ದುಲ್ಖರ್ ಚಿತ್ರದಲ್ಲಿ ಮಮ್ಮೂಟ್ಟಿ

ದುಲ್ಖರ್ ಸಲ್ಮಾನ್ ನಾಯಕನಾಗಿರುವ ಮಲಯಾಳಂ ಚಿತ್ರ ಚಾರ್ಲಿಯಲ್ಲಿ,ಅವರ ತಂದೆ ಮಮ್ಮುಟ್ಟಿ ಕೂಡಾ ಅಭಿನಯಿಸಲಿದ್ದಾರೆಂಬ ಬಲವಾದ ಊಹಾಪೋಹಗಳು ಕೇಳಿಬರುತ್ತಿವೆ. ಚಿತ್ರದ ಪ್ರಚಾರದ ವೇಳೆ ಈ ವಿಷಯವನ್ನು ಬಹಿರಂಗಪಡಿಸಲು ನಿರ್ಧರಿಸಿರುವ ನಿರ್ಮಾಪಕರು, ಅಲ್ಲಿಯವರೆಗೆ ಗುಟ್ಟುಬಿಟ್ಟುಕೊಡದಿರಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ತಂದೆ,ಮಗ ಒಟ್ಟಾಗಿ ಬೆಳ್ಳಿತೆರೆಯಲ್ಲಿ ಕಾಣಲು, ಅಭಿಮಾನಿಗಳು ಬಹಳ ವರ್ಷಗಳಿಂದ ತವಕದಿಂದ ಕಾಯುತ್ತಿದ್ದಾರೆ. ದುಲ್ಖರ್ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಐದು ವರ್ಷ ಕಳೆದರೂ, ತನ್ನ ತಂದೆ ಅಭಿನಯಿಸಿದ್ದ ಚಿತ್ರದಲ್ಲಿ ಈವರೆಗೆ ಕಾಣಿಸಿಕೊಂಡಿಲ್ಲ.

ಮಮ್ಮುಟ್ಟಿ ಹಾಗೂ ದುಲ್ಖರ್ ಇಬ್ಬರಿಗೂ ಮುಖ್ಯ ಪಾತ್ರಗಳಲ್ಲಿ ಹಾಕಿಕೊಂಡು ಚಿತ್ರ ನಿರ್ಮಿಸಲು ಹಲವು ನಿರ್ಮಾಪಕರು ಮುಂದೆ ಬಂದಿದ್ದರೂ, ಮುಮ್ಮುಟ್ಟಿ ಮಾತ್ರ ಅದಕ್ಕೊಪ್ಪಿರಲಿಲ್ಲ. ತಂದೆಯ ನೆರಳಿನಡಿ ಬೆಳೆಯುವ ಬದಲು, ತನ್ನ ಪುತ್ರ ಸ್ವಸಾಮರ್ಥ್ಯದಿಂದ ಚಿತ್ರರಂಗದಲ್ಲಿ ನೆಲೆಯನ್ನು ಕಂಡುಕೊಳ್ಳಬೇಕೆಂಬುದೇ ಮುಮ್ಮಟ್ಟಿಯ ಧೋರಣೆಯಾಗಿದೆ.
ಮಮ್ಮುಟ್ಟಿಯ ಪುತ್ರ ದುಲ್ಖರ್ ಎಂದು ಕರೆಸಿಕೊಳ್ಳುವ ಬದಲು, ದುಲ್ಖರ್‌ನ ತಂದೆ ತಾನೆಂದು ಗುರುತಿಸಿಕೊಳ್ಳಲು ಇಷ್ಟಪಡುವುದಾಗಿ ಮುಮ್ಮುಟ್ಟಿ ಹೇಳಿಕೊಂಡಿದ್ದರು. ಅವರ ಕನಸು ಈಗ ಸಾಕಾರಗೊಂಡಿದೆ. ದುಲ್ಖರ್ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಫಲನಾಗಿದ್ದಾನೆ. ಹೀಗಾಗಿ ಮಮ್ಮುಟ್ಟಿ, ತನ್ನ ಪುತ್ರನ ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿಕೊಂಡಿದ್ದಾರೆನ್ನಲಾಗಿದೆ.







