-

ಆ ಅಜ್ಜನ ಬೆಟ್ಟದ ಸೊಬಗು...

-

ಆ ‘ಗ್ರಾಂಡ್ ಫಾದರ್ ವೌಂಟೈನ್’ ಮೇಲೆ ಸ್ವಲ್ಪ ಭೀತಿಯಿಂದಲೇ ನಿಲ್ಲಬೇಕು. ಯಾಕೆಂದರೆ, ಅದು ವಿಶಾಲವಾದ ಪ್ರದೇಶದಿಂದ ಕೂಡಿರುವಂಥದ್ದು ಅಲ್ಲ. ಜೊತೆಗೆ ಸಾಕಷ್ಟು ಜನ ಸಂದಣಿಯಿಂದ ಎಚ್ಚರಿಕೆಯಲ್ಲಿಯೇ ಆ ವೈಭವವನ್ನು ವೀಕ್ಷಿಸಬೇಕು. ಧ್ಯಾನಸ್ಥ ಮನಸ್ಥಿತಿಗೆ ಕರೆದೊಯ್ಯುವ ತಪಸ್ಸಿನ ಕೇಂದ್ರವದು. ಇಂಥ ಹಸಿರು ತುಂಬಿದ ಪರ್ವತ ಶ್ರೇಣಿಯು ಸುಮಾರು ಮೂರು ಸಾವಿರ ಮೈಲಿಯ ದೂರದವರೆಗೆ, ನೈಲ್ ನದಿಯನ್ನು ಚುಂಬಿಸುವ ರೀತಿಯಲ್ಲಿ ಮೋಹಕವಾಗಿ ಚಾಚಿಕೊಂಡಿರುವಂಥದ್ದು. ಅಷ್ಟೇ ವಿಶಾಲ ಭೂಮಿಕೆ ಇರುವ, ಈ ಪ್ರದೇಶಕ್ಕೆ ಒಬ್ಬ ಯಜಮಾನನಂತೆ ಅಥವಾ ಚಕ್ರವರ್ತಿಯ ರೂಪದಲ್ಲಿ ‘ಗ್ರಾಂಡ್ ಫಾದರ್ ಬೆಟ್ಟ’ದ ತುದಿಯು ಇದೆ. ಆ ತುದಿಯೇ ಅಜ್ಜನ ಮುಖವನ್ನು ಹೋಲುವಂಥದ್ದು.

ಆತ ಎಂಬತ್ತರ ಗಡಿಯನ್ನು ದಾಟಿದ್ದ. ಅತ್ಯಂತ ಎತ್ತರದ ವ್ಯಕ್ತಿ. ಆ ವಯಸ್ಸಿನಲ್ಲಿಯೂ ಆಕರ್ಷಕವಾಗಿ ಎದ್ದು ಕಾಣುತ್ತಿದ್ದ. ಸೌಮ್ಯ ನೋಟದ ಮುಖಕ್ಕೆ ಬೆಳ್ಳಿ-ಬಂಗಾರ ಬಣ್ಣ ಮಿಶ್ರಿತ ಉದ್ದನೆಯ ಗಡ್ಡ. ಕುತ್ತಿಗೆಗೆ ಕ್ಯಾಮರಾವನ್ನು ನೇತಾಡಿಸಿಕೊಂಡಿದ್ದ. ಆ ‘ದಿ ಗ್ರಾಂಡ್ ಫಾದರ್ ವೌಂಟೈನ್’ನ ಆಕರ್ಷಕ ವ್ಯಕ್ತಿತ್ವದಷ್ಟೇ ತಕ್ಷಣ ನನ್ನ ಮನಸ್ಸಿನಲ್ಲಿ ಆವರಿಸಿಕೊಂಡು ಬಿಟ್ಟ, ಕುತೂಹಲದಿಂದ ಸುಮ್ಮನೆ ಹೆಸರು ಕೇಳಿದೆ. ಸ್ಟೀಫನ್ ಎಂದು ಹೇಳಿದರು. ಪರಿಸರ ವಿಜ್ಞಾನಿ. ಎಷ್ಟೋ ದೇಶಗಳನ್ನು ನೋಡಿರುವಂಥ ವ್ಯಕ್ತಿ. ತನ್ನ ಕುತ್ತಿಗೆಯನ್ನು ಅಲಂಕರಿಸಿದ್ದ ಕ್ಯಾಮರಾದ ಬಗ್ಗೆ ಕೇಳಿದಾಗ, ಈ ರೀತಿಯ ಕ್ಯಾಮರಾಗಳು ಸಾಕಷ್ಟು ಇವೆ. ಹಾಗೆ ನೋಡಿದರೆ ಕ್ಯಾಮರಾ ಹುಟ್ಟಿದಾಗಿನಿಂದ ಇರುವಂಥವೆಲ್ಲ ಅಲಂಕಾರಪ್ರಾಯವಾಗಿ ಮನೆಯಲ್ಲಿವೆ. ಅವು ನನ್ನ ಸಂಪತ್ತು ಎಂದು ಹೇಳುವಾಗಿನ ಧ್ವನಿಯು, ಆ ಕ್ಷಣಕ್ಕೆ ಅತ್ಯಂತ ಸುಮಧುರವಾದ ಆಲಾಪನೆಯಂತೆ ಕೇಳಿಸಿತ್ತು. ಆತನಿಗೆ ಹೆಚ್ಚು ತೊಂದರೆ ಕೊಡಲು ಮನಸ್ಸು ಬರಲಿಲ್ಲ. ಯಾಕೆಂದರೆ ಒಂದೇ ಸಮನೇ ಆ ವಯೋವೃದ್ಧ ಬೆಟ್ಟದ ತುದಿಯ ಮೇಲೆ ಕೂತು, ವಿವರಿಸಲು ಆಗದಂಥ ಅಮೂರ್ತವಾದ ಹಸಿರು ತುಂಬಿದ ಬೆಟ್ಟದ ಸಾಲುಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದ. ಇದ್ದಕ್ಕಿದಂತೆ ಕಾಮನ ಬಿಲ್ಲಿನಂತೆ ವಿವರಿಸಬಹುದಾದ, ಒಂದು ಮಿಂಚಿನ ನೋಟದ ಮಾತನ್ನು ಹೇಳಿದ. ಈ ಮನಮೋಹಕವಾದ ಹಸಿರು ತುಂಬಿದ ಬೆಟ್ಟಗುಡ್ಡಗಳ ಸಾಲು ಲಕ್ಷಾಂತರ ವರ್ಷಗಳಿಂದ ಹೀಗೆಯೇ ಸುಮ್ಮನೆ ಮಲಗಿದೆ. ಇದೆಲ್ಲವನ್ನು ಕಾವಲು ಕಾಯುವ ರೀತಿಯಲ್ಲಿ ಈ ವಯೋವೃದ್ಧ ಬೆಟ್ಟದ ಶಿಖರ ಇದೆ ಅನ್ನಿಸುತ್ತಿದೆ. ಆಗ ಪ್ರಕೃತಿಯಲ್ಲಿ ಆಗಿರಬಹುದಾದ ನೂರಾರು ರೀತಿಯ ಸ್ಥಿತ್ಯಂತರಗಳಿಗೆಲ್ಲ ಸಾಕ್ಷಿಭೂತನಂತೆ ‘ದಿ ಗ್ರಾಂಡ್ ಫಾದರ್ ವೌಂಟೈನ್’ ಗೋಚರಿಸುತ್ತಿದೆ ಎಂದು ಗುನುಗುನಿಸುವಾಗ, ಆತನೊಬ್ಬ ಅದ್ಭುತ ಕಲಾಕೃತಿಯೇ ಅನ್ನಿಸಿಬಿಡ್ತು.
ಅಮೆರಿಕದ ಉತ್ತರಕರೋಲಿನಾ ಪ್ರಾಂತದ ಗ್ರೀನ್ಸ್‌ಬೊರೋ ಪ್ರದೇಶದಿಂದ ಸುಮಾರು ಇನ್ನೂರು ಮೈಲಿ ದೂರವಿದ್ದ ಆ ‘ಗ್ರಾಂಡ್ ಫಾದರ್ ವೌಂಟೈನ್’ ನೋಡಲು ಹೋಗಿದ್ದೆವು. ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಿರುವ ಶ್ರೀನಾಥ್ ಗೌಡ ಅವರು ‘‘ಶೂದ್ರ ಅವರೇ ನಿಮಗೊಂದು ಅದ್ಭುತವಾದ ಸ್ಥಳವನ್ನು ತೋರಿಸುವೆ ಬನ್ನಿ’’ ಎಂದು ಕರೆದುಕೊಂಡು ಹೋಗಿದ್ದರು. ಹಾದಿ ಉದ್ದಕ್ಕೂ ವೈವಿಧ್ಯಮಯವಾದ ಗಿಡಮರಗಳಿಂದ ತುಂಬಿದ್ದ ಸಂಪತ್ತನ್ನು ಕಂಡು ವಿಸ್ಮಯಗೊಂಡಿದ್ದೆ. ಕೆಲವು ಪರಿಸರ ಪ್ರೇಮಿಗಳು ವರ್ಣಮಯ ಮೋಟಾರ್ ಬೈಕ್‌ಗಳಲ್ಲಿ ಹೋಗುತ್ತಿದ್ದರೆ, ಅವುಗಳ ಧ್ವನಿಯು ‘ಸ್ಯಾಕ್ಸೋಫೋನ್’ ಸಂಗೀತದಂತೆ ಕೇಳಿಸುತ್ತಿತ್ತು. ಅದರ ಬಗ್ಗೆ ಸಂಭ್ರಮದಿಂದ ಹೇಳಿದಾಗ, ಅವುಗಳ ಬೆಲೆ ಇಷ್ಟಿಷ್ಟು ಎಂದು ಕುತೂಹಲವು ದ್ವಿಗುಣಗೊಳ್ಳುವ ರೀತಿಯಲ್ಲಿ ಗೌಡರು ವರ್ಣಿಸಿದ್ದರು. ಜೊತೆಗೆ ಅಲ್ಲಲ್ಲಿ ನಿಲ್ಲಿಸಿ ‘‘ಇಲ್ಲಿಂದ ನೋಡಿ ಗ್ರಾಂಡ್ ಫಾದರ್ ವೌಂಟೈನ್‌ಗೆ ಸೃಷ್ಟಿಯಾಗಿ ಹೋಗಿರುವ ಪ್ರದೇಶ’’ವೆಂದು ವರ್ಣಿಸಿದ್ದರು. ಅವರು ಈ ಪ್ರದೇಶಕ್ಕೆ ಗೆಳೆಯರ ಜೊತೆ, ಕುಟುಂಬದ ಜೊತೆಯಲ್ಲಿ ಬಂದು ಹೋಗಿರುವಂಥವರು. ಹೀಗೆಯೇ ಬೆರಳೆತ್ತಿ ತೋರಿಸುತ್ತೆ ‘‘ಅವೆಲ್ಲ ಕ್ಯಾಟಲ್ ಫೂಡ್ಸ್. ಸಾವಿರಾರು ಹಸುಗಳನ್ನು ಇಲ್ಲಿ ಹಾಲಿಗಾಗಿ, ಮಾಂಸಕ್ಕಾಗಿ ಸಾಕುತ್ತಾರೆ’’ ಎಂದು ಆ ರೀತಿಯ ಎರಡು ಮೂರು ಕ್ಯಾಟಲ್ ಫಾರಂಗಳನ್ನು ತೊರಿಸಿದ್ದರು. ಇದರಿಂದ ಒಂದು ವಿಧದಲ್ಲಿ ನನ್ನ ಬಾಲ್ಯ ಕಾಲವನ್ನು ನೆನಪು ಮಾಡಿಕೊಂಡು ಆನಂದಿಸುವ ಮನಸ್ಥಿತಿ ಸೃಷ್ಟಿಯಾಗಿತ್ತು.
ಹಾದಿ ಉದ್ದಕ್ಕೂ ಇದೇ ಇಷ್ಟು ವೈಭವದಿಂದ ಕೂಡಿರಬೇಕಾದರೆ, ಇನ್ನು ಆ ‘ಗ್ರಾಂಡ್ ಫಾದರ್ ವೌಂಟೈನ್’ನ ಪರಿಸರ ಇನ್ನೆಷ್ಟು ವೈಭವದ ಶ್ರೀಮಂತಿಕೆಯನ್ನು ತುಂಬಿಕೊಂಡಿರಬಹುದು ಅನ್ನಿಸಿತ್ತು. ಹತ್ತಿರ ಹೋದಂತೆಲ್ಲ ಸೃಷ್ಟಿಯಾಗುತ್ತಿದ್ದ ವಾತಾವರಣ ವಿಧವಾದ ಚಿಲ್ಲರೆ ಅಂಗಡಿಗಳು ಇರಲಿಲ್ಲ. ಕೇವಲ ಅತ್ಯಂತ ‘ಡಿಗ್ನಿಫೈಡ್’ ಆದ ಒಂದು ಹೊಟೇಲ್ ಇತ್ತು. ಆದರೆ ಇದಕ್ಕಿಂತ ಮೊದಲ ಆಕರ್ಷಿಸಿದ್ದು ‘ಗ್ರಾಂಡ್ ಫಾದರ್ ವೌಂಟೈನ್-ಸ್ಟುವಾರ್ಡ್‌ಶಿಪ್ ಫೌಂಡೇಷನ್’ ನಾಮಫಲಕ. ಇರಲಿ, ಇದರ ಜೊತೆಗೆ ಅಜ್ಜನ ಮುಖಾರವಿಂದವನ್ನೇ ಹೋಲುವ ಆ ಬೆಟ್ಟದ ತುದಿಯ ಬಳಿಗೆ ಹೋದಾಗ, ಎಷ್ಟೋ ಮಂದಿ ಕ್ಯಾಮರಾಗಳನ್ನು ಹಿಡಿದು ಸುತ್ತಲಿನ ಪರಿಸರವನ್ನು ಸೆರೆ ಹಿಡಿಯುತ್ತಿದ್ದರು. ಅಂಥವರಲ್ಲಿ ಪ್ರಾರಂಭದಲ್ಲಿ ಪ್ರಸ್ತಾಪಿಸಿರುವ ಸ್ಟೀಫನ್ ವ್ಯಾಲೇಸ್ ಕೂಡ ಒಬ್ಬರು.ಆರಾಮವಾಗಿ ಹೋಗಲು ಆಗದಂಥ ಜಾಗವದು. ಸುಮಾರು ನೂರು ಅಡಿಗೂ ಮೇಲ್ಪಟ್ಟು ಇರುವ ಕಂದರದ ಜಾಗಕ್ಕೆ ಇಬ್ಬರು ಓಡಾಡಬಹುದಾದ ಉಕ್ಕಿನ ಸೇತುವೆಯನ್ನು ನಿರ್ಮಿಸಿದ್ದಾರೆ. ಹಿಂದೆ ಶ್ರೀನಾಥ ಗೌಡರು ಬಂದಾಗ ಹಗ್ಗಗಳಿಂದ ನಿರ್ಮಾಣ ಮಾಡಿದ ತೂಗಾಡುವ ಸೇತುವೆ ಇತ್ತಂತೆ. ಒಂದು ವಿಧದ ಭಯಭೀತಿಯಿಂದಲೇ ಅದರ ಮೇಲೆ ಓಡಾಡಬೇಕಾಗಿತ್ತು. ಇದನ್ನು ಬರೆಯುವ ಕಾಲಕ್ಕೆ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್‌ವೇಗಾಸ್‌ಗೆ ಮುನ್ನೂರು ಮೈಲಿ ದೂರವಿರುವ ‘ಗ್ರಾಂಡ್ ಕನಾನ್’ ಮಹೋನ್ನತ ಕಾಲುವೆ ನೆನಪಿಗೆ ಬರುತ್ತಿದೆ. ಅದು ಕೂಡ ನೂರಾರು, ಸಾವಿರಾರು ವರ್ಷಗಳಿಂದ ಪ್ರಕೃತಿಯ ವಿಕೋಪಗಳಿಂದ ಅರ್ಥಾತ್ ಸ್ಥಿತ್ಯಂತರಗಳಿಂದ ಆಕಾರ ಪಡೆದಿರುವಂಥದ್ದು. ಒಂದು ವಿಧದಲ್ಲಿ ಬಾಸ್ಟನ್ ನಗರದಿಂದ ಏಳೆಂಟು ಸಾವಿರ ಮೈಲಿ ವಿಮಾನದಲ್ಲಿ ಪ್ರಯಾಣ ಮಾಡುವಾಗ, ನೂರಾರು ಮೈಲಿಯ ಕಾಲುವೆ ಯಾವುದೋ ಬೃಹತ್ ಸರ್ಪದಂತೆ ಚಲಿಸುವ ನೋಟ ಗೋಚರಿಸುತ್ತದೆ.
ಅದೇನೆ ಸ್ಮರಣೀಯ ಅನುಭವವಾಗಿರಲಿ. ಆ ‘ಗ್ರಾಂಡ್ ಫಾದರ್ ವೌಂಟೈನ್’ ಮೇಲೆ ಸ್ವಲ್ಪ ಭೀತಿಯಿಂದಲೇ ನಿಲ್ಲಬೇಕು. ಯಾಕೆಂದರೆ, ಅದು ವಿಶಾಲವಾದ ಪ್ರದೇಶದಿಂದ ಕೂಡಿರುವಂಥದ್ದು ಅಲ್ಲ. ಜೊತೆಗೆ ಸಾಕಷ್ಟು ಜನ ಸಂದಣಿಯಿಂದ ಎಚ್ಚರಿಕೆಯಲ್ಲಿಯೇ ಆ ವೈಭವವನ್ನು ವೀಕ್ಷಿಸಬೇಕು. ಧ್ಯಾನಸ್ಥ ಮನಸ್ಥಿತಿಗೆ ಕರೆದೊಯ್ಯುವ ತಪಸ್ಸಿನ ಕೇಂದ್ರವದು. ಇಂಥ ಹಸಿರು ತುಂಬಿದ ಪರ್ವತ ಶ್ರೇಣಿಯು ಸುಮಾರು ಮೂರು ಸಾವಿರ ಮೈಲಿಯ ದೂರದವರೆಗೆ, ನೈಲ್ ನದಿಯನ್ನು ಚುಂಬಿಸುವ ರೀತಿಯಲ್ಲಿ ಮೋಹಕವಾಗಿ ಚಾಚಿಕೊಂಡಿರುವಂಥದ್ದು. ಅಷ್ಟೇ ವಿಶಾಲ ಭೂಮಿಕೆ ಇರುವ, ಈ ಪ್ರದೇಶಕ್ಕೆ ಒಬ್ಬ ಯಜಮಾನನಂತೆ ಅಥವಾ ಚಕ್ರವರ್ತಿಯ ರೂಪದಲ್ಲಿ ‘ಗ್ರಾಂಡ್ ಫಾದರ್ ಬೆಟ್ಟ’ದ ತುದಿಯು ಇದೆ. ಆ ತುದಿಯೇ ಅಜ್ಜನ ಮುಖವನ್ನು ಹೋಲುವಂಥದ್ದು. ಹೀಗೆ ಸಮೃದ್ಧಿಯನ್ನು ಹೊಂದಿರುವ ಇಲ್ಲೆಲ್ಲ ವರ್ಣಮಯ ಕಾಡು ಪ್ರಾಣಿಗಳು ಯಥೇಚ್ಛವಾಗಿ ಇವೆಯಂತೆ. ಅದರಲ್ಲೂ ಕರಡಿಗಳು. ಅದರದೇ ವಂಶಕ್ಕೆ ಸೇರಿದ ಭಿನ್ನಭಿನ್ನ ತಳಿಗಳು. ಪಕ್ಷಿಗಳ ಸಂಕುಲವಂತೂ ಸಾಧ್ಯವಿಲ್ಲದ ರೀತಿಯಲ್ಲಿ ತುಂಬಿಕೊಂಡಿದೆಯಂತೆ. ಇದು ಸ್ವಾಭಾವಿಕವೂ ಇರಬಹುದು. ಅಷ್ಟು ಆರೋಗ್ಯ ಪೂರ್ಣ ವಾತಾವರಣದಲ್ಲಿ ಅಡ್ಡಿ ಆತಂಕಗಳು ಇಲ್ಲದಂತೆ ಎಲ್ಲವೂ ಬೆಳೆಯುತ್ತ ಹೋಗಿರಲು ಸಾಧ್ಯ. ಈ ದೃಷ್ಟಿಯಿಂದ ಅಲ್ಲಿ ಪರಿಚಯವಾದ ಸ್ಟೀಫನ್ ವ್ಯಾಲೇಸ್ ನನಗೆ ಒಬ್ಬ ಋಷಿ ಸದೃಶರಾಗಿಯೇ ಕಂಡರು. ಒಂದಷ್ಟು ಸಮಯವಿದ್ದು ಆತನೊಡನೆ ಮಾತಾಡಲು ತೊಡಗಿದರೆ, ಒಟ್ಟು ಜಗತ್ತಿನ ಪರಿಸರದ ನಿಗೂಢತೆಗಳನ್ನೇ ತೆರೆದಿದ್ದು ಬಿಡುತ್ತಿದ್ದರೇನೋ. ನಾವು ಪ್ರವಾಸಿಗರು ತಾಳ್ಮೆ ಇಲ್ಲದವರಾದ್ದರಿಂದ ಕೇವಲ ಮೇಲಿನ ಪದರುಗಳನ್ನು ಮಾತ್ರ ನೋಡಿ ಅನುಭವಿಸಲು ಸಾಧ್ಯ. ಆದರೆ ಸ್ಟೀಫನ್ ಆ ರೀತಿಯಲ್ಲಿ ಅಲ್ಲ. ಅವರಿಗೆ ಅದೊಂದು ಪೂರ್ಣಾನುಭವದ ವೇದಿಕೆಯಾಗಿರಲು ಸಾಧ್ಯ. ಈ ನೆಲೆಯಲ್ಲಿ ಅಂಥವರಿಗೆ ನಮ್ಮ ಅರಿವಿಗೆ ಬಾರದ ನಿಗೂಢತೆಗಳೆಲ್ಲ ಬಿಚ್ಚಿಕೊಳ್ಳುತ್ತ ಹೋಗಿರುತ್ತದೆ.
ಸ್ಟೀಫನ್ ವ್ಯಾಲೇಸ್ ಅವರ ಅಲ್ಪ ಪರಿಚಯದಲ್ಲಿ, ಎಂಥದ್ದೋ ಅಪೂರ್ವ ಅನುಭವವನ್ನು ಒಳಗೆ ಬಿಟ್ಟಿಕೊಂಡೆ ಅನ್ನಿಸಿತು. ಈ ಅನ್ನಿಸಿಕೆಯ ಮುಂದುವರಿದ ಭಾಗವಾಗಿ ಧುತ್ತನೆ ನೆನಪಾದದ್ದು, ಸುಂದರ ಲಾಲ ಬಹುಗುಣ ಅವರು. ಗಾಂಧೀಜಿಯವರ ಪರಿಸರ ಚಿಂತನೆಗಳಿಂದ ಪ್ರಣೀತಗೊಂಡು ಒಟ್ಟು ಬದುಕನ್ನೆಲ್ಲ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಳೆದು, ಭಾರತದ ಪರಿಸರ ಸಂರಕ್ಷಣೆಯಲ್ಲಿ ವೇದ ಉಪನಿಷತ್ತುಗಳಂತೆ ಚಿಂತನೆಗಳನ್ನು ರವಾನಿಸುತ್ತಿರುವಂಥವರು. ಇಂಥ ಮಹಾನ್ ಪರಿಸರ ಪ್ರೇಮಿ ಬಹುಗುಣ ಅವರು ಸುಮಾರು ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನ ‘ಇಂಡಿಯನ್ ಇನ್‌ಸ್ಟಿಸ್ಟೂಟ್ ಆಫ್ ವರ್ಲ್ಡ್ ಕಲ್ಚರ್’ ಸಂಸ್ಥೆಯಲ್ಲಿ ಬಹುಗುಣ ಅವರ ಉಪನ್ಯಾಸವಿತ್ತು. ಆಗ ಇನ್ನು ಪರಿಸರ ಚಳವಳಿಗಳು ವ್ಯಾಪಕಗೊಂಡಿರಲಿಲ್ಲ. ಅಂದು ಅವರು ಹಿಮಾಲಯ ಪರ್ವತ ಶ್ರೇಣಿಯ ಕೆಲವು ನಿಗೂಢತೆಗಳ ಬಗ್ಗೆ ಅತ್ಯಂತ ಮಾರ್ಮಿಕವಾಗಿ ನುಡಿದಿದ್ದರು. ಈ ಉಪನ್ಯಾಸಕ್ಕಿಂತ ಒಂದು ವಾರ ಹಿಂದೆ ಸಲ್ಮಾನ್ ರಶ್ದಿಯಂತಹ ವಿಚಿತ್ರ ಮನಸ್ಥಿತಿಯ ಸೃಜನಶೀಲ ಕಾದಂಬರಿಕಾರ ತನ್ನ ‘ಮಿಡ್‌ನೈಟ್ ಚಿಲ್ಡ್ರನ್’ ಕುರಿತು ಮಾತಾಡಿದ್ದರು. ಒಂದು ವಿಧದಲ್ಲಿ ಅವೆಲ್ಲ ಬಂಡವಾಳವಾಗಿಯೇ ನಮ್ಮ ಗ್ರಹಿಕೆಗಳು ವಿಸ್ತಾರಗೊಳ್ಳುತ್ತ ಹೋಗಿರುತ್ತದೆ. ಸ್ಟೀಫನ್ ವ್ಯಾಲೇಸ್ ಇಂದು ನನ್ನಂಥವನಿಗೆ ಸಂತ ಸದೃಶ ವ್ಯಕ್ತಿಯಾಗಿ ಹಾಗೂ ಆ ‘ಗ್ರಾಂಡ್ ಫಾದರ್ ವೌಂಟೈನ್’ ಲೋಕದ ಪರಿಸರವನ್ನು ಕೇವಲ ಅಮೆರಿಕಗೆ ಮಾತ್ರ ಸೇರಿದ್ದಲ್ಲ, ನನ್ನದೂ ಆಗಿದೆಯೆನ್ನುವ ಗ್ರಹಿಕೆಗಳಿಗೆ ಪೂರಕವಾಗಿದ್ದರೆ. ಅಂದಿನ ಬಹುಗುಣ ಅವರ ನುಡಿಗಳು ಕೂಡ ಸಾಕ್ಷಿಯಾಗಿ ಕೆಲಸ ಮಾಡಿರುತ್ತವೆ.

ಎಲ್ಲದರ ವ್ಯಾಪ್ತತೆಯು ಹೀಗೆಯೇ ಅಲ್ಲವೇ ಮುಂದುವರಿಯುವುದು. ಅಲ್ಲಿಯ ಸೂರ್ಯಸ್ತಮಾನವನ್ನು ಕೂಡ ಅವ್ಯಕ್ತ ತಾದ್ಯಾತ್ಮತೆಯಿಂದ ಅನುಭವಿಸಿದ್ದೆವು. ಕೊನೆಗೆ ಆ ಬೆಟ್ಟಕ್ಕೆ, ಹಾಗೆಯೇ ಆಕಸ್ಮಿಕವಾಗಿ ಪರಿಚಯವಾದ ಆ ಸ್ಟೀಫನ್ ಅವರಿಗೆ ಅನಂತ ನಮಸ್ಕಾರಗಳನ್ನು ತಿಳಿಸಿ ಕೆಳಗೆ ಬಂದೆವು.
ಪಕ್ಕದಲ್ಲಿರುವ ಮ್ಯೂಸಿಯಂ ನೋಡಲು ಹೋದೆವು. ತರಾವರಿ ಪಕ್ಷಿಗಳ ಮತ್ತು ಪ್ರಾಣಿಗಳ ‘ಅಸ್ಥಿಪಂಜರ’ಗಳು ಎಂಥದೋ ಆತ್ಮೀಯವಾದ ಭಾವನೆಗಳನ್ನು ವಿಸ್ತರಿಸುತ್ತಾ ಹೋದವು. ಜೊತೆಗೆ ವಿವಿಧ ಮರಗಳ ಅಸ್ಥಿಪಂಜರಗಳು ಈ ಲೋಕ ಎಂತೆಂಥ ಹಂತಗಳನ್ನು ದಾಟಿ ಬಂದಿದೆಯೆಂದು ಯೋಚಿಸುತ್ತಲೇ ಪಕ್ಕದಲ್ಲಿಯೇ ಇದ್ದ ವಿಶಾಲವಾದ ಮೃಗಾಲಯವನ್ನು ನೋಡಲು ಹೋದೆವು. ಒಂದು ದೃಷ್ಟಿಯಿಂದ ಮೃಗಾಲಯವೆಂದರೆ, ಆ ಬಡ ಪ್ರಾಣಿಗಳಿಗೆ ಬಂಧಿಖಾನೆಯೇ ಆಗಿರುತ್ತದೆ. ಅವು ಸ್ವಾತಂತ್ರದ ಕನಸನ್ನು ಮರೆತು ಹಾಗೆಯೇ ಜೀವ ಕಳೆದುಕೊಂಡು ಬಿಟ್ಟಿರುತ್ತವೆ. ಅಲ್ಲಿ ಕಷ್ಟಪಟ್ಟು ಓಡಾಡಿಕೊಂಡಿದ್ದ ಕರಡಿಗಳನ್ನು, ಪಕ್ಷಿಗಳನ್ನು ಹಾಗೂ ರಣಹದ್ದುಗಳನ್ನು ನೋಡಿದಾಗ ಅಯ್ಯೋ ಅನ್ನಿಸುತ್ತಿತ್ತು. ಎಷ್ಟೋ ಪ್ರಾಣಿಗಳ ಮಾಂಸವನ್ನು ಕಿತ್ತು ಕಿತ್ತು ತಿಂದ ರಣಹದ್ದುಗಳು ಯಾವುದೋ ಕೊಂಬೆಯ ಮೇಲೆ ಶಕ್ತಿಹೀನವಾಗಿ, ಅನಾಥವಾಗಿ ಕೆಳಗೆ ಬೀಳುವ ರೀತಿಯಲ್ಲಿ ಕೂತಿದ್ದವು. ಯಾವುದನ್ನು ನಾನು ಅತ್ಯಂತ ಸಂತೋಷವಾಗಿ, ಚೇತೋಹಾರಿತನವನ್ನು ತುಂಬಿಕೊಂಡು ‘ಗ್ರಾಂಡ್ ಫಾದರ್ ವೌಂಟೈನ್’ ಮೇಲೆ ಅನುಭವಿಸಿದ್ದೇನೋ, ಅದು ಇಲ್ಲಿ ನಿಧಾನವಾಗಿ ಕರಗಿ ವಿಷಾದಮಯತೆ ತುಂಬಿಕೊಳ್ಳುತ್ತಾ ಹೋಗಿತ್ತು. ಒಟ್ಟು ಇತಿಹಾಸ ಚಕ್ರದಲ್ಲಿ ಹೀಗೆಯೇ ಇರತಕ್ಕದ್ದು ಎಂದು ಸಮಾಧಾನವನ್ನು ಆರೋಪಿಸಿಕೊಂಡು ನಡೆಯುತ್ತಿರುತ್ತೇವೆ. ಅದೇನೇ ಆಗಿರಲಿ, ಇಂಥ ಅಮೂಲ್ಯ ಸ್ಥಳಗಳು ಎಲ್ಲೆಲ್ಲೋ ನಿಗೂಢವಾಗಿ ಅವಿತುಕೊಂಡಿವೆ. ಅವುಗಳನ್ನೆಲ್ಲ ಅರಿಯುವುದರ ಜೊತೆಗೆ ಜನತೆಗೆ ಪರಿಚಯಿಸುತ್ತಲೇ ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ಕೊಡಬೇಕಾಗಿದೆ ಎಂಬ ಕನಸುಗಳನ್ನು ತುಂಬಿಕೊಂಡು ದುಡಿಯುತ್ತಿರುವ ಸಂಘಟನೆಗಳು ಬೇಕಾದಷ್ಟಿವೆ.
ಇಷ್ಟಂತೂ ಸತ್ಯ. ಒಮ್ಮಮ್ಮೆ ಭಾವನಾತ್ಮಕವಾಗಿ ಅನ್ನಿಸುವುದು, ಈ ಎಲ್ಲ, ಜಾತಿ, ಧರ್ಮ, ಭಾಷೆ ಮತ್ತು ಮನುಷ್ಯರ ಬಣ್ಣದಲ್ಲಿ ಏರುಪೇರು ಇದ್ದರೂ, ಜಗತ್ತಿಗೆಲ್ಲ ಸೈನ್ಯವಿಲ್ಲದ ಒಂದೇ ಆಡಳಿತವಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು. ಹೀಗೆ ಯೋಚನಾ ಲಹರಿಯಲ್ಲಿರುವಾಗಲೇ ಬಹಳಷ್ಟು ಅಮೆರಿಕದ ಗೆಳೆಯರು ಕೇಳಿದ್ದರು ಸಂತೋಷದಿಂದ ‘ಗ್ರಾಂಡ್ ಫಾದರ್ ವೌಂಟೈನ್’ ಪ್ರದೇಶ ನೋಡಿ ಬಂದಿದ್ದಕ್ಕೆ, ಶೀನಾಥ ಗೌಡರಂತೂ ಆಯಾಸವಿಲ್ಲದವರಂತೆ ಕಾರನ್ನು ಓಡಿಸಿದ್ದರು ಆರುನೂರು ಮೈಲಿಗಿಂತ ಹೆಚ್ಚಾಗಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top