ಭಾರತದ ವಿರುದ್ಧ ಹೇಳಿಕೆ ಬೇಡ: ಪಾಕ್ ಪ್ರಧಾನಿ ತಾಕೀತು
ಭಾರತದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಿರುವಂತೆ ತನ್ನ ಸಂಪುಟದ ಸಚಿವರಿಗೆ ಪಾಕ್ ಪ್ರಧಾನಿ ನವಾಝ್ ಶರೀಫ್ ತಾಕೀತು ಮಾಡಿರುವುದಾಗಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಸ್ಲಾಮಾಬಾದ್, ಡಿ.19: ಭಾರತದ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಿರುವಂತೆ ತನ್ನ ಸಂಪುಟದ ಸಚಿವರಿಗೆ ಪಾಕ್ ಪ್ರಧಾನಿ ನವಾಝ್ ಶರೀಫ್ ತಾಕೀತು ಮಾಡಿರುವುದಾಗಿ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಸಕ್ತ ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಗೆ ಧಕ್ಕೆಯುಂಟು ಮಾಡುವ ಅಪಾಯವಿರುವುದರಿಂದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾರತದ ವಿರುದ್ಧ ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಿರುವಂತೆ ಪ್ರಧಾನಿ ಸೂಚಿಸಿರುವುದಾಗಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ತಿಳಿಸಿದೆ.
‘‘ಯಾವುದಾದರೂ ಹೇಳಿಕೆ ನೀಡುವುದಿದ್ದಲ್ಲಿ ಅದು ದ್ವಿಪಕ್ಷೀಯ ಶಾಂತಿ ಮಾತುಕತೆಗೆ ಪೂರಕ ಹಾಗೂ ಪ್ರೋತ್ಸಾಹದಾಯಕವಾಗಿರಬೇಕು. ಬದಲಿಗೆ ಎಲ್ಲವನ್ನು ಕೆಡಿಸುವಂತಹ ಹೇಳಿಕೆಗಳನ್ನು ನೀಡಕೂಡದು ಎಂದಿರುವ ನವಾಝ್ ಶರೀಫ್, ಶಾಂತಿ ಪ್ರಕ್ರಿಯೆಯನ್ನು ಉತ್ತೇಜಿಸಬೇಕು ಎಂಬುದಾಗಿ ತಮ್ಮ ನಿಕಟವರ್ತಿಗಳನ್ನು ಹಾಗೂ ಸಚಿವರನ್ನು ಕೇಳಿಕೊಂಡಿದ್ದಾರೆ’’ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ‘ದ ನೇಶನ್’ ಪತ್ರಿಕೆ ವರದಿ ಮಾಡಿದೆ.
ಭಾರತದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವುದರಿಂದ ಪಾಕ್‌ಗೆ ಮಾತ್ರವಲ್ಲದೆ, ಪ್ರಾದೇಶಿಕವಾಗಿಯೂ ಅನುಕೂಲವಾಗುವ ಆಶಯವನ್ನು ಶರೀಫ್ ವ್ಯಕ್ತಪಡಿಸಿದ್ದಾರೆ.
ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವ ಬಗ್ಗೆ ತಾನು ಆಶಾವಾದಿ ಯಾಗಿರುವುದಾಗಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ಏರ್ಪಡಿಸಲಾಗಿದ್ದ ‘ಹಾರ್ಟ್ ಆಫ್ ಏಶ್ಯ’ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕ್ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆ ಬಳಿಕ ಉಭಯ ರಾಷ್ಟ್ರಗಳು ಸಮಗ್ರ ದ್ವಿಪಕ್ಷೀಯ ಮಾತುಕತೆಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದವು.
ಇತ್ತೀಚೆಗೆ ನಡೆದ ಭಾರತ-ಪಾಕ್ ಮಾತುಕತೆ ವೇಳೆ ವ್ಯಾಪಾರ ವಹಿವಾಟು, ಭಯೋತ್ಪಾದನೆ ನಿಗ್ರಹ ವಿಷಯಗಳ ಬಗ್ಗೆ ಚರ್ಚಿಸಿದಾಗ ಕಾಶ್ಮೀರ ವಿವಾದದ ಬಗ್ಗೆ ಪ್ರಸ್ತಾಪಿಸಲು ಶರೀಫ್ ಉತ್ಸುಕರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನವಾಝ್ ಶರೀಫ್ ಹಾಗೂ ರಾಷ್ಟ್ರದ ಸೇನಾ ನಾಯಕತ್ವವು ಭಾರತದೊಂದಿಗಿನ ಶಾಂತಿ ಸ್ಥಾಪನೆಗೆ ಸಂಬಂಧಿಸಿ ಸಮಾನ ನಿಲುವು ಹೊಂದಿದೆ ಎಂದು ಇನ್ನೋರ್ವ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಪಾಕ್ ಪ್ರಧಾನಿ ನವಾಝ್ ಶರೀಫ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಜನವರಿಯಲ್ಲಿ ಸ್ವಿಝರ್‌ಲ್ಯಾಂಡ್‌ನಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ. ಜನವರಿಯಲ್ಲಿ ದಾವೊಸ್-ಕ್ಲೋಸ್ಟರ್ಸ್‌ನಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ವೇದಿಕೆಯ 46ನೆ ವಾರ್ಷಿಕ ಸಭೆಯಲ್ಲಿ ಉಭಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.