ಶಾಸ್ತ್ರ-ಶಸ್ತ್ರಗಳ ಮೂಲಕ ಬೆದರಿಕೆ ದೇಶದದುರಂತ: ನಿಡುಮಾಮಿಡಿ ಸ್ವಾಮೀಜಿ
ಕಾನೂನಿನ ಭಯದಿಂದ ಗೋಚರ ಅಸ್ಪೃಶ್ಯತೆ ನಿಂತಿದೆ. ಆದರೆ, ಅಗೋಚರ ಅಸ್ಪಶ್ಯತೆ ಇನ್ನೂ ಜಾರಿಯಲ್ಲಿದ್ದು, ಅದು ಆಗಾಗ ಸ್ಫೋಟಗೊಳ್ಳುತ್ತಿರುತ್ತದೆ ಎಂದು ದೂರಿದರು.
ಸಾಮಾಜಿಕ ಸಾಮರಸ್ಯಕ್ಕಾಗಿ ಜನಜಾಗೃತಿ ಸಮಾವೇಶ
ಬೆಂಗಳೂರು,ಡಿ.17: ಸಾವಿರಾರು ವರ್ಷಗಳಿಂದ ಶಾಸ್ತ್ರಗಳ ಶೋಷಣೆ ಮಾಡುತ್ತಿದ್ದ ಜನರು ಇಂದು ಶಸ್ತ್ರಗಳ ಮೂಲಕ ಜನರನ್ನು ಹೆದರಿಸಿ, ಬೆದರಿಸಿ ಹತ್ಯೆ ಮಾಡಲು ಮುಂದಾಗಿ ರುವುದು ದುರಂತದ ಸಂಗತಿಯಾಗಿದೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 59ನೆ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಸಾಮಾಜಿಕ ಸಾಮರಸ್ಯಕ್ಕಾಗಿ ಜನಜಾಗೃತಿ ಸಮಾವೇಶ ಹಾಗೂ ಅಸಹನೆ- ಅಸಹಿಷ್ಣುತೆ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸಹನೆ-ಅಸಹಿಷ್ಣುತೆ ದೇಶಕ್ಕೆ ಹೊಸ ದಲ್ಲ, ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿತ್ತು. ಎರಡು ವಿಭಿನ್ನ ಕೋಮುಗಳು ಒಂದು ಕಡೆ ಇದ್ದಾಗ ಸಂಘರ್ಷ ಉಂಟಾ ಗುವುದು ಸಾಮಾನ್ಯ. ಆದರೆ ಅವರು ಸಾಮರಸ್ಯದಿಂದ ಜೀವನ ನಡೆಸಬೇಕೆಂಬುದು ನಮ್ಮೆಲ್ಲರ ಆಶಯವಾಗಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಅಸಹನೆ ಮತ್ತು ಅಸಹಿಷ್ಣುತೆ ಪ್ರಜ್ಞಾ ಪೂರ್ವಕವಾಗಿ ನಡೆಯುತ್ತಿದ್ದು, ಹಿಂದೆ ದ್ವೇಷವನ್ನು ಬಿತ್ತುವುದೆ ನಮ್ಮ ಧರ್ಮ ಎಂದವರಿಂದ ಸಮಾಜ ಅಪಾರವಾದ ನೋವನ್ನು ಕಂಡಿದೆ. ಸಮಾಜದ ಬಹುಸಂಖ್ಯಾತ ಜನರು ಎಚ್ಚೆತ್ತುಕೊ ಳ್ಳಬೇ ಕಿದ್ದು, ಚಳವಳಿಗಳನ್ನು ತೀವ್ರಗೊಳಿಸಬೇಕಿದೆ ಎಂದರು.
ಅಸಹಿಷ್ಣುತೆಯ ಹಿಂದೆ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ಹಿತಾಸಕ್ತಿಗಳ ಪ್ರಭಾವವಿದ್ದು, ದೇಶದ ಶೇ.90 ರಷ್ಟು ಜನರ ಹಿತಾಸಕ್ತಿಯನ್ನು ಶೇ.10ರಷ್ಟು ಜನರು ನಿರ್ಧರಿ ಸುತ್ತಿದ್ದಾರೆ. ಶೇ.10ರಷ್ಟು ಜನರ ರಕ್ಷಣೆ ಶೇ.90ರಷ್ಟು ಜನರ ಮೇಲೆ ನಿಂತಿರುವುದು ಮತ್ತೊಂದು ವಿಪರ್ಯಾಸದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ಯಾವುದೇ ಒಂದು ಪರಂಪರೆಗೆ ಸೀಮಿತವಾಗಿಲ್ಲ. ಇದರಲ್ಲಿ ಹಲವಾರು ಸಂಸ್ಕೃತಿಗಳು ಸೇರಿ ಕೊಂಡಿವೆ. ಶೇ.10 ರಷ್ಟು ಜನರ ಹಿತಾಸಕ್ತಿಯೆ ದೇಶದ ಹಿತಾಸಕ್ತಿ ಎಂದು, ಅವರ ಧರ್ಮವೇ ದೇಶದ ಧರ್ಮವೆಂದು, ಅವರ ಆಚಾರ ವಿಚಾರಗಳೆ ದೇಶದ ಆಚಾರ ವಿಚಾರಗಳು ಎನ್ನುವ ಮೂಲಕ ಏಕಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರುವ ಪ್ರಯತ್ನ ನಡೆಯುತ್ತಿದ್ದು, ವೈದಿಕ ಧರ್ಮ ನಮಗೆ ಆದರ್ಶವಲ್ಲ ಎಂದು ಹೇಳಿದರು.
ಎರಡು ದಶಕಗಳ ಹಿಂದೆ ಹೆಚ್ಚಾಗಿದ್ದ ಅಸಹಿಷ್ಣುತೆಯ ಪ್ರಕ್ರಿಯೆಇಂದು ಅತಿರೇಕಕ್ಕೆ ಹೋಗಿದೆ. ಚುನಾವಣೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಹಣ, ಅಧಿಕಾರ ಮತ್ತು ಪ್ರಭಾವ ಇದೆ ಎಂದು ಮನಸ್ಸಿಗೆ ಬಂದ ಹಾಗೆ ಮಾಡುತ್ತಿದ್ದು, ಸಮಾಜದಲ್ಲಿ ಸಮುದಾಯಗಳ ನಡುವೆ ಶಾಂತಿ ಕದಡಿ, ಹಿಂಸೆ, ಅಸಹನೆ ಹಾಗೂ ದ್ವೇಷವನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಾಜದಲ್ಲಿರುವ ಬಹುಸಂಖ್ಯಾತರ ಸಮುದಾಯಗಳಲ್ಲಿನ ಕೆಲವರು ಗುಲಾಮಗಿರಿಯನ್ನು ಒಪ್ಪಿಕೊಂಡಿದ್ದು, ಕಂಡವರ ಬೊಗಸೆಯಲ್ಲಿ ನೀರು ಕುಡಿಯುವ ಮನಸ್ಥಿತಿ ಇನ್ನೂ ಹೋಗಿಲ್ಲ ಎಂದು ದೂರಿದ ಸ್ವಾಮೀಜಿ, ಡಿ.6ರಂದು ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಮಹತ್ವವನ್ನು ಕುಗ್ಗಿಸಲು ಬಾಬ್ರಿ ಮಸೀದಿ ಯನ್ನು ಧ್ವಂಸಗೊಳಿಸಿದರೆ, ಮೇ.21ರ ಬುದ್ಧ ಪೌರ್ಣಿಮೆಯ ಮಹತ್ವವನ್ನು ಕುಗ್ಗಿಸಲು ದೇಶದಲ್ಲಿ ಅಣು ಪರೀಕ್ಷೆ ಮಾಡುವಷ್ಟು ಅಸಹಿಷ್ಣುತೆ ದೇಶದಲ್ಲಿ ಹೆಚ್ಚಿದೆ ಎಂದು ಟೀಕಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆ ಗಾರ ದಿನೇಶ್ ಅಮೀನ್‌ಮಟ್ಟು, ದೇಶದಲ್ಲಿಂದು ಅಸ್ಪಶ್ಯತೆ ಮರೆ ಯಾಗಿದೆ ಎಂದು ಎಲ್ಲರೂ ಭಾವಿಸಿದ್ದು, ಕಾನೂನಿನ ಭಯದಿಂದ ಗೋಚರ ಅಸ್ಪೃಶ್ಯತೆ ನಿಂತಿದೆ. ಆದರೆ, ಅಗೋಚರ ಅಸ್ಪಶ್ಯತೆ ಇನ್ನೂ ಜಾರಿಯಲ್ಲಿದ್ದು, ಅದು ಆಗಾಗ ಸ್ಫೋಟಗೊಳ್ಳುತ್ತಿರುತ್ತದೆ ಎಂದು ದೂರಿದರು. ಅಧಿಕಾರದಲ್ಲಿರುವ ಸರಕಾರ ಅಸಹಿಷ್ಣುತೆ ಯ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಕೇಂದ್ರ ಸರ ಕಾರ ಅಸಹಿಷ್ಣುತೆಯ ಪರವಾಗಿ ನಿಂತು ಅವರಿಗೆ ಬೆಂಗಾವಲಾಗಿ ನಿಂತರೆ ಅಸಹಿ ಷ್ಣುತೆಯನ್ನು ತಡೆಯುವುದು ಹೇಗೆ ಎಂದ ಅವರು, ಸರಕಾರ ಅಸಹಿಷ್ಣುತೆಯ ಪರವಾಗಿ ನಿಂತಿರುವುದು ಇದೇ ಮೊದಲಲ್ಲ, ಈ ಹಿಂದೆ ಸರಕಾರವೆ ಮುಂದೆ ನಿಂತು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿತ್ತು ಎಂದು ಆರೋಪಿಸಿದರು.
ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಚಕ್ರವನ್ನು ನಾನುಇಲ್ಲಿಯವರೆಗೆ ಎಳೆದುಕೊಂಡು ಬಂದಿದ್ದೇನೆ. ಅದನ್ನು ಸಾಧ್ಯವಾ ದರೆ ಮುಂದಕ್ಕೆ ಎಳೆದುಕೊಂಡು ಹೋಗಿ ಆದರೆ, ಹಿಂದಕ್ಕೆ ಎಳೆಯಬೇಡಿ ಎಂದಿದ್ದರು. ಆದರಿಂದು ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗುತ್ತಿದ್ದು, ಇದರ ವಿರುದ್ಧ ಹೋರಾಟಗಳು, ಚಳವಳಿಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಳಂದ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ, ಧಾರ್ಮಿಕ ಮುಖಂಡ ಸೈಯದ್ ಶಫೀಉಲ್ಲಾ, ಸಿಎಸ್‌ಐನ ಡಾ.ಮನೋಹರ್‌ಚಂದ್ರಪ್ರಸಾದ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಸುಧಾ ವಾರಪತ್ರಿಕೆಯ ಉಪಸಂಪಾದಕ ಬಿ.ಎಂ.ಹನೀಫ್ ಸೇರಿದಂತೆ ಪ್ರಮುಖರು ಹಾಜರಿದ್ದರು.





