ಬಾಜಿರಾವ್ ಮಸ್ತಾನಿ: ಅಮರ ಮಧುರ ಪ್ರೇಮ...

‘ಬಾ ಜಿರಾವ್ ಮಸ್ತಾನಿ’ ಮೂಲಕ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ, ಒಂದು ಐತಿಹಾಸಿಕ ರಮ್ಯಪ್ರೇಮಕಥಾನಕವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ತೆರೆಯ ಮೇಲೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದ್ದೂರಿ ಸೆಟ್‌ಗಳು, ಅದ್ಭುತವಾದ ಛಾಯಾಗ್ರಹಣ,ರಣವೀರ್‌ಸಿಂಗ್, ದೀಪಿಕಾ, ಪ್ರಿಯಾಂಕಾ ಚೋಪ್ರಾ ನಡುವಿನ ಅಭಿನಯ ಕೆಮಿಸ್ಟ್ರಿ ಇವೆಲ್ಲವೂ ಬಾಜಿರಾವ್ ಮಸ್ತಾನಿಯನ್ನು, ಒಂದು ಶಾಸ್ತ್ರೀಯ ಚಿತ್ರವನ್ನಾಗಿಸಿದೆ. ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಇಡೀ ಚಿತ್ರವನ್ನು ಒಂದು ದೃಶ್ಯಕಾವ್ಯವನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಈ ಐತಿಹಾಸಿಕ ಪ್ರೇಮಕಥಾನಕವನ್ನು ಸಿನೆಮಾ ರೂಪಕ್ಕಿಳಿಸುವಾಗ ನಿರ್ದೇಶಕ ಬನ್ಸಾಲಿ, ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ. ಆದರೆ ಇತಿಹಾಸದ ಬಗ್ಗೆ ತಲೆಕೆಡಿಸಿಕೊಳ್ಳದೆ, ಚಿತ್ರವನ್ನು ವೀಕ್ಷಿಸಿದಲ್ಲಿ ಖಂಡಿತವಾಗಿಯೂ ನೀವು ಪುಳಕಿತಗೊಳ್ಳುವಿರಿ.ಈ ಚಿತ್ರಕ್ಕಾಗಿ ಬನ್ಸಾಲಿಯವರ ವರ್ಷಗಳ ಪರಿಶ್ರಮ ಫಲನೀಡಿದೆಯೆಂಬುದನ್ನು ನೀವಾಗಿಯೇ ಒಪ್ಪಿಕೊಳ್ಳುವಿರಿ.
ಮರಾಠ ದೊರೆ ಬಾಜಿರಾವ್ ಬಲ್ಲಾಳ ಪೇಶ್ವೆ (ರಣವೀರ್‌ಸಿಂಗ್) ಅತ್ಯಂತ ಮಹತ್ವಾಕಾಂಕ್ಷೆಯ ಮರಾಠ ದೊರೆ. ಹಿಂದೂ ರಾಷ್ಟ್ರವನ್ನು ನಿರ್ಮಿಸುವುದೇ ಆತನ ಗುರಿಯಾಗಿರುತ್ತದೆ. ಅದಕ್ಕಾಗಿ ಹಲವು ಯುದ್ಧಗಳನ್ನೂ ಆತ ಮಾಡುತ್ತಾನೆ. ಬಾಜಿರಾವ್ ಒಮ್ಮೆ ಮೊಗಲರ ಆಳ್ವಿಕೆಯಿರುವ ದಿಲ್ಲಿಯ ಮೇಲೆ ದಾಳಿ ನಡೆಸಲಿಕ್ಕಾಗಿ ಯೋಜನೆ ರೂಪಿಸಲು ರಾಜ್ಯದಿಂದ ದೂರವಿದ್ದಾಗ ಆತ ಮಸ್ತಾನಿ (ದೀಪಿಕಾ ಪಡುಕೋಣೆ)ಯನ್ನು ಭೇಟಿಯಾಗುತ್ತಾನೆ. ಬುಂದೇಲ್ ಖಂಡದ ದೊರೆ ಚತ್ರಸಾಲ್ ಹಾಗೂ ಆತನ ಮುಸ್ಲಿಮ್ ಪತ್ನಿಯ ಮಗಳಾದ ಮಸ್ತಾನಿ, ಮೊಗಲರ ವಶದಿಂದ ತನ್ನ ರಾಜ್ಯವನ್ನು ಮುಕ್ತಗೊಳಿಸಲು ಬಾಜಿರಾವ್‌ನ ನೆರವು ಯಾಚಿಸುತ್ತಾಳೆ. ಮಸ್ತಾನಿಯ ಸೌಂದರ್ಯ, ಪರಾಕ್ರಮ ಹಾಗೂ ಬದ್ಧತೆ, ಬಾಜಿರಾವ್‌ಗೆ ಮೆಚ್ಚುಗೆಯಾಗುತ್ತದೆ. ಆಕೆಗೆ ನೆರವಾಗಲು ಒಪ್ಪಿಕೊಳ್ಳುತ್ತಾನೆ. ಆಗ ಮೊಗಲ್ ಸೇನೆಯೊಂದಿಗೆ ನಡೆಯುವ ಕಾಳಗದ ಸಮಯದಲ್ಲಿ ಬಾಜಿರಾವ್ ಹಾಗೂ ಮಸ್ತಾನಿ ನಡುವೆ ಪ್ರೇಮ ಮೊಳಕೆಯೊಡೆಯುತ್ತದೆ.
ಇತ್ತ ಅರಮನೆಯಲ್ಲಿ, ಬಾಜಿರಾವ್‌ನ ಪತ್ನಿ ಕಾಶಿಬಾಯಿ (ಪ್ರಿಯಾಂಕಾ ಚೋಪ್ರಾ), ಆತನ ಆಗಮನಕ್ಕಾಗಿ ಹಾತೊರೆಯುತ್ತಿರುತ್ತಾಳೆ. ತನ್ನ ಪತಿಯು, ಇನ್ನೋರ್ವ ಮಹಿಳೆಯನ್ನು ಪ್ರೀತಿಸುತ್ತಿದ್ದಾನೆ ಹಾಗೂ ಆಕೆಯನ್ನು ಆಕಸ್ಮಿಕವಾಗಿ ಮದುವೆ ಕೂಡಾ ಆಗಿದ್ದಾನೆಂಬ ವಿಷಯ ಆಕೆಗೆ ತಿಳಿದಿರುವುದಿಲ್ಲ.
ಬಾಜಿರಾವ್ ಹಾಗೂ ಮಸ್ತಾನಿಯ ಈ ಅಂತರ್‌ಧರ್ಮೀಯ ಪ್ರೇಮಕ್ಕೆ, ಆತನ ಸಮುದಾಯ ಹಾಗೂ ಕುಟುಂಬದಿಂದ ಪ್ರಬಲ ವಿರೋಧ ವ್ಯಕ್ತವಾಗುವುದೇ? , ತನ್ನ ಬದುಕಿನುದ್ದಕ್ಕೂ ಮಸ್ತಾನಿಯೊಂದಿಗೆ ತನ್ನ ಗಂಡನನ್ನು ಹಂಚಿಕೊಳ್ಳಬೇಕು ಎಂಬ ಸತ್ಯವನ್ನು ಕಾಶಿಬಾಯಿ ಒಪ್ಪಿಕೊಳ್ಳಲು ಸಿದ್ಧಳಾಗುತ್ತಾಳೆಯೇ?. ಇವೆಲ್ಲವುಗಳಿಗೂ ಉತ್ತರ ನೀಡುತ್ತಾ ಬಾಜಿರಾವ್ ಮಸ್ತಾನಿ ಚಿತ್ರದ ಕಥೆ ಮುಂದೆ ಸಾಗುತ್ತದೆ...
ಬನ್ಸಾಲಿ ತನ್ನ ಹಿಂದಿನ ಚಿತ್ರ ರಾಮ್‌ಲೀಲಾದಂತೆ, ‘ಬಾಜಿರಾವ್ ಮಸ್ತಾನಿ’ಯಲ್ಲೂ ಬನ್ಸಾಲಿ, ಸಂಭಾಷಣೆಗಳಿಗೆ ಕಾವ್ಯಾತ್ಮಕ ಸ್ಪರ್ಶ ನೀಡಿದ್ದಾರೆ.ಚಿತ್ರದ ಪ್ರತಿಯೊಂದು ದೃಶ್ಯಗಳ ಸಂಭಾಷಣೆಗಳನ್ನೂ ಅಪಾರ ಶ್ರದ್ಧೆಯಿಂದ ರಚಿಸಲಾಗಿದೆ. ಕಾಶಿಬಾಯಿ ಹಾಗೂ ಮಸ್ತಾನಿ ನಡುವಿನ ಸಂಭಾಷಣೆ, ವಾರೆವ್ಹಾ ಎನ್ನುವಂತಿದೆ.
ಇಡೀ ಚಿತ್ರವು ರೋಮ್ಯಾಂಟಿಕ್ ಆ್ಯಂಗಲ್‌ನಲ್ಲಿ ಸಾಗುವುದರಿಂದ, ಯುದ್ಧದ ದೃಶ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿಲ್ಲ. ಚಿತ್ರದ ಮೊದಲಾರ್ಧದಲ್ಲಿ ಬಿಗಿಯಾದ ನಿರೂಪಣೆಯಿದ್ದರೂ, ಮಧ್ಯಂತರದ ಬಳಿಕ ಚಿತ್ರಕಥೆಯು ತುಸು ಹಿಡಿತಕಳೆದುಕೊಂಡಿದೆ. ಕ್ಲೈಮಾಕ್ಸ್ ದೃಶ್ಯವನ್ನೂ ಇನ್ನೂ ಸ್ವಲ್ಪ ಉತ್ತಮವಾಗಿ ಮೂಡಿಬರುವಂತೆ ಪ್ರಯತ್ನಿಸಬಹುದಿತ್ತು.
ರಣವೀರ್ ಸಿಂಗ್, ತನ್ನ ಚಿತ್ರಬದುಕಿನಲ್ಲಿಯೇ ಅತ್ಯುತ್ಕೃಷ್ಟ ಅಭಿನಯ ನೀಡಿದ್ದಾರೆ. ಬಾಜಿರಾವ್ ಪಾತ್ರಕ್ಕೆ ತಾನೊಂದು ಅತ್ಯುತ್ತಮ ಆಯ್ಕೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಯುದ್ಧದ ದೃಶ್ಯಗಳಲ್ಲೂ ಅವರು ಭಾವಾವೇಶದಿಂದ ನಟಿಸಿದ್ದಾರೆ.
ಮಸ್ತಾನಿಯಾಗಿ ದೀಪಿಕಾ ಪಡುಕೋಣೆ ಅಪೂರ್ವ ಅಭಿನಯ ನೀಡಿದ್ದಾರೆ. ಇದು ಆಕೆ ಅಭಿನಯಿಸಿದ ಮೊದಲ ಐತಿಹಾಸಿಕ ಹಿನ್ನೆಲೆಯ ಪಾತ್ರವಾದರೂ, ಅದಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಕಾಶಿಬಾಯಿ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಪರಕಾಯ ಪ್ರವೇಶ ಮಾಡಿದ್ದಾರೆ. ಬಾಜಿರಾವ್‌ನ ಪತ್ನಿಯಾಗಿ ಆಕೆಯ ಭಾವಾನಾತ್ಮಕ ಅಭಿನಯ ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತದೆ. ಚಿತ್ರದಲ್ಲಿ ತನ್ನ ಪಾತ್ರವಿರುವ ಪ್ರತಿಯೊಂದು ಫ್ರೇಮ್‌ನಲ್ಲೂ ಆಕೆ ಮಿಂಚಿದ್ದಾರೆ. ಬಾಜಿರಾವ್‌ನ ವಿಧವೆ ತಾಯಿಯಾಗಿ ತನ್ವಿ ಆಝ್ಮಿ ಪ್ರಬುದ್ಧವಾಗಿ ನಟಿಸಿದ್ದಾರೆ.
ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ, ಬಾಜಿರಾವ್ ಮಸ್ತಾನಿ ಮೂಲಕ ತಾನೋರ್ವ ಅಪ್ಪಟ ಪ್ರತಿಭಾವಂತ ನಿರ್ದೇಶಕನೆಂಬುದನ್ನು ನಿರೂಪಿಸಿದ್ದಾರೆ. ದೇವದಾಸ್ ಆನಂತರ, ಒಂದು ಮಹಾನ್ ಐತಿಹಾಸಿಕ ಪ್ರೇಮಕತೆಯನ್ನು ಕಣ್ಣಿಗೆ ಕಟ್ಟುವಂತೆ ಅವರು ರೂಪಿಸಿದ್ದಾರೆ. ಚಿತ್ರದ ವಸ್ತ್ರ ವಿನ್ಯಾಸಗಳು ಸೆಟ್‌ಗಳು ಹಾಗೂ ಸುದೀಪ್ ಚಟರ್ಜಿಯವರ ಅದ್ಭುತ ಛಾಯಾಗ್ರಹಣ ಇವೆಲ್ಲವೂ ಬಾಜಿರಾವ್‌ನ ಸೊಗಸನ್ನು ಹೆಚ್ಚಿಸಿವೆ.
ಮಧುರವಾದ ಸಂಗೀತವು ಚಿತ್ರದ ಕಥೆಗೆ ತಕ್ಕಂತೆ ಸಾಗುತ್ತದೆ. ಹಾಡುಗಳು ಕೂಡಾ ಪ್ರೇಕ್ಷಕರನ್ನು ಪರವಶಗೊಳಿಸುತ್ತವೆ.
ಅದ್ದೂರಿತನದ ಜೊತೆ ಅದ್ಭುತವಾದ ಕಥೆಯನ್ನು ಹೆಣೆದು, ‘ಬಾಜಿರಾವ್ ಮಸ್ತಾನಿ’ ಎಂಬ ಸುಂದರ ದೃಶ್ಯಕಾವ್ಯವನ್ನು ಸೃಷ್ಟಿಸಿದ ಬನ್ಸಾಲಿಯೇ ಚಿತ್ರದ ನಿಜವಾದ ಹೀರೋ ಎಂದರೆ ತಪ್ಪಾಗಲಾರದು. ಖಂಡಿತವಾಗಿಯೂ ಇದು ಸದಭಿರುಚಿಯ ಪ್ರೇಕ್ಷಕರು ಮಿಸ್ ಮಾಡಿಕೊಳ್ಳಬಾರದ ಸಿನೆಮಾ.
...







