ಆತ್ಮಹತ್ಯಾ ದಾಳಿಗೆ ಕನಿಷ್ಠ 22 ಬಲಿ

ಪೇಶಾವರ, ಡಿ.29: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಜನರಿಂದ ಕಿಕ್ಕಿರಿದು ತುಂಬಿದ್ದ ಸರಕಾರಿ ಕಚೇರಿಯೊಂದರಲ್ಲಿ ಶಂಕಿತ ತಾಲಿಬಾನ್ ಬಂಡುಕೋರನೊಬ್ಬ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಖೈಬರ್ ಫಖ್ತೂನ್‌ಖ್ವಾ ಪ್ರಾಂತದ ಮರ್ದಾನ್ ಪಟ್ಟಣದಲ್ಲಿ ಆತ್ಮಹತ್ಯಾ ದಾಳಿ ನಡೆದಿದೆ.
ಸ್ಫೋಟಕಗಳ ಬೆಲ್ಟ್ ಧರಿಸಿದ್ದ ಉಗ್ರನೊಬ್ಬ, ಬೈಕ್‌ನಲ್ಲಿ ಆಗಮಿಸಿ ಸರಕಾರಿ ಗುರುತುಪತ್ರಗಳನ್ನು ವಿತರಿಸುವ ಕಚೇರಿಯ ಗೇಟ್ ಬಳಿ ತನ್ನನ್ನು ತಾನೇ ಸ್ಫೋಟಿಸಿಕೊಂಡನೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿರುವುದಾಗಿ ಅವರು ಹೇಳಿದ್ದಾರೆ. ಸ್ಫೋಟ ನಡೆದ ಸ್ಥಳದೆಲ್ಲೆಡೆ, ಛಿದ್ರವಿಛಿದ್ರವಾದ ಮಾನವ ಅಂಗಾಂಗಳು ಹರಡಿರುವುದು ಕಂಡುಬರುತ್ತಿದೆಯೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ತೆಹ್ರಿಕ್ ತಾಲಿಬಾನ್‌ಗೆ ನಿಷ್ಠವಾಗಿರುವ ಜಮಾತುಲ್ ಅಹ್ರಾರ್ ಈ ಆತ್ಮಹತ್ಯಾ ದಾಳಿಯನ್ನು ನಡೆಸಿರುವುದಾಗಿ ಡಾನ್ ನ್ಯೂಸ್ ಸುದ್ದಿವಾಹಿನಿ ವರದಿ ಮಾಡಿದೆ. ಕಳೆದ ವರ್ಷ ವಾಘಾ ಗಡಿಠಾಣೆಯಲ್ಲಿ ನಡೆದ ಸ್ಫೋಟದ ಹಿಂದೆಯೂ ಈ ಸಂಘಟನೆಯ ಕೈವಾಡವಿರುವುದಾಗಿ ಶಂಕಿಸಲಾಗಿದೆ.
ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪೇಶಾವರದ ಮರ್ದಾನ್ ಮೆಡಿಕಲ್ ಕಾಂಪ್ಲೆಕ್ಸ್ ಮತ್ತಿತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಸ್ಫೋಟದ ಬಳಿಕ ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಇಡೀ ಪ್ರದೇಶವನ್ನು ಸುತ್ತುವರಿದಿದ್ದಾರೆ.