ಇಂದಿನಿಂದ ಸಂಸತ್ ಕ್ಯಾಂಟೀನಿನಲ್ಲಿ ಊಟ-ತಿಂಡಿ ದುಬಾರಿ

ಸಬ್ಸಿಡಿ ನಿಲ್ಲಿಸಿದ ಲೋಕಸಭಾ ಸ್ಪೀಕರ್
ಹೊಸದಿಲ್ಲಿ,ಡಿ.31: ಹೊಸವರ್ಷದಲ್ಲಿ ದಿಲ್ಲಿಯ ಸಂಸತ್ ಭವನದಲ್ಲಿನ ಕ್ಯಾಂಟೀನಿನಲ್ಲಿ ಊಟೋಪಚಾರಗಳ ಬಿಲ್ ಸಂಸದರ,ಸಂಸತ್ ಸಿಬ್ಬಂದಿಗಳ ಜೇಬುಗಳಿಗೆ ಭಾರವಾಗಲಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ ಅವರು ಜನವರಿ 1ರಿಂದ ಸಂಸತ್ ಭವನದ ಕ್ಯಾಂಟೀನ್ ‘ಲಾಭವೂ ಇಲ್ಲ,ನಷ್ಟವೂ ಇಲ್ಲ’ ನೀತಿಯ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕೆಂದು ನಿರ್ಧರಿಸಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿರುವಾಗ ಸಂಸತ್ ಭವನದ ಕ್ಯಾಂಟೀನಿನಲ್ಲಿ ಸಬ್ಸಿಡಿ ದರಗಳಲ್ಲಿ ಊಟ-ತಿಂಡಿಗಳ ಪೂರೈಕೆಯ ಬಗ್ಗೆ ಆಗಾಗ್ಗೆ ವಿವಾದಗಳು ಏಳುತ್ತಲೇ ಇದ್ದವು. ಕಳೆದ ಐದು ವರ್ಷಗಳಲ್ಲಿ ಸಂಸತ್ತಿನ ಕ್ಯಾಂಟೀನಿಗೆ 60.7 ಕೋ.ರೂ.ಸಹಾಯಧನ ಒದಗಿಸಿದ ಸಂಗತಿ ಆರ್‌ಟಿಐ ವಿಚಾರಣೆಯಲ್ಲಿ ಬೆಳಕಿಗೆ ಬಂದಿತ್ತು.
ಕ್ಯಾಂಟೀನ್ ಸಬ್ಸಿಡಿ ವಿಷಯದ ಪರಿಶೀಲನೆಗಾಗಿ ಸ್ಪೀಕರ್ ಅವರಿಂದ ನಿಯೋಜಿತಗೊಂಡಿದ್ದ ಸಂಸತ್ತಿನ ಆಹಾರ ಸಮಿತಿಯ ವರದಿಯ ಆಧಾರದಲ್ಲಿ ಸಬ್ಸಿಡಿಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಹೀಗಾಗಿ ಈವರೆಗೆ 18ರೂ.ಗೆ ದೊರೆಯುತ್ತಿದ್ದ ಸಸ್ಯಾಹಾರಿ ಊಟದ ಥಾಲಿಗೆ ಇನ್ನು 30 ರೂ.ಗಳನ್ನು ಕಕ್ಕಬೇಕಾಗುತ್ತದೆ. ಮಾಂಸಾಹಾರದ ಥಾಲಿಗೆ 33ರೂ.ಬದಲು 60 ರೂ.ಪಾವತಿಸಬೇಕಾಗುತ್ತದೆ. ಥ್ರೀ ಕೋರ್ಸ್ ಮೀಲ್ಸ್‌ಗೆ 61 ರೂ.ಬದಲು 90 ರೂ. ಮತ್ತು 29 ರೂ.ಗೆ ದೊರೆಯುತ್ತಿದ್ದ ಚಿಕನ್ ಕರ್ರಿಗೆ 40 ರೂ.ವಿಧಿಸಲಾಗುತ್ತದೆ.
ಕ್ಯಾಂಟೀನ್ ದರಗಳನ್ನು ಆರು ವರ್ಷಗಳ ಬಳಿಕ ಪರಿಷ್ಕರಿಸಲಾಗಿದೆ. ಇನ್ನು ಮುಂದೆ ಆಗಾಗ್ಗೆ ಈ ಪರಿಷ್ಕರಣೆ ನಡೆಯುತ್ತಿರುತ್ತದೆ ಎಂದು ಲೋಕಸಭಾ ಸಚಿವಾಲಯವು ತಿಳಿಸಿದೆ.
ಅಲ್ಲದೆ ಕ್ಯಾಂಟೀನ್ ಸಿಬ್ಬಂದಿಗಳ ಶ್ರಮವನ್ನು ತಗ್ಗಿಸಲು ಟೀ/ಕಾಫಿ ವೆಂಡಿಂಗ್ ಮಷಿನ್‌ಗಳನ್ನು ಸ್ಥಾಪಿಸಲಾಗುತ್ತದೆ. ಬೆಲೆಏರಿಕೆಯು ಸಂಸದರು,ಉಭಯ ಸದನಗಳ ಅಧಿಕಾರಿಗಳು,ಮಾಧ್ಯಮ ಪ್ರತಿನಿಧಿಗಳು,ಭದ್ರತಾ ಸಿಬ್ಬಂದಿಗಳು ಮತ್ತು ಸಂಸತ್‌ಗೆ ಭೇಟಿ ನೀಡುವವರಿಗೂ ಅನ್ವಯಿಸುತ್ತದೆ ಎಂದು ಅದು ಹೇಳಿದೆ.







