ಬೆಳ್ಳೆ ರಾಮಚಂದ್ರರಾಯರ ‘ರಾಯರು ಕಂಡ ರಂಗು’ | Vartha Bharati- ವಾರ್ತಾ ಭಾರತಿ

--

ಬೆಳ್ಳೆ ರಾಮಚಂದ್ರರಾಯರ ‘ರಾಯರು ಕಂಡ ರಂಗು’

ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪರಿಶ್ರಮವನ್ನು ಗೈದ ಮತ್ತು ಯಶಸ್ಸನ್ನು ಕಂಡವರು ವಿರಳ. ವಕೀಲ ವೃತ್ತಿಯೇ ಒಂದು ಬಂಗಾರದ ಪಂಜರ. ಅದನ್ನು ಮೀರುವುದು ಸುಲಭಸಾಧ್ಯವಲ್ಲ. ಆದರೂ ಅದನ್ನು ಮೀರಿ ಪ್ರವೃತ್ತಿಪರವಾಗಿ ಬೆಳೆದವರು ಬೆರಳೆಣಿಕೆಯವರು. ಬೆಳ್ಳೆ ರಾಮಚಂದ್ರರಾಯರು ಅಂತಹ ವೈಶಿಷ್ಟ್ಯಪೂರ್ಣ ಶ್ರೇಷ್ಠರು. 1953ರಲ್ಲಿ ಪ್ರಕಟಗೊಂಡ ಈ ಕಾದಂಬರಿ ಚಿರವಿರಹಿಯಂತೆ ಕನ್ನಡ ಸಾಹಿತ್ಯದ ಮಹತ್ವದ ಮೈಲಿಗಲ್ಲುಗಳಲ್ಲೊಂದು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯಶಸ್ವೀ ವಕೀಲರಾಗಿ ಸೇವೆ ಸಲ್ಲಿಸಿದ ಕೀರ್ತಿಶೇಷ ಬೆಳ್ಳೆ ರಾಮಚಂದ್ರರಾಯರ ‘ಚಿರವಿರಹಿ’ ಕೃತಿಯ ಕುರಿತು 1962ರಷ್ಟು ಹಿಂದೆಯೇ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ತಮ್ಮ ಯುಗಧರ್ಮ ಹಾಗೂ ಸಾಹಿತ್ಯದರ್ಶನವೆಂಬ ಕೃತಿಯಲ್ಲಿ ಹೀಗೆ ಬರೆದಿದ್ದರು:

‘‘ಬೆಳ್ಳೆ ರಾಮಚಂದ್ರರಾಯರ ‘ಚಿರವಿರಹಿ’ಯಲ್ಲಿ ಈ ಲಕ್ಷಣಗಳನ್ನು* ಕಾಣಬಹುದಾಗಿದೆ. ಮೊದಲನೆಯ ನೋಟಕ್ಕೆ ಕಾದಂಬರಿ ಪರಿಪೂರ್ಣವಾಗಿದೆಯೆಂದೇ ತೋರುತ್ತದೆ. ವಕೀಲ ರಾಘವೇಂದ್ರರಾಯರ ಹೆಂಡತಿಯಾದ ಮಾಲತಿ, ಗಂಡನ ಸ್ನೇಹಿತನಾದ ಗೋಪಿನಾಥನನ್ನು ಕ್ರಮೇಣ ಪ್ರೀತಿಸತೊಡಗುತ್ತಾಳೆ. ಚಿಕ್ಕ ವಯಸ್ಸಿನಲ್ಲಿಯೇ ಹೆಂಡತಿಯನ್ನು ಕಳೆದುಕೊಂಡು ಮಗಳ ಆಟಪಾಟಗಳಲ್ಲಿ ಎದೆಯ ದುಃಖವನ್ನು ಮರೆತಿರುವ ಗೋಪಿನಾಥ ಒಂದು ದುರ್ಬಲ ಕ್ಷಣದಲ್ಲಿ ಮಾಲತಿಗೆ ಮರುಳಾಗುತ್ತಾನೆ. ಪರಿಚಯ ಸ್ನೇಹವಾಗಿ, ಕೊನೆಗೆ ಪ್ರೀತಿಯಲ್ಲಿ ಪರ್ಯವಸಾನವಾಗುತ್ತದೆ. ಆದರೆ ಇಬ್ಬರಿಗೂ ಸಮಸ್ಯೆಯ ದುರಂತದ ಅರಿವಾಗಿ ತಂತಮ್ಮ ವಿವೇಕವನ್ನು ಜಾಗೃತಗೊಳಿಸಿ ದೂರವಾಗುತ್ತಾರೆ. ಸಂಸ್ಕಾರ ಅಂತಃಪ್ರವೃತ್ತಿಯನ್ನು ಗೆಲ್ಲುತ್ತದೆ. ಪ್ರೀತಿ ಅಂತಃಕರಣದ ಉಸಿರಾಗಿ ಮಾತ್ರ ಉಳಿಯುತ್ತದೆ. ಪಾತ್ರರಚನೆ, ವಾತಾವರಣ, ಮಿತವಾದ ಭಾವನಿರ್ಮಿತಿ ಇವುಗಳಿಂದ ಕಾದಂಬರಿ ಸುಂದರವಾಗಿಯೇ ಬಂದಿದೆ. ಆದರೆ ರಾಮಚಂದ್ರರಾಯರು ಪ್ರೀತಿಯ ಸಮಸ್ಯೆಯನ್ನು ತೀರ ಶಾಸ್ತ್ರೀಯವಾಗಿ, ತರ್ಕಶುದ್ಧವಾಗಿ ಬಿಡಿಸಿದಂತೆ ಕಾಣುತ್ತದೆ. ಅಂಥ ಪರಿಹಾರಕ್ಕೆ ಅನುಕೂಲವಾಗಲೆಂದೇ ಮಾಲತಿ-ಗೋಪಿನಾಥರ ಪಾತ್ರಗಳನ್ನು ಸುಸಂಸ್ಕೃತವಾಗಿ ಮಾಡಿರುವರೆಂಬ ಸಂಶಯ ಸುಳಿಯುತ್ತದೆ. ಆದರೆ ಮನೋಹರವಾದ ಕಥನ ಶೈಲಿ, ಸರಸವಿನೋದ ಹಾಗೂ ನಿರ್ದುಷ್ಟವಾದ ಪಾತ್ರಸೃಷ್ಟಿಯ ಮೂಲಕ ಕಾದಂಬರಿ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.’’

(*ಕುರ್ತಕೋಟಿಯವರು ಅನಕೃ, ತ.ರಾ.ಸು., ಕೃಷ್ಣಮೂರ್ತಿ ಪುರಾಣಿಕ, ಹೇಮಂತ, ಕಟ್ಟೀಮನಿ, ಮುಂತಾದವರ ಕಾದಂಬರಿಗಳನ್ನು ಅಷ್ಟೇ ಸ್ಥೂಲ ವಿಶ್ಲೇಷಣೆಯನ್ನು ಮಾಡುತ್ತ ‘ಅನಕೃ ಸಂಪ್ರದಾಯ’ವೆಂದು ಗುರುತಿಸುವ ಭಾವನಾವಶತೆ, ಸುಶಿಕ್ಷಿತತೆಗಳನ್ನು ಹೇಳುತ್ತ ‘‘ಬುದ್ಧಿ ಹಾಗೂ ಭಾವನೆಗಳಿಗೆ ಏನೋ ಒಂದು ದಣಿವು ಬಂದಂತಾಗಿ ಕಾದಂಬರಿ ಕೇವಲ ತಂತ್ರವನ್ನಷ್ಟೇ ಅವಲಂಬಿಸಿ ನಿಂತಿರುವುದು ಇಂಥ ಪ್ರಯೋಗಗಳಲ್ಲಿ ಕಂಡುಬರುತ್ತದೆ. ಇದೇ ಸಮಯದಲ್ಲಿ ಕಥಾವಸ್ತುವಿನ ಕೊರತೆ ಕಾಣಹತ್ತಿದ್ದರಿಂದ ಕಾದಂಬರಿಕಾರರು ಇದ್ದ ವಸ್ತುವಿಗೇ ಬೇರೊಂದು ಬಣ್ಣ ಸವರಿ ನೋಡಬೇಕಾಯಿತು. ಕಥನ ಶೈಲಿ ಈಗಾಗಲೇ ಹದವಾಗಿಬಿಟ್ಟಿರುವುದರಿಂದ ಅದರ ಚಿಂತೆಯೂ ಉಳಿದಿಲ್ಲ.’’ ಎಂದು ಹೇಳಿ ಬೆಳ್ಳೆಯವರ ಕೃತಿಯ ಕುರಿತು ತಮ್ಮ ಈ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಮುಂದೆ ಅವರು ‘‘ವ್ಯಾಸರಾಯ ಬಲ್ಲಾಳರ ಕಾದಂಬರಿಗಳೂ ಇದೇ ಮಾದರಿಯಾಗಿವೆ’’ ಎನ್ನುವಾಗ ಅವರ ಸಂಶಯಗಳನ್ನು ಒಪ್ಪುವುದು ಕಷ್ಟಕರವಾಗುತ್ತದೆ.) ತೀರ ಸಂಕ್ಷಿಪ್ತವಾಗಿ ಹೇಳಿದ್ದರಿಂದ ಇದನ್ನು ಒಂದು ಮಹತ್ವದ ಮೌಲ್ಯಮಾಪನವೆಂದು ಬಗೆಯಲಾಗದು. ಆದರೆ ಸಾಹಿತ್ಯದ ಅತ್ಯುತ್ತಮ ಮತ್ತು ಅತ್ಯುನ್ನತ ವಿಮರ್ಶೆಗೆ ಈ ಕೃತಿಯು ಪಾತ್ರವಾಗಿದೆಯೆಂಬುದರಿಂದಲೇ ಬೆಳ್ಳೆ ರಾಮಚಂದ್ರರಾಯರ ಶ್ರೇಷ್ಠತೆಯನ್ನು ಕಲ್ಪಿಸಿಕೊಳ್ಳಬಹುದು.

‘ಚಿರವಿರಹಿ’ ಕನ್ನಡದ ಮಹತ್ವದ ಕೃತಿಯೆಂಬುದನ್ನು ಒಪ್ಪಿಕೊಳ್ಳಲೇಬೇಕು. ಉಳಿದಂತೆ ಅದನ್ನು ವಿಮರ್ಶೆಯ ನಿಕಷಕ್ಕೆ ಒಡ್ಡಿ ಅದರ ವ್ಯಾಪ್ತಿ-ಮಿತಿಗಳನ್ನು ಗುರುತಿಸಬಹುದು. ಒಂದು ಮಹತ್ವದ ಕೃತಿಯನ್ನು ನೀಡಿದವರು ಮಹತ್ವದ ಲೇಖಕರು ಎಂದು ಒಪ್ಪಿಕೊಳ್ಳಬೇಕಷ್ಟೇ?

ಬೆಳ್ಳೆ ರಾಮಚಂದ್ರರಾಯರ ಇನ್ನೊಂದು ಕಾದಂಬರಿ ‘ರಾಯರು ಕಂಡ ರಂಗು’. ಚಿರವಿರಹಿಯ ಬೆಳಕಿನಲ್ಲಿ ಈ ಕೃತಿಯ ಪ್ರಖರತೆ ಕಡಿಮೆಯಾಗಿ ಕಾಣಬಹುದಾದರೂ ಇದೂ ಕನ್ನಡದ ಒಂದು ಮಹತ್ವದ ಕೃತಿಯಾಗಿ ಈಗಲೂ ಕಾಣಿಸುತ್ತದೆ.

‘ರಾಯರು ಕಂಡ ರಂಗು’ 1947-48ರ ಕಾಲದ ಕಾದಂಬರಿ. ಸ್ವಾತಂತ್ರ್ಯ ಸಿಕ್ಕಿದಾಗಿನ ಕರಾವಳಿಯ ಒಂದು ಪಟ್ಟಣವಾದ ಮುತ್ತೂರಿನ ಬದುಕನ್ನು ಪಂಥ-ಸಿದ್ಧಾಂತರಹಿತವಾಗಿ ಪರಿಚಯಿಸುತ್ತದೆ. ‘ಚಿರವಿರಹಿ’ ಕಾದಂಬರಿಯ ರಾಘವೇಂದ್ರರಾಯರಂತೆ ಈ ಕಾದಂಬರಿಯ ನಾಯಕರಾದ ರಂಗರಾಯರೂ ವಕೀಲರೇ. ವೃತ್ತಿಯಲ್ಲಿ ಮುಳುಗಿದವರು; ‘ಅವರ ಆಫೀಸಿನಲ್ಲಿ ಅಗ್ರಪೀಠದಲ್ಲಿ ಕುಳಿತು ಸುತ್ತಲು ಕಣ್ಣು ಹಾಯಿಸುವುದನ್ನೂ, ಕೆಲಸಾವಳಿಯನ್ನು ನಿಭಾಯಿಸುವುದನ್ನೂ ನೋಡಿದರೆ ಹಾರ ತುರಾಯಿ, ಖಡ್ಗ ಕಿರೀಟಗಳಿಲ್ಲದೆ ಒಡ್ಡೋಲಗ ಮಾಡುವುದು ಸಾಧ್ಯವಿದೆ ಎಂಬುದು ವೇದ್ಯವಾಗುವುದು.’ ಸ್ವಪ್ರಯತ್ನದಿಂದ ಮೇಲಕ್ಕೇರಿ ಅಲ್ಲಿ ಭದ್ರವಾಗಿ ಕುಳಿತವರು. ಉಳಿದಂತೆ ವಿಚಾರಪರರು. ನಗರ ಸಭೆಯ ಉಪಾಧ್ಯಕ್ಷರು. ನಾಸ್ತಿಕರೂ ಹೌದು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ದೇಶದ ಬಗ್ಗೆ ರಂಗರಾಯರಿಗೆ ಸ್ಪಷ್ಟತೆಯಿದೆ. ದೇಹ ಇರುವವರೆಗೆ ಡಾಕ್ಟರರ ಸಂಬಂಧ ಹೇಗೆ ತಪ್ಪಿದ್ದಲ್ಲವೋ ಆಸ್ತಿಪಾಸ್ತಿ ಇರುವ ವರೆಗೆ ವಕೀಲರ ಸಂಬಂಧವು ತಪ್ಪಿದ್ದಲ್ಲ ಎನ್ನುವುದು ರಂಗರಾಯರ ನಿಲುವು.

ರಂಗರಾಯರ ತಂದೆ ರಾಜಾರಾಯರು ತೀರ್ಥಯಾತ್ರೆ ಮಾಡುವವರು. ತನ್ನ ಮಗನೂ ಇಂತಹ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕೆಂದು ಮರುಗುವವರು. ಪರಂಪರೆಯನ್ನು ಗೌರವಿಸುವ ಸಾಂಸ್ಕೃತಿಕ ಆಸಕ್ತಿಯ ತಮ್ಮ ತಂದೆ ರಾಜಾರಾಯರಿಗಿಂತ ರಂಗರಾಯರು ಭಿನ್ನ ಪ್ರಕೃತಿಯವರು. ಮನೆಯಲ್ಲೇ ಭಿನ್ನ ಚಿಂತನೆಯ ತಂದೆ-ಮಗ. ಪತಿ-ಪತ್ನಿಯೂ ಹೀಗೆಯೇ. ಪತ್ನಿ ರಮಾಬಾಯಿ. ಆಕೆಯೋ ಸಂಸಾರದಲ್ಲಿ ಮುಳುಗಿದವಳು. ರಮಾಬಾಯಿ ಗಂಡನ ನೆರಳಾಗಿ ಬದುಕಬೇಕಾದ ಅನಿವಾರ್ಯತೆಯಲ್ಲೂ ಸ್ವಂತವಾಗಿರಲು ಇಷ್ಟಪಡುವವಳು. ಧರ್ಮಶ್ರದ್ಧೆಯವಳು. ಕಾಯಿಲೆಗೆ ಔಷಧಿ ಮಾಡುವಾಗಲೂ ಸಮಾಧಾನವಾಗದೆ ಜ್ಯೋತಿಷ್ಯರನ್ನು ಕರೆಯಿಸಿ ಜಾತಕ ತೋರಿಸುವವಳು. ರಂಗರಾಯರು ಮೂವರು ಮಕ್ಕಳೊಂದಿಗ. ರಂಗಮಹಲ್ ಎಂಬ ಅವರೇ ಕಟ್ಟಿಸಿದ ಭರ್ಜರಿ ಬಂಗಲೆ ಅವರ ನಿವಾಸ. ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಮಾಜದ ಪ್ರತಿಷ್ಠಿತರೊಂದಿಗಷ್ಟೇ ವ್ಯವಹಾರ; ಸಹವಾಸ.

ಒಂದು ವಿಚಿತ್ರ ಸಂದರ್ಭದಲ್ಲಿ ಅವರಿಗೆ ಕಕ್ಷಿದಾರಳಾಗಿ ಆಗಮಿಸಿದ ಪ್ರಿಯದರ್ಶಿನಿಯೆಂಬ ನಿಗೂಢ ವ್ಯಕ್ತಿತ್ವದ ಆಕರ್ಷಕ ಸ್ತ್ರೀಯ ಪರಿಚಯವಾಗುತ್ತದೆ. ಅವಳು ಸೋಮಣ್ಣ ಎಂಬವನ ಮಗಳು; ಮಾಚು ಎಂಬ ಕೊಡಗಿನ ಹುಡುಗಿ. ಮುಂಬೈಯಲ್ಲಿ ರೆಡ್ ಕ್ರಾಸ್ ದಾದಿಯಾಗಿ ಕೆಲಸಮಾಡಿಕೊಂಡಿದ್ದು ಈಗ ತನ್ನ ತಂದೆಗಾಗಿ ಮುತ್ತೂರಿಗೆ ಬಂದವಳು. ಅವಳ ಪರಿಚಯ ಏಕಮುಖವಾಗಿ ಬೆಳೆದು ಅವಳ ಕುರಿತು ರಂಗರಾಯರು ವಿಹ್ವಲರಾಗುತ್ತಾರೆ. ಒಳಗಿನ ನೋವು ದಾರುಣವಾಗುತ್ತ ಬರುತ್ತದೆ. ತನ್ನ ನೀರಸ ದಾಂಪತ್ಯವೆಂದು ಅವರು ಬಗೆದಿದ್ದ ಸಂಬಂಧವನ್ನು ಈ ಹೊಸ ಪರಿಚಯವು ಮರೆಸಿ ಹೊಸ ಜಗತ್ತನ್ನು ಸೃಷ್ಟಿಸೀತು ಎಂಬ ನಿರೀಕ್ಷೆಯಲ್ಲಿ ಅವರು ವಿಹರಿಸುತ್ತಾರೆ. ಅದು ಮನೋದೌರ್ಬಲ್ಯದ ನಡವಳಿಕೆ ಮತ್ತು ಸ್ಥಿತಿಯನ್ನು ಇನ್ನೇನು ತಲುಪಿತು ಎನ್ನುವಷ್ಟರಲ್ಲಿ ಅವಳು ರಂಗರಾಯರನ್ನು ಎಚ್ಚರಿಸುತ್ತಾಳೆ. ಪ್ರಿಯದರ್ಶಿನಿ ರಂಗರಾಯರ ತಮ್ಮ ಮೇಜರ್ ವಾಸುವಿನಲ್ಲಿ ಅನುರಕ್ತಳು. ಅವನನ್ನು ಸದ್ಯದಲ್ಲೇ ಮದುವೆಯಾಗುವವಳು. ಈ ವಿಚಾರ ಬಹಿರಂಗವಾದಂದಿನಿಂದ ರಂಗರಾಯರ ಬದುಕು ಹೊಸ ಮಜಲನ್ನು ಏರುತ್ತದೆ. ತನ್ನ ಬಗ್ಗೆ ತಾನೇ ಸಂಕೋಚಪಡುವಂತಾಗುತ್ತದೆ. ಅನಿರೀಕ್ಷಿತವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಆರೆಸ್ಸೆಸ್ ಸಭೆಯೊಂದರಲ್ಲಿ ಭಾಗವಹಿಸುತ್ತಾರೆ. ಗಾಂಧಿ ಹತ್ಯೆ ಸಂಭವಿಸಿ ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸುವಾಗ ರಂಗರಾಯರೂ ಜೈಲು ಸೇರುತ್ತಾರೆ. ಆದರೆ ಅಲ್ಲಿನ ಅಂಧಕಾರದಲ್ಲಿ ಅವರಿಗೆ ಮುತ್ತೂರಿನವನೇ ಆದ ಮತ್ತು ಅವರಿಗೆ ಆ ವರೆಗೆ ಒಂದಿಷ್ಟೂ ಹಿಡಿಸದ ರವಿಕುಮಾರನೆಂಬ ಪತ್ರಕರ್ತನ ಮೂಲಕ ಹೊಸ ಬೆಳಕು ಲಭಿಸುತ್ತದೆ. ‘‘ಆ ಕಾರಾಗೃಹದ ಕತ್ತಲಲ್ಲಿ ಇವರೊಬ್ಬರದೇ ಬೆಳಕು, ನನಗೆ’’ ಎಂದು ರಂಗರಾಯರು ಹೇಳಿದರೆ ಆತ ‘‘ನಿಜವಾಗಿ ನೋಡಿದರೆ (ರಂಗರಾಯರು) ಕಂಡದ್ದು ಅವರ ಸ್ವಂತ ಬೆಳಕನ್ನೇ. ನನ್ನ ಮೋರೆಯ ಹಿನ್ನೆಲೆಯಲ್ಲಿ ಅದು ಎದ್ದು ಕಂಡಿತು, ಅಷ್ಟೇ.’’ ಎನ್ನುತ್ತಾನೆ. (ಪ್ರಿಯದರ್ಶಿನಿಯ ಪ್ರಯತ್ನದಿಂದಲೇ) ಬಿಡುಗಡೆಯಾಗಿ ಹೊರಬರುವಾಗ ಅವರು ಹೊಸ ಮನುಷ್ಯರಾಗುತ್ತಾರೆ. ಅಲ್ಲಿಂದ ಮತ್ತೆ ರಂಗರಾಯರಿಗೆ ತಮ್ಮ ಶ್ರೀಮಂತಿಕೆಯ ಬದಲಾಗಿ ಯಾವುದಾದರೊಂದು ಸತ್ಕಾರ್ಯ ತನ್ನಿಂದಾಗಬೇಕು ಎಂದು ಅನ್ನಿಸತೊಡಗುತ್ತದೆ. ‘‘ಒಳಗಿನ ಕನಸೊಂದು ಕರೆಯುತ್ತಿರುವಾಗ ಹೊರಗಿನ ಕೂಗು ಯಾರಿಗೆ ತಾನೇ ಕೇಳಿಸೀತು?’’ ಎಂಬ ಭಾವ ಉದಯಿಸುತ್ತದೆ. ‘‘ಈಗ ಪರ್ವತದ ಶಿಖರ ಕಾಣಿಸುತ್ತಿದೆ. ಆದರೆ ಮೇಲೇರುವ ಮೆಟ್ಟಲುಗಳು ಕಾಣಿಸುತ್ತಿಲ್ಲ.’’ ಹಿಂದೆ ವಾಗ್ವೈಖರಿಗೆ ಮರುಳಾಗುತ್ತಿದ್ದ ರಂಗರಾಯರಿಗೆ ಈಗ ಥಿಯೊಸೋಫಿಕಲ್ ತತ್ವಜ್ಞಾನವೂ ಆತ್ಮಜ್ಞಾನದ ಅಮಲಿನಂತೆ ಕಾಣುತ್ತದೆ. ಕೊನೆಗೆ ವಿಕಾಸದ ದಾರಿ ಸಿಕ್ಕ ರಂಗರಾಯರು ಸಾರ್ವಜನಿಕ ಆಸ್ಪತ್ರೆಗೆ ತಮ್ಮ ರಂಗಮಹಲನ್ನು ಧಾರೆಯೆರೆಯುತ್ತಾರೆ. ಇಷ್ಟರಲ್ಲಿ ಪ್ರಿಯದರ್ಶಿನಿಯ ತಂದೆ ಮರಣಹೊಂದಿ ಮನೆಯನ್ನು ಖಾಲಿಮಾಡಿ ಹೋಗುತ್ತಾಳೆ. ಕಾಕತಾಳೀಯವೆಂಬಂತೆ ಪ್ರಿಯದರ್ಶಿನಿ ಮೇಜರ್ ವಾಸುವನ್ನು ವಿವಾಹವಾಗಿ ದಿಲ್ಲಿಯಲ್ಲೇ ಉಳಿಯುತ್ತಾಳೆ. ಅವಳ ಮನೆ ಶಾಂತಿ ನಿಲಯ. ಅದೀಗ ಖಾಲಿಯಾಗಿದ್ದು ಅಲ್ಲಿ ರಂಗರಾಯರು ಸಂಸಾರಸಹಿತ ವಾಸಮಾಡುತ್ತಾರೆ. ರಂಗರಾಯರು ಈಗ ಪರಿವರ್ತನೆಗೊಂಡ ಮನುಷ್ಯ. ರಮಾಬಾಯಿಗೆ ಎಲ್ಲದಕ್ಕೂ ಈ ಮನೆಯೇ ಸುಖ ಅನಿಸುತ್ತದೆ. ರಾಜಾರಾಯರ ಸಾವಿನೊಂದಿಗೆ ಕಾದಂಬರಿ ಮುಗಿಯುತ್ತದೆ. ವಕೀಲರೊಬ್ಬರು ತಮ್ಮ ವೃತ್ತಿಯನ್ನು ಇಷ್ಟೊಂದು ವಸ್ತುನಿಷ್ಠವಾಗಿ ಕಾಣಬಲ್ಲರು ಎಂಬಂತೆ ಇಲ್ಲಿನ ವೃತ್ತಿದರ್ಶನವಿದೆ. ಬೆಳ್ಳೆ ರಾಮಚಂದ್ರರಾಯರು ಸ್ವತಃ ವಕೀಲರಾಗಿದ್ದುದರಿಂದ ಮತ್ತು ಅಪಾರ ಸಾಂಸ್ಕೃತಿಕ, ಸಾಹಿತ್ಯಕ, ಸಾಮಾಜಿಕ ಆಸಕ್ತಿಗಳನ್ನು ಹೊಂದಿದ್ದರಿಂದ ಅವರಿಗೆ ವೃತ್ತಿಪರ ವಕೀಲರೊಬ್ಬರ ಜೀವನದರ್ಶನವನ್ನು ಇಷ್ಟೊಂದು ನವಿರಾಗಿ ಮೂಡಿಸಲು ಸಾಧ್ಯವಾಗಿದೆ. ಕಾದಂಬರಿಯು ಸ್ವಾತಂತ್ರ್ಯಪೂರ್ವ ಘಟನೆಗಳನ್ನು ಅಷ್ಟಾಗಿ ಹೊಂದಿಲ್ಲ. ಅದರ ಕಾಲ-ಸಂದರ್ಭ ಎರಡೂ ಸ್ವಾತಂತ್ರ್ಯೋತ್ತರದ ತಕ್ಷಣದ ಜರೂರುಗಳು. ಸ್ವಾತಂತ್ರ್ಯದ ರೋಮಾಂಚನವೊಂದು ಕಡೆ; ಹೊಸ ಸಮಾಜವನ್ನು ಕಟ್ಟುವ ಹುಮ್ಮಸ್ಸು ಇನ್ನೊಂದೆಡೆ; ಸಾಮಾಜಿಕ ವ್ಯತ್ಯಸ್ತತೆಯ ದುರಂತ ಸನ್ನಿವೇಶವಿನ್ನೊಂದೆಡೆ. ಹೀಗೆ ಪುಟ್ಟ ಪಟ್ಟಣದ ಒಂದು ಭೂಮಿಕೆಯಲ್ಲಿ ಕಾದಂಬರಿ ಅಡತಡೆಗಳಿಲ್ಲದೆ ವಿವರಗಳನ್ನು ತುಂಬಿಕೊಂಡು ಸಾಗುತ್ತದೆ. ಮುತ್ತೂರು ಎಂಬ ಪಟ್ಟಣ ಹಲವು ಘಟನೆಗಳಿಗೆ ಹಲವು ಬಗೆಯ ಜನರಿಗೆ ಸಾಕ್ಷಿಯಾಗುತ್ತದೆ. ನವನಗರದ ಎಲ್ಲ ಲಕ್ಷಣಗಳಿದ್ದರೂ ‘‘ಈ ವಿವಿಧ ವೈಭವದ ಮಗ್ಗುಲಲ್ಲೇ, ದೃಷ್ಟಿದೋಷದ ಪರಿಹಾರಕ್ಕೆ ಎಂಬಂತೆ ಪಟ್ಟಣದ ಕೆಲವೆಡೆಗಳಲ್ಲಿ ಕೊಳೆ ತುಂಬಿದ ಕತ್ತಲ ಸಂದುಗಳು, ನಾರುವ ಓಣಿಗಳು, ನಿರ್ದಯ ಬಾಳುವೆಯ ತುಳಿತದಿಂದ ಕುಲಗೆಟ್ಟ ನರಪೇತಗಳು, ಇವೂ ಇದ್ದವು.’’ ಹೀಗೆ ಹೇಳಿದವರೇ ‘‘ಆದರೆ ಇಂಥ ಕಣ್ಣುಬೇನೆಗಳು ಅನಿವಾರ್ಯ ಅನಿಷ್ಟಗಳು ಇಲ್ಲದ ನಗರ ಯಾವುದಿದೆ, ಪ್ರಪಂಚದಲ್ಲಿ? ಬೆಳಕಿಗೆ ಕತ್ತಲು, ಸುಖವಿದ್ದಲ್ಲಿ ದುಃಖ ಇದ್ದೇ ತೀರಬೇಕಲ್ಲವೆ? ಲೋಪದೋಷಗಳನ್ನೇ ನೋಡುತ್ತ ಒಂದು ವ್ಯಕ್ತಿಯ ಅಥವಾ ಒಂದು ನಾಡಿನ ಯೋಗ್ಯತೆಯನ್ನು ಅಳೆಯಬಹುದೆ?’’ ಎಂದು ವ್ಯಂಗ್ಯ-ವಿಷಾದದಲ್ಲಿ ಹೇಳುತ್ತಾರೆ. ಇಂತಹ ಪಟ್ಟಣದಲ್ಲಿ ರಂಗರಾಯರ ಬದುಕು. ‘‘ಅವರ ಜಿೀವವಾಹಿನಿಗೂ ಕಾಲವಾಹಿನಿಗೂ ಸ್ಪರ್ಧೆ.’’

ಕಾದಂಬರಿಯ ನಡೆ ಸುಲಲಿತ. ಸಂಭಾಷಣೆಯೂ ವಿವರಣೆಯೂ ನಿರೂಪಣೆಯೂ ಹಾಗೆಯೇ: ಪರಿಣಾಮಕಾರಿ; ಪ್ರಭಾವಶಾಲಿ. ರಂಗರಾಯರ ಬದುಕು ತನ್ನ ಕೃತಕ ಪಂಜರವನ್ನು ಕಳಚಿಕೊಂಡು ಹೊಸ ಹಾದಿಯನ್ನು ಹಿಡಿದಾಗಲೂ ಅದೊಂದು ವಿಶೇಷವೆಂಬಂತೆ ನಿರೂಪಣೆಯಿಲ್ಲ. ಬದಲಾಗಿ ‘‘ಈ ಮಧ್ಯೆ ಲೋಕ ಅದರ ಪಾಡಿಗೆ ಅದು ಸಾಗುತ್ತಿತ್ತು. ರಂಗರಾಯರ ಗೊಡವೆಯಿಲ್ಲದೆ, ರಂಗರಾಯರಂಥ ಆತ್ಮಸಾಕ್ಷಿಯ ಭೂತಗ್ರಸ್ತರಾದ ಯಾರ ಗೊಡವೆಯೂ ಇಲ್ಲದೆ.’’ ಎನ್ನುತ್ತಾರೆ. ಕಾದಂಬರಿಯ ರಂಗು ಜೀವನದಲ್ಲಿ ಕಂಡ ರಂಗು. ಕಣ್ತೆರೆದು ಕಂಡ ಸಮಾಜಮುಖಿ ಬಣ್ಣ.

ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪರಿಶ್ರಮವನ್ನು ಗೈದ ಮತ್ತು ಯಶಸ್ಸನ್ನು ಕಂಡವರು ವಿರಳ. ವಕೀಲ ವೃತ್ತಿಯೇ ಒಂದು ಬಂಗಾರದ ಪಂಜರ. ಅದನ್ನು ಮೀರುವುದು ಸುಲಭಸಾಧ್ಯವಲ್ಲ. ಆದರೂ ಅದನ್ನು ಮೀರಿ ಪ್ರವೃತ್ತಿಪರವಾಗಿ ಬೆಳೆದವರು ಬೆರಳೆಣಿಕೆಯವರು. ಬೆಳ್ಳೆ ರಾಮಚಂದ್ರರಾಯರು ಅಂತಹ ವೈಶಿಷ್ಟ್ಯಪೂರ್ಣ ಶ್ರೇಷ್ಠರು. 1953ರಲ್ಲಿ ಪ್ರಕಟಗೊಂಡ ಈ ಕಾದಂಬರಿ ಚಿರವಿರಹಿಯಂತೆ ಕನ್ನಡ ಸಾಹಿತ್ಯದ ಮಹತ್ವದ ಮೈಲಿಗಲ್ಲುಗಳಲ್ಲೊಂದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top