ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಲ್ಲುಗಳ ಆಗಮನ; ರಾಜ್ಯ ಸಭೆಯಲ್ಲಿ ಗದ್ದಲ
ರಾಮ ಮಂದಿರ ನಿರ್ಮಾಣಕ್ಕೆ ಆಯೋಧ್ಯೆಗೆ ಗುಜರಾತ್ ಮತ್ತು ರಾಜಸ್ಥಾನದಿಂದ ಲಾರಿಗಳಲ್ಲಿ ಕಲ್ಲುಗಳನ್ನು ತಂದಿರುವ ವಿಚಾರವು ರಾಜ್ಯಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ರಾಮ ಮಂದಿರ ನಿರ್ಮಾಣಕ್ಕೆ ಆಯೋಧ್ಯೆಗೆ ಗುಜರಾತ್ ಮತ್ತು ರಾಜಸ್ಥಾನದಿಂದ ಲಾರಿಗಳಲ್ಲಿ ಕಲ್ಲುಗಳನ್ನು ತಂದಿರುವ ವಿಚಾರವು ರಾಜ್ಯಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ರಾಜ್ಯಸಭೆಯಲ್ಲಿ ಇಂದು ವಿಪಕ್ಷ ಕಾಂಗ್ರೆಸ್, ಸಮಾಜವಾದಿ ಮತ್ತು ಜನತಾದಳ ಸದಸ್ಯರು ಈ ವಿಚಾರದಲ್ಲಿ ಗದ್ದಲವನ್ನುಂಟು ಮಾಡಿದಾಗ ಸದನವನ್ನು ಸ್ವಲ್ಪ ಹೊತ್ತು ಮುಂದೂಡಲ್ಪಟ್ಟಿತು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಯು ಸದಸ್ಯ ಕೆ.ಸಿ. ತ್ಯಾಗಿ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮು ಭಾವನೆಯನ್ನು ಕೆರಳಿಸುವ ವಾತಾವರಣ ನಿರ್ಮಾಣವಾಗುತ್ತಿದೆ . ದೇವಸ್ಥಾನ ನಿರ್ಮಾಣಕ್ಕಾಗಿ ಇತ್ತೀಚೆಗೆ ಎರಡು ಲಾರಿಗಳಲ್ಲಿ ಕಲ್ಲುಗಳನ್ನು ತರಲಾಗಿದೆ ಎನ್ನುವ ಮಾಹಿತಿ ಇದೆ. ಇದು ಜನರ ಭಾವನೆಗಳನ್ನು ಕೆರಳಿಸುವುದಕ್ಕಾಗಿ ನಡೆಸಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಸ್ಪಷ್ಟನೆ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ‘‘ ಮಂದಿರ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳದಿಂದ ಒಂದೂವೆರೆ ಕಿ.ಲೋ ಮೀಟರ್ ದೂರದಲ್ಲಿ ಕಲ್ಲುಗಳ ಕೆತ್ತುವ ಕಾರ್ಯ 1990ರಿಂದಲೂ ನಡೆಯುತ್ತಿದೆ.
ಕಲ್ಲು ಕೆತ್ತುವುದಕ್ಕೆ ನಿಷೇಧವಿಲ್ಲ. ಕಲ್ಲು ಕೆತ್ತುವುದರಿಂದ ಮಂದಿರ ನಿರ್ಮಾಣ ಅಸಾಧ್ಯ .ಸರಕಾರ ಮತ್ತು ಬಿಜೆಪಿ ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತದೆ. ನ್ಯಾಯಾಲದ ತೀರ್ಪಿಗೆ ಕಾಯೋಣ ಎಂದರು.
ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ನೀಡಿದ ಉತ್ತರದಿಂದ ತೃಪ್ತರಾಗದ ವಿಪಕ್ಷ ಸದಸ್ಯರು ಬಾವಿಗೆ ಇಳಿದು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕಲಾಪಕ್ಕೆ ಅಡ್ಡಿಪಡಿಸಿದರು.ಈ ಹಂತದಲ್ಲಿ ಉಪಸಭಾಪತಿ ಪಿಜೆ ಕುರಿಯನ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.







