ಆಸ್ಕರ್ ಪಟ್ಟಿಯಲ್ಲಿ ಕನ್ನಡದ ರಂಗಿತರಂಗ
ನಿಗೂಢ ರೋಚಕ ಕತೆಯನ್ನು ಹೊಂದಿರುವ ಚಿತ್ರ ಆಸ್ಕರ್ ನಾಮನಿರ್ದೇಶನಕ್ಕೊಳಗಾಗುವ ಚಿತ್ರಗಳ ಕಿರು ಪಟ್ಟಿಗೆ ಸೇರ್ಪಡೆಗೊಂಡಿರುವ ವಿಷಯವನ್ನು ನಿರ್ದೇಶಕರು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರ ಲೋಕದಲ್ಲಿ ಭಾರೀ ಸದ್ದೆಬ್ಬಿಸುತ್ತಿರುವ ಅನೂಪ್ ಭಂಡಾರಿ ನಿರ್ದೇಶನದ ಪ್ರಥಮ ಚಿತ್ರ ‘ರಂಗಿತರಂಗ’ ಆಸ್ಕರ್ ನಾಮನಿರ್ದೇಶನಗೊಳ್ಳಬಹುದಾದ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ನಿಗೂಢ ರೋಚಕ ಕತೆಯನ್ನು ಹೊಂದಿರುವ ಚಿತ್ರ ಆಸ್ಕರ್ ನಾಮನಿರ್ದೇಶನಕ್ಕೊಳಗಾಗುವ ಚಿತ್ರಗಳ ಕಿರು ಪಟ್ಟಿಗೆ ಸೇರ್ಪಡೆಗೊಂಡಿರುವ ವಿಷಯವನ್ನು ನಿರ್ದೇಶಕರು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
‘‘ಆಸ್ಕರ್ ನಾಮನಿರ್ದೇಶನಗಳಿಗಾಗಿ ಆಯ್ಕೆಯಾದ 305 ಚಿತ್ರಗಳ ಪಟ್ಟಿಯಲ್ಲಿ ರಂಗಿತರಂಗವೂ ಸೇರಿದೆ. ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೆ ಹಾಗೂ ನಮ್ಮನ್ನು ಬೆಂಬಲಿಸಿದ ಪ್ರೇಕ್ಷಕರಿಗೆ ಅಭಿನಂದನೆಗಳು’’ ಎಂದು ಅವರು ಬರೆದಿದ್ದಾರೆ.
ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ರಾಧಿಕಾ ಚೇತನ್ ಮತ್ತು ಆವಂತಿಕಾ ಶೆಟ್ಟಿ ಮುಂತಾದ ಹೊಸಬರ ತಂಡವೊಂದರ ಸಂಪೂರ್ಣ ತಂಡ ಪ್ರಯತ್ನವೇ ‘ರಂಗಿತರಂಗ’. ಕಾದಂಬರಿಕಾರ ಗೌತಮ್ (ಚಿತ್ರದಲ್ಲಿ ಅನಶ್ಕು)ರ ಜೀವನ ಪಯಣದ ಸುತ್ತ ಚಿತ್ರ ಸಾಗುತ್ತದೆ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಚಿತ್ರಕ್ಕೆ ಹೊಂದುವ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಜೊತೆಗೆ ಮರಾಠಿ ಚಿತ್ರ ‘ಕೋರ್ಟ್’, ಮಲಯಾಳಂ ಚಿತ್ರ ‘ಜಲಂ’, ಕೊಂಕಣಿ ಚಿತ್ರ ‘ನಾಚೋಂ ಇಯ ಕುಂಪಸರ್’ ಮುಂತಾದ ಚಿತ್ರಗಳೂ ಕಿರು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹಿಂದಿ ಚಿತ್ರ ‘ಹೇಮಾಲ್ಕಸ’ ಮತ್ತು ಭಾರತ-ಆಸ್ಟ್ರೇಲಿಯನ್ ಚಿತ್ರ ‘ಸಾಲ್ಟ್ ಬ್ರಿಜ್’ ಕೂಡ ಪಟ್ಟಿಗೆ ಸೇರ್ಪಡೆಗೊಂಡಿವೆ.





