ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್
ದುಬೈ, ಡಿ.31: ಐಸಿಸಿ ಟೆಸ್ಟ್ ಆಟಗಾರರ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಹಾಗೂ ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕ್ರಮವಾಗಿ ನಂ.1 ದಾಂಡಿಗ ಹಾಗೂ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ರೀತಿ ಆಟಗಾರರು 2015ರ ಋತುವನ್ನು ನಂ.1 ಸ್ಥಾನದೊಂದಿಗೆ ಅಂತ್ಯಗೊಳಿಸಿದ್ದಾರೆ.
ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಇಂಗ್ಲೆಂಡ್ ವಿರುದ್ಧದ ಬಾಕ್ಸಿಂಗ್‌ಡೇ ಟೆಸ್ಟ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಕೇವಲ 3.5 ಓವರ್ ಬೌಲಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬಿಡುಗಡೆಯಾಗಿರುವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ಎರಡನೆ ರ್ಯಾಂಕ್‌ನಲ್ಲಿದ್ದ ಅಶ್ವಿನ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ನಂ.1 ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಅಶ್ವಿನ್ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಟೆಸ್ಟ್ ಬೌಲರ್ ಆಗಿ ಭಡ್ತಿ ಪಡೆದ ಭಾರತದ ಎರಡನೆ ಬೌಲರ್ ಆಗಿದ್ದಾರೆ. 1973ರಲ್ಲಿ ಬಿಷನ್ ಸಿಂಗ್ ಬೇಡಿ ಈ ಸಾಧನೆ ಮಾಡಿದ್ದರು. ಅಶ್ವಿನ್ 2015ರಲ್ಲಿ ಆಡಿರುವ 9 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 62 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವರ್ಷಾರಂಭದಲ್ಲಿ 15ನೆ ಸ್ಥಾನದಲ್ಲಿದ್ದ ಅಶ್ವಿನ್ ಇದೀಗ ನಂ.1 ಸ್ಥಾನದೊಂದಿಗೆ 2015ರ ವರ್ಷವನ್ನು ಕೊನೆಗೊಳಿಸಿದ್ದಾರೆ.
ಇದೇ ವೇಳೆ, ಅಶ್ವಿನ್ ಕಳೆದ ಮೂರು ವರ್ಷಗಳಲ್ಲಿ ಎರಡನೆ ಬಾರಿ ನಂ.1 ಟೆಸ್ಟ್ ಆಲ್‌ರೌಂಡರ್ ಆಗಿ ವರ್ಷವನ್ನು ಅಂತ್ಯಗೊಳಿಸಿದರು. 2015ರ ಆರಂಭದಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ನಂ.1 ಸ್ಥಾನದಲ್ಲಿದ್ದರು.







