23 ವರ್ಷಗಳ ಹೋರಾಟದ ಬಳಿಕ ಸಂತ್ರಸ್ತರಿಗೆ ಸಿಕ್ಕಿದ್ದು ಆಂಶಿಕ ಪರಿಹಾರ
ಎಂಆರ್‌ಪಿಎಲ್ ಕರ್ಮಕಾಂಡ
ಉಡುಪಿ, ಡಿ.23: ಕಳೆದ ಸುಮಾರು ಮೂರು ದಶಕಗಳಿಂದ ಮಂಗಳೂರು ಹೊರವಲಯದಲ್ಲಿ ಹಲವು ರೀತಿಯ ಮಾಲಿನ್ಯಗಳಿಗೆ ಕಾರಣವಾಗಿ ಪರಿಸರದ ಜನರ ಬದುಕನ್ನು ಮೂರಾಬಟ್ಟೆ ಮಾಡಿರುವ ಸಾರ್ವಜನಿಕ ವಲಯದ ಎಂಆರ್‌ಪಿಎಲ್ ಇದೀಗ ಸಂತ್ರಸ್ತರನ್ನೂ ಬೀದಿಪಾಲು ಮಾಡಿ, ಪರಿಹಾರ ನೀಡದೆ ಸತಾಯಿಸುತ್ತಿರುವ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಕುರಿತಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
1992ರಲ್ಲಿ ಕುತ್ತೆತ್ತೂರು ಗ್ರಾಮದ ಸರ್ವೇ ನಂಬ್ರ 175/2ರಲ್ಲಿದ್ದ ಕಾಲನಿಯ ಮನೆಗಳ ಮೇಲೆ ಬುಲ್ಡೋಝರ್‌ಗಳನ್ನು ಓಡಿಸಿ ಅಲ್ಲಿದ್ದ 11 ಕುಟುಂಬಗಳ ಮನೆ- ಮಠ, ಸೊತ್ತು, ಮರಗಿಡಗಳನ್ನೆಲ್ಲಾ ನಾಮಾವಶೇಷಗೊಳಿಸಿ ಅವರನ್ನೆಲ್ಲಾ ಬೀದಿಪಾಲು ಮಾಡಲಾಗಿತ್ತು. ಇವರೆಲ್ಲರೂ ಕೂಲಿ, ಇತರ ಕೆಲಸಗಳಿಗೆಂದು ಹೊರಹೋಗಿದ್ದ ವೇಳೆ ಈ ದೌರ್ಜನ್ಯ ಎಸಗಲಾಗಿತ್ತು. ಆ ಬಳಿಕ ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡದೇ ಸತಾಯಿಸಲಾಗಿತ್ತು. ಈ ವೇಳೆ ಸಂತ್ರಸ್ತರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದರು. 1999ರಲ್ಲಿ ಈ 11 ಕುಟುಂಬಗಳ ಪರವಾಗಿ ಹೋರಾಟವನ್ನು ಪ್ರತಿಷ್ಠಾನದ ಅಧ್ಯಕ್ಷನಾಗಿದ್ದ ತಾನು ಕೈಗೆತ್ತಿಕೊಂಡು ಹಲವು ಹಂತದ, ಹಲವು ವಿಧದ ಹೋರಾಟದ ಬಳಿಕ ಇದೀಗ 11ರಲ್ಲಿ 8 ಕುಟುಂಬಗಳಿಗೆ ಆಂಶಿಕ ಪರಿಹಾರವನ್ನು ನೀಡಲು ಕಂಪೆನಿ ಒಪ್ಪಿದೆ. ಆದರೆ ಉಳಿದ ಮೂರು ಕುಟುಂಬಗಳಿಗೆ ಪರಿಹಾರ ನೀಡಲು ವಿವಿಧ ತಾಂತ್ರಿಕ ಕಾರಣ ಗಳನ್ನು ಮುಂದೊಡ್ಡಿ ನಿರಾಕರಿಸುತ್ತಿದೆ ಎಂದು ಅವರು ತಿಳಿಸಿದರು.
1992ರಲ್ಲಿ ಕೊಡಬೇಕಾದ ಪರಿಹಾರ ಧನವನ್ನು ಕಂಪೆನಿ ನೀಡುತ್ತಿರುವುದು 2015ರ ಡಿಸೆಂಬರ್‌ನಲ್ಲಿ. ಈ 23 ವರ್ಷ ಗಳ ಅವಧಿಗೆ ಎಂಆರ್‌ಪಿಎಲ್ ಅದಕ್ಕೆ ಬಡ್ಡಿ ಸೇರಿಸಿ ಕೊಡಬೇಕಿತ್ತು. ಆದರೆ ಆಯೋಗದ ಆದೇಶದಲ್ಲಿ ಬಡ್ಡಿಯ ಪ್ರಸ್ತಾ ಪವಿಲ್ಲದಿರುವುದರಿಂದ ತಾವು ನೀಡುವುದಿಲ್ಲ ಎಂಬುದು ತೈಲಾಗಾರದ ವಾದವಾಗಿದೆ ಎಂದವರು ಹೇಳಿದರು.
ಮಾನವ ಹಕ್ಕು ಆಯೋಗ ಈ ಕುರಿತು ಆದೇಶ ನೀಡುವಾಗ ಈ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್ ನೀಡಿ. ಪ್ಯಾಕೇಜ್‌ನ ವಿವರಗಳನ್ನು ಪುನರ್ವಸತಿ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿಯಿಂದ ಆದೇಶ ಪಡೆಯಿರಿ ಎಂಬ ಎರಡು ವಾಕ್ಯಗಳನ್ನು ಸೇರಿಸಿದ್ದರೆ ಸಾಕಿತ್ತು. ಸಂತ್ರಸ್ತರು ತಮಗೆ ಸಿಗಬೇಕಾದ ಎಲ್ಲಾ ಪರಿಹಾರಗಳನ್ನು ಪಡೆಯುತ್ತಿದ್ದರು. ಆದರೆ ಈಗ ಆದೇಶದಲ್ಲಿರುವ ತಾಂತ್ರಿಕ ತಪ್ಪುಗಳನ್ನೇ ಮುಂದಿಟ್ಟು ಕಂಪೆನಿ ಸಂತ್ರಸ್ತರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಇದೀಗ ನಾವು ಕಂಪೆನಿಯ ಈ ಎಲ್ಲಾ ಹುನ್ನಾರಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತೇವೆ. ಹಾಗೂ ಪರಿಹಾರದಿಂದ ಹೊರ ಗುಳಿದ ಮೂರು ಕುಟುಂಬಗಳಿಗೆ ನ್ಯಾಯವಾಗಿ ಸಿಗಬೇಕಾದ ಪರಿಹಾರ ದೊರಕಿಸಿಕೊಡಲು ಹೋರಾಟ ನಡೆಸುತ್ತೇವೆ ಎಂದು ಡಾ.ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದರು.
ಇದಕ್ಕಾಗಿ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದಿದ್ದು, ಈ ಪ್ರಕರಣದಲ್ಲಿ ಪುನರ್ವಸತಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೂ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಮನವಿ ಸಲ್ಲಿಸುತ್ತೇವೆ ಎಂದರು. ಪರಿಹಾರ ಸಿಕ್ಕಿದ 8 ಕುಟುಂಬಗಳಿಗೆ ಚೇಳಿಯಾರಿನಲ್ಲಿ ನಿವೇಶನ ದೊರೆಯಲಿದೆ ಎಂದರು.
ಕಡ್ಲೆ ಇದ್ದಾಗ ಹಲ್ಲಿಲ್ಲ...!
ಘಟನೆಯ ವೇಳೆ ಇದ್ದ ಸಂತ್ರಸ್ತರಲ್ಲಿ ಹೆಚ್ಚಿನವರು ಇಂದು ಇಲ್ಲವಾಗಿದ್ದಾರೆ. ಉಳಿದವರಲ್ಲಿ ಸುಬ್ರಾಯ ಆಚಾರಿ, ಸರಸ್ವತಿ ಹಾಗೂ ತಿಮ್ಮು ಹೆಂಗ್ಸು ಪ್ರಾಯದಿಂದ ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಇನ್ನು ಪರಿಹಾರ ಪಡೆದ ಅಪ್ಪಿ, ಕಮಲಾ, ಲಲಿತಾ ಶೆಡ್ತಿ, ಬಾಲಕೃಷ್ಣ ನಾಯಕ್, ನಾಗಪ್ಪ ಮೊಯ್ಲಿ, ಮಾರ್ಷಲ್ ಡಿಸೋಜ, ಭವಾನಿ ಹಾಗೂ ಸಂಕಪ್ಪ ಶೆಟ್ಟಿಯವರ ಮಕ್ಕಳು ಹಾಗೂ ಮೊಮ್ಮಕ್ಕಳು ಅದನ್ನು ಪಡೆಯಬೇಕಾಗಿದೆ. ಇವರಲ್ಲಿ ಬಾಲಕೃಷ್ಣ ನಾಯಕ್ ಕುಟುಂಬದ ಯಾವುದೇ ಮಾಹಿತಿ ತಮಗೆ ಸಿಕ್ಕಿಲ್ಲ ಎಂದು ಡಾ.ಶ್ಯಾನುಭಾಗ್ ನುಡಿದರು.
ಸುಬ್ರಾಯ ಆಚಾರಿಯವರಿಗೆ ಮಕ್ಕಳಿಲ್ಲ. ಹೀಗಾಗಿ ಅವರಿಗೆ ಒಂದೊಮ್ಮೆ ಪರಿಹಾರ ದೊರೆತರೂ ಅದನ್ನು ಅನುಭವಿಸುವವರಿಲ್ಲ. ಇನ್ನು ತಿಮ್ಮು ಪೂಜಾರಿಯವರಿಗೆ ನಾಲ್ಕು ಹೆಣ್ಣು ಹಾಗೂ ಒಬ್ಬ ಮಗನಿದ್ದಾನೆ. ಕೂಲಿನಾಲಿ ಮಾಡುತ್ತಿರುವ ಮಗ, ಸೊಸೆಯೊಂದಿಗೆ ಇರುವ ತಮ್ಮ ತಾಯಿ ಪರಿಹಾರ ಇಂದಲ್ಲ, ನಾಳೆ ಸಿಗುತ್ತದೆ ಎಂಬ ಆಸೆಯಲ್ಲಿದ್ದಾರೆ. ಜಾಗ ಸಿಕ್ಕಿ ಸ್ವಂತ ಮನೆಯ ಕನಸು ಕಾಣುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಗೆ ಬಂದ ಮಗಳು ಜಯಂತಿ ನುಡಿದರು.







