ಪಾಕ್‌ನಲ್ಲಿ ನಾಲ್ವರು ಉಗ್ರರಿಗೆ ಗಲ್ಲು

ಪೇಶಾವರ,ಡಿ.29: ಆತ್ಮಹತ್ಯಾ ದಾಳಿ, ನರಮೇಧ ಹಾಗೂ ಸೈನಿಕರ ಮೇಲಿನ ದಾಳಿ ಪ್ರಕರಣಗಳಲ್ಲಿ ಶಾಮೀಲಾಗಿದ್ದ ನಾಲ್ವರು ಉಗ್ರಗಾಮಿಗಳನ್ನು ಪಾಕಿಸ್ತಾನವು ಮಂಗಳವಾರ ಗಲ್ಲಿಗೇರಿಸಿದೆ. ಪೇಶಾವರದ ಕೋಹಟ್‌ನಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಈ ನಾಲ್ವರು ಉಗ್ರರನ್ನು ಗಲ್ಲಿಗೇರಿಸಿರುವುದನ್ನು ಜಿಲ್ಲಾ ಪೊಲೀಸ್ ಅಧಿಕಾರಿ ರೊಹೈಬ್ ಅಶ್ರಫ್ ದೃಢಪಡಿಸಿದ್ದಾರೆ.ಈ ತಿಂಗಳ ಆರಂಭದಲ್ಲಿ ಸೇನಾ ನ್ಯಾಯಾಲಯವೊಂದು ಈ ನಾಲ್ವರು ಉಗ್ರರಿಗೆ ಮರಣದಂಡನೆಯನ್ನು ವಿಧಿಸಿ ತೀರ್ಪು ನೀಡಿತ್ತು. ಆನಂತರ ಪಾಕಿಸ್ತಾನದ ಸೇನಾಪಡೆ ವರಿಷ್ಠ ರೆಹೈಬ್ ಅಶ್ರಫ್, ಬ್ಲಾಕ್ ವಾರಂಟ್‌ಗೆ ಸಹಿಹಾಕುವ ಮೂಲಕ ಉಗ್ರರನ್ನು ಗಲ್ಲಿಗೇರಿಸಲು ಅನುಮತಿ ನೀಡಿದರು.
ಪೇಶಾವರದ ಶಾಲೆಯೊಂದರಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಹತ್ಯಾಕಾಂಡದ ಘಟನೆಯ ಬಳಿಕ ಪಾಕ್ ಸರಕಾರವು, ಕಳೆದ ವರ್ಷ ಮರಣದಂಡನೆಯ ಮೇಲಿನ ನಿಷೇಧವನ್ನು ರದ್ದುಪಡಿಸಿತ್ತು. ಗಲ್ಲಿಗೇರಿಸಲಾದ ಉಗ್ರರ ವಿರುದ್ಧ ಅಮಾಯಕ ಜನರ ಹತ್ಯೆ, ಆತ್ಮಹತ್ಯಾ ಬಾಂಬ್‌ದಾಳಿ ಸಂಚು, ಆತ್ಮಹತ್ಯಾ ಬಾಂಬರ್‌ಗಳಿಗೆ ತರಬೇತಿ ಹಾಗೂ ನೆರವು, ಅಪಹರಣ ಹಾಗೂ ಉಗ್ರಗಾಮಿ ಸಂಘಟನೆಗಳಿಗೆ ನಿಧಿ ಸಂಗ್ರಹ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿತ್ತು.
ಕಳೆದ ವರ್ಷ ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್ ಮೇಲೆ ನಡೆದ ಭೀಕರ ದಾಳಿಯಲ್ಲಿ ಶಾಮೀಲಾಗಿದ್ದ ನಾಲ್ವರು ಉಗ್ರರನ್ನು, ಕೋಹಟ್ ಸೆಂಟ್ರಲ್‌ಜೈಲ್‌ನಲ್ಲಿ ಡಿಸೆಂಬರ್ 3ರಂದು ಗಲ್ಲಿಗೇರಿಸಲಾಗಿತ್ತು.
2014ರ ಡಿಸೆಂಬರ್ 16ರಂದು ಪೇಶಾವರದ ಆರ್ಮಿ ಪಬ್ಲಿಕ್ ಸ್ಕೂಲ್ ಮೇಲೆ ಉಗ್ರರು ದಾಳಿ ನಡೆಸಿ, 142 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಹತ್ಯೆಗೈದ ಘಟನೆಯ ಬಳಿಕ ಭಯೋತ್ಪಾದಕ ಪ್ರಕರಣಗಳ ತನಿಖೆಗೆ ಸೇನಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿತ್ತು.