Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಾಜ್ಯದ ಅಧಿಕೃತ ಭಾಷೆಯಾಗಿ ತುಳು:...

ರಾಜ್ಯದ ಅಧಿಕೃತ ಭಾಷೆಯಾಗಿ ತುಳು: ಮಾನ್ಯತೆಗೆ ಇನ್ನೂ ತಡವೇಕೆ?

ಪ್ರೊ. ಬಿ. ಶಿವರಾಮ ಶೆಟ್ಟಿಪ್ರೊ. ಬಿ. ಶಿವರಾಮ ಶೆಟ್ಟಿ18 Sept 2026 11:05 AM IST
share
ರಾಜ್ಯದ ಅಧಿಕೃತ ಭಾಷೆಯಾಗಿ ತುಳು: ಮಾನ್ಯತೆಗೆ ಇನ್ನೂ ತಡವೇಕೆ?

ರಾಜ್ಯದ ಭಾಷೆಯಾಗಿರುವ ತುಳುವನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕೆಂಬ ಮತ್ತು ರಾಜ್ಯದ ಎರಡನೆಯ ಅಧಿಕೃತ ಭಾಷೆಯಾಗಿ ತುಳುವನ್ನು ಮಾನ್ಯ ಮಾಡಬೇಕೆಂಬ ಕೂಗು ನಿನ್ನೆ ಮೊನ್ನೆಯದಲ್ಲ. ಕಳೆದ ಶತಮಾನದ ತೊಂಭತ್ತರ ದಶಕದಿಂದೀಚೆಗೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಾಡಿನ ತುಳುಪರ ಸಂಘಸಂಸ್ಥೆಗಳು ಮನವಿಯೊಂದಿಗೆ, ಸಂವಿಧಾನಾತ್ಮಕವಾದ ಹಕ್ಕೊತ್ತಾಯವನ್ನೂ ಮಂಡಿಸಿವೆ. ಆದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳುವನ್ನು ಸೇರ್ಪಡೆಗೊಳಿಸುವುದಕ್ಕೆ ಕೇಂದ್ರ ಸರಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಹೀಗಿದ್ದರೂ, ಇತ್ತೀಚಿನ ದಶಕದಲ್ಲಿ ರಾಜ್ಯ ಸರಕಾರ ಎರಡನೆಯ ಅಧಿಕೃತ ಭಾಷೆಯಾಗಿ ತುಳುವಿಗೆ ಮಾನ್ಯತೆಯನ್ನು ನೀಡುವ ಕುರಿತು ಇತ್ಯಾತ್ಮಕವಾದ ಧೋರಣೆಯನ್ನು ತಾಳಿರುವುದು ತುಳುವರಲ್ಲಿ ಆಶಾವಾದವನ್ನು ಮೂಡಿಸಿದೆ. ಹಿಂದಿನ ಬಿಜೆಪಿ ಸರಕಾರ ಈ ಬಗ್ಗೆ ಆಸಕ್ತಿ ತೋರಿಸಿ, ಡಾ. ಮೋಹನ ಆಳ್ವರ ನೇತೃತ್ವದಲ್ಲಿ ಸಮಿತಿ ರಚಿಸಿ, ವರದಿಯನ್ನು ತರಿಸಿಕೊಂಡಾಗ ಸಾಕಷ್ಟು ನೀರಿಕ್ಷೆಗಳಿತ್ತು. ಇದಾದ ಬಳಿಕ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ, ತುಳುವನ್ನು ರಾಜ್ಯದ ಎರಡನೆಯ ಅಧಿಕೃತ ಭಾಷೆಯನ್ನಾಗಿ ಮಾನ್ಯಮಾಡುವ ಘೋಷಣೆಯನ್ನೂ ಮಾಡಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ, ಸ್ಥಗಿತಗೊಂಡಿದ್ದ ಈ ಯೋಜನೆಗೆ ಮತ್ತೊಮ್ಮೆ ಚಾಲನೆ ದೊರೆತಿದೆ. ವಿಧಾನ ಸಭೆಯ ಕಲಾಪಗಳಲ್ಲಿ ಆಗಿಂದಾಗ ಈ ವಿಷಯದ ಬಗ್ಗೆ ಚರ್ಚೆಗಳು ನಡೆದಿವೆ. ಅದನ್ನು ಅನುಸರಿಸಿ, ಈ ಕುರಿತು ಕಾನೂನುಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರಕಾರ ಸಮಿತಿಯೊಂದನ್ನು ರಚಿಸಿ, ತೆಲುಗಿನ ಜೊತೆಗೆ ರಾಜ್ಯದ ಇತರ ಭಾಷೆಗಳ ಮಾನ್ಯತೆಗೆ ಪಕ್ಕದ ಆಂಧ್ರಪ್ರದೇಶ ಕೈಗೊಂಡಿರುವ ಕಾನೂನುಕ್ರಮದ ಕುರಿತ ವರದಿ ತರಿಸಿಕೊಂಡಾಗಲೂ ಜನತೆ ಸಾಕಷ್ಟು ಭರವಸೆ, ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು. ಆದರೆ, ಜನತೆಯ ಬೇಡಿಕೆ ಇನ್ನೂ ಈಡೇರಿಲ್ಲ. ತುಳುವನ್ನು ರಾಜ್ಯದ ಎರಡನೆಯ ಅಧಿಕೃತ ಭಾಷೆಯನ್ನಾಗಿ ಮಾನ್ಯ ಮಾಡಲು ಇದುವರೆಗೂ ಸಾಧ್ಯವಾಗದಿರಲು ಕಾರಣವೇನಿರಬಹುದು? ಮಾನ್ಯತೆ ಸಿಗಲು ತಲೆದೋರಿರುವ ತೊಡಕುಗಳೇನು? ಮಾನ್ಯತೆ ನೀಡಲು ತಡವೇಕೆ? ಒಕ್ಕೊರಲ ಈ ಕೂಗು ವಿಶೇಷವಾಗಿ ಕೇಳಿ ಬರುತ್ತಿವೆ. ಸೆಪ್ಟಂಬರ್ 18ರಂದು ಮಂಗಳೂರಲ್ಲಿ ನಡೆವ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಜೊತೆಗೆ, ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ನೀಡುವ ಮಾನ್ಯತೆಯ ನಿರ್ಧಾರದ ಬಗ್ಗೆ ರಾಜ್ಯ, ಹೊರರಾಜ್ಯ, ಹೊರದೇಶಗಳಲ್ಲಿರುವ ಜೆನ್ ಝಿ, ಜೆನ್ ಆಲ್ಪಾಗಳಿಂದ ಹಿಡಿದು, ವಯೋವೃದ್ಧರವರೆಗೂ ಕೋಟ್ಯಂತರ ತುಳುವರು, ಕನ್ನಡಿಗರು ಕಾತರರಾಗಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಂತೂ ಈ ಬಗ್ಗೆ ಜನಾಭಿಪ್ರಾಯ ವ್ಯಕ್ತವಾಗುತ್ತಿವೆ. ಕರಾವಳಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆ, ಕೇವಲ ರಾಜ್ಯದ ಆರ್ಥಿಕತೆಯ ಮೇಲೆ ಕಣ್ಣಿಟ್ಟು ಮಾಡುವ ಕರಾವಳಿಯ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ಮಾತ್ರ ಸೀಮಿತವಾಗಬಹುದೇ? ಅಥವಾ ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸುವ ಮೂಲಕ ಭಾಷಿಕ, ಸಾಂಸ್ಕೃತಿಕ ಅಭಿವೃದ್ಧಿಯೂ ತನ್ನ ಅಭಿವೃದ್ಧಿ ಕುರಿತ ಮೀಮಾಂಸೆ ಎಂಬುದನ್ನು ರಾಜ್ಯ ಸರಕಾರ ಪ್ರತಿಪಾದಿಸಬಹುದೇ? ಇದನ್ನು ಕಾದು ನೋಡಬೇಕಾಗಿದೆ.

ದಕ್ಷಿಣ ದ್ರಾವಿಡ ಭಾಷೆ ಎಂದು ಗುರುತಿಸಲಾದ ತುಳುಭಾಷೆ, ಪ್ರಾಚೀನ ಕಾಲದಲ್ಲೇ ಮೂಲ ದ್ರಾವಿಡದಿಂದ ಕವಲೊಡೆದು ಸ್ವತಂತ್ರಗೊಂಡಿದೆ ಎಂಬುದನ್ನು ಭಾಷಾವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗುಗಿಂತಲೂ ತುಳು ಅತ್ಯಂತ ಪುರಾತನ ಭಾಷೆ ಎಂದೆನ್ನಲಾಗಿದೆ. ಪ್ರಾಚೀನತೆಯನ್ನು ಹೊಂದಿದ್ದೂ ತುಳು ಲಿಪಿರಹಿತ ಭಾಷೆ ಎಂದೆನಿಸಿಕೊಂಡಿತ್ತು. ತುಳುನಾಡು, ತುಳುದೇಶ ಎಂಬ ಭೌಗೋಳಿಕ, ಭಾಷಿಕ, ಸಾಂಸ್ಕೃತಿಕ ಗುರುತುಗಳು ಆಧುನಿಕ ಪೂರ್ವದಲ್ಲಿದ್ದರೂ, ಚರಿತ್ರೆಯುದ್ದಕ್ಕೂ ಆಡಳಿತಾತ್ಮಕವಾಗಿ ತುಳು ಅವಕಾಶ ವಂಚಿತ ಭಾಷೆ. ರಾಜಪ್ರಭುತ್ವ, ಪ್ರಜಾಪ್ರಭುತ್ವದ ಕಾಲಘಟ್ಟದಲ್ಲೂ ತುಳು ನಾಡುನುಡಿಗಳು ಪರಾಧೀನತೆಯಲ್ಲೇ ಬದುಕಬೇಕಾಗಿತ್ತು. ತುಳುನಾಡಿನ ಅಳುಪ ರಾಜವಂಶವೇ ಕ್ರಿ.ಶ. 2ನೆಯ ಶತಮಾನದಿಂದ ಕ್ರಿಶ. 15ನೆಯ ಶತಮಾನದ ವಿಜಯನಗರದ ಆಳ್ವಿಕೆವರೆಗೆ ತುಳುನಾಡಿನ ಆಳ್ವಿಕೆಯನ್ನು ನಡೆಸಿದ್ದರೂ, ತುಳುನಾಡಿನ ಚರಿತ್ರೆಯುದ್ದಕ್ಕೂ ಕದಂಬ, ಚಾಲುಕ್ಯ, ಹೊಯ್ಸಳ, ಕೆಳದಿ, ವಿಜಯನಗರದ ಅಧೀನತೆಯಲ್ಲಿಯೇ ಆಳ್ವಿಕೆಯನ್ನು ನಡೆಸಬೇಕಾಗಿತ್ತು. ವಿಜಯನಗರದ ಬಳಿಕ ಟಿಪ್ಪುವಿನ ಅಧೀನದಲ್ಲಿ, ತರುವಾಯ ಪೋರ್ಚ್‌ಗೀಸ್, ಬ್ರಿಟಿಷ್ ವಿದೇಶಿ ಅಧಿಪತ್ಯದಲ್ಲಿ ತುಳುನಾಡಿನ ಸ್ಥಳೀಯ ಅರಸು ಮನೆತನಗಳು ಆಡಳಿತವನ್ನು ನಡೆಸಿದುವು. ಇದಲ್ಲದೆ ಪ್ರಜಾಪ್ರಭುತ್ವದ ಆಧುನಿಕ ಕಾಲದಲ್ಲೂ ಕರ್ನಾಟಕ ಸರಕಾರದ ಅಧೀನದಲ್ಲಿಯೇ ಸಾಂಪ್ರದಾಯಿಕ ತುಳುನಾಡು ಬದುಕಬೇಕಾಗಿದ್ದ ಕಾರಣ ಇಲ್ಲಿ ಕನ್ನಡ, ಇಂಗ್ಲಿಷ್ ಭಾಷೆಗಳೇ ಪ್ರಭುತ್ವದ ಭಾಷೆಯಾಯಿತೇ ಹೊರತು ಸ್ಥಳೀಯ ನಾಡ; ಜನನುಡಿಯಾದ ತುಳು ಪ್ರಭುತ್ವದ, ಶಿಕ್ಷಣದ ಭಾಷೆಯಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ, ತುಳು ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆಯನ್ನು ಪಡೆಯುವ ಚಾರಿತ್ರಿಕ ಅವಶ್ಯಕತೆ ಇದೆ. ಅದನ್ನು ಸಾಕಾರಗೊಳಿಸುವ ಸಾಂವಿಧಾನಿಕ ಜವಾಬ್ದಾರಿಯೂ ರಾಜ್ಯ ಸರಕಾರಕ್ಕಿದೆ.

ವಸಾಹತುಶಾಹಿ ಆಧುನಿಕತೆಯ ಸನ್ನಿವೇಶದ ಸಾಮಾಜಿಕ ವಿದ್ಯಮಾನಕ್ಕೆ ನೂರು ವರುಷಗಳಲ್ಲಿ ಒಡಮೂಡಿದ ತುಳು ಅಸ್ಮಿತೆಯ ಭಾಷಿಕ ಚಳವಳಿಯ ಇತಿಹಾಸವಿದೆ. 1956ರಲ್ಲಿ ಭಾಷಾವಾರು ಪ್ರಾಂತ ವಿಂಗಡನೆಯಿಂದ ರೂಪು ಗೊಂಡ ಮೈಸೂರು ರಾಜ್ಯದಲ್ಲಿ, ಕರಾವಳಿಯ ಸಾಂಪ್ರದಾಯಿಕ ತುಳುನಾಡು, ತುಳುದೇಶ ಅಂತರ್ಗತವಾಗುವ ಪೂರ್ವದಲ್ಲೇ, ಕಳೆದ ಶತಮಾನದ 3ನೇ ದಶಕದಲ್ಲಿ ಎಸ್.ಯು. ಪಣಿಯಾಡಿಯವರ ನೇತೃತ್ವದಲ್ಲಿ ಆರಂಭಗೊಂಡ ತುಳುವ ಚಳವಳಿ ತುಳು ಅಸ್ಮಿತೆಯ ಚರಿತ್ರೆಯಲ್ಲಿ ಮೊದಲ ಘಟ್ಟ ಎಂದೆನ್ನಬಹುದು. ಆ ಬಳಿಕದ ಎಪ್ಪತ್ತರ ದಶಕದಲ್ಲಿ ತುಳುಕೂಟದಂತಹ ಸಾರ್ವಜನಿಕ ಸಂಸ್ಥೆಗಳ ಮೂಲಕ ನಡೆದ ತುಳು ಪ್ರಸರಣ, ಸಂಘಟನಾತ್ಮಕ ಚಟುವಟಿಕೆಗಳು, ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಆರಂಭಗೊಂಡ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತ ಬೋಧನೆ, ಅಧ್ಯಯನ, ಸಂಶೋಧನೆಗಳು ತುಳುವಿಗೆ ಶೈಕ್ಷಣಿಕ ಮಾನ್ಯತೆಯನ್ನು ಒದಗಿಸಿತು. ಮುಂದೆ 80-90ರ ದಶಕದಲ್ಲಿ ಆಕಾಶವಾಣಿ, ದೂರದರ್ಶನ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಇವುಗಳಲ್ಲಿ ನಡೆದ ಪ್ರಸರಣದ ಕೆಲಸಗಳು ತುಳುವಿಗೆ ಇನ್ನಿಲ್ಲದ ಕಸುವನ್ನು ಒದಗಿಸಿತು. ಹೊರರಾಜ್ಯ, ಹೊರದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ನಡೆದ ಮತ್ತು ನಡೆಯುತ್ತಿರುವ ತುಳುವಿನ ಬೋಧನೆ, ಅಧ್ಯಯನ, ಸಂಶೋಧನೆಯಂತಹ ಶೈಕ್ಷಣಿಕ ಚಟುವಟಿಕೆಗಳು ತುಳುವಿಗೆ ವಿಶ್ವಮಾನ್ಯತೆಯನ್ನು ಒದಗಿಸಿದವು. ಹೀಗೆ ಮುಂದುವರಿದ ತುಳುವಿನ ಅಸ್ಮಿತೆಯ ಯಾನದಲ್ಲಿ 21ನೇ ಶತಮಾನದ 3ನೇ ದಶಕದ ಹೊತ್ತಲ್ಲಿ ರಾಜ್ಯ ಸರಕಾರದಿಂದ ತುಳುವಿಗೆ ಅಧಿಕೃತ ಮಾನ್ಯತೆಯನ್ನು ಪಡೆಯುವ ಚಾರಿತ್ರಿಕ ವಿದ್ಯಮಾನ ಪಣಿಯಾಡಿಯವರ ತುಳು ಚಳವಳಿಯ ನೂರರ ಚಕ್ರವನ್ನು ಸಂಧಿಸುತ್ತಿದೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ ಲಿಪಿ ಇರುವ, ಶಾಸನಗಳಿರುವ ತುಳುವಲ್ಲಿ ಹಲವಾರು ಕಾವ್ಯಗಳು ರಚನೆಯಾಗಿವೆ. ವಿದ್ವಾಂಸರ ಪ್ರಕಾರ, ಜಗತ್ತಿನ ಮಹಾಕಾವ್ಯಗಳಿಗೆ ಸಮಾನವಾಗಬಹುದಾದ ಕೋಟಿ ಚೆನ್ನಯ, ಸಿರಿ ಮುಂತಾದ ಜನಪದ ಕಾವ್ಯಗಳಿವೆ. ಸುಮಾರು 43ಕ್ಕಿಂತಲೂ ಹೆಚ್ಚು ಜಾತಿ ಸಮುದಾಯಗಳ ಭಾಷೆಯಾಗಿ ತುಳು ಚಾಲ್ತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲದೆ ಸುತ್ತಮುತ್ತಲಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮಾತ್ರವಲ್ಲ, ರಾಜ್ಯ, ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಕೋಟ್ಯಂತರ ತುಳು ಭಾಷಿಗರು ಇದ್ದಾರೆ. ತುಳುನಾಡಿನ ಕೊಂಕಣಿ, ಬ್ಯಾರಿ, ಮರಾಠಿ, ಕೊರಗ ಮುಂತಾದ ಭಾಷಿಕ ಸಮುದಾಯಗಳಿಗೆ ತುಳು ಸಂಪರ್ಕ ಭಾಷೆಯಾಗಿದೆ. ತುಳು ಇಲ್ಲದೆಯೇ ದೈವಾರಾಧನೆಗಳು ಇಲ್ಲ. ಇಲ್ಲಿಯ ಯಕ್ಷಗಾನ, ನಾಗಾರಾಧನೆಗಳಿಗೂ ತುಳು ಬೇಕಾಗಿದೆ. ಆಚರಣೆ, ಆರಾಧನೆ, ನಂಬಿಕೆ ಮುಂತಾದ ಸಾಂಪ್ರದಾಯಿಕ ಒಳರಚನೆಗಳಲ್ಲಿ ತುಳುವೇ ಪ್ರಧಾನವಾದ ಶಕ್ತಿ ಕೇಂದ್ರ. ಶಿಕ್ಷಣ, ಆರೋಗ್ಯ, ಉದ್ಯಮ, ಮಾರುಕಟ್ಟೆ, ಸಂಚಾರ ಮುಂತಾದ ಆಧುನಿಕ ಕಾಲದ ಸಾರ್ವಜನಿಕ ವಲಯಗಳಲ್ಲಿ ತುಳುನಾಡ ಜನನುಡಿಯಾಗಿದೆ. ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಎಲ್ಲ ಜನವರ್ಗಗಳನ್ನು ಬೆಸೆಯುವ ತುಳು ಜಾತ್ಯತೀತ ಭಾಷೆಯಾಗಿದೆ.

ಭಾರತ ಸಂವಿಧಾನದ ಆರ್ಟಿಕಲ್ 345ರ ಪ್ರಕಾರ, ರಾಜ್ಯಗಳು ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳನ್ನು ಹೊಂದಬಹುದಾಗಿದೆ. ಆರ್ಟಿಕಲ್ 346ರಲ್ಲಿ, ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ರಾಜ್ಯ-ರಾಜ್ಯ ಸರಕಾರಗಳ ನಡುವಣ ಸಂಪರ್ಕ ಭಾಷೆಯು ಯಾವುದೇ ಅಧಿಕೃತ ಭಾಷೆ ಆಗಬಹುದು ಎಂದಿದೆ. ಆರ್ಟಿಕಲ್ 347ರ ಪ್ರಕಾರ, ರಾಜ್ಯವೊಂದರ ಬೇರೊಂದು ಅಧಿಕೃತ ಭಾಷೆಯೂ ಸಂಪರ್ಕ ಭಾಷೆಯಾಗಬಹುದು. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ತೆಲುಗಿನ ಜೊತೆಗೆ ಉರ್ದುವನ್ನು ಬಿಹಾರವು ಬಿಹಾರಿ ಜೊತೆಗೆ ಮೈಥಿಲಿ ಮತ್ತು ಬಾಂಗ್ಲಾವನ್ನು, ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ಅಸ್ಸಾಂ ಅಸ್ಸಾಮಿ ಜೊತೆಗೆ ಬಂಗಾಲಿ ಮತ್ತು ಬೋಡೋವನ್ನು, ಮೇಘಾಲಯವು ಇಂಗ್ಲಿಷ್ ಜೊತೆಗೆ ಖಾಸೀ ಮತ್ತು ಗಾರೋ ಭಾಷೆಗಳನ್ನು, ದಿಲ್ಲಿ ಸರಕಾರವು ಹಿಂದಿ ಜೊತೆ ಇಂಗ್ಲಿಷ್, ಪಂಜಾಬಿ, ಉರ್ದು ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಒಕ್ಕೂಟ ವ್ಯವಸ್ಥೆಯನ್ನು ಪ್ರತಿನಿಧಿಸುವ ಭಾರತದಲ್ಲಿ, ರಾಜ್ಯದ ಇತರ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಮಾನ್ಯತೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ತುಳುವನ್ನು ಎರಡನೆಯ ಅಧಿಕೃತ ಭಾಷೆಯನ್ನಾಗಿ ಮಾನ್ಯತೆಯನ್ನು ನೀಡುವ ಬಗ್ಗೆ ತುಳುವಿಗೆ ಯಾವುದೇ ಕಾನೂನಾತ್ಮಕ ತೊಡಕುಗಳು ಎದುರಾಗದು. ಬಹುತ್ವದ ಭಾರತದಲ್ಲಿ ಭಾಷೆಗಳ ಸಶಕ್ತೀಕರಣದ ಮೂಲಕ ಸಮುದಾಯ, ಸಂಸ್ಕೃತಿಯನ್ನು ಸಶಕ್ತೀಕರಿಸಲು ಸಾಧ್ಯ. ಕರ್ನಾಟಕ ಸರಕಾರ ಅದಷ್ಟು ಬೇಗನೆ ಮಹತ್ವದ ತೀರ್ಮಾನವನ್ನು ಕೈಗೊಂಡರೆ ‘ನುಡಿದಂತೆ ನಡೆವ ಸರಕಾರ’ ಎಂಬ ಜನಮನ್ನಣೆಯನ್ನು ಪಡೆಯಬಹುದು. ಸರ್ವಜನಾಂಗದ ಶಾಂತಿಯ ತೋಟ ಎಂಬ ಸರಕಾರದ ಧ್ಯೇಯವಾಕ್ಯಕ್ಕೆ ಇದು ಪೂರಕವಾಗಲೂಬಹುದು. ಜನತೆ ಸರಕಾರದ ಕ್ರಮಕ್ಕಾಗಿ ಕಾಯುತ್ತಿದೆ.

(ಲೇಖಕರು ತುಳು ವಿದ್ವಾಂಸರು, ಸಂಶೋಧಕರು)

Tags

Tulu
share
ಪ್ರೊ. ಬಿ. ಶಿವರಾಮ ಶೆಟ್ಟಿ
ಪ್ರೊ. ಬಿ. ಶಿವರಾಮ ಶೆಟ್ಟಿ
Next Story
X