ನರೇಂದ್ರ ಮೋದಿಯವರು ಸಾರ್ವಜನಿಕ ಆಡಳಿತದಲ್ಲಿ ಅಧಿಕಾರಕ್ಕೇರಿದ 25 ವರ್ಷಗಳಲ್ಲಿ ಸಾಧಿಸಿದ್ದೇನು?

2014ರಲ್ಲಿ ಮೋದಿಯವರನ್ನು ಬಿಜೆಪಿ ದೇಶದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು. ಆ ಚುನಾವಣೆಯಲ್ಲಿ ಬಿಜೆಪಿ ಹತ್ತಾರು ಭರವಸೆಗಳನ್ನು ದೇಶದ ಜನರಿಗೆ ನೀಡಿತು. ಅದರಲ್ಲಿ ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವುದು, ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್ ತರುವುದು, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದು, ರೈತರ ಆದಾಯ ದ್ವಿಗುಣ, ಭ್ರಷ್ಟಾಚಾರ ರಹಿತ ಆಡಳಿತ, 100 ಹೊಸ ನಗರಗಳ ನಿರ್ಮಾಣ, ಹೈಸ್ಪೀಡ್ ರೈಲು ಹಳಿ ನಿರ್ಮಾಣ, ಬ್ರಾಂಡ್ ಇಂಡಿಯಾ, 2 ಕೋಟಿ ಉದ್ಯೋಗ ಸೇರಿದಂತೆ ಹಲವು ಭರವಸೆಗಳನ್ನು ದೇಶದ ಜನರಿಗೆ ನೀಡಲಾಗಿತ್ತು. ಅಲ್ಲದೇ ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ನಡೆದ ಚುನಾವಣೆಗಳ ವಾರ್ಷಿಕ ಬಜೆಟ್ ಮೂಲಕ ಸಾವಿರಾರು ಭರವಸೆಗಳನ್ನು ಘೋಷಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಭರವಸೆಗಳು ಘೋಷಣೆಗಷ್ಟೇ ಸೀಮಿತವಾಗಿದೆ. ಇದು ಮೋದಿಯವರ ಆಡಳಿತ.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ಆಡಳಿತದಲ್ಲಿ ಅಧಿಕಾರದ ಸ್ಥಾನಕ್ಕೆ ಬಂದು 25 ವರ್ಷಗಳಾದವು ಎಂದು ಬಿಜೆಪಿ ದೇಶದಲ್ಲಿ ಸೆಪ್ಟಂಬರ್ 17ರಿಂದ ಒಂದು ತಿಂಗಳ ಕಾಲ ಸಂಭ್ರಮಾಚರಣೆ ಮಾಡಲಾಗುವುದೆಂದು ಘೋಷಿಸಿದೆ. ಇದು ಸಾರ್ವಜನಿಕವಾಗಿ 25 ವರ್ಷಗಳಲ್ಲಿ ಮೋದಿಯವರು ಮಾಡಿರುವ ಸಾಧನೆಗಳ ಪರಾಮರ್ಶೆ ಮತ್ತು ಆತ್ಮಾವಲೋಕನ ಎಂದೇ ಹೇಳಬಹುದು. ಮೋದಿಯವರು ವಿಧಾನಸಭೆಯ ಸದಸ್ಯರಲ್ಲದೇ ಇದ್ದರೂ 2001ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಒಂದಿಲ್ಲೊಂದು ಸಾಂವಿಧಾನಿಕ ಹುದ್ದೆಯಲ್ಲಿ ಇರುವುದೇ ಅವರ ಸಾಧನೆ.
25 ವರ್ಷ ಅಥವಾ ಅದಕ್ಕಿಂತ ಒಂದಿಷ್ಟು ಕಡಿಮೆ ಅವಧಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಹಳಷ್ಟು ಜನ ಮುಖ್ಯಮಂತ್ರಿಗಳನ್ನು ದೇಶ ಕಂಡಿದೆ, ಮೋದಿಯವರೇ ಮೊದಲಲ್ಲ ಎನ್ನುವುದು ಅಷ್ಟೇ ಸತ್ಯ. ಎಷ್ಟು ದಿನ ಅಧಿಕಾರದಲ್ಲಿ ಇದ್ದೇವೆ ಎನ್ನುವುದಕ್ಕಿಂತ ಜನರಿಗಾಗಿ ಏನು ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಮೋದಿಯವರು 25 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅವರ ಸಾಧನೆಗಳೊಂದಿಗೆ ಆಡಳಿತ ವೈಫಲ್ಯವೂ ಚರ್ಚೆಗೆ ಒಳಗಾಗಬೇಕಾಗುತ್ತದೆ.
ಮೋದಿಯವರು ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆಯೇ ಗುಜರಾತ್ ರಾಜ್ಯ ಹಲವು ವಿಷಯಗಳಲ್ಲಿ ಸಾಕಷ್ಟು ಸಾಧನೆ ಮಾಡಿತ್ತು, 2001ರಲ್ಲಿ ಗುಜರಾತ್‌ನ ಮಾನವ ಅಭಿವೃದ್ಧಿ ಸೂಚ್ಯಂಕ ದೇಶದ ಸೂಚ್ಯಂಕಕ್ಕಿಂತ ಹೆಚ್ಚಿತ್ತು, ಅದು ಈಗ ದೇಶದ ಸೂಚ್ಯಂಕಕ್ಕೆ ಸಮನಾಗಿದೆ. ಅಲ್ಲದೆ ಕರ್ನಾಟಕಕ್ಕಿಂತ ಕಡಿಮೆ ಇದೆ. ಗುಜರಾತ್‌ನ ತಲಾ ಆದಾಯ 2001ರಲ್ಲಿ ರೂ. 19,509 ಇದ್ದರೆ, 2026ರಲ್ಲಿ ರೂ. 3,00,957 ಇದೆ. ಕರ್ನಾಟಕದಲ್ಲಿ 2001ರಲ್ಲಿ ರೂ. 18,547 ಇದ್ದು, ಗುಜರಾತ್‌ಗಿಂತ ಕಡಿಮೆ ಇತ್ತು. 2026ರಲ್ಲಿ ಕರ್ನಾಟಕದ್ದು ರೂ. 4,33,326 ಇದೆ. ಇದು ಗುಜರಾತ್‌ಗಿಂತ ರೂ. 1,33,000ರಷ್ಟು ಹೆಚ್ಚಿದೆ. ಅಂದರೆ ಕರ್ನಾಟಕ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ, ಆದರೆ ಗುಜರಾತ್ ಎಲ್ಲಿತ್ತೋ ಅಲ್ಲೇ ಇದೆ. ಅಲ್ಲದೆ ಈ 25 ವರ್ಷಗಳಲ್ಲಿ ಅದು ಕ್ಷೀಣಿಸಿದೆ. ಮೋದಿ ಅಧಿಕಾರಕ್ಕೆ ಬಂದ ಮೊದಲ ಹಂತದಲ್ಲೇ ಗುಜರಾತ್‌ನಲ್ಲಿ ಗೋಧ್ರಾ ನಂತರದ ಗಲಭೆಯಾಗಿ ಸಾವಿರಾರು ಅಮಾಯಕ ಜನರ ಕೊಲೆಯಾಯಿತು. ಇದನ್ನು ತಡೆಗಟ್ಟುವಲ್ಲಿ ಮೋದಿ ವಿಫಲ ರಾದರು. ಆ ಸಂದರ್ಭದಲ್ಲಿ ಅವರು ರಾಜಧರ್ಮ ಪಾಲಿಸುವಲ್ಲಿ ಎಡವಿದರು ಎಂದು ಸ್ವತಃ ಅಂದಿನ ಪ್ರಧಾನಿ ವಾಜಪೇಯಿ ಹೇಳಿದ್ದರು. ಮೋದಿಯವರ ಜೀವನದಲ್ಲಿ ಇದೊಂದು ಕಪ್ಪು ಚುಕ್ಕೆ. ಅದನ್ನು ಎಂದೂ ಅಳಿಸಲು ಸಾಧ್ಯವಾಗದು.
2014ರಲ್ಲಿ ಮೋದಿಯವರನ್ನು ಬಿಜೆಪಿ ದೇಶದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತು. ಆ ಚುನಾವಣೆಯಲ್ಲಿ ಬಿಜೆಪಿ ಹತ್ತಾರು ಭರವಸೆಗಳನ್ನು ದೇಶದ ಜನರಿಗೆ ನೀಡಿತು. ಅದರಲ್ಲಿ ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವುದು, ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್ ತರುವುದು, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡುವುದು, ರೈತರ ಆದಾಯ ದ್ವಿಗುಣ, ಭ್ರಷ್ಟಾಚಾರ ರಹಿತ ಆಡಳಿತ, 100 ಹೊಸ ನಗರಗಳ ನಿರ್ಮಾಣ, ಹೈಸ್ಪೀಡ್ ರೈಲು ಹಳಿ ನಿರ್ಮಾಣ, ಬ್ರಾಂಡ್ ಇಂಡಿಯಾ, 2 ಕೋಟಿ ಉದ್ಯೋಗ ಸೇರಿದಂತೆ ಹಲವು ಭರವಸೆಗಳನ್ನು ದೇಶದ ಜನರಿಗೆ ನೀಡಲಾಗಿತ್ತು. ಅಲ್ಲದೇ ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ನಡೆದ ಚುನಾವಣೆಗಳ ವಾರ್ಷಿಕ ಬಜೆಟ್ ಮೂಲಕ ಸಾವಿರಾರು ಭರವಸೆಗಳನ್ನು ಘೋಷಿಸ ಲಾಗಿತ್ತು. ಅವುಗಳಲ್ಲಿ ಬಹುತೇಕ ಭರವಸೆಗಳು ಘೋಷಣೆಗಷ್ಟೇ ಸೀಮಿತವಾಗಿದೆ. ಇದು ಮೋದಿಯವರ ಆಡಳಿತ.
2014ರಲ್ಲಿ 130 ಡಾಲರ್‌ಗೆ ಒಂದು ಬ್ಯಾರೆಲ್ ಪೆಟ್ರೋಲಿಯಂ ಸಿಗುವಾಗ ರೂ. 60ಕ್ಕೆ ಒಂದು ಲೀಟರ್ ಪೆಟ್ರೋಲ್ ಇದ್ದದ್ದನ್ನು, 2026ರಲ್ಲಿ 102 ಡಾಲರ್ ಇದ್ದರೂ ರೂ. 110ಕ್ಕೆ ಒಂದು ಲೀಟರ್ ಪೆಟ್ರೋಲ್ ಸಿಗುತ್ತಿದೆ. 2014ರಲ್ಲಿ ರೂ. 412ಗೆ ಒಂದು ಸಿಲಿಂಡರ್ ಇದ್ದದ್ದು ಈಗ ರೂ. 939 ಆಗಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ರಸಗೊಬ್ಬರಗಳ ಬೆಲೆ ಗಗನಕ್ಕೆ ಏರಿದ್ದು ರೈತರು ಕಂಗಾಲಾಗಿದ್ದಾರೆ. ಕಳೆದ 10 ವರ್ಷಗಳಲ್ಲಿ 1.09 ಲಕ್ಷ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಓಅಖಃ ಜಚಿಣಚಿ ಹೇಳುತ್ತದೆ. 100 ಹೊಸ ನಗರಗಳ ನಿರ್ಮಾಣ ಮಾಡುತ್ತೇವೆ ಎಂದು ಹೇಳಲಾಯಿತಾದರೂ 12 ವರ್ಷಗಳ ನಂತರವೂ ಒಂದೇ ಒಂದು ಹೊಸ ನಗರ ನಿರ್ಮಾಣವಾಗಲಿಲ್ಲ. 2022ರ ಹೊತ್ತಿಗೆ ಬಹಿರ್ದೆಸೆ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಶೌಚಾಲಯದ ಮುಂದೆ ನಿಂತು ಫೋಟೊ ತೆಗೆದುಕೊಂಡರು, ಆದರೆ ಇಲ್ಲಿಯವರೆಗೆ ದೇಶ ಬಹಿರ್ದೆಸೆ ಮುಕ್ತವಾಗಲಿಲ್ಲ. 2022ರ ಹೊತ್ತಿಗೆ ದೇಶದಲ್ಲಿ ಎಲ್ಲರಿಗೂ ಸ್ವಂತ ಮನೆ ಇರುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದರೂ, ಇಂದಿಗೂ ಸ್ವಂತ ಮನೆಯಿಲ್ಲದವರ ಸಂಖ್ಯೆ ಕಡಿಮೆಯಾಗಲಿಲ್ಲ.
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಭಾರೀ ಪ್ರಚಾರ ಮಾಡಲಾಯಿತು. ಆದರೆ ವಾಸ್ತವವಾಗಿ ಪ್ರತಿಯೊಂದು ಯೋಜನೆಗಳಲ್ಲೂ ಭ್ರಷ್ಟಾಚಾರ ಹೆಚ್ಚಾಯಿತು. ಯುಪಿಎ ಅವಧಿಯಲ್ಲಿ ಅವರ ಸರಕಾರದ ಸಚಿವರು, ಸಂಸದರನ್ನೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಕಳುಹಿಸಲಾಗಿತ್ತು, ಆದರೆ ಇಂದಿನ ಸರಕಾರದಲ್ಲಿ ಭ್ರಷ್ಟಾಚಾರದ ಬಗ್ಗೆ ತನಿಖೆಯೇ ನಡೆಯುತ್ತಿಲ್ಲ, ಸಿಬಿಐ, ಈ.ಡಿ.ಯಂತಹ ಸಂಸ್ಥೆಗಳು ವಿರೋಧ ಪಕ್ಷದ ನಾಯಕರ ಬೆನ್ನು ಹತ್ತುವುದರಲ್ಲಿಯೇ ಕಾಲ ಕಳೆಯುತ್ತಿವೆ ಎನ್ನುವ ಆರೋಪ ಇದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರೀ ಸಾಧನೆ ಮಾಡಲಾಗುತ್ತಿದೆ ಎಂದು ಪ್ರಚಾರ ಮಾಡಲಾಯಿತು, ಆದರೆ ಇತ್ತೀಚಿಗೆ ಸುರಿದ ಮಳೆಗೆ ಬಹಿತೇಕ ರಾಷ್ಟ್ರೀಯ ಹೆದ್ದಾರಿಗಳು ಹಾಳಾಗಿವೆ ಎಂದು ವರದಿಯಾಗಿದೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರೀ ಗೋಲ್‌ಮಾಲ್ ಆಗಿದೆ ಎಂದು ಮಹಾ ಲೇಖಪಾಲರೇ ವರದಿ ನೀಡಿದ್ದರೂ ಯಾವುದೇ ತನಿಖೆ ನಡೆಸಲಾಗಿಲ್ಲ. ದ್ವಾರಕಾ ಎಕ್ಸ್‌ಪ್ರೆಸ್‌ವೇ 29.06 ಕಿ.ಮೀ. ರಸ್ತೆ ನಿರ್ಮಾಣಕ್ಕೆ 18.20 ಕೋಟಿ ರೂ. ಪ್ರತೀ ಕಿ.ಮೀ.ಗೆ ಅಂದಾಜು ಪತ್ರಿಕೆ ತಯಾರಿಸಿ ಅನುಮೋದನೆ ಪಡೆದರೂ 250.00 ಕೋಟಿ ರೂ. ಪ್ರತೀ ಕಿ.ಮೀ.ಗೆ ಬಿಲ್ ಪಾವತಿಸಲಾಗಿದೆ ಎಂದು ಮಹಾ ಲೇಖಪಾಲರು ತಿಳಿಸಿದ್ದಾರೆ. ಇದು ಭ್ರಷ್ಟಾಚಾರದ ಬಹುಮುಖ.
ಕೊರೋನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ ರಚಿಸಲಾದ ಪಿಎಂ ಕೇರ್ ಫಂಡ್ ಹೆಸರಿನ ಟ್ರಸ್ಟ್‌ನಲ್ಲಿ ಜಮಾ ಆಗಿರುವ ಹಣದ ಲೆಕ್ಕವೇ ಇಲ್ಲದಂತಾಗಿದೆ. ಯಾರು ಕೊಟ್ಟರು, ಯಾರೂ ಪಡೆದರು, ಯಾವ ಉದ್ದೇಶಕ್ಕೆ ಖರ್ಚಾಯಿತು ಎಂದು ಹೇಳಲು ಕೇಂದ್ರ ಸರಕಾರ ನಿರಾಕರಿಸುವ ಮೂಲಕ ತಮ್ಮ ಆಡಳಿತ ಪಾರದರ್ಶಕವಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದಂತಿದೆ. ಚುನಾವಣಾ ಬಾಂಡ್‌ಗಳ ಮೂಲಕ ಸಾವಿರಾರು ಕೋಟಿ ಹಣವನ್ನು ಅಕ್ರಮವಾಗಿ ಬಿಜೆಪಿ ಪಕ್ಷಕ್ಕೆ ಕಾರ್ಪೊರೇಟ್ ಕಂಪೆನಿಗಳಿಂದ ಪಡೆಯಲಾಯಿತು. ಮೊದಲಿಗೆ ಅದನ್ನು ಗುಪ್ತವಾಗಿ ಇಡಲಾಯಿತು, ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಹಣದ ಮೂಲ ಬಹಿರಂಗವಾಯಿತು. ಆದರೆ ಅಕ್ರಮವಾಗಿ ಪಡೆದ ಹಣ ಮುಟ್ಟುಗೋಲಾಗಲಿ, ವಾಪಸ್ ನೀಡುವುದಾಗಲೀ ಆಗಲಿಲ್ಲ. ಅಕ್ರಮ ಆಗಿದೆ ಎನ್ನುವುದು ಸಾಬೀತಾಯಿತು, ಶಿಕ್ಷೆ ಏನು ಎಂದು ನಿರ್ಣಯಿಸಲಾಗಿಲ್ಲ.
ರೂಪಾಯಿ ಮೌಲ್ಯ ಹೆಚ್ಚಿಸಲಾಗುವುದು ಎನ್ನಲಾಯಿತು. ಸಂಸದರೊಬ್ಬರು ಒಂದು ಡಾಲರ್ ಗೆ ರೂ. 65 ಇದ್ದದ್ದು ಒಂದು ರೂ.ಗೆ 15 ಡಾಲರ್ ಮಾಡಲಾಗುವುದು ಎಂದು ಭಾಷಣ ಮಾಡಿದ್ದರು. ಈಗ ಒಂದು ಡಾಲರ್‌ಗೆ 95 ರೂ. ಆದರೂ ಯಾರೂ ಮಾತನಾಡುತ್ತಿಲ್ಲ.
ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಜಿಎಸ್‌ಟಿ ಜಾರಿಯಾದರೆ ರಾಜ್ಯಗಳು ಸರ್ವನಾಶವಾಗುತ್ತವೆ ಎಂದು ಭಾಷಣ ಮಾಡಿದ ಮೋದಿಯವರು ರಾತ್ರಿ ಹೊತ್ತಿನಲ್ಲಿ ಸದನ ನಡೆಸಿ ಜಿಎಸ್‌ಟಿ ಜಾರಿಗೊಳಿಸಿದ್ದು ಅವರ ಬದ್ಧತೆ ಎಂತಹದ್ದು ಎಂದು ಪ್ರಶ್ನೆ ಮಾಡುವಂತಿದೆ. ತರಾತುರಿಯಲ್ಲಿ ಜಾರಿಗೊಳಿಸಲಾದ ಜಿಎಸ್‌ಟಿಯಿಂದಾಗಿ ಸಣ್ಣ ವ್ಯಾಪಾರಸ್ಥರು ತೊಂದರೆಗೆ ಒಳಪಟ್ಟರು. ರಾಜ್ಯ ಸರಕಾರಗಳು ಜಿಎಸ್‌ಟಿಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಆನಂತರ ರಾತ್ರಿ 8:00 ಗಂಟೆಗೆ ಟಿ.ವಿ.ಯಲ್ಲಿ ಬಂದು 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳು ಅಮಾನ್ಯವೆಂದು ಘೋಷಿಸಿದಾಗ, ಎಟಿಎಂ ಮೂಲಕ ಹಣ ಪಡೆಯಲು ಹೋಗಿ 125 ಜನರು ಸಾವಿಗೀಡಾದರು. ನೋಟು ಅಮಾನ್ಯೀಕರಣವು ದೇಶದ ಭದ್ರತೆಗಾಗಿ, ಕಪ್ಪು ಹಣ ಹೊರಗಡೆ ತರುವುದು ಎಂದು ಹೇಳಲಾಯಿತಾದರೂ ಯಾವುದೇ ಕಪ್ಪು ಹಣ ಕೈಗೆ ಸಿಗಲಿಲ್ಲ. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ. 99.99ರಷ್ಟು ನೋಟುಗಳು ವಾಪಸ್ ಬ್ಯಾಂಕುಗಳಿಗೆ ಜಮಾ ಆದವು.
ನೋಟು ಅಮಾನ್ಯವು ಭಯೋತ್ಪಾದನೆ ತಡೆಯಲು ಎಂದು ಹೇಳಿದರಾದರೂ, ಅದರ ನಂತರವೇ ಪುಲ್ವಾಮಾ ದಾಳಿಯಾದದ್ದು. ಇಲ್ಲಿಯವರೆಗೆ 300ಕೆಜಿ ಆರ್‌ಡಿಎಕ್ಸ್ ದೇಶದ ಒಳಗಡೆ ಹೇಗೆ ಬಂತು ಎಂದು ಹೇಳಲು ಸಾಧ್ಯವಾಗಿಲ್ಲ. 2008ರಲ್ಲಿ ಮುಂಬೈ ದಾಳಿಯ ನಂತರ ದೇಶದ ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ನೈತಿಕ ಹೊಣೆ ಹೊತ್ತಿದ್ದರು. ಆದರೆ ದೇಶದ 40 ಜನ ಸೈನಿಕರ ಬಲಿದಾನಕ್ಕೆ ಕಾರಣವಾದ ಪುಲ್ವಾಮಾ ದಾಳಿಯ ನೈತಿಕ ಜವಾಬ್ದಾರಿ ಯಾರೂ ಹೊರಲಿಲ್ಲ. ಅಂದಿನ ರಾಜ್ಯಪಾಲರು ಈ ದಾಳಿಗೆ ನಮ್ಮ ಸರಕಾರದ್ದೇ ಬೇಜವಾಬ್ದಾರಿತನವೆಂದು ಹೇಳಿದರು, ಆದರೆ, ಅವರ ಬಾಯಿ ಮುಚ್ಚಿಸಿ ಆ ಮೃತ ಸೈನಿಕರ ಹೆಸರಿನಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಕೇಳಿದವರು ಮೋದಿ. ಅದರ ನಂತರವೂ ಭಯೋತ್ಪಾದನಾ ದಾಳಿ ನಿಲ್ಲಲಿಲ್ಲ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಾಗಿ 26 ಜನ ಅಮಾಯಕರ ಜೀವ ಬಲಿದಾನವಾಯಿತು. ಆ ಸಂದರ್ಭದಲ್ಲಿಯೂ ಸರಕಾರದಲ್ಲಿ ಗೃಹ ಮಂತ್ರಿಯಾಗಲೀ, ರಕ್ಷಣಾ ಮಂತ್ರಿಗಳಾಗಲೀ, ಜಮ್ಮು-ಕಾಶ್ಮೀರ ರಾಜ್ಯಪಾಲರಾಗಲೀ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ಪಹಲ್ಗಾಮ್ ದಾಳಿಯ ನಂತರ ನಡೆದ ಆಪರೇಷನ್ ಸಿಂಧೂರದ ಹಂತದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾತ್ರೋರಾತ್ರಿ ಆಪರೇಷನ್ ಸಿಂಧೂರ ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿ ದೇಶದ ಸರ್ವಭೌಮತ್ವಕ್ಕೆ ಪೆಟ್ಟುಕೊಟ್ಟರು. 26 ಸಲ ‘‘ಯುದ್ಧ ನಿಲ್ಲಿಸಿದ್ದು ನಾನೇ’’ ಎಂದು ಟ್ರಂಪ್ ಹೇಳಿಕೊಂಡರು. ಮೋದಿಯವರು ಅದನ್ನು ಖಂಡಿಸುವ ಹಂತಕ್ಕೆ ಹೋಗಲಿಲ್ಲ. ಮೋದಿಯವರ ಆಡಳಿತದಲ್ಲಿ ಅಕ್ಕಪಕ್ಕದ ರಾಷ್ಟ್ರಗಳು ಸಹ ನಮ್ಮ ಜೊತೆಗೆ ನಿಲ್ಲಲಿಲ್ಲ. ಮಾಲ್ದೀವ್ಸ್, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಹಾಗೂ ನೇಪಾಳ ಸಹ ಚೀನಾ ಜೊತೆಗೆ ಹೋಗಿರುವುದರಲ್ಲಿ ಇವರ ವಿದೇಶಾಂಗ ನೀತಿ ವೈಫಲ್ಯ ಎದ್ದು ಕಾಣುತ್ತಿದೆ.
ಭಾರತ ಸರಕಾರ 1947ರಿಂದ 2014ರ ವರೆಗೆ ಎಲ್ಲಾ ಸರಕಾರಗಳು ಸೇರಿ ಮಾಡಿದ್ದ ಒಟ್ಟು ಸಾಲ ರೂ. 55.56 ಲಕ್ಷ ಕೋಟಿ. 2014ರಿಂದ 2026ರ ಈ 12 ವರ್ಷಗಳಲ್ಲಿ ದೇಶದ ಒಟ್ಟು ಸಾಲವನ್ನು 214.82 ಲಕ್ಷ ಕೋಟಿ ರೂ. ವರೆಗೆ ಹೆಚ್ಚಿಸಿದ ಕೀರ್ತಿ ಮೋದಿಯವರ ಸರಕಾರಕ್ಕೆ ಸಲ್ಲುತ್ತದೆ. ದೇಶದ ಜಿಡಿಪಿ 2026ರಲ್ಲಿ 6ನೇ ಸ್ಥಾನಕ್ಕೆ ಹೋಗಿದೆ, 4ನೇ ಸ್ಥಾನಕ್ಕೆ ಹೋದಾಗ ಅತ್ಯುತ್ತಮ ಆರ್ಥಿಕತೆ, ವಿಶ್ವದಲ್ಲಿ ನಮ್ಮ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತದೆ, ಶೀಘ್ರದಲ್ಲಿ 5.0 ಟ್ರಿ.ಡಾಲರ್‌ಗೆ ತಲುಪುತ್ತೇವೆ ಎಂದು ಗೋದಿ ಮೀಡಿಯಾದವರು, ಕೇಂದ್ರ ಸಚಿವರು, ಬಿಜೆಪಿ ನಾಯಕರು ದೇಶದಲ್ಲಿ ಡಂಗುರ ಸಾರಿದ್ದರು. ಆದರೆ, 2026ರಲ್ಲಿ ದೇಶದ ಜಿಡಿಪಿ 6ನೇ ಸ್ಥಾನಕ್ಕೆ ಹೋದಾಗ ಯಾರೂ ಬಾಯಿ ಬಿಡುತ್ತಿಲ್ಲ. ವಾಸ್ತವದಲ್ಲಿ ಮನಮೋಹನ್ ಸಿಂಗ್ ಸರಕಾರಕ್ಕೆ ತುಲನೆ ಮಾಡಿದರೆ ದೇಶದ ಜಿಡಿಪಿ ಮತ್ತು ಆರ್ಥಿಕತೆ ಅತೀ ಕಡಿಮೆ ಹೆಚ್ಚಳವಾಗಿದೆ.
ದೇಶದ ಜನರನ್ನು ಸ್ವತಃ ಪ್ರಧಾನಿಯೇ ದ್ವೇಷಿಸುವಂತಹ ಸಂದರ್ಭಗಳನ್ನು ಸಹ ಕಾಣುತ್ತಿದ್ದೇವೆ. ದೇಶದ ನಾಗರಿಕರನ್ನು ‘ಖಾನ್‌ಮಾರ್ಕೆಟ್ ಗ್ಯಾಂಗ್’ ಎಂದೂ, ವಿಶ್ವವಿದ್ಯಾನಿಲಯಗಳಲ್ಲಿ ಓದುವ ವಿದ್ಯಾರ್ಥಿಗಳನ್ನು ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂದು ಹೇಳುವುದಲ್ಲದೆ ಹೋರಾಟಗಾರರನ್ನು ‘ಆಂದೋಲನಜೀವಿಗಳು’ ಎಂದು ಮೂದಲಿಸಲಾಗುತ್ತಿದೆ. ಪ್ರಧಾನಿ ತಮ್ಮನ್ನು ಪ್ರಶ್ನೆ ಮಾಡುವ ಯುವ ಜನರನ್ನು ‘ದಿಮಾಗೀ ನಕ್ಸಲ್’ ಎಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯ ಮೇಲೆ ನಿಂತು ಭಾಷಣ ಮಾಡಿದ್ದಾರೆ, ತಮ್ಮನ್ನು ಟೀಕೆ ಮಾಡುವ ವಿರೋಧ ಪಕ್ಷದ ನಾಯಕರನ್ನು ‘ನಾರಾಜ್ ಫುಫಾ’ ಎಂದು ಮೂದಲಿಸಿದ್ದಾರೆ. ದೇಶದ ಬಡ ನಾಗರಿಕರನ್ನು ‘ರೇವಡಿ ಕಲ್ಚರ್‌ವಾಲೆ’ ಎಂದು ಹಿಯಾಳಿಸಲಾಗಿದೆ.
ದೇಶದ ಪ್ರಧಾನ ಮಂತ್ರಿಯಾಗಿ ಮೋದಿಯವರು ಒಂದು ಸಮುದಾಯವನ್ನು ಹಿಯಾಳಿಸಿದ್ದು ಅಕ್ಷಮ್ಯ ಅಪರಾಧ. ಚುನಾವಣೆ ಸಂದರ್ಭದಲ್ಲಿ ಖಬರಸ್ತಾನ-ಶಂಶಾನ, ದಿವಾಲಿ-ಈದ್, ಜಾದಾ ಬಚ್ಚೆವಾಲೆ ಕೋ ದೇದೆಂಗೆ ಹೀಗೆ ಹಲವಾರು ಘೋಷಣೆಗಳೊಂದಿಗೆ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ದೇಶದ ಪ್ರಧಾನಿ ಮಾಡಿರುವುದು ಇತಿಹಾಸದಲ್ಲಿ ನೆನಪಿಡಲಾಗುತ್ತದೆ.
2021ರಲ್ಲಿ ಮೋದಿಯವರ ಆಡಳಿತದಲ್ಲಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ವಾಪಸ್ ಪಡೆದಿರುವುದು ಅವರ ವೈಫಲ್ಯಕ್ಕೆ ಒಂದು ದೊಡ್ಡ ಉದಾಹರಣೆ. ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಅಸುನೀಗಿದ್ದು ಪ್ರಜಾಪ್ರಭುತ್ವ ಸರಕಾರಕ್ಕೆ ಮತ್ತು ಮೋದಿ ಆಡಳಿತಕ್ಕೆ ಕಪ್ಪು ಚುಕ್ಕೆ. ಕಳೆದ ಮೂರು ವರ್ಷಗಳಲ್ಲಿ ಮಣಿಪುರದಲ್ಲಿ ನಡೆದ ಗಲಭೆ ನಿಯಂತ್ರಿಸಲು ಸಾಧ್ಯವಾಗದೇ ಇರುವುದನ್ನು ಮರೆಯಲಾಗದು. ಭಾರತದ ಗಡಿಯಲ್ಲಿ ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಚೀನಾದ ಅತಿಕ್ರಮಣವಾಗುತ್ತಿದೆ ಎಂದು ಅಲ್ಲಿಯ ಬಿಜೆಪಿ ಸಂಸದರೇ ಸದನದಲ್ಲಿ ಧ್ವನಿ ಎತ್ತಿದ್ದರು. ಆದರೆ ಮೋದಿ ಈ ಬಗ್ಗೆ ಮೌನ ವಹಿಸಿದ್ದಾರೆ.
ಮೋದಿ ಆಡಳಿತದಲ್ಲಿ ದೇಶದ ಸಾಲ ಹೆಚ್ಚಾಗಿದೆ, ಯುವ ಜನರು ಉದ್ಯೋಗವಿಲ್ಲದೆ ಹತಾಶರಾಗಿದ್ದಾರೆ, ಬೆಲೆ ಏರಿಕೆ ಜಾಸ್ತಿಯಾಗಿದೆ. ಆದರೂ ಮೋದಿಯವರಿಂದಲೇ ದೇಶ ಇಂದು ಉಳಿದಿದೆ, ಇಲ್ಲದಿದ್ದರೆ ದೇಶಕ್ಕೆ ಭಾರೀ ಗಂಡಾಂತರ ಇತ್ತು ಎನ್ನುವ ಹಾಗೆ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ.
(ಲೇಖಕರು: ಹಿರಿಯ ಬರಹಗಾರರು, ಚಿಂತಕರು)






