ಬೆಂಗಳೂರು–ಮಂಗಳೂರು ಪ್ರಯಾಣಕ್ಕೆ ಮತ್ತೊಂದು ಟೋಲ್ ಹೊರೆ: ವಳಾಲಿನಲ್ಲಿ ಇಂದಿನಿಂದ ಶುಲ್ಕ ವಸೂಲಿ
ಕಾರುಗಳಿಗೆ ಏಕಮುಖ ಪ್ರಯಾಣಕ್ಕೆ 140 ರೂ., ಹಿಂದಿರುಗಲು 205 ರೂ. ; ಸ್ಥಳೀಯ ವಾಹನಗಳಿಗೆ ಮಾಸಿಕ 360 ರೂ. ನ ಪಾಸ್

ಉಪ್ಪಿನಂಗಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುರುವಾರದಿಂದ ಮತ್ತೊಂದು ಟೋಲ್ ಶುಲ್ಕದ ಹೊರೆ ಬೀಳಲಿದೆ. ಬಿ.ಸಿ.ರೋಡ್–ಅಡ್ಡಹೊಳೆ ನಡುವಿನ ಚತುಷ್ಪಥ ಹೆದ್ದಾರಿಯ ಬಜತ್ತೂರು ಗ್ರಾಮದ ವಳಾಲು–ನೀರಕಟ್ಟೆ ಬಳಿ ನಿರ್ಮಿಸಲಾಗಿರುವ ಟೋಲ್ ಪ್ಲಾಝಾದಲ್ಲಿ ನ. 26ರಿಂದ ಶುಲ್ಕ ವಸೂಲಿ ಆರಂಭವಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಬುಧವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದರಿಂದ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ, ಹಾಸನ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನ ಸವಾರರು ಇನ್ನು ಮುಂದೆ ವಳಾಲಿನಲ್ಲೂ ಟೋಲ್ ಶುಲ್ಕ ಪಾವತಿಸಬೇಕಾಗಿದೆ.
ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ವಳಾಲು–ನೀರಕಟ್ಟೆ ಮಧ್ಯೆ ಟೋಲ್ ಪ್ಲಾಝಾ ನಿರ್ಮಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಪರೀಕ್ಷಾರ್ಥ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬಿ.ಸಿ.ರೋಡ್‌ನಿಂದ ಪೆರಿಯಶಾಂತಿವರೆಗಿನ 46 ಕಿ.ಮೀ. ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ KNR ಕನ್‌ಸ್ಟ್ರಕ್ಷನ್ ಸಂಸ್ಥೆಯೇ ಟೋಲ್ ಪ್ಲಾಝಾ ನಿರ್ಮಾಣದ ಜವಾಬ್ದಾರಿಯನ್ನೂ ನಿರ್ವಹಿಸಿದೆ. ಕಾಮಗಾರಿ ಪೂರ್ಣಗೊಳಿಸಿರುವ ಸಂಸ್ಥೆ ಈಗಾಗಲೇ ಅದನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ.
2017ರಲ್ಲಿ ಆರಂಭವಾದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್–ಅಡ್ಡಹೊಳೆ ನಡುವಿನ 65 ಕಿ.ಮೀ. ವಿಭಾಗವನ್ನು ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ (EPC) ಮಾದರಿಯಲ್ಲಿ ಇಬ್ಬರು ಗುತ್ತಿಗೆದಾರರ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯ ಕೆಲವು ತಿರುವುಗಳನ್ನು ನೇರಗೊಳಿಸಿರುವುದರಿಂದ ಹೆದ್ದಾರಿಯ ಉದ್ದ 65 ಕಿ.ಮೀ.ನಿಂದ 63.6 ಕಿ.ಮೀ.ಗೆ ಇಳಿಕೆಯಾಗಿದೆ. ಒಟ್ಟಾರೆ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದೆ.
ಕಾರುಗಳಿಗೆ 140 ರೂ. ಟೋಲ್ :
NHAI ನಿಗದಿಪಡಿಸಿರುವ ದರದ ಪ್ರಕಾರ, ಕಾರು, ವ್ಯಾನ್ ಸೇರಿದಂತೆ ಲೈಟ್ ಮೋಟಾರು ವಾಹನಗಳಿಗೆ (LMV) ಏಕಮುಖ ಪ್ರಯಾಣಕ್ಕೆ 140 ರೂ. ಹಾಗೂ 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ 205 ರೂ. ಶುಲ್ಕ ಪಾವತಿಸಬೇಕು.
ಲೈಟ್ ವಾಣಿಜ್ಯ ವಾಹನಗಳಿಗೆ ಏಕಮುಖ ಪ್ರಯಾಣಕ್ಕೆ 220 ರೂ. ಮತ್ತು ಹಿಂದಿರುಗುವ ಪ್ರಯಾಣಕ್ಕೆ 335 ರೂ. ನಿಗದಿಪಡಿಸಲಾಗಿದೆ. ಎರಡು ಆಕ್ಸಲ್ ಗಳಿರುವ ಬಸ್ ಮತ್ತು ಟ್ರಕ್ ಗಳಿಗೆ ಕ್ರಮವಾಗಿ 465 ರೂ. ಹಾಗೂ 700 ರೂ., ಮೂರು ಆಕ್ಸಲ್ ಗಳ ವಾಣಿಜ್ಯ ವಾಹನಗಳಿಗೆ 510 ರೂ. ಹಾಗೂ 760 ರೂ. ಶುಲ್ಕ ವಿಧಿಸಲಾಗುತ್ತದೆ. ಭಾರೀ ನಿರ್ಮಾಣ ಕಾಮಗಾರಿ ವಾಹನಗಳಿಗೆ 730 ರೂ. ಮತ್ತು 1,095 ರೂ., ಅತಿಯಾದ ಗಾತ್ರದ ವಾಹನಗಳಿಗೆ 890 ರೂ. ಮತ್ತು 1,335 ರೂ. ದರ ನಿಗದಿಪಡಿಸಲಾಗಿದೆ.
ಸ್ಥಳೀಯ ವಾಹನಗಳಿಗೆ ರಿಯಾಯಿತಿ, ಮಾಸಿಕ ಪಾಸ್ :
ಟೋಲ್ ಪ್ಲಾಝಾ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನೋಂದಣಿಯಾಗಿರುವ ವಾಣಿಜ್ಯ ವಾಹನಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಆಯಾ ವಾಹನ ವರ್ಗಗಳಿಗೆ 50 ಏಕಮುಖ ಪ್ರಯಾಣಗಳನ್ನು ಒಳಗೊಂಡ ಮಾಸಿಕ ಪಾಸ್ ಖರೀದಿಸುವವರಿಗೆ ನಿಗದಿತ ದರದಲ್ಲಿ ಮೂರನೇ ಒಂದು ಭಾಗದಷ್ಟು ರಿಯಾಯಿತಿ ದೊರೆಯಲಿದೆ.
ಟೋಲ್ ಪ್ಲಾಝಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಲೈಟ್ ಮೋಟಾರು ವಾಹನಗಳ ಮಾಲೀಕರಿಗೆ ವೈಯಕ್ತಿಕ ಸ್ಥಳೀಯ ಪ್ರಯಾಣಕ್ಕಾಗಿ ತಿಂಗಳಿಗೆ 360 ರೂ. ಮಾಸಿಕ ಪಾಸ್ ಲಭ್ಯವಿರುತ್ತದೆ. ಇದೇ ವ್ಯಾಪ್ತಿಯ ಖಾಸಗಿ ಲೈಟ್ ಮೋಟಾರು ವಾಹನಗಳ ಮಾಲೀಕರು 1,500 ರೂ. ಪಾವತಿಸಿ ವಾರ್ಷಿಕ ಪಾಸ್ ಪಡೆಯಬಹುದು ಎಂದು NHAI ತಿಳಿಸಿದೆ.
ದೇಶಾದ್ಯಂತದ ಟೋಲ್ ಪ್ಲಾಝಾಗಳಲ್ಲಿ ಸಂಚರಿಸಲು ಖಾಸಗಿ ಲೈಟ್ ಮೋಟಾರು ವಾಹನಗಳಿಗೆ 200 ಏಕಮುಖ ಪ್ರಯಾಣಗಳ ಅವಕಾಶವಿರುವ NHAI ವಾರ್ಷಿಕ ಪಾಸ್ ಕೂಡ 2026–27ನೇ ಸಾಲಿನಲ್ಲಿ 3,075 ರೂ. ದರದಲ್ಲಿ ಲಭ್ಯವಿರಲಿದೆ.
8 ಲೇನ್ ಗಳಲ್ಲಿ ವಾಹನ ಸಂಚಾರ :
ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ದಿಕ್ಕುಗಳಲ್ಲಿ ತಲಾ ನಾಲ್ಕು ಲೇನ್ ಗಳಿದ್ದು, ಒಟ್ಟು ಎಂಟು ಲೇನ್ ಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದೆ. ದ್ವಿಚಕ್ರ ವಾಹನಗಳು ಹಾಗೂ ರಿಕ್ಷಾಗಳ ಸಂಚಾರಕ್ಕಾಗಿ ಎರಡೂ ಬದಿಗಳಲ್ಲಿ ಪ್ರತ್ಯೇಕ ಲೇನ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಟೋಲ್ ಪ್ಲಾಝಾದ ಎಂಟು ಲೇನ್ ಗಳ ಪೈಕಿ ಆರು ಲೇನ್‌ಗಳನ್ನು (3+3) ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳಿಗಾಗಿ ಮೀಸಲಿಡಲಾಗಿದೆ. ಉಳಿದ ಎರಡು ಲೇನ್ ಗಳಲ್ಲಿ ನಗದು ಪಾವತಿಗೆ ಅವಕಾಶವಿಲ್ಲ. ಫೋನ್‌ಪೇ, ಗೂಗಲ್ ಪೇ ಅಥವಾ ಸ್ಕ್ಯಾನರ್ ಮೂಲಕ ಮಾತ್ರ ಡಿಜಿಟಲ್ ಪಾವತಿ ಮಾಡಬಹುದು ಎಂದು ಕೋರಲ್ ಸಂಸ್ಥೆಯ ಆಡಳಿತ ಪಾಲುದಾರ ಯಜ್ಞೇಶ್ ತಿಳಿಸಿದ್ದಾರೆ.
ಟೋಲ್ ಶುಲ್ಕ ಸಂಗ್ರಹಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರಿನ ಕೋರಲ್ ಸಂಸ್ಥೆ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದೆ.
ಫ್ಲೈಓವರ್, ಮೇಲ್ಸೇತುವೆಗಳ ನಿರ್ಮಾಣ :
ಬಿ.ಸಿ.ರೋಡ್–ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಯೋಜನೆಯಡಿ ಕಲ್ಲಡ್ಕದಲ್ಲಿ 3 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಿಸಲಾಗಿದೆ. ನೆಲ್ಯಾಡಿಯಲ್ಲಿ ಮೇಲ್ಸೇತುವೆ (VoP) ಹಾಗೂ ಫ್ಲೈಓವರ್ ನಿರ್ಮಿಸಲಾಗಿದೆ. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ಉಪ್ಪಿನಂಗಡಿ ಮತ್ತು ಸುಬ್ರಹ್ಮಣ್ಯ ಕ್ರಾಸ್ ನಲ್ಲಿ ವಾಹನ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಪೆರಿಯಶಾಂತಿ (ಧರ್ಮಸ್ಥಳ ಕ್ರಾಸ್) ಬಳಿ ಗ್ರೇಡ್ ಸೆಪರೇಟರ್ ನಿರ್ಮಿಸಲಾಗಿದೆ.
ನೀರಕಟ್ಟೆ ಬಳಿ ಸುಮಾರು 500 ಮೀಟರ್ ಹಾಗೂ ರೇಖ್ಯ ಬಳಿ ಸುಮಾರು 300 ಮೀಟರ್ ಹೆದ್ದಾರಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ಹಾಸನ ಜಿಲ್ಲೆಯ ಹಾಸನ–ಮಾರನಹಳ್ಳಿ (ಸಕಲೇಶಪುರ ಸಮೀಪ) ನಡುವಿನ ಅಂದಿನ ರಾಷ್ಟ್ರೀಯ ಹೆದ್ದಾರಿ 48 (ಪ್ರಸ್ತುತ NH 75)ರ 47.5 ಕಿ.ಮೀ. ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆ–ಬಿ.ಸಿ.ರೋಡ್ ನಡುವಿನ 65 ಕಿ.ಮೀ. ವಿಭಾಗವನ್ನು ನಾಲ್ಕು ಪಥದ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ 2016ರ ಜುಲೈ 8ರಂದು NHAIಗೆ ವಹಿಸಿಕೊಟ್ಟಿತ್ತು. ಸುಮಾರು ಎರಡು ವರ್ಷಗಳ ಹಿಂದೆ, ಅಂದರೆ 2024ರ ಡಿಸೆಂಬರ್‌ನಲ್ಲಿ ಹಾಸನ–ಮಾರನಹಳ್ಳಿ ವಿಭಾಗದ ಆಲೂರು ತಾಲೂಕಿನ ಚೌಳಗೆರೆ ಟೋಲ್ ಪ್ಲಾಝಾದಲ್ಲಿ ಶುಲ್ಕ ವಸೂಲಿ ಆರಂಭಿಸಲಾಗಿತ್ತು.
38 ಕಿ.ಮೀ. ಅಂತರದಲ್ಲೇ ಮತ್ತೊಂದು ಟೋಲ್ ಪ್ಲಾಝಾ :
ಬೆಂಗಳೂರು–ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆಲಮಂಗಲದಿಂದ ಸಕಲೇಶಪುರದವರೆಗೆ ಈಗಾಗಲೇ ಐದು ಟೋಲ್ ಪ್ಲಾಝಾಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯದಿಂದ ಮಂಗಳೂರು ಪಂಪ್‌ವೆಲ್ ನಡುವಿನ ಮಾರ್ಗದಲ್ಲಿ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲುವಿನಲ್ಲಿ ಮತ್ತೊಂದು ಟೋಲ್ ಪ್ಲಾಝಾ ಕಾರ್ಯನಿರ್ವಹಿಸುತ್ತಿದೆ. ಇದೀಗ ವಳಾಲಿನಲ್ಲಿ ಶುಲ್ಕ ವಸೂಲಿ ಆರಂಭವಾಗಿರುವುದರಿಂದ ಬೆಂಗಳೂರು–ಮಂಗಳೂರು ನಡುವೆ ಪ್ರಯಾಣಿಸುವ ವಾಹನಗಳು ಒಟ್ಟು ಏಳು ಟೋಲ್ ಪ್ಲಾಝಾಗಳಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ.
ಬ್ರಹ್ಮರಕೂಟ್ಲು ಮತ್ತು ವಳಾಲು ಟೋಲ್ ಪ್ಲಾಝಾಗಳ ನಡುವಿನ ಅಂತರ ಕೇವಲ 38 ಕಿ.ಮೀ. ಇರುವುದಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತ ಶಬೀರ್ ಅಹಮ್ಮದ್ ನೆಕ್ಕಿಲಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಒಂದು ಟೋಲ್ ಪ್ಲಾಝಾದಿಂದ ಮತ್ತೊಂದು ಟೋಲ್ ಪ್ಲಾಝಾಕ್ಕೆ 60 ಕಿ.ಮೀ. ಅಂತರ ಇರಬೇಕು. ಆದರೆ, ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಿಂದ ಬಜತ್ತೂರು ಗ್ರಾಮದ ವಳಾಲಿನಲ್ಲಿ ನಿರ್ಮಿಸಲಾಗಿರುವ ಟೋಲ್ ಪ್ಲಾಝಾಕ್ಕೆ ಕೇವಲ 38 ಕಿ.ಮೀ. ಅಂತರವಿದೆ. ಹೀಗಾಗಿ ಈ ಟೋಲ್ ಪ್ಲಾಝಾದಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಉಂಟಾಗಲಿದೆ" ಎಂದು ಅವರು ತಿಳಿಸಿದ್ದಾರೆ.






