ಅರುಣಾಚಲ ಬಿಕ್ಕಟ್ಟಿನಲ್ಲಿ ನನ್ನ ಪಾತ್ರವಿಲ್ಲ’

ಅರುಣಾಚಲಪ್ರದೇಶದ ರಾಜಕೀಯ ಬಿಕ್ಕಟ್ಟಿನಲ್ಲಿ ತನ್ನ ಪಾತ್ರವಿರುವುದನ್ನು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜ್ಜು ಶನಿವಾರ ಬಲವಾಗಿ ನಿರಾಕರಿಸಿದ್ದಾರೆ. ‘ಅನೈತಿಕ ವಿಧಾನಗಳನ್ನು ಅನುಸರಿಸುವುದು ಹಾಗೂ ಪರಿಸ್ಥಿತಿಯ ದುರ್ಲಾಭವನ್ನು ಪಡೆಯುವುದು ನನ್ನ ರಕ್ತದಲ್ಲಿಲ’್ಲ ಎಂದು ಅವರು ಹೇಳಿದ್ದಾರೆ. ಅರುಣಾಚಲ ಪ್ರದೇಶದ ಪ್ರಸಕ್ತ ಬಿಕ್ಕಟ್ಟು ಕಾಂಗ್ರೆಸ್‌ನ ಸೃಷ್ಟಿಯಾಗಿದೆಯೆಂದವರು ಆಪಾದಿಸಿದ್ದಾರೆ.
ಬಿಜೆಪಿ ಹಾಗೂ ಬಂಡುಕೋರ ಕಾಂಗ್ರೆಸ್ ಶಾಸಕರು ವಿಧಾನಸಭಾ ಭವನದಿಂದ ಹೊರಗೆ ಅಧಿವೇಶನವನ್ನು ನಡೆಸಿ, ನೂತನ ಮುಖ್ಯಮಂತ್ರಿಯ ಆಯ್ಕೆ ಮಾಡಿರುವ ಬಗ್ಗೆ ರಾಜ್ಯಪಾಲ ಜೆ.ಪಿ.ರಾಜ್‌ಕೋವಾ ಹೊರಡಿಸಿದ ಅಧಿಸೂಚನೆಗೆ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಕಿರಣ್ ರಿಜ್ಜು ಈ ಹೇಳಿಕೆ ನೀಡಿದ್ದಾರೆ.
ಅರುಣಾಚಲದಲ್ಲಿ ಕೇಂದ್ರದ ಬಿಜೆಪಿ ಸರಕಾರವು ಕಿರಣ್ ರಿಜ್ಜು ಅವರ ನೆರವಿನೊಂದಿಗೆ ಅರುಣಾಚಲದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಸಂಚು ನಡೆಸಿದೆಯೆಂದು ಕೆಲವು ಕಾಂಗ್ರೆಸ್ ನಾಯಕರು ಆಪಾದಿಸಿದ್ದರು. ಅರುಣಾಚಲದ ಬಿಕ್ಕಟ್ಟಿನಲ್ಲಿ ತನ್ನ ಪಾತ್ರವೇನೂ ಇಲ್ಲ. ವಿಷಯವು ಈಗ ಹೈಕೋರ್ಟ್‌ನಲ್ಲಿರುವುದರಿಂದ, ತಾನು ಆ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಲಾರೆನೆಂದು ರಿಜ್ಜು ಹೇಳಿದ್ದಾರೆ. ಅರುಣಾಚಲದಲ್ಲಿ ಬಿಜೆಪಿಯು ವಿರೋಧಪಕ್ಷವಾಗಿದ್ದು, ಸರಕಾರದ ತಪ್ಪು ನಿಲುವುಗಳನ್ನು ಅದು ವಿರೋಧಿಸುವುದು ಎಂದರು.
ರಾಜ್ಯಪಾಲ ವಜಾಕ್ಕೆ ಕಾಂಗ್ರೆಸ್ ಆಗ್ರಹ
ನೂತನ ಮುಖ್ಯಮಂತ್ರಿಯ ಆಯ್ಕೆ ಸೇರಿದಂತೆ ಅರುಣಾಚಲ ಪ್ರದೇಶದ ರಾಜ್ಯಪಾಲ ಜೆ.ಪಿ.ರಾಜ್‌ಖೋವಾ ಅವರ ಎಲ್ಲ ವಿವಾದಾತ್ಮಕ ನಿರ್ಧಾರಗಳಿಗೆ 2016ರ ಫೆಬ್ರವರಿ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಕಾಂಗ್ರೆಸ್ ಸ್ವಾಗತಿಸಿದೆ ಹಾಗೂ ರಾಜ್ಯಪಾಲರನ್ನು ವಜಾಗೊಳಿಸಬೇಕೆಂದು ಅದು ಆಗ್ರಹಿಸಿದೆ.







