ದಿಲ್ಲಿ: ಐಎಎಸ್ ಅಧಿಕಾರಿಗಳಿಂದ ಸಾಮೂಹಿಕ ರಜೆ

♦ ಅಧಿಕಾರಿಗಳ ಅಮಾನತು ವಿರೋಧಿಸಿ ಪ್ರತಿಭಟನೆ ♦ ಕೇಂದ್ರದ ಸಂಚು: ಕೇಜ್ರಿ
ಹೊಸದಿಲ್ಲಿ, ಡಿ.31: ಇಬ್ಬರು ಡಿಎಎನ್‌ಐಸಿಎಸ್ ಕೇಡರ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದನ್ನು ಪ್ರತಿಭಟಿಸಿ ದಿಲ್ಲಿ ಸರಕಾರದ ಹಿರಿಯ ಅಧಿಕಾರಿಗಳಿಂದು ಸಾಮೂಹಿಕ ರಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಅಮಾನತನ್ನು ಅಸಿಂಧುವೆಂದು ಘೋಷಿಸಿದೆ. ಅಧಿಕಾರಿಗಳ ಪ್ರತಿಭಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಕೇಜ್ರಿವಾಲ್, ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರ ಬಿ ಬಣದಂತೆ ವರ್ತಿಸುತ್ತಿದ್ದಾರೆ. ಕೇಂದ್ರ ಸಂಚಿನಲ್ಲಿ ಭಾಗೀದಾರರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಪುಟ ನಿರ್ಣಯದ ಕಡತವೊಂದಕ್ಕೆ ಸಹಿ ಹಾಕಲು ನಿರಾಕರಿಸಿದುದಕ್ಕಾಗಿ ಆಪ್ ಸರಕಾರವು ಗೃಹ ಇಲಾಖೆಯ ಇಬ್ಬರು ನಾಗರಿಕ ಸೇವಾ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಅಮಾನತುಗೊಳಿಸಲಾದ ಅಧಿಕಾರಿಗಳೊಂದಿಗೆ ಐಕ್ಯಮತ ಪ್ರದರ್ಶಿಸಿ ಸುಮಾರು 200 ಮಂದಿ ಡಿಎಎನ್‌ಐಸಿಎಸ್ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿದ್ದರೆ, 70 ಐಎಎಸ್ ಅಧಿಕಾರಿಗಳು ಅರ್ಧ ದಿನದ ರಜೆಯ ಮೇಲೆ ಹೋಗಿದ್ದರು. ವಿಶೇಷ ಕಾರ್ಯದರ್ಶಿ ಯಶಪಾಲ್ ಗರ್ಗ್ ಹಾಗೂ ಸುಭಾಶ್ಚಂದ್ರ ಎಂಬ ಅಧಿಕಾರಿಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ವೇತನವನ್ನು ಹೆಚ್ಚಿಸುವ ಸಂಪುಟ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸಿದುದಕ್ಕಾಗಿ ಮೊನ್ನೆ ಅರವಿಂದ ಕೇಜ್ರಿವಾಲ್ ಸರಕಾರವು ಅಮಾನತುಗೊಳಿಸಿತ್ತು. ಕೇಂದ್ರ ಗೃಹ ಸಚಿವಾಲಯವು ಈ ಅಮಾನತನ್ನು ಅಸಿಂಧುವೆಂದು ಹೇಳಿತ್ತು.
ಕೇಂದ್ರದ ಲೋಕೋಪಯೋಗಿ ಆಯೋಗವು (ಯುಪಿಎಸ್‌ಸಿ) ನಡೆಸುವ ಪರೀಕ್ಷೆಗಳ ಮೂಲಕ ದಿಲ್ಲಿ, ಅಂಡಮಾನ್ ನಿಕೋಬಾರ್ ಐಲ್ಯಾಂಡ್ ಸಿವಿಲ್ ಸರ್ವೀಸ್ (ಡಿಎಎನ್‌ಐಸಿಎಸ್) ಅಧಿಕಾರಿಗಳನ್ನು ಆರಿಸುತ್ತಿದೆ.
ಕೇವಲ ಲೆಫ್ಟಿನೆಂಟ್ ಗವರ್ನರ್ ಮಾತ್ರ ಕೇಂದ್ರ ಗೃಹ ಸಚಿವಾಲಯದ ಅನುಮತಿ ಪಡೆದು, ಡಿಎಎನ್‌ಐಸಿಎಸ್ ಕೇಡರ್ ಅಧಿಕಾರಿಗಳನ್ನು ಅಮಾನತುಗೊಳಿಸಬಹುದು.
ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ದಿಲ್ಲಿಯ ಗೃಹ ಸಚಿವ ಸತ್ಯೇಂದ್ರ ಜೈನ್, ಡಿಎಎನ್‌ಐಸಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಪ್ರತಿಭಟನೆ ನಡೆಸುವ ಹಕ್ಕು ಹೊಂದಿರುವುದಿಲ್ಲ. ಅದು ಅವರ ಸೇವಾ ನಿಯಮಕ್ಕೆ ವಿರುದ್ಧವಾದುದು ಎಂದಿದ್ದಾರೆ.
ಇಂದು ಐಎಎಸ್ ಮತ್ತು ಡಿಎಎನ್‌ಐಸಿಎಸ್ ಅಧಿಕಾರಿಗಳ ಸಂಘಟನೆ ಕೆಲಸ ಮಾಡಿರುವ ನಿರ್ಧಾರಕ್ಕೆ ಸೊಪ್ಪು ಹಾಕದ ಅವರು, ಅಧಿಕಾರಿಗಳು ಮುಷ್ಕರ ಮಾಡಿದರೆ ಜನರಿಗೆ ಸಂತೋಷವಾಗಬಹುದು. ಇಂದು ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವ್ಯವಸ್ಥೆ ಆನ್‌ಲೈನ್‌ನನ್ನು ಆಧರಿಸಿದೆ. ಆದುದರಿಂದ ಸರಕಾರಕ್ಕೆ ತೊಂದರೆಯಾಗದೆಂದು ಅವರು ಪ್ರತಿಪಾದಿಸಿದ್ದಾರೆ.
ಎಲ್ಲ ಅಧಿಕಾರಿಗಳು ಒಂದು ತಿಂಗಳು ಅಥವಾ 15 ದಿನಗಳ ರಜೆಗೆ ಅರ್ಜಿ ಸಲ್ಲಿಸಿದರೆ ದಿಲ್ಲಿ ಸರಕಾರ ಮಂಜೂರು ಮಾಡಲು ಸಿದ್ಧವಿದೆ. ಸಂಪುಟ ನಿರ್ಣಯವನ್ನು ಜಾರಿಗೊಳಿಸದಿದ್ದದಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತನ್ನ ಆದೇಶದಿಂದ ಅವರಿಗೆ ಯಾವುದೇ ಸಮಸ್ಯೆಯಾಗಿದ್ದರೆ, ಅವರು ಮುಖ್ಯಮಂತ್ರಿಯ ಬಳಿಗೆ ಹೋಗಬೇಕಿತ್ತೇ ಹೊರತು ಲೆಫ್ಟಿನೆಂಟ್ ಗವರ್ನರರ ಬಳಿಗಲ್ಲವೆಂದು ಜೈನ್ ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್, ದಿಲ್ಲಿ ಸರಕಾರ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದನ್ನು ಅಸಿಂಧುವೆಂದು ಘೋಷಿಸಿದ್ದಾರೆಂಬುದು ತನಗೆ ಸಂಜೆ ತಿಳಿದಿದೆಯೆಂದು ಅವರು ಹೇಳಿದ್ದಾರೆ.
ದಿಲ್ಲಿ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಯಾವನೇ ಅಧಿಕಾರಿಗೆ ಯಾವುದೇ ಸಮಸ್ಯೆಯಾದರೆ ಆತ ಎಲ್‌ಜಿ ಕಚೇರಿಗೆ ವರ್ಗಮಾಡಿಸಿಕೊಳ್ಳಬಹುದು. ಯಾವುದೇ ರೀತಿಯ ಅವಿಧೇಯತೆಯನ್ನು ಸರಕಾರ ಸಹಿಸದು. ದಿಲ್ಲಿ ಸರಕಾರದ ಅಧಿಕಾರಿಗಳನ್ನು ಮುಷ್ಕರ ಮಾಡುವಂತೆ ಬಿಜೆಪಿ ಪ್ರಚೋದಿಸುತ್ತಿದೆ ಎಂದವರು ದೂರಿದರು.
ಡಿಎಎನ್‌ಐಸಿಎಸ್ ಅಧಿಕಾರಿಗಳ ಸಂಘಟನೆಯಲ್ಲಿ ಸುಮಾರು 200 ಸದಸ್ಯರಿದ್ದು, ಎಸ್‌ಡಿಎಂ, ಸಚಿವರ ಕಾರ್ಯದರ್ಶಿ ಹಾಗೂ ವಿಶೇಷ ಕಾರ್ಯದರ್ಶಿ ಸಹಿತ ನಿರ್ಣಾಯಕ ಹುದ್ದೆಗಳನ್ನು ಹೊಂದಿದ್ದಾರೆ.
ಯಾವನೇ ಡಿಎಎನ್‌ಐಸಿಎಸ್ ಅಧಿಕಾರಿಯನ್ನು ಅಮಾನತುಗೊಳಿಸುವ ಅಧಿಕಾರ ದಿಲ್ಲಿ ಸರಕಾರಕ್ಕಿಲ್ಲ. ಅದು ಕೇವಲ ಶಿಫಾರಸು ಮಾಡಬಹುದಷ್ಟೇ. ಕೇಂದ್ರ ಸಚಿವ ಗೃಹ ಸಚಿವಾಲಯದ ಅನುಮತಿಯೊಂದಿಗೆ ಲೆಫ್ಟಿನೆಂಟ್ ಗವರ್ನರ್ ಮಾತ್ರ ಅಧಿಕಾರಿಯನ್ನು ಅಮಾನತುಗೊಳಿಸಿಬಹುದೆಂದು ಸಂಘಟನೆಯ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ರೈಲ್ವೆ ಇಲಾಖೆಯು ಪಶ್ಚಿಮ ದಿಲ್ಲಿಯ ಶುಕೂರ್ ಬಸ್ತಿ ಪ್ರದೇಶದಲ್ಲಿ ಕೊಳೆಗೇರಿ ನಿವಾಸಿಗಳ ಗುಡಿಸಲುಗಳನ್ನು ಧ್ವಂಸ ಮಾಡಿತ್ತು. ಅದರ ಸಂತ್ರಸ್ತರಿಗೆ ತಕ್ಷಣದ ಪರಿಹಾರ ಒದಗಿಸಲು ವಿಫಲರಾಗಿದ್ದ ಇಬ್ಬರು ಉಪವಿಭಾಗೀಯ ದಂಡಾಧಿಕಾರಿಗಳನ್ನು ಈ ತಿಂಗಳ ಆರಂಭದಲ್ಲಿ ಕೇಜ್ರಿವಾಲ್ ಅಮಾನತುಗೊಳಿಸಿದ್ದರು.
ಆದಾಗ್ಯೂ ಅವರಿಬ್ಬರೂ ತಮ್ಮ ಹುದ್ದೆಗಳಲ್ಲೇ ಇದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ.







