‘ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಪಾಕ್‌ನತ್ತ ಭಾರತ ಸ್ನೇಹಹಸ್ತ ’

ಇಸ್ಲಾಮಾಬಾದ್, ಡಿ.29: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ದೊರಕಿಸಿಕೊಡುವ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಬಗ್ಗೆ ಬಾಂಧವ್ಯವನ್ನು ಬಲಪಡಿಸಲು ಯತ್ನಿಸುತ್ತಿದ್ದಾರೆಂದು ಯುರೋಪಿಯನ್ ಒಕ್ಕೂಟದ ರಕ್ಷಣಾ ಸಮಿತಿಯ ಉಪಾಧ್ಯಕ್ಷ ಅಫ್ಝಲ್‌ಖಾನ್ ಟೀಕಿಸಿದ್ದಾರೆ. ಆದರೆ ಭಾರತವು ಮಾನವಹಕ್ಕುಗಳನ್ನು ಖಾತರಿಪಡಿಸುವ ವರೆಗೆ ಹಾಗೂ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ತನಕ, ಇಂತಹ ಪ್ರಯತ್ನಗಳು ಯಶಸ್ವಿಯಾಗಲಾರದೆಂದು ಹೇಳಿರುವುದಾಗಿ ಪಾಕಿಸ್ತಾನದ ಡಾನ್ ಆನ್‌ಲೈನ್ ಪತ್ರಿಕೆ ಸೋಮವಾರ ವರದಿ ಮಾಡಿದೆ.
‘‘ಅಂತಾರಾಷ್ಟ್ರೀಯ ಸಮುದಾಯವು ಮಾನವಹಕ್ಕುಗಳ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿದೆ. ಆದಾಗ್ಯೂ, ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ನಿರ್ಣಯವನ್ನು ಭಾರತವು ಜಾರಿಗೊಳಿಸದೇ ಇರುವಾಗ ಅದು ಹೇಗೆ ತಾನೇ ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯಲು ಸಾಧ್ಯವೆಂದು ಅಫ್ಝಲ್‌ಖಾನ್ ಪ್ರಶ್ನಿಸಿದ್ದಾರೆ. ಭಾರತವು ತಾನು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೇಳಿಕೊಳ್ಳುತ್ತಿದ್ದರೂ ವಿಶ್ವಸಂಸ್ಥೆಯ ನಿರ್ಣಯಕ್ಕೆ ಅದು ಗೌರವ ತೋರಿಲ್ಲ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಯುರೋಪ್ ಒಕ್ಕೂಟವು ಮಾನವ ಹಕ್ಕುಗಳಿಗೂ, ವಾಣಿಜ್ಯಕ್ಕೂ ನಂಟು ಕಲ್ಪಿಸಿದೆ. ಹೀಗಿರುವಾಗ ಅದು ಯಾವತ್ತೂ ಭಾರತಕ್ಕೆ ಮಾನವಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡಲಾರದು ಎಂದವರು ಹೇಳಿದ್ದಾರೆ.