ಸೌದಿ: ಪೆಟ್ರೋಲ್ ದರ ಶೇ.50ರಷ್ಟು ಹೆಚ್ಚಳ: ಕಚ್ಚಾ ತೈಲ ಬೆಲೆ ಕುಸಿತದ ಬಿಸಿ; ಸಬ್ಸಿಡಿಗಳಿಗೆ ಕತ್ತರಿ

ರಿಯಾದ್,ಡಿ.29: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ತನ್ನ ದಶಕಗಳ ಉದಾರ ಆರ್ಥಿಕ ನೀತಿಯಿಂದ ಹಿಂದೆ ಸರಿಯಲು ಸೌದಿ ಆರೇಬಿಯ ನಿರ್ಧರಿಸಿದ್ದು, ತನ್ನ ನಾಗರಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಪೂರೈಕೆ ಮಾಡುತ್ತಿದ್ದ ಪೆಟ್ರೋಲ್, ವಿದ್ಯುತ್, ಜಲದ ದರಗಳಲ್ಲಿ ಭಾರೀ ಏರಿಕೆಯನ್ನು ಮಾಡಿದೆ. ವಿಮಾನಯಾನ ಟಿಕೆಟ್‌ಗಳು ಹಾಗೂ ಸಿಗರೇಟುಗಳ ದರದಲ್ಲೂ ಹೆಚ್ಚಳ ಮಾಡುವುದಾಗಿ ಅದು ಹೇಳಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ, ಸೌದಿ ಆರೇಬಿಯಕ್ಕೆ 2015ರಲ್ಲಿ ದಾಖಲೆಯ 98 ಶತಕೋಟಿ ಡಾಲರ್ ಬಜೆಟ್ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸೌದಿ ಆಡಳಿತವು, ಭಾರೀ ಪ್ರಮಾಣದಲ್ಲಿ ಸಬ್ಸಿಡಿ ಕಡಿತಕ್ಕೆ ಮುಂದಾಗಿದೆ.
ಕಳೆದ 18 ತಿಂಗಳುಗಳಿಂದ ಕಚ್ಚಾ ತೈಲ ದರದಲ್ಲಿ ಭಾರೀ ಇಳಿಕೆಯಾಗಿರುವ ಕಾರಣ, ದೇಶದ ಆರ್ಥಿಕತೆಯನ್ನು ನಿಯಂತ್ರಿಸಲು ಸಬ್ಸಿಡಿ ಕಡಿತ ಅನಿವಾರ್ಯವೆಂದು ಸೌದಿ ಅರೇಬಿಯದ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಮಂಗಳವಾರದಿಂದ ಸೌದಿ ಅರೇಬಿಯಾದ್ಯಂತ ಪೆಟ್ರೋಲ್ ದರದಲ್ಲಿ ಶೇ. 50ರಷ್ಟು ಏರಿಕೆಯಾಗಿದೆ. ಉನ್ನತ ದರ್ಜೆಯ ಸೀಸರಹಿತ ಪೆಟ್ರೋಲ್‌ನ ಬೆಲೆಯು 0.60 ರಿಯಾಲ್‌ಗಳಿಂದ 0.90 ರಿಯಾಲ್‌ಗಳಿಗೆ ಏರಿಕೆಯಾಗಿದ್ದು, ಶೇ.50ರಷ್ಟು ಹೆಚ್ಚಳವಾಗಿದೆ. ಕೆಳದರ್ಜೆಯ ಪೆಟ್ರೋಲ್‌ದರವು ಲೀಟರ್‌ಗೆ 0.45 ರಿಯಾಲ್‌ಗಳಿಂದ 0.75 ಲೀಟರ್‌ಗೆ ಏರಿದ್ದು, ಶೇ.67ರಷ್ಟು ಹೆಚ್ಚಳ ಕಂಡಿದೆ.
ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಬಜೆಟ್‌ನಲ್ಲೂ 87 ಶತಕೋಟಿ ಡಾಲರ್‌ಗಳ ಬಜೆಟ್ ಕೊರತೆ ಉಂಟಾಗಲಿದೆಯೆಂದು ರಿಯಾದ್ ಅಂದಾಜಿಸಿದೆ. 2015ರಲ್ಲಿ ಸೌದಿ ಆರೇಬಿಯದ ನಿವ್ವಳ ಆದಾಯ 608 ಶತಕೋಟಿ ರಿಯಾಲ್ (162 ಶತಕೋಟಿ ಡಾಲರ್)ಗಳೆಂದು ವಿತ್ತ ಸಚಿವಾಲಯ ಅಂದಾಜಿಸಿದ್ದು, ಇದು 2009ರಿಂದೀಚೆಗೆ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆಯೆಂದು ಅದು ಹೇಳಿದೆ. 2015ರಲ್ಲಿ ಸೌದಿ ಆರೇಬಿಯದ ಒಟ್ಟು ಆದಾಯವು ನಿರೀಕ್ಷೆಗಿಂತ ಶೇ.15ರಷ್ಟು ಇಳಿಕೆಯಾಗಿದೆ ಹಾಗೂ ಕಳೆದ ವರ್ಷಕ್ಕಿಂತ ಶೇ. 42ರಷ್ಟು ಕಡಿಮೆಯಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.