ಇದು ನಿಮ್ಮ ಸರಕಾರ: ದಲಿತ ಉದ್ಯಮಿಗಳಿಗೆ ಮೋದಿ

ಆರ್ಥಿಕವಾಗಿ ಒಳಗೊಳಿಸುವಿಕೆ ಸರಕಾರದ ಪ್ರಧಾನ ಆದತ್ಯೆಯಾಗಿದೆ. ವಿಶೇಷವಾಗಿ ಹಿಂದುಳಿದ ವರ್ಗಗಳು ಸಹಿತ ಜನರ ಸಬಲೀಕರಣಕ್ಕಾಗಿ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೊಸದಿಲ್ಲಿಯಲ್ಲಿ ಹೇಳಿದ್ದಾರೆ.
‘‘ನಮ್ಮ ಸರಕಾರವು ಆಪ್‌ಕೀ ಸರ್ಕಾರ್ (ನಿಮ್ಮ ಸರಕಾರ). ನಾವು ನಿಮ್ಮ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸುತ್ತ ತಿಳಿಸಿದರು.
ಆರ್ಥಿಕವಾಗಿ ಒಳಗೊಳಿಸುವುದು ಸರಕಾರದ ಪ್ರಧಾನ ಲಕ್ಷವಾಗಿದೆ. ತಾವು ಉದ್ಯೋಗ ಸ್ಪಷ್ಟಿಕರ್ತರನ್ನು ಸೃಷ್ಟಿಸಬಯಸುತ್ತಿದ್ದೇವೆ, ಉದ್ಯೋಗಕಾಂಕ್ಷಿಗಳನ್ನಲ್ಲ ಎಂದು ಪ್ರಧಾನಿ ಹೇಳಿದರು.
ದಲಿತರ ಆದರ್ಶ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಿದ್ದಾರೆ. ಆದರೆ, ಅವರು ಉತ್ತಮ ಆರ್ಥಿಕಜ್ಞರೂ ಆಗಿದ್ದರೆಂಬುದು ಹಲವರಿಗೆ ತಿಳಿದಿಲ್ಲ. ಉದ್ಯಮೀಕರಣವು ನಮ್ಮ ದಲಿತ ಸೋದರ-ಸೋದರಿಯರಿಗೆ ಗರಿಷ್ಠ ಲಾಭ ನೀಡುವುದೆಂದು ಬಾಬಾ ಸಾಹೇಬ್ ಸರಿಯಾಗಿಯೇ ಹೇಳಿದ್ದರು. ಹಿಂದುಳಿದ ವರ್ಗಗಳಿಗೆ ಸಹಾಯ ಮಾಡುವುದಕ್ಕಾಗಿ ಸರಕಾರವು ಉದ್ಯಮ ಬಂಡವಾಳ ನಿಧಿಯೊಂದನ್ನು ಸ್ಥಾಪಿಸಿದೆಯೆಂದು ಮೋದಿ ತಿಳಿಸಿದರು.





