ವಿಶ್ವಸಂಸ್ಥೆಯಿಂದ ನಿರ್ಣಯ ಅಂಗೀಕಾರ: ಸಿರಿಯದಲ್ಲಿ ಶಾಂತಿ ಸ್ಥಾಪನೆ

ಕಳೆದ ಸುಮಾರು ಐದು ವರ್ಷಗಳಿಂದ ಸಮರ ಜರ್ಜರಿತವಾಗಿರುವ ಸಿರಿಯದಲ್ಲಿ ಶಾಂತಿ ಸ್ಥಾಪನೆಗೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯವೊಂದನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ವರದಿಗಳು ತಿಳಿಸಿವೆ.
ಆದರೆ ಈ ಕುರಿತು ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್ ವೌನ ತಳದಿರುವುದಾಗಿ ಮಾಧ್ಯಮ ವರದಿಗಳು ಹೇಳಿವೆ.
ಶುಕ್ರವಾರ ನಡೆದ ಭದ್ರತಾ ಮಂಡಳಿಯ 15 ಖಾಯಂ ಸದಸ್ಯ ರಾಷ್ಟ್ರಗಳ ಸಚಿವ ಮಟ್ಟದ ಸಭೆಯಲ್ಲಿ ಯುದ್ಧ ಕೊನೆಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ತಿಂಗಳು ಸಿರಿಯ ಸರಕಾರ ಹಾಗೂ ಆಡಳಿತ ವಿರೋಧಿಗಳ ನಡುವೆ ಮಾತುಕತೆ ನಡೆಯಲಿದೆ. ತನ್ಮೂಲಕ ಸಿರಿಯದಲ್ಲಿನ ಸಮರವನ್ನು ಕೊನೆಗಾಣಿಸಲು ವಿಶ್ವ ಸಂಸ್ಥೆ ಮುಂದಾಗಿದೆ.
‘‘ಇಲ್ಲಿ ಅಂಗೀಕಾರ ಗೊಂಡಿರುವ ನಿರ್ಣಯವು ಸಿರಿಯದಲ್ಲಿ ಯುದ್ಧದಿಂದ ಸಂಭವಿಸುತ್ತಿರುವ ನಾಗರಿಕರ ಹತ್ಯೆಯನ್ನು ನಿಲ್ಲಿಸಲು ವಿಶ್ವಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ ಮತ್ತು ಯುದ್ಧಭೂಮಿಯಲ್ಲಿ ಜರ್ಜರಿತರಾಗಿ ನರಳುತ್ತಿರುವ ಮುಗ್ಧ ಜನರನ್ನು ಬೆಂಬಲಿಸುತ್ತದೆ’’ ಎಂದು ನಿರ್ಣಯ ಅಂಗೀಕಾರಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಹೇಳಿದ್ದಾರೆ.
ಐಸಿಸ್ ಉಗ್ರರನ್ನು ಮಟ್ಟ ಹಾಕುವ ಕಾರ್ಯದಲ್ಲಿ ಅಮೆರಿಕ ಪಾಲುದಾರಿಕೆ ವಹಿಸುತ್ತದೆ ಎಂಬುದಾಗಿಯೂ ಅವರು ಇದೇ ವೇಳೆ ಒತ್ತಿ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಮುಂದಿನ ಆರು ತಿಂಗಳ ಅವಧಿಯಲ್ಲಿ ಸಿರಿಯ ನೇತೃತ್ವದ ರಾಜಕೀಯ ಪ್ರಕ್ರಿಯೆಯ ಮೂಲಕ ರಾಷ್ಟ್ರದಲ್ಲಿ ‘ವಿಶ್ವಾಸಾರ್ಹ, ಸಮಗ್ರ ಹಾಗೂ ಜನಾಂಗೀಯ ಭೇದವಿಲ್ಲದ’ ಸರಕಾರವೊಂದನ್ನು ರಚಿಸುವಂತೆ ನಿರ್ಣಯ ಕರೆ ನೀಡಿದೆ. ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸದ್ ಹೊಸದಾಗಿ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಬಹುದೇ ಎಂಬುದರ ಬಗ್ಗೆ ನಿರ್ಣಯದಲ್ಲಿ ಯಾವುದೇ ಉಲ್ಲೇಖ ಮಾಡಲಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಅರಬ್ ಲೀಗ್, ಐರೋಪ್ಯ ಒಕ್ಕೂಟ, ವಿಶ್ವಸಂಸ್ಥೆ ಮತ್ತು ಅಮೆರಿಕ ಹಾಗೂ ರಶ್ಯ ಒಳಗೊಂಡಂತೆ 17 ರಾಷ್ಟ್ರಗಳನ್ನೊಳಗೊಂಡಿರುವ ಅಂತಾರಾಷ್ಟ್ರೀಯ ಸಿರಿಯ ಬೆಂಬಲಿಗರ ಸಮೂಹ(ಐಎಸ್‌ಎಸ್‌ಜಿ)ದ ಜೊತೆಗೆ ನಡೆಸಿದ ಮಾತುಕತೆ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ವಿವರಿಸಿದ ಬಳಿಕ ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿರುವುದಾಗಿ ವರದಿಗಳು ತಿಳಿಸಿವೆ.