-

ಡೊನಾಲ್ಡ್ ಟ್ರಂಪ್ ಎಂಬ...

-

ಳೆದ ಒಂದು ವಾರದಿಂದ ಡೊನಾಲ್ಡ್ ಟ್ರಂಪ್ ಬಗ್ಗೆ ಯೋಚಿಸುತ್ತಿರುವೆ. ಯೋಚಿಸಲು ಈತನೇನು ನನ್ನ ಮನಸ್ಸನ್ನು ಪ್ರಫುಲ್ಲಗೊಳಿಸುವ ತತ್ವಜ್ಞಾನಿ ಅಲ್ಲ, ಮಹಾನ್ ಲೇಖಕನಲ್ಲ, ಕ್ರೀಡಾಪಟುವಲ್ಲ. ಆದರೆ ಅತ್ಯಂತ ಶ್ರೀಮಂತ. ಅದರ ಒತ್ತಡದಿಂದ ಏನು ಬೇಕಾದರೆ ಮಾತಾಡಬಲ್ಲೆ, ಯಾರನ್ನು ಬೇಕಾದರೂ ಕೊಂಡುಕೊಳ್ಳಬಲ್ಲೆ, ಎಂಬ ಮನೋಭಾವನೆಯಲ್ಲಿ ಹುಚ್ಚು ಕುದುರೆಯಂತೆ; ಅಮೆರಿಕದ ಅಧ್ಯಕ್ಷ ಪದವಿಗೆ ಸ್ಪರ್ಧಿಯಾಗಿ ಓಡುತ್ತಿರುವಂಥವರು.

ಇದನ್ನು ಬರೆಯಲು ಯೋಚಿಸುತ್ತಿರುವಾಗ, ಕಳೆದ ಮೂರು ದಿನಗಳಿಂದ ಲಂಕೇಶ ಅವರನ್ನು ಕುರಿತು ವಿಚಾರ ಸಂಕಿರಣವಿತ್ತು. ಅವರ ನಾಟಕಗಳ ಮತ್ತು ಚಲನಚಿತ್ರಗಳ ಪ್ರದರ್ಶನವಿತ್ತು. ಇದಕ್ಕೆ ಮುಖ್ಯ ಶೀರ್ಷಿಕೆಯಾಗಿದ್ದುದು: ‘ಇಂದು ಲಂಕೇಶ್ ಇರಬೇಕಾಗಿತ್ತು’ ಎಂದು. ಇದ್ದಿದ್ದರೆ ಎಲ್ಲವೂ ಸರಿಹೋಗಿ ಬಿಡುತ್ತಿತ್ತು ಎಂಬ ಆಶಯವೂ ಇರಬಹುದು. ಆ ಶೀರ್ಷಿಕೆಯ ಕೆಳಗೆ ‘ಅಂದಿನ ಲಂಕೇಶ್ ಪತ್ರಿಕೆ: ಇಂದಿನ ಸಮೂಹ ಮಾಧ್ಯಮಗಳು’ ಎಂಬ ವಿಷಯದ ಬಗ್ಗೆ ಮಾತಾಡಲು ಕೊಟ್ಟಿದ್ದರು. ಆ ವಿಷಯ ಕುರಿತು ನಾನೇನು ಮಾತಾಡಲು ಬಯಸಿ ಪಡೆದದ್ದಲ್ಲ. ಸುಮ್ಮನೆ ಕೊಟ್ಟುಬಿಟ್ಟರು. ನಾನು ನಗುತ್ತ ಅವರ ಮೇಲಿನ ಅಭಿಮಾನದಿಂದ ಮಾತಾಡಲು ಹೋದೆ. ಅಂದು ಎಲ್ಲ ಸರಿಹೋಗಿತ್ತು. ಹೀಗೆ ಸರಿಹೋಗುವುದಕ್ಕೆ ‘ಲಂಕೇಶ್ ಪತ್ರಿಕೆ’ ಕಾರಣ ಎಂಬ ಹುಂಬತನವನ್ನು ತುಂಬಿಕೊಂಡವನಲ್ಲ. ಅಥವಾ ಹೇಳಿದ್ದರೆ ಅಥವಾ ಭಾವಿಸಿದ್ದರೆ ಅವರ ಆತ್ಮಕ್ಕೆ ದ್ರೋಹ ಬಗೆದಂತೆ. ಅವರು ನಾನಾ ವಿಧದ ಸೃಜನಶೀಲತೆಯ ಹುಡುಕಾಟದಲ್ಲಿದ್ದುದರಿಂದ ಪತ್ರಿಕೆ ತಂದರು. ಆದರೆ ಒಂದಂತೂ ಸತ್ಯ. ಅವರು ಮೂಲಭೂತವಾಗಿ ನಮ್ಮ ಕಾಲದ ಬಹುದೊಡ್ಡ ಸೃಜನಶೀಲ ಬರಹಗಾರರಾಗಿದ್ದರು. ಅವರ ಹುಡುಕಾಟ ವಿಚಿತ್ರವಾಗಿತ್ತು.

ಸದಾ ಒಂದು ವಿಧದ ಅತೃಪ್ತಿಯಿಂದ ಒದ್ದಾಡುತ್ತಿದ್ದರು. ಪತ್ರಿಕೆ ಬಂದು ಅದು ಉತ್ತುಂಗದ ಸ್ಥಿತಿಯಲ್ಲಿರುವಾಗಲೇ ಅದನ್ನು ನಿಲ್ಲಿಸಿ ಬಿಡುವ ಅಥವಾ ಬೇರೆಯವರಿಗೆ ಹಸ್ತಾಂತರಿಸುವ ಗಾಢ ಮನಸ್ಥಿತಿಗೆ ತಲುಪಿದ್ದವರು. ಇದಕ್ಕಾಗಿ ಎರಡು ಮೂರು ಬಾರಿ ಒಂದು ಸಂಪಾದಕ ಮಂಡಳಿಯನ್ನು ರೂಪಿಸಿ; ಅದರ ಕಂಪ್ಯೂಟರ್ ಪ್ರಿಂಟ್‌ನ ಪ್ರತಿಯನ್ನು ನಮಗೆಲ್ಲ ಕೊಟ್ಟಿದ್ದರು. ಏಳೆಂಟು ಮಂದಿಯ ಸಂಪಾದಕ ಮಂಡಳಿಯಲ್ಲಿ ನಾವೆಲ್ಲ ಇದ್ದೆವು. ಆಗ ಪತ್ರಿಕೆಯ ಜೀವಾಳವೆಂಬಂತೆ ದುಡಿಯುತ್ತಿದ್ದ ಬಸವರಾಜ್ ಅವರೂ ಇದ್ದರು. ಈಗ ಬೆಂಗಳೂರಿನ ‘ವಾರ್ತಾಭಾರತಿ’ಯ ಆವೃತ್ತಿಯಲ್ಲಿದ್ದಾರೆ. ಲಂಕೇಶ್ ಅವರು ಹೀಗೆ ಮಾಡಲು ಮುಖ್ಯ ಕಾರಣ: ಪತ್ರಿಕೆಯಿಂದ ನಿಜವಾದ ಸೃಜನಶೀಲ ಬರವಣಿಗೆ ಸಾಯುತ್ತಿದೆ ಎಂದು.

ಹೌದು ಆ ಕಾಲಘಟ್ಟದಲ್ಲಿ ಪತ್ರಿಕೆಯು ಸ್ವಲ್ಪಮಟ್ಟಿಗೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಕುರಿತು ಒಂದು ಅಪೂರ್ವ ಸಂವೇದನಾಶೀಲತೆಯನ್ನು ಬೆಳೆಸಿತು. ಆದರೆ ಈಗ ಎಲ್ಲ ಕೆಟ್ಟು ಹೋಗಿದೆ. ಅವರು ಇದ್ದಿದ್ದರೆ ಸರಿಹೋಗಿಬಿಡುತ್ತಿತ್ತು ಎಂದು ಯೋಚಿಸುವುದೂ ಅಪರಾಧವಾಗುತ್ತಿದೆ ಅಥವಾ ನಮ್ಮ ಆತ್ಮಕ್ಕೆ ದ್ರೋಹ ಬಗೆದಂತೆ. ಇರಲಿ, ಇತಿಹಾಸದ ಚಕ್ರದಲ್ಲಿ ಯಾರ್ಯಾರೊ ಬಂದು ಹೋಗುತ್ತಿರುತ್ತಾರೆ. ಹೀಗೆ ಆಗುವಾಗ ಯಾವುದೂ ಯಾರಿಗಾಗಿಯೂ ಕಾಯುವುದಿಲ್ಲ. ನಡೆಯುತ್ತಲೇ ಹೋಗುತ್ತಿರುತ್ತದೆ ಎಂಬ ಅರಿವು ನಮ್ಮನ್ನು ಬಂಧಿಸುತ್ತಲೇ ಇರುತ್ತದೆ. ಈ ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಯಾರು? ಎಲ್ಲಿಂದ ಬಂದ? ಎಂಬ ಪ್ರಶ್ನೆಯು ಒಂದೆರಡು ತಿಂಗಳು ಅಮೆರಿಕದಲ್ಲಿರುವಾಗ, ಆತನ ಮಾತಿನ ವೈಖರಿ, ದೇಹದ ಚಲನವನ್ನು ಸಾಕಷ್ಟು ಗ್ರಹಿಸಿದ್ದೇನೆ. ಅಯ್ಯೋ ಎಷ್ಟು ಹುಚ್ಚನ ರೀತಿಯಲ್ಲಿ ಮಾತಾಡುತ್ತಾನೆ ಎಂಬ ಅಭಿಪ್ರಾಯವನ್ನು ಅಲ್ಲಿಯ ಗೆಳೆಯರ ಬಳಿಯೂ ಪ್ರಸ್ತಾಪಿಸಿದ್ದೇನೆ. ಸೌಮ್ಯ ಸ್ವಭಾವದ ಶ್ರೀಮತಿ ಕ್ಲಿಂಟನ್ ಅವರೂ ಸ್ಪರ್ಧೆಯಲ್ಲಿದ್ದಾರೆ.

ಒಬಾಮ ಅವರು ಅಧ್ಯಕ್ಷರಾದ ಮೊದಲ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಂಥ ಜವಾಬ್ದಾರಿಯುತವಾದ ಸ್ಥಾನವನ್ನು ಅತ್ಯಂತ ಗಂಭೀರವಾಗಿ ನಿರ್ವಹಿಸಿದವರು. ಈಗ ಡೊನಾಲ್ಡ್ ಟ್ರಂಪ್ ಗದ್ದಲವೆಬ್ಬಿಸುತ್ತಿದ್ದಾರೆ. ಅತ್ಯಂತ ಅಸಹನೆಯ ವ್ಯಕ್ತಿ. ಕೊನೆಯ ಪಕ್ಷ ಒಬಾಮ ತಮ್ಮ ಅಧಿಕಾರದ ಕಾಲಘಟ್ಟದಲ್ಲಿ ಬುಷ್ ಅವರ ರೀತಿಯಲ್ಲಿ ಗುಲ್ಲೆಬ್ಬಿಸಲಿಲ್ಲ. ಹೆಚ್ಚು ಲಿಬರಲ್ಲಾಗಿ ಒಂದಷ್ಟು ಸುಧಾರಣೆಯನ್ನು ತಂದಿದ್ದಾರೆ. ಅವರೊಬ್ಬರು ಆಫ್ರಿಕನ್ ಮೂಲದ ಮುಸ್ಲಿಮ್ ಜನಾಂಗಕ್ಕೆ ಸೇರಿದವರು ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಮೂಲ ಅಮೆರಿಕದವರಲ್ಲಿ (ರೆಡ್ ಇಂಡಿಯನ್ಸ್ ಅಲ್ಲ. ಅವರು ಸರ್ವನಾಶ ಆಗಿದ್ದಾರೆ.) ಗಾಢವಾಗಿ ಜನಾಂಗೀಯ ದ್ವೇಷವನ್ನು ಬಿತ್ತುತ್ತಿರುವವರು. ಈ ಕಾರಣಕ್ಕಾಗಿ ಕಳೆದ ಸೆಪ್ಟಂಬರ್ 11ರಂದು ವಾಷಿಂಗ್‌ಟನ್‌ನಲ್ಲಿ ಬೆಳಗ್ಗೆ 9 ಗಂಟೆಗೆ ಲಿಂಕನ್ ಸ್ಮಾರಕಭವನದಲ್ಲಿದ್ದಾಗ; ಅಲ್ಲಿಯ ಅಮೋಘ ಪ್ರತಿಮೆಯ ಬಳಿ ಇದ್ದಾಗ; ಧ್ಯಾನಸ್ಥನಾಗಿ ಅಲ್ಲಿಯೇ ಕೂತುಬಿಡುವ ಅನ್ನಿಸಿತ್ತು. ಯಾಕೆಂದರೆ ನಮ್ಮಂಥವರು ಸದಾ ಸ್ಮರಿಸುವ ಗಾಂಧಿಯವರು ಹುಟ್ಟುವುದಕ್ಕೆ ನೂರು ವರ್ಷಗಳ ಹಿಂದೆಯೇ ಹುಟ್ಟಿ ಅಮೂಲ್ಯ ಕೆಲಸವನ್ನು ಮಾಡಿದವರು. ಈ ರೀತಿಯ ಅತ್ಯುತ್ತಮ ಮಾದರಿಗಳು ಇರುವಾಗ; ಡೊನಾಲ್ಡ್ ಟ್ರಂಪ್ ಅಂಥವರು ಯಾಕೆ ಬಲಪಂಥೀಯ ಧೋರಣೆಗಳಿಂದ; ಹೆಂಡ ಕುಡಿದ ಕೋತಿಗಳಂತೆ ವರ್ತಿಸುವರು ಎಂಬ ಹತ್ತಾರು ಪ್ರಶ್ನೆಗಳು ದುತ್ತನೆ ಮುಖಾಮುಖಿಯಾಗುತ್ತವೆ.

ಕೊನೆಗೂ ಚರಿತ್ರೆ ಎಂದರೆ ‘ಕಟ್ಟುವುದು, ಉರುಳಿಸುವುದು’ ಎಂಬುದು ರೂಪಕ ರೂಪದಲ್ಲಿ ಕೆಲಸ ಮಾಡಬೇಕು ಅನ್ನಿಸಿಬಿಡುತ್ತದೆ. ಟ್ರಂಪ್ ಅವರ ಆಟಾಟೋಪಗಳು ಈ ಪ್ರಮಾಣದಲ್ಲಿ ಇರಬೇಕಾ? ಎಂಬ ಪ್ರಶ್ನೆಯು ಅತ್ಯಂತ ಬೃಹತ್ತಾಗಿ ಎದ್ದು ನಿಲ್ಲುತ್ತದೆ. ಹಾಗೆ ನೋಡಿದೆ, ಸೆಪ್ಟಂಬರ್ ತಿಂಗಳಲ್ಲಿ ಟ್ರಂಪ್ ಮತ್ತು ಹಿಲರಿಯವರ ಪ್ರಚಾರದ ಸ್ವರೂಪವನ್ನು ಗಮನಿಸುತ್ತಿರುವಾಗಲೇ; ಬಹು ಸಂಭ್ರಮದಿಂದ ಎದುರಾದವರು: ಪೋಪ್ ಫ್ರಾನ್ಸಿಸ್ ಅವರು. ಅವರ ನಲವತ್ತೈದು ನಿಮಿಷಗಳ ಎರಡು ಲೈನ್ ಕಾರ್ಯಕ್ರಮಗಳನ್ನು ಸಿಎನ್‌ಎನ್ ಟಿ.ವಿ. ಮಾಧ್ಯಮದ ಮುಂದೆ ಗಂಭೀರವಾಗಿ ಕೂತು ನೋಡಿದ್ದೇನೆ. ಜಾಗತಿಕ ವಿಷಯಗಳಿಗೆ ಸಂಬಂಧಿಸಿದಂತೆ ಎಷ್ಟು ಗಂಭೀರವಾಗಿ ಪ್ರಸ್ತುತಪಡಿಸಿದರು.

ಎಷ್ಟು ಬಾರಿ ಅಮೆರಿಕದ ಪಾರ್ಲಿಮೆಂಟಿನ ಸೆನೆಟರ್ಸ್ ಎದ್ದು ನಿಂತು ಚಪ್ಪಾಳೆಯ ಮೂಲಕ ಗೌರವ ಸೂಚಿಸಿದ್ದಾರೆ. ಕರುಳು ಕಿತ್ತು ಬರುವ ರೀತಿಯಲ್ಲಿ ಪ್ರತಿದಿನ ಪತ್ರಿಕೆಗಳಲ್ಲಿ ನೋಡುತ್ತಿದ್ದ ಚಿತ್ರಣಗಳಿಂದ ಒದ್ದಾಡುತ್ತಿರುವ ಸಮಯದಲ್ಲಿ; ಪೋಪ್ ಫ್ರಾನ್ಸಿಸ್ ಅವರು ನನಗೆ ಸಮಾಧಾನ ಹೇಳುತ್ತಿದ್ದಾರೆನ್ನುವ ರೀತಿಯಲ್ಲಿ ಅಮೆರಿಕಗೆ ಕರೆಕೊಟ್ಟರು. ‘‘ಡು ಸಮ್‌ಥಿಂಗ್, ಫೈಂಡ್ ಔಟ್ ಸಮ್‌ಸೆಲ್ಯೂಷನ್, ಅಮೆರಿಕ ಕೆನ್ ಡು ಇಟ್’ ಎಂದು ಹೇಳುವಾಗ, ನಿಜವಾಗಿಯೂ ನಾನು ಭಾವನಾತ್ಮಕತೆಯಿಂದ ನಮಸ್ಕರಿಸಿದ್ದೆ. ಹಾಗೆಯೇ ‘ಆಫ್ರಿಕನ್-ಅಮೆರಿಕನ್ಸ್’ ಎಂಬ ಗೌರವದ ಹೆಸರಿನಿಂದ ಗುರುತಿಸಿಕೊಳ್ಳುತ್ತಿರುವಂತೆ ಮಾಡಿದ ಅಮೆರಿಕದ ಸರಕಾರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಜಗತ್ತಿನ ಎಷ್ಟೊಂದು ಆಗುಹೋಗುಗಳಿಗೆ ಅನ್ವಯಿಸಿ ‘ಟೇಕ್ ರೆಸ್ಪಾನ್ಸ್ಸಿಬಿಲಿಟಿ’ ಎಂದು ಹೇಳುವುದಿದೆಯಲ್ಲ. ಅದು ಅಷ್ಟು ಸುಲಭದ ಕೆಲಸವಲ್ಲ. ಹಾಗೆ ನೋಡಿದರೆ ಯಾವ ಧರ್ಮ ಗುರುವೂ ಈ ರೀತಿಯಲ್ಲಿ ಹೇಳಲು ಹೋಗಿಲ್ಲ. ಆದ್ದರಿಂದಲೇ ಅಮೆರಿಕಾದ ಉದ್ದಗಲಕ್ಕೂ ಎಲ್ಲ ಮಾಧ್ಯಮಗಳಲ್ಲಿ ಗುನುಗುನಿಸಿದ್ದು ‘ಪೀಪಲ್ಸ್ ಪೋಲ್’ ಎಂದು.

  ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರದ ಮತ್ತು ತಮ್ಮ ಮಾತುಗಳನ್ನೇ ಮೋಹಿಸಿಕೊಳ್ಳುತ್ತಿರುವ ಸಮಯದಲ್ಲಿ ನಿಜವಾಗಿಯೂ ಪೋಪ್ ಫ್ರಾನ್ಸಿಸ್ ಅವರ ಗಂಭೀರವಾದ ನುಡಿಗಳನ್ನು ಕೇಳಿಸಿಕೊಂಡಿರಲು ಸಾಧ್ಯವಿಲ್ಲ. ಅವರು ಒಂದು ವೇಳೆ ಕೇಳಿಸಿಕೊಂಡಿದ್ದರೆ; ಅತ್ಯಂತ ಬೇಜವಾಬ್ದಾರಿಯ ಮಾತಾದ: ‘‘ಮುಸ್ಲಿಮರನ್ನು ಅಮೆರಿಕದೊಳಗೆ ಬಿಟ್ಟುಕೊಳ್ಳುವುದನ್ನು ನಿಷೇಧಿಸಬೇಕು’’ ಎಂಬುದು ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಈ ಮಾತು ಈಗಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದೆ. ಅದರಲ್ಲೂ ಒಬಾಮ ಅವರಂಥ ಸುಸಂಸ್ಕೃತ ಅಧ್ಯಕ್ಷರು ಅಧಿಕಾರದಲ್ಲಿರುವಾಗ, ಇದು ಭೀಕರ ಅಹಂಕಾರದ ಮಾತು ಅನ್ನಿಸಿತು. ಆ ಸಂದರ್ಭದಲ್ಲಿ ಕೆಲವು ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಒಬಾಮ ಅವರ ಭಾವಚಿತ್ರವನ್ನು ನೋಡಿದೆ: ಎಷ್ಟು ಪೆಚ್ಚಾಗಿ ವಿಷಾದಮಯತೆಯನ್ನು ತುಂಬಿಕೊಂಡಿದ್ದರು. ಹಿಂದೆಯೂ ಇದೇ ಅಂಕಣದಲ್ಲಿ ಪ್ರಸ್ತಾಪಿಸಿರುವೆ: ಒಬಾಮ ಅವರು ಅಧಿಕಾರಕ್ಕೆ ಬಂದಾಗ, ಅವರು ಮೊದಲು ತಮ್ಮ ಆಪ್ತ ಕಾರ್ಯದರ್ಶಿಗಳನ್ನು ವಿನಂತಿಸಿಕೊಂಡಿದ್ದು: ನಾನು ಓದಲೇಬೇಕಾದ ಹತ್ತು ಅತ್ಯುತ್ತಮ ಕೃತಿಗಳನ್ನು ಪಟ್ಟಿ ಮಾಡಿ ಕೊಡಿ ಎಂದು. ಅದರಲ್ಲಿ ಗಾಂಧೀಜಿಯವರನ್ನು ಕುರಿತದ್ದೂ ಇತ್ತು. ಈ ರೀತಿಯ ಮನೋಭಾವನೆಯ ಸ್ವಲ್ಪ ಭಾಗವಾದರೂ ಇದ್ದಿದ್ದರೆ: ‘‘ಮುಸ್ಲಿಮರು ಅಮೆರಿಕಾದೊಳಗೆ ಬರುವುದನ್ನು ನಿಷೇಧಿಸಬೇಕು’’ ಎಂದು ಹೇಳುತ್ತಿರಲಿಲ್ಲ. ಇದು ಏನು ತೋರಿಸುತ್ತದೆ ಎಂದರೆ: ಪುಸ್ತಕ ಸಂಸ್ಕೃತಿಯು ಯಾವಾಗಲೂ ನಮ್ಮನ್ನು ಘನತೆಯ ಕಡೆಗೆ ಕರೆದೊಯ್ಯುತ್ತದೆ ಎಂದು. ಕೊನೆಗೆ ಒಬಾಮ ಅವರು ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಪ್ರಸ್ತಾಪ ಮಾಡದೆ, ಇಡೀ ಅಮೆರಿಕಾದ ಇತಿಹಾಸಕ್ಕೆ ಷರಾ ಬರೆಯುವ ರೀತಿಯಲ್ಲಿ ಒಂದು ಮಾತು ಹೇಳಿದರು; ಒಟ್ಟು ಅಮೆರಿಕವನ್ನು ಕಟ್ಟಿದವರು ಮತ್ತು ಬೆಳೆಸಿದವರು ವಲಸೆ ಬಂದವರು ಎಂದು. ನನಗೆ ಈ ಮಾತು ಬ್ಯೂಟಿಫುಲ್ ಅನ್ನಿಸಿತು. ಪ್ರತಿಯೊಬ್ಬ ಪಾರ್ಲಿಮೆಂಟೇನಿಯನ್‌ಗೆ ‘ಮಾತಿನ ಲಯ’ ಗೊತ್ತಿರಬೇಕು ಎನ್ನುವುದಕ್ಕೆ ಇದು ಅತ್ಯುತ್ತಮ ಉದಾಹರಣೆ.

 ಆದರೆ ಚಾರಿತ್ರಿಕ ದುರಂತವೆಂದರೆ: ಮತ್ತೊಂದು ಕಡೆ ರಷ್ಯಾದ ಅಧ್ಯಕ್ಷರಾದ ಪುತಿನ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಅಡ್ಡಾದಿಡ್ಡಿ ಹೊಗಳುತ್ತಾರೆ. ಪುತಿನ್ ಅವರಂಥ ಡಿಕ್ಟೇಟರ್‌ಗೆ ಕೆಲವು ಮಾನವೀಯ ಸಂಗತಿಗಳು ಗೊತ್ತಾಗುವುದಿಲ್ಲ. ಈ ಪುತಿನ್ ಮಹಾಶಯರು ಅಲ್ಲಿಯೂ ತಮ್ಮ ನಗುಮುಖವನ್ನು ತೋರಿಸಿಲ್ಲ. ಯಾವಾಗಲೂ ಹಿಟ್ಲರ್ ರೀತಿಯಲ್ಲಿ ಮುಖ ಸೆಟೆದುಕೊಂಡೇ ಇರುತ್ತಾರೆ.ಇದಕ್ಕಿಂತ ದೊಡ್ಡ ದುರಂತವೆಂದರೆ: ತಾವು ಒಂದು ಜವಾಬ್ದಾರಿಯಂತೆ ರಾಷ್ಟ್ರದ ಅಧ್ಯಕ್ಷರಾಗಿ, ಇನ್ನೊಂದು ದೊಡ್ಡ ರಾಷ್ಟ್ರದ ಅಧ್ಯಕ್ಷ ಪದವಿಗೆ ಸ್ಪರ್ಧೆಯಲ್ಲಿರುವ ವ್ಯಕ್ತಿಯ ಕುರಿತು ಗುಣಗಾನ ಮಾಡುವುದು ಅಪರಾಧವಾಗುತ್ತದೆ. ನನ್ನ ಅರಿವಿನ ಮಟ್ಟಿಗೆ ಇಲ್ಲಿಯವರೆಗೂ ಯಾರೂ ಈ ರೀತಿಯಲ್ಲಿ ಮಾತಾಡಲು ಹೋಗಿಲ್ಲ. ಇದು ಅತ್ಯಂತ ಸರಳವಾದ ‘ಕಾಮನ್ ಸೆನ್ಸ್’ ಪ್ರಶ್ನೆ. ಈಗಾಗಲೇ ಪುತಿನ್ ಅವರು ಎಲ್ಲ ರೀತಿಯ ರಾಜಕೀಯ ಮತ್ತು ಸಾಮಾಜಿಕ ಚಿಂತಕರಿಂದ ಟೀಕೆಗೆ ಗುರಿಯಾಗಿದ್ದಾರೆ. ಗಂಭೀರವಾಗಿ ತನ್ನ ದೇಶವನ್ನು ಆಂತರಿಕವಾಗಿ ಗಟ್ಟಿಯಾಗಿ ಬೆಳೆಸಲು ಆಗದವರು, ಹೀಗೆ ತುಂಬ ಹುಂಬತನದಿಂದ ಮಾತಾಡಲು ಹೋಗುವರು. ಒಂದು ದೃಷ್ಟಿಯಿಂದ ಡೊನಾಲ್ಡ್ ಟ್ರಂಪ್ ಮತ್ತು ಪುತಿನ್ ಅವರು ಸಮಾನ ಮನಸ್ಕರು ಅನ್ನಿಸುತ್ತದೆ. ಹಾಗೆಯೇ ಇಸ್ಪಿಟ್ ಪ್ಯಾಕ್‌ನಲ್ಲಿ ಟ್ರಂಪ್‌ಕಾರ್ಡ್ ರೀತಿಯಲ್ಲಿರುವಂತೆ ಜೋಕರ್ ಕಾರ್ಡ್ ಆಗಿಬಿಟ್ಟಿರುತ್ತಾರೆ. ಮತ್ತೊಂದು ಮುಖ್ಯ ವಿಷಯ: ಟ್ರಂಪ್ ಅವರು ‘‘ಮುಸ್ಲಿಮರು ಅಮೆರಿಕದೊಳಗೆ ಬರುವುದನ್ನು ನಿಷೇಧಿಸಬೇಕು’’ ಎಂದು ಹೇಳಿರುವ ಮಾತಿನಿಂದ ಮೂಲ ಅಮೆರಿಕನ್ನರ ಬಲಪಂಥೀಯ ಮನಸ್ಸನ್ನು ಗಟ್ಟಿಗೊಳಿಸಿ ಒಂದಷ್ಟು ಮತಗಳನ್ನು ಹೆಚ್ಚುವರಿಯಾಗಿ ಪಡೆಯಲೂ ಬಹುದು. ಅಧ್ಯಕ್ಷರಾಗಿ ಚುನಾಯಿತರಾಗಿ ಬರಬಹುದು. ಒಂದು ಅವಧಿಗೆ ಅಥವಾ ಎರಡು ಅವಧಿಗೆ ಮುಂದುವರಿಯಲೂಬಹುದು. ಆದರೆ ಅದು ಜನರ ಮನಸ್ಸನ್ನು ಘಾಸಿಗೊಳಿಸಿ ಪರೋಕ್ಷವಾಗಿ ಭಯೋತ್ಪಾದನೆಯ ಕಡೆಗೆ ಕರೆದೊಯ್ದಂತೆ ಆಗುವುದು. ಇಂಥ ದೂರದೃಷ್ಟಿಯಿಲ್ಲದ ನಾಯಕರಿಂದ ಯಾವುದೇ ಸಮಾಜ ಗಾಯಗೊಳ್ಳುತ್ತಲೇ ಹೋಗುವುದು. ಕಟ್ಟುವುದು ಕಷ್ಟ ಆದರೆ ಉರುಳಿಸುವುದು ಅತ್ಯಂತ ಸುಲಭ.

ಹೀಗೆ ಯಾವುದೇ ದೇಶದಲ್ಲಿ ಆಗಲಿ ಡೊನಾಲ್ಡ್ ಟ್ರಂಪ್ ಅವರ ರೀತಿಯಲ್ಲಿ ಹೇಳಿಕೆ ಕೊಡುವ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯ ಸ್ಥಾನದಲ್ಲಿರುವ ನಾಯಕರನ್ನು; ಪ್ರತ್ಯೇಕ ನ್ಯಾಯಾಂಗದಡಿಯಲ್ಲಿ ಶಿಕ್ಷಿಸುವುದು ಸೂಕ್ತ ಅನ್ನಿಸುತ್ತದೆ. ಯಾಕೆಂದರೆ; ಎಲ್ಲ ಜನಾಂಗಗಳ ಸಾಮರಸ್ಯ ಮತ್ತು ಆರೋಗ್ಯಪೂರ್ಣ ಬದುಕಿನ ಪ್ರಶ್ನೆ ಇದಾಗಿರುತ್ತದೆ. ಮನಸ್ಸುಗಳನ್ನು ಗಾಯಗೊಳಿಸುವುದು ಸುಲಭ. ವಾಸಿ ಮಾಡುವುದಕ್ಕೆ ಎಷ್ಟು ಕಾಲ ತೆಗೆದುಕೊಳ್ಳುವುದು. ಹಾಗೆಯೇ ವಾಸಿಯಾಗುವ ಮುನ್ನ ಮತ್ತೊಬ್ಬ ಡೊನಾಲ್ಡ್ ಅಂಥವರು ಬಂದರೆ; ಅದರ ಹಿಂಸೆ ದುಪ್ಪಟ್ಟು ಆಗುವುದು. ಜೊತೆಗೆ ಫ್ಯಾಶಿಸ್ಟ್ ನಡಾವಳಿಗಳು ಮಾದರಿಯಾಗುವುದು ಯಾವಾಗಲೂ ಅಪಾಯಕಾರಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top