ದೇಶದಲ್ಲಿ ಯಾರೆಲ್ಲಾ ಬಿಜೆಪಿಯ ‘ಬಿ ಟೀಮ್’ಗಳು?

ನಿಜವಾಗಿ ತಾವೇ ಕಷ್ಟಪಟ್ಟು ಗೆಲ್ಲಿಸಿದ ರೆಡಿಮೇಡ್ ಶಾಸಕರು ಮತ್ತು ಸಂಸದರನ್ನು ಬಿಜೆಪಿಗೆ ಸರಬರಾಜು ಮಾಡುವ ಕೆಲವು ಪಕ್ಷಗಳೇ ಬಿಜೆಪಿಯ ನೇರ ಹಾಗೂ ಪ್ರತ್ಯಕ್ಷ ಬೆಂಬಲಿಗರು. ಬೇರೆ ಬೇರೆ ಸಂದರ್ಭಗಳಲ್ಲಿ ಭಾರತದ ಹೆಚ್ಚಿನೆಲ್ಲಾ ಸೆಕ್ಯುಲರ್ ಪಕ್ಷಗಳ ಹಲವು ಸಂಸದರು ಮತ್ತು ಶಾಸಕರು ಬಿಜೆಪಿಯ ಮಡಿಲಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಈ ವಿಷಯದಲ್ಲಿ ಉವೈಸಿಯ ಪಕ್ಷದ ದಾಖಲೆ ಚೆನ್ನಾಗಿದೆ. ಇಂದು ಅವರ ಪಕ್ಷದಲ್ಲಿ 13 ಮಂದಿ ಶಾಸಕರಿದ್ದಾರೆ (ತೆಲಂಗಾಣದಲ್ಲಿ 7, ಬಿಹಾರದಲ್ಲಿ 5 ಮತ್ತು ಮಹಾರಾಷ್ಟ್ರದಲ್ಲಿ 1). ಆದರೆ ಈ ತನಕ ಅವರ ಪಕ್ಷದ ಯಾರೂ ಬಿಜೆಪಿಗೆ ಪಕ್ಷಾಂತರ ಮಾಡಿಲ್ಲ.
ನಮ್ಮ ದೇಶದ ರಾಜಕೀಯ ಸಂತೆಯಲ್ಲಿ ಸಂತರನ್ನು ಹುಡುಕಿದರೆ ಎಲ್ಲಿ ಸಿಗುತ್ತಾರೆ?
ಅಸದುದ್ದೀನ್ ಉವೈಸಿಯಂತೂ ಖಂಡಿತ ಸಂತರಲ್ಲ. ಬೇರೆಲ್ಲ ಪುಢಾರಿಗಳಂತೆ ಅವರಿಗೂ ಅಧಿಕಾರ ಬೇಕು. ತುರ್ತಾಗಿ ಬೇಕು. ಯಾಕೆ ಬೇಕು ಎಂದು ಕೇಳಿದರೆ, ಅವರು ತನ್ನ ಬಳಿ ರೆಡಿ ಇರುವ ಘನ ಉದ್ದೇಶಗಳ ಒಂದು ಉದ್ದದ ಪಟ್ಟಿಯನ್ನು ಓದಿ ಹೇಳುತ್ತಾರೆ. ಅದರಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಶುದ್ಧ ಆಡಳಿತ, ಉತ್ತರದಾಯಿತ್ವ, ಪಾರದರ್ಶಕತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ಸಬಲೀಕರಣ, ಹಿಂದುಳಿದವರ ಉದ್ಧಾರ ಇತ್ಯಾದಿ ಹಲವು ಚಂದದ ಪದಗಳು ಕೇಳಲು ಸಿಗುತ್ತವೆ. 2008ರಿಂದಲೂ ಅವರು ಆಲ್ ಇಂಡಿಯಾ ಮಜ್ಲಿಸ್ ಇತ್ತಿಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಎಂಬ ಉರ್ದು ಹೆಸರಿನ ಪ್ರಾದೇಶಿಕ ಪಕ್ಷದ ಅಧ್ಯಕ್ಷರು. ನಮ್ಮ ದೇಶದ ಬೇರೆ ಹಲವು ಪಕ್ಷಗಳಂತೆ ಅವರದ್ದು ಕೂಡಾ ಕುಟುಂಬ ಪ್ರಧಾನ ಹಾಗೂ ವ್ಯಕ್ತಿಪ್ರಧಾನ ಪಕ್ಷ. ಸರ್ವೋಚ್ಚ ನಾಯಕನನ್ನು ಟೀಕಿಸಿದರೆ ಪಕ್ಷದೊಳಗೆ ಉಳಿಗಾಲವಿಲ್ಲ. ಅವರಿಗಿಂತ ಮುನ್ನ ಹೈದರಾಬಾದ್ನಿಂದ 6 ಬಾರಿ ಸಂಸದರಾಗಿ ಚುನಾಯಿತರಾಗಿದ್ದ ಅವರ ತಂದೆ ಸುಲ್ತಾನ್ ಸಲಾಹುದ್ದೀನ್ ಉವೈಸಿ ಪಕ್ಷಾಧ್ಯಕ್ಷರಾಗಿದ್ದರು. ಅವರಿಗಿಂತ ಮುನ್ನ, ಅವರ ತಂದೆ (ಅಸದುದ್ದೀನ್ ಉವೈಸಿಯ ತಾತ) ಅಬ್ದುಲ್ ವಾಹಿದ್ ಉವೈಸಿ ಅಧ್ಯಕ್ಷರಾಗಿದ್ದರು. ಪಕ್ಷದ ಪರಂಪರೆ ನೋಡಿದರೆ, ಅಸದುದ್ದೀನ್ ಉವೈಸಿಯವರ ಬಳಿಕ ಅವರ ಪುತ್ರ ಅಥವಾ ಅವರದೇ ಕುಟುಂಬದ ಬೇರೆ ಯಾರಾದರೂ ಸದಸ್ಯರು ಪಕ್ಷದ ಅಧ್ಯಕ್ಷರಾಗಬಹುದು! ಅವರ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಆ ಮಟ್ಟಿಗಿದೆ.
57ರ ಹರೆಯದ ಉವೈಸಿ ವೃತ್ತಿಯಲ್ಲಿ ವಕೀಲರು. ವಿದೇಶದಲ್ಲಿ ಕಾನೂನು ವ್ಯಾಸಂಗ ಮಾಡಿ ಬ್ಯಾರಿಸ್ಟರ್ ಪದವಿ ಪಡೆದವರು. 6 ಮಕ್ಕಳ ತಂದೆ. ಹೈದರಾಬಾದ್ನಿಂದ 5 ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾದವರು. ಜಾಣ ಮಾತುಗಾರ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಭಾವಶಾಲಿ ಮಾತುಗಾರ. ಸಂಸತ್ತಿನಲ್ಲಿ ಸದಸ್ಯರಾಗಿ ಅವರ ಕಾರ್ಯ ನಿರ್ವಹಣೆಗೆ ವ್ಯಾಪಕ ಪ್ರಶಂಸೆ ಸಿಕ್ಕಿದೆ. 2014ರಲ್ಲಿ ಅವರಿಗೆ ‘ಸಂಸದ್ ರತ್ನ’ ಪ್ರಶಸ್ತಿ ಸಿಕ್ಕಿತ್ತು. ಅತ್ಯಧಿಕ ಹಾಜರಾತಿ, ಚರ್ಚೆಗಳಲ್ಲಿ ಸಕ್ರಿಯ ಸಹಭಾಗಿತ್ವ, ಗಣ್ಯ ಸಂಖ್ಯೆಯಲ್ಲಿ ಖಾಸಗಿ ಸದಸ್ಯರ ಮಸೂದೆ ಮಂಡನೆ - ಹೀಗೆ ವಿವಿಧ ಮಾನದಂಡಗಳ ಆಧಾರದಲ್ಲಿ ಹಲವು ಬಾರಿ (ವರ್ಷ 2013, 2014, 2019, 2021 ಮತ್ತು 2022ರಲ್ಲಿ) ‘ವರ್ಷದ ಅತ್ಯುತ್ತಮ ಸಂಸದ್ ಸದಸ್ಯ’ ಪ್ರಶಸ್ತಿಗೆ ಪಾತ್ರರಾದವರು.
ಉವೈಸಿಯವರ ವಿರುದ್ಧ ಒಂದು ಗಂಭೀರ ಆರೋಪ ಬಹುಕಾಲದಿಂದ ಚಲಾವಣೆಯಲ್ಲಿದೆ. ‘‘ಅವರು ಬಿಜೆಪಿಯ ‘ಬಿ ಟೀಮ್’ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್, ಎಸ್ಪಿ, ಆರ್ಜೆಡಿ ಮತ್ತಿತರ ಸೆಕ್ಯುಲರ್ ಪಕ್ಷಗಳು ಗೆಲ್ಲಬಹುದಾಗಿದ್ದ ಚುನಾವಣಾ ಕ್ಷೇತ್ರಗಳಲ್ಲಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮೂಲಕ ಸೆಕ್ಯುಲರ್ ಮತಗಳು ಛಿದ್ರವಾಗಿ ಬಿಜೆಪಿ ಗೆಲ್ಲುವುದಕ್ಕೆ ಕಾರಣವಾಗುತ್ತಿದ್ದಾರೆ. ಈ ಮೂಲಕ ಅವರು ಪರೋಕ್ಷವಾಗಿ ಬಿಜೆಪಿಗೆ ನೆರವಾಗುತ್ತಿದ್ದಾರೆ’’ ಎಂದು ಅವರ ಹಲವು ವಿರೋಧಿಗಳು ಆರೋಪಿಸುತ್ತಾ ಬಂದಿದ್ದಾರೆ. ಕಳೆದ ಬಿಹಾರ ಚುನಾವಣೆಯ ಬಳಿಕ ಮತ್ತು ಇತ್ತೀಚೆಗೆ ಉತ್ತರ ಪ್ರದೇಶದ ಚುನಾವಣೆಯ ಸಿದ್ಧತೆ ಆರಂಭವಾದ ಬಳಿಕ ಈ ತರದ ಆರೋಪಗಳು ಇನ್ನಷ್ಟು ವ್ಯಾಪಕವಾಗಿವೆ. ‘‘ಹಲವು ಬಿಜೆಪಿ ವಿರೋಧಿ ರಾಜಕೀಯ ನಾಯಕರ ವಿರುದ್ಧ ನಡೆದಿರುವ ಈ.ಡಿ. ಅಥವಾ ಸಿಬಿಐ ದಾಳಿಗಳು ಈ ತನಕ ಉವೈಸಿ ವಿರುದ್ಧ ನಡೆದಿಲ್ಲ. ಅವರು ಬಿಜೆಪಿಯ ಆಪ್ತರೆಂಬುದಕ್ಕೆ ಇದು ಒಂದು ಬಲಿಷ್ಠ ಪುರಾವೆ’’ ಎಂದು ಕೂಡಾ ವಿರೋಧಿಗಳು ವಾದಿಸುತ್ತಿದ್ದಾರೆ.
ಇಲ್ಲಿ, ಒಂದಂಶ ಗಮನಾರ್ಹ. ಉವೈಸಿಯ ಪಕ್ಷವು ನೇರವಾಗಿ ಅಥವಾ ಪ್ರತ್ಯಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಯಾರೂ ಆರೋಪಿಸಿಲ್ಲ.
ನಿಜವಾಗಿ ತಾವೇ ಕಷ್ಟಪಟ್ಟು ಗೆಲ್ಲಿಸಿದ ರೆಡಿಮೇಡ್ ಶಾಸಕರು ಮತ್ತು ಸಂಸದರನ್ನು ಬಿಜೆಪಿಗೆ ಸರಬರಾಜು ಮಾಡುವ ಕೆಲವು ಪಕ್ಷಗಳೇ ಬಿಜೆಪಿಯ ನೇರ ಹಾಗೂ ಪ್ರತ್ಯಕ್ಷ ಬೆಂಬಲಿಗರು. ಬೇರೆ ಬೇರೆ ಸಂದರ್ಭಗಳಲ್ಲಿ ಭಾರತದ ಹೆಚ್ಚಿನೆಲ್ಲಾ ಸೆಕ್ಯುಲರ್ ಪಕ್ಷಗಳ ಹಲವು ಸಂಸದರು ಮತ್ತು ಶಾಸಕರು ಬಿಜೆಪಿಯ ಮಡಿಲಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಈ ವಿಷಯದಲ್ಲಿ ಉವೈಸಿಯ ಪಕ್ಷದ ದಾಖಲೆ ಚೆನ್ನಾಗಿದೆ. ಇಂದು ಅವರ ಪಕ್ಷದಲ್ಲಿ 13 ಮಂದಿ ಶಾಸಕರಿದ್ದಾರೆ (ತೆಲಂಗಾಣದಲ್ಲಿ 7, ಬಿಹಾರದಲ್ಲಿ 5 ಮತ್ತು ಮಹಾರಾಷ್ಟ್ರದಲ್ಲಿ 1). ಆದರೆ ಈ ತನಕ ಅವರ ಪಕ್ಷದ ಯಾರೂ ಬಿಜೆಪಿಗೆ ಪಕ್ಷಾಂತರ ಮಾಡಿಲ್ಲ. ಇಷ್ಟು ವರ್ಷದಿಂದ ರಾಜಕೀಯ ಮಾಡಿರುವ ಉವೈಸಿಯ ಪಕ್ಷ ಎಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೊಂದಾಣಿಕೆಯ ಪ್ರಸ್ತಾವವನ್ನೂ ಮಂಡಿಸಿಲ್ಲ. ಉವೈಸಿಯವರ ಪಕ್ಷವು ವಿವಿಧ ವಿಷಯಗಳಲ್ಲಿ ಸ್ಪಷ್ಟ ನಿಲುವು ತಾಳಿದೆ. ಎಲ್ಲ ಪ್ರಮುಖ ವಿಷಯಗಳಲ್ಲಿ ಬಿಜೆಪಿ ಮತ್ತು ಸರಕಾರದ ಧೋರಣೆಗಳನ್ನು ಉಗ್ರವಾಗಿ ವಿರೋಧಿಸಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತವರ ಸರಕಾರವನ್ನು ಕಟುವಾಗಿ ಟೀಕಿಸಿ ಉವೈಸಿ ಮಾಡಿದ ಹತ್ತಾರು ಭಾಷಣಗಳು ದಾಖಲೆಯಲ್ಲಿವೆ. ಬಾಬರಿ ಮಸೀದಿ, ಎನ್ಆರ್ಸಿ, ಆರ್ಟಿಕಲ್ 370, ಎಸ್ಐಆರ್, ಪರ್ಸನಲ್ ಲಾ, ಬುಲ್ಡೋಜರ್ ರಾಜಕೀಯ, ಅಕ್ರಮ ಬಂಧನಗಳು, ದ್ವೇಷಭಾಷಣ, ಪಠ್ಯಪುಸ್ತಕಗಳಲ್ಲಿ ಕಲಬೆರಕೆ ಇತ್ಯಾದಿ ಯಾವುದೇ ವಿವಾದಾತ್ಮಕ ವಿಷಯದಲ್ಲಿ ಅವರ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ ದಾಖಲೆ ಇಲ್ಲ. ಮಾತ್ರವಲ್ಲ, ಕಟುವಾಗಿ ಬಿಜೆಪಿಯನ್ನು ವಿರೋಧಿಸಿದ ದಾಖಲೆ ಇದೆ.
ಇನ್ನು ಉಳಿಯುವುದು ಉವೈಸಿ ಪರೋಕ್ಷವಾಗಿ ಬಿಜೆಪಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಮುನ್ನ ಪ್ರತ್ಯಕ್ಷವಾಗಿಯೇ ಬಿಜೆಪಿಗೆ ನೆರವಾದವರ ಕಡೆಗೊಮ್ಮೆ ದೃಷ್ಟಿ ಹಾಯಿಸಬೇಕಾಗುತ್ತದೆ.
2014 ಮತ್ತು 2021ರ ನಡುವಣ ಅವಧಿಯಲ್ಲಿ ತಮ್ಮ ಮೂಲ ಪಕ್ಷವನ್ನು ತೊರೆದು ಪಕ್ಷಾಂತರ ಮಾಡಿ ಬೇರೊಂದು ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ 1,133 ಅಭ್ಯರ್ಥಿಗಳ ಕುರಿತು ಅಧ್ಯಯನ ನಡೆಸಿದ ಸಂಸ್ಥೆಯೊಂದರ ಪ್ರಕಾರ ಆ ಪೈಕಿ 253 ಮಂದಿ (ಶೇ. 22) ಬಿಜೆಪಿಗೆ ಸೇರಿದ್ದಾರೆ. 115 ಮಂದಿ (ಶೇ. 10) ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 65 ಮಂದಿ (ಶೇ. 6) ಬಿಎಸ್ಪಿಯನ್ನು ಸೇರಿದ್ದಾರೆ. ಈ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿರುವವರು, ಅಂದರೆ 177 ಮಂದಿ (ಶೇ. 35) ಶಾಸಕರು ಅಥವಾ ಸಂಸದರು, ಕಾಂಗ್ರೆಸ್ ಪಕ್ಷದವರು.
ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಮಾತೃಪಕ್ಷವನ್ನು ತೊರೆದು ಬಿಜೆಪಿ ಸೇರಿಕೊಳ್ಳುವ ಪ್ರಹಸನವು ದೇಶದ ಹಲವಾರು ರಾಜ್ಯಗಳಲ್ಲಿ ಅನೇಕ ಬಾರಿ ನಡೆದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಎಂಪಿಗಳನ್ನು ಮತ್ತು ಶಾಸಕರನ್ನು ಬಿಜೆಪಿಗೆ ಸರಬರಾಜು ಮಾಡಿರುವ ಕಾಂಗ್ರೆಸ್ ಪಕ್ಷವನ್ನು ಏನೆಂದು ಕರೆಯಬೇಕು? ಅದು ಬಿಜೆಪಿಯ ನೈಜ ‘ಬಿ ಟೀಮ್’ ಎಂದು ಕರೆದರೆ ತಪ್ಪಾದೀತೇ? ಕೆಲವು ವರ್ಷಗಳ ಹಿಂದೆ ಅಸ್ಸಾಮಿನಲ್ಲಿ ಕಾಂಗ್ರೆಸ್ ಪಕ್ಷದವರು ಅಲ್ಲಿನ ಯುಡಿಎಫ್ ಎಂಬ ಪ್ರಾದೇಶಿಕ ಪಕ್ಷವನ್ನು ಬಿಜೆಪಿಯ ‘ಬಿ ಟೀಮ್’ ಎಂದು ಕರೆಯುತ್ತಿದ್ದರು. ಅದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿರುವುದನ್ನು ಪ್ರಸ್ತಾಪಿಸಿ ಅಲ್ಲಿಯ ಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ ಅವರು ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯ ‘ಎ ಟೀಮ್’ ಎಂದು ಕರೆದಿದ್ದರು.
ಈ ವರ್ಷ (ಎಪ್ರಿಲ್ 24ರಂದು) ಆಮ್ ಆದ್ಮಿ ಪಾರ್ಟಿ (ಎಎಪಿ)ಯ 7 ಮಂದಿ ರಾಜ್ಯ ಸಭಾ ಸದಸ್ಯರು ಸಾಮೂಹಿಕ ವಾಗಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಇದೇ ನವೆಂಬರ್ ತಿಂಗಳಲ್ಲಿ ಪಂಜಾಬ್ ರಾಜ್ಯದ ಆಪ್ ಪಕ್ಷದ ಮೂರು ಮಂದಿ ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಕಳೆದ ತಿಂಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮೂರು ಮಂದಿ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ಬಿಹಾರದ ಆರ್ಜೆಡಿ ಪಕ್ಷದ ಹಲವು ಶಾಸಕರು ಬಿಜೆಪಿಗೆ ಲಂಘಿಸಿದ್ದಾರೆ. ತನ್ನ ಹೆಸರಲ್ಲೇ ಜಾತ್ಯತೀತ ಎಂಬ ಬಿರುದನ್ನು ಸೇರಿಸಿಕೊಂಡಿರುವ ನಮ್ಮಲ್ಲಿನ ಜೆಡಿಎಸ್ ಪಕ್ಷ ಬಹಿರಂಗವಾಗಿಯೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ದುರಂತವನ್ನು ಯಾರೂ ಮರೆತಿಲ್ಲ. ಇಂತಹ ಸನ್ನಿವೇಶದಲ್ಲಿ ಬಿಜೆಪಿಯ ‘ಬಿ ಟೀಮ್’ ಎಂದು ಯಾರನ್ನೆಲ್ಲಾ ಕರೆಯೋಣ?
ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವವರೆಲ್ಲ ಬಿಜೆಪಿಯ ಬೆಂಬಲಿಗರೆಂಬ ವಾದ ಅಥವಾ ಬಿಜೆಪಿಯನ್ನು ವಿರೋಧಿಸಬೇಕಿದ್ದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂಬ ವಾದ ಹುಚ್ಚುತನದ್ದು. ಭಾರತದಲ್ಲಿ ಎಡಪಕ್ಷಗಳು ಮತ್ತು ಹಲವು ಪ್ರಾಂತೀಯ ಪಕ್ಷಗಳ ಸಹಿತ ಎಷ್ಟೋ ಪಕ್ಷಗಳು ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ಏಕರೀತಿಯಲ್ಲಿ ವಿರೋಧಿಸುತ್ತಾ ಬಂದಿವೆ. ಕಾಂಗ್ರೆಸ್ ಮೇಲೆ, ಅದುವೇ ಭಾರತದಲ್ಲಿ ಆರೆಸ್ಸೆಸ್ ಅನ್ನು ಪೋಷಿಸಿದ ಪಕ್ಷ ಎಂಬ ಆರೋಪ ಇದೆ. ಹಾಗೆಯೇ ಕೋಮುವಾದಿಗಳು ಮತ್ತು ಜಾತಿವಾದಿಗಳು ನಡೆಸುವ ಹಿಂಸೆ, ರಕ್ತಪಾತ ಇತ್ಯಾದಿ ಯಾವ ಅಪರಾಧವೂ ಶಿಕ್ಷಾರ್ಹವಲ್ಲ ಎಂಬ ಧೋರಣೆಯನ್ನೇ ಬಹುಕಾಲ ಪಾಲಿಸಿಕೊಂಡು ಬಂದ ಪಕ್ಷ ಎಂಬ ಗಂಭೀರ ಆರೋಪವೂ ಆ ಪಕ್ಷದ ಮೇಲಿದೆ. ಹೀಗಿರುವಾಗ ಯಾವುದೇ ಪಕ್ಷವು ತಾನು ಬಿಜೆಪಿ ವಿರೋಧಿ ಎಂಬುದನ್ನು ಸಾಬೀತು ಪಡಿಸಲಿಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಬೇಕಾದ ಅಗತ್ಯ ಖಂಡಿತ ಇಲ್ಲ. ಹಾಗೆಂದು ಉವೈಸ್ ಅವರ ಪಕ್ಷ ಮತ್ತು ಕಾಂಗ್ರೆಸ್ ಪರಸ್ಪರ ಸಂಪೂರ್ಣ ಅಪರಿಚಿತವೇನಲ್ಲ. 2008ರಿಂದ 2012ರ ತನಕ ಅವರ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಯುಪಿಎ ಬಣದ ಭಾಗವಾಗಿತ್ತು ಮತ್ತು ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿತ್ತು.
ಉವೈಸಿ, ಬಿಜೆಪಿಯಂತೆ ಕಾಂಗ್ರೆಸ್ ಪಕ್ಷದ ಹಲವು ಧೋರಣೆಗಳನ್ನೂ ಕಟುವಾಗಿ ಟೀಕಿಸುತ್ತಾ ಬಂದವರು. ಅವರೊಬ್ಬ ಆಧ್ಯಾತ್ಮಿಕ ಗುರುವಾಗಿ ರಂಗಕ್ಕೆ ಬಂದವರಲ್ಲ. ಅವರೊಬ್ಬ ರಾಜಕಾರಣಿ ಅಥವಾ ಪುಢಾರಿ. ಭಾರತದಲ್ಲಿ ಮುಸ್ಲಿಮ್ ಸಮಾಜದಲ್ಲಿರುವ ರಾಜಕೀಯ ಅನಾಥ ಭಾವವನ್ನು ಬಳಸಿ, ತಾನು ಮುಸ್ಲಿಮರ ವಿಮೋಚಕನ ಪಾತ್ರದಲ್ಲಿ ನಿಂತು, ಮುಸ್ಲಿಮರ ಮತಗಳಿಸಿ, ಆ ಮೂಲಕ ಅಧಿಕಾರ ಪಡೆಯುವುದು ಅವರ ಗುರಿ. ಅವರೊಬ್ಬ ಮಹತ್ವಾಕಾಂಕ್ಷಿಯಾದ್ದರಿಂದ ತನ್ನ ಪೂರ್ವಜರಂತೆ ಕೇವಲ ಹೈದರಾಬಾದ್ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಸೀಮಿತನಾಗಿ ನಿಲ್ಲಲಿಲ್ಲ. ದೇಶದ ವಿವಿಧ ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ತನ್ನ ಪಕ್ಷದ ಶಾಸಕರು ಮತ್ತು ಸಂಸದರನ್ನು ಗೆಲ್ಲಿಸುವ ಮೂಲಕ ರಾಷ್ಟ್ರೀಯ ರಾಜಕೀಯದಲ್ಲಿ ಮಿಂಚಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಅವರು ಮಾಡಿದ ಒಂದು ಒಳ್ಳೆಯ ಕೆಲಸವೇನೆಂದರೆ ಯಾವುದೇ ಹೊಸ ರಾಜ್ಯಕ್ಕೆ ಅಥವಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ, ಬಹುತೇಕ ಎಲ್ಲ ಕಡೆ ಅವರು ಕಾಂಗ್ರೆಸ್ ಮತ್ತಿತರ ಸೆಕ್ಯುಲರ್ ಪಕ್ಷಗಳನ್ನು ಸಂಪರ್ಕಿಸಿ ಮೈತ್ರಿಯ ಆಫರ್ ನೀಡಿದ್ದಾರೆ. ಚೌಕಾಶಿಗೆ ಪ್ರಯತ್ನಿಸಿದ್ದಾರೆ. ಇತರ ಪಕ್ಷಗಳು ತನ್ನ ಜೊತೆಗೆ ವ್ಯವಹರಿಸಲು ತಯಾರಿಲ್ಲ ಎಂಬುದು ಮನವರಿಕೆಯಾದ ಬಳಿಕವಷ್ಟೇ ದೊಡ್ಡ ಸಂಖ್ಯೆಯಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ನೀವು ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಬಿಜೆಪಿ ಗೆಲ್ಲುತ್ತದೆ ಎಂಬ ಬೆದರಿಕೆಯನ್ನು ಅವರು ಒಪ್ಪುವುದಿಲ್ಲ. ‘‘ಬಿಜೆಪಿಯನ್ನು ಸೋಲಿಸುವುದು ಅಷ್ಟು ಮುಖ್ಯವಾಗಿದ್ದರೆ ನೀವು ನಮ್ಮ ಜೊತೆ ಸೇರಿ ಅಥವಾ ನಮಗೆ ಇಂತಿಷ್ಟು ಸೀಟುಕೊಡಿ, ಅವೆರಡೂ ಸಾಧ್ಯವಿಲ್ಲದಿದ್ದರೆ, ನೀವು ನಿಮ್ಮ ಅಭ್ಯರ್ಥಿಗಳನ್ನು ಹಿಂದೆಗೆದುಕೊಂಡು ಬಿಜೆಪಿಯನ್ನು ಸೋಲಿಸುವ ಹೊಣೆಯನ್ನು ನಮಗೆ ಬಿಟ್ಟು ಬಿಡಿ’’ ಎಂಬ ಸರಳ ತರ್ಕವನ್ನು ಅವರು ಇತರ ಪಕ್ಷಗಳ ಮುಂದಿಡುತ್ತಾರೆ. ‘‘ನಮ್ಮ ಪಕ್ಷ ಸ್ಪರ್ಧಿಸದ ಎಲ್ಲ ಕಡೆ ಬಿಜೆಪಿ ಸೋಲುತ್ತದೆ ಎಂಬುದಕ್ಕೆ ಗ್ಯಾರಂಟಿ ಏನಿದೆ?’’ ಎಂದು ಅವರು ಪ್ರಶ್ನಿಸುತ್ತಾರೆ. ಯಾವುದೇ ಪ್ರತಿಸ್ಪರ್ಧಿ ಸೆಕ್ಯುಲರ್ ಪಕ್ಷ ಸ್ಪರ್ಧಿಸಿಲ್ಲದ ನೂರಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯ ಮುಂದೆ ಏಕಾಂಗಿಯಾಗಿ ಸ್ಪರ್ಧಿಸಿ, ಹೀನಾಯ ಸೋಲು ಅನುಭವಿಸಿದ ಹಲವು ಉದಾಹರಣೆಗಳನ್ನೂ ಅವರು ಮುಂದಿಡುತ್ತಾರೆ.
ತೆಲಂಗಾಣದ ಹೊರಗೆ ಉವೈಸಿಯವರ ಪಕ್ಷದ ಒಬ್ಬ ಅಭ್ಯರ್ಥಿ ಕೂಡಾ ಗೆಲ್ಲುವ ಸಾಧ್ಯತೆ ಖಂಡಿತ ಇಲ್ಲ ಎಂಬ ವಾತಾವರಣ ಇದ್ದಾಗ ಅವರನ್ನು ನಿರ್ಲಕ್ಷಿಸಬಹುದಿತ್ತು. ಇದೀಗ ಅವರು ವಿವಿಧ ರಾಜ್ಯಗಳಲ್ಲಿ ಕೆಲವು ಕಡೆಯಾದರೂ ಗಣ್ಯ ಮತಗಳನ್ನು ಸಂಪಾದಿಸುವ ಮೂಲಕ, ತನ್ನ ಪಕ್ಷವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಒಂದು ರಾಜಕೀಯ ಪಕ್ಷವೆಂಬ ನೆಲೆಯಲ್ಲಿ ಬೇರೆಲ್ಲ ಪಕ್ಷಗಳು ಮಾಡುವಂತೆ, ತನ್ನ ಪಕ್ಷವನ್ನು ಬೆಳೆಸುವುದಕ್ಕೆ ಹಾಗೂ ವಿಸ್ತರಿಸುವುದಕ್ಕೆ ಅವರಿಗೆ ಸಂಪೂರ್ಣ ಹಕ್ಕಿದೆ. ಈ ಅಂಶವನ್ನು ಎಲ್ಲ ಪಕ್ಷಗಳೂ ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಕೇವಲ ಬಿಜೆಪಿಯ ಗುಮ್ಮವನ್ನು ತೋರಿಸಿ ಉವೈಸಿಯವರ ಪಕ್ಷವನ್ನು ರಾಜಕೀಯದಿಂದಲೇ ದೂರವಿಡುವ ಪ್ರಯತ್ನ ಖಂಡಿತ ನ್ಯಾಯೋಚಿತವಲ್ಲ. ಸೆಕ್ಯುಲರ್ ವೋಟುಗಳು ಛಿದ್ರವಾಗುವ ಸಹಜ ಸಾಧ್ಯತೆಯನ್ನು ವಿವಿಧ ಸೆಕ್ಯುಲರ್ ಪಕ್ಷಗಳು ಸೇರಿ ಮಾತುಕತೆ, ಚೌಕಾಶಿಗಳನ್ನು ನಡೆಸಿ ಒಂದಿಷ್ಟು ಕೊಡು-ಕೊಳ್ಳುವ ಧೋರಣೆಯ ಮೂಲಕ ಬಗೆಹರಿಸಿಕೊಳ್ಳಬಹುದು.
‘‘ಸಿಬಿಐ ಮತ್ತು ಈ.ಡಿ.ಯವರು ನಿಮ್ಮ ವಿರುದ್ಧ ದಾಳಿ ಮಾಡುವುದಿಲ್ಲವೇಕೆ?’’ ಎಂಬ ಪ್ರಶ್ನೆಯನ್ನು ಅವರ ಬಳಿ ಹಲವರು ಹಲವು ಬಾರಿ ಕೇಳಿದ್ದಿದೆ. ಆಗೆಲ್ಲಾ ಅವರು, ‘‘ಬೇರೆಯವರ ಬಳಿ ಇರುವಂತಹ ಅಕ್ರಮ ಸಂಪತ್ತೇನೋ ನನ್ನ ಬಳಿಯಲ್ಲಿಲ್ಲ. ನನ್ನ ವಿರುದ್ಧ ದಾಳಿ ಮಾಡಿದರೆ ಏನೂ ಸಿಗುವುದಿಲ್ಲ ಎಂಬುದು ಸಿಬಿಐ ಮತ್ತು ಈ.ಡಿ.ಯವರಿಗೆ ಚೆನ್ನಾಗಿ ತಿಳಿದಿದೆ. ಇನ್ನು ಒಂದು ವೇಳೆ ಅವರಿಗೆ ಬೇಕಿದ್ದರೆ ಅವರು ಯಾವಾಗ ಬೇಕಿದ್ದರೂ ಬರಲಿ. ದಾಳಿ, ತನಿಖೆ ಎಲ್ಲಾ ನಡೆಸಲಿ, ನಾನು ಅವರನ್ನು ಸ್ವಾಗತಿಸಲು ಕಾಯುತ್ತಿದ್ದೇನೆ’’ ಎನ್ನುತ್ತಾರೆ.






