ಫಿಲಂ ಅವಾರ್ಡ್ ಸಮಾರಂಭ ಸ್ಥಳಾಂತರದ ಹಿಂದೆ ಯಾರ ಹುನ್ನಾರ?

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇತಿಹಾಸದಲ್ಲಿ ಮೊದಲ ಬಾರಿಗೆ 72ನೇ ಫಿಲಂ ಅವಾರ್ಡ್ ಸಮಾರಂಭವನ್ನು ಮೋದಿ ನಾಡಿಗೆ ಸ್ಥಳಾಂತರಿಸಲಾಗಿದೆ.
ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ಸೆಪ್ಟಂಬರ್ 22ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ನಿಗದಿ ಆಗಿದೆ. ಈ ಅವಾರ್ಡ್ ಅರಂಭಗೊಂಡಾಗಿನಿಂದ ಅಂದರೆ 1954ರಿಂದ 71 ವರ್ಷಗಳ ಕಾಲ ರಾಷ್ಟ್ರ ರಾಜಧಾನಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿಗಳನ್ನು ಕೊಡುತ್ತಾ ಬರಲಾಗಿದೆ. 1971-72ರಲ್ಲಿ ಮದ್ರಾಸ್‌ನಲ್ಲಿ ಒಮ್ಮೆ ಮಾತ್ರ ಈ ಪ್ರಶಸ್ತಿ ಸಮಾರಂಭ ಆಯೋಜಿಸಿದ್ದನ್ನು ಹೊರತು ಪಡಿಸಿ ಈಗ ದಿಲ್ಲಿಯ ಹೊರಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಈ ಕ್ರಮ ಯಾರನ್ನು ಮೆಚ್ಚಿಸಲು ಎಂಬುದು ಎಲ್ಲರಿಗೂ ಗೊತ್ತಿರುವಂತಹುದೇ. ಯಾಕೆ ಈಗ ಈ ಬದಲಾವಣೆ ಎಂದು ಕೇಳುವ ಮೊದಲೇ ಸಚಿವಾಲಯವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಭಾವನೆ ಪ್ರತಿಬಿಂಬಿಸಲು ಎಂದು ಸಮರ್ಥನೆ ಕೊಟ್ಟಿದೆ.
ಈ ಸಚಿವಾಲಯವು ಬಹುಷಃ ಏಕ್ ಭಾರತ್ ಅಂದರೆ ಅದು ಗುಜರಾತ್ ಎಂದುಕೊಂಡಂತಿದೆ. ಈಗಾಗಲೇ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆಯವರು ಇದು ಗುಜರಾತ್ ಮತ್ತು ಉಳಿದ ದೇಶದ ನಡುವೆ ಗೋಡೆ ಕಟ್ಟುವ ಕೆಲಸ ಎಂದು ಟೀಕಿಸಿದ್ದಾರೆ. ಸಂಜಯ್ ರಾವುತ್‌ರವರು ಈ ಅವಾರ್ಡ್ ಸಮಾರಂಭವನ್ನು ಕಲಾ ವಿದರು ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ನಿರ್ದೇಶಕ ರಾಹುಲ್ ಧೋಲಕಿಯಾರವರು ಯಾಕೆ ಗುಜರಾತ್ ಎಂದು ಪ್ರಶ್ನಿಸಿದ್ದಾರೆ. ಈ ಬದಲಾವಣೆಗೆ ಅಲ್ಲಲ್ಲಿ ವಿರೋಧಗಳೂ ವ್ಯಕ್ತವಾಗುತ್ತಿವೆ.
ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳ ಬದಲಾಯಿಸಲೇಬೇಕೆಂದಿದ್ದರೆ ಹೆಚ್ಚು ಚಲನಚಿತ್ರ ನಿರ್ಮಾಣ ಕೇಂದ್ರಗಳಿರುವ ರಾಜ್ಯದ ರಾಜಧಾನಿಯನ್ನು ಆಯ್ಕೆ ಮಾಡಬಹುದಾಗಿತ್ತು. ಮಹಾರಾಷ್ಟ್ರ, ಕೇರಳ, ತಮಿಳುನಾಡು ಅಥವಾ ಹೈದರಾಬಾದ್ ರಾಜ್ಯಗಳ ರಾಜಧಾನಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಬಹುದಾಗಿತ್ತು. ಯಾಕೆಂದರೆ ಭಾರತದ ಅತೀ ಹೆಚ್ಚು ಸಿನೆಮಾಗಳು ಈ ರಾಜ್ಯಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಚಲನಚಿತ್ರ ನಿರ್ಮಿತಿಯ ಚಟುವಟಿಕೆಗಳಿಗೆ ಈ ಸ್ಥಳಗಳು ಸಕ್ರೀಯವಾಗಿವೆ. ಈ ರಾಜ್ಯಗಳಿಗೆ ಹೋಲಿಸಿದರೆ ಈ ದೇಶದ ಸಿನೆಮಾ ಕ್ಷೇತ್ರಕ್ಕೆ ಗುಜರಾತ್‌ನ ಕೊಡುಗೆ ಅತ್ಯಂತ ನಗಣ್ಯವಾಗಿದೆ. ಆದರಲ್ಲೂ ಸರ್ದಾರ್ ವಲ್ಲಭಬಾಯಿ ಪಟೇಲರ 597 ಅಡಿ ಎತ್ತರದ ಏಕತಾ ಪ್ರತಿಮೆಯ ಸಮೀಪ ಇರುವ ಏಕತಾ ನಗರಕ್ಕೂ ಸಿನೆಮಾ ನಿರ್ಮಾಣಕ್ಕೂ ಏನೇನೂ ಸಂಬಂಧವಿಲ್ಲ. ಆದರೆ ಮೋದಿ ಹೈ ತೋ ಸಬ್ ಮುಮ್ಕಿನ್ ಹೈ. ಮೋದಿ ಮತ್ತು ಶಾ ಎನ್ನುವ ಇಬ್ಬರು ಗುಜರಾತಿಗಳನ್ನು ಮೆಚ್ಚಿಸಲೋ ಅಥವಾ ಅವರಿಬ್ಬರ ಇಚ್ಛೆಯನ್ನು ಈಡೇರಿಸಲೋ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸ್ಥಳವನ್ನೇ ಬದಲಾಯಿಸುವ ಕೆಟ್ಟ ಪರಂಪರೆಯನ್ನು ಈ ಬಿಜೆಪಿ ಸರಕಾರ ಹುಟ್ಟು ಹಾಕಿದೆ.
ಹೀಗೆಯೇ ಆದರೆ.. ಇವರ ಸರಕಾರವೇ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದರೆ ಭಾರತದ ರಾಜಧಾನಿಯನ್ನೇ ದಿಲ್ಲಿಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಬದಲಾಯಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಕೇಂದ್ರ ಸರಕಾರದ ಈ ನಡೆಯನ್ನು ಕಲಾವಿದರು ಪ್ರಶ್ನಿಸಬೇಕಿದೆ. ಈ ವರ್ಷದ ಚಲನಚಿತ್ರ ಪ್ರಶಸ್ತಿಯ ಉತ್ತಮ ನಟನಾಗಿ ಆಯ್ಕೆಯಾದ ಮಮ್ಮುಟ್ಟಿ ಮತ್ತು ಕಾರ್ತಿಕ್ ಆರ್ಯನ್‌ನಂತಹವರಾದರೂ ಪ್ರತಿಭಟನಾತ್ಮಕವಾಗಿ ಪ್ರಶಸ್ತಿ ನಿರಾಕರಿಸಬೇಕಿದೆ. ಉಳಿದಂತೆ ಸ್ವಾತಂತ್ರ್ಯವೀರ್ ಸಾವರ್ಕರ್ ಸಿನೆಮಾಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ರಣದೀಪ್ ಹೂಡಾ, ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿ ಪಡೆದ ಕಲ್ಕಿ-2898 ಂಆಯಂತಹ ಬಲಪಂಥೀಯರಿಂದ ಬಹುಪರಾಕ್ ಮಾತ್ರ ನಿರೀಕ್ಷಿಸಬಹುದಾಗಿದೆ.
ಈ ದೇಶಕ್ಕೆ ಅತೀ ಹೆಚ್ಚು ಸಿನೆಮಾಗಳನ್ನು ನಿರ್ಮಿಸುವ ದಕ್ಷಿಣ ಭಾರತದ ಸಿನೆಮಾ ಕ್ಷೇತ್ರದವರಾದರೂ ಈ ಸ್ಥಳ ಬದಲಾವಣೆಯನ್ನು ವಿರೋಧಿಸಬೇಕಿದೆ. ರಾಜಕೀಯ ಕಾರಣಕ್ಕೆ ಕೆಟ್ಟ ಪರಂಪರೆಯನ್ನು ಹುಟ್ಟು ಹಾಕುವ ಹುನ್ನಾರವನ್ನು ಪ್ರತಿರೋಧಿಸಬೇಕಿದೆ.
(ಲೇಖಕರು ರಂಗಕರ್ಮಿ, ಪತ್ರಕರ್ತ)






