ಮಾನವೀಯತೆ ಮರೆತ ಆ ದಿನಗಳು | Vartha Bharati- ವಾರ್ತಾ ಭಾರತಿ

--

ಮಾನವೀಯತೆ ಮರೆತ ಆ ದಿನಗಳು

ಅಯೋಧ್ಯೆಯೆನ್ನುವುದು ರಾಮಾಯಣ ಕಾವ್ಯದ ಹಿನ್ನೆಲೆಯಲ್ಲಿ ದಶರಥನ ರಾಜ್ಯ. ಅದರ ರಾಜಧಾನಿ ಸಾಕೇತ. ಪಕ್ಕದ ರಾಜ್ಯ ಕೋಸಲ, ಕೌಸಲ್ಯೆ ಅಲ್ಲಿನ ರಾಜಕುಮಾರಿ ದಶರಥನ ಪಟ್ಟದ ರಾಣಿ. ಶ್ರೀರಾಮಚಂದ್ರನ ತಾಯಿ. ಇದು ಹಿಂದೂಧರ್ಮಕ್ಕೆ ಅನುಸಾರವಾಗಿರುವಂತಹ ಆದಿಕವಿ ಎಂದು ಪ್ರಖ್ಯಾತನಾದ ವಾಲ್ಮೀಕಿಯ ಕೃತಿಯಲ್ಲಿ ಉಲ್ಲೇಖವಾದದು. ಸಂಸ್ಕೃತ ಭಾಷೆಯ ಮೊದಲ ಕೃತಿ, ಅದಕ್ಕೇ ಅದು ಆದಿಕಾವ್ಯ. ಇನ್ನು ಜೈನಧರ್ಮದಂತೆಯೂ ರಾಮಚಂದ್ರ ಚರಿತ್ರೆ ಇದೆ. ಅಲ್ಲಿ ಮೊದಲ ತೀರ್ಥಂಕರ ಆದಿನಾಥ ಅಥವಾ ವೃಷಭನಾಥನ ರಾಜ್ಯ ಅಯೋಧ್ಯೆ. ಆತನ ಮಕ್ಕಳೇ ಭರತ, ಬಾಹುಬಲಿಯರು. ಈ ಭರತ ಚಕ್ರವರ್ತಿಯ ಕಾರಣದಿಂದಲೇ ಭಾರತ ಎಂಬ ಹೆಸರು ಬಂದಿದೆ ಎನ್ನುವ ವಾದವೂ ಇದೆ. ಇಂತಹ ಅಯೋಧ್ಯೆಯ ಉತ್ಖನನ ಮಾಡಿದ್ದರೆ ನಿಜವಾದ ಭಾರತದ ಇತಿಹಾಸಕ್ಕೆ ಕೆಲವೂ ಪ್ರಮುಖ ಸಾಕ್ಷಗಳು ಸಿಗುತ್ತಿತ್ತು.

ಹಾಗೆ ಮಾಡಬೇಕಾದಾಗಲೂ ಮೊಗಲರು ಕಟ್ಟಿದ ಮಸೀದಿಯನ್ನು ಕೆಡವಲೇ ಬೇಕಾಗುತ್ತಿತ್ತು. ಆದರೆ ಅದೊಂದು ಪ್ರಜ್ಞಾವಂತಿಕೆಯ ಕಾರ್ಯ ಎನ್ನಿಸುತ್ತಿತ್ತೇ ಏನೋ? ಆದರೆ ನಮ್ಮ ದೇಶದ ರಾಜಕೀಯ ಪ್ರತಿನಿಧಿಗಳಿಗೆ ಇತಿಹಾಸಕ್ಕಿಂತ ವರ್ತಮಾನವೇ ಮುಖ್ಯವಾದದು ಅವರ ಸ್ವಾರ್ಥಗಳಿಗಾಗಿ. ಅದು ಧರ್ಮಪ್ರಜ್ಞೆಯಿಂದ ಮೂಡಿದುದೂ ಅಲ್ಲ. ದ್ವೇಷದ ಪ್ರತೀಕ. ಇಂತಹ ದ್ವೇಷ, ಯುದ್ಧಗಳು ಕೇವಲ ಮೊಗಲರು ಅಥವಾ ವಸಾಹತುಶಾಹಿಗಳಾಗಿ ಬಂದ ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರಿಂದ ಪ್ರಾರಂಭವಾದುದೇನೂ ಅಲ್ಲವೆಂದು ಸಾರಿ ಹೇಳುತ್ತಿರುವ ಈ ದೇಶದ ಇತಿಹಾಸ ಬಲ್ಲವರಿಗೆ ತಿಳಿದುದೇ ಆಗಿದೆ. ಆದರೆ ಅವೆಲ್ಲವೂ ಪ್ರಭುತ್ವದ ವರ್ತನೆಗಳು. ಆದರೆ ಈಗ ನಡೆದ ಮಸೀದಿ ಕೆಡವಿದ ಪ್ರಕರಣ ಪ್ರಜೆಗಳ ವರ್ತನೆಗಳಾದುದರಿಂದ ನಾವು ಪ್ರಜಾಪ್ರಭುತ್ವದ ಹಾದಿಯಿಂದ ಕೆಲವು ಶತಮಾನಗಳ ಹಿಂದೆ ಸರಿದಂತಾಯ್ತು.

ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಕೆಡವಿ ಅದರ ಮೇಲೆ ಭಗವಾ ಧ್ವಜವನ್ನು ನೆಟ್ಟು ದೇಶದ ರಾಷ್ಟ್ರೀಯತೆಗೆ ಧರ್ಮವನ್ನು ಅಂಟಿಸಲಾಯಿತು. ಈ ಮಸೀದಿ ಕೆಡವಿದ್ದೇ ಹಿಂದೂ ಧರ್ಮಕ್ಕೆ ಸಂದ ಗೆಲುವು ಎನ್ನುವ ಹೆಮ್ಮೆ, ಸಂಭ್ರಮ ದೇಶದಾದ್ಯಂತ ಗಾಳಿಯಂತೆ ಹರಡಿತು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಇದರಿಂದ ತಮ್ಮ ಮಸೀದಿ ಕೆಡವಿ ತಮ್ಮನ್ನು ಈ ದೇಶದ ಪ್ರಜೆಗಳನ್ನಾಗಿ ಒಪ್ಪದೆ ಇರುವುದು ಮತ್ತು ತಮ್ಮ ಧರ್ಮದ ಲಾಂಛನವಾದ ಮಸೀದಿ ಕೆಡವಿದ್ದು ಯುದ್ಧಕ್ಕೆ ನೀಡಿದ ಆಹ್ವಾನದಂತೆ ಎಂದು ಎದುರಾಳಿಗಳು ಭಾವಿಸಿ ಬೆಂಕಿಯಾದರು. ಬೆಂಕಿ ಗಾಳಿ ಎರಡೂ ತಮ್ಮ ಪಾಡಿಗೆ ತಾವಿದ್ದರೆ ಪ್ರಕೃತಿ ಶಾಂತವಾಗಿರುತ್ತದೆ. ಆದರೆ ಮಿತಿ ಮಿರಿದರೆ ಎರಡೂ ಜತೆ ಸೇರುತ್ತದೆ. ನಾಶವಾಗುವುದು ಪ್ರಕೃತಿ, ಶಾಂತತೆ, ಮಾನವೀಯತೆ ಶಾಂತಿ ಇಲ್ಲದಲ್ಲಿ ವಿವೇಕ ಎಲ್ಲಿರುತ್ತದೆ? ಇಡೀ ದೇಶದ ವಿವೇಕವೇ ಸುಟ್ಟು ಹೋಯಿತೋ ಎನ್ನುವಂತೆ ನನ್ನ ಊರು ಕೂಡ ತನ್ನ ವಿವೇಕ ಕಳೆದುಕೊಂಡು ಈ ದೊಡ್ಡ ಯಜ್ಞಕ್ಕೆ ತನ್ನ ಹವಿಸ್ಸನ್ನೂ ನೀಡಿದುದರಿಂದ ಭಾರತದ ಭೂಪಟದಲ್ಲಿ ಕಾಣಿಸಿಕೊಂಡಿತು.

ಕೃಷ್ಣಾಪುರ, ಕಾಟಿಪಳ್ಳ ಎನ್ನುವುದು ಸುದ್ದಿಯಲ್ಲಿ ಎದ್ದು ಕಾಣುತ್ತಿತ್ತು. ಇದು ಭೂಪಟದಲ್ಲಿ ಕಪ್ಪು ಚುಕ್ಕೆಯೋ ಬೆಳ್ಳಿ ಚುಕ್ಕೆಯೋ ಅದನ್ನು ಕಾಲವೇ ನಿರ್ಣಯಿಸುವಂತಹುದು. ಈ ಹಿನ್ನೆಲೆಯಲ್ಲಿ ನನ್ನೂರಿಗೆ ಕರ್ಫ್ಯೂ ಎನ್ನುವ ದೌರ್ಭಾಗ್ಯದ ಅನುಭವ ದೊರೆಯಿತು. ಮಸೀದಿ ಕೆಡವಿದ ಸುದ್ದಿ ನನ್ನೂರಿನ ಮುಸ್ಲಿಮರನ್ನು ಕೆರಳಿಸಿತು. ಕಾಟಿಪಳ್ಳ ಚೊಕ್ಕಬೆಟ್ಟುಗಳೆೆನ್ನುವ ಈ ಎರಡು ಹೆಬ್ಬಾಗಿಲಲ್ಲೂ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿತ್ತು. ಇವರ ಕೈಗಳಿಗೆ ಬಡಿಗೆ ದೊಣ್ಣೆಗಳು ಬಂದವು. ಒಳಪ್ರದೇಶಗಳಲ್ಲಿದ್ದ ಹಿಂದೂ ಜನರು ಗೆದ್ದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ಅವರ ರೋಷವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು. ಮುಸ್ಲಿಮರೆಲ್ಲರೂ ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ ಮುಸ್ಲಿಮರೇ ಆಗಿರುವುದು ಅವರ ಧರ್ಮದ ಶಿಸ್ತು. ಆದರೆ ಹಿಂದೂ ಧರ್ಮದಲ್ಲಿ ಅಂತಹ ಶಿಸ್ತು ಎಲ್ಲಿದೆ? ಅಂತಹ ಶಿಸ್ತನ್ನು ಕಲಿಸಿದವರು ಯಾರು? ಅಥವಾ ಕಲಿಸುವವರು ಯಾರು? ಇಲ್ಲಿ ಧರ್ಮಕ್ಕಿಂತ ಮೊದಲಾಗಿ ಕಾಣುವುದು ಜಾತಿಯಾದ್ದರಿಂದ ಇಲ್ಲಿ ಒಗ್ಗಟ್ಟಾಗುವುದು ಸುಲಭವಲ್ಲ ಎನ್ನುವುದು ಒಂದು ಕಾರಣವಾದರೆ ಇಡೀ ಧರ್ಮದ ಗುತ್ತಿಗೆ ಹಿಡಿದವರು ತಾವು ಮನೆಯೊಳಗೆ ಭದ್ರವಾಗಿದ್ದು ಇತರರನ್ನು ಒಂದು ಕೈ ನೋಡಿ ಬಾ ಎಂದು ಕಳುಹಿಸುವ ಯಜಮಾನಿಕೆಯವರೇ.

ಉಳಿದವರಲ್ಲಿ ಹೆಚ್ಚಿನವರು ಧರ್ಮ ಎನ್ನುವುದು ದೇವರು ಎನ್ನುವುದು ಅವರು ಹೇಳಿದಂತೆಯೇ ಇರುವುದು ಎಂಬುವುದನ್ನು ಪೂರ್ತಿ ಒಪ್ಪಿಕೊಳ್ಳದವರಾದರೂ ಇಂತಹ ಸಮಯಗಳಲ್ಲಿ ಅವರ ತುರಿಕೆಯ ಕೈಗಳಿಗೆ, ನಾಲಗೆಗಳಿಗೆ ಸಿಕ್ಕುವ ಅವಕಾಶಗಳಲ್ಲವೇ? ಅಂತಹವರು ಒಂದು ಕೈ ಅಲ್ಲ, ಎರಡೂ ಕೈಗಳಿಂದ ನೋಡುತ್ತೇವೆ ಎಂದು ಹೊರಟೇ ಬಿಡುವವರು. ಅಂತೂ ಇವರೂ ಹೊರಟರು.ಈಗ ನಮ್ಮ ಬೀದಿ ಬೀದಿಗಳು ರಣರಂಗವಾದುವು. ನಿನ್ನೆಯವರೆಗೆ ಸ್ನೇಹಿತರಾಗಿದ್ದವರು ಈಗ ಧರ್ಮದ ಹೆಸರಲ್ಲಿ ಮನುಷ್ಯರೆನ್ನುವುದನ್ನೂ ಮರೆತರು. ವಿಜೃಂಭಿಸುತ್ತಿದ್ದ ಜನರನ್ನು ಅಟ್ಟಾಡಿಸಿಕೊಂಡು ಬಂದ ದೊಣ್ಣೆ ಬಡಿಗೆಗಳ ಯುವಕರನ್ನು ಕಂಡು ಹಿಂದೂಗಳ ಅಂಗಡಿ ಮುಂಗಟ್ಟು ಮುಚ್ಚಿದವು. ಮನೆ ಬಾಗಿಲುಗಳು ಭದ್ರವಾಗಿ ಮಕ್ಕಳು ಮಹಿಳೆಯರು ಮುದಿಯರು ಒಳಗಿದ್ದರು.

ಪಟಾಕಿ ಸುಡುತ್ತಿದ್ದ ಯುವಕರು ನಾವೇನು ಬಳೆ ತೊಟ್ಟಿಲ್ಲ ಎಂಬಂತೆ ತಾವು ಕೈಯಲ್ಲಿ ದೊಣ್ಣೆ ಬಡಿಗೆಗಳನ್ನೆತ್ತಿಕೊಂಡು ಮುಸ್ಲಿಮರ ಅಂಗಡಿಗಳನ್ನು ಮುಚ್ಚಿದರು. ಮುಸ್ಲಿಂ ಮನೆಗಳ ಕಿಟಕಿ ಬಾಗಿಲುಗಳಿಗೆ ಕಲ್ಲು ಹೊಡೆದು ಗಾಜು ಪುಡಿಮಾಡಿದರು. ಮುಯ್ಯಿಗೆ ಮುಯ್ಯಿ ಎಂಬಂತೆ ಹಿಂದೂ ಮನೆಗಳ ಅದೂ ಮುಖ್ಯರಸ್ತೆಯಲ್ಲಿದ್ದ ಮನೆಗಳ ಕಿಟಕಿಗಳ ಗಾಜು ಪುಡಿಯಾದುವು. ಈ ದೃಶ್ಯಗಳನ್ನು ದೂರದರ್ಶನದ ಮೂಲಕ, ರೇಡಿಯೋಗಳ ಮೂಲಕ ತಿಳಿದು ಕೊಂಡದ್ದೇ ಹೊರತು ನೋಡಲಿಲ್ಲ. ನನ್ನ ಮನೆ ಮುಖ್ಯರಸ್ತೆಯಿಂದ ಒಳಭಾಗದಲ್ಲಿತ್ತು. ಅಲ್ಲದೆ ಈ ಬ್ಲಾಕಲ್ಲಿ ಯಾರೂ ಮುಸ್ಲಿಮರಿರಲಿಲ್ಲ. ಜತೆಗೆ ನಮ್ಮ ಊರಿಗೆ ಕರ್ಫ್ಯೂ ಆದೇಶ ಜಾರಿಯಾಗಿತ್ತು. ನಾವ್ಯಾರೂ ಹೊರ ಹೊರಡುವಂತೆ ಇರಲಿಲ್ಲ ಕರ್ಫ್ಯೂಗಿಂತ ಮೊದಲ ದಿನಗಳ ಅನುಭವವೇನೂ ಕಡಿಮೆಯದಲ್ಲ.

ಇಂತಹ ಸಂದರ್ಭಗಳಲ್ಲಿ ಜನರ ಆಕ್ರೋಶಕ್ಕೆ ಮೊದಲು ಬಲಿಯಾಗುವುದು ಯಾವಾಗಲೂ ಜನರಿಗಾಗಿಯೇ ಇರುವ ಬಸ್ಸುಗಳು. ಅವುಗಳನ್ನು ತಡೆದು ನಿಲ್ಲಿಸಿ, ಕಲ್ಲು ಹೊಡೆದು, ಗಾಜು ಪುಡಿ ಮಾಡಿ, ಟಯರ್ ಕಿತ್ತು ಸುಟ್ಟು ಹಾಕಿ, ಬಸ್ಸನ್ನು ಸುಡುವ ಕಾರ್ಯ ನಡೆಯುತ್ತಿತ್ತು. ಈ ಬಸ್ಸುಗಳಲ್ಲಿ ಹಿಂದೂ ಮಾಲಕರ ಬಸ್ಸುಗಳನ್ನು ಮುಸ್ಲಿಂ ಯುವಕರು, ಮುಸ್ಲಿಂ ಮಾಲಕರ ಬಸ್ಸುಗಳನ್ನು ಹಿಂದೂ ಯುವಕರು ಸುಡುವ ಪ್ರಯತ್ನ ಮಾಡಿದರೆ ಅದುವರೆಗೆ ಜಾತಿ ಧರ್ಮಗಳ ಭೇದವಿಲ್ಲದ ಈ ಬಸ್ಸುಗಳಲ್ಲಿನ ಡ್ರೈವರ್, ಕಂಡಕ್ಟರ್ ಧರ್ಮಸಂಕಟಕ್ಕೆ ಸಿಲುಕಿಗೊಂಡರು.

ಈ ನಡುವೆ ಕ್ರಿಶ್ಚಿಯನ್ ಮಾಲಕರ ಬಸ್ಸುಗಳಿಗೆ ರಿಯಾಯಿತಿಯನ್ನು ಯಾರೂ ನೀಡಿರಲಿಲ್ಲ ಎನ್ನುವುದು ನಿಜವೇ! ಈ ನಡುವೆ ಒಂದು ಬಸ್ಸು ಹಿಂದೂ ಹಾಗೂ ಮುಸ್ಲಿಂ ಪಾಲುದಾರಿಕೆಯಲ್ಲಿ ಓಡುತ್ತಿದ್ದು, ಆ ಬಸ್ಸಿನ ಮುಂಭಾಗದಲ್ಲಿ ಹಿಂದೂ ಹೆಸರು, ಹಿಂಭಾಗದಲ್ಲಿ ಮುಸ್ಲಿಂ ಹೆಸರು ಅವರ ಮಕ್ಕಳದ್ದು ಇದ್ದು ಆ ಬಸ್ಸಿನ ಮಾಲಕರೊಬ್ಬರು ಹೇಗೆ ಎರಡೂ ಕಡೆಯವರು ಎರಡೂ ದಿಕ್ಕಿನಿಂದ ಹಾನಿ ಮಾಡಿದರು ಎನ್ನುವುದನ್ನು ನನ್ನ ಬಳಿ ಹೇಳಿಕೊಂಡಿದ್ದರು. ಬಸ್ಸುಗಳು ಓಡಾಡುತ್ತಿದ್ದ ಮೊದಲ ದಿನಗಳಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದಾಗ, ಮಹಿಳೆಯರಿಗೆ ಮಕ್ಕಳಿಗೆ ಒಂದಿಷ್ಟು ಕನಿಕರ ತೋರಿದುದು ಆ ದಿನಗಳಲ್ಲಿ ಇದ್ದ ಒಂದಿಷ್ಟು ಮಾನವೀಯತೆಯ ಗುಣ. ಇಂದು ಅದನ್ನೂ ಕಾಣಲಾರೆವು. ಶಾಲೆಗೆ ಹೋದ ಮಕ್ಕಳು, ಹೊರಗೆ ಹೋದ ಗಂಡಸರು ಮನೆ ಸೇರುವವರೆಗೆ ಎರಡೂ ಧರ್ಮದ ಮಹಿಳೆಯರ ಸಂಕಟ ಒಂದೇ ತಾನೇ?

ಬಸ್ಸುಗಳನ್ನು ತಡೆದು ನಿಲ್ಲಿಸಿದ್ದಾಯ್ತು. ಅಂಗಡಿ ಮುಂಗಟ್ಟುಗಳೆಲ್ಲಾ ಬಾಗಿಲು ಮುಚ್ಚಿದ್ದೂ ಆಯ್ತು. ಮುಚ್ಚದಿದ್ದವರ ಅಂಗಡಿಗಳ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದರೆ ಇನ್ನು ಕೆಲವೆಡೆ ತಾವೇ ಶಟರ್ ಎಳೆದು ಬಾಗಿಲು ಹಾಕಿಕೊಂಡು ಗುಂಪುಗಳ ಜೊತೆ ಸೇರಿದವರೂ ಇದ್ದರು. ರಸ್ತೆಯಲ್ಲಿ ಪೊಲೀಸರ ವ್ಯಾನುಗಳು, ಜೀಪುಗಳು ಸೆಕ್ಷನ್ 144 ಹಾಕಿದ್ದ ಬಗ್ಗೆ ಹೇಳಿಕೊಂಡು ತಿರುಗುತ್ತಿದ್ದುದರ ಜೊತೆಗೆ ಕೆಲವರಿಗೆ ಲಾಠಿಯ ರುಚಿ ತೋರಿಸುವುದರ ಜೊತೆಗೆ ಕೆಲವರನ್ನು ವ್ಯಾನ್‌ನೊಳಗೆ ತುರುಕುತ್ತಿದ್ದರು. ಕೆಲವರು ಪೊಲೀಸ್ ವ್ಯಾನು ಬಂದಾಗ ಅಡಗಿಕೊಂಡು ಮತ್ತೆ ಹೊರಗೆ ಬಂದು ಇನ್ನೊಂದಷ್ಟು ರಿಕ್ಷಾ, ಬೈಕ್‌ಗಳನ್ನು ಹತ್ತಿಕೊಂಡು ಇಡೀ ಊರನ್ನೇ ಸುಡುವುದಕ್ಕೆ ಮುಂದಾಗುತ್ತಿದ್ದರು. ಸೆಕ್ಷನ್ 144 ಹಾಕಿದರೆ ನಾವು ಗುಂಪು ಕೂಡಿ ನಿಂತುಕೊಳ್ಳುವಂತಿಲ್ಲ. ಕೈಯಲ್ಲಿ ಯಾವುದೇ ಮಾರಕಾಸ್ತ್ರಗಳು ಇರಬಾರದು. ಆದರೆ ಸುಟ್ಟು ನಾಶ ಮಾಡಲೇಬೇಕು, ಕೊಚ್ಚಿ ತಲೆ ಉರುಳಿಸಲೇಬೇಕು ಎಂದು ಸಿದ್ಧರಾಗಿ ಯುದ್ಧಕ್ಕೆ ಹೊರಟ ಯೋಧರಂತಿರುವವರ ಮುಂದೆ ಪೊಲೀಸರ 144ರ ಕಾನೂನು ಸೋತಿತು.

ಪೊಲೀಸರ ವ್ಯಾನು, ಜೀಪುಗಳಿಗೂ ಕಲ್ಲು ಹೊಡೆತಗಳು ಬಿದ್ದುವು. ಪೊಲೀಸರೇ ಈ ಯೋಧರಿಗೆ ಎದುರಿಗಿರುವ ಶತ್ರುಗಳಂತೆ ಕಾಣಿಸ ತೊಡಗಿದರು. ಆಗ ಜನಸಂದಣಿ ಇದ್ದಲ್ಲಿ ಅವರನ್ನು ಚದುರಿಸಲು ‘ಟಿಯರ್ ಗ್ಯಾಸ್’ ಅಂದರೆ ಕಣ್ಣು ಉರಿಯುವಂತೆ, ಕಣ್ಣಲ್ಲಿ ನೀರು ತರಿಸುವ ಗ್ಯಾಸನ್ನು ಬಿಡುವುದು. ಇಂತಹ ಕಠಿಣವಾದ ನಿಯಮಗಳನ್ನು ಕೈಗೆತ್ತಿಕೊಂಡಾಗ ಸಾಮಾನ್ಯವಾಗಿ ಇಂತಹ ದೊಂಬಿ ಗಲಭೆಗಳು ಶಾಂತವಾಗುವುದು ಸಹಜ. ಹಾಗೆ ಆದುದನ್ನೂ ನೋಡಿದ್ದೇವೆ. ಆದರೆ ಈ ಬಾರಿ ಯಾಕೋ ಕಾಟಿಪಳ್ಳ ಕೃಷ್ಣಾಪುರದ ವೀರಧೀರರು ಯಾರಿಗೂ ಬಗ್ಗದವರಾದರು. ದಿನದಿಂದ ದಿನಕ್ಕೆ ಗಲಭೆ ಇನ್ನಷ್ಟು ಹೆಚ್ಚುತ್ತಿತ್ತೇ ಹೊರತು ಕಡಿಮೆಯಾಗಲಿಲ್ಲ. ಜೊತೆಗೆ ಏನೇನೋ ಸುದ್ದಿಗಳು ಮುಸ್ಲಿಮರು ಇಷ್ಟು ಮಂದಿ ಹಿಂದೂಗಳನ್ನು ಕೊಂದರು, ಹಿಂದೂಗಳು ಇಷ್ಟು ಮಂದಿ ಮುಸ್ಲಿಮರನ್ನು ಕೊಂದರು ಎನ್ನುವುದು. ದೇಶದಲ್ಲಿ ಕೆಲವೆಡೆ ಕರ್ಫ್ಯೂ ಜಾರಿ ಮಾಡಲಾಯಿತು ಎನ್ನುವುದನ್ನು ಕೇಳುತ್ತಿದ್ದ ನಮಗೆ ಕರ್ಫ್ಯೂ ಎನ್ನುವುದು ನಮ್ಮ ಅಂಗಳಕ್ಕೇ ಬಂತು ಎನ್ನುವುದು ತಿಳಿದಾಗ ಆದ ಸಂಕಟ ನಮಗೇ ಗೊತ್ತು.

ಯಾಕೆಂದರೆ ಕರ್ಫ್ಯೂ ಎನ್ನುವುದು ಅಂತಹ ಅಮಾನುಷವಾದ ಶಿಕ್ಷೆ ಹಾಗೂ ಕಾನೂನು. ಆಗ ಪೊಲೀಸರು ತಾವು ಮನುಷ್ಯರು ಎನ್ನುವುದನ್ನು ಮರೆತು, ತಮ್ಮೆದುರಿಗೆ ಇರುವವರು ಕೂಡಾ ಮನುಷ್ಯರೆನ್ನುವುದನ್ನು ಮರೆತು ಗಲಭೆ ನಿಯಂತ್ರಿಸುವುದಕ್ಕೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವುದು ಎಂಬುದಾಗಿದೆ. ಸೈನಿಕರಂತೆ ತಮ್ಮ ದೇಶದ ಪ್ರಜೆಗಳನ್ನೇ ಶತ್ರುಗಳೆಂದು ಭಾವಿಸಿ ಕೊಲ್ಲುವ ಕ್ರಿಯೆ ಪ್ರಜ್ಞಾವಂತ ನಾಗರಿಕರಿಗೆ ಅವಮಾನವೇ ಸರಿ. ಆದರೆ ಮಾನವೀಯತೆ ಮರೆತವರನ್ನು ಮಣಿಸುವುದಕ್ಕಿರುವ ಈ ದಾರಿ ಅನಿವಾರ್ಯ. ಆಗ ಜನರು ಅಂದರೆ ವೀರಾವೇಶದ ಯುವಕರು ತಮ್ಮ ಪ್ರಾಣಭಯದಿಂದ ಗಲಭೆ ನಿಲ್ಲಿಸುತ್ತಾರೆ ಎನ್ನುವುದು. ಒಬ್ಬೊಬ್ಬರೇ ಮನೆಯೊಳಗೆ ಉಳಿದರೆ ನಿಧಾನವಾಗಿ ಜನ ನಿಯಂತ್ರಣಕ್ಕೆ ಬರುತ್ತಾರೆ. ಶಿಸ್ತಿಗೆ ಒಗ್ಗಿಕೊಳ್ಳುತ್ತಾರೆ ಎನ್ನುವುದು ಪೋಲಿಸ್ ಇಲಾಖೆಯ ರಕ್ಷಣಾ ನೀತಿ. ಆದರೆ ಕಾಟಿಪಳ್ಳದಲ್ಲಿ ಹಾಗಾಗಲಿಲ್ಲ. ಈ ಕರ್ಫ್ಯೂ ಕೂಡಾ ಒಂದೆರಡು ದಿನಗಳಲ್ಲಿ ಹಿಂದೆಗೆದುಕೊಳ್ಳಬೇಕಾದುದು ಸುಮಾರು ಹತ್ತು ದಿನಗಳನ್ನೂ ಮೀರಿದ್ದು ದೊಡ್ಡ ಇತಿಹಾಸವೇ!

ಇದರ ಜೊತೆಗೆ ಇನ್ನೊಂದು ಬಹು ಮುಖ್ಯ ಅಂಶ ಇದೆ. ಹೀಗೆ ಎರಡು ಮೂರು ದಿನಗಳ ವರೆಗೆ ಕರ್ಫ್ಯೂ ಹೇರಿದರೆ ದಿನನಿತ್ಯದ ಅವಶ್ಯಕ ವಸ್ತುಗಳಿಗಾಗಿ ಅಂಗಡಿಗಳ ಬಾಗಿಲು ತೆರೆಯಲು ಅವಕಾಶವನ್ನು ನೀಡಲಾಗುತ್ತಿತ್ತು. ಸೆಕ್ಷನ್ 144 ಜಾರಿಯಲ್ಲಿರುತ್ತಿತ್ತು. ಈಗ ಇಷ್ಟು ದಿನಗಳಲ್ಲಿ ಕೂಲಿ ಕೆಲಸಗಾರರಿಗೆ ಕೆಲಸವಿಲ್ಲ. ದಿನ ದಿನ ಕೂಲಿ ಮಾಡಿ ಸಂಜೆಗೆ ಅಕ್ಕಿ, ಕಾಳು, ಬೇಳೆ, ಹಾಲು, ಸಕ್ಕರೆ, ಚಾಹುಡಿ, ಕಾಫಿ ಹುಡಿ ಎಂದು ಒಯ್ಯುತ್ತಿದ್ದವರ ಸ್ಥಿತಿ ಏನಾಗಿರಬೇಕು. ಇಂತಹ ಮನೆಗಳ ಯುವಕರೇ ಬೀದಿಗಳಲ್ಲಿ ಗಲಭೆ ಮಾಡಿದವರೆಂದರೆ ಹೆಚ್ಚು ಸರಿ. ಅಂತಹವರಿಗೆ ಅಂಗಡಿ ಬಾಗಿಲು ತೆರೆದರೂ ದುಡ್ಡು ಕೊಟ್ಟು ತರುವುದಕ್ಕೆ ಸಾಧ್ಯವಿಲ್ಲ. ಆಗ ನಮ್ಮ ಯುವಕರಿಗೆ ಬಂದ ಯೋಚನೆ ಬಹಳ ವಿಶಿಷ್ಟವಾದುದು. ಕರ್ಫ್ಯೂ ಸಡಿಲಿಸಿದ ಒಂದು ದಿನದ ಆ ಅವಕಾಶದಲ್ಲಿ ಕೃಷ್ಣಾಪುರದ ಮುಖ್ಯ ರಸ್ತೆಯಲ್ಲಿ ಯುವಕ ಮಂಡಲದ ಗ್ರೌಂಡ್‌ನ ಮುಂದೆ 4ನೇ ಬ್ಲಾಕ್‌ನಲ್ಲಿದ್ದ ಬಸ್ ನಿಲ್ದಾಣದ ಬಳಿಯಿದ್ದ ‘ನೈತ ಬ್ಯಾರಿ’ಗಳ ಜೀನಸಿನ ಅಂಗಡಿಗೆ ನುಗ್ಗಿದರು.

ನೈತ ಬ್ಯಾರಿಗಳ ಬಗ್ಗೆ ಹಿಂದೆ ಹೇಳಿದ್ದೇನೆ. ಅಂಗಡಿಗೆ ನುಗ್ಗಿದ ಈ ಯುವಕರು ಅಲ್ಲಿಂದ ಅಕ್ಕಿ, ಬೇಳೆ, ಕಾಳು, ಮೆಣಸುಗಳ ಗೋಣಿ ಗೋಣಿಗಳನ್ನೇ ಹೊತ್ತುಕೊಂಡು ತಮ್ಮ ಮನೆಗಳಿಗೆ ಸಾಗಿಸಿದರು. ಇವರು ಬೇರೆ ಯಾರೂ ಅಲ್ಲ. ನನ್ನ 5ನೇ ಬ್ಲಾಕಿನ ಹಿಂದೂ ಯುವಕರು. ಇದನ್ನು ಕಣ್ಣಾರೆ ನೋಡಿದ ನನಗೆ ಹಗಲು ದರೋಡೆ ಎಂದರೆ ಇದೇ ಅಂತ ಅನ್ನಿಸಿತ್ತು. ಹೀಗೆ ದೋಚಿ ತಂದವರು ತಮ್ಮ ತಮ್ಮ ಪಕ್ಕದ ಮನೆಗಳಿಗೆ ಹಂಚಿಕೊಂಡರು. ಎಲ್ಲಾ ಮನೆಗಳು ಹಿಂದೂ ಮನೆಗಳೇ. ಬಡವರ ಮನೆಗಳೇ. ಆದರೆ ಮಾನ ಮರ್ಯಾದೆ ಎನ್ನುವುದು ಮನುಷ್ಯರಾದ ಎಲ್ಲರಿಗೂ ಒಂದೇ ಅಲ್ಲವೇ? ಅಂಗಡಿ ಮತ್ತೆ ಮುಚ್ಚಲ್ಪಟ್ಟಿತ್ತು. ಕರ್ಫ್ಯೂ ಮುಂದುವರಿದಿತ್ತು. ಈ ಘಟನೆಯಿಂದ ನಾಳೆ ಕರ್ಫ್ಯೂ ಇಲ್ಲವಾಗಬಹುದು ಎನ್ನುವ ಆಸೆ ಬತ್ತಿ ಹೋಗಿ ಮತ್ತು ಕೆಲ ದಿನಗಳು ಮುಂದೆ ಹೋಯಿತು.

ಈಗ ಹಾಲು, ನೀರು ಎನ್ನುವ ಆವಶ್ಯಕ ವಸ್ತುಗಳ ಹಂಚಿಕೆ ವಿತರಣೆ ಎಲ್ಲವೂ ಸ್ತಬ್ಧ. ದೂರದರ್ಶನದಲ್ಲಿ ದಕ ಜಿಲ್ಲೆಯ ಕೃಷ್ಣಾಪುರ ಪ್ರಸಿದ್ಧಿ ಪಡೆಯಿತೋ ಕುಪ್ರಸಿದ್ಧಿ ಪಡೆಯಿತೋ? ಅನೇಕರು ಕೈ, ಕಾಲು, ಸೊಂಟ, ತಲೆ ಒಡೆಸಿಕೊಂಡು ಆಸ್ಪತ್ರೆ ಸೇರಿಸಲ್ಪಟ್ಟರು. ಅನೇಕರು ಪೊಲೀಸರ ಕೈಗೆ ಸಿಕ್ಕಿ ಅವರ ಕಸ್ಟಡಿಯಲ್ಲಿದ್ದರು. ಅವರ ಮೇಲೆ ಕೇಸು ಹಾಕಲಾಗಿತ್ತು. ಒಟ್ಟಿನಲ್ಲಿ ಯುದ್ಧ ನಡೆದಾಗ ಊರು ಸೂರೆ ಹೋಯ್ತು ಎನ್ನುವುದು ಅನುಭವಕ್ಕೆ ಬಂದಂತಾಯ್ತು. ನಮ್ಮ ಮನೆಯಲ್ಲಿ ಅಕ್ಕಿ, ಕಾಳು, ಬೇಳೆ ಎಲ್ಲವೂ ತಿಂಗಳ ಲೆಕ್ಕದಲ್ಲಿ ತರುತ್ತಿದ್ದುದರಿಂದ ತೊಂದರೆಯಾಗಿರಲಿಲ್ಲ. ನೀರಿಗೆ ನಳ್ಳಿಯ ಅಗತ್ಯವಿಲ್ಲದೆ ಬಾವಿ ನೀರು ಇತ್ತು. ಹಾಲು ಕೂಡಾ ಮನೆಗಳಿಂದ ತರುತ್ತಿದ್ದುರಿಂದ ಅವರು ಒಳ ರಸ್ತೆಯಲ್ಲೇ ತಂದು ಕೊಡುತ್ತಿದ್ದರು. ಮಕ್ಕಳನ್ನು ಕಳುಹಿಸದೆ ದೊಡ್ಡವರೇ ತರುತ್ತಿದ್ದರು.

ದಿಗಳಂತೆ ಉಳಿಯಬೇಕಾದಾಗ ಕೂಲಿ ಮಾಡಿ ದಿನದ ಒಲೆ ಉರಿಸಬೇಕಾದ ಮನೆಗಳಲ್ಲಿ ಹಲವು ದಿನ ಒಲೆ ಉರಿಯಲಿಲ್ಲ. ರಿಕ್ಷಾ ಚಾಲಕರ ರಿಕ್ಷಾಗಳು ಮನೆಯಲ್ಲೋ ಬೀದಿಯಲ್ಲೋ ಉಳಿದಿದ್ದುವು. ಎರಡೂ ಧರ್ಮದ ಕೆಲವು ರಿಕ್ಷಾಚಾಲಕರು ಆಸ್ಪತ್ರೆಗಳಲ್ಲಿ, ಜೈಲಲ್ಲಿ ಇದ್ದರು. ಹೀಗೆ ಭಾವನಾತ್ಮಕವಾಗಿ ಆವೇಶಗೊಂಡು ತೊಂದರೆ, ಸಂಕಟ, ಕಷ್ಟಗಳನ್ನು ಅನುಭವಿಸಿದವರು ಎರಡೂ ಧರ್ಮಗಳ ಶ್ರೀಮಂತರಲ್ಲ, ಸರಕಾರಿ ನೌಕರರಲ್ಲ, ಅರೆ ಸರಕಾರಿ ನೌಕರರಲ್ಲ, ವಿದ್ಯಾವಂತರಲ್ಲ, ಹಿಂದೂಗಳಲ್ಲಿ ಮೇಲ್ಜಾತಿಯವರೂ ಅಲ್ಲ, ಅವರೆಲ್ಲರೂ ಶೂದ್ರ ಜಾತಿಯ ಅರೆ ವಿದ್ಯಾಭ್ಯಾಸದ, ಕೆಳವರ್ಗದ, ನಿರುದ್ಯೋಗಿ ಯುವಕರಾದರೆ, ಮುಸ್ಲಿಮರಲ್ಲೂ ಬಡವರು, ಕೆಳವರ್ಗದವರು, ಮುಸ್ಲಿಮರಲ್ಲಿ ನಿರುದ್ಯೋಗಿ ಎನ್ನುವುದಕ್ಕೆ ಅವಕಾಶವಿಲ್ಲದಿರುವುದೂ ಸತ್ಯವೇ. ಆದರೆ ಅವರು ಕೂಡಾ ಅರೆ ವಿದ್ಯಾಭ್ಯಾಸ ಹೊಂದಿದವರು. ಇನ್ನು ಎರಡೂ ಧರ್ಮಗಳ ಕಾಲೇಜು ವಿದ್ಯಾರ್ಥಿಗಳೂ ಸೇರಿಕೊಂಡುದೂ ಇದೆ. ಮುಂದೆ ಇದೇ ಯುವಕರು ಎರಡೂ ಧರ್ಮಗಳ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರಾಗಿ ಗುರುತಿಸಿಕೊಂಡವರೂ ಇದ್ದಾರೆ. ಕೆಲವರು ರಾಜಕೀಯ ಪ್ರವೇಶಿಸಿದವರೂ ಇದ್ದಾರೆ.

ಒಟ್ಟಿನಲ್ಲಿ ಮಂಗಳೂರು ಶಾಂತವಾಗಿ ಶಾಲಾ ಕಾಲೇಜುಗಳು ಪ್ರಾರಂಭವಾದರೂ ಕಾಟಿಪಳ್ಳದಲ್ಲಿ ಕರ್ಫ್ಯೂ ಇದ್ದುದರಿಂದ ನಾವಂತೂ ಗೃಹಬಂಧನದಲ್ಲಿದ್ದೆವು. ಪ್ರಜಾಪ್ರಭುತ್ವಕ್ಕೆ ಹೀಗೆ ಧಕ್ಕೆ ಒದಗಿದರೆ ಹೇಗೆ ನಾವು ನಮ್ಮ ಸ್ವಾತಂತ್ರ ಕಳೆದುಕೊಳ್ಳುತ್ತೇವೆ. ಅಸಹಾಯಕರಾಗುವ ಜೊತೆಗೆ ಅರಾಜಕತೆಯ ಅನಿಷ್ಟಗಳನ್ನು ಅರ್ಥ ಮಾಡಿಕೊಂಡೆವು ಎನ್ನುವುದರೊಂದಿಗೆ ಸ್ವಾತಂತ್ರದ ಬೆಲೆಯನ್ನು ಅರಿತುಕೊಂಡೆವು. ಈ ಕಾರಣದಿಂದಲೇ ಪ್ರಜಾಪ್ರಭುತ್ವದ ರಕ್ಷಣೆಗೆ ಪ್ರಜ್ಞಾವಂತ ನಾಗರಿಕರು ಏನು ಮಾಡಬೇಕೆಂಬ ಯೋಚನೆ ಮಾಡುತ್ತಲೇ ನಿತ್ಯದ ಬದುಕಿಗೆ ಹಿಂದಿರುಗಿದಾಗ ನನ್ನಂತಹ ಹಿಂದೂಗಳಿಗೆ ಮುಸ್ಲಿಮರನ್ನು ಕಾಣುವಾಗ ಮುಜುಗರವಾಗುತ್ತಿತ್ತು. ಮಸೀದಿ ಕೆಡವಿದ್ದು ಯಾರೇ ಆಗಿದ್ದರೂ ಅವರು ಹಿಂದೂಗಳು ಎನ್ನುವ ಕಾರಣಕ್ಕೆ ನಾನೂ ಹಿಂದೂವಾಗಿದ್ದೆ ಎನ್ನುವ ಕಾರಣದಿಂದ ಪಾಪ ಪ್ರಜ್ಞೆ ನನ್ನನ್ನು ಕಾಡಿದ್ದಂತೂ ನಿಜ. ಅನ್ಯಾಯದ ಎದುರು ಪ್ರತಿಭಟನೆ ಬೇಕು. ಅದು ಪ್ರಜಾಸತ್ತಾತ್ಮಕವಾಗಿರಬೇಕು ಎನ್ನುವ ಅರಿವು ನೀಡುವುದು ವಿದ್ಯೆ, ಶಿಕ್ಷಣ ಅಲ್ಲದೆ ಧರ್ಮದ ಸಂಸ್ಕಾರ ಅಲ್ಲ ಎನ್ನುವುದರ ಪ್ರಾತ್ಯಕ್ಷಿತೆೆಯ ಅನುಭವವಂತೂ ನನಗಾಯ್ತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top