ಎಸ್.ಪ್ರಸನ್ನ ಕುಮಾರ್

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು)ನ ಅಖಿಲ ಭಾರತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಿಐಟಿಯು ಪ್ರಧಾನ ಕಾರ್ಯದರ್ಶಿ, ಹಲವಾರು ಕಾರ್ಮಿಕ ಸಂಘಗಳ ನಾಯಕರಾದ ಎಸ್.ಪ್ರಸನ್ನ ಕುಮಾರ್ ಅವರು ಇಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಪ್ರಸನ್ನ ಕುಮಾರ್ ಅವರಿಗೆ 51 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೂಲತಃ ಬಳ್ಳಾರಿಯಲ್ಲಿ ಜನಿಸಿದ ಇವರು ವಿದ್ಯಾರ್ಥಿ ದೆಸೆಯಿಂದಲೇ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್ಐ) ಮೂಲಕ ವಿದ್ಯಾರ್ಥಿ ಚಳುವಳಿಯ ಮುಂಚೂಣಿಯಲ್ಲಿ ತೊಡಗಿಸಿಕೊಂಡು ಬಳಿಕ ಕಾರ್ಮಿಕ ವರ್ಗದ ಸಂಘಟನೆಗೆ ಮುಂದಾದರು. ಮಾರ್ಕ್ಸ್‌ವಾದಿ ಲೆನಿನ್‌ವಾದಿ ಸಿದ್ಧಾಂತಕ್ಕೆ ಪೂರ್ಣಬದ್ಧರಾಗಿದ್ದ ಇವರು ತಮ್ಮ ಇಡೀ ಜೀವನವನ್ನು ದುಡಿಯುವ ಜನರಿಗಾಗಿ ಮುಡಿಪಿಟ್ಟರು.
ಬಳ್ಳಾರಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾಗಿ, ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ, 1985ರಿಂದ 1995ರವರೆಗೆ ಅವಿರತವಾಗಿ ದುಡಿದಿದ್ದರು. ನಂತರ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಸದಸ್ಯರಾಗಿ, 2008ರಿಂದ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ದುಡಿಯುವ ಜನರ ಏಳಿಗೆಗಾಗಿ ಶ್ರಮಿಸಿದ್ದರು. ಅವರ ನೇತೃತ್ವದಲ್ಲಿ ಹಲವು ಹೋರಾಟಗಳು ಯಶಸ್ವಿಯಾಗಿ ನಡೆದಿದ್ದವು. ರಾಜ್ಯದ ಅಸಂಘಟಿತ ಕ್ಷೇತ್ರಗಳಾದ ಶುಗರ್, ಕ್ಯಾಂಟ್ ವರ್ಕರ್ಸ್, ಹಮಾಲಿ ಕಾರ್ಮಿಕರು, ಕರ್ನಾಟಕ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘ ಹಾಗೂ ಘನ ಕೈಗಾರಿಕೆಗಳಾದ ಬಿಇಎಲ್, ಐಟಿಸಿ, ಇಂಡಾಲ್, ಕಿರ್ಲೊಸ್ಕರ್, ಮೈಕೋ, ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಪ್ರಸನ್ನ ಅವರ ಹಠಾತ್ ನಿಧನದಿಂದ ಕಮ್ಯುನಿಸ್ಟ್ ಚಳುವಳಿ ಹಾಗೂ ಕಾರ್ಮಿಕ ರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಸಾವಿರಾರು ಕಾರ್ಮಿಕರು ಮತ್ತು ಪಕ್ಷದ ಕಾರ್ಯಕರ್ತರು ಶೋಕ ವ್ಯಕ್ತಪಡಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಕಚೇರಿ ಇಎಂಎಸ್ ಭವನ, 8ನೇ ಅಡ್ಡ ರಸ್ತೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಇಡಲಾಗಿದ್ದು, ನಾಳೆ ಅಪರಾಹ್ನ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಪಕ್ಷದ ಪ್ರಕಟನೆ ತಿಳಿಸಿದೆ.







