ಸುಳ್ಯದಲ್ಲಿ ಕಾಂಗ್ರೆಸ್ ವಿಜಯೋತ್ಸವ

ಸುಳ್ಯ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಸುಳ್ಯ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ, ರಾಜ್ಯ ಸರ್ಕಾರದ ಮೇಲೆ ಜನತೆ ಇಟ್ಟಿರುವ ವಿಶ್ವಾಸವನ್ನು ಚುನಾವಣಾ ಫಲಿತಾಂಶ ತೋರಿಸುತ್ತದೆ ಎಂದರು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು ಬಿಜೆಪಿಗಿಂತ ಕಾಂಗ್ರೆಸ್ ಒಂದು ಸ್ಥಾನ ಜಾಸ್ತಿ ಪಡೆದರೂ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಈಶ್ವರಪ್ಪ ರಾಜೀನಾಮೆ ಸಲ್ಲಿಸಬೇಕೆಂದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫವಾರ್, ಮುಖಂಡರಾದ ಬೀರಾ ಮೊಯಿದ್ದೀನ್, ಜುಲಿಯಾನ ಕ್ರಾಸ್ತಾ, ಸುಜಯಕೃಷ್ಣ, ಪಿ.ಎ.ಮಹಮ್ಮದ್, ಶರೀಫ್ ಕಂಠಿ, ಶಾಫಿ ಕುತ್ತಮೊಟ್ಟೆ, ಕೆ.ಎಂ.ಮುಸ್ತಫ, ಶ್ರೀಹರಿ ಕುಕ್ಕುಡೇಲು, ದಿನೇಶ್ ಅಂಬೆಕಲ್ಲು, ಸದಾನಂದ ಅಡ್ತಲೆ ಮೊದಲಾದವರಿದ್ದರು.





