"ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ನಾಗರಿಕ ಪ್ರಜ್ಞೆ ಅಗತ್ಯ" | Vartha Bharati- ವಾರ್ತಾ ಭಾರತಿ

--

ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್ ಜೊತೆ ಸಂವಾದ

"ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ನಾಗರಿಕ ಪ್ರಜ್ಞೆ ಅಗತ್ಯ"

ಹರ್ಷ ಮಂದರ್ (ಜನನ: 1955), 1980-2002ರ ಅವಧಿಯಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದವರು. 2002ರ ಗುಜರಾತಿನ ಹತ್ಯಾಕಾಂಡದ ಬಗ್ಗೆ ಅಲ್ಲಿಗೆ ಹೋಗಿ ಅಧ್ಯಯನ ನಡೆಸಿ, ಅಧಿಕಾರಿಗಳ ಮತ್ತು ರಾಜಕೀಯ ನಾಯಕರ ವರ್ತನೆ ಬಗ್ಗೆ ರೋಸಿ ಹೋಗಿ ಪದತ್ಯಾಗ ಮಾಡಿದರು. ಅವರು ಆಗ ಟೈಮ್ಸ್ ಆಫ್ ಇಂಡಿಯಾಕ್ಕೆ ಬರೆದ ಲೇಖನ ಕಣ್ಮರೆಯಾಗುತ್ತಿರುವ ಮಾನವೀಯತೆಗೆ ಹಿಡಿದ ಕನ್ನಡಿ.

ಆ ಬಳಿಕ ಸಾಮಾಜಿಕ ಕಾರ್ಯಕರ್ತರಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ದೇಶದ ಉದ್ದಗಲ ಸಂಚರಿಸಿ, ದ್ವೇಷದಿಂದ ಹುಟ್ಟುವ ಹಿಂಸೆಯ ಬಗ್ಗೆ ನಿರಂತರ ಕಾಳಜಿ ವಹಿಸಿದ್ದಲ್ಲದೆ ಅದರ ವಿರುದ್ಧ ನಾಗರಿಕರ ಕರ್ತವ್ಯದ ಬಗ್ಗೆ ಅನೇಕ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರೆಯು ತ್ತಲೇ ಹೋದರು. ಐ.ಐ.ಎಂ (Indian Institute of Management) ನಂತಹ ಪ್ರಸಿದ್ಧ ಸಂಸ್ಥೆಗಳಲ್ಲಿ ಭಾರತದಲ್ಲಿಯೂ ವಿದೇಶದಲ್ಲಿಯೂ ಉಪನ್ಯಾಸಗಳನ್ನು ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ದೇಶದ ಹಲವೆಡೆ ಅಲ್ಪಸಂಖ್ಯಾಕರು, ದಲಿತರು ಮತ್ತು ಆದಿವಾಸಿಗಳ ಮೇಲೆ ನಡೆಯುತ್ತಿರುವ ಗುಂಪು ದೌರ್ಜನ್ಯಗಳು ಪ್ರಜ್ಞಾವಂತರನ್ನು ತೀವ್ರವಾಗಿ ನೋಯಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಲ್ಲೆಗಳು ಮುಂದುವರಿ ಯುತ್ತಿರು ವುದರ ಕಾರಣಗಳನ್ನು ಅರಸುತ್ತಾ ಹೋದ ಹರ್ಷರ ಕಣ್ಣಿಗೆ ಎದ್ದು ಕಂಡದ್ದು ದೇಶದ ನಾಗರಿಕರ ದಿವ್ಯ ವೌನ, ಹಿಂಸೆಯ ವೈಭವೀಕರಣ ಮತ್ತು ಅಧಿಕಾರಿ ವರ್ಗದ ಸೋಗಲಾಡಿತನ. ಈ ಆತಂಕಕಾರಿ ಬೆಳವಣಿಗೆಗೆ ಕಡಿವಾಣ ಹಾಕುವ ಉದ್ದೇಶದಿಂದ ‘ಕಾರವಾನ್-ಎ- ಮೊಹಬ್ಬತ್’ (ಪ್ರೀತಿ ಹಬ್ಬುವ) ಸಂಚಾರವನ್ನು ಕೈಗೆತ್ತಿಕೊಂಡರು. ಈ ಸಂಚಾರದಲ್ಲಿ ಆಸಕ್ತ ರೊಂದಿಗೆ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳು ವುದಲ್ಲದೆ ವಸ್ತುಸ್ಥಿತಿಯನ್ನು ನಾಗರಿಕರ ಮುಂದೆ ತಂದು ಅವರ ಸಂವೇದನಾಶೀಲತೆಯನ್ನು ಪ್ರೇರಿಸುವುದರ ಮೂಲಕ ಬಹುಸಂಖ್ಯಾಕರ ಮತ್ತು ಅಲ್ಪಸಂಖ್ಯಾತರ ಹಾಗೂ ಸಾಮಾಜಿಕವಾಗಿ ಶೋಷಿತರ ಮಧ್ಯದ ಕಂದಕವನ್ನು ಮುಚ್ಚುವ ಗುರಿ ಅವರದು.

ಅವರ ಹೆತ್ತವರು ಈಗ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಲ್ಲಿ ಹುಟ್ಟಿ ಬೆಳೆದು, 1947 ರಲ್ಲಿ ದೇಶವಿಭಜನೆಯಾದಾಗ ಭಾರತಕ್ಕೆ ವಲಸೆ ಬಂದರು. ತಮ್ಮ ಕಾರವಾನಿನ ಒಂದು ಹೆಜ್ಜೆಯನ್ನು ಮಂಗಳೂರಿನಲ್ಲಿಯೂ ಇಟ್ಟ ಹರ್ಷರು ಬಂಟ್ವಾಳ ಮತ್ತು ಕಾಟಿಪಳ್ಳದಲ್ಲಿರುವ ಸಂತ್ರಸ್ತರ ಕುಟುಂಬಗಳನ್ನೂ ಸ್ಥಳೀಯ ಕಾರ್ಯಕರ್ತ ರೊಂದಿಗೆ ಕಂಡು ಸ್ಪಂದಿಸಿದರು. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ವಾರ್ತಾಭಾರತಿಗಾಗಿ ಅವರು ಟಿ.ಆರ್.ಭಟ್ ಅವರೊಂದಿಗೆ (ಇಂಗ್ಲಿಷಿನಲ್ಲಿ) ನಡೆಸಿದ ಸಂವಾದ ಇದು. ದೇಶ ಸ್ವಾತಂತ್ರ ಪಡೆದು 70 ವರ್ಷಗಳಾದ ಹಿನ್ನೆಲೆಯಲ್ಲಿ ಇದನ್ನು ಪ್ರಕಟಿಸಲಾ ಗುತ್ತಿದೆ. ಹರ್ಷರು, ನಮ್ಮ ಸಾಧನೆ, ವೈಫಲ್ಯ, ಉದಾರೀಕರಣ, ಅಲ್ಪಸಂಖ್ಯಾಕರು ಮತ್ತು ದುರ್ಬಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಸಮಾಜದ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಗಳ ಬಗ್ಗೆ ವಿಶ್ಲೇಷಿಸಿದ್ದಾರೆ.

  •    ನೀವು ಉನ್ನತ ಹಾಗೂ ಸಮಾಜದ ಮೇಲೆ ಮಹತ್ತಾದ ಪರಿಣಾಮ ಬೀರಬಲ್ಲ ಸರಕಾರಿ ಉದ್ಯೋಗ ಬಿಟ್ಟು ಸಾಮಾಜಿಕ ಕಾರ್ಯ ಕರ್ತರಾಗಿ ದುಡಿಯುತ್ತಾ ಇದ್ದೀರಿ. ಹಿಂದಿನ ಸರಕಾರದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ಹೊತ್ತಿದ್ದೀರಿ. ದೇಶಾದ್ಯಂತ ಸುತ್ತಾಡಿ ಬಂದವರು. ದೇಶ ದಾಸ್ಯದಿಂದ ವಿಮೋಚನೆ ಹೊಂದಿ 70 ವರ್ಷಗಳೇ ಆದವು. ಈ ಅವಧಿಯಲ್ಲಿ ಭಾರತದ ಸಾಧನೆಗಳ ಬಗ್ಗೆ ನೀವೆನನ್ನುತ್ತೀರಿ?

   ► ನಮ್ಮ ದೇಶ ಬಹಳಷ್ಟು ಸಾಧಿಸಿದೆ. ಆರ್ಥಿಕ ಅಭಿವೃದ್ಧಿ ನಿರಂತರವಾಗಿ ಮುಂದುವರಿದಿದೆ. ವಿದ್ಯೆ, ಆರೋಗ್ಯ, ಸರಾಸರಿ ಜೀವಿತಾವಧಿ, ಜನರ ತಲಾ ಆದಾಯ, ಆಹಾರದಲ್ಲಿ ಸ್ವಾವಲಂಬನೆ, ಕೈಗಾರಿಕೆಗಳು, ಮೂಲ ಸೌಕರ್ಯಗಳು ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದೇವೆ. ಆದರೆ ಈ ಅಭಿವೃದ್ಧಿಯ ಉಪಯೋಗ ಕೆಲವೇ ವರ್ಗಗಳಿಗೆ ಲಭಿಸಿವೆ. ಬಹುಸಂಖ್ಯಾಕ ರಾದ ಹಿಂದುಳಿದ ಜನಾಂಗ, ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾಕರು- ಮುಂತಾದವರು ದೇಶದ ಅಭಿವೃದ್ಧಿಯಿಂದ ಹೆಚ್ಚೇನೂ ಪಡೆದಿಲ್ಲ. ಅವರು ಅವಕಾಶಗಳಿಂದ ವಂಚಿತರಾಗಿಯೇ ಉಳಿದಿದ್ದಾರೆ. ಸರ್ವರಿಗೂ ಸಮಪಾಲು ಇನ್ನೂ ಲಭ್ಯವಾಗಿಲ್ಲ.

  •  ಈಗಿನ ಪರಿಭಾಷೆಯಲ್ಲಿ Growth is not inclusive ಅನ್ನುವ ಭಾವನೆ ಅಕ್ಷರಶಃ ನಿಜ ಅನ್ನುತ್ತೀರೇನು? ಈ ಪರಿಸ್ಥಿತಿ ಉದಾರೀಕರಣದ ಯುಗದಲ್ಲಿ ಬದಲಾಗಿಲ್ಲವೇ?

 

   ►  ‘ಇಂಕ್ಲೂಸಿವ್ ಗ್ರೋತ್’ (ಸರ್ವರನ್ನು ಒಳಗೊಂಡ ಪ್ರಗತಿ) ಬಗ್ಗೆ ನೀವು ಹೇಳುತ್ತಿ ರುವುದು ನಿಜ. ಉದಾರೀಕರಣ ಆರಂಭವಾದ ಮೇಲೆ ಅಭಿವೃದ್ಧಿ ದ್ರುತಗತಿಯಲ್ಲಿ ಸಾಗಿದೆ; ಆದರೆ ಅದರ ಪ್ರಯೋಜನಗಳು ಕೆಲವರಿಗೆ ಮಾತ್ರ ಲಭಿಸಿವೆ. ಸಂಪತ್ತು ಮತ್ತಷ್ಟು ಕೇಂದ್ರೀಕೃತವಾಗಿ ಅಸಮಾನತೆ ತೀವ್ರಗೊಂಡಿದೆ. ಸಾಮಾಜಿಕ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

  ಪ್ರಗತಿ ಅರ್ಥಪೂರ್ಣ ಆಗಬೇಕಿದ್ದರೆ ಉದ್ಯೋಗಗಳ ಸೃಷ್ಟಿಯಾಗಬೇಕು. ಆದರೆ 25 ವರ್ಷಗಳ ಉದಾರೀಕರಣದ ಘಟ್ಟದಲ್ಲಿ ಹುಟ್ಟಿದ ಉದ್ಯೋಗಗಳು ಗುತ್ತಿಗೆ ಆಧಾರಿತವಾದವು ಮತ್ತು ತಾತ್ಕಾಲಿಕ ರೂಪದವು (contractual and casual). ಈ ಪ್ರವೃತ್ತಿ ಸಂಘಟಿತ ವಲಯದ ಉದ್ದಿಮೆಗಳಲ್ಲಿಯೂ ಬೆಳೆದಿದೆ. ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಉದ್ಯೋಗ ಖಾತ್ರಿಯೂ ಅಲ್ಲ. ಆರ್ಥಿಕ ಅಸಮಾನತೆಗೆ ಈ ರೀತಿಯ ಉದ್ಯೋಗಗಳು ಎಡೆಮಾಡಿಕೊಡುತ್ತವೆ. ಹೀಗಾಗಿ ಅಭಿವೃದ್ಧಿಯು ಕುಂಟುತ್ತಾ ಸಾಗುತ್ತಿರುವುದು ವಿವಿಧ ಅಧ್ಯಯನಗಳಿಂದ ತಿಳಿದು ಬಂದಿದೆ. 

    ಈ ಪರಿಸ್ಥಿತಿಯಿಂದ ಸಂಕಟಕ್ಕೆ ಗುರಿಯಾಗುವವರು ಮತ್ತೆ ತಳಮಟ್ಟದಲ್ಲಿರುವ ದಲಿತರು, ಆದಿವಾಸಿಗಳು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾಕರು. ನಮ್ಮ ದೇಶದ ಪ್ರಗತಿಯನ್ನು ನಾವು ಚೀನಾ ಮತ್ತು ದಕ್ಷಿಣ ಕೊರಿಯಾಕ್ಕೆ ಆಗಾಗ ಹೋಲಿಸಿಕೊಳ್ಳುತ್ತೇವೆ. ಆದರೆ ಆ ದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ವಿದ್ಯೆಗೆ ಆದ್ಯತೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಕನಿಷ್ಠ ಈ ಎರಡು ವಿಷಯಗಳ ಬಗ್ಗೆ ಒತ್ತು ನೀಡುತ್ತಿದ್ದರೆ ಗೋರಖ್‌ಪುರ ಮತ್ತು ಇನ್ನಿತರ ಕಡೆ ಸಂಭವಿಸಿದ ದುರಂತಗಳು ಆಗುತ್ತಿರಲಿಲ್ಲ.

  •  ನಿಮ್ಮ ದೃಷ್ಟಿಯಲ್ಲಿ ಅಭಿವೃದ್ಧಿಯ ಮಾರ್ಗ ಮತ್ತು ಗುರಿಗಳಲ್ಲಿ ಏನು ಬದಲಾವಣೆ ಆಗಬೇಕು ಎಂದು ಹೇಳುತ್ತೀರಿ?

  ►  ಆರ್ಥಿಕ ಪ್ರಗತಿಯ ಪ್ರಯೋಜನ ತಳಮಟ್ಟದ ಜನರಿಗೆ ತಲಪುವಂತಾಗಬೇಕು. ಇದನ್ನು ಸಾಧಿಸಲು ಸರ್ವರಿಗೂ ಆಧುನಿಕ ಶಿಕ್ಷಣ ದೊರಕಿಸುವ ಮತ್ತು ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ನೀಡುವತ್ತ ಗಮನ ಹರಿಸಬೇಕು ತಳಮಟ್ಟದಲ್ಲಿ ಇರುವ ಆತಂಕಕಾರಿಯಾದ ಅಪೌಷ್ಟಿಕತೆಯನ್ನು ನಿವಾರಿಸಲು ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸಿದರೆ ಮಾತ್ರ ನಮ್ಮ ದೇಶದ ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳನ್ನು ದೊರಕಿಸಿಕೊಡಲು ಮತ್ತು ಭ್ರಾತೃತ್ವವನ್ನು ಬೆಳೆಸಲು ಸಾಧ್ಯ.

   ಈ 70 ವರ್ಷಗಳ ಹಿನ್ನೋಟ ಮಾಡಿದಾಗ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ; ಆದರೆ ಅದರ ಪ್ರಯೋಜನಗಳು ಎಲ್ಲರಿಗೂ ತಲಪುವಂತೆ ತುರ್ತಾಗಿ ಮಾಡಬೇಕಾಗಿದೆ.

  • ನೀವು ಈಗ ಕೈಗೊಂಡಿರುವ ‘ಕಾರವಾನ್ ಎ ಮೊಹಬ್ಬತ್’ ಕಾರ್ಯಕ್ರಮಕ್ಕೆ ಪ್ರೇರಣೆ ಏನು?

ಗುಜರಾತಿನ ಗೋಧ್ರೋತ್ತರ ಹತ್ಯಾಕಾಂಡ ನಮ್ಮ ದೇಶದ ಅಲ್ಪಸಂಖ್ಯಾಕರ ಮೇಲೆ ನಡೆಸಿದ ದಾಳಿಗಳಲ್ಲಿ ಅತ್ಯಂತ ಭೀಕರ ಮತ್ತು ಅಮಾನುಷವಾಗಿತ್ತು. ಆ ಬಳಿಕ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿ ಅವರ ಮೇಲಿನ ಹಿಂಸೆ ನಡೆಯುತ್ತಲೇ ಇದೆ. ಆ ಹಿಂಸೆ ವಿಭಿನ್ನ ರೂಪಗಳನ್ನು ತಾಳುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಮುಸ್ಲಿಮರ ಮೇಲೆ ಗೋಕಳ್ಳತನದ ಆಪಾದನೆ ಹೊರಿಸಿ ಸಾಮೂಹಿಕ ಥಳಿತಕ್ಕೆ ಗುರಿಪಡಿಸಿದ ವರದಿಗಳು ನಮ್ಮ ಮುಂದೆ ಬರುತ್ತಲೇ ಇವೆ. ತರುಣ ಜುನೈದ್ ಖಾನ್ ಮೇಲೆ ರೈಲಿನೊಳಗೆ ಮತ್ತು ಪ್ಲಾಟ್‌ಫಾರಂನಲ್ಲಿ ವಿನಾಕಾರಣ ದಾಳಿ ನಡೆಯುತ್ತಿದ್ದಾಗ ಅನೇಕರು ತೆಪ್ಪಗೆ ನೋಡುತ್ತಾ ನಿಂತಿದ್ದರು. ಅಖ್ಲಾಕ್‌ರ ಕಗ್ಗೊಲೆ ಅದರ ಮೊದಲು ನಡೆಯಿತು. ಗುಜರಾತಿನಲ್ಲಿ ಸತ್ತ ಜಾನುವಾರುಗಳ ಚರ್ಮ ಸುಲಿದು ಜೀವನ ನಡೆಸುವ ದಲಿತರ ಮೇಲೆ ಹಸುಗಳನ್ನು ಕೊಂದರೆಂಬ ಅಪವಾದ ಹೊರಿಸಿ ಥಳಿಸಲಾಯಿತು. ಇಂತಹ ದೌರ್ಜನ್ಯಗಳನ್ನು ನಮ್ಮ ಸಮಾಜದ ಕೆಲವು ವರ್ಗಗಳು ವೈಭವೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊಗಳ ಮೂಲಕ ಪ್ರಚಾರ ಮಾಡುವ ಪ್ರವೃತ್ತಿ ಬಹಳ ಕಳವಳವನ್ನು ಉಂಟು ಮಾಡುತ್ತಿದೆ. ಸುಸಂಸ್ಕೃತರೆಂದು, ನಾಗರಿಕರೆಂದು ಹೇಳಿಕೊಳ್ಳುವ ನಾವು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ನಿಕಟ ಸಂಬಂಧಿಗಳ ಬಗ್ಗೆ ವೌನವಾಗಿದ್ದೇವೆ. ನಮ್ಮ ಮಾನವೀಯ ವೌಲ್ಯಗಳು ಎಲ್ಲಿ ಮರೆಯಾದವು? ಈ ಭಾವನೆಗಳು ಕಾರವಾನಿಗೆ ಪ್ರೇರಣೆ ನೀಡಿದವು.

    ಅದರ ಉದ್ದೇಶಗಳಲ್ಲಿ, ಒಂದು ನಾವೆಲ್ಲರೂ ಎಚ್ಚ್ಚೆತ್ತುಕೊಳ್ಳಬೇಕು ಮತ್ತು ವೌನವನ್ನು ಮುರಿದು ಸಂತ್ರಸ್ತರನ್ನು ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಸಾಂತ್ವನ ಹೇಳಿ ನಾವು ಅವರ ಸಂಕಷ್ಟದಲ್ಲಿ ಅವರೊಂದಿಗಿದ್ದೇವೆ ಎಂಬ ಭಾವನೆ ಬೆಳೆಸುವುದು. ಆ ಮೂಲಕ ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸಗಳನ್ನು ಪೋಷಿಸುವುದು. ಎರಡು, ಸಾಮೂಹಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಿ ಅಂತಹ ವಿಕೃತಘಟನೆಗಳು ಮರುಕಳಿಸದಂತೆ ಯತ್ನಿಸುವುದು. ಈ ಸಾಮೂಹಿಕ ಜಾಗೃತಿಯಿಂದಾಗಿ, ಹಲ್ಲೆಕೋರರಲ್ಲಿ ಸರ್ವೇಸಾಮಾನ್ಯವಾದ ಮೊಂಡುಧೈರ್ಯ ಉಡುಗಿ ಹೋಗಬಹುದು.

  •  ನಿಮ್ಮ ಕಾರವಾನ್ ಅಸ್ಸಾಂನಿಂದ ಆರಂಭವಾಗಿ ಜಾರ್ಖಂಡ್‌ನ್ನು ಸುತ್ತಿ ಈಗ ಮಂಗಳೂರಿಗೆ ಬಂದಿದೆ. ಅದರ ಅನುಭವವೇನು? ಸಂತ್ರಸ್ತರ ಹಾಗೂ ಹೊರಗಿನವರ ಪ್ರತಿಕ್ರಿಯೆ ಹೇಗಿತ್ತು?

  ►  ನಮ್ಮ ಭೇಟಿ ಮತ್ತು ಅವರೊಂದಿಗೆ ಆಡಿದ ಮಾತುಗಳು ಮೃತರ ಕುಟುಂಬಗಳಿಗೆ ಸಮಾಧಾನ ನೀಡಿದವು ಮಾತ್ರವಲ್ಲ ಮನಬಿಚ್ಚಿ ಘಟನೆಗಳ ಬಗ್ಗೆ ಅನೇಕ ವಿಷಯಗಳನ್ನು ನಮ್ಮ ಮುಂದಿಟ್ಟರು. ಆ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದೇವೆ. ಆಯಾಯ ಊರಿನಲ್ಲಿ ಸಾರ್ವಜನಿಕವಾಗಿ ನಾಗರಿಕರ ಸಭೆಗಳನ್ನು ಏರ್ಪಡಿಸಿ ವಿಷಯಗಳನ್ನು ಯಥಾವತ್ತಾಗಿ ಅವರ ಮುಂದಿಟ್ಟೆವು. ಅಲ್ಲಿ ಭಾಗವಹಿಸಿದ ಬಹಳಷ್ಟು ಮಂದಿ ನಮ್ಮ ಹೆಜ್ಜೆಗಳನ್ನು ಮೆಚ್ಚಿದ್ದಲ್ಲದೆ ಸ್ಥಳೀಯ ನೆಲೆಯಲ್ಲಿ ‘ಅಮನ್ ಸಮಿತಿ’ಗಳನ್ನು ರಚಿಸಬೇಕೆಂಬ ನಮ್ಮ ಸಲಹೆಯನ್ನೂ ಸ್ವೀಕರಿಸಿ ಸಹಕಾರ ನೀಡುವ ಬದ್ಧತೆಯನ್ನು ತೋರಿಸಿದರು.

ಮುಂದೆ ಅಂತಹ ಘಟನೆಗಳು ಸಂಭವಿಸಿದಾಗ ಅಥವಾ ಅವುಗಳ ಬಗ್ಗೆ ಸುಳಿವು ಸಿಕ್ಕಾಗ ಧನಾತ್ಮಕವಾಗಿ ಸ್ಪಂದಿಸುವ ಆಶ್ವಾಸನೆಯನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ನಮ್ಮ ಕಾರವಾನ್ ಹೊಸ ಸಂಚಲನ ಉಂಟುಮಾಡುತ್ತಿದೆ ಎಂದು ನನಗೆ ಅನಿಸುತ್ತಿದೆ. ಇದು ಮುಂದುವರಿಯುತ್ತಿದ್ದಂತೆ ಇನ್ನೂ ಹೆಚ್ಚಿನ ಸ್ಪಂದನ ಮತ್ತು ಸಂವೇದನಾಶೀಲತೆ ಹುಟ್ಟುವ ಭರವಸೆ ನಮಗಿದೆ.

  • ಮುಂದಿನ ದಿನಗಳಲ್ಲಿ ಸಂವಿಧಾನದ ಆಶಯಗಳನ್ನು ಸಾಧಿಸುವ ಬಗ್ಗೆ ನಿಮಗೇನನ್ನಿಸುತ್ತದೆ?

  ►  ವಿಶಾಲವಾದ ಹಾಗೂ ವೈವಿಧ್ಯ ಹೊಂದಿದ ದೇಶ ನಮ್ಮದು. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಹಾಗಿರುವಾಗ ವಿವಿಧತೆಯನ್ನು ಒಪ್ಪದೆ ಏಕತೆಯನ್ನು ತರಲು ದ್ವೇಷಪೂರಿತ ಹಿಂಸೆಗೆ ತೊಡಗಿ ಅದನ್ನು ವೈಭವೀಕರಿಸಿ ಅದು ನ್ಯಾಯಯುತ ಎಂದು ಬಿಂಬಿಸುವುದು ಸಂವಿಧಾನಕ್ಕೆ ದ್ರೋಹ ಬಗೆದಂತೆ. ಈ ಪಿಡುಗನ್ನು ನಿವಾರಿಸಲು ಹೊಸ ಚಿಂತನೆಯ ಅಗತ್ಯವಿದೆ. ಮುಖ್ಯವಾಹಿನಿಯ ಚಿಂತನೆಗಿಂತ ಭಿನ್ನವಾದ ಚಿಂತನೆಗಳು ಜಗತ್ತಿನಾದ್ಯಂತ ಬೆಳೆಯುತ್ತಿವೆ. ಅಮೆರಿಕದ ಡೆಮೊಕ್ರಟಿಕ್ ಪಕ್ಷದ ಬರ್ನಿ ಸ್ಯಾಂಡರ್ಸ್ ಮತ್ತು ಇಂಗ್ಲೆಂಡಿನ ಲೇಬರ್ ಪಾರ್ಟಿಯ ಜೆರೆಮಿ ಕಾರ್ಬಿನ್ ಈ ಬೆಳವಣಿಗೆಯ ಸಂಕೇತಗಳು. ಅವರನ್ನು ಮತದಾರರು ಆರಿಸದಿದ್ದರೂ ಅವರ ಧೋರಣೆಗಳಿಗೆ ಬಹಳಷ್ಟು ಬೆಂಬಲ ಲಭಿಸುತ್ತಾ ಇದೆ. ಭಾರತದಂತಹ ದೇಶದಲ್ಲಿ ಈ ರೀತಿಯ ಹೊಸ ಯೋಚನೆಗಳು ಬೇಕು. ಸಹಾನುಭೂತಿ ಮತ್ತು ಸಂವೇದನಾಶೀಲತೆಯನ್ನು ಒಳಗೊಂಡಿರುವ ಸಮತಾವಾದ (socialism) ನಮ್ಮ ಸಂವಿಧಾನದ ಧ್ಯೇಯವೂ ಆಗಿದೆ.

    ನಮ್ಮ ನಾಗರಿಕ ಸಮಾಜ ಶತಮಾನಗಳಿಂದ ವೈವಿಧ್ಯವನ್ನು ಸ್ವೀಕರಿಸಿದೆ, ಪೋಷಿಸಿದೆ. ಈಗ ಅದೇ ಸಮಾಜ ಹಿಂಸೆಗೆ ಗುರಿಯಾಗುತ್ತಿರುವ ತನ್ನದೇ ಭಾಗಗಳಿಗೆ ಸಾಂತ್ವನ ಹೇಳುವ ಕೆಲಸಕ್ಕೆ ಮುಂದಾಗಬಹುದೆಂಬ ಭರವಸೆ ಮತ್ತು ವಿಶ್ವಾಸದಿಂದ ಕಾರವಾನ್ ಹೊರಟಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆ ಮತ್ತು ಪೋಷಣೆಗೆ ಎಲ್ಲರೂ ಬೆಂಬಲ ನೀಡುವ ವಿಶ್ವಾಸ ನನಗಿದೆ.

  • 70 ವರ್ಷದ ಹಿಂದೆ ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಆಯಿತು. ನಿಮ್ಮ ಹೆತ್ತವರು ತಮ್ಮ ಹುಟ್ಟಿದೂರು ರಾವಲ್ಪಿಂಡಿಯಿಂದ ಭಾರತಕ್ಕೆ ವಲಸೆ ಬಂದರೆಂದು ಕೇಳಿದೆ. ಈ ಏಳು ದಶಕಗಳಲ್ಲಿ ಹಿಂದೆ ಆದ ಗಾಯಗಳು ಮಾಸಿವೆಯೇ? ನೀವು ಪಾಕಿಸ್ತಾನಕ್ಕೂ ಹೋಗಿ ಬಂದಿದ್ದೀರಿ; ಅಲ್ಲಿನ ನಾಗರಿಕರು ನಮ್ಮ ಬಗ್ಗೆ ಏನನ್ನುತ್ತಾರೆ? ನಮ್ಮ ರಾಜ್ಯದ ಸಂಸದೆಯೊಬ್ಬರು ಪಾಕಿಸ್ತಾನಕ್ಕೆ ಭೇಟಿ ನೀಡಿ ಬಂದ ಬಳಿಕ ‘ಆ ದೇಶ ನರಕವಲ್ಲ’ ಎಂಬ ಹೇಳಿಕೆ ನೀಡಿದ್ದರು. ಅದನ್ನು ಕೆಲವರು ತೀವ್ರವಾಗಿ ಖಂಡಿಸಿ ಅವರು ಪಾಕಿಸ್ತಾನಕ್ಕೇ ಹೋಗಲಿ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳುತ್ತಿದ್ದೇನೆ.

  ► ಇತ್ತೀಚೆಗೆ ನನ್ನ ವಯಸ್ಸಾದ ಅಪ್ಪ ಮತ್ತು ಅಮ್ಮನನ್ನು ರಾವಲ್ಪಿಂಡಿಗೆ ಕರೆದುಕೊಂಡು ಹೋಗಿದ್ದೆ. ನನ್ನ ಅಮ್ಮ 18 ವರ್ಷ ಇದ್ದ ಮನೆಗೆ ಹೋಗಬೇಕೆಂದು ಆಕೆಗೆ ಅನಿಸಿ ಅಲ್ಲಿಗೆ ಹೋದೆವು. ಅಲ್ಲಿದ್ದ ಪಾಕಿಸ್ತಾನಿ ಕುಟುಂಬಕ್ಕೆ ನಮ್ಮ ಪರಿಚಯ ಹೇಳಿದಾಗ ಬಹಳ ಆತ್ಮೀಯವಾಗಿ ಬರಮಾಡಿಕೊಂಡು ಉಪಚರಿಸಿದರು. ಮಾತ್ರವಲ್ಲ ಭಾರತದಿಂದ ನಿಮ್ಮ ಮನೆಗೇ ಬಂದಿದ್ದೀರ, ಊಟಮಾಡಿಯೇ ಹೋಗಬೇಕು ಎಂಬ ಅವರ ಒತ್ತಾಯಕ್ಕೆ ಇಲ್ಲವೆನ್ನಲಾಗಲಿಲ್ಲ. ಅವರ ಉಪಚಾರ ಅಪ್ಪಟವಾಗಿದ್ದು, ಕೃತ್ರಿಮತೆ ಇರಲಿಲ್ಲ. ಅದೊಂದು ಮರೆಯಲಾಗದ ಅನುಭವ. ಇಸ್ಲಾಮಾಬಾದಿನಲ್ಲಿಯೂ ನಮ್ಮಾಡನೆ ಸೌಜನ್ಯದಿಂದ ವರ್ತಿಸಿದ್ದರು.

ನಾವು ಭೇಟಿ ಮಾಡಿದ ಎಲ್ಲಾ ಪಾಕಿಸ್ತಾನಿಯರಿಗೂ ಭಾರತ ಮತ್ತು ಇಲ್ಲಿನವರ ಬಗ್ಗೆ ಬಹಳ ಗೌರವ ಇತ್ತು. ಬಹಳಷ್ಟು ಮಂದಿ, ಭಾರತದವರು ನಮ್ಮ ಸಹೋದರರು ಎಂಬ ಭಾವನೆಯನ್ನು ಹೊಂದಿದ್ದಂತೆ ನಮಗೆ ಅನ್ನಿಸಿತು. ಈ ಬಗ್ಗೆ ನಾನು ಸ್ಕ್ರೋಲ್ (Scroll.in ಆಗಸ್ಟ್ 29, 2016) ವಿದ್ಯುನ್ಮಾನ ಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದೆ. ಈ ತರದ ನಾಗರಿಕರ ನೆಲೆಯಲ್ಲಿಯೇ ಪರಸ್ಪರ ಸಂಪರ್ಕ ಬೆಳೆಸಿದರೆ ಎರಡು ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದ ಭದ್ರವಾಗಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top