ಮಿರ್ಝಾ ಘಾಲಿಬ್ ಸ್ಮಾರಕಕ್ಕಾಗಿ ಕಾಯುತ್ತಿದೆ ತಾಜಮಹಲ್ ನಗರ

ತಾಜ್ ನಗರವು ಉರ್ದು ಕವಿಚಕ್ರವರ್ತಿ ಮಿರ್ಝಾ ಘಾಲಿಬ್‌ರನ್ನು ಇಂದವರ ಜನ್ಮ ಜಯಂತಿಯ ಸಂದರ್ಭದಲ್ಲಿ ನೆನೆಯುತ್ತಿದ್ದರೆ, ಮಣ್ಣಿನ ಮಗನಿಗೆ ಸ್ಮಾರಕವೊಂದನ್ನು ನಿರ್ಮಿಸುವ ಯೋಜನೆಯು ಅನೇಕ ವರ್ಷಗಳಿಂದ ಧೂಳು ತಿನ್ನುತ್ತಿದೆಯೆಂದು ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮಹಾನ್ ಕವಿಗೆ ಸೂಕ್ತವಾದ ಸ್ಮಾರಕವೊಂದನ್ನು ರಚಿಸಬೇಕೆಂದು ಅವರ, ಕವಿತೆಗಳ ಅಭಿಮಾನಿಗಳು ಅನೇಕ ವರ್ಷಗಳಿಂದ ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳಿಂದ ಭರವಸೆ ಹಾಗೂ ವಾಗ್ದಾನಗಳಷ್ಟೇ ದೊರೆತಿವೆ.
ಉರ್ದು ಸಾಹಿತ್ಯದ ಉತ್ತೇಜನಕ್ಕೆ ಆಗ್ರಾ ವಿಶ್ವ ವಿದ್ಯಾನಿಲಯದಲ್ಲಿ ಮಿರ್ಝಾ ಘಾಲಿಬ್ ಪೀಠವೊಂದನ್ನು ಸ್ಥಾಪಿಸಬೇಕೆಂಬ ಪ್ರಸ್ತಾವವು ಸಹ ಧೂಳು ತಿನ್ನುತ್ತಿದೆಯೆಂದು ಸಾಹಿತಿಗಳು ವಿಷಾದಿಸಿದ್ದಾರೆ.
ಅದೇ ರೀತಿ, ಘಾಲಿಬ್ ಹುಟ್ಟಿದ್ದ, ನಗರದ ಕಲಾಮಹಲ್ ಪ್ರದೇಶದ ಹವೇಲಿಯನ್ನು ಎಸ್ಪಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಉತ್ತರ ಪ್ರದೇಶ ಸರಕಾರವು ಸ್ವಾಧೀನ ಪಡಿಸಿಕೊಳ್ಳ ಬೇಕಿತ್ತು. ಆದರೆ, ಈಗ ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲವೆಂದು ಬೃಜ ಮಂಡಲ ಪರಂಪರೆ ಸಂರಕ್ಷಣಾ ಸೊಸೈಟಿಯ ಅಧ್ಯಕ್ಷ ಸುರೇಂದ್ರ ಶರ್ಮಾ ಬೇಸರಿಸಿದ್ದಾರೆ.





