಗೆ ಮಗಳು ಸತ್ತು ಹೋದಳು ಎಂದುಕೊಂಡು ಇದ್ದ ಹುಡುಗಿಯ ಪೋಷಕರು, ತಮ್ಮ ಮಗಳು ನಿಜವಾಗಿಯೂ ಇನ್ನೊಬ್ಬನ ಜೊತೆ ಹೋಗಿದ್ದಾಳೆಯೇ ಅಥವಾ ಈತನೇ ಆಕೆಯನ್ನು ಏನಾದರೂ ಮಾಡಿರಬಹುದಾ ಎಂಬುದನ್ನು ತಿಳಿಯಲು ಪ್ರಯತ್ನಿಸಲಿಲ್ಲ. ಹುಡುಗ ಹೇಳುತ್ತಿರುವುದು ನಿಜ ಇರಬೇಕು ಎಂದು ನಂಬುತ್ತಾರೆ. ಇಂತಹ ಪ್ರಕರಣಗಳಲ್ಲಿ ಆ ಹುಡುಗ ಹೇಳುತ್ತಿರುವುದು ನಿಜವೇ ಎಂಬುದನ್ನು ತಿಳಿಯಲು ಹಾಗೂ ಕಾಣೆಯಾಗಿರುವ ತಮ್ಮ ಮಗಳ ಬಗ್ಗೆ ಪೋಷಕರೇ ದೂರು ನೀಡದಿದ್ದಾಗ, ಇಂತಹ ಪ್ರಕರಣಗಳು ಬೆಳಕಿಗೆ ಬರದೆ ಹಾಗೆಯೇ ಮುಚ್ಚಿ ಹೋಗುತ್ತವೆ. ಕಾಣೆಯಾದ ಹುಡುಗಿ ದಿನ ಕಳೆದಂತೆ ಎಲ್ಲರ ಮನಸ್ಸಿನಿಂದಲೂ ಕಾಣೆಯಾಗುತ್ತಾಳೆ.

ಈ ಎರಡೂ ಘಟನೆಗಳನ್ನು ನೋಡಿದರೆ, ತಮ್ಮ ಪೋಷಕರೊಂದಿಗೆ ಸಂಪರ್ಕವನ್ನು ಕಡಿದು ಕೊಳ್ಳುವ ಹೆಣ್ಣು ಮಕ್ಕಳು ಸಾಗಣೆಯ ಜಾಲಕ್ಕೆ ಸುಲಭವಾಗಿ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ಪ್ರೀತಿಸಿ ಮದುವೆಯಾಗುವವರು ಮೊದಲು ಪೋಷಕರನ್ನು ಒಪ್ಪಿಸಿ, ಅವರ ಅನುಮತಿ ಪಡೆದು ಮದುವೆಯಾಗುವುದು ಒಳ್ಳೆಯದು. ಹಾಗೆಯೇ ತಮ್ಮ ಸಲಹೆಯನ್ನು ಮೀರಿ ಇಂತಹ ಸಮಸ್ಯೆಗೆ ಸಿಲುಕಿಕೊಳ್ಳುವ ತಮ್ಮ ಮಗಳನ್ನು ಕ್ಷಮಿಸಿ, ಅವಳ ಮೇಲೆ ನಿಗಾ ಇರಿಸಬೇಕು.

ಈ ಉದಾಹರಣೆಗಳ ಇಬ್ಬರೂ ಹೆಣ್ಣು ಮಕ್ಕಳಿಗೆ ಪೋಷಕರ ರಕ್ಷಣೆ ಇದ್ದಿದ್ದರೆ, ಇಂತಹ ದೌರ್ಜನ್ಯಕ್ಕೆ ಅವರು ಒಳಗಾಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಪೋಷಕರನ್ನು ದೂರ ಮಾಡಿಕೊಂಡು, ಕೆಲವೇ ಕೆಲವು ದಿನಗಳಲ್ಲಿ ಪರಿಚಯವಾದವನನ್ನು ನಂಬಿ ಮೋಸ ಹೋಗಬಾರದು. ಒಂದು ಸಾರಿ ಇಂತಹವರ ಕೈಗೆ ಸಿಲುಕಿಕೊಂಡರೆ, ಅಲ್ಲಿಂದ ಬಿಡಿಸಿಕೊಂಡು ಬರುವುದು ಅಷ್ಟು ಸುಲಭವಲ್ಲ. ಇಂದಿನ ದಿನಗಳಲ್ಲಿ ಪ್ರೀತಿಸುವ ಮೂಲಕವೂ ಮೋಸ ಮಾಡುವವರು ಇರುತ್ತಾರೆ ಎಂಬುದನ್ನು ನಾವು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ.

ಒಟ್ಟಿನಲ್ಲಿ ಹೆಣ್ಣುಮಕ್ಕಳು ಪೋಷಕರನ್ನು ಧಿಕ್ಕರಿಸಿ ಹೋಗುವ ನಿರ್ಧಾರವನ್ನು ತೆಗೆದುಕೊಳ್ಳದೆ, ಪ್ರೀತಿಯ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಹಾಗೆಯೇ ಮಕ್ಕಳು ತಪ್ಪು ಮಾಡಿದರು ಎಂದು ಅವರನ್ನು ದೂರ ಮಾಡುವ ಬದಲು, ಅವರ ತಪ್ಪನ್ನು ಕ್ಷಮಿಸಿ, ಕಷ್ಟದಲ್ಲಿ ಅವರೊಂದಿಗೆ ಇರುವುದಾಗಿ ಭರವಸೆ ನೀಡಿದರೆ ಸಾಕು ಒಂದು ಅಮೂಲ್ಯ ಜೀವ ದುರಂತ ಕಾಣುವುದನ್ನು ತಪ್ಪಿಸಬಹುದು.

Tags

Traffickinggirls
share
ಬಿ.ಜಿ. ಪೂರ್ಣಿಮ
ಬಿ.ಜಿ. ಪೂರ್ಣಿಮ

ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Next Story
X