Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನ್ಯಾಯಾಂಗದ ನ್ಯಾಯದ ತಕ್ಕಡಿಯಲ್ಲಿ ಜಾತಿ...

ನ್ಯಾಯಾಂಗದ ನ್ಯಾಯದ ತಕ್ಕಡಿಯಲ್ಲಿ ಜಾತಿ ಮತ್ತು ಲಿಂಗದ ತೂಕವೆಷ್ಟು?

ನಾಗರಾಜ ಡಿ. ಬೊಮ್ಮಾಗಟ್ಟನಾಗರಾಜ ಡಿ. ಬೊಮ್ಮಾಗಟ್ಟ17 Nov 2026 3:03 PM IST
share
ನ್ಯಾಯಾಂಗದ ನ್ಯಾಯದ ತಕ್ಕಡಿಯಲ್ಲಿ ಜಾತಿ ಮತ್ತು ಲಿಂಗದ ತೂಕವೆಷ್ಟು?

ನ್ಯಾಯಾಧೀಶರ ಮುಂದೆ ನಿಂತಿರುವ ವ್ಯಕ್ತಿಯ ಜಾತಿ, ಧರ್ಮ, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಮೀರಿ ನ್ಯಾಯ ನೀಡಬೇಕೆಂದು ನಿರೀಕ್ಷಿಸುವ ನಾವು, ಆ ನ್ಯಾಯವನ್ನು ನೀಡುವ ನ್ಯಾಯಾಧೀಶರ ಆಯ್ಕೆಯಲ್ಲಿಯೂ ಇದೇ ನಿಷ್ಪಕ್ಷತೆಯನ್ನು ನಿರೀಕ್ಷಿಸಬಾರದೇ? ಪ್ರತಿಭೆಗೆ ಜಾತಿಯಿಲ್ಲ ಎಂದಾದರೆ, ಪ್ರತಿಭೆಯನ್ನು ಗುರುತಿಸುವ ವ್ಯವಸ್ಥೆಗೂ ಜಾತಿಯಿರಬಾರದಲ್ಲವೇ?

ಭಾರತ ಸ್ವಾತಂತ್ರ್ಯ ಪಡೆದು ಎಂಟು ದಶಕಗಳನ್ನು ಪೂರೈಸುವತ್ತ ಸಾಗುತ್ತಿದೆ. ಸಂವಿಧಾನ ಜಾರಿಯಾಗಿ ಏಳು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ಎಂಬ ಉದಾತ್ತ ಆಶಯಗಳನ್ನು ನಮ್ಮ ಸಂವಿಧಾನ ಅತ್ಯಂತ ಸ್ಪಷ್ಟವಾಗಿ ಪ್ರತಿಪಾದಿಸಿದೆ. ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದಲ್ಲಿ ಯಾವುದೇ ವ್ಯಕ್ತಿಗೆ ತಾರತಮ್ಯವಾಗಬಾರದು ಎಂಬುದು ಈ ಮಹಾನ್ ಗ್ರಂಥದ ಮೂಲಭೂತ ಆಶಯ.

ಆದರೆ, ವಾಸ್ತವದ ನೆಲೆಯಲ್ಲಿ ಒಂದು ಗಂಭೀರ ಪ್ರಶ್ನೆ ನಮ್ಮನ್ನು ಸದಾ ಕಾಡುತ್ತದೆ:

ಸಮಾಜಕ್ಕೆ ನ್ಯಾಯ ಒದಗಿಸಬೇಕಾದ ಉನ್ನತ ನ್ಯಾಯಾಂಗ ವ್ಯವಸ್ಥೆಯೊಳಗೆ ಸಾಮಾಜಿಕ ನ್ಯಾಯಕ್ಕೆ ಸಮಾನ ಅವಕಾಶವಿದೆಯೇ?

ನ್ಯಾಯಾಧೀಶರಾಗಲು ಪ್ರತಿಭೆ, ಕಾನೂನಿನ ಆಳವಾದ ಜ್ಞಾನ, ದೀರ್ಘಕಾಲದ ವೃತ್ತಿಪರ ಅನುಭವ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷ ಮನೋಭಾವ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಅರ್ಹತೆಗಳೆಲ್ಲವೂ ಮಹಿಳೆಯರಲ್ಲಿ ಇಲ್ಲವೇ? ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಕೀಲರಲ್ಲಿ ಇಲ್ಲವೇ? ದಶಕಗಳ ಕಾಲ ನ್ಯಾಯಾಲಯಗಳಲ್ಲಿ ಬೆವರು ಸುರಿಸಿ ವೃತ್ತಿಪರ ಅನುಭವ ಗಳಿಸಿರುವ ಅವರಲ್ಲಿ ಸಮರ್ಥ ನ್ಯಾಯಾಧೀಶರಾಗುವ ಸಾಮರ್ಥ್ಯವಿಲ್ಲವೇ? ಖಂಡಿತವಾಗಿಯೂ ಇದೆ. ಈ ಬಗ್ಗೆ ಆತ್ಮಾವಲೋಕನ ಬೇಕು.

ಹಾಗಿದ್ದರೆ ದೇಶದ ಉನ್ನತ ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಇಷ್ಟೊಂದು ತಳಮಟ್ಟದಲ್ಲಿರುವುದಕ್ಕೆ ಕಾರಣವೇನು? ಇಲ್ಲೊಂದು ಬಹುಮುಖ್ಯ ಪ್ರಶ್ನೆ ಏಳುತ್ತದೆ: ಪ್ರತಿಭೆಗೆ ಜಾತಿಯಿಲ್ಲ ಎಂದು ಹೇಳುವ ವ್ಯವಸ್ಥೆ, ಪ್ರತಿಭಾವಂತರಿಗೆ ಅವಕಾಶ ನೀಡುವಾಗ ಮಾತ್ರ ಜಾತಿಯ ಗೋಡೆಗಳನ್ನು ಏಕೆ ದಾಟಲಾಗುತ್ತಿಲ್ಲ?

1. ಅಂಕಿಅಂಶಗಳು ತೆರೆದಿಡುವ ವಾಸ್ತವಿಕತೆ

ಇದು ಕೇವಲ ಊಹೆ ಅಥವಾ ಭಾವನಾತ್ಮಕ ಆರೋಪವಲ್ಲ. ಸಂಸತ್ತಿನಲ್ಲಿ ಕೇಂದ್ರ ಸರಕಾರ ಮಂಡಿಸಿರುವ ಅಧಿಕೃತ ಅಂಕಿಅಂಶಗಳೇ ಉನ್ನತ ನ್ಯಾಯಾಂಗದಲ್ಲಿನ ಸಾಮಾಜಿಕ ಮತ್ತು ಲಿಂಗಾಧಾರಿತ ಪ್ರಾತಿನಿಧ್ಯದ ಅಸಮತೋಲನವನ್ನು ನಿಸ್ಸಂದೇಹವಾಗಿ ನಮ್ಮ ಮುಂದಿಡುತ್ತವೆ.

► ಮಹಿಳಾ ಪ್ರಾತಿನಿಧ್ಯದ ಕೊರತೆ

2026ರ ಫೆಬ್ರವರಿ 2ರ ಅಧಿಕೃತ ಅಂಕಿಅಂಶಗಳ ಪ್ರಕಾರ, ದೇಶದ 25 ಹೈಕೋರ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 814 ನ್ಯಾಯಾಧೀಶರಲ್ಲಿ ಕೇವಲ 116 ಮಹಿಳೆಯರಿದ್ದರು (ಕೇವಲ ಶೇ. 14.25ರಷ್ಟು ಮಾತ್ರ). ಕರ್ನಾಟಕ ಹೈಕೋರ್ಟ್‌ನಲ್ಲಿಯೂ 46 ಕಾರ್ಯನಿರತ ನ್ಯಾಯಾಧೀಶರಲ್ಲಿ ಇದ್ದದ್ದು ಕೇವಲ 9 ಮಹಿಳೆಯರು.

ಇನ್ನು 2026ರ ನವೆಂಬರ್ 1ರ ವೇಳೆಗೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ 38 ಮಂಜೂರಾದ ಹುದ್ದೆಗಳಲ್ಲಿ 37 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಆ ಪೈಕಿ ಮಹಿಳೆಯರ ಸಂಖ್ಯೆ ಕೇವಲ ಮೂವರು. ಇಷ್ಟು ವರ್ಷಗಳ ಪ್ರಜಾಪ್ರಭುತ್ವದ ಪ್ರಯಾಣದ ನಂತರವೂ ಸುಪ್ರೀಂಕೋರ್ಟ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. 10ಕ್ಕಿಂತ ಕಡಿಮೆ ಇರುವುದು ಗಂಭೀರ ಆತ್ಮಾವಲೋಕನಕ್ಕೆ ಕಾರಣವಾಗಬೇಕಲ್ಲವೇ?

► ಜಾತಿ ಆಧಾರಿತ ಪ್ರಾತಿನಿಧ್ಯದ ಪ್ರಶ್ನೆ

ಕೇಂದ್ರ ಕಾನೂನು ಸಚಿವಾಲಯವು ಸಂಸತ್ತಿನಲ್ಲಿ ನೀಡಿದ ಮಾಹಿತಿಯ ಪ್ರಕಾರ, 2018ರಿಂದ 2026ರ ಮಾರ್ಚ್ 9ರವರೆಗೆ ನೇಮಕಗೊಂಡ 849 ಹೈಕೋರ್ಟ್ ನ್ಯಾಯಾಧೀಶರ ಸಾಮಾಜಿಕ ಹಿನ್ನೆಲೆ ಈ ಕೆಳಗಿನಂತಿದೆ(2018 ರಿಂದ ನೇಮಕಗೊಂಡವರ ಸಂಚಿತ ಸಂಖ್ಯೆಗಳಾಗಿದ್ದು, ಈಗ ಸೇವೆಯಲ್ಲಿರುವವರ ಸಂಖ್ಯೆಗಳಲ್ಲ, ಅಲ್ಲದೆ ಉಳಿದವರನ್ನೆಲ್ಲಾ ಸಾಮಾನ್ಯ ವರ್ಗದವರೆಂದು ಊಹಿಸಲಾಗದು):

* ಪರಿಶಿಷ್ಟ ಜಾತಿ: 33 (ಶೇ. 3.89)

* ಪರಿಶಿಷ್ಟ ಪಂಗಡ: 17 (ಶೇ. 2.00)

* ಇತರ ಹಿಂದುಳಿದ ವರ್ಗ: 104 (ಶೇ. 12.25)

* ಅಲ್ಪಸಂಖ್ಯಾತರು: 46 (ಶೇ. 5.42)

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವು 2018ರಿಂದ ನೇಮಕಗೊಂಡವರ ಅಂಕಿಅಂಶಗಳೇ ಹೊರತು, ಪ್ರಸ್ತುತ ಸೇವೆಯಲ್ಲಿರುವ ಒಟ್ಟು ನ್ಯಾಯಾಧೀಶರ ಜಾತಿವಾರು ಪ್ರಮಾಣವಲ್ಲ. ಹಾಗಾದರೆ ಉಳಿದ ಬಹುಪಾಲು ನೇಮಕಾತಿಗಳ ಸಾಮಾಜಿಕ ಹಿನ್ನೆಲೆ ಏನು? ವಿವಿಧ ಸಮುದಾಯಗಳಿಗೆ ಅವಕಾಶಗಳು ಯಾವ ಪ್ರಮಾಣದಲ್ಲಿ ಹಂಚಿಕೆಯಾಗಿವೆ? ಈ ಕುರಿತು ಸಮಗ್ರ ಮತ್ತು ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ಮಾಹಿತಿ ಏಕೆ ಲಭ್ಯವಿಲ್ಲ? ಇವು ಯಾರನ್ನೂ ಅವಮಾನಿಸುವ ಪ್ರಶ್ನೆಗಳಲ್ಲ; ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡುವ ಅತ್ಯಗತ್ಯ ಪ್ರಶ್ನೆಗಳು.

2. ವಕೀಲರ ವಲಯದಿಂದ ನ್ಯಾಯಾಧೀಶರ ಕುರ್ಚಿಯವರೆಗೆ ಅಂತರವೆಷ್ಟು?

ನ್ಯಾಯಾಂಗದಲ್ಲಿ ಮಹಿಳೆಯರು ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಕಡಿಮೆಯಿದೆ ಎಂದು ಹೇಳುವಾಗ, ವಕೀಲರ ಒಟ್ಟು ಸಂಖ್ಯೆಯಲ್ಲಿ ಅವರ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಅಗತ್ಯ.

2025ರ ಜುಲೈನಲ್ಲಿ ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಮಾಹಿತಿ ಒದಗಿಸಿದ 15 ರಾಜ್ಯಗಳ ಭಾರತದ ವ್ಯಾಪ್ತಿಯಲ್ಲಿ ಸುಮಾರು 2,84,507 ಮಹಿಳಾ ವಕೀಲರು ನೋಂದಾಯಿತರಾಗಿದ್ದಾರೆ (ಉತ್ತರ ಪ್ರದೇಶವೊಂದರಲ್ಲೇ 49,545). ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಕೀಲರ ಜಾತಿವಾರು ನೋಂದಣಿ ಮಾಹಿತಿಯನ್ನು ಕೇಂದ್ರ ಮಟ್ಟದಲ್ಲಿ ನಿರ್ವಹಿಸಲಾಗುತ್ತಿಲ್ಲ. ಇನ್ನೊಂದೆಡೆ, ಬೆಂಗಳೂರಿನ ‘ಸೆಂಟರ್ ಫಾರ್ ಲಾ ಆಂಡ್ ಪಾಲಿಸಿ ರಿಸರ್ಚ್ (ಅಐPಖ)’ ಸಂಸ್ಥೆಯು ಎಲ್ಲ ಸಕ್ರಿಯ ವಕೀಲರ ಸಮೀಕ್ಷೆ ಅಲ್ಲದಿದ್ದರೂ ಕೆಲವು ಹೆಸರುಗಳ ಆಧಾರದಲ್ಲಿ ಲಿಂಗವನ್ನು ಅಂದಾಜಿಸಿರುವುದೂ ಇದೆ; ಅದರಿಂದ ಇದನ್ನು ಇಡೀ ವಕೀಲ ಸಮುದಾಯದ ನಿಖರ ಮಾಹಿತಿ ಎಂದು ಹೇಳಲಾಗದಿದ್ದರೂ 2026ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ ಅಧ್ಯಯನದಂತೆ, ದಿಲ್ಲಿ (ಶೇ. 23.3), ಕೇರಳಂ (ಶೇ. 30.5) ಮತ್ತು ಒಡಿಶಾ (ಶೇ. 28.3) ಹೈಕೋರ್ಟ್ ಬಾರ್ ಅಸೋಸಿಯೇಷನ್‌ಗಳಲ್ಲಿ ಮಹಿಳಾ ವಕೀಲರ ಪ್ರಾತಿನಿಧ್ಯ ಗಮನಾರ್ಹವಾಗಿದೆ.

ವಕೀಲರ ಸಂಘಗಳಲ್ಲಿ ಮಹಿಳೆಯರ ಪ್ರಮಾಣ ಶೇ. 30ರ ಸಮೀಪವಿದ್ದಾಗ, ನ್ಯಾಯಾಧೀಶರ ಸ್ಥಾನಗಳಲ್ಲಿ ಮಾತ್ರ ಅವರ ಪ್ರಮಾಣ ಏಕೆ ಪಾತಾಳದಲ್ಲಿದೆ? ವೃತ್ತಿಪರ ಅನುಭವ ಮತ್ತು ಅರ್ಹತೆ ಹೊಂದಿದ ನಂತರವೂ ಉನ್ನತ ನ್ಯಾಯಾಂಗದ ನೇಮಕಾತಿಯಲ್ಲಿ ಅವರಿಗೆ ಸಮಾನ ಅವಕಾಶ ದೊರೆಯುತ್ತಿಲ್ಲವೇ?

3. ದತ್ತಾಂಶದ ಗೊಂದಲ ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ

ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರೈಸ್ತ, ಸಿಖ್, ಜೈನ ಮತ್ತು ಬೌದ್ಧ ಸಮುದಾಯಗಳ ಕೆಲವು ನಿರ್ದಿಷ್ಟ ಜಾತಿಗಳು ಒಬಿಸಿ ಪಟ್ಟಿಯಲ್ಲಿಯೂ ಸೇರ್ಪಡೆಯಾಗಿವೆ. ಆದರೆ, ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಅಲ್ಪಸಂಖ್ಯಾತರ ಸಂಖ್ಯೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸುವ ಕೇಂದ್ರ ಸರಕಾರ, ಅದರೊಳಗಿನ ಧಾರ್ಮಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಅತಿಕ್ರಮಣವನ್ನು (Overlap) ಸ್ಪಷ್ಟಪಡಿಸಿಲ್ಲ. ಧರ್ಮ, ಜಾತಿ ಮತ್ತು ಸಾಮಾಜಿಕ ಹಿನ್ನೆಲೆಯ ಆಯಾಮಗಳನ್ನು ಪ್ರತ್ಯೇಕವಾಗಿ ಗುರುತಿಸುವ ದತ್ತಾಂಶವನ್ನು ಸಾರ್ವಜನಿಕರಿಗೆ ಒದಗಿಸುವ ಜವಾಬ್ದಾರಿ ವ್ಯವಸ್ಥೆಗೆ ಇಲ್ಲವೇ?

4. ಕೊಲಿಜಿಯಂ ವ್ಯವಸ್ಥೆ ಮತ್ತು ಪಾರದರ್ಶಕತೆಯ ಕೊರೆ

ನ್ಯಾಯಾಧೀಶರ ನೇಮಕಾತಿಯಲ್ಲಿ ಸಂವಿಧಾನದ ಅನುಚ್ಛೇದ 124, 217 ಮತ್ತು 224ರ ಅಡಿಯಲ್ಲಿ ‘ಕೊಲಿಜಿಯಂ’ ವ್ಯವಸ್ಥೆಯೇ ನಿರ್ಣಾಯಕ. ಈ ವ್ಯವಸ್ಥೆಯು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡುವ ಉದ್ದೇಶ ಹೊಂದಿದ್ದರೂ, ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕೊಲಿಜಿಯಂನಲ್ಲಿ ಸಾಮಾಜಿಕ ವೈವಿಧ್ಯವೇ ಸಮರ್ಪಕವಾಗಿಲ್ಲದಿದ್ದರೆ, ಸಮಾಜದ ಎಲ್ಲ ವರ್ಗಗಳ ಪ್ರತಿಭೆಯನ್ನು ಗುರುತಿಸುವ ದೃಷ್ಟಿಕೋನ ಅಲ್ಲಿ ಎಷ್ಟರಮಟ್ಟಿಗೆ ಪ್ರತಿಫಲಿಸಬಹುದು? ಆಯ್ಕೆ ವ್ಯವಸ್ಥೆಯೊಳಗೆ ವೈಯಕ್ತಿಕ ಪರಿಚಯಗಳು, ವೃತ್ತಿಪರ ಸಂಪರ್ಕ ಜಾಲಗಳು (Social Capital) ಅಥವಾ ಅರಿವಿಲ್ಲದ ಪೂರ್ವಾಗ್ರಹಗಳು (Unconscious Bias) ಪ್ರಭಾವ ಬೀರುತ್ತಿವೆಯೇ ಎಂಬುದನ್ನು ವಸ್ತುನಿಷ್ಠವಾಗಿ ಪರಿಶೀಲಿಸಬೇಕಾಗಿದೆ.

5. ಸಾಮಾಜಿಕ ನ್ಯಾಯದ ಪಾಠವನ್ನು ನ್ಯಾಯಾಂಗವೇ ಮರೆತಿದೆಯೇ?

ಐತಿಹಾಸಿಕವಾಗಿ ಅವಕಾಶಗಳ ಹಂಚಿಕೆಯಲ್ಲಿ ಅಸಮಾನತೆ ಇರುವ ಸಮಾಜದಲ್ಲಿ, ಪ್ರತಿಭೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಆಯ್ಕೆ ಮಾಡುತ್ತಿದ್ದೇವೆ ಎಂಬ ಹೇಳಿಕೆ ಮಾತ್ರ ಸಾಕಾಗುವುದಿಲ್ಲ. ಪ್ರತಿಭೆ ಬೆಳೆಯಲು ಸಮಾನ ಅವಕಾಶಗಳು ಬೇಕು; ಆ ಪ್ರತಿಭೆಯನ್ನು ಗುರುತಿಸಲು ಮುಕ್ತ ಮನಸ್ಸು ಬೇಕು.

ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ಎಲ್ಲ ಅಡೆತಡೆಗಳನ್ನು ದಾಟಿ ಉನ್ನತ ವೃತ್ತಿಪರ ಅರ್ಹತೆ ಗಳಿಸಿದರೂ ಸಾಮಾಜಿಕ ಹಿನ್ನೆಲೆಯ ಕಾರಣದಿಂದ ಸಮಾನ ಅವಕಾಶ ದೊರೆಯದಿದ್ದರೆ ಅದು ವೈಯಕ್ತಿಕ ವೈಫಲ್ಯವಲ್ಲ, ಸಾಂಸ್ಥಿಕ ವೈಫಲ್ಯ. ನ್ಯಾಯ ನೀಡುವವರು ಸಮಾಜದ ಎಲ್ಲ ವರ್ಗಗಳ ಸಂಕಷ್ಟ ಮತ್ತು ವಾಸ್ತವಿಕತೆಯನ್ನು ಅರಿತವರಾಗಿರಬೇಕು. ನ್ಯಾಯಾಂಗವು ಕೇವಲ ಕೆಲವು ಸಾಮಾಜಿಕ ವರ್ಗಗಳ ಪ್ರತಿಭೆಯ ಪ್ರತಿಬಿಂಬವಾಗದೆ, ಇಡೀ ಸಮಾಜದ ವೈವಿಧ್ಯದ ಪ್ರತಿಬಿಂಬವಾಗಬೇಕು.

6. ಸಮಗ್ರ ದತ್ತಾಂಶದ ಕೊರತೆಯೆಂಬ ಅತಿದೊಡ್ಡ ಅಡಚಣೆ

ಈ ಸಾಮಾಜಿಕ ನ್ಯಾಯದ ಸಾಧನೆಯನ್ನು ಅಳೆಯಲು ನಮ್ಮ ಮುಂದಿರುವ ದೊಡ್ಡ ಅಡಚಣೆ ಮಾಹಿತಿಯ ಕೊರತೆ. ಸರಕಾರ, ಬಾರ್ ಕೌನ್ಸಿಲ್ ಮತ್ತು ನ್ಯಾಯಾಲಯಗಳು ಸಮನ್ವಯದಿಂದ ಈ ಕೆಳಗಿನ ದತ್ತಾಂಶವನ್ನು ವಾರ್ಷಿಕವಾಗಿ ಪ್ರಕಟಿಸಬೇಕಾದ ತುರ್ತು ಅಗತ್ಯವಿದೆ:

* ದೇಶದ ಒಟ್ಟು ನೋಂದಾಯಿತ ವಕೀಲರ ಲಿಂಗ ಮತ್ತು ಸಾಮಾಜಿಕ (ಎಸ್/ಎಸ್‌ಟಿ/ಒಬಿಸಿ/ಅಲ್ಪಸಂಖ್ಯಾತ) ಹಿನ್ನೆಲೆಯ ನಿಖರ ಮಾಹಿತಿ.

* ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವೃತ್ತಿಪರ ಅನುಭವ ಹೊಂದಿರುವ ವಕೀಲರ ವರ್ಗವಾರು ಮಾಹಿತಿ.

* ವಕೀಲರ ವಲಯದಿಂದ ಮತ್ತು ಕೆಳ ನ್ಯಾಯಾಂಗದಿಂದ ಪದೋನ್ನತಿ ಪಡೆದ ನ್ಯಾಯಾಧೀಶರ ಪ್ರತ್ಯೇಕ ಸಾಮಾಜಿಕ ಪ್ರಾತಿನಿಧ್ಯ.

* ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾದ ಅರ್ಹತೆ ಮತ್ತು ಆಯ್ಕೆಯ ಮಾನದಂಡಗಳ ಹೆಚ್ಚು ಪಾರದರ್ಶಕ ವಿವರ.

7. ಉತ್ತರದ ನಿರೀಕ್ಷೆಯಲ್ಲಿರುವ ಕೆಲವು ಮೂಲಭೂತ ಪ್ರಶ್ನೆಗಳು

* ನ್ಯಾಯಾಂಗದ ಸ್ವಾತಂತ್ರ್ಯವನ್ನು ಅತೀವವಾಗಿ ಗೌರವಿಸುವ ನಾವು, ಅದರೊಳಗಿನ ಸಾಮಾಜಿಕ ಅಸಮಾನತೆಯನ್ನು ಪ್ರಶ್ನಿಸಬಾರದೇ?

* ನೇಮಕಾತಿಯ ಮಾನದಂಡಗಳು ನಿಜಕ್ಕೂ ನಿಷ್ಪಕ್ಷವಾಗಿದ್ದರೆ, ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಹಿಂಜರಿಕೆಯೇಕೆ?

* ದಶಕಗಳ ಅನುಭವ ಮತ್ತು ವೃತ್ತಿಪರ ಸಾಮರ್ಥ್ಯ ಹೊಂದಿರುವ ಅರ್ಹ ಮಹಿಳೆಯರು ಹಾಗೂ ಹಿಂದುಳಿದ ಸಮುದಾಯಗಳ ವಕೀಲರಿಗೆ ಉನ್ನತ ನ್ಯಾಯಾಂಗದಲ್ಲಿ ಸಮಾನ ಅವಕಾಶ ದೊರೆಯುವಂತೆ ಖಚಿತಪಡಿಸುವ ಸಾಂಸ್ಥಿಕ ಕಾರ್ಯವಿಧಾನವನ್ನು ರೂಪಿಸಲು ಸಾಧ್ಯವಿಲ್ಲವೇ?

8. ನ್ಯಾಯದ ಕುರ್ಚಿಗೂ ಸಾಮಾಜಿಕ ನ್ಯಾಯದ ಅರ್ಹತೆ ಇರಲಿ!

ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯದಿದ್ದರೆ, ಸಾಮಾಜಿಕ ನ್ಯಾಯದ ಬಗ್ಗೆ ನಾವು ಮಾಡುವ ಭಾಷಣಗಳು ಕೇವಲ ಸಂವಿಧಾನದ ಪುಟಗಳಲ್ಲಿನ ಸುಂದರ ಪದಗಳಾಗಿ ಉಳಿಯುವ ಅಪಾಯವಿದೆ. ನ್ಯಾಯಾಂಗದಲ್ಲಿ ಪ್ರತಿಭೆಗೆ, ಅನುಭವಕ್ಕೆ ಮತ್ತು ಪ್ರಾಮಾಣಿಕತೆಗೆ ಮೊದಲ ಆದ್ಯತೆ ಇರಲಿ. ಆದರೆ ಆ ಪ್ರತಿಭೆಯನ್ನು ಗುರುತಿಸುವ ಕಣ್ಣುಗಳು ಜಾತಿ, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಯ ಪೂರ್ವಾಗ್ರಹಗಳಿಂದ ಸಂಪೂರ್ಣವಾಗಿ ಮುಕ್ತವಾಗಿರಲಿ.

ಮೇಲ್ಜಾತಿಯ ವ್ಯಕ್ತಿಯೊಬ್ಬರು ತಮ್ಮ ಪ್ರತಿಭೆ ಮತ್ತು ಅರ್ಹತೆಯ ಆಧಾರದಲ್ಲಿ ನ್ಯಾಯಾಧೀಶರಾಗುವುದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಯಾವುದೇ ಒಂದು ಸಾಮಾಜಿಕ ವರ್ಗಕ್ಕೆ ಉನ್ನತ ನ್ಯಾಯಾಂಗದಲ್ಲಿ ಅಸಮಾನ ಪ್ರಮಾಣದ ಪ್ರಾಬಲ್ಯವಿದ್ದರೆ, ಅದರ ಹಿಂದಿರುವ ವ್ಯವಸ್ಥಿತ ಕಾರಣಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ.

ನ್ಯಾಯಾಧೀಶರ ಮುಂದೆ ನಿಂತಿರುವ ವ್ಯಕ್ತಿಯ ಜಾತಿ, ಧರ್ಮ, ಲಿಂಗ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಮೀರಿ ನ್ಯಾಯ ನೀಡಬೇಕೆಂದು ನಿರೀಕ್ಷಿಸುವ ನಾವು, ಆ ನ್ಯಾಯವನ್ನು ನೀಡುವ ನ್ಯಾಯಾಧೀಶರ ಆಯ್ಕೆಯಲ್ಲಿಯೂ ಇದೇ ನಿಷ್ಪಕ್ಷತೆಯನ್ನು ನಿರೀಕ್ಷಿಸಬಾರದೇ? ಪ್ರತಿಭೆಗೆ ಜಾತಿಯಿಲ್ಲ ಎಂದಾದರೆ, ಪ್ರತಿಭೆಯನ್ನು ಗುರುತಿಸುವ ವ್ಯವಸ್ಥೆಗೂ ಜಾತಿಯಿರಬಾರದಲ್ಲವೇ?

ನ್ಯಾಯಾಂಗವು ಸಮಾಜಕ್ಕೆ ಸಮಾನತೆಯ ಪಾಠ ಬೋಧಿಸುವುದಷ್ಟೇ ಸಾಲದು; ತನ್ನೊಳಗೂ ಆ ಸಮಾನತೆಯನ್ನು ಸಾಕಾರಗೊಳಿಸುವ ಮಾದರಿಯಾಗಬೇಕು.

ಏಕೆಂದರೆ, ನ್ಯಾಯದ ದೇವತೆಗೆ ಕಣ್ಣಿಗೆ ಬಟ್ಟೆ ಕಟ್ಟಿರುವುದು ನಿಷ್ಪಕ್ಷಪಾತದ ಸಂಕೇತವೇ ಹೊರತು, ಸಮಾಜದ ಒಂದು ವರ್ಗದವರನ್ನು ಮಾತ್ರ ಕಾಣುವ ಸೌಲಭ್ಯವಲ್ಲ!

Tags

castejustice
share
ನಾಗರಾಜ ಡಿ. ಬೊಮ್ಮಾಗಟ್ಟ
ನಾಗರಾಜ ಡಿ. ಬೊಮ್ಮಾಗಟ್ಟ

ಉಪನ್ಯಾಸಕ, ಬೆಂಗಳೂರು

Next Story
X