ಅವಾಸ್ತವಿಕ ನಿರೀಕ್ಷೆ ಬಗ್ಗೆ ಸರ್ತಾಜ್ ಅಝೀಝ್ ಎಚ್ಚರಿಕೆ
ಭಾರತ-ಪಾಕಿಸ್ತಾನ ಮಾತುಕತೆ
ಇಸ್ಲಾಮಾಬಾದ್,ಡಿ.30: ಜನವರಿ 14 ಹಾಗೂ 15ಕ್ಕೆ ನಿಗದಿಗೊಳಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಬಗೆಗಿನ ನಿರೀಕ್ಷೆಗಳು ಅವಾಸ್ತವಿಕವಾಗಿವೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್ ಎಚ್ಚರಿಸಿದ್ದಾರೆ.
ಆದಾಗ್ಯೂ, ಸಮಗ್ರ ಮಾತುಕತೆಗೆ ಸಂಬಂಧಿಸಿ ಚರ್ಚಿಸಲು ಜನವರಿ 14 ಹಾಗೂ 15ರಂದು ಇಸ್ಲಾಮಾಬಾದ್‌ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಜನವರಿಯಲ್ಲಿ ನಡೆಯಲಿರುವ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಸಭೆಯಲ್ಲಿ ಮುಂದಿನ ಆರು ತಿಂಗಳಲ್ಲಿ ಚರ್ಚೆಯಾಗಬೇಕಿರುವ ಪ್ರಮುಖ 10 ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಹೇಳಿದ್ದಾರೆ.
ದ್ವಿಪಕ್ಷೀಯ ಮಾತುಕತೆಯಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದಂತೆ ಹೇಳಿದ್ದ ಸರ್ತಾಜ್ ಅಝೀಝ್, ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯು ಒಂದು ಸವಾಲಿನ ವಿಷಯವಾಗಿದೆ ಮತ್ತು ಈ ಸಂದರ್ಭದಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಕಳೆದ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ದಿಢೀರ್ ಭೇಟಿಯ ಬಗ್ಗೆ ಪಾಕ್ ಸಂಸತ್‌ನಲ್ಲಿ ಹೇಳಿಕೆಯೊಂದನ್ನು ನೀಡಿರುವ ಅವರು, ‘‘ಮೋದಿಯವರು ಪಾಕ್‌ಗೆ ಭೇಟಿ ನೀಡಿರುವ ಬಗ್ಗೆ ಪಾಕ್, ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತಗೊಂಡಿದೆ. ದ್ವಿಪಕ್ಷೀಯ ಮಾತುಕತೆಯಿಂದ ಕೆಲವು ವಿಷಯಗಳಲ್ಲಿ ತ್ವರಿತ ಪ್ರಗತಿ ಕಂಡು ಬರಬಹುದಾದರೂ ಇನ್ನು ಕೆಲವು ವಿಷಯಗಳಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಸಮಯಾವಕಾಶದ ಅಗತ್ಯವಿದೆ’’ ಎಂದು ವಿವರಿಸಿದ್ದಾರೆ.
ಉಭಯ ನಾಯಕರು ಈಗಾಗಲೇ ಐದು ಬಾರಿ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿದ್ದು, ಡಿಸೆಂಬರ್ 25ರಂದು ಲಾಹೋರ್‌ನಲ್ಲಿ ನಡೆದ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಔಪಚಾರಿಕ ಮಾತುಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದವರು ಅಭಿಪ್ರಾಯಿಸಿದ್ದಾರೆ.
ಮೋದಿಯವರು ಯಾವುದೇ ವೀಸಾ ಇಲ್ಲದೆ ಲಾಹೋರ್‌ಗೆ ಭೇಟಿ ನೀಡಿರುವರೆಂಬ ವದಂತಿಯನ್ನು ಅವರು ತಳ್ಳಿ ಹಾಕಿದ್ದಾರೆ.
ಮೋದಿ ಹಾಗೂ ಅವರ 11 ಮಂದಿ ಸಿಬ್ಬಂದಿಗೆ 72 ತಾಸುಗಳ ವೀಸಾ ನೀಡಲಾಗಿತ್ತು ಮತ್ತು ಈ ನಿಟ್ಟಿನಲ್ಲಿ ಸಂಪೂರ್ಣ ವಲಸೆ ಪ್ರಕ್ರಿಯೆ ನಡೆಸಲಾಗಿತ್ತು ಎಂದು ವಿವರಿಸಿದ್ದಾರೆ.
ಕಳೆದ ವರ್ಷ ಕಠ್ಮಂಡುವಿನಲ್ಲಿ ಉಭಯ ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆಂಬ ವಿಪಕ್ಷದ ಆರೋಪವನ್ನು ಅವರು ಇದೇ ವೇಳೆ ತಳ್ಳಿ ಹಾಕಿದ್ದಾರೆ.