ಸಂಬಳ ಹೆಚ್ಚಿಸುವಂತೆ ಕೋರಿ ಭಾಗವತ್‌ಗೆ ಆರೆಸ್ಸೆಸ್ ಮುಖವಾಣಿಗಳ ಸಿಬ್ಬಂದಿಗಳಿಂದ ಪತ್ರ
ಆರೆಸ್ಸೆಸ್ ತನ್ನ ಉದ್ಯೋಗಿಗಳಿಂದಲೇ ತೊಂದರೆಯನ್ನು ಎದುರಿಸುತ್ತಿದೆ. ತಮ್ಮ ಸಂಬಳವನ್ನು ಹೆಚ್ಚಿಸುವಂತೆ ಕೋರಿ ಅದರ ಅಧಿಕೃತ ಇಂಗ್ಲಿಷ್ ಮತ್ತು ಹಿಂದಿ ಪ್ರಕಟನೆಗಳಾದ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ಗಳ ಉದ್ಯೋಗಿಗಳು, ಸಂಘದ ಮುಖ್ಯಸ್ಥ ಮೋಹನ ಭಾಗವತ್ ಅವರಿಗೆ ಪತ್ರಗಳನ್ನು ಬರೆದಿದ್ದಾರೆ ಎಂದು ಸ್ಕ್ರೋಲ್ ಡಾಟ್ ಇನ್ ಸುದ್ದಿತಾಣವು ವರದಿ ಮಾಡಿದೆ.
ಈ ಎರಡೂ ಪತ್ರಿಕೆಗಳನ್ನು ನಡೆಸುತ್ತಿರುವ ಭಾರತ ಪ್ರಕಾಶನ (ದಿಲ್ಲಿ) ಲಿ.ವಿರುದ್ಧ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ,ಆದರೆ ಪ್ರತೀಕಾರದ ಭಯದಿಂದಾಗಿ ಅವರು ತುಂಬ ಎಚ್ಚರಿಕೆಯನ್ನು ವಹಿಸಿದ್ದಾರೆ ಎಂದು ಅದು ಹೇಳಿದೆ.
ತಮ್ಮ ‘ಅನಿಶ್ಚಿತ ಭವಿಷ್ಯ’ದ ಬಗ್ಗೆ ಚಿಂತೆಗೊಳಗಾಗಿರುವ ಉದ್ಯೋಗಿಗಳು ಬಹಿರಂಗವಾಗಿ ತಮ್ಮ ನೋವನ್ನು ತೋಡಿಕೊಳ್ಳುವ ಅಥವಾ ಕಾನೂನಿನ ಮೊರೆ ಹೋಗುವ ಬದಲು ತಮ್ಮ ಪ್ರತಿಭಟನೆಗೆ ಕಾರಣವಾಗಿರುವ ವಿವಾದಗಳನ್ನು ಬಗೆಹರಿಸುವಲ್ಲಿ ಭಾಗವತ್ ಅವರ ಮಧ್ಯಪ್ರವೇಶವನ್ನು ಕೋರಿದ್ದಾರೆ.
ಪತ್ರಿಕೆಗಳು ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಕಡಿಮೆ ಸಂಬಳಕ್ಕೆ ತಾವು ದುಡಿದಿದ್ದೆವು. ಕೆಲವೊಮ್ಮೆ ಸಂಬಳವನ್ನು ವಿಳಂಬವಾಗಿ ಚೂರು ಚೂರೇ ಪಾವತಿ ಮಾಡಿದಾಗಲೂ ತಾವು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವುದನ್ನು ಈ ಉದ್ಯೋಗಿಗಳು ಡಿ.2ರಂದು ಭಾಗವತ್‌ಗೆ ಬರೆದಿರುವ ಪತ್ರದಲ್ಲಿ ನೆನಪಿಸಿದ್ದಾರೆ.
ತಮಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ. ಇದರಿಂದಾಗಿ ಹಿರಿಯ ಉದ್ಯೋಗಿಗಳು ಅನಿವಾರ್ಯವಾಗಿ ಕೆಲಸ ಬಿಡುತ್ತಿದ್ದಾರೆ ಎಂದು ದೂರಿಕೊಂಡಿರುವ ಅವರು, ಇದೇ ಪ್ರವೃತ್ತಿ ಮುಂದುವರಿದರೆ ಕಾನೂನು ಕ್ರಮವನ್ನು ಕೈಗೊಳ್ಳುವ ಬೆದರಿಕೆಯನ್ನೊಡ್ಡಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಇವೆರಡೂ ಆರೆಸ್ಸೆಸ್ ಮುಖವಾಣಿಗಳ ಪ್ರಸಾರ ಸಂಖ್ಯೆ ಮತ್ತು ಜಾಹೀರಾತು ಆದಾಯ ನಾಟಕೀಯ ಏರಿಕೆ ಕಂಡಿವೆ. ಎನ್‌ಡಿಎ ಸರಕಾರ ರೂಪುಗೊಂಡ ನಂತರ ಕಾರ್ಯ ನಿರ್ವಹಣೆಯನ್ನು ಆರಂಭಿಸಿರುವ ಭಾರತ ಪ್ರಕಾಶನದ ಪ್ರಸಕ್ತ ಆಡಳಿತವು ಆರ್ಗನೈಸರ್ ಮತ್ತು ಪಾಂಚಜನ್ಯಗಳ ಕೆಟ್ಟ ದಿನಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿದಿದ್ದ ಹಳೆಯ ನೌಕರರ ಬಗ್ಗೆ ತಾರತಮ್ಯವನ್ನು ಪ್ರದರ್ಶಿಸುತ್ತಿದೆ ಎಂದು ಆರ್ಗನೈಸರ್‌ನ ಹಿರಿಯ ಸಂಪಾದಕೀಯ ಸಿಬ್ಬಂದಿಯೋರ್ವರು ಸ್ಕ್ರೋಲ್ ಡಾಟ್ ಇನ್‌ಗೆ ತಿಳಿಸಿದ್ದಾರೆ.







