ಹಳ್ಳಿ ಬದುಕಿನ ಪ್ರಾಣಿ ಕತೆಗಳು!

-

ನಿಖಿಲ್ ಕೋಲ್ಪೆ

ಹಿರಿಯ ಪತ್ರಕರ್ತರಾಗಿರುವ ನಿಖಿಲ್ ಕೋಲ್ಪೆ ಬದುಕಿನ ಸೂಕ್ಷ್ಮಗಳನ್ನು ತನ್ನದಾಗಿಸಿಕೊಂಡು ಬರೆಯುವವರು. ಈ ನೆಲದ ಸಾಂಸ್ಕೃತಿಕ ಸೊಗಡನ್ನು ತನ್ನ ಬರಹಗಳಲ್ಲಿ ತುಂಬಿಕೊಂಡವರು. ಜನವಾಹಿನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ದುಡಿದಿರುವ ಇವರು, ಹಲವು ವೆಬ್‌ಸೈಟ್‌ಗಳಲ್ಲಿ ಅಂಕಣಬರಹಗಳನ್ನು ಬರೆಯುತ್ತಿದ್ದಾರೆ.

‘‘ಹೋಯ್! ಬೇಗ ಓಡಿಬನ್ನಿರಾ! ಬೇಗ ಬೇಗ!’’ ಒಂದು ಬೇಸಗೆಯ ಸಂಜೆ ಹೊತ್ತು- ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾನು ಮತ್ತು ನನ್ನ ತಮ್ಮ, ಮನೆಯೆದುರು ಇರುವ, ವಿಶಾಲ ಬೈಲಿನ ಆಚೆ ಹರಿಯುವ ತೋಡಿನ ಅಂಚಿನಲ್ಲಿ ನಿಂತು ನಮ್ಮ ತಂದೆ ಉತ್ತೇಜಿತರಾಗಿ ಕರೆಯುತ್ತಿದ್ದರು. ಇಬ್ಬರೂ ಓಡಿದೆವು. ಅಲ್ಲಿ ಹರಿಯುವ ತೋಡಿಗೆ ಹತ್ತಿರದ ಮೂರ್ನಾಲ್ಕು ಮನೆಯವರು ಮಣ್ಣಿನ ಕಟ್ಟೆ ಕಟ್ಟಿ ನೀರು ನಿಲ್ಲಿಸುವುದು ಪ್ರತೀ ವರ್ಷದ ಕಾಯಕ. ಹೋಗಿ ನೋಡುವುದೇನು!. ನೀರಿನ ಅಂಚಿನಲ್ಲಿ ಒಂದು ಭಾರೀ ಗಾತ್ರದ ಕೇರೆ ಹಾವು ನೀರಿನೊಳಗಿದ್ದ ಅಷ್ಟೇ ದೊಡ್ಡ ಗಾತ್ರದ ‘ಒಳ್ಳೆ’ ಎಂದು ಕರೆಯುವ ಹಾವನ್ನು ನುಂಗಲು ಹೊರಟಿದೆ. ತಾನೇನು ಕಡಿಮೆ ಎಂಬಂತೆ ಈ ಒಳ್ಳೆ ಹಾವು ಕೇರೆಯನ್ನು ಹಿಡಿದುಕೊಂಡಿದೆ.! ನೀರಿನೊಳಗೆ ಬಲಶಾಲಿಯಾದ ‘ಒಳ್ಳೆ’ ಕೇರೆಯನ್ನು ನೀರಿಗೆಳೆಯಲು ಹವಣಿಸುತ್ತಿದ್ದರೆ, ಕೇರೆ ಅದನ್ನು ದಡಕ್ಕೆ ಎಳೆಯಲು ಹೊರಳಾಡುತ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಈ ಉಗ್ರ ಕಾದಾಟ ನೋಡಿದೆವು. ಮುಸ್ಸಂಜೆ ದಾಟಿ ಕತ್ತಲಾಗುವ ತನಕ ಯಾರಿಗೂ ಜಯ ಸಿಗುವ ಸಾಧ್ಯತೆ ಕಂಡು ಬರಲಿಲ್ಲ ! ನಾವು ಬಾಲಕರಿಬ್ಬರಿಗೆ ಬೆರಗು!

ಅನಿವಾರ್ಯವಾಗಿ ಮನೆಗೆ ಬಂದೆವು. ಆದರೆ ನನ್ನ ತಲೆಯಲ್ಲಿ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಅಷ್ಟು ದೊಡ್ಡ ಗಾತ್ರದ ‘ಕೇರೆ’ ಹಾವನ್ನಾಗಾಲೀ ‘ಒಳ್ಳೆ’ ಎಂಬ ನೀರು ಹಾವನ್ನಾಗಲೀ ನಾನು ಈ ತನಕ ಮತ್ತೆ ಕಂಡಿಲ್ಲ. ಬಹುಷ ಎಂಟು-ಒಂಬತ್ತು ವರ್ಷದ ನನ್ನ ಪುಟ್ಟ ಕಣ್ಣುಗಳಿಗೆ ಆ ಹಾವುಗಳು ಭಾರೀ ದೊಡ್ಡದಾಗಿ ಕಂಡಿದ್ದವೋ- ಈಗ ಹೇಳುವುದು ಕಷ್ಟ. ಆದರೆ ಪ್ರಶ್ನೆ ಮಾತ್ರ ಕಗ್ಗಂಟಾಗಿದೆ. ಎರಡು ಹಾವುಗಳು ಬಾಲದ ಕಡೆಯಿಂದ ಒಂದನ್ನೊಂದು ನುಂಗಲು ಆರಂಭಿಸಿದರೆ ಅದು ಅಂತ್ಯ ಕಾಣುವುದು ಹೇಗೆ ? ಯಾವ ಹಾವು ಯಾವುದರ ಹೊಟ್ಟೆ ಸೇರುತ್ತದೆ? ತನ್ನನ್ನು ತಾನೇ ತಿಂದಂತಾಗಲಿಲ್ಲವೇ? ಮುಂದೊಂದು ದಿನ ನಾನು ಮುಂಬೈಗೆ ಹೋಗಿ ನನ್ನ ದೊಡ್ಡಪ್ಪ ಎಸ್.ಬಿ.ಕೋಲ್ಪೆಯವರ ವಾರ ಪತ್ರಿಕೆ ಸೇರಿದಾಗ ವಿಶೇಷಾಂಕವೊಂದಕ್ಕೆ ಕೋಮುವಾದದ ಕುರಿತು ಒಂದು ವ್ಯಂಗ್ಯ ಚಿತ್ರ ರಚಿಸುವಂತೆ ಹೇಳಿದರು. ನಾನು ಎರಡು ಹಾವುಗಳು ಒಂದನ್ನೊಂದು ನುಂಗುವ ಚಿತ್ರ ಬರೆದು, ‘How it ends' ಎಂದೇನೋ ಶೀರ್ಷಿಕೆ ಕೊಟ್ಟಿದ್ದೆ. ನನ್ನ ಈ ‘ಭಯಾನಕ’ ಐಡಿಯಾವನ್ನು ಎಲ್ಲರೂ ಹೊಗಳಿದಾಗ ನನಗೆ ಹೆಮ್ಮೆಯಾಗಿತ್ತು. ಆದರೆ ಈ ಕಲ್ಪನೆ ಭಾರೀ ಪುರಾತನವಾಗಿದ್ದು, ಅದು ಅನಂತಕ್ಕೆ ಸಂಕೇತವಾಗಿದೆ ಎಂದು ಗೊತ್ತಾದದ್ದು ಯಾಕೋ ಈ ಘಟನೆ ನೆನಪಾಗಿ ಗೂಗಲ್‌ನಲ್ಲಿ ಸರ್ಚ್ ಕೊಟ್ಟಾಗ! ಸಾವು ಬದುಕಿನ ಈ ಹೋರಾಟ ನಿರಂತರ ಅಲ್ಲವೇ?

ಬದುಕಿ ಉಳಿಯುವ ಪ್ರಕೃತಿಯ ಹೋರಾಟದಂತೆಯೇ ಬದುಕಿಸಲು ಯತ್ನಿಸುವ ಮನುಷ್ಯ ಪ್ರಯತ್ನವೂ ಕೆಲವೊಮ್ಮೆ ಹೇಗೆ ವಿಫಲವಾಗುತ್ತದೆ ಎಂಬುದಕ್ಕೆ ಉದಾಹರಣೆಯಾದ ಇನ್ನೊಂದು ಘಟನೆ ಸರಿ ಸುಮಾರು ಇದೇ ಹೊತ್ತಿಗೆ ನಡೆಯಿತು. ಮೇಲೆ ಹೇಳಿದ ನೀರಿನ ತೋಡಿನಾಚೆ ನಮಗೊಂದು ಪುಟ್ಟ ತೋಟವಿತ್ತು. ಅದರಲ್ಲಿ ಕೆಲವು ಅಡಕೆ, ಬಾಳೆ ಮತ್ತು ಕೋಕೋ ಗಿಡಗಳಿದ್ದವು. ಒಂದು ಬೆಳಗ್ಗೆ ನಮ್ಮ ತಂದೆಯವರು ಒಂದು ಅಚ್ಚರಿಯನ್ನು ತಂದರು. ಅದೊಂದು ಪುಟ್ಟ ಬಾವಲಿಯಾಗಿತ್ತು. ಬಾವಲಿ ನಮಗೇನೋ ಹೊಸದಲ್ಲ. ಮುಸ್ಸಂಜೆ ಹೊತ್ತಿಗೆ ಸಂಚಾರ ಹೊರಡುವ ರಕ್ಕಸ ಗಾತ್ರದ ಬಾವಲಿಯ ದಂಡುಗಳನ್ನೇ ನೋಡಿದ್ದೆವು. ಅದೇ ರೀತಿ ಚಿಕ್ಕ ಗಾತ್ರದ-ತುಳುವಿನಲ್ಲಿ ‘ಇರೆ ಬಾವಲಿ’ ಎಂದರೆ ಎಲೆ ಬಾವಲಿ ಎಂದು ಕರೆಯುವ ಬಾವಲಿಗಳು ಕೆಲವೊಮ್ಮೆ ಮನೆಯೊಳಗೆ ಹಾರಾಡಿ ಸೊಳ್ಳೆಗಳನ್ನು ಹಿಡಿಯುವುದನ್ನು ನೋಡಿದ್ದೆವು. ಇದು ಮನೆಯೊಳಗೆ ಹಾರಾಡಿದರೆ ಮನೆಯಲ್ಲಿ ತೊಟ್ಟಿಲು ತೂಗುತ್ತದೆ ಎಂದು ಅಜ್ಜಿಯರು ಹೇಳುತ್ತಿದ್ದುದರಿಂದ ಹಾಗೇನಾದರೂ ಬಾವಲಿ ಹಾರಿದರೆ ನಮಗೆ ತಮ್ಮನೋ ತಂಗಿಯೋ ಬರುವ ನಿರೀಕ್ಷೆಯಲ್ಲಿರುತ್ತಿದ್ದೆವು.

ಈ ಬಾವಲಿ ಇಲಿಮರಿಯೊಂದಕ್ಕೆ ರೆಕ್ಕೆ ಜೋಡಿಸಿದಂತೆ ಇತ್ತು. ಆದರೆ ಬಣ್ಣ ಮಾತ್ರ ಕಡು ಕೆಂಪು. ಆ ಬಣ್ಣದ ಬಾವಲಿಯನ್ನು ನಾನು ಮತ್ತೆ ನೋಡಿಲ್ಲ. ನಮಗೆ ಸಂಭ್ರಮವೇ ಸಂಭ್ರಮ. ಆ ದಿನ ನಾವು ಶಾಲೆಗೂ ಹೋಗಲಿಲ್ಲ. ಶಾಲೆಯಲ್ಲಿ ಕಲಿಯುವಷ್ಟೇ ಹೊರಗೆ ಕಲಿಯುವುದೂ ಸಾಕಷ್ಟಿದೆ ಎಂದು ನಮ್ಮ ತಂದೆಯವರು ಭಾವಿಸಿದ್ದರಿಂದ ಶಾಲೆಗೆ ಹೋಗಬೇಕೆಂದು ಯಾರೂ ಒತ್ತಾಯವನ್ನೂ ಮಾಡಲಿಲ್ಲ. ಹಾರಲಾಗದ ಈ ಬಾವಲಿಗೆ ತಿನ್ನಿಸುವುದು ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಅದು ಬಾಳೆ ಗಿಡದಲ್ಲಿ ಸಿಕ್ಕಿದುದರಿಂದ ಅದು ಬಾಳೆಯ ಮಕರಂದ ಕುಡಿಯುತ್ತಿರಬಹುದು. ಆದುದರಿಂದ ಜೇನು ಇದಕ್ಕೆ ಸೂಕ್ತ ಎಂದು ಭಾವಿಸಿ ಪೆನ್ನಿಗೆ ಶಾಯಿ ಹಾಕುವ ಪಿಲ್ಲರ್‌ನಲ್ಲಿ ಜೇನು ಕುಡಿಸಿದೆವು. ಅದನ್ನು ಬೆಕ್ಕುಗಳು ಹಿಡಿಯದಂತೆ ಇರಿಸುವುದು ಎಲ್ಲಿ? ನನ್ನ ಅಜ್ಜನದೊಂದು ದೊಡ್ಡ ಪುಸ್ತಕದ ಕವಾಟು ಅದರ ಮೇಲಿನ ಎರಡು ಹಂತಗಳಿಗೆ ಗಾಜುಗಳಿದ್ದವು. ಸಂಜೆಯ ಹೊತ್ತಿಗೆ ಈ ಕೆಂಪು ಬಾವಲಿಯನ್ನು ಅದರೊಳಗೆ ಇಟ್ಟು ರಾತ್ರಿ ಖರ್ಚಿಗೆ ಇರಲಿ ಎಂದು ಒಂದು ಚಿಕ್ಕ ತಟ್ಟೆಯಲ್ಲಿ ಜೇನನ್ನು ಇಟ್ಟು ನಿದ್ದೆ ಹೋದೆವು. ರಾತ್ರಿ ಕನಸಿನಲ್ಲಿ ಕೆಂಪು ಬಾವಲಿಯ ಚಂದಮಾಮ ಕತೆಗಳು!

ಬೆಳ್ಳಂಬೆಳಗ್ಗೆ ಎದ್ದು ಕೆಂಪು ಬಾವಲಿಯ ದರ್ಶನಕ್ಕೆಂದು ಕಪಾಟು ತೆರೆದು ನೋಡದಿರೆ ಬಾವಲಿಯನ್ನು ಅಸಂಖ್ಯಾತ ಇರುವೆಗಳು ಮುತ್ತಿಕೊಂಡು ಹೊತ್ತಯ್ಯಲು ದಾರಿ ಹುಡುಕುತ್ತಿವೆ. ಜೇನು ಸಿಹಿ ಇದೆಯೆಂಬುದೇನೋ ನಿಜ. ಸಿಹಿ ಇರುವಲ್ಲೇ ಇರುವೆಗಳೂ ಬರುತ್ತವೆ ಎಂಬುದು ನಿಜವಲ್ಲವೇ? ಆದರೆ ಈ ಇರುವೆಗಳು ಸಿಹಿ ಜೇನನ್ನು ಕಡೆಗಣಿಸಿ ಮಾಂಸಾಹಾರಕ್ಕೆ ಮನಸ್ಸು ಮಾಡಿದ್ದವು. ತಿಳಿಯದೇ ಮಾಡಿದ ಉಪಕಾರವೂ ಅಪಕಾರವಾದೀತೆಂದೂ ಗೊತ್ತಾದದ್ದು ಆಗಲೇ! ಕಣ್ಣೀರಿನೊಂದಿಗೆ ಬಾವಲಿಗೆ ವಿದಾಯ ಹೇಳಿದೆವು. ಕಣ್ಣಿದ್ದರೂ ಕಾಣದ ಕಿವಿಯಿಂದ ನೋಡುವ ವಿಚಿತ್ರ ಜೀವಿಯಾದ ಬಾವಲಿ ಒಂದು ಅನುಪಮ ವಿಸ್ಮಯವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಈ ಬಾವಲಿಗಳು ನನ್ನ ತಾತ್ವಿಕ ಸಿಟ್ಟಿಗೆ ಕಾರಣವಾಗಿದೆ. ನಮ್ಮ ಮನೆಯಂಗಳದಲ್ಲೇ ಒಂದು ಚಿಕ್ಕು (ಸಪೋಟ) ಮರ ಹಾಗೂ ಹಿತ್ತಲಲ್ಲಿ ಪೇರಳೆ ಮರಗಳಿವೆ. ಚಿಕ್ಕು ಮರವಂತೂ ದೊಡ್ಡ ದೊಡ್ಡ ಸಿಹಿಯಾದ ಹಣ್ಣು ಬಿಡುತ್ತದೆ. ಈ ಹಣ್ಣಿನಲ್ಲಿ ಚೂಪು ಮುಳ್ಳಿನಂತಹ ರಚನೆ ಇರುತ್ತದೆ. ಈ ಮುಳ್ಳು ಉದುರದೆ ಹಣ್ಣು ಕೊಯ್ದರೆ ರುಚಿ ಇರುವುದಿಲ್ಲ. ಕೊಯ್ಯುವಾಗ ನೆಲಕ್ಕೆ ಬಿದ್ದರೂ ಹಣ್ಣಾಗದೆ ಕಲ್ಲಿನಂತೆ ಗಟ್ಟಿಯಾಗಿ ಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕು ಮರದ ಕೆಳಗೆ ಈ ಬಾವಲಿಗಳು ಅರೆಬರೆ ತಿಂದು ಕೆಳಗೆ ಉದುರಿಸಿದ ಹಣ್ಣುಗಳ ಒಂದು ಹಾಸಿಗೆಯೇ ನಿರ್ಮಾಣವಾಗುತ್ತದೆ. ಅಂಗಳದಲ್ಲಿ ಹಾದು ಹೋಗುವವರೆಲ್ಲಾ ‘ಅಯ್ಯೋ’ ಎಂದು ಬಾವಲಿಗೆ ಶಾಪ ಹಾಕುವವರೇ! ಪಾಪ, ಪ್ರಾಣಿ ಅದೂ ಬದುಕಿಕೊಳ್ಳಲಿ ಎಂದು ಬಿಟ್ಟರೆ, ಅರೆ ಬರೆ ತಿಂದು, ಕೊರೆದು, ಪರಚಿ ಉದುರಿಸಿ ಉಳಿದವರೂ ತಿನ್ನದಂತೆ ಮಾಡುವುದೆಂದರೇನು? ಆದರೆ, ಈ ಬಾವಲಿಗಳಿಗೆ ಮರಣ ದಂಡನೆ ವಿಧಿಸುವ ಮನಸ್ಸು ಈ ತನಕ ಬಂದಿಲ್ಲ.

ಆದರೆ, ಎಲ್ಲರೂ ಹಾಗಿರುವುದಿಲ್ಲವಲ್ಲ! ಕರಾವಳಿಯಲ್ಲಿ ಬಾವಲಿಯನ್ನೂ ತಿನ್ನುತ್ತಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಶಂಭೂರು ಎಂಬ ಎರಡು ಗ್ರಾಮಗಳು ತಾಳೆ ಮರದ ಶೇಂದಿಗೆ ಬಹಳ ಪ್ರಖ್ಯಾತ. ಎಲ್ಲಿ ನೋಡಿದರಲ್ಲಿ ತಾಳೆ ಮರಗಳು. ಹಾಗೆಯೇ ಮೂರ್ತೆ ಕಟ್ಟಿ ಶೇಂದಿ ಇಳಿಸುವ ಬಿಲ್ಲವರು ಬಹುಸಂಖ್ಯಾತರು. ಈಗ ಈ ತಾಳೆ ಮರಗಳನ್ನು ಅಲ್ಲಿ-ಇಲ್ಲಿ ಎಣಿಸಬೇಕಷ್ಟೇ! ಹೆಚ್ಚಿನವು ಮನೆಯ ಮಾಡುಗಳ ಪಕ್ಕಾಸುಗಳಾಗಿ ಮಲಗಿವೆ. ಈ ಬಾವಲಿಗಳಿಗೂ ಶೇಂದಿ ಕುಡಿಯುವ ಹುಚ್ಚು! ದಿನಕ್ಕೆರಡು ಬಾರಿ ಭಾರೀ ಎತ್ತರಕ್ಕೆ ಏರಿ ಇಳಿಯುವ ಮೂರ್ತೆದಾರರ ಎದೆ ಧಸಕ್ಕೆನ್ನುವಂತೆ ಮರದಲ್ಲಿ ಕಟ್ಟಿದ ಮಡಕೆ (ಕುಜಿಲ್) ಖಾಲಿ ಮಾಡುವ ಬಾವಲಿಗಳಿಗೆ ಕೆಲವೊಮ್ಮೆ ಕತ್ತರಿ ಇಡುತ್ತಾರೆ. ಬಿದ್ದ ಬಾವಲಿಗಳು ಕೆಲವೊಮ್ಮೆ ಶೇಂದಿ ಜೊತೆಗೆ ಚಾಕಣ ಆಗುತ್ತವೆ. ನಮ್ಮ ಮನೆಯ ಹತ್ತಿರವೇ ಒಂದು ಮುಳಿ ಹುಲ್ಲಿನ ಗುಡಿಸಲಲ್ಲಿ ಶೇಂದಿ ಮಾರುತ್ತಿದ್ದರು. ಅದು ನನ್ನ ಗೆಳೆಯರದ್ದು. ಅವರಲ್ಲಿ ಒಬ್ಬನಾದ ಕಿಟ್ಟ ಯಾನೆ ಕೃಷ್ಣಪ್ಪ ಹಾವು ಕಚ್ಚಿ ಸತ್ತ ಅಪರೂಪದ ಘಟನೆಗೆ ಬಲಿಯಾದದನ್ನು ದುಃಖದಿಂದ ಸ್ಮರಿಸಬೇಕು. ಇಲ್ಲಿ ಮೂರ್ತೆ ಮಾಡುವವರೊಬ್ಬರು ಈ ಬಾವಲಿಗಳ ಹಾವಳಿಗೆ ಬೇಸತ್ತು ಒಂದು ಕತ್ತರಿ ಇಟ್ಟರು. ಅದಕ್ಕೊಂದು ದಿನ ಭಾರೀ ಗಾತ್ರದ ಬಾವಲಿ ಬಿತ್ತು. ಈ ಬಾವಲಿಗಳನ್ನು ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಅಲ್ಲಿಗೆ ಬರುವ ಕುಡುಕರೆಲ್ಲಾ ಸೇರಿ ‘ಚಾಕಣ’ ಮಾಡಲು ನಿರ್ಧರಿಸಿ ವಂತಿಗೆ ಹಾಕಿ ಮಸಾಲೆ ಸಾಮಾನು ತಂದರು. ನಾನೂ ಈ ಬಾವಲಿಯ ರುಚಿ ನೋಡೊಣ ಎಂದು ಇದ್ದೆ. ನಡುವೆ ನಾನು ಈ ಬಾವಲಿಯನ್ನು ಹಸನು ಮಾಡುವಲ್ಲಿಗೆ ಹೋದೆ. ಅಲ್ಲಿ ಕೆಲಸ ಮಗಿದು ಒಬ್ಬಾತ ಈ ಬಾವಲಿಯನ್ನು ಕತ್ತಿನಲ್ಲಿ ಹಿಡಿದು ಎತ್ತಿ ಹಿಡಿದಿದ್ದ. ಅದನ್ನು ಕಂಡು ಹೊಟ್ಟೆಯಲ್ಲಿದ್ದದ್ದೆಲ್ಲ ಬಾಯಿಗೆ ಬಂದಂತಾಗಿತ್ತು. ಯಾಕೆಂದರೆ ಅದು ಆಗ ತಾನೆ ಹುಟ್ಟಿದ ಮಗುವಿನಂತಿತ್ತು. ಕೆಲವೇ ದಿನಗಳ ಹಿಂದೆ ನಾನು ನನ್ನ ಮೊದಲ ಮಗುವಿನ ಜನನಕ್ಕಾಗಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದಾಗ ಇದೇ ದೃಶ್ಯ ನೋಡಿದ್ದೆ. ಅಲ್ಲಿ ನರ್ಸ್ ಒಬ್ಬರು ನನ್ನ ಮಗುವನ್ನು ಹೀಗೆಯೇ ಕತ್ತಿನಲ್ಲಿ ಎತ್ತಿ ಹಿಡಿದಿದ್ದರು! ಅಲ್ಲಿಗೇ ಬಾವಲಿ ಮಾಂಸಕ್ಕೆ ವಿದಾಯ ಹೇಳಿದೆ.

ಈ ಗಡಂಗುಗಳಲ್ಲಿ ಆಮೆಯ ಮಾಂಸವನ್ನೂ ಮಾಡುತ್ತಾರೆ. ಹಿಂದೆ ಕೊರಗ ಜನಾಂಗದವರು ಮತ್ತು ಕ್ರೈಸ್ತರು ಮಾತ್ರ ಆಮೆ ಮಾಂಸ ತಿನ್ನುತ್ತಿದ್ದರು. ನಮ್ಮ ಮನೆಯ ಜಾಗದಲ್ಲಿಯೇ ಒಂದು ಕೊರಗ ಕುಟುಂಬ ವರ್ಷಾಂತರಗಳಿಂದ ತಾತ್ಕಾಲಿಕ ಗುಡಿಸಲು ಕಟ್ಟಿ ವಾಸವಾಗಿತ್ತು. ಅವರು ಹಲವು ಮಂದಿ ಮಕ್ಕಳು. ಅವರಲ್ಲೊಬ್ಬ ಬಲ್ಲು ಎಂಬಾತ ನನಗಿಂತ ಮೂರು ನಾಲ್ಕು ವರ್ಷ ದೊಡ್ಡವನು. ಆತ ಬಹಳಷ್ಟು ವರ್ಷ ನಮ್ಮ ಮನೆಯ ಕೊಟ್ಟಿಗೆಯಲ್ಲಿ-ಕೊಟ್ಟಿಗೆ ಎಂದರೆ ಹಸು-ಎಮ್ಮೆ ಕೋಣಗಳನ್ನು ಕಟ್ಟುವ ಜಾಗವಲ್ಲ- ಭತ್ತ ಕುಟ್ಟಿ ಅಕ್ಕಿ ಮಾಡಲು, ವಸ್ತುಗಳನ್ನು ದಾಸ್ತಾನು ಇಡಲು ಇದ್ದ ಜಾಗದಲ್ಲಿ ವಾಸವಿದ್ದ. ಅವನ ಜೊತೆ ಕಾಡು ಸುತ್ತಿಯೇ ನಾನು ಪ್ರಕೃತಿ ಬಗ್ಗೆ ಕಲಿತದ್ದು. ಆತ ನನ್ನ ಪಾಲಿಗೆ ಅಣ್ಣನಂತಯೇ ಇದ್ದ. ಈತನ ಜೊತೆ ಸುತ್ತಾಡಿದ ಅನುಭವವನ್ನು ಬರೆದರೆ ಬೇರೆಯೇ ಕತೆಯಾದೀತು. ಅವರ ಕುಟುಂಬದವರು ಆಮೆಗಳನ್ನು ಹಿಡಿದು ಮಾರುವುದು, ತಿನ್ನುವುದು ಸಾಮಾನ್ಯವಾಗಿತ್ತು. ನೀರಿನ ತೋಡುಗಳ ಅರೆಕೆಸರು ಜಾಗದಲ್ಲಿ ಕೈಯಲ್ಲಿರುವ ದೊಣ್ಣೆಯಿಂದ ಕುಟ್ಟಿ ಕುಟ್ಟಿ ಆಮೆ ಪತ್ತೆ ಮಾಡುತ್ತಿದ್ದರು.ಆದರೆ ಅದನ್ನು ಚಿಪ್ಪಿನಿಂದ ಹೇಗೆ ಹೊರಗೆ ತೆಗೆಯುತ್ತಾರೆ ಎಂಬುದನ್ನು ನಾನು ನೋಡಿರಲೇ ಇಲ್ಲ.

 ಬಹಳ ವರ್ಷಗಳ ನಂತರ ನಮ್ಮೂರಿನ ಒಂದು ಶೇಂದಿ ಅಂಗಡಿಯಲ್ಲಿ ‘ಸಾಲಿಗ್ರಾಮ’ದ ಮಾಂಸ ಸಿಗುತ್ತದೆ ಎಂದು ತಿಳಿಯಿತು. ಇದು ಆಮೆಯ ಮಾಂಸಕ್ಕೆ ಇಟ್ಟ ಗುಪ್ತ ಹೆಸರು. ಅದನ್ನು ತಿನ್ನುವ ಶೂದ್ರ ಜಾತಿಗಳಿಗೆ ಮುಜುಗರವಾಗಬಾರದು ಎಂಬ ದೃಷ್ಟಿಯಿಂದ ಆ ಅಂಗಡಿಯ ಚಾಕಣದವನು ಈ ಹೆಸರು ಇಟ್ಟಿದ್ದ. ಕೇಳಿದ್ದಕ್ಕೆ ಆತ ಯಕ್ಷಗಾನದ ಸಾಲಿಗ್ರಾಮ ಮೇಳದವರು ಮೊಣಕಾಲಲ್ಲಿ ಗಿರಕಿ ಹೊಡೆಯುವುದಕ್ಕೂ ಆಮೆಗೂ ಸಂಬಂಧ ಕಲ್ಪಿಸಿದ್ದ. ಆತ ತನ್ನ ಅದ್ಭುತ ಗ್ರಾಮೀಣ ಕಲ್ಪನೆ ಮೆರೆದಿದ್ದ. ಆಗ ಆಮೆ ಮಾಂಸ ತಿನ್ನುವುದು ‘ಬೀಫ್’ ತಿನ್ನುವಷ್ಟೇ ‘ಗುಟ್ಟಿನ’ ಕೆಲಸವಾಗಿತ್ತು! ಏನಾದರಾಗಲೀ ನಮ್ಮ ಬಲ್ಲುವನ್ನು ಮುಟ್ಟಿ ಆಗ ಈಗಿದ್ದಕ್ಕಿಂತ ಹೆಚ್ಚಿದ್ದ ಅಸ್ಪಶ್ಯತೆಯ ಬೇಲಿಯನ್ನು ಬಾಲ್ಯದಲ್ಲಿಯೇ ‘ರಾಜಾರೋಷ’ವಾಗಿ ದಾಟಿದ್ದ ನಾನು ಆತ ತಿನ್ನುವ ಆಮೆಯನ್ನೂ ತಿನ್ನಬೇಕೆಂದು ಮನಸ್ಸು ಮಾಡಿ ತಿಂದೇ ಬಿಟ್ಟೆ! ಕೋಳಿ ಮಾಂಸದಂತೆಯೇ ಇತ್ತು. ಇನ್ನೊಂದು ಸಲ ಈ ‘ಸಾಲಿಗ್ರಾಮ’ವನ್ನು ತಿನ್ನಲು ಹೋಗಿ ಒಂದು ಪ್ಲೇಟು ತೆಗೆದುಕೊಂಡವನಿಗೆ ಈ ಆಮೆಗಳು 200-300 ವರ್ಷ ಬದುಕುತ್ತವೆ ಎಂದು ಓದಿದ್ದು ನೆನಪಾಯಿತು. ಯಕಶ್ಚಿತ್ 50-60 ವರ್ಷ ಬದುಕಬಹುದಾದ ನಾನು ಸ್ವಲ್ಪ ಬಾಯಿ ರುಚಿಯ ಆಸೆಗಾಗಿ ಅಷ್ಟು ವರ್ಷ ಬದುಕಬಹುದಾದ ಪ್ರಾಣಿಯೊಂದರ ಜೀವನ ಕಡಿತದಲ್ಲಿ ಪಾಲುದಾರನಾಗುವುದೇ ಎಂಬ ಯೋಚನೆ ಹೊಳೆದು ಅಂದಿಗೇ ‘ಸಾಲಿಗ್ರಾಮ’ದ ಮಾಂಸಕ್ಕೆ ವಿದಾಯ ಹೇಳಿಬಿಟ್ಟೆ! ಕೋಳಿ-ಮೀನುಗಳ ಮಾಂಸಕ್ಕೆ ವಿದಾಯ ಹೇಳುವುದು ನನಗಿನ್ನೂ ಸಾಧ್ಯವಾಗಿಲ್ಲ! ‘ಕೊಂದ ಪಾಪ ತಿಂದು ಪರಿಹಾರ’ ಎಂಬ ಸೂತ್ರಕ್ಕೆ ಇನ್ನೂ ಅಂಟಿಕೊಂಡಿದ್ದೇನೆ. ಏನಿದ್ದರೂ ಆಹಾರ ಅವರವರ ಆಯ್ಕೆ. ಮನುಷ್ಯನನ್ನೇ ಮನುಷ್ಯನೊಬ್ಬ ಪ್ರಾಣಿಗಾಗಿ ಕೊಲ್ಲುವ ಈ ಕಾಲದಲ್ಲಿ ಈ ಪ್ರಶ್ನೆ ಪ್ರಸ್ತುತವೋ, ಅಪ್ರಸ್ತುತವೋ?!

ಈ ಬಲ್ಲುವಿನ ಜೊತೆ ನನ್ನ ತಿರುಗಾಟದ ಒಂದು ಕತೆಯನ್ನಷ್ಟೇ ಈ ಅವಕಾಶದಲ್ಲಿ ಹೇಳುತ್ತೇನೆ. ನನಗೆ ಕಾಡು-ಮೇಡು ಕಲಿಸಿದ ನನ್ನ ಈ ಅಣ್ಣನಿಗೆ ನಾನು ಕನ್ನಡ ಹಾಡು-ಅಕ್ಷರ ಕಲಿಸುತ್ತಿದ್ದೆ. ನಾನು ಕಲಿಸಿದ್ದಕ್ಕಿಂತ ಆತ ಕಲಿತದ್ದಕ್ಕಿಂತ- ಆತ ಕಲಿಸಿದ್ದೇ ಹೆಚ್ಚು. ಆದರೂ ನನಗೆ ಗುರುದಕ್ಷಿಣೆಯಾಗಿ ಏನನ್ನಾದರೂ ಕೊಡಬೇಕೆಂದು ಕೇಳಿದಾಗ ನಾನು ಕೇಳಿದ್ದೊಂದು ಕೊಳಲು! ನನಗೆ ಈಗಲೂ‘ಕೊಳಲು’ ಎಂದರೆ ಕೃಷ್ಣನ ನೆನಪಾಗುವುದಿಲ್ಲ! ಬಲ್ಲು, ಅವನ ತಂದೆ ತಾಯಿಯವರಾದ ಬಟ್ಯ-ಚೋಮು; ಅಣ್ಣ,ಅಕ್ಕ, ತಂಗಿ-ಇತ್ಯಾದಿ ಕುಂಡ, ಐತ, ಮಾಂಕು, ಬೊಗುರ, ತನಿಯಾರು, ಬೀತುರು- ಇವರೇ ನೆನಪಾಗುತ್ತಾರೆ. ಯಾಕೆಂದರೆ ಇವರು ಮೇಲೆ ಹೇಳಿದ ಗುಡಿಸಲು ಅಥವಾ ಕೇಲ್‌ನಲ್ಲಿ ವಾಸವಿದ್ದಾಗ ನಿತ್ಯವೂ ಕೊಳಲಿನ ಧ್ವನಿ, ಹಾಡು, ಕುಣಿತ, ಗಲಾಟೆ, ದೂರು, ರಾಜಿ ನಡೆಯುತ್ತಲೇ ಇದ್ದವು. ಬಿದಿರಿನ ಕೊಳಲು ಮತ್ತೆ ಮಕ್ಕಳಿಗೆ ‘ಓಂಟೆ’ ಎನ್ನುವ ತಾಳೆ ಗರಿಯ ವಾದ್ಯ ಮಕ್ಕಳಿಗೂ, ಹಿರಿಯರಿಗೂ ಆಟದ ಸರುಕುಗಳಾಗಿದ್ದವು. ಹಾಗೆಂದು ನಾನೂ ಬಲ್ಲು ಬೈಲಿಗೆ ಹೋದೆವು. ತಾಳೆ ಗರಿ ಕೊಯ್ದೆಯ್ತು. ಕೊನೆಗೆ ಸಿಕ್ಕಿಸಿಲು ಒಂದು ‘ಮುಳ್ಳಂಕೋಲು’ ಗಿಡದ ಸೂಜಿಯಂತಹ ಮುಳ್ಳು ಬೇಕು. ಅದಕ್ಕಾಗಿ ಬೈಲಿನ ಒಂದು ಮಾವಿನ ಮರದ ಕೆಳಗೆ ಒಂದು ಹುತ್ತದ ಬಳಿಗೆ ಹೋದೆವು. ಅಲ್ಲಿ ಮುಳ್ಳಂಕೋಲಿನ ಹುಳಿ ಹಣ್ಣಿನ ರುಚಿ ಹಿಂದೆಯೇ ನೋಡಿದ್ದೆವು. ಅಲ್ಲಿ ಮುಳ್ಳಿಗೆಂದು ಕೈ ಹಾಕುತ್ತಾನೆ-ಒಂದು ದೊಡ್ಡ ಹಾವು ಸ್ಪ್ರಿಂಗಿನಂತೆ ನಮ್ಮತ್ತ ಜಿಗಿಯುತ್ತಿದೆ! ಯಾವತ್ತೂ ಕೈಯಲ್ಲಿ ಹಿಡಿದೇ ಇರುತ್ತಿದ್ದ ಬೆತ್ತದಲ್ಲಿ ಜಾಕಿಜಾನ್‌ನನ್ನೂ ಮೀರಿಸುವ ವೇಗದಲ್ಲಿ ನೆಲಕ್ಕುರುಳಿಸಿ ಕ್ಷಣ ಮಾತ್ರದಲ್ಲಿ ಎರಡೇ ಹೊಡೆತದಲ್ಲಿ ಕೊಂದೇ ಬಿಟ್ಟ! ಅದರ ಹೊಟ್ಟೆಯಿಂದ ಮೊಟ್ಟೆಗಳು ಲೋಳೆಯೊಂದಿಗೆ ಹೊರೆಗೆ ಬಂದಿದ್ದವು. ಅದನ್ನು ನೋಡಿ ನನ್ನ ಕರುಳು ಕಿವಿಚಿ ಹೋಯಿತು. ನಾನು ಯಾಕೋ ಬೈದೆ! ಅವನು ಹೇಳಿದ ಮಾತು ಇಷ್ಟೇ- ‘‘ನಾನು ಕೊಲ್ಲದಿದ್ದರೆ, ಅದು ನಮ್ಮಿಬ್ಬರಲ್ಲಿ ಒಬ್ಬರನ್ನು ಕೊಲ್ಲುತ್ತಿತ್ತು.’’ ಇದು ಅವನ ನೈಸರ್ಗಿಕ ನ್ಯಾಯ. ನಾನು ಕೃತಕ ಎಂದು ನನಗೆ ಆಗಲೇ ಅನಿಸಿತ್ತು.

 ನೈಸರ್ಗಿಕವಾಗಿ ಅವನ ರಕ್ಷಣೆಗೆ ಬರುತ್ತಿದ್ದ ಅವನ ಸಹಜ ಬದುಕಿನ ಸಹಜ ಪ್ರೇರಣೆಯಾಗಲೀ, ಆತನ ಕೋಲಾಗಲೀ ಆಧುನಿಕತೆಯ ಎದುರು ಅವನ ಜೀವವನ್ನು ಉಳಿಸಲಿಲ್ಲ. ಮುಂದೊಂದು ದಿನ ಒಂದು ಕಾರು ಈಗ ರಾಜ್ಯದಲ್ಲೇ ಕುಖ್ಯಾತವಾಗಿರುವ ಬಂಟ್ವಾಳ ತಾಲೂಕಿನ ಪಟ್ಟಣವೊಂದರಲ್ಲಿ ಈ ಬಲ್ಲುವನ್ನು ಹೊಡೆದುರುಳಿಸಿತು.ಅವರು ಮಂಗಳೂರಿನ ಒಂದು ಆಸ್ಪತ್ರೆಗೆ ದಾಖಲಿಸಿ ಮಾಯವಾದರು. ಅವನ ಕೊನೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲದೆಯೇ ಬಂತು. ಅವನ ಮಗಳು ಎಸೆಸೆಲ್ಸಿ ಪಾಸಾಗಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ದಾಯಿಯಾಗಿದ್ದಾಳೆ ಎಂದು ಕೇಳಿದ್ದೇನೆ. ಯಾವುದೇ ಮೀಸಲಾತಿಯ ‘ಕರುಣೆ’ ಈ ಕುಟುಂಬದ ಯಾರಿಗೂ ಸಿಕ್ಕಿಲ್ಲ ಎಂಬುದನ್ನು ಮೀಸಲಾತಿ ವಿರೋಧಿಗಳಿಗೆ ಒಮ್ಮೆ ನೆನಪಿಸಬೇಕು.

ಕರಾವಳಿಯ ಜನರಿಗೆ ಕೋಳಿಯೊಂದು ಸಹಜ ಆಹಾರ. ಭೂತಗಳಿಗೂ ಅದು ಬೇಕು. ಅದಕ್ಕಾಗಿಯೇ ಜನರು ಕೋಳಿಗಳನ್ನು ಸಾಕುತ್ತಿದ್ದರು. ಅವುಗಳನ್ನೇ ಕಾಡುಬೆಕ್ಕು (ತುಳುವಿನ ಅಲ್ಪುಚ್ಚೆ)-ಚಿರತೆಗಿಂತ ಸಣ್ಣದು- ದಿನಕ್ಕೆ ನಾಲ್ಕಾರು ತಿಂದರೆ ಹೇಗೆ?! ನಮ್ಮೂರಿನಲ್ಲಿ ಒಮ್ಮೆ ಹಾಹಾಕಾರವೆದ್ದಿತು. ನಾನು ಮೊದಲೇ ಹೇಳಿದ ತೋಡಿನ ಆಚೆ, ತೋಟ ದಾಟಿ ಒಂದು ಚಿಕ್ಕ ಕಾಡು. ಅಲ್ಲಿ ಜನರ ಬೊಬ್ಬೆ ಕೇಳುತ್ತಿದೆ. ವಿಶೇಷವೆಂದರೆ ಊರವರೆಲ್ಲಾ ಸಂಚು ಮಾಡಿ ಆಗ ಬಲೆ ಹಾಕಿ ಅಳಿಲು, ಮೊಲ ಇತ್ಯಾದಿಗಳನ್ನು ಬೇಟೆಯಾಡುತ್ತಿದ್ದ ಗಿರಿಯಪ್ಪಣ್ಣ ಎಂಬವರು ಈ ಕಾಡುಬೆಕ್ಕನ್ನು ಬಲೆಗೆ ಬೀಳಿಸಿದ್ದರು. ನಾನು, ಬಲ್ಲು, ನನ್ನ ಸಂಬಂಧಿಯೊಬ್ಬರು ಅಲ್ಲಿಗೆ ಓಡಿದಾಗ ಅದನ್ನು ಹೊಡೆದೇ ಕೊಂದಿದ್ದರು. ನಾವು ಹೋದಾಗ ಅಲ್ಲಿ ಹೆಣಕ್ಕೆ ಹೊಡೆಯುವ ‘ಆಟ’ ನಡೆದಿತ್ತು-‘ನನ್ನ ಕುಪುಳನ ಲೆಕ್ಕದಲ್ಲಿ ಒಂದು, ನನ್ನ ಕೆಮ್ಮೈರೆ ಲೆಕ್ಕದಲ್ಲಿ ಒಂದು ನನ್ನ ಬೊಳ್ಳೆ ಲೆಕ್ಕದಲ್ಲಿ ಒಂದು....’ ಎಂದು ಜನರು ಹೊಡೆಯುತ್ತಲೇ ಇದ್ದರು. ಕುಪುಳ,ಕೆಮ್ಮೈರೆ, ಬೊಳ್ಳೆ ಇತ್ಯಾದಿ ಅಂಕದ ಕೋಳಿಗಳಿಗೆ ಬಣ್ಣದ ಆಧಾರದಲ್ಲಿ ಇಡುವ ಹೆಸರುಗಳು. ಅದನ್ನು ತಮ್ಮ ಭಂಟರಂತೆ ಸಾಕಿರುತ್ತಾರೆ. ಅವರ ಸಿಟ್ಟಿನ ಹೊಡೆತ ಯಾವುದೇ ರಾಜ ಅಥವಾ ಸರ್ವಾಧಿಕಾರಿಗೆ ಚಳಿ ಹುಟ್ಟಿಸುವಂತಿತ್ತು. ಜನರು ಸಿಟ್ಟಿಗೆದ್ದರೆ ಏನು ಮಾಡಬಹುದು ಎಂಬುದನ್ನು ಅಧಿಕಾಸ್ಥರಿಗೆ ನೆನಪಿಸುವಂತಿತ್ತು. ನಾವು ಕಾಡಿ ಬೇಡಿ ದೇಹದ ಜೀವ ಬದುಕಿಸಿದೆವು. ಅದರ ಚರ್ಮ ಉಳಿಸುವುದು ಹುಡುಗರಾದ ನಮ್ಮ ಆಸೆಯಾಗಿತ್ತು. ಮಾಂಸ ಊರವರ ಪಾಲಾಯಿತು-ಅದು ಕೊಂದ ಕೋಳಿಯ ತೂಕದಂತೆ! ಚಿಕ್ಕ ಪುಟ್ಟ ಪಾಲಿನ ಜಗಳವೂ ಆಯಿತು. ನಾವು ಚರ್ಮವನ್ನು ಒಯ್ದು ಉಪ್ಪು ಗಿಪ್ಪು ಹಾಕಿ ಬಲ್ಲುವಿನ ಸಲಹೆ ಮೇರೆಗೆ ಕೋಂಗಲಪಾದೆ ಎನ್ನುವ ಹೆಸರಿರುವ ಗುಡ್ಡದ ಮೇಲೆ ದೊಡ್ಡ ಬಂಡೆಯ ಮೇಲೆ ಒಣಗಲು ಹಾಕಿದೆವು. ಮರುದಿನ ಬೆಳಗ್ಗೆ ಅದು ಮಾಯವಾಯಿತು. ಪ್ರಾಣಿಗಳು ತಿಂದವು- ಬಲ್ಲು ಮೋಸ ಮಾಡಿದ- ಅವನ ಸಂಬಂಧಿಗಳೇ ಕದ್ದು ಮಾರಿದ್ದಾರೆ ಇತ್ಯಾದಿ ಆರೋಪಗಳಾದವು. ಅದೇನೇ ಇರಲಿ ‘ಕ್ರಾಂತಿ’ ಹೇಗೆ ನಡೆಯುತ್ತದೆ ಎಂಬುದು ಐತಿಹಾಸಿಕ ‘ಪಾಠ’ ಕಲಿತಂತಾಯಿತು.

ಮೇಲೆ ಹೇಳಿದ ಕಾಡಿನಿಂದಾಚೆ ಇನ್ನೊಂದು ದಟ್ಟವಾದ ಜಿಗ್ಗಿನ ಕಾಡು ಇದೆ.ಇದು ಕಾಡು ಹಂದಿಗಳ ಇಷ್ಟದ ವಾಸ ಸ್ಥಾನವಾಗಿತ್ತು. ಕೆಲವೊಮ್ಮೆ ಹಂದಿಗಳು ಗದ್ದೆ, ತೋಟಗಳನ್ನು ತನ್ನ ದಾಡೆಗಳಿಂದ ಉತ್ತು ಹಾನಿ ಮಾಡುವುದಿತ್ತು. ರೈತರು ಕೆಲವರು ಇದಕ್ಕೆಂದು ಮಾತ್ರವಲ್ಲ, ಮಾಂಸದ ಆಸೆಗಾಗಿಯೂ ಗಂಡಿಗಳಲ್ಲಿ ಉರುಳು ಇಡುವುದಿತ್ತು. ಕೆಲವರ್ಷಗಳ ಹಿಂದೆ ಒಂದು ಭಾರೀ ಗಾತ್ರದ ಹಂದಿ ಬಿತ್ತು. ಆಗ ಈಗಿನಂತೆ ಬೇಟೆ ಗುರುತರ ಅಪರಾಧ ಎಂದು ಯಾರೂ ಭಾವಿಸಿರಲಿಲ್ಲ. ಹಂದಿ ಬಿದ್ದರೆ ಹಲವಾರು ಮನೆಗಳಿಗೆ ಮಾಂಸ ಹಂಚಿಕೆ ಆಗುತ್ತಿತ್ತು. ನಾಡ ಹಂದಿ ಮಾಂಸಕ್ಕೆ ‘ಇಸ್ಸೀ’ ಎನ್ನುವವರೂ ಕಾಡುಹಂದಿ ಮಾಂಸವೆಂದರೆ ನಾಲಗೆ ಚಪ್ಪರಿಸುತ್ತಾ, ಈ ಹಂದಿಯ ಮಾಂಸವನ್ನ್ನು ಹಲವು ಮನೆಗಳಲ್ಲಿ ತಿಂದು ತೇಗಿದ್ದರು.

ಕೆಲವು ದಿನಗಳಲ್ಲಿ ಊರಿಗೆ ಪೊಲೀಸ್ ಬಂದಾಗಲೇ ಎಲ್ಲರಿಗೂ ತಾವು ಬೇಸ್ತು ಬಿದ್ದದ್ದು ಗೊತ್ತಾದದ್ದು! ಈ ಹಂದಿ ಕಾಡು ಹಂದಿಯಾಗಿರದೇ, ಸ್ವಲ್ಪ ದೂರದಲ್ಲೇ ಇದ್ದ ಬೇಟೆಗಾರರೊಬ್ಬರು ಸಾಕಿದ್ದ ನಾಡು ಹಂದಿಗಳಲ್ಲಿ ಒಂದಾಗಿತ್ತು. ಚೆನ್ನಾಗಿ ಕೊಬ್ಬಿದ ಅದು ಕಾಡು ತಿರುಗುತ್ತಾ ಕಾಡು ಹಂದಿಯೇ ಆಗಿತ್ತು. ಆದರೆ ಸಾಕ್ಷಿ ಎಂದೋ ಜೀರ್ಣವಾಗಿದ್ದುದರಿಂದ ಪೊಲೀಸರೇ ಪಂಚಾತಿಕೆ ಮಾಡಿದರು. ಇದು ನಾಡಹಂದಿ ಆದುದರಿಂದ ಬೇಟೆ ಕೇಸು ಹಾಕುವಂತೆಯೂ ಇರಲಿಲ್ಲ. ಹಂದಿ ತಿಂದ ಎಲ್ಲರೂ ವಂತಿಗೆ ಹಾಕಿ ಹಂದಿ ಮಾಲಕರಿಗೆ ನಷ್ಟ ತುಂಬಿ ಕೊಡಬೇಕಾಯಿತು. ‘ಹಂದಿ’ ತಿನ್ನದ ಕೆಲವರು ‘ವರಾಹ’ ತಿಂದು ‘ಭ್ರಷ್ಟ’ರಾಗಬೇಕಾಯಿತು!

ಕಾಗೆ ಕೂರುವುದಕ್ಕೂ ಗೆಲ್ಲು ಮುರಿಯುವುದಕ್ಕೂ ಸಂಬಂಧ ಕಲ್ಪಿಸುವುದಕ್ಕೆ ಕಾಕತಾಳೀಯ ಎನ್ನುತ್ತಾರಲ್ಲವೇ? ಕೆಲವು ಸಲ ಜೋಯಿಸರುಗಳು ಬಿಡುವ ನೂರಾರು ಬುರುಡೆಗಳಲ್ಲಿ ಒಂದೆರಡು ನಿಜವಾಗುವುದಿಲ್ಲವೇ? ಒಮ್ಮೆ ಹಾಗಾಯಿತು. ನಮ್ಮೂರಿಗೆ ಒಣಮೀನು ಮಾರಿಕೊಂಡು ಉಳ್ಳಾಲ ಕಡೆಯಿಂದ ಒಬ್ಬರು ಮೊಗವೀರ ಅಜ್ಜಿ ಬರುತ್ತಿದ್ದರು. ಅವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಾರ ಮಾಡಿ ತಂಗುತ್ತಿದ್ದದ್ದು ನಮ್ಮ ಮನೆಯಲ್ಲೇ. ಒಂದು ದಿನ ಸಂಜೆ ನನ್ನ ತಾಯಿ ಮತ್ತು ಅವರು ಒಂದು ಭಾರೀ ಗಾತ್ರದ ಕಲ್ಲಿನಲ್ಲಿ ಅಕ್ಕಿ ರುಬ್ಬುತ್ತಿದ್ದರು. ನಾನು ಅಲ್ಲೇ ಅಂಗಳದಲ್ಲಿ ಆಟವಾಡುತ್ತಿದ್ದೆ. ಅವರ ಮಾತುಗಳು ಕೇರೆ ಹಾವಿನ ಬಗ್ಗೆ ಇದ್ದು ಕುತೂಹಲಕಾರಿಯಾಗಿದ್ದವು.

ಕೇರೆ ಹಾವುಗಳು ಹಳ್ಳಿ ಮನೆಗಳಲ್ಲಿ ಅಟ್ಟ, ಮಾಡುಗಳಲ್ಲಿ ಓಡಾಡಿ ಇಲಿ ಬೇಟೆಯಾಡುವುದು ಸಾಮಾನ್ಯವಾಗಿತ್ತು. ಜನರು ಅದನ್ನು ‘ಕೇರೆ’ ಎಂದು ಹೆಸರು ಹಿಡಿದು ಕರೆಯುವುದಿಲ್ಲ-‘ಮಹಾರಾಜ’ ಎಂದೇ ಕರೆಯುವುದು! ‘ಕೇರೆ’ ಎಂದರೆ ಅದಕ್ಕೆ ಅವಮಾನವಾಗಿ ಹೊರಟು ಹೋಗತ್ತದಂತೆ. ಯಾಕೆ? ಕೇರೆ ಹಾವು ಸಾಮಾನ್ಯವಾಗಿ ರಾತ್ರಿ ಹೊತ್ತು ಮನೆಗಳಲ್ಲಿ ನಿಲ್ಲುವುದಿಲ್ಲ. ದಿನಕ್ಕೆ ಒಂದು ಮುಡಿ ಅಕ್ಕಿ ಖರ್ಚಾಗುವ ರಾಜ-ಮಹಾರಾಜರ ಮನೆಯಲ್ಲಿ ಮಾತ್ರ ಅದು ರಾತ್ರಿ ತಂಗುವುದು! ಈ ರೀತಿ ಮಾತುಕತೆ ಸಾಗಿತ್ತು.

 ‘‘ಕೇರೆಗೆ ಹೆದರುವುದು ಯಾಕೆ?ಪಾಪ! ಅದಕ್ಕೆ ವಿಷವಿಲ್ಲವಲ್ಲ!’’

‘‘ಏನು?! ಕೇರೆಗೆ ವಿಷವಿಲ್ಲವೇ?ಅದು ಕಚ್ಚಿದರೆ ಮನುಷ್ಯ ಬದುಕುತ್ತಾರೆಯೇ?’’ ಇತ್ಯಾದಿಯಾಗಿ ಅಜ್ಜಿ ಕೇರೆಯ ಮಹಿಮೆಯನ್ನು ಬಣ್ಣಿಸುತ್ತಾ, ಮುಂದುವರಿಯಲು ‘‘ಕೇರೆ...’’ ಎನ್ನುವುದೇ ತಡ ಯಾರಿಗೂ ಅರಿವಿಗೇ ಬರದಂತೆ ಮಾಡಿನಲ್ಲಿ ಸುಳಿದಾಡುತ್ತಿದ್ದ ದೊಡ್ಡ ಕೇರೆ ಹಾವೊಂದು ದೊಪ್ಪನೆ ಇವರ ಮೇಲೆಯೇ ಬಿತ್ತು! ಇಬ್ಬರೂ ಕಿರುಚಾಡುತ್ತಾ ದಿಕ್ಕಾಪಾಲಾದರು! ನನಗೆ ಇದು ತುಂಬಾ ತಮಾಷೆಯಾಗಿ ಕಂಡು ಚೆನ್ನಾಗಿ ನಕ್ಕು ನಂತರ ಚೆನ್ನಾಗಿ ಉಗಿಸಿಕೊಂಡೆ!

ಈ ಕೇರೆಗಳು ಇಲಿಗಳನ್ನೇ ಹೆಚ್ಚಾಗಿ ಬೇಟೆಯಾಡುವುದರಿಂದ ಇಂಗ್ಲಿಷ್ ನಲ್ಲಿ ಇದನ್ನು ‘ರ್ಯಾಟ್ ಸ್ನೇಕ್’ ಎಂದೇ ಕರೆಯುತ್ತಾರೆ. ಇಂತಹ ‘ಮಹಾರಾಜ’ರನ್ನೇ ಇಲಿಗಳು ಹೇಗೆ ಏಮಾರಿಸುತ್ತದೆ ಎಂಬುವುದನ್ನು ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿದ್ದು ನಂತರ ಗೆಳೆಯನ ಶೇಂದಿ ಮಾರುವ ಗುಡಿಸಲಲ್ಲಿ. ಒಂದು ರಜಾ ದಿನ ಹಲವಾರು ಮಂದಿ ಹರಟೆ ಹೊಡೆಯುತ್ತಾ ಕುಳಿತ್ತಿದ್ದೆವು. ಆ ಗುಡಿಸಲಿನ ಅಟ್ಟಕ್ಕೆ ಹಲವಾರು ತೊಲೆಗಳು. ಮುಳಿ ಹುಲ್ಲಿನ ಮಾಡೋ ಅಲ್ಲಲ್ಲಿ ತೂತಾಗಿ ಬಿಸಿಲು ಕೋಲುಗಳು ಒಳಗೆ ಬೀಳುತ್ತಿದ್ದವು. ಅಷ್ಟರಲ್ಲಿ ಕೇರೆ ಹಾವೊಂದು ಪ್ರತ್ಯಕ್ಷವಾಯಿತು. ನಾಲ್ಕು ಇಲಿಗಳು ದಡಬಡ ಓಡಾಡಿದವು. ಮುಂದಿನದ್ದು ಅನಿರೀಕ್ಷಿತವಾಗಿತ್ತು. ಈ ಇಲಿಗಳು ಅದರ ಮೇಲೆ ಗೆರಿಲ್ಲಾ ದಾಳಿ ನಡೆಸಿದವು! ಒಂದು ಇಲಿಯನ್ನು ಹಿಡಿಯಲು ಹೋದಾಗ ಉಳಿದವು ಬಾಲಕ್ಕೆ ಕಚ್ಚಿ ದಿಕ್ಕಾಪಾಲಾಗಿ ಓಡುವುದು. ಅದು ತಿರುಗಿದಾಗ ಆ ಕಡೆಯಿಂದ ಬಂದು ಬಾಲಕ್ಕೆ ಕಚ್ಚುವುದು! ಇಲಿ ಕಚ್ಚಿದರೆ ಎಷ್ಟು ನೋವಾಗುತ್ತದೆ ಎಂಬುವುದು ಕಚ್ಚಿಸಿಕೊಂಡವರಿಗೇ ಗೊತ್ತು! ಕಂಗೆಟ್ಟ ‘ಮಹಾರಾಜ’ ಪರಾರಿಯಾಗಲು ಮಾಡಿನ ಒಂದು ತೂತಿನಿಂದ ತಲೆ ಹೊರಗೆ ಹಾಕಿದ್ದೇ ತಡ ಎರಡು ಮೂರು ಇಲಿಗಳು ಬಾಲಕ್ಕೆ ಕಚ್ಚಿದ ನೋವಿಗೆ ಆತ ರಾಕೆಟ್‌ನಂತೆ ಚಿಮ್ಮಿದ! ಹೊರಗೆ ಕ್ಷಣ ಮಾತ್ರದಲ್ಲಿ ದೊಪ್ಪನೇ ಸದ್ದು ಕೇಳಿಸಿತು! ನಾವು ಈ ‘ಮೂಷಿಕ ವಿಜಯ’ ಎಂಬೊಂದು ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾದೆವು.

ಹಳ್ಳಿ ಮನೆಗಳ ಒಳಗೆ ಬೇರೆ ಬೇರೆ ರೀತಿಯ ಹಾವುಗಳು ಬರುವುದು ಸಾಮಾನ್ಯ. ಅವುಗಳಲ್ಲಿ ಕೇರೆ ಮತ್ತು ನಾಗರ ಹಾವುಗಳನ್ನು ಬಿಟ್ಟು ಉಳಿದವುಗಳಿಗೆ ಮರಣದಂಡನೆಯೂ ಅಷ್ಟೇ ಸಾಮಾನ್ಯ. ಕೆಲವರ್ಷಗಳ ಹಿಂದೆ ಒಂದು ಕೇರೆ ಹಾವು ಮಾತ್ರ ನನ್ನ ಹೃದಯ ಬಾಯಿಗೆ ಬರುವಂತೆ ಮಾಡಿತ್ತು. ನಮ್ಮ ಅಡುಗೆ ಕೋಣೆಯ ಮೂಲೆಯಲ್ಲಿ ಒಂದು ಕಲ್ಲಿನ ಶೆಲ್ಫ್. ಅದರಲ್ಲಿ ಹಳೆ ಮಡಕೆ ಅದೂ ಇದೂ ಇದ್ದವು. ಅಲ್ಲಿ ಯಾವಾಗಲೂ ಅರೆಗತ್ತಲು. ಒಂದು ದಿನ ನಾನು ಏನನ್ನೋ ಹುಡುಕುತ್ತಾ ಈ ಶೆಲ್ಫಿನ ಒಳಗೆ ಇಣುಕಿ ನೋಡುತ್ತೇನೆ ಹಾವಿನ ತಲೆಯೊಂದು ನನ್ನನ್ನೇ ದಿಟ್ಟಿಸುತ್ತಿದೆ. ನಾನು ಎಷ್ಟು ಗಾಬರಿಬಿದ್ದೆನೆಂದರೆ, ಅದು ಏನು ಎತ್ತ ಎಂದು ನೋಡದೇ ಕತ್ತಲ್ಲಿ ಹಿಡಿದು ಎಸೆದು ಬಿಟ್ಟೆ! ಅದು ದೊಪ್ಪನೇ ಇನ್ನೊಂದು ಮೂಲೆಗೆ ಬಿತ್ತು. ಅದೊಂದು ದೊಡ್ಡ ಕೇರೆ ಹಾವಾಗಿತ್ತು. ಇದು ಮನೆಯೊಳಗೆ ಇದ್ದರೆ, ನನ್ನ ಹೆಂಡತಿಯಂತೂ ಮನೆಯೊಳಗೆ ಬರಲಾರಳು! ಹಾವಿಗೆ ಸಿಮೆಂಟ್ ನೆಲದಲ್ಲಿ ಓಡಾಡುವುದು ಕಷ್ಟ. ಪೊರಕೆ ಹಿಡಿದು ಹೆದರಿಸಿದರೆ ಹಜಾರದಲ್ಲಿ ವಿಚಿತ್ರವಾಗಿ ತೆವಳುತ್ತಾ ಫ್ರಿಜ್ಜಿನ ಹಿಂಭಾಗದ ಮೆಷ್‌ನಲ್ಲಿ ಸುತ್ತಿ ಕುಳಿತಿತು. ಅಲ್ಲಿಂದ ಕಷ್ಟಪಟ್ಟು ಓಡಿಸಿದರೆ ನೇರವಾಗಿ ಒಳಗಿನ ಕೋಣೆಯತ್ತ ಹೋಗಿ ಟಾಯ್ಲೆಟ್ ಸಿಂಕಿನ ಹಿಂಭಾಗದಲ್ಲಿ ಕುಳಿತಿತು. ಅಲ್ಲಿಂದ ಹೊರಬರಲು ಒಂದೇ ಬಾಗಿಲಲ್ಲವೇ! ಆದರೂ ಭಯದಿಂದಲೇ ಹೋದೆ. ಕೇರೆಗೆ ವಿಷವಿಲ್ಲದಿದ್ದರೂ ಬಾಲದಲ್ಲಿ ಹೊಡಿಯುತ್ತದೆ ಎಂಬ ಪ್ರತೀತಿ. ಸೊಂಟ ಬಗ್ಗಿಸಿ ಕೆಲಸ ಮಾಡದವರಿಗೆ ತುಳುವಿನಲ್ಲಿ ‘‘ಸೊಂಟೊಗ್ ಕೇರೆ ಆಕ್‌ದ್‌ಂಡಾ?’’ (ಸೊಂಟಕ್ಕೆ ಕೇರೆ ಹೊಡೆದಿದೆಯೇ) ಎಂದು ಕೇಳುವುದು ಮಾಮೂಲಿ. ಅಂತೂ ಅಲ್ಲಿಂದ ಓಡಿಸಿದರೆ ಮತ್ತೊಂದು ಒಳಕೋಣೆಗೆ ಹೋಗಿ ಕಪಾಟಿನ ಅಡಿಯಲ್ಲಿ ತಗಡು ಬೆಂಡಾಗಿರುವ ಜಾಗದಲ್ಲಿ ಮಂಡಲ ಹಾಕಿ ವಿರಾಜಮಾನವಾಯಿತು. ಇದರ ಸಹವಾಸವೇ ಬೇಡ ಎಂದು ಎರಡೂ ಕಿಟಕಿಗಳನ್ನು ತೆರೆದು ಬಾಗಿಲು ಹಾಕಿಕೊಂಡು ನಾನು ನನ್ನ ಕೆಲಸದಲ್ಲಿ ತೊಡಗಿದೆ. ನಂತರ ಅದರ ಬಗ್ಗೆ ಯೋಚಿಸಲಿಲ್ಲ.

ಇದಾದ ಎರಡು ದಿನಗಳ ನಂತರ ಅದೇ ಕೋಣೆಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೇನೆ. ಕಪಾಟಿನ ಒಳಗಿಂದ ಟಪ್‌ಟಪ್‌ಟಪ್ ಎಂದು ಸದ್ದು ಬರುತ್ತಿದೆ. ನನಗೆ ಕೇರೆಯ ನೆನಪಾಯಿತು. ಇದು ಇನ್ನೂ ಹೋಗಿಲ್ಲವೇ?! ಆದರೆ ಸದ್ದು ಒಳಗಿನಿಂದ ಬಂದಂತೆ ಕೇಳಿಸುತ್ತಿದೆ. ಅದು ಒಳಗೆ ಹೋಗುವುದಾದರೂ ಹೇಗೆ? ಬಾಗಿಲು ತೆರೆದು ನೋಡಿದರೂ ಏನೂ ಇಲ್ಲ! ತುಂಬಾ ಹೊತ್ತು ಪರಿಶೀಲಿಸಿದಾಗ ಶಬ್ದದ ಗುಟ್ಟು ಗೊತ್ತಾಯಿತು. ಕಪಾಟಿನ ಹಿಂಭಾಗದಲ್ಲಿ ಎರಡು ಹಲ್ಲಿಗಳು ಪ್ರಣಯದಾಟದಲ್ಲಿ ತೊಡಗಿವೆ. ಅವು ಬಾಲದಲ್ಲಿ ಕಪಾಟಿನ ತಗಡಿಗೆ ಟಪ್‌ಟಪ್ ಎಂದು ಬಾರಿಸುತ್ತಿವೆ! ಈ ಹಲ್ಲಿಗಳು ಮಾತ್ರವಲ್ಲದೆ ನಾಯಿ, ಬೆಕ್ಕು, ಜೇಡ, ಮೊಲ, ಇರುವೆ, ಪಕ್ಷಿಗಳು- ಹೀಗೆ ನೂರಾರು ಕತೆಗಳಿವೆ. ಜಾಗದ ಮಿತಿಯಿಂದ ನಾನು ಕಳೆದ ಅತ್ಯಂತ ಅಪಾಯಕಾರಿ ಕ್ಷಣಗಳಲ್ಲಿ ಒಂದಷ್ಟು ಇಲ್ಲಿ ಹೇಳಬೇಕು.

ಒಂದು ರಾತ್ರಿ ಹೆಂಡತಿ ಮಕ್ಕಳು ಬೇಸಿಗೆ ರಜೆಯಲ್ಲಿ ಮುಂಬೈಗೆ ಹೋಗಿದ್ದರು. ನಾನು ಹಜಾರದಲ್ಲಿ ಒಂದು ಚಾಪೆ ಹಾಸಿಕೊಂಡು ಟಿ.ವಿ. ನೋಡಿ ಅಲ್ಲಿಯೇ ಮಲಗಿದ್ದೆ. ಮಧ್ಯರಾತ್ರಿ ಏಕೋ ಎಚ್ಚರವಾದಾಗ ಮುಖದ ಬಳಿಯೇ ಏನೋ ಇರುವಂತಹ ಭಾವನೆ. ತಡವಿದಾಗ ತಣ್ಣಗೆ ರಬ್ಬರಿನಂತಹದ್ದೇನೋ ಇದೆ! ಕ್ಷಣದಲ್ಲೇ ಅದೇನೆಂದು ನನಗೆ ಹೊಳೆಯಿತು. ಕೂಡಲೇ ಎರಡು ಸುತ್ತು ಹೊರಳಿದ ನಾನು ಲೈಟ್ ಉರಿಸಿ, ಅಲ್ಲೇ ಬದಿಯಲ್ಲಿ ಇದ್ದ ಕೋಲಿನಿಂದ ಪರಾವರ್ತಿತ ಪ್ರತಿಕ್ರಿಯೆ ಎಂಬಂತೆ, ಯೋಚಿಸುವ ಮೊದಲೇ ನಾಲ್ಕು ಬಾರಿಸಿದೆ. ಅದೊಂದು ಅತ್ಯಂತ ವಿಷಕಾರಿ ಕೊಳಕು ಮಂಡಲ ಹಾವು! ಹಾವುಗಳು ಕೈ ಕಾಲಿಗೆ ಕಚ್ಚಿದರೆ ಹಗ್ಗದಲ್ಲಿ ಕಟ್ಟಿ, ರಕ್ತ ಹರಿಸಿ ಮಾಡುವ ಪ್ರಥಮ ಚಿಕಿತ್ಸೆ ನನಗೆ ಗೊತ್ತು. ಆದರೆ ಈ ಹಾವು ನನ್ನ ಮುಖಕ್ಕೆ ಕಚ್ಚದ್ದರೆ ನನ್ನ ಕತೆ ಕೈಲಾಸವಾಗುತ್ತಿತ್ತು.

ಛೇ ಹಾವನ್ನು ಕೊಲ್ಲಬಾರದಿತ್ತು ಎನ್ನುವವರು ಇರಬಹುದು. ನಾನು ಸಾಮಾನ್ಯವಾಗಿ ಇದನ್ನು ಒಪ್ಪಬಹುದು. ಆದರೆ, ಜೀವ ಉಳಿಸಿಕೊಳ್ಳಲು ಪ್ರತಿದಾಳಿ ಮಾಡುವ ಪ್ರಾಣಿ ಸಹಜ ಪ್ರತಿಕ್ರಿಯೆ ನನ್ನಲ್ಲೂ ಜಾಗೃತವಾಗಿತ್ತು! ಕೆಲವೇ ಕ್ಷಣಗಳಲ್ಲಿ ಇದು ನಡೆದಿತ್ತು. ಆದರೆ ಮನುಷ್ಯ ಇದಕ್ಕಿಂತಲೂ ಕ್ರೂರಿಯಾಗಬಲ್ಲ!

ಈ ಕತೆಯಲ್ಲಿ ಬಂದಿರುವ ಕೊರಗ ಗೆಳೆಯ ಬಲ್ಲು ಇದ್ದಾನಲ್ಲ ಅವನನ್ನು ಮನುಷ್ಯನ ಕ್ರೌರ್ಯವೇ ಆ ಕಾಲದಲ್ಲಿ ಕೊಂದಿತು. ಆಗ ನಾನು ಮುಂಬೈಯಲ್ಲಿದ್ದೆ. ಅವನಿಗೆ ಕಲ್ಲಡ್ಕ ಪೇಟೆಯಲ್ಲಿ ಕಾರೊಂದು ಢಿಕ್ಕಿ ಹೊಡೆಯಿತಂತೆ. ಢಿಕ್ಕಿ ಹೊಡೆದವರೋ, ಬೇರೆಯವರೋ ಅವನನ್ನು ಸುಳ್ಳು ವಿಳಾಸ ಕೊಟ್ಟು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಿದರು. ಅಲ್ಲಿ ಆತ ಯಾರಿಗೂ ಗೊತ್ತಿಲ್ಲದಂತೆ ಅನಾಥವಾಗಿ ಸತ್ತನಂತೆ. ನನಗೆ ಕೆಲವರ್ಷಗಳ ನಂತರವಷ್ಟೇ ತಿಳಿಯಿತು! ಬಹುಶಃ ಮನುಷ್ಯನಷ್ಟು ಕ್ರೂರ ಪ್ರಾಣಿ ಬೇರೆ ಇರಲಾರದೇನೋ!.

ಮಧ್ಯರಾತ್ರಿ ಏಕೋ ಎಚ್ಚರವಾದಾಗ ಮುಖದ ಬಳಿಯೇ ಏನೋ ಇರುವಂತಹ ಭಾವನೆ. ತಡವಿದಾಗ ತಣ್ಣಗೆ ರಬ್ಬರಿನಂತಹದ್ದೇನೋ ಇದೆ! ಕ್ಷಣದಲ್ಲೇ ಅದೇನೆಂದು ನನಗೆ ಹೊಳೆಯಿತು. ಕೂಡಲೇ ಎರಡು ಸುತ್ತು ಹೊರಳಿದ ನಾನು ಲೈಟ್ ಉರಿಸಿ, ಅಲ್ಲೇ ಬದಿಯಲ್ಲಿ ಇದ್ದ ಕೋಲಿನಿಂದ ಪರಾವರ್ತಿತ ಪ್ರತಿಕ್ರಿಯೆ ಎಂಬಂತೆ, ಯೋಚಿಸುವ ಮೊದಲೇ ನಾಲ್ಕು ಬಾರಿಸಿದೆ. ಅದೊಂದು ಅತ್ಯಂತ ವಿಷಕಾರಿ ಕೊಳಕು ಮಂಡಲ ಹಾವು! ಹಾವುಗಳು ಕೈ ಕಾಲಿಗೆ ಕಚ್ಚಿದರೆ ಹಗ್ಗದಲ್ಲಿ ಕಟ್ಟಿ, ರಕ್ತ ಹರಿಸಿ ಮಾಡುವ ಪ್ರಥಮ ಚಿಕಿತ್ಸೆ ನನಗೆ ಗೊತ್ತು. ಆದರೆ ಈ ಹಾವು ನನ್ನ ಮುಖಕ್ಕೆ ಕಚ್ಚದ್ದರೆ ನನ್ನ ಕತೆ ಕೈಲಾಸವಾಗುತ್ತಿತ್ತು.

ಕರಾವಳಿಯಲ್ಲಿ ಬಾವಲಿಯನ್ನೂ ತಿನ್ನುತ್ತಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಶಂಭೂರು ಎಂಬ ಎರಡು ಗ್ರಾಮಗಳು ತಾಳೆ ಮರದ ಶೇಂದಿಗೆ ಬಹಳ ಪ್ರಖ್ಯಾತ. ಎಲ್ಲಿ ನೋಡಿದರಲ್ಲಿ ತಾಳೆ ಮರಗಳು. ಹಾಗೆಯೇ ಮೂರ್ತೆ ಕಟ್ಟಿ ಶೇಂದಿ ಇಳಿಸುವ ಬಿಲ್ಲವರು ಬಹುಸಂಖ್ಯಾತರು. ಈ ಬಾವಲಿಗಳಿಗೂ ಶೇಂದಿ ಕುಡಿಯುವ ಹುಚ್ಚು! ದಿನಕ್ಕೆರಡು ಬಾರಿ ಭಾರೀ ಎತ್ತರಕ್ಕೆ ಏರಿ ಇಳಿಯುವ ಮೂರ್ತೆದಾರರ ಎದೆ ಧಸಕ್ಕೆನ್ನುವಂತೆ ಮರದಲ್ಲಿ ಕಟ್ಟಿದ ಮಡಕೆ ಖಾಲಿ ಮಾಡುವ ಬಾವಲಿಗಳಿಗೆ ಕೆಲವೊಮ್ಮೆ ಕತ್ತರಿ ಇಡುತ್ತಾರೆ. ಬಿದ್ದ ಬಾವಲಿಗಳು ಕೆಲವೊಮ್ಮೆ ಶೇಂದಿ ಜೊತೆಗೆ ಚಾಕಣ ಆಗುತ್ತವೆ.

ಈ ಕೇರೆಗಳು ಇಲಿಗಳನ್ನೇ ಹೆಚ್ಚಾಗಿ ಬೇಟೆಯಾಡುವುದರಿಂದ ಇಂಗ್ಲಿಷ್ ನಲ್ಲಿ ಇದನ್ನು ‘ರ್ಯಾಟ್ ಸ್ನೇಕ್’ ಎಂದೇ ಕರೆಯುತ್ತಾರೆ. ಇಂತಹ ‘ಮಹಾರಾಜ’ರನ್ನೇ ಇಲಿಗಳು ಹೇಗೆ ಏಮಾರಿಸುತ್ತದೆ ಎಂಬುವುದನ್ನು ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿದ್ದು ನಂತರ ಗೆಳೆಯನ ಶೇಂದಿ ಮಾರುವ ಗುಡಿಸಲಲ್ಲಿ. ಒಂದು ರಜಾ ದಿನ ಹಲವಾರು ಮಂದಿ ಹರಟೆ ಹೊಡೆಯುತ್ತಾ ಕುಳಿತ್ತಿದ್ದೆವು. ಆ ಗುಡಿಸಲಿನ ಅಟ್ಟಕ್ಕೆ ಹಲವಾರು ತೊಲೆಗಳು. ಮುಳಿ ಹುಲ್ಲಿನ ಮಾಡೋ ಅಲ್ಲಲ್ಲಿ ತೂತಾಗಿ ಬಿಸಿಲು ಕೋಲುಗಳು ಒಳಗೆ ಬೀಳುತ್ತಿದ್ದವು. ಅಷ್ಟರಲ್ಲಿ ಕೇರೆ ಹಾವೊಂದು ಪ್ರತ್ಯಕ್ಷವಾಯಿತು...!!

ಹಿಂದೆ ಕೊರಗ ಜನಾಂಗದವರು ಮತ್ತು ಕ್ರೈಸ್ತರು ಮಾತ್ರ ಆಮೆ ಮಾಂಸ ತಿನ್ನುತ್ತಿದ್ದರು. ನಮ್ಮ ಮನೆಯ ಜಾಗದಲ್ಲಿಯೇ ಒಂದು ಕೊರಗ ಕುಟುಂಬ ವರ್ಷಾಂತರಗಳಿಂದ ತಾತ್ಕಾಲಿಕ ಗುಡಿಸಲು ಕಟ್ಟಿ ವಾಸವಾಗಿತ್ತು. ಅವರ ಕುಟುಂಬದವರು ಆಮೆಗಳನ್ನು ಹಿಡಿದು ಮಾರುವುದು, ತಿನ್ನುವುದು ಸಾಮಾನ್ಯವಾಗಿತ್ತು. ನೀರಿನ ತೋಡುಗಳ ಅರೆಕೆಸರು ಜಾಗದಲ್ಲಿ ಕೈಯಲ್ಲಿರುವ ದೊಣ್ಣೆಯಿಂದ ಕುಟ್ಟಿ ಕುಟ್ಟಿ ಆಮೆ ಪತ್ತೆ ಮಾಡುತ್ತಿದ್ದರು.ಆದರೆ ಅದನ್ನು ಚಿಪ್ಪಿನಿಂದ ಹೇಗೆ ಹೊರಗೆ ತೆಗೆಯುತ್ತಾರೆ ಎಂಬುದನ್ನು ನಾನು ನೋಡಿರಲೇ ಇಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top