ಶೇಣಿ ಜನ್ಮಶತಮಾನೋತ್ಸವ | Vartha Bharati- ವಾರ್ತಾ ಭಾರತಿ

--

ಯಕ್ಷಗಾನ ಪ್ರೇಕ್ಷಕರ ಬೌದ್ಧಿಕ ಮಟ್ಟ ಎತ್ತರಿಸಿದ ಅಭಿಜಾತ ಕಲಾವಿದ

ಶೇಣಿ ಜನ್ಮಶತಮಾನೋತ್ಸವ

ಶೇಣಿಯವರಲ್ಲಿ ಕಾಣುವ ಹೆಚ್ಚುಗಾರಿಕೆ ಏನು ಎಂದರೆ ಅವರು ತಮ್ಮ ಮಾತುಗಾರಿಕೆಯನ್ನು ಬೌದ್ಧಿಕವಾಗಿ ಬಹಳ ಮೇಲ್‌ಸ್ತರದಲ್ಲೇ ಉಳಿಸಿಕೊಂಡರೂ ಅವರು ವಿದ್ಯಾವಂತ ಪ್ರೇಕ್ಷಕರನ್ನು ಆಕರ್ಷಿಸಿದ ಹಾಗೆಯೇ ಕೇವಲ ಮನರಂಜನೆಗಾಗಿ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಕ್ಕೆ ಬರುವ ಹಳ್ಳಿಯ ಸಾಮಾನ್ಯ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಸೆಳೆದರು ಎನ್ನುವುದು. ಯಕ್ಷಗಾನದಂತಹ ಸೀಮಿತ ವ್ಯಾಪ್ತಿಯುಳ್ಳ ಕಲೆಯ ಆವರಣದಲ್ಲೇ ಆದರೂ ಅಲ್ಲಿ ಶೇಣಿಯವರಿಗೆ ತನ್ನ ಮಾತುಗಾರಿಕೆಯನ್ನು ಮತ್ತು ಪಾತ್ರ ನಿರೂಪಣೆಯನ್ನು ಜನಪ್ರಿಯತೆಗೋಸ್ಕರ ಕೊಂಚವೂ ಕೆಳಕ್ಕಿಳಿಸದೆಯೇ ಸಾಮಾನ್ಯ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಯಿತು ಎನ್ನುವುದು ಬಹು ಮುಖ್ಯವಾದ ವಿಚಾರ. ಯಾಕೆಂದರೆ ಇದನ್ನು ಸಾಧಿಸಿ ತೋರಿಸುವಲ್ಲಿ ಅವರು ನಮ್ಮ ಕಾಲದ ಒಂದು ದೊಡ್ಡ ಬೌದ್ಧಿಕ ಬಿಕ್ಕಟ್ಟನ್ನು ಮೀರಿ ನಿಲ್ಲುತ್ತಾರೆ.

ಯಕ್ಷಗಾನ ಕ್ಷೇತ್ರದ ಮಾತುಗಾರಿಕೆಯ ಮಹಾನ್ ಪ್ರತಿಭೆ ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವ ಈ ವರ್ಷ ನಡೆಯುತ್ತಿದೆ. ನೂರನೆಯ ವರ್ಷ ವ್ಯಕ್ತಿಯೊಬ್ಬರನ್ನು ವಿಶೇಷವಾಗಿ ಸ್ಮರಿಸಿಕೊಳ್ಳುವುದು ವಾಡಿಕೆ. ಶೇಣಿಯವರ ವಿಚಾರದಲ್ಲಿ ಈ ಸಂದರ್ಭ ಯಾವುದೇ ವಿಶೇಷ ಸ್ಮರಣೆಯ ಅಗತ್ಯವಿಲ್ಲ ಎನ್ನಿಸುತ್ತದೆ. ಯಾಕೆಂದರೆ ಯಕ್ಷಗಾನ ಎಂಬ ಸಣ್ಣ ಪ್ರಪಂಚದಲ್ಲಿ ಶೇಣಿ ಎಂಬ ಮಾಹಾನ್ ಚೇತನದ ನೆನಪು ಒಂದು ಕ್ಷಣವೂ ಮರೆಯಾದದ್ದಿಲ್ಲ.. ತಮ್ಮ 89ನೆಯ ವಯಸ್ಸಿನಲ್ಲಿ ಅಂದರೆ 2006ರಲ್ಲಿ ಶೇಣಿಯವರು ಕಾಲವಾದರು. ಅದಕ್ಕಿಂತ ಸುಮಾರು ಆರೇಳು ವರ್ಷಗಳಿಗೆ ಹಿಂದೆಯೇ ತಮ್ಮ ಸುಮಾರು ಆರು ದಶಕಗಳ ಯಕ್ಷಯಾತ್ರೆಯನ್ನು ಮುಗಿಸಿ ಅವರು ನಿವೃತ್ತರಾಗಿದ್ದರು. ಅವರ ಜತೆ ಆಗ ಕಿರಿಯ ಕಲಾವಿದರಾಗಿದ್ದವರು ಈಗ ಬೆಳೆದು ಹಿರಿಯ ಕಲಾವಿದರ ಸ್ಥಾನದಲ್ಲಿದ್ದಾರೆ. ಶೇಣಿಯವರನ್ನು ನೇರವಾಗಿ ರಂಗದಲ್ಲಿ ಕಾಣದ ಹೊಸ ಕಲಾವಿದರ ತಲೆಮಾರೊಂದು ಯಕ್ಷಗಾನ ರಂಗವನ್ನು ಪ್ರವೇಶಿಸಿದೆ. ಯಕ್ಷಗಾನ ಕ್ಷೇತ್ರ ಬೆಳೆದೂ ಬೆಳೆದೂ ಬದಲಾಗಿದೆ. ಬದಲಾಗಿ ಬದಲಾಗಿ ಬೆಳೆದಿದೆ.

ಇಷ್ಟೆಲ್ಲಾ ಆದರೂ ಇಂದಿಗೂ, ವಿಶೇಷವಾಗಿ ತೆಂಕುತಿಟ್ಟು ಪರಂಪರೆಯಲ್ಲಿ, ಯಕ್ಷಗಾನದ ಗಾಳಿ ಸೋಂಕಿದಲ್ಲೆಲ್ಲಾ ಶೇಣಿ ಎಂಬ ಹೆಸರು ಅನುರಣಿಸುವುದು ನಿಂತಿಲ್ಲ.. ಆ ಸ್ಥಾನವನ್ನು ಇನ್ನೊಬ್ಬ ತುಂಬಲು ಸಾಧ್ಯವಿಲ್ಲ. ಯಕ್ಷಗಾನ-ತಾಳಮದ್ದಳೆ ಕ್ಷೇತ್ರದಲ್ಲಂತೂ ಶೇಣಿ ಎಂದರೆ ಒಂದು ಮಾನದಂಡ. ಕಲಾವಿದರ ಅರ್ಥಗಾರಿಕೆ ಹೇಗಿದೆ ಎನ್ನುವುದನ್ನು ನಿರ್ಧರಿಸುವುದು ಅವರು ಶೇಣಿಯವರ ಹತ್ತಿರಕ್ಕೆ ಎಷ್ಟು ಬಂದಿದ್ದಾರೆ ಎನ್ನುವುದರ ಆಧಾರದ ಮೇಲೆ. ಕಾಲ ಶೇಣಿಯವರ ಭೌತಿಕ ಶರೀರವನ್ನು ಕಸಿದುಕೊಂಡಿರಬಹುದು. ಆದರೆ ಕಾಲನಿಗೆ ಅವರ ಸ್ಮರಣೆಯನ್ನು ಕಸಿದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಕಸಿದುಕೊಳ್ಳುವ ಮಾತಿರಲಿ, ಅದನ್ನು ಕೊಂಚ ಮಾಸುವಂತೆ ಮಾಡುವುಕ್ಕೂ ಕಾಲ ಬಹಳ ಕಾಯಬೇಕಾದೀತು.

ಸಾಧಕರಲ್ಲಿಯೂ ಸಾಧಕರಾದವರ, ಮಹಾನ್ ಪ್ರತಿಭೆಗಳ ನಡುವೆಯೂ ಪ್ರಖರವಾಗಿ ಶೋಭಿಸುವ ಪ್ರತಿಭೆಗಳ ವಿಚಾರದಲ್ಲಿ ಮಾತ್ರ ಹೀಗಾಗುವುದಕ್ಕೆ ಸಾಧ್ಯ. ನೆನಪಿನ ನಿತ್ಯೋತ್ಸವದ ನಡುವೆ ಜನಶತಮಾನೋತ್ಸವ ಏನ್ನುವುದಕ್ಕೆ ವಿಶೇಷ ಪ್ರಾಧಾನ್ಯತೆ ಇಲ್ಲ. ಒಂದೇ ಒಂದು ಮಾತನ್ನು ಇಲ್ಲಿ ಹೇಳಬೇಕು. ಶೇಣಿಯವರು ಯಕ್ಷಗಾನದಂತಹ ಒಂದು ಪ್ರಾದೇಶಿಕ ಕಲೆಗೆ ತಮ್ಮನ್ನು ಒಪ್ಪಿಸದೆ ದೇಶವ್ಯಾಪಿಯಾದ ಇನ್ನಾವುದೋ ರಂಗದಲ್ಲಿ ತಮ್ಮ ಪ್ರತಿಭೆಯನ್ನು ವ್ಯಯಿಸುತ್ತಿದ್ದರೆ ಇವತ್ತು ದೇಶಕ್ಕೆ ದೇಶವೇ ಅವರ ಜನ್ಮಶತಮಾನೋತ್ಸವದ ಗುಂಗಿನಲ್ಲಿರುತ್ತಿತ್ತು.

** ** **

ಈಗ ಕೇರಳದ ಭಾಗವಾಗಿ ಹೋಗಿರುವ ಕಾಸರಗೋಡು ಜಿಲ್ಲೆಯ ಶೇಣಿ ಎಂಬ ಊರಿನಿಂದ ಬಂದ ಗೋಪಾಲಕೃಷ್ಣ ಭಟ್ ಅವರು ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದು ಹರಿಕತೆಯ ಹಿನ್ನೆಲೆಯಿಂದ. ಅವರು ಶಾಸ್ತ್ರೀಯವಾಗಿ ಯಕ್ಷಗಾನದ ನೃತ್ಯ ಅಥವಾ ಹೆಜ್ಜೆಗಾರಿಕೆ ಕಲಿತವರಲ್ಲ. ಅದನ್ನು ರಂಗದಲ್ಲಿ ರೂಢಿಸಿಕೊಂಡವರಲ್ಲ. ಯಕ್ಷಗಾನ ಪ್ರದರ್ಶನಗಳಲ್ಲಿ ಅವರು ಹೆಚ್ಚಿನ ವೇಳೆ ಕಾಣಿಸಿಕೊಳ್ಳುತ್ತಿದ್ದುದು ಖಳ ನಾಯಕ ಪಾತ್ರಗಳಲ್ಲಿ.

ಯಕ್ಷಗಾನ ರಂಗಭೂಮಿ ಎಂಬುದು ಸಣ್ಣ ಪ್ರಪಂಚ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಮತ್ತು ಶಿವಮೊಗ್ಗ ಜಿಲ್ಲೆಯ ಕೆಲ ಪ್ರದೇಶಗಳು, ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉತ್ತರ ತುದಿಯ ಪ್ರದೇಶಗಳು ಯಕ್ಷಗಾನದ ನೆಲ ಎಂದು ಗುರುತಿಸಲ್ಪಡುತ್ತವೆ. ಈ ಸೀಮಿತ ಯಕ್ಷಗಾನ ನೆಲದಲ್ಲೂ ಎಲ್ಲರೂ ಯಕ್ಷಗಾನ ಪ್ರಪಂಚದ ಆಗುಹೋಗುಗಳನ್ನು ಬಲ್ಲವರಲ್ಲ. ಆದರೆ ಅದೊಂದು ಅದ್ಭುತ ಪ್ರಪಂಚ. ಅದರೊಳಗೆ ಹೊಕ್ಕವರನ್ನು ಅದು ಹಿಡಿದಿಡುವ ಮತ್ತು ಕಾಡುವ ಪರಿ ಅನನ್ಯವಾದದ್ದು. ಆ ಅದ್ಭುತ ಪ್ರಪಂಚದಲ್ಲಿ ಶೇಣಿ ಗೋಪಾಲಕೃಷ್ಣ ಭಟ್ ಎಂಬ ಧೈತ್ಯ ಪ್ರತಿಭೆ ನಮ್ಮನ್ನು ಬೆರಗುಗೊಳಿಸುವುದು ಅವರ ಮಾತುಗಾರಿಕೆಯಲ್ಲಿ ಪುರಾಣ ಪಾತ್ರಗಳು ಮರುಹುಟ್ಟು ಪಡೆಯುತ್ತಿದ್ದವು ಎನ್ನುವ ಕಾರಣಕ್ಕೆ ಮಾತ್ರವಲ್ಲ; ಪಾತ್ರವನ್ನು ಮರು ನಿರೂಪಿಸುತ್ತಾ ಮರು ನಿರೂಪಿಸುತ್ತಾ ಅವರು ಆ ಪಾತ್ರವೇ ಆಗಿ ಬಿಡುತ್ತಿದ್ದರು ಎನ್ನುವ ಕಾರಣಕ್ಕೆ ಮಾತ್ರವಲ್ಲ; ಇವೆಲ್ಲವೂ ಇದ್ದು ಇವುಗಳಾಚೆಗಿನ ಒಂದು ವಿಷಯ ಶೇಣಿಯವರನ್ನು ಇಂತಹ ಮಹಾನ್ ಪ್ರತಿಭೆಗಳಿಗಿಂತ ಭಿನ್ನವಾಗಿಯೂ ವಿಶಿಷ್ಟವಾಗಿಯೂ ಪ್ರತಿಷ್ಠಾಪಿಸುತ್ತದೆ.

ಅದು ಏನು ಎಂದರೆ ಶೇಣಿಯವರ ಮಾತುಗಾರಿಕೆಗೆ ಪಂಡಿತ ಮತ್ತು ಪಾಮರ ವರ್ಗಗಳನ್ನು ಏಕಕಾಲಕ್ಕೆ ಮಂತ್ರಮುಗ್ಧಗೊಳಿಸುವ ಸಾಮರ್ಥ್ಯ ಇತ್ತು ಎನ್ನುವುದು. ಇಷ್ಟೇ ಹೇಳಿದರೆ ಈ ಸಾಮರ್ಥ್ಯದ ಅಗಾಧತೆ ತಿಳಿಯುವುದಿಲ್ಲ. ಒಂದು ರೀತಿಯಲ್ಲಿ ಯಕ್ಷಗಾನದ ಹಾಸ್ಯ ಕಲಾವಿದರು ಮತ್ತು ಭಾವನಾತ್ಮಕವಾಗಿ ಪಾತ್ರ ನಿರೂಪಣೆ ಮಾಡಬಲ್ಲ ಇತರ ಕಲಾವಿದರೂ ವಿದ್ಯಾವಂತ ಮತ್ತು ಸಾಮಾನ್ಯ ಪ್ರೇಕ್ಷಕರನ್ನು ಏಕಕಾಲಕ್ಕೆ ತಲುಪುವಲ್ಲಿ ಮತ್ತು ತಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಶೇಣಿಯವರಲ್ಲಿ ಕಾಣುವ ಹೆಚ್ಚುಗಾರಿಕೆ ಏನು ಎಂದರೆ ಅವರು ತಮ್ಮ ಮಾತುಗಾರಿಕೆಯನ್ನು ಬೌದ್ಧಿಕವಾಗಿ ಬಹಳ ಮೇಲ್‌ಸ್ತರದಲ್ಲೇ ಉಳಿಸಿಕೊಂಡರೂ ಅವರು ವಿದ್ಯಾವಂತ ಪ್ರೇಕ್ಷಕರನ್ನು ಆಕರ್ಷಿಸಿದ ಹಾಗೆಯೇ ಕೇವಲ ಮನರಂಜನೆಗಾಗಿ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಕ್ಕೆ ಬರುವ ಹಳ್ಳಿಯ ಸಾಮಾನ್ಯ ಪ್ರೇಕ್ಷಕರನ್ನೂ ಸೂಜಿಗಲ್ಲಿನಂತೆ ಸೆಳೆದರು ಎನ್ನುವುದು.

ಯಕ್ಷಗಾನದಂತಹ ಸೀಮಿತ ವ್ಯಾಪ್ತಿಯುಳ್ಳ ಕಲೆಯ ಆವರಣದಲ್ಲೇ ಆದರೂ ಅಲ್ಲಿ ಶೇಣಿಯವರಿಗೆ ತನ್ನ ಮಾತುಗಾರಿಕೆಯನ್ನು ಮತ್ತು ಪಾತ್ರ ನಿರೂಪಣೆಯನ್ನು ಜನಪ್ರಿಯತೆಗೋಸ್ಕರ ಕೊಂಚವೂ ಕೆಳಕ್ಕಿಳಿಸದೆಯೇ ಸಾಮಾನ್ಯ ಪ್ರೇಕ್ಷರನ್ನು ಸೆಳೆಯಲು ಸಾಧ್ಯವಾಯಿತು ಎನ್ನುವುದು ಬಹು ಮುಖ್ಯವಾದ ವಿಚಾರ. ಯಾಕೆಂದರೆ ಇದನ್ನು ಸಾಧಿಸಿ ತೋರಿಸುವಲ್ಲಿ ಅವರು ನಮ್ಮ ಕಾಲದ ಒಂದು ದೊಡ್ಡ ಬೌದ್ಧಿಕ ಬಿಕ್ಕಟ್ಟನ್ನು ಮೀರಿ ನಿಲ್ಲುತ್ತಾರೆ. ಬರಬರುತ್ತಾ ನಮ್ಮ ಸಾರ್ವಜನಿಕ ಬದುಕಿನ ಎಲ್ಲಾ ರಂಗಗಳೂ ಉತ್ಕೃಷ್ಟ ಹೆಚ್ಚು ಹೆಚ್ಚು ವಿಮುಖವಾಗುತ್ತಾ ಇರುವುದಕ್ಕೆ ಸಂಬಂಧಿಸಿ ಬಿಕ್ಕಟ್ಟನ್ನು ಇಲ್ಲಿ ಪ್ರಸ್ತಾಪಿಸಿದ್ದು..

ಉತ್ಕೃಷ್ಟವಾದ್ದುದು ಸಾಮಾನ್ಯ ಜನವರ್ಗವನ್ನು ಸೆಳೆಯುವುದಿಲ್ಲ ಎನ್ನುವ ಸಮಜಾಯಿಸಿ ಈ ಅಧೋಗತಿಗೆ ನೀಡುವ ಸಮರ್ಥನೆಯಾಗುತ್ತದೆ. ಸಿನೆಮಾ, ನಾಟಕ, ವಿದ್ಯಾಭ್ಯಾಸ, ಪತ್ರಿಕೋದ್ಯಮ ಇತ್ಯಾದಿ ಏನೇ ಇರಲಿ ಈ ಕಾಲಕ್ಕೆ ಎಲ್ಲವೂ ತಮ್ಮ ಮಟ್ಟವನ್ನು ತೀರಾ ಕೆಳಗಿಳಿಸಿ ಜನಪ್ರಿಯತೆಯ ಹಾದಿ ಹಿಡಿದದ್ದನ್ನು ಕಾಣುತ್ತೇವೆ. ಇದು ಹೀಗೆಯೇ, ಇದಕ್ಕೊಂದು ಪರಿಹಾರ ಇಲ್ಲ ಎನ್ನುವ ಒಂದು ಅಲಿಖಿತ ಒಪ್ಪಂದಕ್ಕೆ ಇಡೀ ಭಾರತೀಯ ಸಮಾಜ ಬಂದು ಎಷ್ಟೋ ಕಾಲವಾಯಿತು. ಇಂತಹ ಪರಿಸ್ಥಿತಿಯಲ್ಲಿ ಶೇಣಿಯವರು ತಾವು ಆರಿಸಿಕೊಂಡ ಯಕ್ಷಗಾನ ಕ್ಷೇತ್ರದಲ್ಲಿ ಪ್ರವಾಹಕ್ಕೆ ಇದಿರಾಗಿ ಈಜಿದರು. ಕಲಾವಿದನೊಬ್ಬ ಪ್ರೇಕ್ಷಕರ ಮಟ್ಟಕ್ಕೆ ಇಳಿದು ಅವರನ್ನು ರಂಜಿಸುವುದಕ್ಕಿಂತ ಪ್ರೇಕ್ಷಕ ಬಯಸುವ ಮನರಂಜನೆಯ ಮಟ್ಟವನ್ನು ಕಲಾವಿದನೊಬ್ಬ ಎತ್ತರಿಸಬೇಕು ಎನ್ನುವ ನಿಯಮಕ್ಕೆ ಅವರು ಸಹಜವಾಗಿ ಬದ್ಧರಾಗಿದ್ದರು.

ತಮ್ಮ ಸಹ ಕಲಾವಿದರೂ ತಮ್ಮ ತಮ್ಮ ನೆಲೆಯಲ್ಲಿ ಪ್ರೇಕ್ಷಕನನ್ನು ಹೀಗೆ ಎತ್ತರಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಅಪೇಕ್ಷಿಸುತ್ತಿದ್ದರು. ಅದನ್ನು ಸಹಕಲಾವಿದರು ತೋರದೆ ಹೋದಾಗ ಅವರ ಮೇಲೆ ಸಿಡಿಮಿಡಿಗೊಳ್ಳುತ್ತಿದ್ದರು. ಈ ಸಿಡಿಮಿಡಿ ಕೆಲವೊಮ್ಮೆ ರಂಗದಲ್ಲಿ ಅಭಾಸಕರ ಸ್ಥಿತಿ ನಿರ್ಮಿಸಿದ್ದೂ ಇದೆ. ಅವರ ವಾಲಿಯ ಪಾತ್ರಕ್ಕೆ ತಾರೆಯಾಗುವ ಸಹ ಕಲಾವಿದ, ಅವರ ರಾವಣನ ಪಾತ್ರಕ್ಕೆ ಮಂಡೋದರಿ ಯಾಗುವ ಸಹ ಕಲಾವಿದ, ಅವರ ಭೀಮನಿಗೆ ದ್ರೌಪದಿಯಾಗುವ ಸಹ ಕಲಾವಿದ ಪಾತ್ರದೆತ್ತರಕ್ಕೆ ಏರದೆ ಒಬ್ಬಾಕೆ ಸಾಮಾನ್ಯ ಪತ್ನಿ ಯಂತೆ ಅರ್ಥ ಹೇಳುತ್ತಿದ್ದುದು ತಮಗೆ ಸಹ್ಯವಾಗುತ್ತಿರಲಿಲ್ಲ ಎನ್ನುವುದನ್ನು ಅವರು ಸಂದರ್ಶನವೊಂದರಲ್ಲಿ ಸಂಬಂಧಪಟ್ಟ ಸಹಕಲಾವಿದರನ್ನು ಹೆಸರಿಸಿಯೆ ಹೇಳಿದ್ದಿದೆ. ಸದಾ ಉತ್ಕೃಷ್ಟತೆಗಾಗಿ ತುಡಿಯುವ ಮನಸ್ಸಿನ ಅಸಹನೆ ಇದು. ಅವರಿಗೆ ಪ್ರಖ್ಯಾತಿ ತಂದುಕೊಟ್ಟ ದೊಡ್ಡ ದೊಡ್ಡ ಪಾತ್ರಗಳೇ ಇರಲಿ ಅಥವಾ ಆಗೊಮ್ಮೆ ಈಗೊಮ್ಮೆ ಅವರು ನಿರ್ವಹಿಸಿದ ತೀರಾ ಸಣ್ಣ ಪಾತ್ರಗಳೇ ಇರಲಿ ಅವರು ಮಾತಿಗೆ ಪ್ರಾರಂಭಿಸಿದರೆ ಪ್ರೇಕ್ಷಕನಿಗೆ ಒಂದು ಉದ್ಗ್ರಂಥದ ಪುಟ ತೆರೆದ ಅನುಭವವಾಗಬೇಕು.

ಮೊದಲ ಪದ, ಮೊದಲ ವಾಕ್ಯದಿಂದ ಹಿಡಿದು ಅಂತ್ಯದ ವರೆಗೂ ಪಾತ್ರದ ನಿರೂಪಣೆ, ಅದರ ಮರು ನಿರೂಪಣೆ ಮತ್ತು ಕಥಾವಸ್ತುವನ್ನು ಮೀರಿದ ಒಂದು ಒಳನೋಟದ ನಿರ್ಮಾಣ ಇವು ಮೂರನ್ನೂ ಅವರು ಏಕಕಾಲಕ್ಕೆ ಮಾಡುತ್ತಿದ್ದರು. ಇದು ವಿದ್ವತ್ ವರ್ಗವನ್ನು ಆಕರ್ಷಿಸಿತು ಎನ್ನುವುದರಲ್ಲಿ ವಿಶೇಷವಿಲ್ಲ. ಆದರೆ ಸಾಮಾನ್ಯ ಪ್ರೇಕ್ಷಕರು ಕೂಡಾ ಅವರ ಆಟ-ಕೂಟ ಗಳ ಪಾತ್ರಗಳಿಗೆ ಏಕೆ ಮುಗಿಬಿದ್ದರು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ. ಅದು ಶೇಣಿ ಎಂಬ ಅಸಾಮಾನ್ಯ ಕಲಾವಿದ ಪ್ರತೀ ಪ್ರೇಕ್ಷಕನ ಜತೆ ಮಾಡಿಕೊಂಡ ಅನುಸಂಧಾನದ ಸಂಬಂಧ. ಅದನ್ನು ಆ ಸಂಬಂಧದ ಹೊರಗೆ ಕಾಣುವುದು ಮತ್ತು ಅರ್ಥೈಸುವುದು ಸುಲಭ ಸಾಧ್ಯವಲ್ಲ. ಅದು ಯಕ್ಷಗಾನದಲ್ಲಿ ಶೇಣಿಯವರು ಸ್ಥಾಪಿಸಿದ ಅನನ್ಯ ಮಾದರಿ.

*** *** ***

ಶೇಣಿಯವರನ್ನು ಮತ್ತು ಅವರು ಪುರಾಣಗಳನ್ನು ಮಥಿಸಿ ಪಾತ್ರಗಳನ್ನೂ ಕಡೆಯುವ ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಮಹಾಕಾವ್ಯ ಸೃಷ್ಟಿಸುವ ಒಂದು ಕವಿ ಮನಸ್ಸು ಮಾತ್ರವಲ್ಲ, ಅವರ ಪಾತ್ರ ನಿರೂಪಣೆ ಮತ್ತು ಮರುನಿರೂಪಣೆಯನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ಅವರೊಳಗೊಬ್ಬ ಸದಾ ಸತ್ಯಶೋಧನೆಯಲ್ಲಿ ನಿರತನಾಗಿದ್ದ ಸಮಾಜ ವಿಜ್ಞಾನಿ ಇದ್ದ ಎನ್ನುವ ಅಂಶ ಎದ್ದು ಕಾಣುತ್ತದೆ.

ಈಗ ಕೇರಳದ ಭಾಗವಾಗಿ ಹೋಗಿರುವ ಕಾಸರಗೋಡು ಜಿಲ್ಲೆಯ ಶೇಣಿ ಎಂಬ ಊರಿನಿಂದ ಬಂದ ಗೋಪಾಲಕೃಷ್ಣ ಭಟ್ ಅವರು ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದು ಹರಿಕತೆಯ ಹಿನ್ನೆಲೆಯಿಂದ. ಅವರು ಶಾಸ್ತ್ರೀಯವಾಗಿ ಯಕ್ಷಗಾನದ ನೃತ್ಯ ಅಥವಾ ಹೆಜ್ಜೆಗಾರಿಕೆ ಕಲಿತವರಲ್ಲ. ಅದನ್ನು ರಂಗದಲ್ಲಿ ರೂಢಿಸಿಕೊಂಡವರಲ್ಲ. ಯಕ್ಷಗಾನ ಪ್ರದರ್ಶನಗಳಲ್ಲಿ ಅವರು ಹೆಚ್ಚಿನ ವೇಳೆ ಕಾಣಿಸಿಕೊಳ್ಳುತ್ತಿದ್ದುದು ಖಳ ನಾಯಕ ಪಾತ್ರಗಳಲ್ಲಿ. ಆದರೆ ಯಕ್ಷಗಾನದ ಖಳನಾಯಕನ ಪಾತ್ರಗಳಲ್ಲಿ ಯಕ್ಷಗಾನ ರಂಗಭೂಮಿ ಬಯಸುವ ಬಣ್ಣದ ವೇಷದ ಮುಖವರ್ಣಿಕೆಯನ್ನಾಗಲೀ, ಆಹಾರ್ಯವನ್ನಾಗಲೀ ಬಳಸಿ ಅವರು ರಂಗಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಖಳ ನಾಯಕನ ವೇಷ ಮಾಡುವಾಗ ಕಂಪೆನಿ ನಾಟಕದ ಆಹಾರ್ಯಗಳನ್ನು ಬಳಸುತ್ತಿದ್ದರು. ಅಷ್ಟರ ಮಟ್ಟಿಗೆ ಯಕ್ಷಗಾನದ ಚೌಕಟ್ಟಿನಲ್ಲಿ ಅನ್ಯರಾಗಿಯೇ ಉಳಿದ ಶೇಣಿಯವರು ಕೇವಲ ತಮ್ಮ ಮಾತುಗಾರಿಕೆ ಮತ್ತು ಪಾತ್ರ ಸೃಷ್ಟಿಯ ಅದ್ಭುತ ಸಾಮರ್ಥ್ಯಗಳನ್ನೇ ಬಳಸಿ ಯಕ್ಷಗಾನದೊಳಗೆ ಏಕಮೇವಾದ್ವಿತೀಯ ಎಂಬಂತೆ ದಶಕಗಳ ಕಾಲ ಆ ರಂಗಭೂಮಿಯನ್ನು ಆಳಿದ್ದು ಒಂದು ವಿಸ್ಮಯ.

ಇದಕ್ಕೆ ಶೇಣಿಯವರ ಪ್ರತಿಭೆ ಎಷ್ಟು ಕಾರಣವೋ ಅಷ್ಟೇ ಕಾರಣ ಯಕ್ಷಗಾನ ರಂಗಭೂಮಿಯ ಅದ್ಭುತ ಸ್ಥಿತಿಸ್ಥಾಪಕ ಗುಣ. ಅದು ಇತರ ರಂಗಭೂಮಿಯಂತೆ ಶಾಸ್ತ್ರಬದ್ಧ ಅಲ್ಲದ್ದನ್ನು ನಿರ್ದಾಕ್ಷಿಣ್ಯದಿಂದ ಹೊರಗಿಡುವುದಿಲ್ಲ. ತನ್ನ ಆವರಣದೊಳಗೆ ಬೇರೆ ಬೇರೆ ರೀತಿಯ ರಾಜಿಗಳನ್ನು ಒಪ್ಪುತ್ತಲೇ ಅದು ವಿವಿಧ ಪ್ರಯೋಗಗಳಿಗೆ ಅನುವು ಮಾಡಿಕೊಡುತ್ತದೆ. ಯಕ್ಷಗಾನ ರಂಗಭೂಮಿಯ ಈ ಸ್ಥಿತಿಸ್ಥಾಪಕತ್ವವನ್ನು ದುರುಪಯೋಗ ಪಡಿಸಿಕೊಂಡು ಇಡೀ ರಂಗಭೂಮಿಯ ಘನತೆ ಕುಸಿಯುವುದಕ್ಕೆ ಕಾರಣರಾದ ಅಸಂಖ್ಯ ಕಲಾವಿದರಿದ್ದಾರೆ. ಶೇಣಿಯರು ಯಕ್ಷಗಾನ ರಂಗದಲ್ಲಿ ತಮಗಿದ್ದ ಅರ್ಧ ತಯಾರಿಯನ್ನೇ ನೆಚ್ಚಿಕೊಂಡು ಇಡೀ ರಂಗದ ಘನತೆಯನ್ನು ಹೆಚ್ಚಿಸಿದರು. ಅದು ಅವರಿಗೆ ಸಾಧ್ಯವಾದದ್ದು ಯಕ್ಷಗಾನ ರಂಗದ ನಾಟ್ಯ, ಬಣ್ಣ, ವಿನ್ಯಾಸಗಳ ಪ್ರಖರತೆಗೆ ಅನುಗುಣವಾಗಿ ಅವರು ಆ ರಂಗಭೂಮಿಯಲ್ಲಿ ಜ್ಞಾನ ಶೋಧನೆಯ ಪ್ರಖರ ಪರಂಪರೆಯೊಂದನ್ನು ಹಾಕಿದರು ಎನ್ನುವ ಕಾರಣಕ್ಕೆ..

ಶೇಣಿಯವರ ಬಗ್ಗೆ ಈ ತನಕ ಬಂದ ಎಲ್ಲ ಬರಹಗಳ ಪೈಕಿ ಅತ್ಯಂತ ವಿಧ್ವತ್ಪೂರ್ಣ ಮತ್ತು ಸಂತುಲಿತ ಎನ್ನಿಸಿಕೊಳ್ಳುವ ಯಕ್ಷಗಾನ ಕಲಾವಿದ-ಭಾಗವತ-ಚಿಂತಕ-ಸಂಘಟಕ ಪೃಥ್ವಿರಾಜ ಕವತ್ತಾರ್ ಬರೆದ ‘ಶೇಣಿಯವರ ಅರ್ಥ ಮೀಮಾಂಸೆ’ ಎಂಬ ಲೇಖನ. ಅಭಿನವ ಪ್ರಕಾಶನದ ಅನೇಕ ಎಂಬ ಚಾತುರ್ಮಾಸಿಕದಲ್ಲಿ ಪ್ರಕಟವಾದ ಈ ಲೇಖನದಲ್ಲಿ ಪೃಥ್ವಿ ಶೇಣಿಯವರ ಅದ್ಭುತ ಪಾತ್ರ ಚಿತ್ರಣಗಳನ್ನು ಮಾತಿನಲ್ಲಿ ಕಡೆದ ಮಹಾಕಾವ್ಯಗಳು ಎನ್ನುವ ಅರ್ಥದಲ್ಲಿ ಹೀಗೆ ವಿವರಿಸುತ್ತಾರೆ: ಶೇಣಿಯವರ ಅರ್ಥಗಾರಿಕೆಯಲ್ಲಿ ಪುರಾಣದ ಮರುನಿರೂಪಣೆಯನ್ನು ಗಮನಿಸಿದರೆ ಉದಾತ್ತ ಮತ್ತು ಪ್ರಗತಿಶೀಲ ಮನೋಭಾವದಿಂದ ರಾಮಾಯಣವನ್ನು ಮರುನಿರೂಪಿಸಿ ‘ಶ್ರೀ ರಾಮಾಯಣ ದರ್ಶನಂ’ ಬರೆದ ಕುವೆಂಪು ನೆನಪಾಗುತ್ತಾರೆ.

ಭೈರಪ್ಪ, ಐರಾವತಿ ಕರ್ವೆ, ಖಾಂಡೇಕರ್ ಕಣ್ಮುಂದೆ ಸುಳಿಯುತ್ತಾರೆ. ಅವರದ್ದು ಲಿಖಿತ ಪ್ರಕಾರದ ಅಭಿವ್ಯಕ್ತಿಯ ಮಾದರಿಯಾದರೆ ಶೇಣಿಯವರದ್ದು ಮೌಖಿಕ ಮಾರ್ಗ. ಗಂಡಹೆಂಡಿರು ಸಖೀ-ಸಖ ಭಾವದಿಂದ ಇರಬೇಕು ಎಂಬ ಭಾವಾರ್ಥವನ್ನು ಹೊಂದಿರುವ ದ.ರಾ. ಬೇಂದ್ರೆಯವರ ದಾಂಪತ್ಯ ಗೀತೆಗಳ, ಭಕ್ತಿ ಪರಂಪರೆಯ ಸಾಹಿತ್ಯದ ಅರ್ಥವ್ಯಾಪ್ತಿ ಶೇಣಿಯವರ ಉದ್ದಾಲಕ ಅರ್ಥಗಾರಿಕೆಯಲ್ಲಿದ್ದದ್ದು ಕೇವಲ ಆಕಸ್ಮಿಕವಲ್ಲ.’’ ಪೃಥ್ವಿಯವರ ಈ ಮಾತುಗಳನ್ನು ಒಪ್ಪಿಕೊಳ್ಳುತ್ತಾ ಪ್ರಾಯಃ ಇಲ್ಲಿ ಇನ್ನೊಂದು ಮಾತನ್ನು ಸೇರಿಸಬಹುದು. ಶೇಣಿಯವರ ಮಾತುಗಾರಿಕೆಯಲ್ಲಿ ಮರುಸೃಷ್ಟಿ ಪಡೆಯುತ್ತಿದ್ದ ಪುರಾಣದ ದುರಂತ ನಾಯಕ ಪಾತ್ರಗಳು ವಿಶ್ವಪ್ರಸಿದ್ಧ ಇಂಗ್ಲಿಷ್ ನಾಟಕಕಾರ ವಿಲಿಯಮ್ ಶೇಕ್ಸ್ ಪೀಯರ್ ನ ನಾಟಕದ ದುರಂತ ನಾಯಕರ ಪಾತ್ರಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲವುಗಳು. ಶೇಣಿಯವರ ದುರಂತ ಖಳ ನಾಯಕರ ಚಿತ್ರಣ ಪ್ರೇಕ್ಷಕರಲ್ಲಿ ಈ ಪಾತ್ರಗಳ ಕುರಿತು ಅನುಕಂಪ ಮತ್ತು ಒಲವು ಸೃಷ್ಟಿಸುವುದನ್ನು ಗಮನಿಸಿದ ಕರಾವಳಿಯ ಧಾರ್ಮಿಕ ಮುಖಂಡರೊಬ್ಬರು ‘‘ನೀವು ಖಳ ನಾಯಕ ಪಾತ್ರ ಮಾಡಬೇಡಿ, ಸಾಧ್ಯವಾದಷ್ಟು ನಾಯಕ ಪಾತ್ರಗಳನ್ನೇ ಮಾಡಿ’’ ಎಂದು ತಮಾಷೆ ಎನಿಸುವ ಗಂಭೀರ ಸಲಹೆ ನೀಡಿದ್ದರಂತೆ.

ಇವೆಲ್ಲಾ ಸರಿ. ಆದರೆ ಶೇಣಿಯವರನ್ನು ಮತ್ತು ಅವರು ಪುರಾಣಗಳನ್ನು ಮಥಿಸಿ ಪಾತ್ರಗಳನ್ನೂ ಕಡೆಯುವ ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುತಿದ್ದುದು ಮಹಾಕಾವ್ಯ ಸೃಷ್ಟಿಸುವ ಒಂದು ಕವಿ ಮನಸ್ಸು ಮಾತ್ರವಲ್ಲ. ಅವರ ಪಾತ್ರ ನಿರೂಪಣೆ ಮತ್ತು ಮರುನಿರೂಪಣೆಯನ್ನು ಆಳವಾಗಿ ಅರ್ಥೈಸುತ್ತಾ ಹೋದರೆ ಅವರೊಳಗೊಬ್ಬ ಸದಾ ಸತ್ಯಶೋಧನೆಯಲ್ಲಿ ನಿರತನಾಗಿದ್ದ ಸಮಾಜ ವಿಜ್ಞಾನಿ ಇದ್ದ ಎನ್ನುವ ಅಂಶ ಎದ್ದು ಕಾಣುತ್ತದೆ. ಸತ್ಯದೊಳಗಣ ಸತ್ಯವನ್ನು ಅನ್ವೇಷಿಸುವ ಒಬ್ಬ ತತ್ವಜ್ಞಾನಿ ಇದ್ದ ಎನ್ನುವುದು ಗೋಚರಿಸುತ್ತದೆ. ಈ ಪ್ರಪಂಚ ತುಂಬಾ ಉತ್ತರಗಳಿವೆ. ಮನುಷ್ಯ ಜ್ಞಾನ ಆರ್ಜಿಸುವ ಮೂಲಕ ಪಡೆದುಕೊಳ್ಳಬೇಕಾದದ್ದು ಸರಿಯಾದ ಪ್ರಶ್ನೆ ಕೇಳುವ ಸಾಮರ್ಥ್ಯವನ್ನು ಎನ್ನುವ ತತ್ವವನ್ನು ಅವರ ಪ್ರತೀ ಪಾತ್ರವೂ ಸಾರುತ್ತಿತ್ತು.

ಶೇಣಿಯವರ ಧುರ್ಯೋಧನ, ಶೇಣಿಯವರ ವಾಲಿ, ಶೇಣಿಯವರ ರಾವಣ, ಶೇಣಿಯವರ ಮಾಗದ, ಶೇಣಿಯವರ ಬಲಿ ಚಕ್ರವರ್ತಿ, ಶೇಣಿಯವರ ಶುಂಭಾಸುರ ಹೀಗೆ ಅವರ ಪಾತ್ರಗಳೆಲ್ಲಾ ಎದುರಾಳಿಯನ್ನು ಪ್ರಶ್ನಿಸುತ್ತಾ ಪ್ರಶ್ನಿಸುತ್ತಾ ಮಾತಿನ ಹಂದರ ಹೆಣೆಯುತ್ತವೆ. ಶೇಣಿಯವರು ರಂಗದಲ್ಲಿದ್ದು ಪುರಾಣ ಲೋಕಗಳಿಗೆ ಸಂಬಂಧಿಸಿ ಕೇಳುವ ಪ್ರಶ್ನೆಗಳು ಲೌಕಿಕ ಪ್ರಪಂಚದಲ್ಲಿದ್ದು ರಸಾಸ್ವಾಧನೆ ನಡೆಸುವ ಪ್ರೇಕ್ಷಕರಿಗೂ ಕೇಳಿದ ಪ್ರಶ್ನೆ ಯಾಗುತ್ತವೆ. ಈ ಪ್ರಶ್ನೆಗಳು ಪ್ರೇಕ್ಷಕರನ್ನೂ ಕಾಡಲಾರಂಭಿಸುತ್ತವೆ. ಅವರು ಸತ್ಯ ಎಂದು ಒಪ್ಪಿಕೊಂಡದ್ದನ್ನೆಲ್ಲಾ ಬುಡಮೇಲು ಮಾಡುತ್ತವೆ.. ಯಾವುದು ಸತ್ಯ, ಯಾವುದು ಮಿಥ್ಯ, ಯಾವುದು ಸರಿ, ಯಾವು ತಪ್ಪು ಎನ್ನುವ ಜಿಜ್ಞಾಸೆಯ ಚದುರಂಗದಾಟ ಪ್ರೇಕ್ಷಕನ ಮನಸ್ಸಿನಲ್ಲಿ ಹುಟ್ಟಿಕೊಂಡು ಅದರಲ್ಲೇ ಆತ ಮನರಂಜನೆ ಪಡೆಯಲಾರಂಭಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ವಿದ್ಯಾವಂತ ಪ್ರೇಕ್ಷಕ ಒಂದು ನೆಲೆಯಲ್ಲಿ ತೊಡಗಿದರೆ ಅನಕ್ಷರಸ್ಥ ಗ್ರಾಮೀಣ ಪ್ರೇಕ್ಷಕ ಇನ್ನೊಂದು ನೆಲೆಯಲ್ಲಿ ತೊಡಗುತ್ತಾನೆ. ಪ್ರಾಯಃ ಶೇಣಿಯವರು ಪಂಡಿತ ಪಾಮರ ಪ್ರೇಕ್ಷಕರನ್ನು ಏಕ ಪ್ರಕಾರವಾಗಿ ಆಕರ್ಷಿಸಿದ ಹಿಂದಿರುವ ಒಂದು ಗುಟ್ಟು ಇದಾಗಿರಬಹುದು.

** ** **

ಶೇಣಿಯವರು ಬಿಟ್ಟು ಹೋಗಿದ್ದು ಕೇವಲ ಒಂದು ಯಕ್ಷಗಾನ ರಂಗಕಲೆಯ ಮಾದರಿಯನ್ನಲ್ಲ. ಅವರು ನಮಗೆ ತೋರಿಸಿ ಹೋದದ್ದು ಒಂದು ಜ್ಞಾನಾರ್ಜನೆಯ ವಿಧಾನವನ್ನು (epistemology). ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡವರಿಗೆ ಮಾತ್ರ ಅದನ್ನು ಸರಳವಾಗಿ ಮಂಡಿಸಲು ಸಾಧ್ಯವಾಗುವುದು. ವಿಷಯವನ್ನು ಬಹು ವಿಧದಿಂದ ಮಥಿಸಿದವರಿಗೆ ಮಾತ್ರ ಸತ್ಯದ ವಿವಿಧ ಆಯಾಮಗಳನ್ನು ಗುರುತಿಸಲು ಸಾಧ್ಯವಾಗುವುದು. ಇಲ್ಲದೆ ಹೋದರೆ ಮಾತುಗಾರಿಕೆ, ಚರ್ಚೆ ಇತ್ಯಾದಿಗಳೆಲ್ಲಾ ಸತ್ಯವನ್ನು ಕಪ್ಪು-ಬಿಳುಪುಗಳಾಗಿ ಗುರುತಿಸುವ ಸರಳ ಶುಷ್ಕ ಮಂಡನೆಗಳಾಗಿಬಿಡುತ್ತವೆ.

                      (ಬಪ್ಪ ಬ್ಯಾರಿ ಪಾತ್ರ)

ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗವೊಂದರಲ್ಲಿ ಯಕ್ಷಗಾನದ ಆವರಣಕ್ಕೆ ಏನೇನೂ ಹೊಂದದ ಒಬ್ಬ ಮುಸ್ಲಿಂ ವರ್ತಕ (ಬಪ್ಪ) ಬ್ಯಾರಿಯ ಪಾತ್ರವನ್ನು ಶೇಣಿಯವರು ನಿರ್ವಹಿಸಿದ ಪರಿ ಇದನ್ನು ಸ್ಪಷ್ಟವಾಗಿ ಸಾರುತ್ತದೆ. ಕುರ್‌ಆನ್ ಮತ್ತು ಉಪನಿಷತ್‌ಗಳನ್ನೂ ಸಮಾನವಾಗಿಟ್ಟುಕೊಂಡು ವಿಶ್ಲೇಷಿಸುತ್ತಾ ಎರಡು ಸಂಸ್ಕೃತಿಗಳ ನಡುವಣ ಕಂದರವನ್ನು ಕಿರಿದುಗೊಳಿಸುವ ಶೇಣಿಯವರ ಬಪ್ಪ ಬ್ಯಾರಿ ಪಾತ್ರ ಶೇಣಿಯವರದ್ದೇ ಆದ ವಿಶಿಷ್ಟ ಸೃಷ್ಟಿ.. ಇನ್ನೊಬ್ಬ ಕಲಾವಿದನಿಗೆ ಇಂತಹ ಪಾತ್ರವೊಂದನ್ನು ಯಕ್ಷಗಾನದ ಆವರಣದಲ್ಲಿ ಈ ಪರಿ ಎತ್ತರಿಸಲು ಸಾಧ್ಯವಾಗುತ್ತಿರಲಿಲ್ಲ.

ಶೇಣಿಯವರು ಆರ್ಷೇಯ ಉಪನಿಷತ್, ಪುರಾಣ, ಅಧ್ವೈತ ಸಿದ್ಧಾಂತ ಇತ್ಯಾದಿಗಳನ್ನೆಲ್ಲಾ ಆಳವಾಗಿ ಓದಿಕೊಂಡಿದ್ದು ಮಾತ್ರವಲ್ಲದೆ ಅವುಗಳ ಧಾರ್ಮಿಕ ಮತ್ತು ಸೆಕ್ಯುಲರ್ ಆಯಾಮಗಳೆರಡನ್ನೂ ಮನನ ಮಾಡಿಕೊಂಡಿದ್ದರು. ಇನ್ನೊಂದೆಡೆ ಆಧುನಿಕ ರಾಜಕೀಯ ತತ್ವಗಳನ್ನು, ಸಮಾಜವಾದಿ ಸಿದ್ಧಾಂತಗಳ ಅರಿವನ್ನೂ ಸಂಪಾದಿಸಿದ್ದರು. ಈ ಕಾರಣಕ್ಕಾಗಿ ಅವರಿಗೆ ಉಳಿದವರಿಗಿಂತ ಭಿನ್ನವಾಗಿ ಆರ್ಷೇಯ ಸತ್ಯಗಳನ್ನು ಮತ್ತು ಆಧುನಿಕ ತತ್ವಗಳನ್ನೂ ತಾವು ನಿರೂಪಿಸುವ ಕಥಾ ಹಂದರದಲ್ಲಿ ಹೆಣೆಯಲು ಸಾಧ್ಯವಾಗುತ್ತಿದ್ದುದು. ಇಂತಹ ಉದಾತ್ತ ವಿಚಾರಗಳೆಲ್ಲಾ ಕೇವಲ ವಿದ್ಯಾವಂತ ವರ್ಗಕ್ಕೆ ಸಂಬಂಧಿಸಿದ್ದು, ಪಾರಂಪರಿಕ ಕಲೆಗಳ ಅನಕ್ಷರಸ್ಥ ಪ್ರೇಕ್ಷಕರು ಬಯಸುವುದು ಮನರಂಜನೆಯನ್ನು ಮಾತ್ರ ಎನ್ನುವ ಸಾಮಾನ್ಯ ನಂಬಿಕೆಯನ್ನು ಅಲ್ಲಗಳೆದು ಯಕ್ಷಗಾನ ಪ್ರೇಕ್ಷಕ ವಲಯಕ್ಕೆ ಬೌದ್ಧಿಕ ಪರಂಪರೆಯೊಂದನ್ನು ಅವರು ಪರಿಚಯಿಸಿದರು. ಬೌದ್ಧಿಕ ಶೋಧನೆಗಳ ಬಗ್ಗೆ ಒಂದು ರೀತಿಯ ಅಸಡ್ಡೆ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಶೇಣಿಯವರು ಸಣ್ಣದಾದ ಯಕ್ಷಗಾನ ಲೋಕಕ್ಕೆ ನೀಡಿದ ಕೊಡುಗೆ ಇಡೀ ವಿಶ್ವಕ್ಕೆ ಪ್ರಸ್ತುತವಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top