‘ಅನುಪಮ’ ಮಾಸಿಕಕ್ಕೆ 25 ವರ್ಷ: ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಿಳೆಯರೇ ಸಂಪೂರ್ಣವಾಗಿ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ‘ಅನುಪಮ’ ತನ್ನ ಪ್ರಕಟಣೆಯ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಈ ಸಾಧನೆಯ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು.
ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಮಹಿಳೆಯರೇ ಮುನ್ನಡೆಸಿ ನಡೆಸುತ್ತಿರುವ ‘ಅನುಪಮ’ ಮಹಿಳಾ ಮಾಸಿಕವು 25 ವರ್ಷಗಳ ಸಾರ್ಥಕ ಪಯಣವನ್ನು ಪೂರೈಸಿರುವುದು ಅತ್ಯಂತ ಶ್ಲಾಘನೀಯ” ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ‘ಅನುಪಮ’ ಮಾಸಿಕದ ಸಂಪಾದಕಿ ಶಹನಾಝ್ ಎಂ., “ರಾಜ್ಯ ಸರ್ಕಾರ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ, ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಮಹಿಳೆಯರ ಅಭಿವೃದ್ಧಿಗೆ ಸ್ಪಂದಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ‘ಅನುಪಮ’ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ‘ಅನುಪಮ’ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್ ಸೇರಿದಂತೆ ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.







