ಕೈಗೆ ಬಂದ ತುತ್ತು ಬಾಯಿಗೇಕೆ ಬರುತ್ತಿಲ್ಲ?

ರಾಜ್ಯದಲ್ಲಿಯೇ ಅತಿ ಹೆಚ್ಚು ವಲಸೆ ಇರುವ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕಲಬುರಗಿ ಒಂದು ಜಿಲ್ಲೆಯಿಂದಲೇ ಶೇ.43 ಪ್ರಮಾಣದಷ್ಟು ಕಾರ್ಮಿಕರು ದುಡಿಯಲೆಂದು ಬೆಂಗಳೂರು, ಮುಂಬೈ, ಗೋವಾ, ಪುಣೆಗಳಿಗೆ ಹೋಗುತ್ತಾರೆ. ಅದರಂತೆ ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳು ವಲಸೆಯಲ್ಲಿ ಪೈಪೋಟಿಗಿಳಿಯುತ್ತವೆ. ಯಾಕೆ ಇಷ್ಟು ಪ್ರಮಾಣದ ವಲಸೆ ನಡೆಯುತ್ತದೆ ಎಂಬುದಕ್ಕೆ ದೊಡ್ಡ ಸಂಶೋಧನೆಗಳು ಬೇಕಿಲ್ಲ. ಈ ಭಾಗದ ಕೃಷಿಯು ಸಂಪೂರ್ಣ ನೆಲ ಕಚ್ಚಿದೆ. ಅನಿಶ್ಚಿತ ಮಳೆ, ನೀರಾವರಿ ಕೊರತೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃಷಿಯ ವೆಚ್ಚ ಒಂದೆಡೆ ಇದ್ದರೆ ಈ ಭಾಗದಲ್ಲಿ ಪರ್ಯಾಯ ಉದ್ಯೋಗಗಳಂತೂ ಇಲ್ಲವೇ ಇಲ್ಲ.
ಕೆದರಿದ ಕೂದಲು, ಮಾಸಿದ ಅಂಗಿ, ಧೋತ್ರ, ಟೆರಿಲಿನ್ ಸೀರೆ, ಬಣ್ಣಗೆಟ್ಟ ರವಿಕೆ. ಕೈಯಲ್ಲಿ ಗಂಟು-ಗಠೋಡಿ, ಪುಟ್ಟ ಮಕ್ಕಳು. ದರದರನೇ ಮಕ್ಕಳನ್ನು ಎಳೆದುಕೊಂಡೇ ಓಡುತ್ತಿರುವ ಐದಾರು ಕುಟುಂಬಗಳ ಆಕ್ರಂದನ ರಾತ್ರಿಯ ಕತ್ತಲಲ್ಲಿ ಗಾಬರಿ ಹುಟ್ಟಿಸಿತ್ತು. ರೈಲಿನ ರಿಸರ್ವೇಷನ್ ಬೋಗಿಯಲ್ಲಿ ಮಲಗಿದ ನಾನು ಗದ್ದಲದಿಂದ ಎದ್ದು ನೋಡಿದರೆ ಇಪ್ಪತ್ತು ಮೂವತ್ತು ಶ್ರಮಿಕರು ಮೀಸಲಿಟ್ಟ ಬೋಗಿಗಳಲ್ಲಿ ಏರಿ ತಮಗಾಗಿ ಜಾಗ ಹುಡುಕಲು ಪರದಾಡುತ್ತಿದ್ದಾರೆ. ಒದರಾಟ, ಚೀರಾಟ, ಮಕ್ಕಳ ಅಳು, ಇದರಿಂದ ಕುಪಿತಗೊಂಡ ಸಭ್ಯ ಸಮಾಜದ ನಾಜೂಕಯ್ಯಗಳು ‘‘ಏಯ್ ನೀವೆಲ್ಲ ಎಲ್ಲಿಯವರೋ! ಇದು ರಿಸರ್ವೇಷನ್ ಬೋಗಿ ಅಂತ ಗೊತ್ತಾಗುವುದಿಲ್ಲಾ! ಹಾಂ ಇಳಿರಿ ಮೊದಲ್ ಇಳಿರಿ. ಇಲ್ಲಾಂದ್ರ ಪೊಲೀಸರಿಗೆ ಹೇಳತೀನಿ ನೋಡ್ರಿ’’ ಎಂದು ಗದರಿಸುತ್ತಾನೆ. ಆತನ ಅಬ್ಬರದಿಂದಾಗಿ ಇನ್ನಷ್ಟು ಪ್ರಯಾಣಿಕರು ತಡಬಡಾಯಿಸಿ ಎದ್ದವರೇ ‘‘ಏಯ್ ಈ ಬೇಕೂಫ್ ರಿಗಿ ಹೀಂಗ್ ಹೇಳದ್ರ ತಿಳ್ಯಾಲರಿ ಇವರ್ರಿಗಿ ಬುದ್ಧಿ ಇರಾದಿಲ್. ಪೊಲೀಸ್ರು ಬರಾತನಾ ಇವ್ರ ಹೋಗಾದಿಲ್ ಬಿಡ್ರಿ’’ ಎನ್ನುತ್ತಾರೆ. ಮತ್ತೊಬ್ಬರು ಹರಕು ಪರಕು ಇಂಗ್ಲಿಷ್‌ನಲ್ಲಿ ‘‘ಏಯ್ ಯು ಯುಸಲೆಸ್ ಪಿಪುಲ್, ಗೆಟೌಟ್ ಫ್ರಂ ಹೀಯರ್’’ ಎನ್ನುತ್ತಾನೆ. ಇನ್ನೊಬ್ಬಾತ ‘‘ಏಯ್ ಕ್ಯಾ ಲಗಾಯೇಜಿ. ಹಮ್ ಜಾದಾ ಪೈಸೇ ದೇಕರ್ ರಿಸರ್ವೇಷನ್ ಕರ್‌ತೆ, ಫಿರ್ ಭೀ ಸುಕುನಸೇ ಸೋನೆ ನಹಿ ದೇತೆ | ಏಯ್ ಗಮ್ಮಾರ್ ಅನ್‌ಪಡ್ ಲೋಗ್’’ ಎನ್ನುತ್ತಾನೆ. ಅವರ ಒದರಾಟಕ್ಕೆ ಲಕ್ಷ್ಯವೇ ಕೊಡದಂತೆ ಈ ಜನರು ಮಾತ್ರ ನಿಂತಲ್ಲಿಯೇ ಕೊಸರಾಡುತ್ತ, ಅಳುವ ಮಕ್ಕಳಿಗೆ ಪೆಟ್ಟು ಹಾಕುತ್ತ, ಬೀಳುತ್ತಿರುವ ಗಂಟು-ಮೂಟೆಗಳನ್ನು ಭದ್ರಪಡಿಸಿಕೊಳ್ಳುತ್ತ ತಮ್ಮ ಖಾಲಿ ಕಣ್ಣುಗಳಿಂದ ಬಯ್ದವರನ್ನು ದೀರ್ಘ ವಿಷಾದದಲ್ಲಿ ನಿರುಕಿಸುತ್ತ ಅಸಹಾಯಕತೆಯಿಂದ ಮುಂದಿನ ಬೋಗಿಯತ್ತ ಚಲಿಸುತ್ತಲೇ ಇದ್ದಾರೆ.
ಇಂಥ ದೃಶ್ಯಗಳು ಕಲ್ಯಾಣ ಕರ್ನಾಟಕ ಪ್ರದೇಶದ ರೈಲ್ವೆಗಳಲ್ಲಿ ಬಿಟ್ಟರೆ ಉಳಿದೆಡೆ ಕಾಣ ಸಿಗದು. ಪ್ರತಿನಿತ್ಯ ಬದುಕನ್ನು ಅರಸಿ ಬೆಂಗಳೂರು, ಮೈಸೂರು, ಮುಂಬೈಗೆ ಹೋಗುವ ಸಾವಿರಾರು ಸಂಖ್ಯೆಯ ವಲಸೆಗಾರರ ದಂಡು ಮನುಷ್ಯತ್ವ ಇದ್ದವರ ನಿದ್ದೆ ಕೆಡಿಸಿದರೆ ಕೊಬ್ಬಿದವರಿಗೆ ಸಿಟ್ಟು ತರಿಸುತ್ತವೆ. ನಮ್ಮ ಭಾಗದ ಸಭ್ಯ ನಾಗರಿಕರು ಮಾತ್ರ; ‘‘ಮೈ ಮ್ಯಾಗ್ ಅರುವಿಲ್ಲದಂಗ್ ಮಕ್ಕಳು ಹಡಿತಾವ. ಮೈ ಮುರದು ದುಡಿಯಂದ್ರ ಬ್ಯಾನಿ ಬರತಾದ, ಸರಕಾರನೂ ಕೂಲಿ ಕಾರ್ಮಿಕರಿಗಿ ಅಕ್ಕಿ ಪುಗಸಟ್ಟೆ, ಬಸ್ ಪುಗಸಟ್ಟೆ, ಲೈಟ್ ಬಿಲ್ ಪುಗಸಟ್ಟೆ. ಥೂ ಇನ್ನು ಏನೇನೋ ಕೊಟ್ಟು ಮೈಗಳ್ಳ ಮಾಡ್ಯಾದ್. ಇವ್ವನವ್ವನ ಗರೀಬರು ಅನಕೋತ ನಮ್ ಜೀಂವಾ ತಿಂತಾವ್.’’ ಎನ್ನುತ್ತ ತಮ್ಮ ನೀಚತನ ಮೆರೆಯುತ್ತಲೆ ಇರುತ್ತಾರೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ವಲಸೆ ಇರುವ ಜಿಲ್ಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಕಲಬುರಗಿ ಒಂದು ಜಿಲ್ಲೆಯಿಂದಲೇ ಶೇ. 43 ಪ್ರಮಾಣದಷ್ಟು ಕಾರ್ಮಿಕರು ದುಡಿಯಲೆಂದು ಬೆಂಗಳೂರು, ಮುಂಬೈ, ಗೋವಾ, ಪುಣೆಗಳಿಗೆ ಹೋಗುತ್ತಾರೆ. ಅದರಂತೆ ರಾಯಚೂರು, ಕೊಪ್ಪಳ, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳು ವಲಸೆಯಲ್ಲಿ ಪೈಪೋಟಿಗಿಳಿಯುತ್ತವೆ. ಯಾಕೆ ಇಷ್ಟು ಪ್ರಮಾಣದ ವಲಸೆ ನಡೆಯುತ್ತದೆ ಎಂಬುದಕ್ಕೆ ದೊಡ್ಡ ಸಂಶೋಧನೆಗಳು ಬೇಕಿಲ್ಲ. ಈ ಭಾಗದ ಕೃಷಿಯು ಸಂಪೂರ್ಣ ನೆಲ ಕಚ್ಚಿದೆ. ಅನಿಶ್ಚಿತ ಮಳೆ, ನೀರಾವರಿ ಕೊರತೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃಷಿಯ ವೆಚ್ಚ ಒಂದೆಡೆ ಇದ್ದರೆ ಈ ಭಾಗದಲ್ಲಿ ಪರ್ಯಾಯ ಉದ್ಯೋಗಗಳಂತೂ ಇಲ್ಲವೇ ಇಲ್ಲ. ಗ್ರಾಮೀಣ ಭಾಗದಲ್ಲಿ ಕಾರ್ಖಾನೆಗಳು ಅಥವಾ ಸಣ್ಣ ಕೈಗಾರಿಕೆಗಳು ಸ್ಥಾಪನೆ ಆಗಲೇ ಇಲ್ಲ. ಇಂತಹ ಸ್ಥಿತಿಯಲ್ಲಿ ಆರ್ಥಿಕವಾಗಿ ದುರ್ಬಲವಿದ್ದ ನಾಡಿನಲ್ಲಿ ಜನರ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮಟ್ಟದಲ್ಲಿ ಸುಧಾರಣೆ ಕಾಣಿಸಲು ಸಾಧ್ಯವೆ?
ಈ ಪ್ರದೇಶದ ಜನರು ಸ್ವಾತಂತ್ರ್ಯ ಪೂರ್ವದಿಂದಲೂ ಅಭಿವೃದ್ಧಿಯಲ್ಲಿ ಅಸಮತೋಲನವನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ನಿಜಾಮ್‌ಶಾಹಿ ಕಾಲದಿಂದಲೂ ಉದ್ಯೋಗ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಇತ್ಯಾದಿ ಕ್ಷೇತ್ರದಲ್ಲಿ ಉಂಟಾಗಿರುವ ಅಸಮತೆಯನ್ನು ಗಮನಿಸಿಯೇ ಆ ಕಾಲದಲ್ಲಿಯೇ ಈ ಭಾಗದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಟ್ಟು ಮುಲ್ಕೀ ರೂಲ್ ತರಲಾಗಿತ್ತು. ಉದ್ಯೋಗದಲ್ಲಿ ಮುಲ್ಕೀ ಅಂದರೆ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು. ನಿಜಾಮ್ ಸರಕಾರ ಮುಲ್ಕೀ ಕಾನೂನನ್ನು ತಪ್ಪದೆ ಪಾಲಿಸಿಕೊಂಡು ಬಂದಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಲ್ಯಾಣ ಕರ್ನಾಟಕದ ಜನರು ತಮ್ಮ ಅಸ್ಮಿತೆಗಾಗಿ ಹಟ ತೊಟ್ಟು ವಿಶಾಲ ಕರ್ನಾಟಕದಲ್ಲಿ ವಿಲೀನಗೊಂಡರು. ಭಾಷಾವಾರು ಪ್ರಾಂತಗಳ ಪುನರ್ ರಚನೆ ಸಂದರ್ಭದಲ್ಲಿಯೂ ಹಳೇ ಮೈಸೂರಿನವರು ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಸೇರಿಸಿಕೊಳ್ಳಲು ಒಪ್ಪಿರಲಿಲ್ಲ. ನಮ್ಮನ್ನು ಹೊರಗಿಟ್ಟೇ ಮೈಸೂರು ರಾಜ್ಯವನ್ನು ಘೋಷಿಸಿದ್ದರು.
ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗ ನೀಡಿದ ನೆಲ, ವಚನ-ದಾಸ-ತತ್ವಪದಗಳ ಹಿರಿ ಪಾಲನ್ನು ನೀಡಿದ ನೆಲವೇ ಕನ್ನಡಕ್ಕೆ ಪರಭಾರೆಯಾದದ್ದು ಅದೆಂಥ ದುರಂತ. ಆದರೂ ಏಕೀಕರಣ ಸಂದರ್ಭದಲ್ಲಿ ನಾವು ಜಿದ್ದಿನಿಂದ ಫಝಲ್ ಅಲಿ ಕಮಿಷನ್ ಎದುರು ನಮ್ಮ ಕನ್ನಡತನವನ್ನು ಪ್ರದರ್ಶಿಸಿ ಕರ್ನಾಟಕದಲ್ಲಿ ಸೇರಿಕೊಂಡೆವು. ದೂರದ ರಾಜಧಾನಿ ಬೆಂಗಳೂರಿಗೆ, ತಮ್ಮದೆಲ್ಲವೂ ಶ್ರೇಷ್ಠವೆಂಬ ಮೈಸೂರಿನ ಭಾಗದ ಜನರಿಗೆ ನಾವು ಎಂದೂ ಒಳಗಿನವರು ಆಗಲೇ ಇಲ್ಲ. ಸಾಂಸ್ಕೃತಿಕವಾಗಿ ನಮ್ಮ ಮೇಲೆ ಯಾಜಮಾನ್ಯತೆಯನ್ನು ನಡೆಸುತ್ತ ಬಂದ ದಕ್ಷಿಣ ಕರ್ನಾಟಕದ ಮಂದಿ ನೀಡಬೇಕಾದ ಅನುದಾನಗಳಲ್ಲಿ ನಮ್ಮನ್ನು ವಂಚಿಸುತ್ತಲೇ ಬಂದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಈ ಭಾಗದ ಅಧ್ಯಯನ ನಡೆಸಿ 2002ರಲ್ಲಿ ಡಾ. ಡಿ.ಎಂ. ನಂಜುಡಪ್ಪ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ನೀಡಿತು. ಅದರಲ್ಲಿ ನಮ್ಮ ಜಿಲ್ಲೆಗಳ ನೈಜ ಚಿತ್ರಣ ಗಾಬರಿ ಮೂಡಿಸಿತ್ತಲ್ಲದೆ ಮಾನವ ಸೂಚ್ಯಂಕದಲ್ಲಿ ಏಶ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕುಗಳು ಈ ಭಾಗದಲ್ಲಿವೆ ಎಂಬ ಸತ್ಯದರ್ಶನ ಆಳುವವರಿಗೆ ಆಯಿತು. ತದ ನಂತರದ ಹೋರಾಟ, ತತ್ಪರಿಣಾಮವಾಗಿ ಘೋಷಣೆಯಾದ ಕಲಂ 371 (ಜೆ), ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗಳು ರಚನೆಯಾದವಷ್ಟೇ. ಈ ಎಲ್ಲ ಅಭಿವೃದ್ಧಿಪರ ನಡೆಗಳಿಂದ ಈ ಭಾಗದ ಅಸಮತೋಲನ ನೀಗಬೇಕಾಗಿತ್ತಲ್ಲವೆ? ಇಲ್ಲಿಯವರೆಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ ಎಂದು ಸರಕಾರ ಹೇಳಿದೆ. ಆದರೆ ಆಗಿದ್ದೇನು? ನಿಜವಾಗಿಯೂ ಆಗಿದ್ದೇನು? ಎಂದು ಕೇಳಿದರೆ ಅದಕ್ಕೆ ಇತ್ತೀಚೆಗೆ ಜನವರಿ 2026ರಲ್ಲಿ ಮಂಡಿಸಲಾದ ಪ್ರೊ.ಎಂ. ಗೋವಿಂದರಾವ್ ವರದಿ ಸ್ಥಳೀಯ ಆಳುವವರು ಮತ್ತು ಅಧಿಕಾರಿಗಳ ಬಣ್ಣ ಬಯಲು ಮಾಡಿದೆ. ಹಾಗೆಯೇ ಸ್ಥಳೀಯರ ನಿರ್ಲಕ್ಷ್ಯ, ಸೋಮಾರಿತನ, ಅವಜ್ಞೆ, ಮೂರ್ಖತನಗಳನ್ನು ದಿಗ್ದರ್ಶಿಸಿದೆ.
ಸದರಿ ವರದಿಯಲ್ಲಿ ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ 39 ಅತ್ಯಂತ ಹಿಂದುಳಿದ ತಾಲೂಕುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇವೆ. ಇದರಲ್ಲಿಯೂ 23 ತಾಲೂಕುಗಳು ಕಳೆದ 25 ವರ್ಷಗಳಿಂದಲೂ ಇಂದಿಗೂ ಯಾವುದೇ ಸುಧಾರಣೆ ಕಾಣದೆ ದಯನೀಯ ಸ್ಥಿತಿಯಲ್ಲಿವೆ. ಕರ್ನಾಟಕ ಸರಕಾರದ ಇತ್ತೀಚಿನ ಆರ್ಥಿಕ ಸಮೀಕ್ಷೆ 2025-26 ಪ್ರಕಾರ ಬೆಂಗಳೂರು ನಗರ ಜಿಲ್ಲೆಯ ತಲಾ ಆದಾಯ ರೂ. 8,55,960 ಇದ್ದರೆ, ಕಲಬುರಗಿ ಜಿಲ್ಲೆಯ ತಲಾ ಆದಾಯ ರೂ. 1,44,449 ಇದೆ. ಬೆಂಗಳೂರು ಮತ್ತು ಕಲಬುರಗಿ ನಡುವೆ ಸರಿಸುಮಾರು ಶೇ. 500ರಷ್ಟು ಅಂತರವಿದೆ. ತಲಾ ಆದಾಯದಲ್ಲಿ ಟಾಪ್ ಐದು ಜಿಲ್ಲೆಗಳೆಂದರೆ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ. ಅತಿ ಕಡಿಮೆ ಆದಾಯ ಹೊಂದಿರುವ ಟಾಪ್ ಜಿಲ್ಲೆಗಳೆಂದರೆ ಕಲಬುರಗಿ, ಬೀದರ್, ಕೊಪ್ಪಳ, ಯಾದಗಿರಿಗಳಾಗಿವೆ. ಸಾಕ್ಷರತೆ ಪ್ರಮಾಣ ಇಡೀ ರಾಜ್ಯದಲ್ಲಿ ಶೇ. 75.36 ಇದ್ದರೆ ಕ.ಕ. ಭಾಗದಲ್ಲಿ ಶೇ. 63.71 ಇದೆ. ಈ ಭಾಗದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 14, 139ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಶೇ. 11.65ರಷ್ಟು ಏಕೋಪಾಧ್ಯಾಯ ಶಾಲೆಗಳು ಇಲ್ಲಿಯೇ ಇವೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಸುಮಾರು 115 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಕಂಡು ಬಂದಿದೆ. ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ಪರಿಗಣಿಸಿದರೆ ಒಟ್ಟು 30,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಭಾಗದ ಸರಕಾರಿ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ ಮೂಲ ಸೌಕರ್ಯಗಳ ಸ್ಥಿತಿಗತಿಯನ್ನು ಪದಗಳಲ್ಲಿ ಹೇಳುವುದು ಕ್ಲೀಷೆಯಾಗಿ ಬಿಟ್ಟಿದೆ. ಈ ಭಾಗದ ಉದ್ಯೋಗದ ಪರಿಸ್ಥಿತಿಯಂತೂ ಹೇಳದೆ ಇರುವುದೇ ಉತ್ತಮ ಎಂಬಷ್ಟು ದಯನೀಯವಾಗಿದೆ. ಇಂದಿಗೂ 29,500 ಸರಕಾರಿ ಹುದ್ದೆಗಳು ಖಾಲಿ ಇವೆ. ಆರೋಗ್ಯದ ಸ್ಥಿತಿಗತಿಯಂತೂ ಹೇಳಲು ನಾಚಿಕೆ ಬರುವಷ್ಟು ಕೆಳಮಟ್ಟದಲ್ಲಿದೆ. ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿ ಶೇ. 39ರಿಂದ ಶೇ. 45ರಷ್ಟು ತಜ್ಞ ವೈದ್ಯರು, ಶುಶ್ರೂಕರು, ತಾಂತ್ರಿಕ ಸಿಬ್ಬಂದಿ ಹುದ್ದೆಗಳು ಭರ್ತಿಯಾಗಿಲ್ಲ. ಗ್ರಾಮೀಣ ಭಾಗದ ಶೇ. 44.5ರಷ್ಟು ಹದಿ ಹರೆಯದ ಬಾಲಕಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಸೂಚ್ಯಂಕದಲ್ಲಿ ಬಳ್ಳಾರಿ 28ನೇ ಸ್ಥಾನದಲ್ಲಿದ್ದರೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿವೆ. ಹೀಗೆ ಹೇಳುತ್ತ ಹೋದರೆ ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ, ಮೂಲಭೂತ ಸೌಲಭ್ಯಗಳಲ್ಲಿ ನರಕ ಸದೃಶ್ಯ ಚಿತ್ರಣವೊಂದು ಧುತ್ತೆಂದು ನಿಲ್ಲುತ್ತದೆ.
ಕಲ್ಯಾಣ ಕರ್ನಾಟಕ ಪ್ರದೇಶದಾಚೆ ಇತರ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಈ ಭಾಗದವರಿಗೆ ಶೇ.8ರಷ್ಟು ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಕಾನೂನು ಇದ್ದರೂ ಈ ಕ್ಷಣಕ್ಕೂ ಎಲ್ಲಿಯೂ ಇದನ್ನು ಪಾಲಿಸಿಲ್ಲ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಂತೂ ಈ ಕಾನೂನು ತಮಗೆ ಅನ್ವಯಿಸುವುದಿಲ್ಲ ಎಂದು ಹೇಳಿ ಕೋರ್ಟ್‌ನಿಂದ ತಡೆಯಾಜ್ಞೆ ತಂದುಕೊಂಡಿವೆ. ಇದರ ನಡುವೆ ಸದರಿ ಕಾಯ್ದೆಯಿಂದ ತಮಗೆ ಅನ್ಯಾಯವಾಗುತ್ತಿದೆ ಎಂಬ ಕೂಗೆದ್ದು ಇದನ್ನು ರದ್ದು ಪಡಿಸಬೇಕೆಂಬ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೂ ವಿಜಾಪೂರ, ಗದಗದಂಥ ಜಿಲ್ಲೆಗಳು ತಮ್ಮನ್ನೂ 371 (ಜೆ) ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸುತ್ತಿವೆ.
ಈ ಎಲ್ಲ ಅಂಶಗಳು ನಮ್ಮ ಮೂರ್ಖತನವನ್ನು ಮತ್ತು ಆಳುವವರ ನಿರ್ಲಕ್ಷವನ್ನು ಎತ್ತಿ ತೋರಿಸುತ್ತವೆ. ಸೆಪ್ಟಂಬರ್ 17 ಬಂತೆಂದರೆ ಸಾಕು. ವಿಮೋಚನಾ ದಿನಾಚರಣೆ, ಸಂಭ್ರಮೋತ್ಸವ, ವಿಜಯೋತ್ಸವ ಎಂಬೆಲ್ಲಾ ಅರ್ಥರಹಿತ ಕಾರ್ಯಕ್ರಮಗಳು ಘಟಿಸುತ್ತವೆ ಹೊರತು 371(ಜೆ) ಜಾರಿಯಾದಂದಿನಿಂದ ನಾವು ಪಡೆದದ್ದು ಏನು, ಕಳೆದುಕೊಂಡದ್ದು ಏನು, ಎಡವಿದ್ದೆಲ್ಲಿ ಎಂಬ ಆತ್ಮಾಲೋಚನೆ ನಡೆಯುವುದೇ ಇಲ್ಲ. ಕೆಕೆಆರ್‌ಡಿಬಿಗೆ ಬಂದ ಕೋಟ್ಯಂತರ ಅನುದಾನವನ್ನು ರಸ್ತೆ, ಕಟ್ಟಡ, ಬಸ್ಸುಗಳ ಖರೀದಿ, ವಿಮಾನಯಾನ, ಗುಡಿ-ಗುಂಡಾರಗಳ ನಿರ್ಮಾಣಕ್ಕೆ ಬಳಸಿದ್ದು ಬಿಟ್ಟರೆ ಮಾನವ ಅಭಿವೃದ್ಧಿಗಾಗಿ ಬಳಸಿದ್ದು ತೀರ ಕಡಿಮೆ. ಅಸಲಿಗೆ ನಮಗೆ ಬಂದ ವಿಶೇಷ ಅನುದಾನವನ್ನು ರೆಗ್ಯೂಲರ್ ಕಾಮಗಾರಿಗೆ ಬಳಸಿಕೊಳ್ಳುವಂತಿಲ್ಲ. ಉಳಿದ ಜಿಲ್ಲೆಗಳ ಖಾಯಂ ಕೆಲಸಗಳಿಗೆ ಸಿಗಬೇಕಾದ ಅನುದಾನದಂತೆ ನಮಗೂ ಆ ಮೊತ್ತ ಬರಬೇಕು. ರೆಗ್ಯೂಲರ್ ಅನುದಾನ ಹೊರತು ಪಡಿಸಿ ಇದು ನಮಗೆ ಹಕ್ಕಿನ ವಿಶೇಷ ಅನುದಾನವಾಗಿದೆ. ನಮ್ಮ ಶಾಸಕ, ಮಂತ್ರಿ ಮಹೋದಯರು ತಮ್ಮ ಎಂದಿನ ಅನುದಾನವನ್ನು ತರದೆ ಕೆಕೆಆರ್‌ಡಿಬಿ ಫಂಡ್‌ಗೆ ಮುಗಿಬೀಳುವುದು ಇದೆಯಲ್ಲ! ಇದು ಅವರ ರಾಜ್ಯ ತಾಂತ್ರಿಕ ಅವಜ್ಞೆಯನ್ನು ಜನರ ಅಜ್ಞಾನವನ್ನು ತೋರಿಸುತ್ತದೆ. ಈ ಅನುದಾನವು ಮಾನವ ಸಂಪನ್ಮೂಲ ಅಭಿವೃದ್ಧಿ ಅಂದರೆ ವಲಸೆ ತಪ್ಪಿಸಲು, ಪ್ರಾಥಮಿಕದಿಂದ ಉನ್ನತೋನ್ನತ ಹಂತದವರೆಗೆ ಶಿಕ್ಷಣದ ಗುಣಪಟ್ಟ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಹೆಚ್ಚುವರಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು, ಕೃಷಿ ಚಟುವಟಿಕೆ ಬಲಪಡಿಸಲು, ಯುವಜನತೆಯಲ್ಲಿ ಕೌಶಲ ಪರಿಣತಿ ಹೆಚ್ಚಿಸಲು, ಜನರಲ್ಲಿನ ಅಜ್ಞಾನ ಮತ್ತು ಮೌಢ್ಯವನ್ನು ತೊಲಗಿಸಲು ಬಳಸಬೇಕಲ್ಲದೆ ಕೇವಲ ಸರಕಾರಿ ಕಟ್ಟಡ, ರಸ್ತೆ ಮಾಡುವುದಲ್ಲ. ನಮ್ಮ ಭಾಗದ ರಸ್ತೆ, ಹೈವೇಗಳಿಗೆ ನಮ್ಮ ಅನುದಾನ ಏಕೆ ಕೊಡಬೇಕು? ಉಳಿದ ಜಿಲ್ಲೆಗಳ ರಸ್ತೆ, ಕಟ್ಟಡ ಕಾಮಗಾರಿಗೆ ನೀಡುವ ನಿಯಮಿತ ಹಣದಲ್ಲಿ ಆ ಕೆಲಸಗಳು ಆಗಬೇಕು. ಮೈಸೂರಿನ ಅಥವಾ ಇತರ ಜಿಲ್ಲೆಗಳ ವಿಮಾನಯಾನಕ್ಕೆ ನೀಡುವ ನಿಯಮಿತ ಅನುದಾನದಂತೆ ನಮಗೂ ನಿಯಮಿತ ಅನುದಾನ ನೀಡಬೇಕಲ್ಲದೆ ಕೆಕೆಆರ್‌ಡಿಬಿ ಮೊತ್ತವನ್ನು ಅದಕ್ಕೆ ವಿನಿಯೋಗಿಸಲಾಗದು.
ದೇಶದಲ್ಲಿಯೇ ಅತಿ ಹೆಚ್ಚು ಬಂಗಾರ ದೊರೆಯುವ ಖಣಿ ಹಟ್ಟಿಯಲ್ಲಿದೆ. ಉತ್ತಮ ಗುಣಮಟ್ಟದ ಹತ್ತಿ ಈ ಭಾಗದಲ್ಲಿ ಬೆಳೆಯುತ್ತದೆ, ಶ್ರೇಷ್ಠ ಮಟ್ಟದ ತೊಗರಿ, ಉದ್ದು, ಹೆಸರು ಈ ಭಾಗದಲ್ಲಿ ಬೆಳೆಯುತ್ತದೆ. ದುರಂತವೆಂದರೆ ಈ ಭಾಗದಲ್ಲಿ ತತ್ಸಂಬಂಧಿ ಸರಕಾರಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಕಾರ್ಖಾನೆಗಳ ವಿಕೇಂದ್ರೀಕರಣದ ಮಾತು ದೂರವೇ ಉಳಿಯಿತು. ಸರಕಾರಿ ಸ್ವಾಮ್ಯದ ಎಲ್ಲ ಔದ್ಯಮೀಕರಣವೇ ಖಾಸಗಿಯವರ ಸುಪರ್ದಿಗೆ ಹೋಗುತ್ತಿರುವಾಗ ಸರಕಾರಿ ಸ್ವಾಮ್ಯದ ಹೊಸ ಕಾರ್ಖಾನೆಗಳು, ತಾಂತ್ರಕ ಉದ್ದಿಮೆಗಳನ್ನು ನಿರೀಕ್ಷಿಸಲು ಸಾಧ್ಯವೆ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಈವರೆಗೂ ಒಂದೇ ಒಂದು ಬೃಹತ್ ಕೈಗಾರಿಕೆ ಇಲ್ಲಿ ಸ್ಥಾಪಿಸಿಲ್ಲ. ಇಲ್ಲಿ ದೊರೆಯುವ ಕಚ್ಚಾ ವಸ್ತುಗಳ ಪ್ರಮಾಣ ಕಡಿಮೆಯೇನಿಲ್ಲ. ಆದರೆ ಆಳುವವರಿಗೆ ಅದರ ಪರಿಜ್ಞಾನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಚ್ಛಾಶಕ್ತಿ ಇಲ್ಲ. ಇದಕ್ಕಿಂತ ದುರಂತವೆಂದರೆ ಈ ಭಾಗದ ಜನರಿಗೆ ತಮಗೇನು ಬೇಕು, ಅದನ್ನು ಯಾರಿಗೆ ಕೇಳಬೇಕು, ತಮ್ಮ ಹಕ್ಕಿನ ಪಾಲು ಪಡೆಯುವುದು ಹೇಗೆ ಎಂಬ ಕನಿಷ್ಠ ತಿಳುವಳಿಕೆ ಇರದಿರುವುದೇ ದೊಡ್ಡ ಸಮಸ್ಯೆಯಾಗಿದೆ. ರಾಜಕೀಯ ಅಜ್ಞಾನದಿಂದ ಹೊರಬರದೆ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಬೇಕಾದ ಹೊಣೆಗಾರಿಕೆ ಈ ಭಾಗದ ಪ್ರಜ್ಞಾವಂತರ ಮೇಲಿದೆ. ಇಲ್ಲವಾದರೆ ಕಲಂ 371(ಜೆ) ಎಂಬ ಕೈಗೆ ಬಂದ ತುತ್ತು ಬಾಯಿಗೆ ದಕ್ಕುವುದಿಲ್ಲ ಎಂಬುದನ್ನು ಮರೆಯದಿರೋಣ.
(ಲೇಖಕರು: ಪ್ರಾಧ್ಯಾಪಕರು ಮತ್ತು ಸಾಮಾಜಿಕ ಹೋರಾಟಗಾರರು)






