ಖಲಿಸ್ತಾನ ವಿರೋಧಿ ಹೋರಾಟಗಾರ ಕ್ಯಾಲಿಫೋರ್ನಿಯಾದಲ್ಲಿ ನಿಗೂಢ ಸಾವು

PC: x.com/IndiaDefDaily
ಅಮೃತಸರ: ಖಲಿಸ್ತಾನ ವಿರೊಧಿ ಹೋರಾಟಗಳಿಗೆ ಹೆಸರಾಗಿದ್ದ ಅಮೆರಿಕದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುಖಿ ಚಹಾಲ್ ಕ್ಯಾಲಿಫೋರ್ನಿಯಾದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.
"ಪರಚಿತರು ಸುಖಿಯವರನ್ನು ಗುರುವಾರ ರಾತ್ರಿ ತಮ್ಮ ಮನೆಯಲ್ಲಿ ಔತಣಕೂಟಕ್ಕೆ ಆಹ್ವಾನಿಸಿದ್ದರು. ಊಟವಾದ ತಕ್ಷಣ ಸುಖಿಯವರ ಆರೋಗ್ಯಸ್ಥಿತಿ ದಿಢೀರನೇ ಹದಗೆಟ್ಟಿತು ಹಾಗೂ ಅವರು ಸ್ಥಳದಲ್ಲೇ ಮೃತಪಟ್ಟರು" ಎಂದು ಅವರ ಆತ್ಮೀಯ ಸ್ನೇಹಿತ ಜಸ್ಪಾಲ್ ಸಿಂಗ್ ಬಹಿರಂಗಪಡಿಸಿದ್ದಾರೆ. ಸುಖಿ ಅವರ ಆರೋಗ್ಯ ಚೆನ್ನಾಗಿತ್ತು. ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಖಲಿಸ್ತಾನ ಸಂಘಟನೆಗಳನ್ನು ಸುಖಿ ಬಹಿರಂಗವಾಗಿಯೇ ಟೀಕಿಸುತ್ತಿದ್ದರು. ಆಗಸ್ಟ್ 17ರಂದು ಖಲಿಸ್ತಾನ ಜನಮತಗಣನೆ ಸಮಾರಂಭ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿದ್ದು, ಇದನ್ನು ತೀವ್ರವಾಗಿ ವಿರೋಧಿಸಿದ್ದ ಸುಖಿ ಅವರ ನಿಗೂಢ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ವಿವರಿಸಿದ್ದಾರೆ.
'ಖಾಲ್ಸಾ ಟುಡೇ' ಸಂಸ್ಥಾಪಕ ಮತ್ತು ಸಿಇಓ ಆಗಿದ್ದ ಅವರಿಗೆ ಖಲಿಸ್ತಾನಿ ಪರ ಹೋರಾಟಗಾರರಿಂದ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿದ್ದವು. ಆದಾಗ್ಯೂ ಇದಕ್ಕೆ ಸೊಪ್ಪುಹಾಕದೇ, ಸುಖಿ ತಮ್ಮ ನಿರ್ಭೀತ ನಿಲುವನ್ನು ವ್ಯಕ್ತಪಡಿಸುತ್ತಿದ್ದರು. ಇವರ ಸಾವು ಭಾರತ ಪರ ಸಮುದಾಯವನ್ನು ಶೋಕದಲ್ಲಿ ಮುಳುಗಿಸಿದೆ ಎಂದು ಅವರ ಮತ್ತೊಬ್ಬ ಸ್ನೇಹಿತ ಬೂಟಾ ಸಿಂಗ್ ಕಲೇರ್ ಹೇಳಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದು, ಅಟಾಪ್ಸಿ ವರದಿ ಸಾವಿನ ನೈಜ ಕಾರಣ ಬಹಿರಂಗಪಡಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.







