ಖಾಸಗಿ ಸಂಶೋಧನಾ ಕೇಂದ್ರಗಳಿಗೆ ಇರುವ ಅವಕಾಶ ಸರಕಾರದ ಉನ್ನತ ಶಿಕ್ಷಣ ಸಂಸ್ಥೆ/ಕಾಲೇಜುಗಳಿಗೆ ಏಕಿಲ್ಲ?

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರ ಕೊರತೆಯನ್ನು ಮುಂದು ಮಾಡಿ ಅನೇಕ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾಡಲು ಅವಕಾಶ ಇಲ್ಲವಾಗಿರುವುದು ತೀರಾ ನೋವಿನ ಸಂಗತಿ. ಅನೇಕ ವಿದ್ಯಾರ್ಥಿಗಳು ಪಿಎಚ್.ಡಿ. ಪ್ರವೇಶ ಪರೀಕ್ಷೆ, ಯುಜಿಸಿ ಶಿಷ್ಯವೇತನ, ಯುಜಿಸಿ-ನೆಟ್ ಮತ್ತು ಸೆಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪಿಎಚ್.ಡಿ. ಸಂಶೋಧನೆ ಕೈಗೊಳ್ಳಲು ಉತ್ಸುಕರಾಗಿರುವಾಗ ಸಂಶೋಧಕ ಮಾರ್ಗದರ್ಶಕರು ದೊರೆಯದಿರುವುದು ಇವತ್ತಿನ ಸರಕಾರಿ ವಿಶ್ವವಿದ್ಯಾನಿಲಯಗಳ ದುಸ್ಥಿತಿಗೆ ಕನ್ನಡಿ ಹಿಡಿದಿದೆ.
ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಇವತ್ತಿನ ಖಾಸಗೀಕರಣದ ಯುಗದಲ್ಲಿ ಅನೇಕ ಕಾರಣಗಳಿಗೆ ಆಳುವ ಸರಕಾರಗಳು ನಿರ್ಲಕ್ಷಿಸುತ್ತಿವೆ. ಇದೇ ಹೊತ್ತಿಗೆ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ತೆರೆಯಲು ಮುಂದೆ ಬರುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಇವತ್ತು ದೇಶದಲ್ಲಿ ಸರಕಾರಿ ವಲಯದ ವಿಶ್ವವಿದ್ಯಾನಿಲಯಗಳಿಗಿಂತ ಹೆಚ್ಚು ಖಾಸಗಿ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲೇ ಸುಮಾರು ೪೦ಕ್ಕೂ ಹೆಚ್ಚು ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿವೆ. ಆಳುವ ಸರಕಾರಗಳು ಕದ್ದುಮುಚ್ಚಿ ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಹೆಚ್ಚು ಮನ್ನಣೆ ನೀಡುತ್ತ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ನಿರ್ಲಕ್ಷಿಸುತ್ತಿವೆ. ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಮಾತ್ರವಲ್ಲದೆ ಈಗ ವಿದೇಶಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ದೇಶದಲ್ಲಿ ಮುಕ್ತ ಅವಕಾಶ ನೀಡಲಾಗಿದೆ.
ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಅಧ್ಯಾಪಕರ ಕೊರತೆಯನ್ನು ತುಂಬಲು ಸರಕಾರಗಳು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಅನೇಕ ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಇವತ್ತು ವಿದ್ಯಾರ್ಥಿಗಳಿಲ್ಲದೆ ಸೋರಗುತ್ತಿವೆ. ಭವ್ಯ ಕಟ್ಟಡಗಳನ್ನು ಹೊಂದಿರುವ ಕರ್ನಾಟಕದ ಹಳೆಯ ವಿಶ್ವವಿದ್ಯಾನಿಲಯಗಳಾದ ಮೈಸೂರು, ಕರ್ನಾಟಕ, ಮಂಗಳೂರು ಮತ್ತು ಗುಲಬರ್ಗಾ ವಿಶ್ವವಿದ್ಯಾನಿಲಯಗಳ ಅನೇಕ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ ಮತ್ತು ಅಧ್ಯಾಪಕರಿಲ್ಲದೆ ಅನೇಕ ವಿಭಾಗಗಳು ಮುಚ್ಚುವ ಹಂತದಲ್ಲಿವೆ.
ಈಗ ಮೈಸೂರು ವಿವಿಯ ವಿಷಯಕ್ಕೆ ಬರುವುದಾದರೆ, ಪಿಎಚ್.ಡಿ. ಆಕಾಂಕ್ಷಿಗಳಿಗೆ ಮಾರ್ಗದರ್ಶಕರ ಕೊರತೆ ಮುಂದು ಮಾಡಿ ಅರ್ಹ ಪಿಎಚ್.ಡಿ. ಸಂಶೋಧನಾ ಆಕಾಂಕ್ಷಿಗಳಿಗೆ ಪ್ರವೇಶ ನಿರಾಕರಿಸುತ್ತಿರುವುದು ತೀರಾ ಅಕ್ಷಮ್ಯ. ಒಂದು ಕಡೆ ಅಧ್ಯಾಪಕರ ಕೊರತೆಯ ನೆಪ ಹೇಳುವ ವಿಶ್ವವಿದ್ಯಾನಿಲಯ ತನ್ನ ವೆಬ್‌ತಾಣದಲ್ಲಿ ಪ್ರಕಟಿಸಿರುವ ಮಾಹಿತಿಯಂತೆ ಸುಮಾರು ೩೯ ಸಂಸ್ಥೆಗಳನ್ನು ಗುರುತಿಸಿ ಅವುಗಳನ್ನು ಸಂಶೋಧನಾ ಕೇಂದ್ರಗಳೆಂದು ಮಾನ್ಯತೆ ನೀಡಿದೆ. ಈ ೩೯ ಸಂಶೋಧನಾ ಕೇಂದ್ರಗಳಲ್ಲಿ ಬಹುತೇಕ ಸಂಶೋಧನಾ ಕೇಂದ್ರಗಳು ಖಾಸಗಿ ಸಂಸ್ಥೆಗಳು. ಈ ಶಿಕ್ಷಣ ಸಂಸ್ಥೆಗಳಿಗೆ ಸಂಶೋಧನಾ ಕೇಂದ್ರಗಳೆಂದು ಗುರುತಿಸಿ ಇಲ್ಲಿನ ಅಧ್ಯಾಪಕರಿಗೆ ಪಿಎಚ್.ಡಿ. ಸಂಶೋಧನೆಗೆ ಮಾರ್ಗದರ್ಶನ ಮಾಡಲು ವಿಶ್ವವಿದ್ಯಾನಿಲಯ ಅನುಮತಿ ನೀಡಿರುವಾಗ ಏಕೆ ಸರಕಾರಿ ಕಾಲೇಜು ಅಧ್ಯಾಪಕರಿಗೆ ವಿಶ್ವವಿದ್ಯಾನಿಲಯ ಪಿಎಚ್.ಡಿ. ಸಂಶೋಧನಾ ಮಾರ್ಗದರ್ಶಕರಾಗಲೂ ಅವಕಾಶ ನೀಡುತ್ತಿಲ್ಲ? ಮೈಸೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಜೆಎಸ್‌ಎಸ್ ಶ್ರವಣ ಸಂಸ್ಥೆ, ಎಸ್‌ಡಿಎಂ ನಿರ್ವಹಣಾ ಸಂಸ್ಥೆ, ವಿದ್ಯಾವರ್ಧಕ ಸಂಶೋಧನಾ ಕೇಂದ್ರ, ಸಂತ ಫಿಲೊಮಿನಾ ಕಾಲೇಜು, ಮಹಾರಾಜ ಸಂಶೋಧನಾ ಕೇಂದ್ರ ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳಿಗೆ ಪಿಎಚ್.ಡಿ. ಸಂಶೋಧನೆಯನ್ನು ನಡೆಸಲು ಮಾನ್ಯತೆ ನೀಡಿದೆ.
ಆದರೆ ಸರಕಾರಿ ಕಾಲೇಜುಗಳಲ್ಲಿ ನುರಿತ ಅಧ್ಯಾಪಕರಿದ್ದು ಇತ್ತೀಚೆಗೆ ಅಂದರೆ ೨೦೨೨ರಿಂದ ಪದವಿ ಕಾಲೇಜುಗಳ ಅನುಭವಿ ಅಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಉನ್ನತ ಶಿಕ್ಷಣ ಇಲಾಖೆ ಪದೋನ್ನತಿ ನೀಡಿದೆ. ಈ ಎಲ್ಲಾ ಅಧ್ಯಾಪಕರು ಯುಜಿಸಿ ನಿಯಮದಂತೆ ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಮತ್ತು ಪುಸ್ತಕಗಳನ್ನು ರಚಿಸಿ ಯುಜಿಸಿ ಪ್ರಾಧ್ಯಾಪಕ ಹುದ್ದೆಗೆ ನಿಗದಿ ಮಾಡಿರುವ ನಿಯಮಗಳನ್ನು ಪೂರೈಸಿರುವಂತಹವರು. ಜೊತೆಗೆ ಮೈಸೂರಿನ ಅನೇಕ ಪದವಿ ಕಾಲೇಜುಗಳಲ್ಲಿ ಮೇಲೆ ಹೆಸರಿಸಿದ ಖಾಸಗಿ ಸಂಸ್ಥೆಗಳಂತೆ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಇವೆ. ಇಷ್ಟೆಲ್ಲ ಅನುಭವವಿರುವ ಸರಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಪಿಎಚ್.ಡಿ. ಸಂಶೋಧನಾ ಮಾರ್ಗದರ್ಶಕರಾಗಲು ಮೈಸೂರು ವಿಶ್ವವಿದ್ಯಾನಿಲಯ ಏಕೆ ನಿರಾಕರಿಸುತ್ತಿದೆ ಎಂದು ತಿಳಿಯದಾಗಿದೆ. ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಪಿಎಚ್.ಡಿ. ಸಂಶೋಧನಾ ಮಾರ್ಗದರ್ಶಕರಾಗಲೂ ಅನುಮತಿ ನೀಡಿದರೆ ವಿಶ್ವವಿದ್ಯಾನಿಲಯದ ಮೇಲೆ ಸ್ವಲ್ಪ ಒತ್ತಡ ಕಡಿಮೆ ಯಾಗುವುದಲ್ಲದೆ ಅನೇಕ ಅರ್ಹ ಪಿಎಚ್.ಡಿ. ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಸಹಾಯಕವಾಗುತ್ತದೆ. ವಿಶ್ವವಿದ್ಯಾನಿಲಯ ತನ್ನ ಪ್ರಯೋಗಾಲಯಗಳು, ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್‌ಗಳನ್ನು ಬಳಕೆ ಮಾಡಲು ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬಹುದು.
ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಮೈಸೂರು ವಿಶ್ವವಿದ್ಯಾನಿಲಯದ ಹಿಂದಿನ ಕುಲಪತಿಗಳಾಗಿದ್ದ ಪ್ರೊ. ಹೇಮಂತ್‌ಕುಮಾರ್‌ರವರು ಸರಕಾರ ಖಾಯಂ ಅಧ್ಯಾಪಕರನ್ನು ನೇಮಿಸದ ಹೊರತು ಪಿಎಚ್.ಡಿ. ಸಂಶೋಧನಾ ಮಾರ್ಗದರ್ಶಕರ ಕೊರತೆ ನೀಗಿಸುವುದು ಕಷ್ಟ ಎಂದಿದ್ದಾರೆ. ಹೌದು, ಅದರೆ ತೀರಾ ಹೊಸದಾಗಿ ಪ್ರಾರಂಭವಾಗಿರುವ ಅವರ ನಿಯಂತ್ರಣದ ಸಂಸ್ಥೆಯಲ್ಲಿ ಪಿಎಚ್.ಡಿ. ಮಾಡಲು ಅವಕಾಶ ಇರುವುದಾದರೆ ಶತಮಾನಗಳ ಇತಿಹಾಸ ಇರುವ ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳಿಗೆ ಸಂಶೋಧನಾ ಕೇಂದ್ರಗಳೆಂದು ಮಾನ್ಯತೆ ನೀಡಿ ಅಲ್ಲಿನ ಅನುಭವಿ ಪ್ರಾಧ್ಯಾಪಕರಿಗೆ ಸಂಶೋಧನಾ ಮಾರ್ಗ ದರ್ಶಕರಾಗಲು ಏಕೆ ಅವಕಾಶ ನೀಡಬಾರದು?







